ಕಾಲದ ಗೆಳೆಯ ಗಡಿಯಾರ
ಟಿಕ್ ಟಿಕ್ ಎನ್ನುತ ಓಡುತಲಿರುವ
ಓ ಗಡಿಯಾರ|
ಕಾಲದ ಗೆಳೆಯನೆ ನಿನ್ನದು
ಎಂಥ ಚಮತ್ಕಾರ||೧||
ರವಿಯ ನೆರಳೆ ಆಗಿನ ಕಾಲ
ಕಿವಿಯನು ಹಿಂಡುವ ನಂತರ ಕಾಲ|
ಸೆಲ್ಲು ಸೋಲಾರ ಇಂದಿನ ಕಾಲ
ಮುಂದೆನಿದೆಯೋ ನಿನ್ನಯ ಜಾಲ||೨||
ಪಾಠದ ಹೊತ್ತು ವೇಗದಿ ನಡೆ
ಆಟದ ವೇಳೆ ಮೆಲ್ಲಗೆ ಸಾಗು|
ಊಟದ ಹೊತ್ತು ಬೇಗನೆ ಬಾ
ನಿದ್ರೆಯ ಹೊತ್ತಲಿ ನಿಂತೇ ಹೋಗು||೩||
ನಿನ್ನಯ ವೇಗಕೆ ನಿಲುಗಡೆ ಇಲ್ಲ
ಭೂತಕಾಲಕೆ ತಳ್ಳುವೆ ಎಲ್ಲ|
ರಾಜಾಧೀರಾಜ ಎಂದವರೆಲ್ಲ
ಮಣ್ಣಲಿ ಮಣ್ಣಾಗಿ ಹೋದರೆಲ್ಲ||೪||
ಸೆಕೆಂಡು ನಿಮಿಷ ತಾಸಿನ ಜೊತೆಗೆ
ದಿನ ತಿಂಗಳು ವರ್ಷಗಳುರಳಿ|
ಕಳೆದಿವೆ ನಿನ್ನಯ ಚಕ್ರದಲಿ
ವರ್ತಮಾನವೂ ಭೂತಕೆ ಹೊರಳಿ||೫||
ಕಾಲಕೆ ತಕ್ಕ ವೇಷವ ತೊಟ್ಟು
ಸಿಕ್ಕದೆ ಕೈಗೆ ಓಡುವೆ ನೀನು|
ಬಡವ ಬಲ್ಲಿದ ಮೇಲು-ಕೀಳು
ಭೇದವ ತೋರದ ಕಾಲನೆ ನೀನು||೬||
ಕಾಲದ ಗೆಳೆಯನೇ ಓ ಗಡಿಯಾರ
ಎಲ್ಲರಿಗೂ ತಿಳಿಸು ಸಹಕಾರ|
ಇರುವಷ್ಟು ಕಾಲ ಜೊತೆ ಬದುಕುತ
ತೋರುತ ಅಕ್ಕರೆ ಮಮಕಾರ||೭||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 32 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ