Skip to main content

ಚಾರ್ ಧಾಮ್ ಯಾತ್ರೆ

ಇಂದ shamala
ಬರೆದಿದ್ದುMay 25, 2009
4ಅನಿಸಿಕೆಗಳು

ನೇ ತಾರೀಖು ಬೆಳಗಿನ ಜಾವ ೨ ಘಂಟೆಗೆ ಅಲಾರಾಂ ಹೊಡೆದಾಗ ದಡಬಡಿಸಿ ಎದ್ದೆವು. ಯಾತ್ರೆಗೆ ಹೊರಡುವ ಮುನ್ನವೇ ವಿಘ್ನ ಎದುರಾಗಿತ್ತು. ನಾವು ಗಂಗಾದೇವಿಯನ್ನು ಹೋಡಲು ಹೊರಟಿದ್ದರೆ, ನಮ್ಮ ಎರಡೂ ಸ್ನಾನದ ಮನೆಯ ನಲ್ಲಿಯಲ್ಲಿ, ಕಾವೇರಿ, ಮುಷ್ಕರ ಹೂಡಿದ್ದಳು. ಅಡಿಗೆ ಮನೆಯಿಂದ ನೀರು ಹಿಡಿದುಕೊಂಡು, ಸ್ನಾನ ಮುಗಿಸಿ, ಕಾಫಿ ಕುಡಿದು, ೩.೧೦ಕ್ಕೆ ನನ್ನ ಅತ್ತಿಗೆಯನ್ನು, ಕರೆದುಕೊಂಡು, ಮಲ್ಲೇಶ್ವರಂನಲ್ಲಿರುವ, ನಮ್ಮ ಸ್ನೇಹಿತರನ್ನೂ ಕರೆದುಕೊಂಡು, ವಿಮಾನ ಅಡ್ಡೆ ತಲುಪಿದಾಗ ಸಮಯ ೪.೧೫ ಆಗಿತ್ತು. ನಮ್ಮ ಸಾಮಾನುಗಳನ್ನು ಲಗ್ಗೇಜ್ ನಲ್ಲಿ, ಕೊಟ್ಟು, ಮೇಲೆ ಹೋಗಿ, ಇಡ್ಲಿ, ಪೊಂಗಲ್ ತಿಂದು, ಕಾಫಿ ಕುಡಿದು ಮುಗಿಸಿದಾಗ ಆಗಲೇ ೫ ಘಂಟೆ ಆಗಿತ್ತು. ೫.೩೦ಗೆ ವಿಮಾನ ಹತ್ತಿ ಕುಳಿತಾಗ, ನಮ್ಮ ಚಾರ್ ಧಾಮ್ ಯಾತ್ರೆ ಶುರುವಾಗಿತ್ತು. ಇಂಡಿಗೋ ವಿಮಾನ ಸರಿಯಾಗಿ ೬.೧೦ ಕ್ಕೆ ಹೊರಟು, ೮.೩೦ಗೆ ದೆಹಲಿಯಲ್ಲಿ ಇಳಿಯಿತು.

ನಮ್ಮ ನಮ್ಮ ಸಾಮಾನು ತೆಗೆದುಕೊಂಡು, ಹೊರಗೆ ಬಂದು, ನಮಗಾಗಿ ಕಾದಿದ್ದ ಇನೋವ ಗಾಡಿಯಲ್ಲಿ, ಕುಳಿತೆವು. ಈ ಗಾಡಿಯ ಚಾಲಕ ಪೂರನ್ ಸಿಂಗ್, ಆಗ್ರಾದಿಂದ ಬಂದು ನಮಗಾಗಿ ಕಾದಿದ್ದರು. ಪರಸ್ಪರ ಪರಿಚಯಗಳಾದಾಗಲೇ, ನಮಗೆ ಪೂರನ್ ಇಷ್ಟವಾಗಿಬಿಟ್ಟಿದ್ದರು. ಸನ್ನಡತೆಯ, ಹಸನ್ಮುಖ ನಮ್ಮ ಪೂರನ್. ನೇರವಾಗಿ ಹರಿದ್ವಾರದ ಕಡೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಫಾಜಿಯಾಬಾದ್ ನ "ಮಾ ವೈಷ್ಣವಿ ಭೋಜನಾಲಯದಲ್ಲಿ ಆಲೂ ಮತ್ತು ಪ್ಯಾಸ್ ಪರಾಠಾಗಳನ್ನು ಗಟ್ಟಿಯಾದ ಮೊಸರಿನ ಜೊತೆ ತಿಂದು, ಟೀ ಕುಡಿದು ಮುಂದೆ ಹೊರಟೆವು. ೩ ಘಂಟೆ ಹೊತ್ತಿಗೆ "ಮೂಲ್ ಚಂದ್ ರೆಸೋರ್ಟ್ ನಲ್ಲಿ, ಊಟ ಮಾಡಿದೆವು. ಇಲ್ಲಿ, ಹೋಟೆಲಿನ ಮುಂದೆ ಸೊಗಸಾದ ಬಣ್ಣ ಬಣ್ಣದ ಹೂತೋಟವನ್ನು ಮಾಡಿದ್ದಾರೆ, ಸುಂದರವಾದ ಉದ್ಯಾನವನ, ಮಧ್ಯದಲ್ಲಿ ಕಾರಂಜಿ, ತುಂಬಾ ಚೆನ್ನಾಗಿತ್ತು.

ಅಲ್ಲಿಂದ ಹರಿದ್ವಾರದ ದಾರಿ ಹಿಡಿದೆವು. ನಮ್ಮ ಸಾರಥಿ ಪೂರನ್ ನಮ್ಮನ್ನು ಮುಖ್ಯ ರಸ್ತೆಯ ಪಕ್ಕದಲ್ಲೇ ಹೋಗುವ ಒಂದು ಸುಂದರವಾದ ದಾರಿಯಲ್ಲಿ, ಕರೆದು ಕೊಂಡು ಹೋದರು. ಈ ರಸ್ತೆಯಲ್ಲಿ, ಸುಮಾರು ೬೫ ಕಿ ಮೀ ವರೆಗೂ ಗಂಗಾನದಿಯ ಚಾನೆಲ್ ನಮ್ಮ ಜೊತೆಗೇ ಸಾಗುತ್ತದೆ. ಎರಡೂ ದಡದಲ್ಲಿ ಸುಂದರವಾದ ಹಸಿರು ಹುಲ್ಲು, ಮೇಲುಗಡೆ ಮರಗಳು ನೋಡಲು ಸುಂದರವಾಗಿ, ಅತ್ಯಂತ ಮನೋಹರವಾಗಿ, ಕಣ್ಮನ ತಣಿಸುವಂತಿದೆ. ಮಧ್ಯ ಮಧ್ಯದಲ್ಲಿ ಕಟ್ಟಿರುವ ಪುಟ್ಟ ಪುಟ್ಟ ಸೇತುವೆಗಳು, ಅದರ ಪಕ್ಕದಲ್ಲಿ, ಒಂದೊಂದು ಕಡೆ ಒಂದೊಂದು ಬಣ್ಣದ ಹೂವಿನ ಮರಗಳು, ನಮ್ಮನ್ನು ಉಲ್ಲಾಸಗೊಳಿಸುತ್ತದೆ. ಪ್ರಯಾಣದ ಆಯಾಸ ಮರೆಯುವಂತೆ ಮಾಡುತ್ತದೆ.

ಶುಭ್ರ ನೀರಿನ ಮೇಲಿನ ಗಾಳಿ, ನಮ್ಮನ್ನು ಆ ರಣ ಬಿಸಿಲಿನಲ್ಲಿ, ತಣ್ಣಗೆ ಮಾಡುತ್ತದೆ. ನಾವು ಹರಿದ್ವಾರ ತಲುಪಿದಾಗ ೬.೩೦ ಆಗಿತ್ತು. ನಮಗೆ ರಾತ್ರಿಯ ವ್ಯವಸ್ಥೆ, ಹೋಟೆಲ್ ಸ್ವಾಗತ್ ಪ್ಯಾಲೇಸ್ ನಲ್ಲಿತ್ತು. ಈ ಹೋಟೆಲ್ ಸ್ವಲ್ಪವೂ ಚೆನ್ನಾಗಿಲ್ಲ, ಬರೀ ಕೊಳೆ/ಕಸ ಹೆಸರು ಮಾತ್ರ ’ಸ್ವಾಗತ್ ಪ್ಯಾಲೇಸ್. ಕೋಣೆ ಹಾಗೂ ಬಚ್ಚಲು ಮನೆಯಲ್ಲಿ ಅನೇಕ ಜಿರಲೆಗಳೂ ಇದ್ದವು. ಇಷ್ಟೆಲ್ಲಾ ಅವಾಂತರದಲ್ಲಿ, ನಾವು ಸಾಯಂಕಾಲದ ’ಗಂಗಾಮಾಯಿ’ ಯ ಆರತಿ ನೋಡಲು ಆಗಲೇ ಇಲ್ಲ. ಘಂಟೆ ಮತ್ತು ಶಂಖದ ಧ್ವನಿ, ನಮನ್ನು ಹರಿದ್ವಾರಕ್ಕೆ ಸ್ವಾಗತಿಸಿತ್ತು. ನಮ್ಮ ಅತ್ತೆಯವರನ್ನು, ಹೋಟೆಲ್ನಲ್ಲೇ ಬಿಟ್ಟು, ನಾವು ೪ ಜನ ಎರಡು ಸೈಕಲ್ ರಿಕ್ಷಾ ಮಾಡಿಕೊಂಡು, ಹರೀ ಕಿ ಪೌರಿ ನೋಡಲು ಹೋದೆವು. ಒಂದೊಂದು ರಿಕ್ಷಾಗೆ ೩೦ ರೂ ಕೊಟ್ಟೆವು. ತುಂಬಾ ಜನಗಳಿದ್ದಿದ್ದರಿಂದ, ನಮಗೆ ಹರೀ ಕಿ ಪೌರಿ ತನಕ ಹೋಗಲಾಗಲಿಲ್ಲ.

ಯಾರೋ ಧರ್ಮ ಗುರುಗಳ ಪ್ರವಚನ ಇದ್ದಿದ್ದರಿಂದ, ಎಲ್ಲಾ ರಸ್ತೆಗಳೂ ತುಂಬಿ ತುಳುಕುತ್ತಿತ್ತು. ನಾವು ಗಂಗೆಯ ಇನ್ನೊಂದು ದಡಕ್ಕೆ ಹೋದೆವು, ಅಷ್ಟರಲ್ಲಿ, ಕತ್ತಲಾಗಿ ಹೋಗಿತ್ತು. ಗಂಗೆಯ ಜುಳು ಜುಳು ಶಬ್ದ ಮಾತ್ರ ಕೇಳಿಸುತ್ತಿತ್ತು ಮತ್ತು ನಮ್ಮ ಮನಸ್ಸಿಗೆ ಮುದ ಕೊಟ್ಟಿತ್ತು. ನಾವು ಮೆಟ್ಟಿಲುಗಳ ಮೇಲೆ ಕುಳಿತು, ಕಾಲು ನೀರಿನಲ್ಲಿ ಇಳಿಬಿಟ್ಟು ಸ್ವಲ್ಪ ಹೊತ್ತು ಕುಳಿತಿದ್ದೆವು. ತಣ್ಣಗೆ ಹಿತವಾದ ಗಂಗೆಯ ಸ್ಪರ್ಶ ಆಯಾಸವನ್ನೆಲ್ಲಾ ಪರಿಹರಿಸಿ, ಚೇತನಗೊಳಿಸಿತು. ಗಂಗಾ ದೇವಿಯನ್ನು ಪ್ರಾರ್ಥಿಸಿ, ತಲೆಗೆ ಪ್ರೋಕ್ಷಿಸಿಕೊಂಡು ಮತ್ತದೇ ರಿಕ್ಷಾದಲ್ಲಿ ವಾಪಸ್ಸು "ಶಿವಮೂರ್ತಿ ವೃತ್ತಕ್ಕೆ ಬಂದೆವು. ಅಲ್ಲೇ ಒಂದು ಹೋಟೆಲ್ನಲ್ಲಿ ರೊಟ್ಟಿ, ಧಾಲ್, ಆಚಾರ್, ಮೊಸರು ತಿಂದು, ಬಿಸಿ ಬಿಸಿ ಹಾಲು ಕುಡಿದು ಮಲಗಿದೆವು.

ಹವಾನಿಯಂತ್ರಣ ಯಂತ್ರದ ಭಾರೀ ಶಬ್ದ, ರಸ್ತೆಯ ಶಬ್ದ, ಎಲ್ಲಾ ಆರ್ಭಟಿಸುತ್ತಿದ್ದರೂ, ಬೆಳಗಿನಿಂದ ಆದ ಆಯಾಸಕ್ಕೆ ನಮಗೆ ನಿದ್ದೆ ಬಂದಿತು. ಆದರೆ ಬೆಳಿಗ್ಗೆ ೩.೩೦ ಯಿಂದಲೇ ಯಾರೋ ಜನಗಳು ತುಂಬಾ ಜೋರಾಗಿ ಮಾತನಾಡುತ್ತ ಕುಳಿತು, ನಮ್ಮ ನಿದ್ದೆ ಕೆಡಿಸಿದ್ದರು. ಅಂತೂ ಎದ್ದು, ಬಿಸಿ ನೀರಿನಲ್ಲಿ ಸ್ನಾನ ಮಾಡಿ, ಸರಿಯಾಗಿ ೭.೩೦ಕ್ಕೆ ಹೊರಟೆವು.

ನಾವು ನೇರವಾಗಿ ಋಷಿಕೇಷಕ್ಕೆ ಬಂದು, ಪೂರನ್ ಸಿಂಗ್ ನ ಗಾಡಿಗೆ ಅನುಮತಿ ಪತ್ರ ಪಡೆದೆವು. ಇಲ್ಲಿ ಚಾರ್ ಧಾಮ್ ಯಾತ್ರೆಗೆ ಹೋಗುವ ಎಲ್ಲಾ ಗಾಡಿಗಳಿಗೂ ಅನುಮತಿ ಪತ್ರ ಅತ್ಯವಶ್ಯಕ. ಇಲ್ಲಿಯ ಅಧಿಕಾರಿಗಳು ಗಾಡಿಯನ್ನು, ಬಂದು ಪರೀಕ್ಷಿಸಿ, ಎಲ್ಲಾ ಸರಿಯಾಗಿದ್ದರೆ ಮಾತ್ರವೇ ಅನುಮತಿ ಪತ್ರ ಕೊಡುತ್ತಾರೆ. ಆ ಅನುಮತಿ ಪತ್ರ ಪಡೆಯಲು ನಮಗೆ ತುಂಬಾ ಸಮಯ ಹಿಡಿದಿತ್ತಾದ್ದರಿಂದ, ನಾವು ಬೆಳಗಿನ ತಿಂಡಿಯನ್ನು ’ತ್ಯಾಗ’ ಮಾಡಬೇಕಾಯಿತು. ಮನೆಯಿಂದ ತೆಗೆದುಕೊಂಡು ಹೋದ ಬಿಸ್ಕತ್ತುಗಳು, ಕೊಬ್ಬರಿ ಮಿಠಾಯಿ, ಕೋಡುಬಳೆಯೆಲ್ಲಾ ತಿಂದು ಕುಳಿತೆವು. ಪೂರನ್ ಸಿಂಗ್ ಬಂದ ನಂತರ, ನೇರವಾಗಿ ಡೆಹರಾಡೂನ್ ಗೆ ಬಂದೆವು. ಡೆಹರಾಡೂನ್ ಸಾಕಷ್ಟು ದೊಡ್ಡದಾಗೇ ಇದೆ. ದೊಡ್ಡ ದೊಡ್ಡ ಹೋಟೆಲುಗಳು, ಎಲ್ಲಾ ತರಹದ ಹೆಸರಿನ ಬಟ್ಟೆಗಳು, ಎಲ್ಲವನ್ನೂ ನೋಡುತ್ತಾ ನಾವು ’ಮುಸೋರಿ’ ತಲುಪಿದೆವು. ಮಧ್ಯಾನ್ಹ ೨.೩೦ ಕ್ಕೆ ಒಂದು ಕಡೆ ರೊಟ್ಟಿ, ಮೊಸರು, ಧಾಲ್ ತಿಂದು ಮತ್ತೆ ಮುಂದೆ ಹೊರಟೆವು.

ನಮಗೀಗ ಯಮುನಾ ನದಿ ಜೊತೆಯಾಗಿತ್ತು. ಎಲ್ಲಾ ಕಡೆ ಅಷ್ಟು ನೀರಿಲ್ಲದಿದ್ದರೂ, ನದಿಯ ಪಾತ್ರದಲ್ಲಿ ತುಂಬಿದ್ದ ಬಿಳೀ ಬಣ್ಣದ, ವಿವಿಧ ಆಕಾರಗಳ, ಗಾತ್ರಗಳ ಕಲ್ಲುಗಳನ್ನು ನೋಡಿದೆವು. ಇಲ್ಲಿಯ ಪ್ರಕೃತಿ ಸೌಂದರ್ಯ, ಅತ್ಯಂತ ಅಪೂರ್ವ ಹಾಗೂ ಅತಿ ಅದ್ಭುತವಾದದ್ದು. ಎಲ್ಲೆಲ್ಲಿ ನೋಡಿದರೂ ಎತ್ತರ ಎತ್ತರವಾದ ಪರ್ವತ ಶ್ರೇಣಿಗಳು ಧೀಮಂತವಾಗಿ ನಿಂತಿರುವುದನ್ನು ನೋಡಿದಾಗ ಆನಂದವಾಗುತ್ತದೆ. ರಸ್ತೆಯ ಎರಡೂ ಬದಿ ಸಾಲು ಸಾಲು ಮರಗಳು, ಕೆಳಗಡೆ ಪ್ರಪಾತದಲ್ಲಿ ಹರಿಯುವ ನದಿಯ ಬರಿದಾದ ಒಡಲು, ಎಲ್ಲವೂ ಸುಂದರವಾಗಿದೆ. ಯಮುನೇ ತುಂಬಿ ಹರಿಯುತ್ತಿದ್ದಿದ್ದರೆ, ಹೇಗಿರುತ್ತಿತ್ತು ಎಂದು ಕನಸು ಕಾಣುತ್ತಾ ಸಾಗಿದೆವು.

ನದಿ ದಾಟಲು ಅಲ್ಲಲ್ಲೇ ಮಾಡಿರುವ ಸೇತುವೆಗಳು, ಸಾಗುವಳಿ ಮಾಡಿದ ಭೂಮಿ, ಚಿತ್ರಕಾರ ಬರೆದಿಟ್ಟ ಚಿತ್ರವೇನೋ ಅನ್ನಿಸುತ್ತದೆ. ನಾವು ’ಬಾರ್ ಕೋಟ್’ ಮೂಲಕ ಸ್ಯಾನ್ ಚೆಟ್ಟಿ ಎಂಬ ಜಾಗ ತಲುಪಿದೆವು. ಮುಸೋರಿ ತಲುಪಲು, ನಾವು ಅತ್ಯಂತ ಎತ್ತರವಾದ ಪರ್ವತದ ಮೇಲೆ ಹೋಗಿ, ಮತ್ತೆ ಇಳಿದು, ಅದರ ಎದುರುಗಡೆ ಇರುವ ಇನ್ನೊಂದು ಪರ್ವತವನ್ನು ಹತ್ತಿ, ಬಾರ್ ಕೋಟ್ ತಲುಪಿದೆವು. ಸಂಪೂರ್ಣ ರಸ್ತೆಯಲ್ಲಿ, ನಮಗೆ ಕಂದು ಬಣ್ಣದ ಪರ್ವತ ಶ್ರೇಣಿಯ ಜೊತೆ ಅಲ್ಲಲ್ಲಿ, ಹಸಿರು ಮರಗಳ ಗುಂಪು ಒಂಥರಾ ಆಗರ್ಷಿಸುತ್ತದೆ. ಬಾರ್ ಕೋಟ್ ನಿಂದ ಸ್ವಲ್ಪ ಮುಂದೆ ರಸ್ತೆ ಚೆನ್ನಾಗಿಲ್ಲ. ಬರೀ ಮಣ್ಣಿನ ರಸ್ತೆ ಮತ್ತು ಧೂಳು ತುಂಬಾ ಏಳತ್ತೆ. ಇಲ್ಲಿ ಗಾಡಿ ಓಡಿಸುವ ಚಾಲಕ ತುಂಬಾ ಜಾಗರೂಕನಾಗಿರಬೇಕು. ಅವನು ಎಚ್ಚರಿಕೆಯಿಂದ ಓಡಿಸದಿದ್ದಲ್ಲಿ, ಖಂಡಿತಾ ಅಪಘಾತವಾಗುತ್ತದೆ. ಒಂದರ ಹಿಂದೆ ಒಂದು ಹೋಗುವ ಗಾಡಿಗಳನ್ನು ನೋಡಲೇ ಚೆನ್ನ.

ನಾವು ೬.೩೦ಕ್ಕೆ ಸ್ಯಾನ್ ಚೆಟ್ಟಿ ತಲುಪಿದೆವು. ಹೋಟೆಲ್ ’ಹಿಮಾಲಯ’ದಲ್ಲಿ ರೂಮು ಚೆನ್ನಾಗಿತ್ತು. ಆದರೆ ೨ನೇ ಮಹಡಿಯಲ್ಲಿತ್ತು. ನಮ್ಮತ್ತೆಯವರಿಗೆ ಹತ್ತಲು ಸ್ವಲ್ಪ ಕಷ್ಟವೇ ಆಯಿತು. ಕೆಳಗೇ ಕುಳಿತು, ಟೀ ಕುಡಿಯುತ್ತಾ, ಅಲ್ಲೇ ಕುಳಿತಿದ್ದ ಗುಜರಾತಿ ದಂಪತಿಗಳನ್ನು ಮಾತನಾಡಿಸಿದೆವು. ಅವರಾಗಲೇ, ಆ ದಿನ ’ಯಮುನೋತ್ರಿ’ ಹೋಗಿ ಬಂದಾಗಿತ್ತು. ಡೋಲಿಗೆ ೧೬೪೦ ರೂ ಮತ್ತು ಕುದುರೆಗೆ ೬೦೦ ರೂ ಕೊಟ್ಟು, ಯಮುನೋತ್ರಿಗೆ ಹೋಗ ಬಹುದು ಎಂದು ತಿಳಿದುಕೊಂಡೆವು. ಅವರು ಅದೇನೂ ಅಂತಹ ಕಷ್ಟವಿಲ್ಲ, ಸುಖವಾಗಿ ಆಯಿತು ಎಂದಾಗ, ನಮ್ಮ ಮನಸ್ಸು ಸ್ವಲ್ಪ ಸಮಾಧಾನಗೊಂಡಿತ್ತು. ಚಾರ್ ಧಾಮ್ ಯಾತ್ರೆಯ ಬಗ್ಗೆ ನಮಗೆ ಯಾರೂ ಅಲ್ಲಿಗೆ ಹೋಗಿ ಬಂದವರು ಸಿಕ್ಕಲಿಲ್ಲವಾದ್ದರಿಂದ, ಏನೂ ಗೊತ್ತಿಲ್ಲದೆ, ಸಾಹಸ ಮಾಡಲು ಹೊರಟಿದ್ದೆವು. ನಮ್ಮ ಬುದ್ಧಿವಂತಿಕೆಯೆಲ್ಲಾ ಬರಿಯ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಗಳಷ್ಟೇ ಆಗಿತ್ತು. ಆದ್ದರಿಂದ ಈ ಗುಜರಾತಿ ದಂಪತಿಗಳ ಅನುಭವ ನಮಗೆ ತುಂಬಾ ಸಹಾಯ ಮಾಡಿತು. ಇಲ್ಲಿ ಹೋಟೆಲ್ ಹಿಮಾಲಯದ ಎದುರೇ ಒಂದು ಚಿಕ್ಕ ಟೀ ಅಂಗಡಿ ಇದೆ. ಅವರೇ ಇಲ್ಲಿಗೆ ಬರುವ ಎಲ್ಲಾ ಯಾತ್ರಿಗಳಿಗೂ, ಊಟ, ತಿಂಡಿ, ಎಲ್ಲಾ ಒದಗಿಸುವುದು. ನಾವೂ ಹೋಗಿ ಬಿಸಿ ಬಿಸಿ ರೊಟ್ಟಿ, ಧಾಲ್, ಬೇಂಡಿ ಪಲ್ಯ ತಿಂದು, ಹಾಲು ಕುಡಿದು ಬಂದು ಮರುದಿನ ಹೋಗಬೇಕಾಗಿದ್ದ ಯಮುನೋತ್ರಿಯ ಬಗ್ಗೆ ಯೋಚಿಸುತ್ತಾ ಮಲಗಿದೆವು.

ಕೆಲವು ಚಿತ್ರಗಳ ಕೊಂಡಿ ಕೊಟ್ಟಿದ್ದೇನೆ. ಕೇದಾರನಾಥ ಮತ್ತು ಬದರಿಯ ಚಿತ್ರಗಳನ್ನು, ಒಂದೆರಡು ದಿನಗಳಲ್ಲಿ ಹಾಕುತ್ತೇನೆ.

http://picasaweb.google.com/shamalajanardhanan/CharDhamPhotos?feat=directlink

[ಮುಂದುವರೆಯುವುದು.....]
http://www.vismayanagari.com/node/4452

ಲೇಖಕರು

shamala

ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು.
http://antharangadamaathugalu.blogspot.com/

ಅನಿಸಿಕೆಗಳು

ವಿಕ್ರಂ ಸೋಮ, 05/25/2009 - 14:59

ಶ್ಯಾಮಲ ಅವರೇ,

ಎಲ್ಲಾ ಸ್ಥಳ / ವಿಷಯಗಳ ಬಗ್ಗೆಯೂ ಕೇವಲ ಒಂದು ಅಥವಾ ಎರಡು ಸಾಲಿನ ವಿವರಣೆ ಮಾತ್ರ ಇದ್ದಂತೆ ತೋರುತ್ತದೆ. ಯಾವ ಸ್ಥಳಗಳ ಬಗ್ಗೆಯೂ ಪೂರ್ಣ ವಿವರಗಳು (ಸಾಧ್ಯವಾದಷ್ಟಾದರೂ) ಸಿಗುತ್ತಿಲ್ಲ. ದಯವಿಟ್ಟು ಅದರ ಬಗ್ಗೆ ಗಮನ ಹರಿಸಿ.

shamala ಮಂಗಳ, 05/26/2009 - 11:50

ಸ್ಥಳದ ವಿವರಣೆ ಕೊಡಲು, ನಾವೆಲ್ಲೂ ನಿಂತು, ಆ ಜಾಗಗಳನ್ನೆಲ್ಲಾ ನೋಡಿಲ್ಲ. ನಾವು ಪ್ರಯಾಣ ಮುಂದುವರಿಸಿದಾಗ, ಹಾದು ಹೋದ ಜಾಗಗಳ ಹೆಸರನ್ನು ಹೇಳಿದ್ದೇನೆ. ನಿಮಗಿನ್ನೇನು ವಿವರ ಬೇಕಾಗಿತ್ತೋ ನನಗೆ ಗೊತ್ತಾಗಲಿಲ್ಲ !

ಶ್ಯಾಮಲ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/25/2009 - 18:09

ಸ್ತಳ ವಿವರಣೆ ತುಂಬ ಕಡಿಮೆ ಇದೆ ಆದರೆ
ನೀವು ತಿಂದಿರೋ ಊಟ ದ ಬಗ್ಗೆ ವಿವರಣೆ
ತುಂಬ ಜಾಸ್ತಿ ಇದೆ

shamala ಮಂಗಳ, 05/26/2009 - 11:52

ಏನು ತಿಂದೆವು ಎಂದು ಬರೆದರೆ, ನಿಮಗೆ ಅಲ್ಲಿ ಏನು ತಿನ್ನಲು ಸಿಗುತ್ತದೆ ಎಂಬ ವಿಷಯ ತಿಳಿಯುತ್ತದೆ ! ದಯವಿಟ್ಟು ಲೇಖನ ಸರಿಯಾಗಿ ಓದಿ. ತುಂಬಾ ಜಾಸ್ತಿ ಅನ್ನಿಸುವಂತಹ ವಿವರಣೆ, ಊಟದ ಬಗ್ಗೆ, ನನಗೆ ತಿಳಿದಂತೆ, ನಾನು ಕೊಟ್ಟಿಲ್ಲ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.