Skip to main content

ಭಯ : ಭಾಗ 2

ಬರೆದಿದ್ದುFebruary 16, 2009
2ಅನಿಸಿಕೆಗಳು

ಭಯ : ಭಾಗ 1 ರಿಂದ ಮುಂದುವರಿದುದು..

"ಜೀಪು ಗೋಣಿಬೀಡಿಗೆ ಹೋಗಿದೆಯಂತೆ, ಇನ್ನೂ ಮುಕ್ಕಾಲು ಗಂಟೆಯಾಗುತ್ತೆ ಅಂದರು. ಅಷ್ಟು ಹೊತ್ತಿಗೆಲ್ಲ ಬೇಲೂರು-ಮೂಡಿಗೆರೆ ಮಾರ್ಗವಾಗಿ ಧರ್ಮಸ್ಥಳದ ಬಸ್ಸು ಬಂದರೆ, ಸ್ವಲ್ಪ ರಿಕ್ವೆಸ್ಟ್ ಮಾಡಿಕೊಂಡು ಹತ್ತಿಬರೋಕಾಗುತ್ತಾ ನೋಡಿ, ಇಲ್ಲದಿದ್ದರೆ ಅಲ್ಲೇ ಇರಿ, ಜೀಪು ಬಂದ ಕೂಡಲೇ ಕಳಿಸುತ್ತೇನೆ ಅಂದರು" ತನ್ನ ಅಪ್ಪನ ಜೊತೆ ನಡೆದ ಸಂಭಾಷಣೆಯ ಮುಖ್ಯಾಂಶಗಳನ್ನು ಅರುಣ ಹುಡುಗರಿಗೆ ಅರುಹಿದ. ಕೆಲವರು ಎದ್ದು ಕಾಂಪೌಂಡಿನ ಮೂಲೆಗಿದ್ದ ಮೂತ್ರಿಯೆಡೆಗೆ ನಡೆದರು, ನೀರಿನ ಬಾಟಲಿ ತೆಗೆದು ನೀರು ಕುಡಿದರು, ಎದ್ದು ನಿಂತು ಮೈ ಕೈ ನೆಟ್ಟಗೆ ಮಾಡಿಕೊಂಡರು.

ಇನ್ನೆರಡು ದಿನಗಳ ರಜೆಯಿದ್ದುದರಿಂದಲೂ, ಅರುಣನ ಮನೆಯಲ್ಲಿ ನಾಳಿನ ಔತಣ ಮುಗಿದರೆ ಬೇಲೂರು, ಹಳೇಬೀಡು, ಆನೆ ಮಲ್ಲಪ್ಪನ ಗುಡ್ಡ ಅಂತೆಲ್ಲ ಸುತ್ತಬಹುದು ಎಂಬ ಖುಷಿಖುಷಿಯಾದ ಯೋಜನೆಗಳಿದ್ದುದರಿಂದಲೂ ಎಲ್ಲಕ್ಕಿಂತ ಮುಖ್ಯವಾಗಿ ಅರುಣನ ಕತೆ ಕುತೂಹಲಕರ ಘಟ್ಟದಲ್ಲಿದ್ದುದರಿಂದಲೂ ಯಾರಿಗೂ ಜೀಪು ಬರುವುದು ತಡವಾದುದಕ್ಕೆ ಬೇಸರವಾಗಲಿಲ್ಲ. ಒಬ್ಬೊಬ್ಬರಾಗಿ ಚೆದುರಿಹೋಗಿದ್ದ ಹುಡುಗರು ಐದೇ ನಿಮಿಷದಲ್ಲಿ ಮತ್ತೆ ಬಸ್-ನಿಲ್ದಾಣದ ಬೆಂಚುಗಳಿಗೆ-ತಂತಮ್ಮ ಸ್ವಸ್ಥಾನಗಳಿಗೆ ಮರಳಿದರು. ಅರುಣ ಅರ್ಧಕ್ಕೆ ನಿಲ್ಲಿಸಿದ್ದ ಕತೆ ಹೇಳಲು ಶುರುಮಾಡಿಕೊಂಡ...

----------
"ಈ ಟಾಕೀಸ್ ಒಳಗಡೆ ಅರ್ಧ ಕಟ್ಟಿದ ಬಾಲ್ಕನಿಯೂ ಅದಕ್ಕೆ ಸ್ವಲ್ಪ ಎತ್ತರದಲ್ಲಿರೋ ಪ್ರೊಜೆಕ್ಟರ್ ರೂಮೂ ಇವೆ. 'ರಾಮೇಗೌಡ' ತಾನು ಅಲ್ಲಿಗೆ ಹೋಗಿದ್ದರ ಗುರುತಾಗಿ ತನ್ನ ಟವೆಲ್ ಅಲ್ಲಿ ಬಿಟ್ಟು ಬರಬೇಕೆಂದು, ಮಾರನೇ ದಿನ ಬೇಲೂರಿಗೆ ಬಂದಾಗ ಹಗಲಿನಲ್ಲಿ ಎಲ್ಲರೂ ಹೋಗಿ ಆ ಟವೆಲ್ ತರುವುದೆಂದೂ ತೀರ್ಮಾನವಾಯಿತು. ರಾಮೇಗೌಡನನ್ನು ಹುರಿದುಂಬಿಸಲು ಇನ್ನುಳಿದವರು ಆಗಲೇ ತಮ್ಮಲ್ಲಿದ್ದ ನೂರೈವತ್ತು ರೂಪಾಯಿಗಳನ್ನು ಕೂಡಿಸಿಕೊಟ್ಟರು. ಎರಡು ಮಕ್ಕಳ ತಂದೆ-ರಾಮೇಗೌಡ, ಬೆಳಕಿಗೆ ಅಂತಾ ಬೆಂಕಿಪೊಟ್ಟಣವನ್ನು ತೆಗೆದುಕೊಂಡು ನಗುನಗುತ್ತಾ ಟಾಕೀಸಿನೊಳಕ್ಕೆ ಹೋದ..." ಅರುಣ ಮೌನವಾದ.
"ಆಮೇಲೆ?"
"ಆಮೇಲೇನು? ಇಲ್ಲಿ ಕಾಯುತ್ತ ಕುಳಿತವರು ಬೆಳಗಿನ ತನಕ ಕುಳಿತೇ ಇದ್ದರು. ಹೋದ ರಾಮೇಗೌಡ ವಾಪಸ್ಸು ಬರಲಿಲ್ಲ. ಯಾವಾಗಲೋ ಒಂದು ಹೊತ್ತಿನಲ್ಲಿ, ಯಾವುದೋ ಕಿಟಕಿಯಲ್ಲಿ ಸ್ವಲ್ಪ ಬೆಳಕು ಕಂಡಿತಂತೆ ಅಷ್ಟೇ. ಬೆಳಗಿನ ತನಕ ಇಲ್ಲೇ ಕುಳಿತಿದ್ದ ರಾಮೇಗೌಡನ ಸ್ನೇಹಿತರು, ಬೆಳಗಾಗುತ್ತಲೂ ಗುಂಪುಕಟ್ಟಿಕೊಂಡು ಟಾಕೀಸಿನ ಒಳಹೊಕ್ಕು ನೋಡಿದರು. ರಾಮೇಗೌಡ ಒಂದು ಸಣ್ಣ ಕುರುಹೂ ಇಲ್ಲದಂತೆ ಕಾಣೆಯಾಗಿ ಹೋಗಿದ್ದ!"
"ವೋಹ್!" ಎಲ್ಲ ಹುಡುಗರೂ ಬೆಚ್ಚಿಬಿದ್ದರು.
"ಆಮೇಲೆ?"
"ಆಮೇಲೇನು? ಅವರಿವರಿಗೆ ತಿಳಿಸಿ, ಎಲ್ಲರೂ ಟಾಕೀಸಿನ ಮೂಲೆಮೂಲೆಯೆಲ್ಲಾ ಹುಡುಕಿದರು. ರಾಮೇಗೌಡ ತಲುಪಿದ್ದ ಗುರುತಾಗಿ ಪ್ರೊಜೆಕ್ಟರ್ ರೂಮಿನಲ್ಲಿ ಅವನ ಟವೆಲ್ ಬಿದ್ದಿತ್ತು ಅಷ್ಟೇ. ಇವರನ್ನು ಸುಮ್ಮನೆ ಹೆದರಿಸಲು ಅವನು ಏನಾದರೂ ಉಪಾಯ ಮಾಡಿರಬಹುದೆಂದು ಅವನ ನೆಂಟರಿಷ್ಟರ ಊರುಗಳಿಗೆ, ಅವನ ಹೆಂಡತಿ ಮನೆ ಕಡೆಯ ಊರುಗಳಿಗೆಲ್ಲ ಅಲೆದರು. ಅವನು ಎಲ್ಲೂ ಸಿಗಲಿಲ್ಲ. ಪೋಲೀಸ್ ಕೇಸಾಯ್ತು. ಆದರೂ ಈ ರಹಸ್ಯ ಬಗೆಹರಿಯಲಿಲ್ಲ. ಭೂತ ಪಿಶಾಚಿಗಳ ಕತೆಗಳನ್ನೆಲ್ಲ ಬರೀ ಅವರಿವರಿಂದ ಕೇಳಿ ತಿಳಿದಿದ್ದ ನಮ್ಮೂರಿನ ಜನಕ್ಕೆ, ನಮ್ಮಪ್ಪನ ಪೀಳಿಗೆಗೆ, ಸ್ನೇಹಿತರಿಗೆ, ಅವರುಗಳ ಕತೆಗಳಿಗೆ 'ರಾಮೇಗೌಡ' ನಿಜವಾದ, ತರ್ಕಬದ್ಧವಾದ ಉದಾಹರಣೆಯಾಗಿಬಿಟ್ಟ. ಕೊನೆಗೆ ರಾಮೇಗೌಡನ ಕಣ್ಮರೆಗೆ ಕಾರಣರಾಗಿದ್ದ ಸ್ನೇಹಿತರೆಲ್ಲ ದುಡ್ಡು ಹೊಂದಿಸಿ, ನಾಲ್ಕೈದು ಸಾವಿರದಷ್ಟು ಮಾಡಿ ಅವನ ಹೆಂಡತಿಗೆ ಕೊಟ್ಟರು ಅಷ್ಟೇ!"
"ಏನಾಗಿರಬಹುದು ಅಂತೀರಾ?"
"ಏನಾಯ್ತು ಅಂತಾ ಯಾರಿಗೆ ಗೊತ್ತು? ಗೊತ್ತಾಗಿದ್ದು 'ರಾಮೇಗೌಡ' ಒಬ್ಬನಿಗೆ. ಅವನೇ ವಾಪಸ್ಸು ಬರಲಿಲ್ಲವೆಂದ ಮೇಲೆ ಆವತ್ತು ರಾತ್ರಿ ಒಳಗಡೆ ಏನು ನಡೀತು, ರಾಮೇಗೌಡನಿಗೆ ಏನಾಯ್ತು ಅಂತಾ ತಿಳಿದುಕೊಳ್ಳೋದಾದ್ರೂ ಹೇಗೆ?"
"ಈಗ ತಿಳಿದುಕೊಳ್ಳಬಹುದೇನೋ?" ಸತೀಶ ನುಡಿದ.
"ಏನೂ?" ಎಲ್ಲರೂ ಅರ್ಥವಾಗದೇ ಅವನನ್ನೇ ನೋಡಿದರು.
"ಅಂದ್ರೆ, ಇವತ್ತು, ಈಗ ನಮ್ಮಲ್ಲೇ ಯಾರಾದರೂ ಒಬ್ಬರು ಈ ಟಾಕೀಸ್ ಒಳ ಹೋಗಿ ಬರುವುದು."
"ಒಬ್ಬರೇ ಯಾಕೇ? ಎಲ್ಲರೂ ಕೂಡಿ ಹೋಗುವ" ರಕ್ಷಿತ್ ಹೇಳಿದ್ದನ್ನು ಕಂಡು ಅರುಣ ನಕ್ಕ.
"ಇದು ಪುಕ್ಕಲತನದ ಪರಮಾವಧಿ!" ಎಲ್ಲರೂ ನಕ್ಕರು.
"ಯಾರಾದರೂ ಒಬ್ಬರು ಹೋಗುವ" ಸತೀಶ ಸಲಹೆ ಕೊಟ್ಟ, ಎಲ್ಲರೂ ಮೌನವಾದರು.
"ಹೇಗಿದ್ರೂ ಮೊಬೈಲ್-ಗಳು ಇವೆ, ನೆಟ್ವರ್ಕ್ ಕೂಡಾ ಚೆನ್ನಾಗಿದೆ. ನಮ್ಮಲ್ಲೇ ಯಾರಾದರೂ ಒಬ್ಬರು ಮೊಬೈಲ್ ಹಿಡಿದುಕೊಂಡು ನಮ್ಮೊಡನೆ ಮಾತನಾಡುತ್ತಲೇ ಟಾಕೀಸಿನೊಳಕ್ಕೆ ಹೋಗಿ ಬರುವುದು, ಎಲ್ಲಾದರೂ ಹೆದರಿಕೆಯಾದರೆ, ಏನಾದರೂ ತೊಂದರೆಯಾದರೆ ನಾವೆಲ್ಲರೂ ಒಳ ಹೋಗುವುದು, ಏನಂತೀರ?"
"ಪ್ಲಾನ್ ಚೆನ್ನಾಗೇನೋ ಇದೆ..." ರಕ್ಷಿತ್ ಅನುಮಾನಿಸಿದ, "...ಅಡ್ವೆಂಚರ್ ಅಂತಾ ಹೋಗಿ ಮಿಸ್-ಅಡ್ವೆಂಚರ್ ಆಗಬಾರದಲ್ಲಾ?"
"ಆಗೋಕೆ ಸಾಧ್ಯವೇ ಇಲ್ಲ! ಒಂದು ಮೊಬೈಲ್ ಬೆಳಕಿಗೆ, ಇನ್ನೊಂದು ಇಲ್ಲುಳಿದವರ ಜೊತೆ ಸಂಪರ್ಕ ಇಟ್ಟುಕೊಳ್ಳೋಕೆ. ಯಾರು ಹೋಗ್ತೀರ ಹೇಳಿ? ನೀವ್ಯಾರೂ ಹೋಗಲ್ಲ ಅಂದ್ರೆ ನಾನೇ ಹೋಗ್ತೇನೆ!" ಸತೀಶ ಸಂಪೂರ್ಣ ತಯಾರಾಗಿದ್ದವನಂತೆ ಮಾತನಾಡಿದ.
ಹ್ಯಾರಿ ವಿವರವಾದ ಯೋಚನೆ ಹಾಕಿಕೊಟ್ಟ, "ಅದೆಲ್ಲ ಬೇಡ, ಲಾಟ್ಸ್ ಹಾಕೋಣ. ಹೆಸರು ಬಂದವರು ಹೋಗಿ ಬರಲಿ. ಕತೆಯಲ್ಲಿದ್ದಂತೆಯೇ ಪ್ರೊಜೆಕ್ಟರ್ ರೂಮಿನಲ್ಲಿ ತಮ್ಮದೇನಾದರೂ ವಸ್ತು ಬಿಟ್ಟು ಬರಲಿ, ಬೆಳಿಗ್ಗೆ ನಾವೆಲ್ಲರೂ ಹೋಗಿ ಅದನ್ನೆಲ್ಲ ನೋಡಿ ಬಂದರಾಯ್ತು," ಸ್ವಲ್ಪ ಹೆದರಿದಂತಿದ್ದ ರಕ್ಷಿತ್ ಕಡೆಗೆ ನೋಡುತ್ತ ಹೇಳಿದ, "...ಲಾಟ್ಸ್-ನಲ್ಲಿ ಹೆಸರು ಬಂದರೂ ಹೆದರಿಕೊಂಡು ಹೋಗಲಾರದವರಿದ್ದರೂ ನೋ ಪ್ರಾಬ್ಲಮ್ಸ್!" ಅವನ ಮಾತಿಗೆ ಎಲ್ಲರೂ ಜೋರಾಗಿ ನಕ್ಕರು.
"ರಕ್ಷಿತ್ ಮುಖ ಗಂಟಿಕ್ಕಿದ, "ಹೋಗ್ರೋಲೇ! ನನ್ನ ಹೆಸರು ಬಂದರೆ ನಾನು ಖಂಡಿತಾ ಹೋಗ್ತೀನಿ!"
"ಜೊತೆಗೆ ಒಳ ಹೋಗಿ ಬಂದವರಿಗೆ ಒಬ್ಬೊಬ್ಬರಿಂದಲೂ ಸಾವಿರ ರೂಪಾಯಿ ಹಾಕಿ ಟ್ರೀಟ್!" ಹುಡುಗರೆಲ್ಲ 'ಓ'ಯೆಂದು ಸಮ್ಮತಿ ಸೂಚಿಸಿದರು...
ಎಲ್ಲರೂ ಬಸ್-ನಿಲ್ದಾಣದೆದುರು ರಸ್ತೆ ಆಚೆ, ಸ್ವಲ್ಪದೂರದಲ್ಲಿ, ಅಮಾವಾಸ್ಯೆಯ ಕತ್ತಲೊಳಗೆ ಬೆರ್ಚಪ್ಪನಂತೆ ನೆಟ್ಟಗೆ ನಿಂತಿದ್ದ ಪಾಳುಬಿದ್ದ ಟಾಕೀಸನ್ನೇ ದಿಟ್ಟಿಸಿ ನೋಡಿದರು, ಸತೀಶ ಪರ್ಸಿನೊಳಗಿಂದ ಚೀಟಿ ತೆಗೆದು ಹೆಸರು ಬರೆಯಲಾರಂಭಿಸಿದ...

(ಮುಂದುವರಿಯುವುದು... (ಮುಂದಿನ ಭಾಗಕ್ಕೆ ಮುಕ್ತಾಯ))

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಅನಿಸಿಕೆಗಳು

ಯೋಗೇಶ್ ಸೋಮ, 02/16/2009 - 19:22

ಶಿವು ಅವರೆ ನಮಸ್ಕಾರ.

ನಿಮ್ಮ ಈ "ಭಯ" ನಾನಾಗಲೇ.. ಪೂರ್ತಿ ಓದಿ ಮುಗಿಸಿದ್ದೇನೆ. ಹೇಗೆಂದರೆ.... ನಿಮ್ಮ ವೆಬ್ ನಲ್ಲಿ ಇರುವ ಎಲ್ಲಾ ನಿಮ್ಮ "ತಲೆ ಹರಟೆ" ಗಳನ್ನು ನಾನು ಪ್ರಿಂಟ್ ಮಾಡಿಸಿ ಬುಕ್ ಮಾಡಿಕೊಂಡು, ಸಮಯ ಸಿಕ್ಕಾಗಲೆಲ್ಲ ಓದಿಕೊಳ್ಳುತ್ತೇನೆ.. ಅದರಲ್ಲಿ ನನಗೆ ಮುಖ್ಯವಾಗಿ ಮನಸ್ಸಿಗೆ ಮುದಗೊಳ್ಳುವುದೇನೆಂದರೆ.. ಪ್ರತಿ ಸನ್ನಿವೇಷಗಳನ್ನು ವಿಸ್ತರಿಸುವ ನಿಮ್ಮ ಜಾಣತನಕ್ಕೆ ನನಗೆ ಬಹಳ ಖುಷಿಯಾಗುತ್ತೆ. ಹಾಗೆ ನಿಮ್ಮೊಂದಿಗೆ ಮಾತಾಡುವ ಸಲುವಾಗಿ ೯೮೪೫೯೭೯೭೬೭ ಈ ನಂಬರಿಗೆ ಕರೆ ಮಾಡಿದೆ. ಯಾರೊ ಹೆಂಗಸು ಯಾಕ್ರಿ ಇಷ್ಟೊಂದು ಫೋನ್ ಮಾಡಿ ತಲೆ ತಿಂತೀರ ಎಂದು ಗದರಿಸಿದರು.. ನನಗೇನು ಬೇಜಾರ್ ಆಗಿಲ್ಲ... ನಿಮ್ಮನ್ನ ಅನ್ನೋದಕ್ಕಿಂತ, ನಿಮ್ಮಲ್ಲಿರುವ ಜಾಣತನವನ್ನ ಮತ್ತು ನಿಮ್ಮ ವ್ಯಕ್ತಿತ್ವವನ್ನ ಮೆಚ್ಚಿರುವ ನನ್ನ ಹಾಗೆ ಎಷ್ಟೋ ಜನರು ಪಾಪ ಅವರಿಗೆ ಕರೆ ಮಾಡಿರುತ್ತಾರೆ ಅಂತ ಕಾಣುತ್ತೆ. ದಯವಿಟ್ಟು ನಿಮಗೆ ಪರಿಚಯವಿರುವ ಎಲ್ಲರಿಗು ನಿಮ್ಮ ದೂರವಾಣಿಯ ಸಂಖ್ಯೆಯನ್ನು ತಿಳಿಸಿ. ಹಾಗೆ ನನಗೂ ಕೂಡ...

ಬಹಳ ಖುಷಿಯಾಗುತ್ತೆ ನಿಮ್ಮ ಬರಹಗಳನ್ನು ಓದುತ್ತಲಿದ್ದರೆ..... ನಿಜಕ್ಕೂ.. ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ನಾನು ನಿಮ್ಮ "ಫ್ಯಾನು"..

ನಿಮ್ಮ ಜೊತೆ ಮಾತಾಡುವ ನಿರೀಕ್ಷೆಯೊಂದಿಗೆ.... ಯೋಗೇಶ್..

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 07/06/2009 - 14:49

ತು0

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.