ಅಭಿಮಾನ

 

                              " ಅಭಿಮಾನ "

          ‘ಬಾಂಬೆ ಪಾನಿಪೂರಿ ಸ್ಟಾಲ್’ ಎಂದು ಹೆಸರಿದ್ದ ಚಕ್ರದಂಗಡಿಯ ಮುಂದೆ ನಿಂತು ‘ಭಾಯ್ ಏಕ್ ಶೇವ್ ಪುರಿ ಡಾಲೋ’ ಎಂದೆ. ‘ಹಾಂ ಜಿ ಏಕ್ ಮಿನಿಟ್’ ಎಂದನು ಅಂಗಡಿವಾಲ. ಅವನು ನೀಡಿದ ಶೇವ್ ಪುರಿಯನ್ನು ಸವಿಯತ್ತಿರುವಾಗ  ಯುವಕನೊಬ್ಬ ಬಂದು, ‘ಒಂದು ಮಸಾಲಪುರಿ ಕೊಡಿ’ ಎಂದ. ‘ಹಾಂ ಜಿ ಏಕ್ ಮಿನಿಟ್’ ಎಂದು ಅದೇ ಲಯದಲ್ಲಿ ಹೇಳಿ ಪ್ಲೇಟ್ ಅನ್ನು ಅಣಿಗೊಳಿಸತೊಡಗಿದನು ಅಂಗಡಿವಾಲ. ‘ಯಾಕ್ ಸರ್ ನಿಮಗೆ ಕನ್ನಡ ಬರೊಲ್ಲವೇ?’ ಎಂದು ಸಾಮಾನ್ಯವೆಂಬಂತೆ ಕೇಳಿದನು ಆ ಯುವಕ. ‘ಸಮಜ್ತಾ ಹೂಂ ಲೇಕಿನ್ ಬಾತ್ ನಹಿ ಕರ್ ಸಕ್ತಾ’ ಅಂದನವನು ನಗುತ್ತಾ. ‘ನೀವು ಎಲ್ಲಿಂದ ಬಂದವರು? ಇಲ್ಲಿಗೆ ಬಂದು ಎಷ್ಟು ವರ್ಷ ಆಯ್ತು?’ ಎಂದು ಮತ್ತೆ ಕೇಳಿದ ಯುವಕನ ಧ್ವನಿ ಗಡುಸಾಗುತ್ತಿರುವುದನ್ನು ಅಂಗಡಿವಾಲ ಬಹುಶಃ ಗ್ರಹಿಸಲಿಲ್ಲ. ‘ಹಮ್ ರಾಜಸ್ಥಾನ್ ಸೆ ಹೇ ಭಯ್ಯಾ. ಇದರ್ ಆಕೆ ದಸ್ ಸಾಲ್ ಹೋಗಯೆ’ ಎಂದನವನು ಮಸಾಲಪುರಿಗೆ ಕಾರವನ್ನು ಹಾಕುತ್ತ. ಯುವಕನ ಮುಖ ಒಮ್ಮೆಲೇ ಕೆಂಪಗಾಯಿತು. ‘ನಮ್ಮ ರಾಜ್ಯಕ್ಕೆ ಬಂದು 10 ವರ್ಷವಾದರೂ ಇನ್ನೂ ಕನ್ನಡ ಕಲಿತಿಲ್ವಾ? ನಿಮಗೆ ದುಡಿಯೋಕೆ, ಇರೋಕೆ ನಮ್ಮೂರು ಬೇಕು ಆದರೆ ನಮ್ಮ ಭಾಷೆ ಕಲಿಯೋದು ಬೇಡ ಅಲ್ವಾ? ಇಲ್ಲಿನ ಭಾಷೆ ಅಂದ್ರೆ ನಿಮ್ಗೆ ತಾತ್ಸಾರ ಅಲ್ವಾ? ನಿಮ್ಮಂತೋರಿಗೆ ಜಾಗ ಕೊಟ್ಟು ಕೊಟ್ಟು ನಮ್ಮ ನೆಲ, ಭಾಷೆ, ಸಂಸ್ಕೃತಿ ಎಲ್ಲಾನೂ ಎಕ್ಕುಟ್ಟಿ ಹೋಗಿರೋದು. ಇಲ್ಲಿನ ಅನ್ನ ತಿಂತೀರಾ ಅದ್ಕಾದ್ರೂ ಇಲ್ಲಿನ ಭಾಷೆ ಕಲೀಬೇಕು ಅಂತ ಅನ್ಸೊಲ್ವಾ ನಿಮ್ಗೆ? ನಿಮ್ಮಂತವರಿಗೆ ಮಣೆ ಹಾಕಿ ನಾವು ನಮ್ಮ ನೆಲದ ಭಾಷೆನೇ ಮರಿತಿದೀವಿ. ಇಲ್ಲಾ ನಿಮ್ಮಂತವರ ಅಂಗಡೀಲಿ ನಾನು ತಿನ್ನೊಲ್ಲ. ನಮ್ಮ ಭಾಷೆಗೆ ಬೆಲೆ ಕೊಡದ ನಿಮ್ಮಂತವರಲ್ಲಿ ತಿನ್ನೋದು ಒಂದೇ ಉಪವಾಸ ಇರೋದು ಒಂದೇ’ ಎಂದು ದುರ್ಧಾನ ತೆಗೆದುಕೊಂಡವನಂತೆ ಹೊರಟುಹೋದನು.

          ಅಂಗಡಿಯವನು ಭಯ್ಯಾ ಭಯ್ಯಾ ಎಂದು ಎಷ್ಟು ಕೂಗಿದರೂ ಅವನು ಹಿಂತಿರುಗಿ ನೋಡಲಿಲ್ಲ. ನನಗೇಕೊ ಆ ಯುವಕನ ಮಾತಿನಲ್ಲಿ ಸತ್ಯವಿದೆಯೆನಿಸಿತು. ನಾವು ಇಂತವರನ್ನು ನಮ್ಮಲ್ಲಿ ಬೆಳೆಯಲು ಬಿಟ್ಟು ನಮ್ಮ ಭಾಷೆಯನ್ನು ನಾವೇ ಸಾಯಿಸುತ್ತಿದ್ದೇವೆ. ಎಲ್ಲರೂ ಆ ಯುವಕನಂತೆ ಯೋಚಿಸಿದರೆ ನಮ್ಮ ಕನ್ನಡ ಭಾಷೆ ತನ್ನ ಭವ್ಯತೆಯನ್ನು ಹಾಗೆಯೇ ಕಾಪಾಡಿಕೊಳ್ಳಬಹುದು ಎನಿಸಿತು. ಗಂಟಲಿನಲ್ಲಿ ಇಳಿಯುತ್ತಿದ್ದ ಶೇವ್ ಪುರಿ ಕಹಿ ಅನುಭವ ನೀಡುತ್ತಿತ್ತು. ಇದೇ ಕೊನೆಯ ಬಾರಿ ಇನ್ನೆಂದೂ ಈ ಅಂಗಡಿಗೆ ಬರಬಾರದೆಂದು ಮನಸ್ಸು ಶಪಥಗೈದಿತು. ತಿಂದ ಶೇವ್ ಪುರಿಯ ಹಣವನ್ನು ನೀಡಲು ಪರ್ಸಿಗೆ ಕೈ ಹಾಕಲನುವಾದೆ. ‘ಸಾಬ್ ನಂಗೂ ಕನ್ನಡ ಬರತ್ತೆ. ಪೂರಾ ಅಲ್ದೆ ಇದ್ರೂ ಸುಮಾರಾಗಿ ಬರತ್ತೆ’ ಎಂದು ಅಂಗಡಿಯವನು ನನ್ನ ಕಡೆ ನೋಡಿದಾಗ ಆಶ್ಚರ್ಯವಾಯ್ತು. ‘ಹೌದಾ? ಮತ್ತೆ ಕನ್ನಡ ಯಾಕೆ ಮಾತಾಡೊಲ್ಲ ನೀವು? ಅವನು ಅಷ್ಟೆಲ್ಲಾ ಮಾತಾಡಿದ್ರೂ ಸುಮ್ಮನೆ ಇದ್ದರಲ್ಲಾ ಯಾಕೆ?’ ಎಂದು ಕೇಳಿದೆ ಚಕಿತನಾಗಿ. ‘ಅದು ಬಿಸಿರಕ್ತ, ನಾನು ಹೇಳಿದರೂ ಅರ್ಥ ಆಗುವುದಿಲ್ಲ. ಕನ್ನಡ ಮಾತಾಡುದು ನಂಗೂ ಬಹುತ್ ಇಷ್ಟ. ಆದರೆ ಇಲ್ಲಿಯ ಜನರಿಗೆ ನಾವು ಕನ್ನಡ ಮಾತಾಡುದು ಇಷ್ಟ ಆಗುದಿಲ್ಲ. ಕನ್ನಡ ಮಾತಾಡಿದರೆ ಯಾರೂ ಅಂಗಡಿಗೆ ಬರೋದಿಲ್ಲ. ಹಿಂದಿ ಮಾತಾಡೋರಿಗೆ ಮಾತ್ರ ಪಾನಿಪುರಿ ಮಾಡೋಕೆ ಬರ್ತದೆ ಅನ್ನೋ ಹಾಗೆ ಆಡ್ತಾರೆ. ಮೊನ್ನೆ ಹಾಗೆ ಆಯ್ತು, ಇಬ್ಬರು ಕೊಲೇಜ್ ಹುಡುಗೀರು ಬಂದಿದ್ದರು. ಏಕ್ ಹುಡ್ಗಿ ಹೇಳ್ತಿದ್ದಳು, ‘ಹೇ ಇವ್ನು ಕನ್ನಡ ಮಾತಾಡ್ತಾನೆ ಕಣೆ, ಇಲ್ಲಿಯವನೇ ಇರ್ಬೇಕು. ಬಸ್ ಸ್ಟಾಂಡ್ ಪಕ್ಕ ಇರೋ ಹಿಂದಿ ಮಾತಾಡೋನು ಚೆನ್ನಾಗಿ ಮಾಡ್ತಾನೆ. ನಾಳೆಯಿಂದ ಇಲ್ಲಿ ಬರೋದು ಬೇಡ’ ಅಂತ. ಈಗ ಹೇಳಿ ಸಾಬ್ ನಮ್ಗೆ ನಿಮ್ಮ ಭಾಷೆ ಮೇಲೆ ಅಭಿಮಾನ ಇಲ್ವಾ ಅಥವಾ ನಿಮ್ಮ ಜನರಿಗೆ ಇಲ್ವಾ? ನೋಡಿ ಸಾಬ್ ಅಂಗಡಿಗೆ ಹೆಸರು ಕನ್ನಡದಲ್ಲಿ ಬರೆಸಿದೀನಿ’ ಎಂದು ಮೇಲೆ ಬೆರಳು ತೋರಿಸಿದನು. ನಾನು ತಲೆಯೆತ್ತಿ ನೋಡಿದೆ. ಹೌದು ‘ಬಾಂಬೆ ಪಾನಿಪುರಿ ಸ್ಟಾಲ್’ ಎಂದು ಕನ್ನಡ ಅಕ್ಷರದಲ್ಲಿ ಬರೆಯಲಾಗಿತ್ತು. ‘ಬೇರೆಯವರು ನಮ್ಮ ಭಾಷೆ ಮಾತಾಡದೆ ಇರೋದರಿಂದ ನಮ್ಮ ಭಾಷೆ ನಾಶ ಆಗುದಿಲ್ಲ ಸಾಬ್. ನಾವೇ ನಮ್ಮ ಭಾಷೆನ ಮಾತಾಡದೇ ಇರೋದರಿಂದ ಅದು ನಾಶ ಆಗೋದು. ಬೇರೆಯವರು ನಮ್ಮ ಭಾಷೆ ಬಗ್ಗೆ ಅಭಿಮಾನ ತೋರಿಸಬೇಕು ಅಂತ ಹೇಳೋ ಮೊದಲು ನಾವು ಅದರ ಬಗ್ಗೆ ಅಭಿಮಾನ ತೋರಿಸಬೇಕು. ನಮ್ದು ಹೊಟ್ಟೆಪಾಡು, ಗಿರಾಕಿಗಳಿಗೆ ಹೇಗೆ ಇಷ್ಟ ಆಗುತ್ತೊ ಹಾಗೆ ಇದ್ದರೆ ಮಾತ್ರ ವ್ಯಾಪಾರ ಆಗೋದು’ ಎಂದು ಸಣ್ಣ ಮುಖಮಾಡಿಕೊಂಡನು. ಹೊಟ್ಟೆ ತುಂಬಿದ್ದರೂ ಆತನ ಕೈಯಿಂದ ಮತ್ತೆ ತಿನ್ನಬೇಕೆನಿಸಿತು. ‘ಇನ್ನೊಂದು ಶೇವ್ ಪುರಿ’ ಕೊಡಿ ಅಂದೆ.

                                                        - ಸ.Kha.

 

ಈ ಲೇಖನ ಹೇಗಿದೆ?: 
ಅಂಕಗಳು: 5 (2 ಓಟುಗಳು)

ಲೇಖನದ ಬಗೆ: 

Subscribe to Comments for "ಅಭಿಮಾನ"