
ಸ್ವರ್ಣವಲ್ಲಿ ಮಠದಲ್ಲೊಂದು ಸಸ್ಯಲೋಕ
ಶಾಲಿವಾಹನ ಶಕೆ 1487ರಲ್ಲಿ (ಕ್ರಿ.ಶ.1556) ಸ್ಥಾಪನೆಗೊಂಡ ಶ್ರೀ ಸ್ವರ್ಣವಲ್ಲಿ ಮಠದ 54ನೇ ಯತಿಗಳು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ತಪಸ್ಸು , ಪೂಜೆಗೆ ಇನ್ನೊಂದು ಹೆಸರು ಎಂದರೆ ತಪ್ಪಿಲ್ಲ. ಈಗ ಶ್ರೀ ಸ್ವರ್ಣವಲ್ಲಿ ಮಠ ಸಮಾಜ ಪರಿವರ್ತನೆಯ ಹರಿಕಾರ ಎನಿಸಿಕೊಳ್ಳುತ್ತಿದೆ. ಧರ್ಮಜಾಗೃತಿ.ಆರೋಗ್ಯ,ಶಿಕ್ಷಣ ಸೇವೆ,ವನವಾಸಿಗಳ ಅಭಿವೃದ್ಧಿ,ವ್ಯಸನ ಮುಕ್ತಿ, ಜೀವನ ಶಿಕ್ಷಣ ಶಿಬಿರ,ಯೋಗ,ಪರಿಸರ ಹೀಗೆ ಹಲವು ಕಾರ್ಯಗಳಲ್ಲಿ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನ ನಿರಂತರವಾಗಿ ತೋಟಗಿಕೊಂಡಿದೆ. ಇಂತಹ ಪವಿತ್ರ ತಪೋಭೂಮಿಯಲ್ಲಿ ‘ಸಸ್ಯಲೋಕ’ ರೂಪುಗೊಂಡಿದೆ.
ಸಸ್ಯಲೋಕದ ಹಿನ್ನೆಲೆ :
ಕಳೆದ ಹಲವು ವರ್ಷಗಳಿಂದ ಪಶ್ಚಿಮ ಘಟ್ಟಗಳ ಜನ-ಜಲ ಜೀವ ವೈವಿಧ್ಯ ಸಂರಕ್ಷಣೆ ಹಾಗೂ ಸಂವರ್ಧನ ಕುರಿತು ಜನಾಂದೋಲನವನ್ನೇ ರೂಪಿಸಿರುವುದು ಶ್ರೀಗಳ ಹಿರಿಮೆ. ನೈಸರ್ಗಿಕ ಪರಿಸರದ ಕುರಿತ ಅವರ ಕಾಳಜಿಯ ಫಲವೇ ‘ಸಸ್ಯಲೋಕ’. ಸ್ಥಳೀಯ ಹಾಗೂ ಪರ ಪ್ರದೇಶದ ಎಲ್ಲ ಸಸ್ಯ ವೈವಿಧ್ಯವನ್ನು ಒಂದೆಡೆ ತಂದು, ಬೆಳೆಸಿ ಸಂರಕ್ಷಿಸಬೇಕೆನ್ನುವ ಹಂಬಲದಿಂದ ರೂಪುಗೊಂಡ ಬೃಹತ್ ಯೋಜನೆ ಇದು. ಶ್ರೀ ಮಠಕ್ಕೆ ಹೊಂದಿಕೊಂಡಿರುವ ವಿಶಾಲವಾದ ಇಳಿಜಾರಿನ ಬೆಟ್ಟ ಪ್ರದೇಶದಲ್ಲಿ ಮಹತ್ವದ ಕುರಿತಂತೆ ಇರುವ ಪ್ರಾಚೀನ ಹಾಗೂ ಅರ್ವಾಚೀನ – ಎರಡೂ ಜ್ನಾನ ಶಾಖೆಗಳ ಮಾಹಿತಿ ಬಳಸಿ ಉದ್ಯಾನವನ ನಿರ್ಮಿಸಲಾಗುತ್ತಿದೆ. ಊ.ಕ. ಜಿಲ್ಲೆ, ಪಶ್ಚಿಮ ಘಟ್ಟಗಳು, ಭಾರತದ ಇತರ ಪ್ರದೇಶಗಳು ಹಾಗೂ ವಿದೇಶಗಳ ಸಸ್ಯಗಳು ಹೀಗೆ ಎಲ್ಲೆಡೆಯಿಂದ ಅಪರೂಪದ ಸಸ್ಯಗಳನ್ನು ಇಲ್ಲಿ ತಂದು ಬೆಳೆಸುವ ಕಾರ್ಯ ನಡೆಯುತ್ತಿದೆ. ಸಂರಕ್ಷಣೆ,ಸಂವರ್ಧನೆ ಹಾಗೂ ಸಮುದಾಯ ಜ್ನಾನ ಅಭಿವೃದ್ಧಿ ಕುರಿತಂತೆ ಕೆಲಸ ಮಾಡುವುದು ಇದರ ಉದ್ದೇಶ. ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಗೊಂಡ ಮೇಲೆ ಇದು ಭಾರತದಲ್ಲಿಯೇ ಒಂದು ಪ್ರಮುಖ ಸಂರಕ್ಷಣಾ ಕೇಂದ್ರವಾಗುವ ಆಶಯವುಳ್ಳದ್ದು.
ಸಸ್ಯಲೋಕ ವೈಶಿಷ್ಟ್ಯ ಮತ್ತು ವೈವಿಧ್ಯ :
ಸಸ್ಯಲೋಕ ಉದ್ಯಾನವನದ 15 ಹೆಕ್ಟೇರ್ ಪ್ರದೇಶದಲ್ಲಿ ವಿನ್ಯಾಸಗೊಳ್ಳುತ್ತಿದೆ. ಇಡೀ ಪ್ರದೇಶ ಪಶ್ಚಿಮ ಘಟ್ಟ ಶ್ರೇಣಿಯ ತಪ್ಪಲಿನ ಪ್ರದೇಶವಾಗಿದ್ದು ಅದರ ನೈಸರ್ಗಿಕ, ಭೌಗೋಳಿಕ ರಚನೆ ಆಧರಿಸಿ ವಿವಿಧ ಸಂರಕ್ಷಣಾ ಅಂಗಗಳನ್ನು ನಿರ್ಮಿಸಲಾಗಿದೆ. ಹೂವಿನ ಗಿಡದ ಅಂಗಣ, ಹಣ್ಣಿನ ಗಿಢಗಳ ಅಂಗಣ, ಪಶ್ಚಿಮ ಘಟ್ಟಗಳ ಅಪರೂಪದ ಸಸ್ಯವೈವಿಧ್ಯಗಳ ಅಂಗಣ, ಪರ ಪ್ರದೇಶದ ಸಸ್ಯಗಳು, ಔಷಧೀ ಗಿಡ ಮೂಲಿಕಾವನ, ನಕ್ಷತ್ರ ವನ, ರಾಶಿ ವನ ಇತ್ಯಾದಿಗಳು ಅವುಗಳಲ್ಲಿ ಪ್ರಮುಖವಾದದ್ದು. ಇಲ್ಲಿ ಪಶ್ಚಿಮ ಘಟ್ಟದ ಅಪರೂಪದ ಗಿಡಗಳಾದ ದಾಲ್ಚಿನ್ನಿ, ರಾಮಪತ್ರೆ, ಸಿರಿಹೊನ್ನೆ ಮುಂತಾದ ಗಿಡಗಳಿವೆ. ಔಷಧಿ ಸಸ್ಯಗಳಾದ ಸರ್ಪಗಂಧಿ, ವಾಯು ವಿಳಂಗ, ಕರ್ಪೂರಲಕ್ಕಿ, ರಾಸ್ನಾ, ಆಡುಮುಟ್ಟದ ಬಳ್ಳಿ, ಮುಂತಾದ ನೂರಾರು ವೈವಿಧ್ಯದ ಗಿಢಗಳಿವೆ. ಅಶ್ವತ್ಥ, ಆಲ, ಅತ್ತಿ, ಬಿಲ್ವ ಮುಂತಾದ ಪವಿತ್ರವನ ವೃಕ್ಷಗಳಿವೆ. ಇನ್ನೂ ವಿವಿಧ ಸಸ್ಯಪ್ರಬೇಧ ಜೋಡಿಸುವ ಕಾರ್ಯ ಸಾಗಿದೆ.
‘ಸಸ್ಯಲೋಕ’ ಸಂಶೋಧನೆ ಮತ್ತು ಜ್ನಾನ ಪ್ರಸರಣ ಕಾರ್ಯಕ್ರಮಗಳು :
‘ಸಸ್ಯಲೋಕ’ ಸಸ್ಯ ವೈವಿಧ್ಯಗಳ ಸಂರಕ್ಷಣೆ ಜೊತೆಗೆ ಅವುಗಳ ಸಂವರ್ಧನೆ ಹಾಗೂ ಆ ಕುರಿತು ಜ್ನಾನ ಪ್ರಸರಣ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳುವ ಆಶಯವುಳ್ಳದ್ದಾಗಿದೆ. ಸಸ್ಯಲೋಕದ ಇನ್ನೊಂದು ಆಶಯವೆಂದರೆ ಜನಸಮುದಾಯವನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆ ಕುರಿತಂತೆ ಜಾಗೃತಿಗೊಳಿಸುವುದು. ಉ.ಕ. ಜಿಲ್ಲೆಯ ಅರಣ್ಯ ಪ್ರದೇಶವನ್ನು ‘ಜೈವಿಕ ಸಂರಕ್ಷಣಾ ಧಾಮ’ ಎಂದು ಘೋಷಿಸಲು ರಾಜ್ಯ ಮಟ್ಟದ ಕಾರ್ಯಾಗಾರ ನಡೆಸಿ ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಲಾಗಿದೆ. ‘ಸಸ್ಯಲೋಕ’ದ ಇಷ್ಟೆಲ್ಲ ಕಾರ್ಯಕ್ರಮಗಳನ್ನು ಸಂಘಟಿಸಲು ವಿಶೇಷ ಅನುಭವ ಹೊಂದಿರುವ ತಜ್ನ ಸಲಹಾ ಸಮಿತಿ ಹಾಗೂ ಸಂಚಲನಾ ತಂಡ ರಚಿಸಲಾಗಿದೆ.ಕರ್ನಾಟಕ ಸರಕಾರದ ಅರಣ್ಯ ಇಲಾಖೆ, ಶಿರಸಿ ವಿಭಾಗ , ‘ಸಸ್ಯಲೋಕ’ ನಿರ್ಮಾಣ ಕಾರ್ಯದಲ್ಲಿ ತನ್ನ ಸಹಾಯ ಸಲ್ಲಿಸುತ್ತಿದೆ. ಪೂರ್ಣ ಸಹಭಾಗಿತ್ವ ನೀಡಿದೆ
ಸಾಲುಗಳು
- 286 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ