Skip to main content

ಆಕೆಯ ಮಗಳು ಹೀಗೆ ಅಂತ ನಂಗೆ ಗೊತ್ತಿರಲಿಲ್ಲ - ಸಂಚಿಕೆ 4

ಬರೆದಿದ್ದುJanuary 15, 2009
7ಅನಿಸಿಕೆಗಳು

ಅಕಸ್ಮಾತ್ ಈ ಕಥೆಯ ಹಿಂದಿನ ಸಂಚಿಕೆಗಳನ್ನು ಓದಿಲ್ಲವಾದರೆ ಇಲ್ಲಿ ಓದಿ
ಆಕೆಯ ಮಗಳು ಹೀಗೆ ಅಂತ ನಂಗೆ ಗೊತ್ತಿರಲಿಲ್ಲ - ಸಂಚಿಕೆ 1
ಆಕೆಯ ಮಗಳು ಹೀಗೆ ಅಂತ ನಂಗೆ ಗೊತ್ತಿರಲಿಲ್ಲ - ಸಂಚಿಕೆ 2
ಆಕೆಯ ಮಗಳು ಹೀಗೆ ಅಂತ ನಂಗೆ ಗೊತ್ತಿರಲಿಲ್ಲ - ಸಂಚಿಕೆ 3
ಈ ಕಥೆ ಸಂಚಿಕ 3 ರಿಂದ ಮುಂದುವರಿದಿದೆ.

ಮಾರನೇ ದಿನ ಸಂಜೆ ತುಸು ಅತಿ ಎನಿಸಿದ ಅಲಂಕಾರದಲ್ಲಿ, ವಾಸಂತಿನಾ ಗೆಲ್ತೀನಾ..? ಎನ್ನುವ ಅನುಮಾನದಲ್ಲಿ, ಗೆಲ್ಲಬಲ್ಲೆ ಎಂಬ ಆತ್ಮವಿಶ್ವಾಸದಲ್ಲಿ, ಯಾತಕ್ಕಾಗಿ ಮನೆಗೆ ಕರೆದಿರಬಹುದು ಎಂಬ ಯೋಚನೆಯಲ್ಲಿ ಹೇಳಿದ ಸಮಯಕ್ಕೆ ಅವಳ ಮನೆಯ ಕರೆಘಂಟೆ ಒತ್ತಿದ್ದೆ. ನನಗಾಗಿಯೇ ಕಾಯುತ್ತಿದ್ದವಳಂತೆ, ಘಂಟೆಯ ಶಬ್ದ ಮಾಯವಾಗುವ ಮುಂಚೆ ಬಾಗಿಲು ತೆರೆದು , ಹೂ ನಗೆ ಬೀರಿದಳು ನನ್ನ ಕಲ್ಪನಾ ಸುಂದರಿ! ಹೂ ನಗೆಯೇ ಸ್ವಾಗತ ಎನ್ನುವಂತೆ, ' ಒಳಗೆ ಬನ್ನಿ' ಎನ್ನುವ ಅವಳ ಮಾತಿಗೂ ಕಾಯದೆ ಗೃಹಪ್ರವೇಶ ಮಾಡಿದ್ದೆ. ಅಡ್ರೆಸ್ ಹುಡುಕೋದು ಕಷ್ಟವಾಗಲಿಲ್ಲವಾ..? ಅಂತ ತುಸು ಮೆಲುಧ್ವನಿಯಲ್ಲಿ ಕೇಳಿ ಸೋಪಾದ ಕಡೆ ಕೈತೋರಿದಳು. ಆ ಮೆಲುಧ್ವನಿಯಿಂದ ಮನೆಯಲ್ಲಿ ಯಾರೋ ಇದ್ದಾರೆ ಎನ್ನುವಂತಹ ರಹಸ್ಯವನ್ನು ಗ್ರಹಿಸಿ, ಸೋಪಾದ ಮೇಲೆ ಕೂರುತ್ತಾ ನಾನೂ ಸಹ ಅದೇ ಧಾಟಿಯಲ್ಲಿ ಹಾಗೇನಿಲ್ಲ ತುಂಬಾ ಸುಲಭವಾಗಿ ಹುಡುಕಿಬಿಟ್ಟೆ ನಿಮ್ಮ ಮನೆಯನ್ನು ಎಂದುತ್ತರಿಸಿದಾಗ. ನನ್ನ ಮೆಲುಧ್ವನಿಯಲ್ಲಿನ ಗಾಬರಿಯನ್ನು ಗಮನಿಸಿರಬೇಕು ಆಕೆ. ನನ್ನ ಮಗಳು ನಿದ್ದೆ ಮಾಡ್ತಿದ್ದಾಳೆ ಅದಕ್ಕೆ ಮೆಲ್ಲಗೆ ಮಾತನಾಡಿದೆ ಗಾಬರಿಯಾಗಬೇಡಿ ಮನೆಯಲ್ಲಿ ಯಾರೂ ಇಲ್ಲ ಎಂದು, ಅವಳು ಒಳಗೆ ಹೋದಾಗ ತುಸು ಸಮಾಧಾನವಾಯಿತಾದರೂ ನನ್ನ ಆತಂಕಕ್ಕೆ ನಾನೇ ನಾಚಿಕೆಪಡುವಂತಾಯಿತು.

ಸೋಪಾದ ಮೇಲೆ ಕುಳಿತು, ಹಾಗೇ ಒಂದು ಸಾರಿ ಮನೆಯ ತುಂಬೆಲ್ಲಾ ಕಣ್ಣಾಡಿಸಿದೆ. ತುಂಬಾ ನಾಜೂಕಾಗಿಟ್ಟುಕೊಂಡಿದ್ದಾಳೆ ಮನೆಯನ್ನು, ನನ್ನ ಹೆಂಡ್ತಿಗಿಂತ ನೂರುಪಟ್ಟು ವಾಸಿ ಅಂತನ್ನಿಸಿತು. ಹಾಲ್ ನಲ್ಲಿ ಮೂರು ಪೋಟೋಗಳಿದ್ದಾವೆ , ಅವುಗಳಲ್ಲಿ ಒಂದರಲ್ಲಿ ವಾಸಂತಿ ಇದ್ದಾಳೆ, ಮತ್ತೆರಡರಲ್ಲಿ ಒಂದು ಮಗು ಮಾತ್ರ ಇದೆ. ಆದರೆ ಎಲ್ಲೂ ಆಕೆಯ ಗಂಡನ ಪೋಟೋ ಮಾತ್ರ ಕಾಣಲಿಲ್ಲ. ಇದೇ ಯೋಚನೆಯಲ್ಲಿದ್ದಾಗಲೇ ಟೀ ಕಫ್ ಹಿಡಿದು ವಾಸಂತಿ ಪಕ್ಕ ಬಂದು ಕುಳಿತಳು. ಆಕೆಯ ಕೈಯಿಂದ ಟೀ ಕಫ್ ತೆಗೆದುಕೊಂಡು, ಒಂದು ಗುಟುಕು ಕುಡಿದಿರಬೇಕು, 'ನಿಮ್ಮನ್ನು ನಾನು ಮನೆಗೆ ಯಾಕೆ ಕರೆದೆ ಗೊತ್ತಾ' ಎನ್ನುತ್ತಾ ಮತ್ತಷ್ಟು ಸನಿಹ ಬಂದು ಕೂತಳು, ಆಗ ನನ್ನ ಸ್ಥಿತಿ ನೋಡಬೇಕಿತ್ತು, ಚರ್ಮದ ಕಣಗಳಲ್ಲಿ ಸಣ್ಣಗೆ ಬೆವರು, ಕಣ್ಣಿನ ರೆಪ್ಪೆಗಳಲ್ಲಿ ನಡುಕದ ಬಡಿತ, ಹೃದಯದಲಿ 'ರುದ್ರ ನರ್ತನ' , ಕಿಬ್ಬೊಟ್ಟೆಯ ಕೆಳಭಾಗದಲ್ಲಿ ಚಲನೆಯ ಅನುಭವ. ಕೈಗಳಿಗೆ ಏನೋ ತಾಕುವ ಕಾತುರ, ಗಂಟಲಿಗೆ ಬಿದ್ದ ಟೀಗೆ ಒಳಹೋಗಲೂ ಆಗದೇ ಹೊರಬರಲೂ ಆಗದ ತ್ರಿಶಂಕು ಸ್ಥಿತಿ, ಬೆಲ್ಲವ ಕಂಡರೆ ತಮ್ಮ ಕೆಲಸವನ್ನೆಲ್ಲ ಮರೆತು ಒಂದೆಡೆ ಸೇರುವ ಇರುವೆಗಳಂತೆ ದೇಹದ ರಕ್ತವೆಲ್ಲ ಮುಖದ ಮೇಲೆ ಹಾಜರು, ತುಟಿಗಳಲ್ಲಿ ಕಂಪನ. ಒಂದ್ ಕ್ಷಣ, ಒಂದೇ ಒಂದು ಕ್ಷಣ ವಾಸಂತಿ ಇನ್ನೂ ಅಲ್ಲಿಯೇ ಇದ್ದಿದ್ದರೇ ಖಂಡಿತ ನಾನು ನಿಯಂತ್ರಣದಲ್ಲಿರುತ್ತಿರಲಿಲ್ಲ. ಆದರೆ ವಾಸಂತಿ ... ಹೆಣ್ಣಲ್ಲವಾ..? ಸಮಯ ಪ್ರಜ್ಞೆ ಸಮಾಧಾನ ಜಾಸ್ತಿ. ಅದಾಗಲೇ ಆಕೆ ನನ್ನಿಂದ ದೂರಹೋಗಿ ಕೂತಾಗಿತ್ತು.

ಏನು ಮಾತನಾಡಬೇಕು, ಯಾವ ರೀತಿ ಮುಂದುವರಿಯಬೇಕು ಎಂಬ ಗೊಂದಲಕ್ಕೆ ಬಿದ್ದು ನಾನು ಚಡಪಡಿಸುತ್ತಿದ್ದರೆ,ನೀವು ಆಗಾಗ ನನ್ನ ಬಗ್ಗೆ ಕೇಳುತ್ತಿದ್ದಿರಲ್ವಾ ಅದೆಲ್ಲದಕ್ಕೂ ಸಮಾಧಾನ ನಾನು ಇವತ್ತು ಹೇಳಿಬಿಡುತ್ತೇನೆ. " ನಿಮ್ಮನ್ನು ನಾನು ಇಲ್ಲಿಗೆ ಕರೆಸಿದ್ದು ಬರೀ ನನ್ನ ಕಥೆ ಹೇಳಲಿಕ್ಕಲ್ಲ. ಹಾಗೇ ಒಂದು ಸಹಾಯ ಬೇಡಲಿಕ್ಕೆ. ನಂಗೊತ್ತು ನೀವು ಇಲ್ಲ ಎನ್ನುವುದಿಲ್ಲ ಅಂತ, ಆ ನಂಬಿಕೆಯಿಂದಲೇ ನಾನು ನಿಮ್ಮಲ್ಲಿ ಈ ಸಹಾಯ ಬೇಡುತ್ತಿದ್ದೇನೆ.

ಹತ್ತು ವರ್ಷಗಳ ಹಿಂದೆ ಆಸ್ತಿಗೆ ಸಂಬಂಧಿಸಿದಒಂದು ಘರ್ಷಣೆಯಲ್ಲಿ ನನ್ನ ಗಂಡ ಅಮಾನುಷವಾಗಿ ಕೊಲೆಯಾಗಿಹೋದರು. ಆಗ ನಾನು 9 ತಿಂಗಳ ಗರ್ಭಿಣಿ. ಆ ಘಟನೆ ನಡೆದ 20 ದಿನಕ್ಕೆ ನನ್ನ ಮಗಳು ಹುಟ್ಟಿದಳು. ಆ ದೇವರಿಗೆ ನನ್ನ ಮೇಲೆ ತೀರಾ ಕೋಪ ಅನ್ನಿಸುತ್ತೆ. ಗಂಡನನ್ನು ಶಾಶ್ವತವಾಗಿ ಇಲ್ಲವಾಗಿಸಿದ್ದು ಸಾಲದೆಂಬಂತೆ ನನ್ನ ಮಗಳನ್ನು ಮತಿಭ್ರಮಣೆಗೆ ಗುರಿಯಾಗಿಸಿಬಿಟ್ಟ. ಏನು..ಆಶ್ಚರ್ಯವಾಗಿ ನೋಡ್ತಿದ್ದೀರಿ. ಹೌದು ನನ್ನ ಮಗಳು ಎಲ್ಲರಂತಲ್ಲ, ಅವಳಿಗೆ ಮತಿಭ್ರಮಣೆ. ಗರ್ಭಿಣಿಯಾಗಿದ್ದಾಗ ನಾನು ಅನುಭವಿಸಿದ ಅಘಾತ ಈ ರೂಪದಲ್ಲಿ ಅವಳನ್ನು ಕಾಡಿದೆ ಅಂತ ಡಾಕ್ಟರ್ ಹೇಳಿದ್ರು. ಇದನ್ನು ಕೇಳಿದ ಮೇಲೆ ನನ್ನ ಅತ್ತೆ ಮಾವ "ನಾವು ಆವತ್ತೇ ಹೇಳಿದ್ವಿ, ತೀರಾ ಆಕಾಶಬಿದ್ದೋಳ ತರ ಆಡಬೇಡ, ಹೊಟ್ಟೆಯಲ್ಲಿ ಮಗು ಇದೆ ಅಂತ ನೀನು ನನ್ನ ಮಾತು ಕೇಳಲಿಲ್ಲ ಈಗ ನೋಡು ನನ್ನ ಮಗನ ಜೊತೆ ಮೊಮ್ಮೊಗಳನ್ನು ಈ ಸ್ಥಿತಿಗೆ ತಂದುಬಿಟ್ಟೆ. ನಿನ್ನ ಕಾಲ್ಗುಣ ಸರಿಯಿಲ್ಲ" ಅಂದರು. ಹೇಳಿ ಮೂರ್ತಿ ' ನನ್ನ ಗಂಡ ಸತ್ತಾಗ ನನಗೆ ಅಘಾತವಾಗದೇ ಇರುತ್ತಾ..? ಗಂಡ ಸತ್ತರೆ ಅಳಬೇಡ ಅನ್ನೋ ಜನರ ಮದ್ಯೆ ಜೀವನ ಬೇಸರವಾಗಿ, ಈ ಪುಟ್ಟ ಕಂದಮ್ಮನ ಜೊತೆ 9 ವರ್ಷಗಳ ಹಿಂದೆ ಮೈಸೂರಿಗೆ ಬಂದುಬಿಟ್ಟೆ. ಆಗಲೇ ನನಗೆ ಈ ನೌಕರಿ ಸಿಕ್ಕಿದ್ದು. ಅಲ್ಲೇ 7 ವರ್ಷಗಳ ಸರ್ವೀಸ್ ಮುಗಿಸಿ ಮಗಳ ಚಿಕಿತ್ಸೆಗೆ ಅನುಕೂಲವಾಗುತ್ತೆ ಅಂತ ಬೆಂಗಳೂರಿಗೆ ವರ್ಗಮಾಡಿಸಿಕೊಂಡು ಬಂದುಬಿಟ್ಟೆ.

ಏನದು ಸಹಾಯ... ವಾಸಂತಿ ಒಪ್ಪುವವಳೇ ಮೂರ್ತಿಯ ಪ್ರೇಮವನ್ನು?? ಉತ್ತರ ನಾಳೆ ಕೊನೆಯ ಸಂಚಿಕೆಯಲ್ಲಿ... !!

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಉಮೇಶ :) ಗುರು, 01/15/2009 - 16:09

ಮೊದಲ ಸಂಚಿಕೆ ಕೊನೆಯಲ್ಲಿ "ಇನ್ನೆರಡು ಸಂಚಿಕೆಲಿ ಈ ಕಥೆಯನ್ನ ಮುಗಿಸ್ತೀನಿ" ಅಂತ ಹೇಳಿ ಇನ್ನೂ ಎಳೀತಿದೀರಲ್ಲ ಮಾರಾಯ, ಇದು ನ್ಯಾಯವೇ...

ವಿ.ಎಂ.ಶ್ರೀನಿವಾಸ ಗುರು, 01/15/2009 - 16:39

ಹಾಯ್ ಉಮೇಶ್
ನಿಮಗೆ ಕಥೆ ಅಷ್ಟೊಂದು ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ಇನ್ನು ಮುಂದೆ ಈ ತರ ತಪ್ಪಾಗದಂತೆ ಎಚ್ಚರವಹಿಸುತ್ತೇನೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ರಾಜೇಶ ಹೆಗಡೆ ಗುರು, 01/15/2009 - 18:04

ಹಾಯ್ ಶ್ರೀನಿವಾಸ್,

ನಿಮ್ಮ ಕಥೆ ನನಗಂತೂ ಖಂಡಿತ ಬೇಸರ ಮೂಡಿಸಿಲ್ಲ. ಹಾಗೆ ಬೇಸರ ಮೂಡಿಸಿದಿದ್ದರೆ ಖಂಡಿತ ಮುಂದಿನ ಭಾಗಕ್ಕೆ ಕಾಯುತ್ತಿರಲಿಲ್ಲ. :symapthy:

ಖಂಡಿತ ನೀವು ಉತ್ತಮ ಬರಹಗಾರರಿದ್ದಾರೆ ಅನ್ನುವದರಲ್ಲಿ ಅನುಮಾನವೇ ಇಲ್ಲ. :)

ವಿ.ಎಂ.ಶ್ರೀನಿವಾಸ ಗುರು, 01/15/2009 - 19:18

ಥ್ಯಾಂಕ್ಸ್ ಸಾರ್.
ನಾನು ಉತ್ತಮ ಬರಹಗಾರ ಹೌದೋ ಅಲ್ಲವೋ ಅನ್ನೋದು ಒತ್ತಟ್ಟಿಗಿರಲಿ, ನಿಮ್ಮ ಪ್ರೋತ್ಸಾಹವೇ ನನ್ನ ಈ ಕಥೆಯನ್ನು ಇಲ್ಲಿ ತನಕ ಕೈಹಿಡಿದು ನಡೆಸಿದೆ ಎಂದುಕೊಳ್ಳುವುದರಲ್ಲಿ ನನಗೆ ಹೆಚ್ಚು ಆನಂದವಿದೆ.

ಮೇಲಧಿಕಾರಿ ಗುರು, 01/15/2009 - 17:09

ಹಾಯ್ ಉಮೇಶ್,

ವಿಸ್ಮಯ ನಗರಿಗೆ ಕೊನೆಯ ಸಂಚಿಕೆಯನ್ನು ಶ್ರೀನಿವಾಸ್ ಅವರು ಒಂದೇ ಕಳುಹಿಸಿದ್ದರು. ಆದರೆ ಸಾಮಾನ್ಯವಾಗಿ ಓದುಗರು ಒಂದು ಲೇಖನ ತೀರಾ ಉದ್ದವಾದರೆ ಅದರ ಮೇಲೆ ಸುಮ್ಮನೆ ಕಣ್ಣಾಡಿಸಿಯೋ ಅಥವಾ ಅರ್ಧಕ್ಕೆ ಓದಿ ಬಿಡುವದು ಜಾಸ್ತಿ ಅನ್ನುವ ಕಾರಣಕ್ಕೆ ಎರಡು ಸಂಚಿಕೆಯನ್ನಾಗಿ ವಿಭಜಿಸಲಾಯ್ತು.

ಉಮೇಶ :) ಶುಕ್ರ, 01/16/2009 - 10:59

ಖಂಡಿತ ಕಥೆ ಬೇಸರ ಮೂಡಿಸಲಿಲ್ಲ, ಕುತೂಹಲ ತಡೆಯಲಾಗದೇ ಹಾಗೆ ಹೇಳಿದೆ ಅಷ್ಟೆ. ಮುಂದಿನ ಸಂಚಿಕೆಗೋಸ್ಕರ ಎಲ್ಲಿ ಶ್ರೀನಿವಾಸ್ ನಮ್ಮನ್ನು ಮತ್ತೆ ಒಂದು ವಾರ ಕಾಯಿಸುತ್ತಾರೋ ಅಂತ ಹಾಗೆ ಹೇಳಿದೆ. ಕಾಮೆಂಟ್ ನಿಂದ ಬೇಸರವಾಗಿದ್ದರೆ ಕ್ಷಮೆಯಿರಲಿ :)

ವಿ.ಎಂ.ಶ್ರೀನಿವಾಸ ಶುಕ್ರ, 01/16/2009 - 11:13

ಹಾಯ್ ಉಮೇಶ್.
ನಿಮ್ಮ ಕಾಮೆಂಟ್ ನಿಂದ ಖಂಡಿತ ಬೇಸರವಿಲ್ಲ. ನೀವು ಕ್ಷಮೆ ಕೇಳುವ ಅವಶ್ಯಕತೆಯೂ ಇಲ್ಲ. anyway ಈ ವಿಷಯವನ್ನು ಇಲ್ಲಿಗೆ ಸಾಕು ಮಾಡೋಣ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.