
ಮಳೆ 'ಬಿದ್ದಾಗ'...
ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ ಈಗ ತಾನೇ ಜಳಕ ಶುರುವಿಟ್ಟುಕೊಂಡಿದ್ದಾಳೆ ! ಇನ್ನೆಷ್ಟು ಹೊತ್ತು ಅವಳ ಆಟ ವರುಣನೊಡನೆಎಂಬ ಯೋಚನಾಲಹರಿಯನ್ನು ಸ್ವಲ್ಪ ಬದಿಗೊತ್ತಿ ವರ್ಷಧಾರೆಯೊಂದಿಗಿನ ನಮ್ಮಒಡನಾಟವನ್ನು ತೆರೆದುಕೊಳ್ಳುವ ಸಮಯವಿದು. ನೀನ್ಯಾರೋ... ನಾನ್ಯಾರೋ...ಎಂಬಂತ್ತಿದ್ದ ಮಳೆರಾಯ ಈಗೀಗ "ನೀನೆಲ್ಲೋ... ನಾನಲ್ಲೇ..." ಎಂಬಂತ್ತಾಗಿದ್ದಾನೆ. ಕೈ ಬೀಸಿ ನಡೆಯುತ್ತಿದ್ದವರು ಕೊಡೆ ಕುಟ್ಟುತ್ತಾ ಹೋಗುವಂತೆ ಮಾಡಿದ ಈ ಮಳೆಗೆ ಕೋಪ ಬಂದರೆ ನಮಗೆಲ್ಲ ತಪ್ಪಿದಲ್ಲ ಪರಿ'ತಾಪ' ಎಂಬುದು ಸರ್ವರಿಗೂ ತಿಳಿದಿದೆ.
ಇಂತಿಪ್ಪ ಮಳೆ ಮೈ ಸೋಕಿದಾಗ ಮನದ ಮೂಲೆಯಲ್ಲಿದ್ದ ಮೌನ ಮಾತಾಗಿ ಮೈ ನವಿರೇಳಿಸುತ್ತದೆ. ಪದರ - ಪದರವಾಗಿ ನೆನಪಿನ ಹಂದರ ತೆರೆದುಕೊಳ್ಳುತ್ತಿದ್ದಂತೆ ಮುಖದಲ್ಲೊಂದು ಮಂದಹಾಸ ಮೂಡುತ್ತದೆ. "ಇನ್ನಿಲ್ಲ ಬಹುದಿನ, ಈ ಹೈಸ್ಕೂಲು ಜೀವನ " ಎಂದು ಆಟೋಗ್ರಾಫ್ ಹಾಕಿಸಿಕೊಂಡು ಕಾಲೇಜು ಮೆಟ್ಟಿಲೇರಿ ( ನನ್ನ ತರಗತಿ ಇದ್ದುದು ಮೊದಲ ಮಹಡಿಯಲ್ಲಿ ಹಾಗಾಗಿ ) ಹಾರಿ ಹೋಗಿ ನನ್ನ ಜಾಗದಲ್ಲಿ ಕೂರೋದು ಖುಷಿನೇ...ನಮ್ಮನೆಯಿಂದ ರಾಷ್ರ್ಟೀಯ ಹೆದ್ದಾರಿ ತಲುಪಲು ಸುಮಾರು 12-15 ನಿಮಿಷ ನಡೇಯಲೇಬೇಕಿತ್ತು (ನಿಮ್ಮ ಬಳಿ ವಾಹನ ಇದ್ರೆ ನಾನೇನು ಮಾಡೋಕಾಗಲ್ಲ!). "ಇವತ್ತು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಜಿಲ್ಲೆಯ ಶಾಲಾ - ಕಾಲೇಜಿಗೆ ರಜೆ ಘೋಷಿಸಲಾಗಿದೆ "ಎಂದು ಯಾವುದೇ ನ್ಯೂಸ್ ಚಾನಲ್ಗಳು ಪ್ರಸಾರ ಮಾಡದಿದ್ದ ಕಾರಣ ನಾನು ಬೆಳ್ಳಂಬೆಳಗ್ಗೆ 8:45ಕ್ಕೆ ಕಾಲೇಜಿಗೆ ಹೊರಡಲೇಬೇಕಾಯಿತು.
ದಾರಿಯಲ್ಲಿ ಸಿಕ್ಕಿದ ಪ್ರತಿಯೊಂದು ಹೊಂಡವನ್ನು ಸರಿಯಾಗಿ ನೋಡಿ - ನೋಡಿ, ಅರ್ಧರ್ಧ ನಡೆದು , ಅರ್ಧರ್ಧ ಓಡಿ ಮುಖ್ಯರಸ್ತೆಗೆ ಬಂದಾಗ ನನ್ನದೇ ಹೆಸರಿನ ಬಸ್ಸೊಂದು ಬಸ್ ನಿಲ್ದಾಣ ತಲುಪಿತ್ತು. ಇನ್ನೇನು ಹತ್ತು ಹೆಜ್ಜೆ ನಡೆದು ಚತುಷ್ಪಥ ದಾಟಿದರೆ ನನ್ನೆರಡು ಕಾಲು ಬಸ್ಸೊಳಗೆ ಎನ್ನುತ್ತಿದ್ದಂತೆ ಕಾಲುಜಾರಿ ಬಿದ್ದೆ, ರಪ್ಪನೆ ಎದ್ದೆ...ಆಚೀಚೆ ನೋಡುವ ಗೋಜಿಗೆ ಹೋಗದೆ ಇದ್ದ ನನ್ನನ್ನು ಸ್ವಾಗತಿಸಿದ್ದು ಅದೇ ಬಸ್ಸು! ಚಾಲಕನಾದಿಯಾಗಿ ಬಸ್ಸಿನಲ್ಲಿದ್ದ ಸಮಸ್ತರೂ ನನ್ನ ನೋಡುತ್ತಿದ್ದರು ಎಂದು ತೋರುತ್ತಿತ್ತು ಅವರ ಮುಖಭಾವ !! ಅದನ್ನು ಕಂಡೂ ಕಾಣದಂತೆ ಹೋಗಿ ಒಂದು ಸೀಟಿನಲ್ಲಿ ಆಸೀನಳಾದೆ. ಮೆಲ್ಲಗೆ ನನ್ನ ದೃಷ್ಟಿ ಹರಿದದ್ದು ಕಾಲಿನೆಡೆಗೆ, ಏನಾಶ್ಚರ್ಯ?! ಮೊಣಕಾಲಿನ ಬಳಿ ಪ್ಯಾಂಟ್ ಕಾಸಿನಗಲ ಹರಿದಿತ್ತು; ಅಲ್ಲಲ್ಲಿ ಮೆತ್ತಿದ್ದ ಕೆಸರು ಬೇರೆ...ಆಗ ಮಿತ್ರನಂತೆ ಸಹಾಯಕ್ಕೆ ಬಂದಿದ್ದು ಕೈಲಿದ್ದ ಛತ್ರಿ. ಕೊಡೆಯನ್ನು ಬಲ ಮೊಣಕಾಲಿನ ಬಳಿ ಅಡ್ಡವಾಗಿ ಹಿಡಿದುಕೊಂಡು ಬಸ್ಸಿಳಿದೆ. ಕಾಲೇಜ್ ಕಾರಿಡಾರಿನಲ್ಲಿ ಕಾಲಿಟ್ಟ ಕೂಡಲೆ ಕೈಯೆತ್ತಿ "ಹಲೋ - ಹಾಯ್" ಎಂದವರಿಗೆಲ್ಲಾ ಬಾಯಲ್ಲೇ "ಬಾಯ್-ಬಾಯ್" ಎಂದೆ ! ಆ ಕಾಲೇಜು ಬಿಟ್ಟು ಹೊರ ಬಂದ ಮೇಲೂ,ಮಳೆ ಬಿದ್ದಾಗ ಈ ದೃಶ್ಯ ಕಣ್ಣ ಮುಂದೆ ಬಂದು ನನ್ನನ್ನು ಅಣಕಿಸುತ್ತದೆ. ಈಗ ಬಿದ್ದಾಗ ಇದ್ದ ನೋವಿಲ್ಲ ; ಬಿದ್ದಾಗ ಎದ್ದ ಗೆಲುವಿದೆ.
ಪ್ರಕೃತಿಮಾತೆ ಹಸಿರು ಲಹೆಂಗಾ ( ಮೊದಲೆಲ್ಲಾ ಸೀರೆ ಅನ್ನಬಹುದಿತ್ತು! ) ತೊಟ್ಟಂತೆ ಕಾಣುವ ಈ ಮಳೆಗಾಲವನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು. ಅತಿವೃಷ್ಟಿ-ಅನಾವೃಷ್ಟಿಗಳಲ್ಲೆಲ್ಲಾ ತನ್ನ ಛಾಪು ಮೂಡಿಸುವ ವರ್ಷಧಾರೆಯು ನಿಸರ್ಗದ ಅಪೂರ್ವ ಕೊಡುಗೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಅದೆಷ್ಟೋ ಬಾರಿ ನಮ್ಮನ್ನು ಬೇಸ್ತು ಬೀಳಿಸುವ ಕಾರ್ಯವನ್ನು ಚಾಚೂ ತಪ್ಪದೆ ಮಾಡುವ ಮಳೆಗಾಲ ಹೀಗೆ ಬಂದು ಹಾಗೆ ಹೋಗುತ್ತದೆ ಎನಿಸುತ್ತದೆ. ನೋಡುನೋಡುತ್ತಿದ್ದಂತೆಯೇ ಮುಗಿಯುವ ಈ ಮಳೆಗಾಲ ಮುಂದಿನ ವರ್ಷ ಪುನಃ ಆಗಮಿಸುತ್ತದೆ - ಮತ್ತೆ ಅದೇ ಸಂತಸದೊಂದಿಗೆ...
ಸೋ ಹ್ಯಾಪಿ ರೈನಿ ಸೀಸನ್!!!
ಸಾಲುಗಳು
- 335 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ