Skip to main content

ಬಾಳೇಕಾಯಲ್ಲಿರೋ ಬದನೇಕಾಯಿ

ಬರೆದಿದ್ದುMay 3, 2009
11ಅನಿಸಿಕೆಗಳು

ಒಂದೂರಿನಲ್ಲಿ ಒಬ್ಬಳು ಮಹಾ-ಜಿಪುಣಿ ಮುದುಕಿಯಿದ್ದಳು. ಆಕೆಗೆ ಒಬ್ಬನೇ ಮಗ, ಆ ಮಗನಿಗೊಬ್ಬಳು ಹೆಂಡತಿ. ಮಗ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಮುದುಕಿ ಯಾವಾಗಿನಿಂದಲೂ ತರಕಾರಿ ವ್ಯಾಪಾರ ಮಾಡುತ್ತಿದ್ದಳು. ಹಿತ್ತಲಿನಲ್ಲಿ ಸಣ್ಣ ಸಣ್ಣ ಪಾತಿ ಮಾಡಿ ಇಷ್ಟಿಷ್ಟೇ ಬದನೇಕಾಯಿ, ಗೆಣಸು; ಸಣ್ಣ ಸಣ್ಣ ಚಪ್ಪರ ಹಾಕಿ ತೊಂಡೇಕಾಯಿ, ಚಪ್ಪರದವರೆ; ಬೇಲಿಯ ಮೇಲಕ್ಕೆಲ್ಲ ಬಳ್ಳಿ ಹಬ್ಬಿಸಿ ಹೀರೇಕಾಯಿ, ಸೋರೆಕಾಯಿ, ಹಾಗಲ ಬೆಳೆಯುತ್ತಿದ್ದಳು. ಮತ್ತು ಅದನ್ನೆಲ್ಲ ಲೆಕ್ಕ ಹಾಕಿ ಸಂತೆಗೆ ತೆಗೆದುಕೊಂಡು ಹೋಗಿ ಮಾರಿಬರುತ್ತಿದ್ದಳು. ಅಟ್ಟದ ಮೇಲಿದ್ದ ಸಣ್ಣಕ್ಕಿಯ ಬಾನಿಯಲ್ಲಿ ಅಕ್ಕಿಯ ಎತ್ತರವನ್ನೂ ಗುರುತು ಮಾಡಿಟ್ಟುಕೊಂಡಿರುತ್ತಿದ್ದಳು. ಮನೆಯಲ್ಲಿ ಸಣ್ಣಕ್ಕಿ-ಅನ್ನ ಬರೀ ಹಬ್ಬ-ಹರಿದಿನಕ್ಕೆ ಮಾತ್ರ. ಅಷ್ಟೆಲ್ಲ ತರಕಾರಿ ಬೆಳೆದರೂ ದಿನಾ ಮನೆಯಲ್ಲಿ ಉಪ್ಪಿನೆಸರು, ಖಾರದ ಚಟ್ಣಿ.

ಹೀಗಿರುವಾಗ ಸೊಸೆ ಬಸಿರು ಕೂತಳು. ಆರು ತಿಂಗಳಾದವು, ಅವಳ ಬಸಿರ-ಬಯಕೆಗಳು ಹೆಚ್ಚಾದವು. ಕೊನೆಗೆ ಆ ಬಯಕೆಗಳಲ್ಲಿ ಸುಟ್ಟ ಬದನೇಕಾಯಿ ಪಲ್ಲೇವು ಮಾಡಿ ತಿನ್ನಬೇಕು ಅನ್ನೋ ಆಸೆಯೂ ಸೇರಿಕೊಂಡಿತು. ಆದರೆ ಮುದುಕಿಯ ಕಣ್ಣು ತಪ್ಪಿಸಿ ಮನೆಯಲ್ಲಿ ಬೇರೇನನ್ನೂ ಅಟ್ಟು ಉಣ್ಣಲಾರದೇ ಬೇಸತ್ತ ಸೊಸೆ ಯೋಚಿಸಿ-ಯೋಚಿಸಿ ಒಂದು ದಾರಿ ಹುಡುಕಿಕೊಂಡು, ಮುದುಕಿ ಸಂತೆಗೆ ಹೋಗುವ ದಿನವನ್ನೇ ಕಾಯುತ್ತ ಕುಳಿತಳು.

ಅವತ್ತು ಗುರುವಾರ, ಮುದುಕಿ ಬೇಗನೆದ್ದು, ಜಳಕ ಮಾಡಿ ಗಂಜಿ ಉಂಡು, ಹಿಂದಿನ ದಿನವೇ ಕಿತ್ತು ಲೆಕ್ಕ ಮಾಟ್ಟಿದ್ದ ಸೌತೆಕಾಯಿಯ ಹೆಡಿಗೆಯನ್ನು ತೆಗೆದು ಮತ್ತೆ ಲೆಕ್ಕ ಹಾಕಿಕೊಂಡಳು. ನಂತರ ಹಿತ್ತಲಿಗೆ ಹೋಗಿ ಬಳ್ಳಿ ಗಿಡಗಳನ್ನೆಲ್ಲ ನೋಡಿಕೊಂಡು, ಆಗಲೇ ಹದವಾಗಿ ಬಲಿತು, ಎಳೇ ಬಿಸಿಲಿನಲ್ಲಿ ಕಪ್ಪಗೆ ಫಳಫಳ ಮಿರುಗುತ್ತಿದ್ದ ಬದನೆಕಾಯಿಗಳನ್ನು ಎಣಿಸಿಕೊಂಡು ಸೌತೆಕಾಯಿ ಬೇಗ ಮಾರಾಟವಾದರೆ ಬಂದು ಇವನ್ನೂ ಕುಯ್ದು ಮಾರಿಕೊಂಡು ಬರಬೇಕೆಂದುಕೊಂಡಳು. ನಂತರ ಒಳಬಂದು ಸೌತೆಕಾಯಿಯ ಬುಟ್ಟಿ ಹೊತ್ತುಕೊಂಡು ಸಂತೆಗೆ ಹೊರಟಳು.

ಇದಕ್ಕಾಗಿ ಕಾದಿದ್ದ ಸೊಸೆ, ಒಂದರೆ ತಾಸು ತಡೆದು ದಡ ದಡ ಅಟ್ಟಹತ್ತಿದವಳೇ ದೊಡ್ಡ ಮಣ್ಣಿನ ಬಾನಿಲಿದ್ದ ಸಣ್ಣಕ್ಕಿಯಿಂದ ಅಚ್ಚೇರು ಸಣ್ಣಕ್ಕಿ ತಂದು ತೊಳೆದು ಒಲೆ ಮೇಲಿಟ್ಟಳು. ಹಿತ್ತಲಿಗೆ ಹೋಗಿ ಬದನೆ ಗಿಡ ನೋಡಿ, ಕಪ್ಪಗೆ-ಕರೀ ಮಣಿಯಂತೆ ಹೊಳೆಯುತ್ತಿರುವ ಬದನೇಕಾಯೊಂದನ್ನು ಮುರಿದುಕೊಂಡು ಬಂದು ಅಟ್ಟಿನ ಮೇಲೆ ಅಕ್ಕಿ ಬೇಯಿಸುತ್ತಿದ್ದ ಒಲೆ ಕೆರೆದು, ಕೆಂಡ ಒಟ್ಟು ಮಾಡಿ ಅದರ ಮೇಲೆ ಸುಡಲು ಇಟ್ಟಳು. ಆಮೇಲೆ ಸೆರಗಿನಿಂದ ಮುಖ ಒರಸಿಕೊಳ್ಳುತ್ತ ಬಂದು ಜಗುಲಿಮೇಲೆ ನಿಂತು ನೋಡ್ತಾಳೆ, ಆಗ್ಲೇ ಸಂತೆ ಮುಗಿಸಿ ಮುದುಕಿ ತಿಮ್ಮನ ಮನೆ ತಿರುವಿನಾಗೆ ಬರ್ತಾ ಇದಾಳೆ! ಬರೀ ಕುಕ್ಕೆಯನ್ನು ಸೊಂಟಕ್ಕೆ ಆನಿಸಿಕೊಂಡು, ಇನ್ನೊಂದ್ ಕೈಯಲ್ಲಿ ಊರ್ಗೋಲು ಊರ್ಕೊಂಡು ಬರ್ತಾ ಇರೋ ಅತ್ತೆಮ್ಮನ ನೋಡಿ ಈಕೆ ಹೆದರಿದವಳೇ ಒಳ ಹೋಗಿ ಕೊತಕೊತ ಉಕ್ಕುತ್ತಿರೋ ಅನ್ನವನ್ನು ಹಂಗೇ ಅಟ್ಟದ ಮ್ಯಾಕೆ ತಗೊಂಡೋಗಿ ಬಾನಿಗ್ ಸುರುದು ಅದರ ಮ್ಯಾಗೆ ಬರೀ ಅಕ್ಕಿನೆಲ್ಲ ಮುಚ್ಚಿದ್ಲು. ಕೆಂಡದ್ ಮ್ಯಾಲೆ ಚಟ್-ಪಟ್ ಅಂತಾ ಇದ್ದ ಬದ್ನೇಕಾಯ್ನ ಏನ್ಮಾಡೋದು ಗೊತ್ತಾಗ್ದೇ ಸುಮ್ಮನೆ ತನ್ನ ಸೊಂಟದ ನಿರಿಗೆ ಗಂಟಿನೊಳಕ್ಕೆ ಸುತ್ತಿಟ್ಟುಕೊಂಡಳು.

ದುಸುಮುಸು ಉಸಿರು ಬಿಡ್ತಾ ಬಂದ ಅತ್ತೆ ಜಗುಲಿ ಹತ್ತುತ್ತಲೇ ಮೂಗರಳಿಸಿ, “ಏನೋ ಸಿಂಡ್ರು ಸಿಂಡ್ರು ವಾಸ್ನೆ ಬರ್ತೈತಲ್ಲಮ್ಮಿ, ಏನಾದ್ರೂ ಕೆಂಡ್ತಾಗೆ ಸುಡಾಕ್ ಹಾಕಿದೀಯಾ?” ಅಂತ ಸೊಸೆನ ಕೇಳಿದ್ಲು. ಆಗ್ಲೇ ಬೆದರಿ ಬೆಚ್ಚಿ ನಿಂತಿದ್ದ ಸೊಸೆ, “ಇಲ್ಕಣತ್ತ್ಯಮ್ಮ, ನಾನೇನ್ ಸುಡ್ಲೀ” ಅಂದ್ಲು. “ಸರಿ ಬಿಡು,” ಅಂತಾ ವಂದಕ್ಕೆ ಹೋಗೋಳಂಗೆ ಮುದುಕಿ ಹಿತ್ತಲಿಗೆ ಹೋಗಿ, ಸ್ಯಾಲೆ ಹರಡಿಸಿಕೊಂಡು ಕುಳಿತು, ಬದನೆ ಗಿಡದ ಅಷ್ಟೂ ಕಾಯಿಗಳನ್ನ ಎಣಿಸಿದ್ಲು. ಕಳೆಕಳೆಯಾಗಿ ಬೆಳೆದಿದ್ದ ಒಂದ್ ಬದ್ನೇಕಾಯಿ ನಾಪತ್ತೆಯಾಗಿದ್ದು ಅವಳಿಗೆ ಗೊತ್ತಾಯಿತು, ಮನೆಯೊಳಗೆ ಹೋಗುತ್ತಲೇ ಸೊಸೆಯನ್ನು ಕೂಗಿ ಕರೆದು, “ಏನಮ್ಮೀ, ಹಿತ್ಲಾಗಿರೋ ಬದ್ನೇಕಾಯ್ ಗಿಡ್ದಾಗೆ ಒಂದ್ ಕಾಯಿ ಕಾಣ್ದಂಗಾಗಯ್ತಲ್ಲಾ, ನೀ ಏನರೆ ನೋಡಿಯೇನು?” ಅಂತಾ ಕೇಳಿದ್ಲು. ಸೊಸೆ, “ಇಲ್ಕಣತ್ಯಮ್ಮ, ನಾಕಾಣೆ” ಅಂದ್ಲು. “ಸರಿ ಬಿಡು,” ಅಂತ ಮುದುಕಿ, ಮಂಚ ಹತ್ತಿ ಕುಟ್ಟಣೆ ಹುಡುಕಿ, ಎಲೆಯಡಿಕೆ ಕುಟ್ಟಿಕೋತ ಕುಂತಳು.

ಮದ್ಯಾಹ್ನ ಆಯ್ತು. ಸೊಸೆ ಮುದ್ದೆ ತಿರುವಿ, ಖಾರ ಚಟ್ಣಿ ಮಾಡಿ ಅತ್ತೆ ಹತ್ರ ಬಂದು "ಹಿಟ್ಟು ಉಣ್ಣೇಳಿ ಅತ್ತೆಮ್ಮಾ” ಅಂತ ಕರುದ್ಲು. ಹಾಸಿಗೆ ಮ್ಯಾಗೆ ಹಂಗೇ ಒರಗಿಕೊಂಡಿದ್ದ ಮುದುಕಿ, "ಹಿತ್ಲಾಗಿರೋ ಗಿಡದ ಬದ್ನೇಕಾಯೇನಾರ ನೋಡಿಯೇನು?” ಅಂತ ಸ್ವಪ್ನ ಬಿದ್ದವಳಂತೆ ಕೇಳಿದಳು, ಸೊಸೆ ಬೆಚ್ಚಿ “ಇಲ್ಕಣತ್ಯಮ್ಮ, ನಾಕಾಣೆ” ಅಂದ್ಲು. ಅದಕ್ಕೆ ಆ ಮುದುಕಿ, “ಸರೀ ಬಿಡು, ನನಗೆ ಹಸಿವಿಲ್ಲ” ಅಂದು ಬಿಟ್ಟಳು.

ಸಂಜೆಯಾಗಿ ರಾತ್ರಿಯಾಯ್ತು. ಕೆಲಸಕ್ಕೆ ಹೋಗಿದ್ದ ಮನೇಮಗ ಮನೆಗೆ ಬಂದ. ಗಂಡ ಬಂದೊಡನೇ ತೊಳ್ಕೊಳ್ಳೋಕೆ ನೀರು ಕೊಟ್ಟು, ವಸ್ತ್ರ ಕೊಟ್ಟು, ಅವನು ಬರೋವಷ್ಟರಲ್ಲಿ ಎಡೆಮಣೆ ಇಟ್ಟು, ಅದರ ಮ್ಯಾಲೆ ಕಂಚಿನ ಗಂಗಾಳ, ಅದ್ರೊಳಕ್ಕೆ ಬಿಸೀಬಿಸಿ ಮುದ್ದೆ ಇಟ್ಟು, ಉಪ್ಪೆಸರು ಬಿಟ್ಟು, ಮುದ್ದೆ ನೆನೀದೇ ಇರಲೀಂತ ಮುದ್ದೆಯಿದ್ದ ಅಂಚಿಗೆ, ಗಂಗಾಳದ ತಳಕ್ಕೆ ಇದ್ದಿಲಿನ ಚೂರೊಂದನ್ನು ಇಟ್ಟು ಏರು ಮಾಡಿ, ಸೊಸೆ ಅವ್ನು ವಸ್ತ್ರ ಹೆಗಲು ಮೇಲ್ಹಾಕಿಕೊಂಡು ಅಡುಗೆ ಮನೆಗೆ ಬರುತ್ಲು ಪಿಸುಗುಟ್ಟಿದ್ಲು. “ಅತ್ತೆಮ್ಮುನ್ನೂ ಕರೀರಿ, ಇವತ್ ಮದ್ಯಾನ್ದಾಗೂ ಉಂಡಿಲ್ಲ ಅವ್ರು” ದಿನಾ ತಾನ್ ಬರೋದ್ರಾಗೆ ಉಂಡು ಮನಿಕ್ಯಂಡಿರ್ತಿದ್ದ ಅವ್ವ ಇವತ್ತ್ಯಾಕೆ ಉಂಡಿಲ್ಲ ಅಂದ್ಕೊಂಡು ಮಗ, ಮಂಚದ ಹತ್ರ ಹೋಗಿ, “ಯಾಕವ್ವಾ ಉಂಡಿಲ್ಲ? ಮಯ್ಯಾಗೇನಾರು ಜಡ್ಡೇನು?” ಅಂತ ಕೇಳಿದ. ಎಚ್ಚರಾಗೇ ಇದ್ದ ಮುದುಕಿ, “ನಿನ್ ಹೆಡ್ತೀನ್ ಕೇಳಪ್ಪಾ, ಹಿತ್ಲಾಗಿರೋ ಗಿಡದ ಬದ್ನೇಕಾಯೇನಾರ ನೋಡಾಳೇನು?” ಅಂತು. ಮಗ ಏನೂ ಅರ್ಥವಾಗದೇ ಒಳಮನೆ ಹೊಸ್ತಿಲಿಗೆ ಬಂದು ನಿಂತಿದ್ದ ಹೆಂಡತಿ ಕಡೆ ತಿರುಗಿ ನೋಡಿದ, ಸೊಸೆ ತಟ್ಟಂತ ಉತ್ತರಕೊಟ್ಟಳು, “ಇಲ್ಕಣತ್ಯಮ್ಮ, ನಾಕಾಣೆ”. ಮುದುಕಿ, “ಸರಿ ಬಿಡು, ನನಗೆ ಹಸಿವಿಲ್ಲ” ಅಂದು ಗೋಡೆ ಕಡೆಗೆ ಮಗ್ಗುಲುಹಾಕಿಕೊಂಡು ಹೊದ್ದುಕೊಂಡು ಮಲಗಿಬಿಟ್ಟಳು.

ಮಗ ಬೆಳಗ್ಗಿಗೆ ನೋಡಾನ ಅಂತ ಸುಮ್ಮನಾದ. ಗಂಡ ಹೆಂಡಿರಿಬ್ಬರೂ ಉಂಡು ಮಲಗಿ ಗಂಟೆಯಾದ ಮೇಲೆ ಸೊಸೆ ಮೆಲ್ಲನೆದ್ದು ಅಡಿಗೆ ಮನೆಗೆ ಹೋಗಿ ಒಂದಷ್ಟು ಉಪ್ಪು-ಕಾರಪುಡೀನೂ ತಗೊಂಡು ಹಿತ್ತಲಿಗೆ ಹೋಗೋಳ ತರ ಹೋಗಿ, ಕತ್ತಲಲ್ಲಿ ಕೂತು, ಬದ್ದೇಲಿದ್ದ ಸುಟ್ಟ ಬದನೇಕಾಯಿ ತೆಗೆದು, ಸುಲಿದು, ಉಪ್ಪುಖಾರ ನೆಂಚಿಕೊಂಡು ತಿಂದಳು. ರುಚಿ ಬಹಳವಾಗಿ, ನಾಲಿಗೆ ಚುರುಚುರ್ ಅಂದು ಬಾಯಿಯಲ್ಲಿ ನೀರೂರಿತು. ಬದನೇಕಾಯಿ ತಿಂದು, ಸುಲಿದ ಸಿಪ್ಪೆ ಅತ್ತೆಮ್ಮನಿಗೆ ಕಾಣಬಾರದು ಅಂತಾ ಅದೇ ಬದನೇಗಿಡದ ಬುಡವನ್ನು ಬಗೆದು ಸಿಪ್ಪೆ ಹಾಕಿ ಮಣ್ಣು ಮುಚ್ಚಿ ಒಳಬಂದಳು.

ಇರುಳು ಮುಗಿದು ಹಗಲಾಯ್ತು, ಹಗಲು ಇರುಳಾಯ್ತು. ಇವತ್ತು ನಾಳೆಯಾಯ್ತು, ನಾಳೆ ನಾಡಿದ್ದಾಯ್ತು. ಮುದುಕಿಯ ಹಾಡು ಮುಗೀಲಿಲ್ಲ. “ಅತ್ತೆಮ್ಮ, ಫಲಾರ ಮಾಡೇಳಿ?” “ಹಿತ್ಲಾಗ್ ಬಿಟ್ಟಿದ್ ಬದ್ನೇಕಾಯೇನಾರ ನೋಡಿದ್ದೇನು?” “ಇಲ್ಕಣತ್ಯಮ್ಮ, ನಾಕಾಣೆ” “ಹಂಗಾರೆ ಫಲಾರ ಬ್ಯಾಡ”... ...”ಅವ್ವಾ, ಇದೇನ್ ಸಣ್ ಮಗೀನ್ ತರ ಹಠಾ ಮಾಡ್ತಿದೀ... ಇವತ್ತು ಬೀರದೇವ್ರ ಸ್ವಾಮಾರ, ಎದ್ದು ಜಳಕ ಮಾಡು” “ನಿನ್ ಹೆಡ್ತಿ ಹಿತ್ಲಾಗ್ ಬಿಟ್ಟಿದ್ ಬದ್ನೇಕಾಯೇನಾರ ನೋಡಿದ್ದಳೇನು?” “ಆಕಿಗ್ ಏನ್ ಗೊತ್ತಿರತೈತವ್ವಾ?” “ಹಂಗಾರೆ ನಾನು ಜಳಕ ಮಾಡಂಗಿಲ್ಲ”...

ದಿನಗಳಾಗಿ ವಾರವಾಯ್ತು. ವಾರಗಳಾಗಿ ತಿಂಗಳಾಯ್ತು. ಮುದುಕಿಯ ಉಸಿರು-ದೆಸೆಯೆಲ್ಲ ನಿಂತೋಯ್ತು. ಮಗ ನೆಂಟರಿಷ್ಟರೆಲ್ಲರನ್ನು ಕರೆಯ ಕಳುಹಿಸಿದ, ಸೊಸೆಗೆ ಗಾಬರಿಯಾಯ್ತು. ಓಡಿಬಂದವಳೇ ಹಾಸಿಗೆಯ ಮೇಲೆ ಸೊಪ್ಪಾಗಿ ಮಲಗಿದ್ದ ಅತ್ತೆಯ ಕಿವಿಯಲ್ಲಿ ಉಸುರಿದಳು, “ಅತ್ತೆಮ್ಮ, ಏಳಿ, ನೆಂಟರ್ಗೆಲ್ಲ ಕರೆ ಕಳಿಸ್ತವ್ರೆ”, ಸಣ್ಣ ದನಿಯಲ್ಲಿ ಮುದುಕಿ ಮೆಲ್ಲನೆ ಮಾತನಾಡಿದಳು, “ಹಿತ್ಲಾಗ್ ಬಿಟ್ಟಿದ್ ಬದ್ನೇಕಾಯೇನಾರ ನೋಡಿದ್ದೇನು?” “ಇಲ್ಕಣತ್ಯಮ್ಮ, ನಾಕಾಣೆ”, “ಹಂಗಾರೆ ನಾ ಏಳಾಂಗಿಲ್ಲ!” ನೆಂಟರಿಷ್ಟರೆಲ್ಲ ಬಂದರು. ಉಸಿರು ನಿಂತಂಗಾಗಿದ್ದ ಮುದುಕಿಯ ನೋಡಿ, ಅವಳ ಮಗನನ್ನು ಕರೆದು, “ತಡಾ ಮಾಡಬಾರದಪ್ಪ. ಮಣ್ಣಿನ ಜೀವ ಮಣ್ಣ ಸೇರ್ಕೊಂಡ್ ಬಿಡ್ಬೇಕು. ನಿಸಾನಿಯವರ್ನ ಕರ್ಸು, ಗುಂಡಿತೋಡಾಕೆ ಜನಾ ಕಳ್ಸು, ಮನೀಮುಂದೆ ಉರೀ ಹಚ್ಚು, ಚಟ್ಟನೆಲ್ಲ ತಯಾರಿ ಮಾಡೋಣ” ಅಂತೆಲ್ಲ ಅಂದರು. ಸೊಸೆಯ ಎದೆ ಢವಢವಿಸಿ ಓಡಿಬಂದು, ಮುದುಕಿಯ ಹಾಸಿಗೆ ಬಳಿ ಬಂದು ಕಿವಿಯ ಹತ್ತಿರ ಮೆಲ್ಲನೆ ಎಲ್ಲವನ್ನೂ ನಡೆಯುತ್ತಿದ್ದ ಏರ್ಪಾಟನ್ನೆಲ್ಲ ವಿವರಿಸಿ ಹೇಳಿ, “ಎದ್ದೇಳಿ ಅತ್ತೆಮ್ಮ, ನಿಮ್ ದಮ್ಮಯ್ಯ” ಅಂದಳು. ಮುದುಕಿ ಕಣ್ಣು ತೆರೆಯದೇ ತುಟಿಯಲ್ಲಾಡಿಸಿತು, “ಹಿತ್ಲಾಗ್ ಬಿಟ್ಟಿದ್ ಬದ್ನೇಕಾಯೇನಾರ ನೋಡಿದ್ದೇನು?” “ಇಲ್ಕಣತ್ಯಮ್ಮ, ನಾಕಾಣೆ”, “ಹಂಗಾರೆ ನಾ ಏಳಾಂಗಿಲ್ಲ!”

ಮನೆ ಮುಂದೆ ಬೆಂಕಿಯ ಕೊರಡು ಬಿತ್ತು, ಅತ್ತಿತ್ತಲಿನವರೆಲ್ಲ ಬಂದರು, ನಿಸಾನಿಯವರು ಬಂದು ವಾದ್ಯ ಬಡಿಯೋಕೆ ಶುರುಮಾಡಿದರು. ಚಟ್ಟ ತಯಾರಾಯ್ತು, ಮುದುಕಿಗೆ ಸುಡ-ಸುಡಾ ನೀರಿನಲ್ಲೇ ಜಳಕ ಮಾಡ್ಸಿ, ಚಟ್ಟ ಕಟ್ಟಿ ಸ್ಮಶಾನಕ್ಕೆ ಹೊತ್ತೇ ಬಿಟ್ಟರು. ಮುದುಕೀನ ಗುಂಡೀಗಿಳಿಸಿ ಇನ್ನೇನು ಮಣ್ಣು ಹಾಕಬೇಕು, ಸೊಸೆಗೆ ತಡೆಯಲಾಗಲಿಲ್ಲ. ಇನ್ನು ತಡ ಮಾಡಿದರೆ ಸರಿಯಾಗುವುದಿಲ್ಲ ಎಂದುಕೊಂಡು, “ತಡೀರ್ರೋ, ನಮ್ಮತ್ತೆ ಮಕಾ ನೋಡ್ಬೇಕು” ಅಂತ ಚೀರಿದಳು. ಬಸುರಿ ಹೆಂಗಸು, ಈಗ್ಲೇ ಸೂತಕ ಆಗಿದೆ, ಇನ್ನು ಈ ಸ್ಮಶಾನಕ್ಕೆ ಬಂದಿರೋದರಿಂದ ಗಾಳಿಗೀಳಿಯಂತಾದ್ರೆ ಏನು ಗತಿ ಅಂತಾ ಎಲ್ಲರೂ ಭಯ ಪಡುತ್ತಿರುವಾಗಲೇ ಕೆಲವರು ಏಣಿ ಹಾಕಿ ಸೊಸೆಯನ್ನು ಮೆಲ್ಲನೆ ಗುಂಡಿಗಿಳಿಸಿಯೇ ಬಿಟ್ಟರು. ಸೊಸೆ ಮೆಲ್ಲನೆ ಅತ್ತೆ ಮುಖದ ಹತ್ತಿರ ಬಂದು ಕಣ್ಣೀರನುಕ್ಕಿಸುತ್ತ ಬೇಡಿದಳು, “ಅತ್ತೆ, ಜೀವಾ ಇರೂವಾಗ್ಲೇ ಎಲ್ರೂ ನಿಮ್ ಬಾಯಾಗೆ ಮಣ್ ಹಾಕತಾರೆ, ಎದ್ದೇಳ್ರೀ...” ಹೂತುಹೋದ ಸ್ವರದಲ್ಲಿ ಮುದುಕಿ ತುಟಿಯಾಡಿಸಿದಳು, “ಹಿತ್ಲಾಗ್ ಬಿಟ್ಟಿದ್ ಬದ್ನೇಕಾಯೇನಾರ ನೋಡಿದ್ದೇನು?” ಏದುಸಿರಿನಲ್ಲೇ ಬಿಕ್ಕುತ್ತ ಸೊಸೆ ಕೊನೆಗೂ ಒಪ್ಪಿಕೊಂಡಳು, “ನೋಡೀನಿಯೇಳಿ, ಅರೆಬೆಂದ್ ಅಕ್ಕಿ ಅಟ್ಟದ್ ಬಾನಿಯಾಗೈತೆ, ಅರೆಸುಟ್ಟ ಬದ್ನೇಕಾಯಿ ನನ್ ಬದ್ದೇನಾಗಿರೋ ಬಾಳೇಕಾಯಾಗೈತೆ” ಎಂದು ತನ್ನ ಸೀರೆ ಸೊಂಟಕ್ಕೆ ಸಿಕ್ಕಿಸಿಕೊಳ್ಳುವ ಜಾಗದಲ್ಲಿ ದಪ್ಪಗೆ ಮಾಡಿಕೊಂಡಿದ್ದ ನಿರಿಗೆಯ ಗಂಟನ್ನು ತೋರಿದಳು. ಮುದುಕಿಯ ಕಣ್ಣುಗಳರಳಿದವು, ಎಲ್ಲಿತ್ತೋ ಶಕ್ತಿ, “ಜೀವಾ ಇದ್ದಾಂಗೇ ನನ್ ಮಣ್ಣ ಮಾಡಿ ಹುಳೀಯನ್ನ ತಿನ್ಬೇಕಂತ ಮಾಡೀರೇನ್ರೋ?” ಎಂದು ಕೂಗುಹಾಕಿದಳು. ಎಲ್ಲರೂ ಈ ಸೋಜೀಗಕ್ಕೆ ಬೆದರಿ ಬೆಚ್ಚಿ ಬೆರಗಾಗಿ ಓಡಿಬಂದು ಆಕೆಯನ್ನ್ನು ಗುಂಡಿಯಿಂದೆತ್ತಿಕೊಂಡು ಮನೆಗೆ ಒಯ್ದರು, ಮತ್ತು ಮನೆಯಲ್ಲಿ ಮೊದಲೇ ತಯ್ಯಾರಾಗುತ್ತಿದ್ದ ಹುಳಿಯನ್ನದ ಜೊತೆ ಹುರಿಯಕ್ಕಿ ಪಾಯಸವನ್ನೂ ಮಾಡಿ ಮುದುಕಿಯ ಹೊಟ್ಟೆಯುರಿಯುವಂತೆ ಔತಣ ಮಾಡಿ ತಿಂದು ತೇಗಿದರು.

ಎಲ್ಲ ಮುಗಿದ ಮೇಲೆ ಮುದುಕಿ ಸೊಸೆಯನ್ನು ಕರೆದು, ಬದ್ದೆಯಲ್ಲಿದ್ದ ಬದನೆಕಾಯಿಯನ್ನು ತೋರಿಸು ಎಂದು ಕೇಳಿದಳು. ಅಳುಕುತ್ತ, ಅಂಜುತ್ತ ಸೊಸೆ ತಾನು ಅಂದು ರಾತ್ರಿಯೇ ಆ ಸುಟ್ಟ ಬದನೆಕಾಯಿಯನ್ನು ಉಪ್ಪು ಕಾರ ಹಚ್ಚಿ ತಿಂದುದಾಗಿಯೂ ಅದಕ್ಕೆ ಕಾರಣ ತನ್ನ ಬಸುರಿ-ಬಯಕೆಯೆಂದೂ ಹೇಳಿದಳು. ಮುದುಕಿಗೆ ಮನಕರಗಿ, “ಇನ್ನುಮ್ಯಾಗೆ ನಾನೇನು ಕಟ್‌ನಿಟ್ಟು ಮಾಡಾಂಗಿಲ್ಲ. ಅಟ್ಟದಾಗಿರೋ ಬಾನಿ ಅಕ್ಕಿ ಅಳೆಯಾಂಗಿಲ್ಲ, ಹಿತ್ತಿಲ ತರ್ಕಾರಿ ಲೆಕ್ಕ ಮಾಡಂಗಿಲ್ಲ. ನಿನ್ನಿಷ್ಟದ್ದು ಮಾಡಿಕೊಂಡು ತಿನ್ನು” ಎಂದು ಆಕೆಯ ತಲೆ ಸವರಿ, “ಆದ್ರೂ ಸಾಯತಿದ್ದ ಈ ಮುದಕೀಗೆ ಸುಳ್ಳು ಹೇಳಿ, ಜೀವಾ ಉಳಿಸಿದೀಯೇನು?” ಎಂದು ಚೇಷ್ಟೆಯ ಮಾತನಾಡಿದಳು. ಅದಕ್ಕೆ ಸೋಲದಂತೆ ಸೊಸೆಯೂ ತನ್ನ ಬಸುರಿ ಹೊಟ್ಟೆ ತೋರಿಸಿ, “ಬದ್ದೇನಾಗಿರೋ ಬಾಳೇಕಾಯಾಗೈತೆ ಅಂದದ್ದು ನಿಜವೇ. ಅವತ್ತು ನಾನು ಸುಟ್ಟು ತಿಂದ ಬದನೇಕಾಯಿ ಈ ಬಸುರಿನ ಬಾಳೇಕಾಯಾಗೇ ಐತೆ” ಎಂದು ನಗೆಯಾಡಿದಳು ಮತ್ತು ತನ್ನ ಮಾತು ನಿಜವಾಗುವಂತೆ ಇನ್ನೆರಡು ತಿಂಗಳು ತುಂಬುವಷ್ಟರಲ್ಲಿ ಬಸುರಿ-ಬೇನೆಗೂ ಕುಳಿತು ಮುದ್ದಾದ, ಎಳೇ ಚಿಗುರಿನ ಗುಂಡಗಿನ ಬದನೇಕಾಯಂತ, ಕಪ್ಪಗೆ ನೀಲಮಣಿಯಂತೆ ಹೊಳೆಯುವಂತಾ ಮೊಮ್ಮಗನನ್ನು ಹೆತ್ತು ಅತ್ತೆಯ ಮಡಿಲಿಗೆ ಹಾಕಿದಳು!

(ನಾನು ತೀರಾ ಸಣ್ಣವನಿದ್ದಾಗ ನನ್ನ ಮುತ್ತಜ್ಜಿ ನನಗೆ ಹೇಳಿದ ಜಿಪುಣತನದ ಕತೆಗೆ ನಾನಿಲ್ಲಿ ರೆಕ್ಕೆ-ಪುಕ್ಕ, ಕೈ-ಕಾಲು ಜೋಡಿಸಿದ್ದೇನೆ. ನನ್ನ ಮುತ್ತಜ್ಜಿ ಸೊಂಟದ ನಿರಿಗೆಯ ಗಂಟು (ನಾವು ಅದರ ಆಕಾರದಿಂದಾಗಿ ಆ ಗಂಟಿಗೆ ಬಾಳೇಕಾಯಿ ಎನ್ನುತಿದ್ದೆವು) ನನ್ನಂತಹ ಮರಿಮಕ್ಕಳಿಗೆ ಹಲವಾರು ಸೋಜಿಗಗಳನ್ನು ಬಚ್ಚಿಟ್ಟುಕೊಂಡಿದ್ದ ಅಲ್ಲಾವುದ್ದೀನನ ದೀಪವಾಗಿತ್ತು. ಅದರೊಳಗೆ ಆಕೆಯ ಸಣ್ಣ ಎಲೆಯಡಿಕೆಯ ಚೀಲ, ಯಾರೋ ನೋಡಲು ಬಂದವರು ಕೊಟ್ಟು ಹೋಗಿದ್ದ ಪೆಪ್ಪರ ಮಿಂಟು, ಹಳತಾಗಿ ರುಚಿಕಳೆದುಕೊಂಡು ಮೆತ್ತಗಾದ ಬಿಸ್ಕತ್ತುಗಳು, ನಮ್ಮ ಹೊಟ್ಟೆ ನುಲಿವಿಗೆ ಬಜೆ, ತೀರಾ ದಂಬಾಲು ಬಿದ್ದರೆ ಒಮ್ಮೊಮ್ಮೆ ಅದರಿಂದ ತೆಗೆದುಕೊಡುತ್ತಿದ್ದ ಹತ್ತು ಪೈಸೆ, ಎಲ್ಲವೂ ನಮಗೆ ಅಚ್ಚರಿಯೇ. ಆಗೀಗ ಅವಳಿಗೆ ಎಲೆಯಡಿಕೆ ಕುಟ್ಟಿಕೊಡುತ್ತ ನಿನ್ನ ಬಾಳೇಕಾಯಿ ಕತೆ ಹೇಳಜ್ಜೀ ಎಂದು ಕಾಡಿದರೆ ಆಕೆ ಹೇಳುತ್ತಿದ್ದ ಕತೆ ಇದು.)

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 05/03/2009 - 15:14

ಚೆನ್ನಾಗಿದೆ

ವಿ.ಎಂ.ಶ್ರೀನಿವಾಸ ಸೋಮ, 05/04/2009 - 16:40

ವಾರಕ್ಕೊಂದು ಸಲ ಸಾಹಿತ್ಯದ ಮೃಷ್ಟಾನ್ನ ವಿಸ್ಮಯಪ್ರಜೆಗಳಿಗೆ ಉಣಬಡಿಸುತ್ತಿರೋದನ್ನು ನೋಡಿದರೆ, ಶಿವು ರವರು ಒಳ್ಳೇ ಲಹರಿಯಲ್ಲಿರೋಂಗಿದೆ. ಚೆನ್ನಾಗಿದೆ ಕಥೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/04/2009 - 17:12

ನಿಜ್ವಾಗ್ಲು " ಚನ್ದಾಮಾಮ " ಕಥೆ ಒದಿದ ಹಾಗಯ್ತು.
ಕ್ಶಮಿಸಿ. ಕನ್ನದ ತಪ್ಪುಗಲಿಗಾಗಿ

ನರಸೀಪುರ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 05/04/2009 - 18:44

ನಮಸ್ಕಾರ ಸಾರ್,
ಚೆನ್ನಾಗಿದೆ ಕಥೆ. ಇನ್ನೂ ಲಂಗ ದಾವಣಿ ಹಾಕುವ ವಯಸ್ಸಾಗಿಲ್ಲದ, ಸೀರೆ ಉಡಲು ಹಟ ಮಾಡುವ ಕಿಶೋರಿಯರಿಗೆ ಸಣಬಿನ ನಾರಿನ ಸೊಂಟ ಪಟ್ಟಿ ಕಟ್ಟಿ ಅರ್ಧ ಮೊಳ ಮಡಚಿ ಸೀರೆ ಉಡಿಸುವುದರಿಂದ ಬಾಳೆಕಾಯಿ ಇರುವುದಿಲ್ಲ ಅನ್ನುವುದರ ಬಗ್ಗೆಯೂ ಒಂದು ಕಥೆ ಬರೆಯಿರಿ, ಪ್ಲೀಸ್!

ಕನ್ನಡಿಗನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/05/2009 - 17:03

ಶಿವಕುಮಾರ್ ರವರೇ...

ನಿಮ್ಮ ಈ ಕತೆ ಬಹಳ ಚೆನ್ನಾಗಿದೆ. ಈ ಕತೆಯ ಅತ್ತೆ-ಸೊಸೆಯರ ಗ್ರಾಮೀಣ ಸೊಗಡಿನ ಸಂಭಾಷಣೆ, ನಿಮ್ಮ ಕಥನ ಶೈಲಿ ನನಗಂತೂ ಬಹಳ ಹಿಡಿಸಿತು. ಹಾಗೆಯೇ... ನಾನೂ ಕೂಡ ನನ್ನ ಅಜ್ಜಿಯೊಡನೆ ಕಳೆದ ನನ್ನ ಬಾಲ್ಯದ ದಿನಗಳನ್ನು ನೆನೆಸಿಕೊಳ್ಳುವಂತೆ ಮಾಡಿತು. ನಾನೂ ಕೂಡ ನಮ್ಮಜ್ಜಿಯ ಸೀರೆಯ ಬಾಳೆಕಾಯಿಂದ ಕಡಲೆಬೀಜ, ಅವರೆಕಾಳು, ಪೆಪ್ಪರಮಿಂಟು ಮುಂತದವನ್ನು ಪಡೆದುಕೊಂಡ ಸುದೈವಿ!

ಕೆಎಲ್ಕೆ ಗುರು, 05/07/2009 - 14:17

ಚೆನ್ನಾಗಿದೆ ನಿಮ್ಮ ಈ ಜಾನಪದ ಕಥೆ. ಓದಿ ಮಸ್ತ್ ಮಜಾ ಬಂತು. ನಿಮ್ಮ ಬರೆಯುವ ಕಲೆ ಎಂಥಾ ಸಿಂಪಲ್ ಕಥೆಯನ್ನೂ ಚೆಂದವಾಗಿಸಿ ಬಿಡುತ್ತದೆ. ಏನು , ಒಂದರ ಹಿಂದೊಂದು ಬರೆದು ಎಸೆಯುತ್ತಿದ್ದಿರಿ? ಶ್ರೀನಿವಾಸ್ ಹೇಳಿದಂತೆ ಒಳ್ಳೆ ಲಹರಿಯಲ್ಲಿರುವಂತಿದೆ!

ಬಾಲ ಚಂದ್ರ ಧ, 06/10/2009 - 18:14

ಇಂಥ ಚೆಂದದ ಕಥೆಯನ್ನು ನೀವು ಯಾವ ಬಾಳೇಕಾಯೊಳಗೆ ಇಷ್ಟು ದಿನ ಬಚ್ಚಿಟ್ಟುಕೊಂಡಿದ್ದಿರಿ ಶಿವೂ ?

ಸಸ್ನೇಹ
ಬಾಲ ಚಂದ್ರ

Bhaswan ಮಂಗಳ, 06/23/2009 - 16:20

ಕಥೆ ಚನ್ನಾಗಿದೆ.

ಶೊಕ್ (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/24/2009 - 13:08

ತು0ಬಾ ಚೆನ್ನ ನಿಮ್ಮ ಕಥೆ ಇನ್ನು ಜಾಸ್ತ್ತಿ ಕಥೆ ಬರಿಬೆಕು ನೆೀವು

suresh sathya ಗುರು, 03/15/2012 - 11:27

thumba chennagide kathe

prashanth kumar m ಮಂಗಳ, 05/29/2012 - 17:58

nice one

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.