ನನ್ನ ವೇಷ
ಅಜ್ಜ ನಿನ್ನ ಚಾಳೀಸ ಕೊಡು
ಹಾಕಿಕೊಳ್ಳುವೆ ನಾನು|
ಕೋಲನು ಹಿಡಿದು ಮೆಲ್ಲಗೆ ನಡೆದು
ಗಾಂಧೀ ತಾತಾ ಆಗುವೆನು||೧||
ಕೋಟನು ತೊಟ್ಟು ಗುಲಾಬಿ ಇಟ್ಟು
ಚಾಚಾ ನೆಹರು ಆಗುವೆನು|
ಸೈನಿಕ ವೇಷವ ಧರಿಸಿ ಇಂದೇ
ಸುಭಾಸಚಂದ್ರನಾಗಿ ಕಾಣುವೆನು||೨||
ಸಂವಿಧಾನದ ಪುಸ್ತಕ ಎದೆಗಿಟ್ಟು
ಬಾಬಾಸಾಹೇಬ್ ಆಗುವೆನು|
ಸತಿಸಹಗಮನ ಹೊಡೆದೋಡಿಸಿದ
ರಾಜಾರಾಮ ಮೋಹನರಾಯನು ನಾನು||೩||
ಕಾವಿಯ ಧರಿಸಿ ಪೇಟವ ಸುತ್ತಿ
ಸ್ವಾಮಿ ವಿವೇಕಾನಂದನಾಗುವೆನು|
ಸಾಧು ಸಂತ ಬಸವನಾಗಿ
ಪುರಾಣ ವಚನ ಹೇಳುವೇನು||೪||
ಬುದ್ದ ಏಸು ಪೈಗಂಬರ ಗುರುನಾನಕ
ಸೂಫಿ ಸಂತ ಆಗುವೆನು|
ದಾಸರ ಕೀರ್ತನೆ ಹಾಡುತ ಸಾಗಿ
ಜನಮನವ ಪರಿವರ್ತಿಸುವೆನು||೫||
ಹೀಗಿರುವಾಗ ಭೇದವು ಎಲ್ಲಿದೆ
ಎಲ್ಲವೂ ನಾನೇ ಆಗಿರುವೆ|
ನನ್ನ ಹಾಗೇ ಎಲ್ಲರೂ ಆದರೆ
ಜಗದಲಿ ಹಿಂಸೆ ಎಲ್ಲಿದೆ?||೬||
ಮಾನವ ಜನ್ಮವ ಪಡೆದ ನಾವು
ಅರಿತು ಬೆರೆತು ಬಾಳೋಣ|
ಜಾತಿ ಧರ್ಮದ ಹಂಗನು ತೊರೆದು
ಮಾನವ ಧರ್ಮವ ಉಳಿಸೋಣ||೭||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 5 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ