Skip to main content

ಬಿಳಿಗಿರಿ ಬೆಟ್ಟದಲ್ಲಿ ಒಂದು ದಿನ.

ಬರೆದಿದ್ದುJune 10, 2008
noಅನಿಸಿಕೆ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ,
ಕಡಲನೂ ಕೂಡ ಬಲ್ಲೆನೆ ಒಂದು ದಿನ.
ಹೆಚ್ಹು ಕಮ್ಮಿ ನನ್ನದು ಸದಾ ಇದೇ ಮನಸ್ಥಿತಿ. ಕಾಣದ ಊರು, ಕಾಣದ ವ್ಯಕ್ತಿ, ಕಾಣದ ಬದುಕಿನ ಕಡೆ ಹೆಚ್ಹು ಒಲವು. ಈ ರೀತಿಯಿಂದಾಗಿ ಕಣ್ಣೆದುರು ಇರುವಂತಹುದನ್ನು ಸಾಕಷ್ಟು Miss ಮಾಡಿಕೊಂಡಿದ್ದೇನೆ.

ಈ ಮಾತನ್ನು ಈಗ ಹೇಳಲು ಕಾರಣ ಇಷ್ಟೇ.. ನಾನು ನೆನ್ನೆ ತಾನೇ ನಮ್ಮ ಕೊಳ್ಳೇಗಾಲ ದ ಹತ್ತಿರ ಇರುವ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿದ್ದೆ. ಒಂದು ವೇಳೆ ಯಾವುದಿದು..? ಅಂತ ಸಂದೇಹ ಬಂದರೆ Just ವೀರಪ್ಪ್ ನ್ ಇದ್ದ ಕಾಡಿನ ಭಾಗಗಳಲ್ಲಿ ಒಂದು ಭಾಗ ಎಂದು ಓದಿಕೊಳ್ಳಿ ಆಗ ನಿಮಗೆ ಸರಿಯಾಗಿ ಅರ್ಥವಾಗಬಹುದು.
ನಿಜಕ್ಕೂ ಮೈ-ಮನಸ್ಸುಗಳು ಆ ಜಾಗಕ್ಕೆ ಮನಸ್ಸೋತಿದ್ದವು. ದಟ್ಟ ಕಾಡು, ಒಂದು ಬಸ್ಸು ಮಾತ್ರ ಹೋಗಬಹುದಾದ ಕಿರಿದಾದ ರಸ್ತೆ. ಆ ಕಡೆ ಈ ಕಡೆ ಬದಿಗಳಲ್ಲಿ ಆಕಾಶದೆತ್ತರಕ್ಕೆ ಬೆಳೆದು ನಿಂತಿರೋ ಶ್ರೀ ಗಂಧ, ತೇಗ ಮತ್ತಿತರ ಅಂದವಾದ ಮರಗಳು. ಅವುಗಳಲ್ಲಿ ಗೂಡು ಕಟ್ಟಿಕೊಂಡು, ಕಲರವದ ಮೂಲಕ ತಮ್ಮ ಇರಿವನ್ನು ತೋರ್ಪಡಿಸೊ ವಿಧವಿಧವಾದ ಹಕ್ಕಿಗಳು. ರಸ್ತೆಗಳನ್ನು ಗುತ್ತಿಗೆ ಪಡೆದ ಗತ್ತಿನಲ್ಲಿ ನಿಧಾನವಾಗಿ ನಡೆದುಹೋಗುವ ಗಜ ಸಂತತಿ. ಅವುಗಳನ್ನು ನೋಡಿ ಹೆದರಿ, ಅವು ಕಾಡಿನೊಳಗೆ ಹೋಗೋತನಕ ತನಕ ನಿಂತಿದ್ದು ನಂತರ ದೈರ್ಯವಂತರ ತರ ಮುಂದೆ ಹೋಗೋ ನರಪ್ರಾಣಿಗಳು. ಇಳಿಜಾರಿನ ಹಳ್ಳದಲ್ಲಿ ನೀರಿಗಾಗಿ ಬಂದ ಜಿಂಕೆಗಳು, ಗಾಳಿಯ ಸದ್ದಿಗೆ ಅಲುಗಾಡಿ ನೀರು ಕುಡಿವ ಜಿಂಕೆಗಳಿಗೆ ಭಯಹುಟ್ಟಿಸಿ ಓಡಿಸುವ ಪೊದೆಗಳು. ಒಂದೇ ಎರಡೇ .... ನಿಜಕ್ಕೂಒಂದು ಅದ್ಬುತ ಅನುಭವ.

ನನ್ನ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತೆ, ನನ್ನ ಬಿಳಗಿರಿಯಾನಕ್ಕೆ ಮಳೆರಾಯ ಕೂಡ ಜೊತೆಯಾದ. ಆಗ ನೋಡಬೇಕಿತ್ತು ಬಿಳಗಿರಿಯ ನಿಜವಾದ ಅಂದವನ್ನು. ಜಿನುಗುವ ತುಂತುರ ಹನಿಯ ಮದ್ಯೆ ನಮ್ಮ ಪಯಣ.... ವಾಹ್ ಅದು ವರ್ಣಿಸಲು ಪದಗಳೇ ಸಾಲದು. ಎತ್ತರದ ತಿರುವುಗಳಲ್ಲಿ ಕಾರನ್ನು ನಿಲ್ಲಿಸಿ, ಹನಿಗಳಿಗೆ ಮೈಯೊಡ್ಡಿ, ಪೋಟೋಗಳಿಗೆ ಪೋಸ್ ಕೊಟ್ಟು, ಚುಮು ಚುಮು ಚಳಿಗೆ , ಕರ ಕರ ಅಂತ ಚಕ್ಕುಲಿ ಚಪ್ಪರಿಸುತ್ತಾ ಹೋಗುತ್ತಿದ್ದರೆ ಅದರೆ ಆನಂದ ಕೋಟಿರೂಪಾಯಿಯಿಂದಲೂ ಸಿಗದು ಎನ್ನಿಸಿದ್ದು ಸುಳ್ಳಲ್ಲ.

ಆ ಕಾಡು ನೋಡಬೇಕು ನೀವು... ದೂರಕ್ಕೆ ಬರಡು ಪ್ರದೇಶ ತರ ಕಾಣೋ ಆ ಪ್ರದೇಶ ಹತ್ತಿರ ಹೋಗೋವಷ್ಟರಲ್ಲಿ ತನ್ನ ನಿಜ ಸ್ವರೂಪವನ್ನು ತೋರಿ ಪ್ರವಾಸಿಗರನ್ನು ಇನ್ನಿಲ್ಲದಂತೆ ಆಕರ್ಷಿಸಿಬಿಡುತ್ತೆ. ಮಳೆಯಿಂದ ಉಂಟಾದ ಮಂಜು, ದಟ್ಟಕಾಡಿನ ತಳಭಾಗದಿಂದ ಹಾಲಿನ ನೊರೆಯಂತೆ ಮೇಲೆ ಬಂದು , ಗಾಳಿಯ ಹೊಡೆತಕ್ಕೆ ಬಂದಷ್ಟೆ ವೇಗವಾಗಿ ಹೋಗುತ್ತಿರುವ ದೃಶ್ಯ ನಿಜಕ್ಕೂ ವರ್ಣನಾತೀತ. ಒಂದೊಂದು ಸಾರಿ ಈ ಮಂಜಿನ ಪರದೆ ಎಷ್ಟು ಗಾಡವಾಗಿರುತ್ತದೆ ಅಂದರೆ ಕಾರು ಮುಂದೆ ಚಲಿಸಲು ರಸ್ತೆ ಕಾಣದೆ, ಕಾರನ್ನು ನಿಲ್ಲಿಸಿಬಿಡುವಷ್ಟರ ಮಟ್ಟಿಗಿರುತ್ತದೆ.(ವೀರಪ್ಪನ್ ನಮ್ಮ ಆರಕ್ಷರಿಗೆ ಚಳ್ಳೇ ಹಣ್ಣು ತಿನ್ನಿಸುತ್ತಿದುದ್ದರಲ್ಲಿ ಅತಿಶಯೋಕ್ತಿ ಏನೂ ಇಲ್ಲ ಬಿಡಿ) ಆ ಸ್ಥಿತಿ ಎಷ್ಟು ಹಿತವಾಗಿರುತ್ತದೋ, ಅಷ್ಟೇ ಭಯವನ್ನು ಹುಟ್ಟಿಸುವುದು ಸುಳ್ಳಲ್ಲ. ಈ ಕ್ರಿಯೆ ಕೇವಲ ಒಂದೆರಡು ನಿಮಿಷದ್ದಲ್ಲ, ಸುಮಾರು ಒಂದೆರಡು ಘಂಟೆಗಳ ಕಾಲ ಈ ಮಂಜು ಮತ್ತು ಗಾಳಿಯ ಆಟ ಸಾಗುತ್ತಿರುತ್ತದೆ ಆದರೆ ಮಳೆ ಬರಬೇಕಷ್ಟೆ.
ಇದೆಲ್ಲ ರಸ್ತೆಯಲ್ಲಿ ಹೋಗಬೇಕಾದರೆ ಆಗುವ ಅನುಭವಗಳು, ಆದರೆ ಮೇಲೆ ಹೋದ ಮೇಲೆ ಆಗುವ ಅನುಭವಗಳು ಇನ್ನೂ ಆನಂದದಾಯಕ But ಆ ಆನಂದ ಸಿಗೋದು ಕೇವಲ ಪ್ರಕೃತಿಯಿಂದಲ್ಲ, ಅರ್ಧ ಕೋತಿಗಳಿಂದ, ಇನ್ನರ್ಧ ಸುತ್ತಲ ನೋಟದಿಂದ. ಏನ್ ಕೋತಿಗಳು ಸಾರ್ ಅವು... ಸಖತ್ ಬುದ್ದಿ ಅವಕ್ಕೆ ಬರೀ ಹೆಂಗಸರ ಹತ್ತಿರ ಮಾತ್ರ ಹೋಗ್ತವೆ. ಅವರ ಸೀರೆ ಮಾತ್ರ ಏಳೀತಾವೆ. ಅವರ ಕೈಚೀಲ ಮಾತ್ರ ದೋಚ್ತವೆ. ಆ ವಿಷಯದಲ್ಲಿ ಗಂಡಸರಿಗೆ Full Entertainment ಆದ್ರೆ ಆ ಹೆಂಗಸರು ನಮ್ಮವರಾಗಿರಬಾರದು ಅಷ್ಟೆ.
ತುಂಬಾ ವಿವರವಾಗಿ ಹೇಳಿದ್ದಕ್ಕೆ ಓದೋರಿಗೆ ಬಹುಶಃ ಬೋರ್ ಆಗಬಹುದು. ಅದಕ್ಕೆ ದಯವಿಟ್ಟು ನೀವು ಒಂದ್ಸಾರಿ ಹೋಗಿ ಬನ್ನಿ ಅದೂ ಮಳೆಗಾಲದಲ್ಲಿ ಹೋಗಿ ಬನ್ನಿ. ಅದೆಲ್ಲೋ ಇರೋ ಊಟಿಗಿಂತ ನಮ್ಮಲ್ಲೇ ಇರೋ ಬಿಳಿಗಿರಿರಂಗನ ಬೆಟ್ಟ (B.R.Hills) ಯಾವುದರಲ್ಲೂ ಕಮ್ಮಿ ಇಲ್ಲ ನಿಮಗೆ ಅನ್ನಿಸದಿದ್ದರೆ ಕೇಳಿ.
ಹೆಚ್ಹಿನ ವಿವರ ಬೇಕಾದ್ರೆ ಕೇಳಿ ಸಾರ್ ನನಗೇನು ಬೇಜಾರಿಲ್ಲ.

ಲೇಖನದ ಬಗೆ

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.