Skip to main content

ಗೌರಿ

ಬರೆದಿದ್ದುFebruary 28, 2016
noಅನಿಸಿಕೆ

'ಯಾರ ಮನ್ಯಾನ ಹಾಲಿಗೂ ಬಾಯಿ ಹಾಕ್ತಿದ್ದಿಲ್ಲ ನಮ್ಮ ಗೌರಿ, ವಠಾರದಾಗ ಇರೊ ಎಲ್ಲಾ ಇಲಿನೂ ಬಂದ ಒಂದ ವಾರದೊಳಗೆ ಒಡ್ಸಿತ್ತು, ಆಗಾಗ ಬೌಗಾ ಬೆಕ್ಕಿನ ಜೊತಿ ಹೊರಗೆ ಹೋದ್ರು ಮೂರ ದಿನದೊಳಗ ವಾಪಸ್ ಬರೊದು, ಮಾರಿ ನೋಡಿ ತಿಂಗಳೊಪ್ಪತ್ತಾದ್ರು ಇನ್ನು ಬಂದಿಲ್ಲ' ಅಂತ ಅವ್ವ ಮುಂದಿನ ಮನಿ ಜ್ಯೋತಿ ಹತ್ರ ಕಟ್ಟಿ ಮ್ಯಾಲ ಕುಂತಾಗ ಹೇಳಾಕತ್ತಿದ್ಲು.

ಹೌದು ಗೌರಿ ನಮ್ಮ ಮನಿಗೆ ಬಂದು ಐದು ವರ್ಷ ಆಕ್ಕೆತಿ ಈ ಬಸವ ಜಯಂತಿಗೆ. ಬೆಳ್ಳಗೆ ಮೊಲದಂಗ ಇತ್ತು ನೋಡಾಕ, ಎರಡೂ ಕರೆ ಕಿವಿ ನಡಬರಕ ಸಣ್ಣ ಬಿಳಿ ಗೆರಿ ಬೈತಾಲೆ ತಗದಂಗ ಕಾಣ್ತಿತ್ತು. ಗೌರಿ ನಮಗ ಬರೆ ಬೆಕ್ಕ ಅಷ್ಟ ಆಗಿದ್ದಿಲ್ಲ, ನಮ್ಮ ಮನಿಮಗಳ ತರ ಇದ್ದಂಗ ಇತ್ತು, ಅದ್ಯಾವ ಗಳಿಗ್ಯಾಗ ಅವ್ವ ಅದಕ ಗೌರಿ ಅಂತ ಹೆಸರಿಟ್ಟಳೋ ಅವತ್ತಿಂದ ಅದು ನಮ್ಮ ಮನಿಗೊಂದ ಕಳಾ ತಂದಿತ್ತು. ಅದನ್ ನೋಡಿದವರೆಲ್ಲಾ ನಮಗ ಕೊಡ್ರಿ ಸಾಕ್ತೆವಿ ಅಂತ ಕೇಳತಿದ್ರು. ಅದನ್‍ ಮನಿ ಮಂದಿ ಎಷ್ಟ ಹಚ್ಕೊಂಡಿದ್ರ ಅಂದ್ರ ಮನಿ ಸಣ್ಣ ಮಗಾ ನಾನು ನನಗ ೧೫ ವರ್ಷ ಆದ್ರೂ ನನ್ನ birthday ಮಾಡಿರ್ಲಿಲ್ಲ ಆಗ್ಲೆ ಬಸವ ಜಯಂತಿಗೆ ಅದಕ್ಕೆ ಕೇಕ್ ತಂದಿದ್ರು

ಐದು ವರ್ಷದ ಹಿಂದಿನ ಮಾತು, ವಠಾರದಾಗ ಇಲಿ ಕಾಟ ಹೆಚ್ಚಾದಾಗ ಅದನ್ನ ತಡ್ಯಾಕ ಅಂತ ೨ ಬೆಕ್ಕು ಸಾಕಿದ್ವಿ ಎರಡು ಬಾಳದಿನ ಮನ್ಯಾಗ ನಿಲ್ಲಲಿಲ್ಲ. ಹೆಂಗಾರ ಮಾಡಿ ಈ ಇಲಿ ಕಾಟ ತಪ್ಪಿಸಬೇಕು ಅನ್ನೊ ಯೋಚನೆ ತಲಿ ಒಳಗೆ ಒಡಾಡ್ತಿದ್ದ ಕಾಲದಾಗ ಬ್ಯಾಸಗಿ ರಜಾಕ್ಕಂತ ಕಾಕಾನ ಊರ ಶಿವಳ್ಳಿಗೆ ಹೋಗಿದ್ದೆ. ಅಲ್ಲಿ ಬೆಕ್ಕೊಂದು ನಾ ಹೋಗೊ ೨ ದಿವಸದ ಹಿಂದ ೪ ಮರಿ ಹಾಕಿತ್ತ, ರಜಾ ಮುಗಿಸಿ ವಾಪಸ್ ಬರೊವಾಗ ಸಂತಿ ಚೀಲದೊಳಗೆ ೪ ಪಾರ್ಲೆ ಬಿಸ್ಕೀಟು ಮತ್ತ ಈ ಸಣ್ಣ ಬೆಕ್ಕಿನಮರಿ ಹಾಕ್ಕೊಂಡು ಊರಿಗೆ ಬಂದ ಬಿಟ್ಟಿದ್ದೆ. ಗೌರಿ ಋಣ ಇಲ್ಲೇ ಇತ್ತ ಅನ್ಸಿತ್ತು ಈ ಊರಾಗ ಹೊಂದಿಕೊಂಡ ಬಿಡ್ತು. ೨ ವರ್ಷದ್ದು ಇದ್ದಾಗ ಊರಾನ ನಾಯಿಗಳ ಜೊತೆ ಜಗಳಾ ಆಡಿ, ಆ ನಾಯಿಗಳು ಇದರ ಹಿಂದಿನ ಎರಡೂ ಕಾಲು ಜಗ್ಗಿ ಮುರಿದ ಬಿಟ್ಟಿದ್ವು, ನಾ ಆಗ ನವೋದಯ ಶಾಲೆ ಒಳಗ ಇರುತ್ತಿದ್ದೆ,ಊರಾಗ ಇದ್ದಿದ್ದಿಲ್ಲ ರಕ್ತ-ಸಿಕ್ತ ಆಗಿ ಮನೆಗೆ ಬಂದ ಅದನ್ನ ನೋಡಿ ಹೆದರಿ ಅವ್ವ ಅದನ್ಹಿಡಿಲೆ ಇಲ್ಲ, ಅಕ್ಕ & ಅಪ್ಪ ಅದನ್ನ ಬಾಳ ಕಾಳಜೀಪೂರ್ವಕವಾಗಿ ನೋಡಿಕೊಂಡು ೩ ವಾರದೊಳಗ ಒಡಾಡುವಂಗ ಮಾಡಿದ್ರು. ಹಿಂದಿನ ಎರಡೂ ಕಾಲಿಗೆ ಪೆಟ್ಟು ಬಿದ್ದಿದ್ದಕ್ಕೊ ಏನೋ ಅದು ಗರ್ಭದಾರಣೆ ಮಾಡಲೇ ಇಲ್ಲ, ಇದ್ರ ಇದೊಂದ ಚೆನ್ನಾಗಿರ್ಲಿ ಅಂತ ಅಂದು ಸುಮ್ಮನಾಗಿದ್ವಿ.

ತಿಂಗಳ ದಿನ ಆಯ್ತು ಹೊರಗೆ ಹೋಗಿದ್ದ ಗೌರಿ ಇನ್ನು ಬಂದಿಲ್ಲ. ಅದೆಲ್ಲಿ ದಾರಿ ತಪ್ತೊ ಏನೋ?, ಯಾರಾದ್ರೂ ಹಿಡಕೊಂಡ ಹೋದ್ರಾ? ನಾಯಿ-ಗಿಯಿ ಕೈಯಾಗ ಸಿಕ್ತಾ??  ಅಂತ ದಿನಾ ಅವ್ವ ಪ್ರಶ್ನೆ ಮಾಡ್ತಾಳೆ. ಇಡೀ ಊರನ್ನೇ ಹುಡುಕಿದ್ದಾಯ್ತು .ಅದೇನಾಯ್ತೋ ನನಗೂ ಗೊತ್ತಿಲ್ಲ. 

WE REALLY MISS YOU GOURI

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.