ಮಗುವಿನ ಬಯಕೆ
ಅಮ್ಮ ನನಗೂ ನಿನ್ನಯ ಹಾಗೆ
ಸೀರೆಯ ಉಡಿಸಮ್ಮ|
ಅಜ್ಜಿಯು ತಂದ ಉಡದಟ್ಟಿಯನು
ಉಡಿಸೇ ಬಿಡಮ್ಮ ||೧||
ತಲೆಯನು ಬಾಚಿ ಉದ್ದನೆ ಜಡೆಯು
ನನಗೆ ಬೇಡಮ್ಮ|
ದುಂಡಗೆ ಸುತ್ತಿ ತುರುಬನು ಕಟ್ಟಿ
ಮಲ್ಲಿಗೆ ಮುಡಿಸಮ್ಮ||೨||
ಅಕ್ಕನ ಹಾಗೆ ಚೌರಿಯ ಹಾಕಿ
ಕೇದಿಗೆ ಜಡೆಯು ಬೇಡಮ್ಮ|
ಎರಡು ಜಡೆಯನು ಹೆಣೆಯುವಷ್ಟು
ಸಮಯವೂ ಇಲ್ಲಮ್ಮ ||೩||
ಮೂಗಿಗೆ ನತ್ತು ಕಿವಿಗೆ ಬೆಂಡೋಲೆ
ನನಗೆ ಹಾಕಮ್ಮ|
ಹಸಿರು ಗಾಜಿನ ಬಳೆಯ ಜೊತೆಗೆ
ಬಿಲ್ವಾರ ಪಾಟ್ಲಿ ಇರಲಮ್ಮ||೪||
ಜುಲ್ಪಿ ಹೂವನು ತಲೆಗೆ ಹಾಕಿ
ಬೈತಲೆ ಬೊಟ್ಟು ಹಚ್ಚಮ್ಮ|
ಕಾಲಿಗೆ ಗೆಜ್ಜೆ ನಡಕ್ಕೆ ಡಾಬು
ಹಾಕಿಯೇ ಬಿಡಮ್ಮ ||೫||
ಕೊರಳಿಗೆ ನೆಕ್ಲೆಸ್ ತೋಳಿಗೆ ವಂಕಿ
ಬಾಜುಬಂಧ ಹಾಕಮ್ಮ|
ಅಜ್ಜ ಕೊಡಸಿದ ಹರಳಿನ ಉಂಗುರ
ಬೆರಳಿಗೆ ನೀನು ತೊಡಿಸಮ್ಮ||೬||
ಎಲ್ಲವೂ ಮುಗಿಸಿ ದೃ಼ಷ್ಟಿಯ ತೆಗೆಯಲು
ಕೆನ್ನೆಗೆ ಕಾಡಿಗೆ ಹಚ್ಚಮ್ಮ |
ಯಾರ ಕಣ್ಣೂ ತಾಗದ ಹಾಗೆ
ಲಟಿಕೆಯ ಮುರಿಯಮ್ಮ||೭||
ನಿನ್ನ ಮಗು ನೂರು ವರುಷ
ಸುಖದಿ ಬಾಳಲು|
ನನ್ನ ಅಂದ ಚೆಂದಕೆಲ್ಲರೂ
ಹರಸಿ ಮನದಲು ||೮||
*ರಚನೆ:ಡಾ.ಪ್ರಭು ಗಂಜಿಹಾಳ್
ಮೊ:೯೪೪೮೭೭೫೩೪೬
ಸಾಲುಗಳು
- 18 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ