ದೇವರು
ದೇವರ ಪಟಗಳ್ ಎಲ್ಲಡೆ ಮಾರುವ
ಜನಗಳ ನೋಡಮ್ಮ|
ಜಗವನೇ ಸೃ಼ಷ್ಟಿಸಿದಾತನ ಸ್ಥಿತಿಯು
ಹೀಗೇಕೆ ಅಮ್ಮ ||೧||
ಗುಡಿಗಳಲಿರುವ ಉದ್ದನೆ ಸಾಲು
ಬಡ ಭಕ್ತರಮ್ಮ |
ದುಡ್ಡನು ಹೆಚ್ಚಿಗೆ ಕೊಟ್ಟರೆ ಸಾಕು
ದೇವರ ಮುಂದೆಯಮ್ಮ ||೨||
ಕಾಸನು ತಟ್ಟೆಗೆ ಹಾಕಿದರೆ
ತೀರ್ಥ ಪ್ರಸಾದ ಕೊಡುವರು |
ಕಾಸೇ ಇರದಿರೆ ಪೂಜಾರಿ
ಮೋರೆಯ ಸಿಡುಕು ಮಾಡುವರು ||೩||
ಹರಕೆಯ ಹೊತ್ತು ಬಯಕೆಯ ಕೇಳುವ
ಭಕ್ತರ ನೋಡಮ್ಮ|
ಎಲ್ಲವ ಕೊಟ್ಟು ಕಾಯುವ ದೇವಗೆ
ಎಂಥ ಸ್ಥಿತಿಯಮ್ಮ||೪||
ಆಶೆಯ ಹೊತ್ತು ಗುಡಿಗಳ ಸುತ್ತಲು
ದೇವರು ಒಲೆಯುವನೇ? |
ಮನಸಿನ ಮಲೀನದ ಕೊಳೆಯ ತೊಳೆದರೆ
ಪರಮಾತ್ಮರೆ ನಾವಮ್ಮ||೫||
ಕಾಣದ ದೇವರ ಹುಡುಕಲು ಏಕೆ
ಅಲೆಯೋದು ಬೇಕಮ್ಮ |
ದೀನದುರ್ಬಲರ ಸೇವೆಯೆ ಸಾಕು
ಅಲ್ಲಾ ಇಹನಮ್ಮ ||೬||
ಊರನು ಸುತ್ತಿ ದೇವರ ನೋಡುವ
ಕಷ್ಟವು ಏಕಮ್ಮ|
ಜನ್ಮವ ನೀಡಿದ ತಂದೆ-ತಾಯಿಯೇ
ದೇವರೇ ಹೌದಮ್ಮ||೭||
ರಚನೆ:ಡಾ.ಪ್ರಭು ಅ.ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 12 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ