ನಾಯಿಮರಿ
ಜಾಣಮರಿ ಮುದ್ದುಮರಿ
ನನ್ನ ನಾಯಿಮರಿ|
ಯಾರಿಗೇನೂ ಮಾಡೋದಿಲ್ಲ
ಡೋಂಟ್ ವರಿ||೧
ಮನೆಯ ಸುತ್ತ ಯಾರೇ ಬರಲಿ
ಭಯ ಬೀಳಿಸಿ ಒದರೋ ಪರಿ|
ಪರಿಚಿತರಿದ್ದರೆ ಸಾಕು ನೋಡಿ
ಬಾಲ ಆಡಿಸಿ ಸಂಭ್ರಮ ತೋರಿ||೨||
ಕಲ್ಲ ಮಲ್ಲ ಸುಬ್ಬ ಹನುಮ
ಆಟಕೆ ಬೇಕು ಯಾವಾಗಲೂ|
ಸೀತ ಗೀತ ರಾಧೇ ಬಂದರೆ
ಮುದ್ದು ಗರೆಯುವ ಸಲುಗೆಯು||೩||
ರೊಟ್ಟಿ ಎಂದರೆ ಮೂಸಿ ನೋಡಿ
ಹಿಂದೆ ಹಿಂದೆ ಸರಿವದು|
ಹಾಲು ಬ್ರೆಡ್ ಬೀಸ್ಕೀಟ್ ಕೇಕು
ನುಚ್ಚು ಮಜ್ಜಿಗೆ ಚಪ್ಪರಿಸುವದು||೪||
ಬೆಳಗು ಜಾವ ಬರುವ ಪೇಪರ್
ಅಪ್ಪಗೆ ಕೊಡುವದೇ ಕೆಲಸ|
ಅಮ್ಮ ತಿನಿಸು ಕೊಡೋವರೆಗೂ
ಸುತ್ತುವದು ಪ್ರತಿ ನಿಮಿಷ||೫||
ಬೆಳಗು ಸಂಜೆ ವಾಯು ವಿಹಾರ
ಕರೆದೊಯ್ಯಲೇ ಬೇಕು|
ಸ್ಕೂಟರ್ ಕಾರಲಿ ಹೊರಟರೆ ಸಾಕು
ಮುಂದೆ ಜಾಗ ಬೇಕೇ ಬೇಕು||೬||
ಮನೆಯ ಯಾರೇ ಹೊರಗೆ ಹೋಗಲಿ
ಬೆನ್ನ ಹಿಂದೆ ಬರುವದು|
ನಿಮ್ಮ ರಕ್ಷಣೆ ನನ್ನ ಹೊಣೆ
ಎನ್ನುವಂತೆ ಇರುವದು||೭||
ನಮ್ಮ ಜೊತೆಗೆ ಟಾಮಿ ಇರಲು
ಯಾರೂ ಮುಟ್ಟಲಾಗದು|
ಮುಟ್ಟಿದವರ ಪಾಡನಂತೂ
ಹೇಳತೀರಲಾಗದು||೮||
ತಂಗಿಗೂ ನನಗೂ ಟಾಮಿ ಜೊತೆಗಿರೆ
ವೇಳೆಯ ಪರಿವೇ ಬಾರದು|
ನಂಬಿಕೆ ನಿಯತ್ತಿಗೆ ಹೆಸರು ಎಂದರೆ
ನಾಯಿ ತಾನೇ ಇರುವದು||೯||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 60 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ