Skip to main content

ನನ್ನ ಯಾನ(ಣ)

ಬರೆದಿದ್ದುFebruary 25, 2016
noಅನಿಸಿಕೆ

ನನ್ನ ಯಾನ(ಣ)

ಮೊದಲಿಂದಲು ನನಗೆ ಚಾರಣ ಮಾಡಬೇಕೆಂಬ ಆಸೆ, ಕಾಲೇಜಿನವರ ಜೊತೆ  ಪ್ರವಾಸಕ್ಕೆ ಹೋಗಲು ಯಾಕೋ ಮನಸ್ಸಿದ್ದಿಲ್ಲ, ಒಂಟಿಯಾಗಿ ಗಿರಿ-ಕಣಿವೆಗಳನ್ನ ಸುತ್ತೋ ಆಸೆ/ಹುಚ್ಚು. ಯಾವ ಪ್ರದೇಶವನ್ನು ಪ್ರವಾಸಕ್ಕೆ ಆಯ್ದುಕೊಳ್ಳಬೇಕು ಎಂದು ಯೋಚಿಸುತ್ತಿರುವಾಗ ದಿನಪತ್ರಿಕೆಯಲ್ಲಿ ಯಾಣದ ಬಗ್ಗೆ ಓದಿದ ನೆನಪು ಬಂತು.ಹಾಸ್ಟೇಲ್ ನಲ್ಲಿರುವುದರಿಂದ ಮನೆಯವರಿಗೆ ಹೇಳಿ ಹೋಗುವ ಅವಶ್ಯಕತೆಯು ಬರಲಿಲ್ಲ. 

ನನ್ನಲ್ಲಿದ್ದ ಚೂರುಪಾರು ಚಿಲ್ಲರೆ ಹಣವನ್ನು ಒಗ್ಗೂಡಿಸಿ ಪ್ರವಾಸಕ್ಕೆ ತಯಾರಾದೆ. ಸರ್ಕಾರಿ ಬಸ್ಸೆ ನನಗೆ ಬೆಂಜ್ ಕಾರು, ದಿನಾಂಕ ೧೮/೨/೧೬ ರಾತ್ರಿ ಹುಬ್ಬಳ್ಳಿಯಿಂದ ಬಸ್ಸು ಹತ್ತಿದೆ. ಸರಿಸುಮಾರು ಬೆಳಗಿನ ಜಾವ ೩ ಗಂಟೆಗೆ ಬಸ್ಸು ಶಿರಸಿಯಲ್ಲಿತ್ತು, ಹಾಗೆ ಅಲ್ಲಿ ಇಲ್ಲಿ ಸುತ್ತಾಡುತ್ತಾ ೬ ಗಂಟೆವರೆಗೆ ಕಾಲಕಳೆದೆ, ನಂತರ ಸುಲಭ ಶೌಚಾಲಯದಲ್ಲಿ ಸ್ನಾನ-ಗಿನಗಳನ್ನು ಮುಗಿಸಿ ಯಾನಕ್ಕೆ ಹೊರಡಲು ತಯಾರಾದೆ. 

ಶಿರಸಿಯಿಂದ ಯಾಣಕ್ಕೆ ಸೀದಾ ಬಸ್ಸಿರಲಿಲ್ಲ, ಕುಮುಟಾ ಬಸ್ಸು ಹತ್ತಿ ನಡುವೆ ಕತಗಾಲ ಎಂಬ ಹಳ್ಳಿಯಲ್ಲಿ ಇಳಿದು ಅಲ್ಲಿಂದ ಖಾಸಗಿ ವಾಹನದಲ್ಲಿ ಯಾಣ ಹಳ್ಳಿಗೆ ಬಂದಿಳಿದೆ. ನಾ ಹೋದ ಸಮಯದಲ್ಲಿ ಯಾವುದೇ ಪ್ರವಾಸಿಗರಿದ್ದಿದ್ದಿಲ್ಲ, ಒಂಟಿಗನಾಗಿಯೇ ಚಾರಣ ಶುರು ಮಾಡಿದೆ, ಯಾಣದಲ್ಲಿರುವ ಎತ್ತರದ ಕಪ್ಪು ಕೊರಕಲು ಕಲ್ಲುಗಳು ಕಣ್ಣಿಗೆ ಆನಂದ ಉಂಟು ಮಾಡತೊಡಗಿದವು. ಉದುರುವ ಎಲೆಗಳ ಶಬ್ದ, ಪಕ್ಕ ಹರಿಯುವ ಜರಿಯ ಜುಳುಜುಳು ಮತ್ತು ನನ್ನ ಬೂಟಿನ ಸದ್ದು ಬಿಟ್ಟರೆ ಅಲ್ಲ್ಯಾವುದೆ ಸದ್ದಿರಲಿಲ್ಲ, ನಿಧಾನವಾಗಿ ಸಾಗುತ್ತಾ ಮೋಹಿನಿ ಶಿಖರದ ಹತ್ತಿರ ಬಂದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ, ಆ ಎತ್ತರದ ಕರಿ ಪರ್ವತ ನೋಡುತ್ತಾ ನಿಂತು ಬಿಟ್ಟೆ.ನಿಜವಾಗಿಯು ಪ್ರಕೃತಿಯ ಶಿಲ್ಪಕಲೆಗೆ ಮಾರುಹೋದೆ, ಮುಂದೆ ಭೈರವೇಶ್ವರ ಶಿಖರ ನನಗಾಗಿ ಕಾಯುತ್ತಿತ್ತು. ಅದನ್ನಂತು ನೋಡಿದಾಗ ನನಗೆ ರೋಮಾಂಚನವಾಯಿತು, ಮೋಹಿನಿ ಶಿಖರ ನೋಡಿದಾಗ ಆದ ಸಂತೋಷಕ್ಕಿಂತ ದುಪ್ಪಟ್ಟು ಆನಂದವಾಯಿತು. ಅಲ್ಲಿಯೇ ಇದ್ದ ಅಂಗಡಿಯಲ್ಲಿ ಎಳನೀರು ಕುಡಿದು, ನನ್ನ ಬ್ಯಾಗ್ ಅಲ್ಲಿಯೇ ಬಿಟ್ಟು ಗುಡಿಗೆ ಹೋಗಿ ದರ್ಶನ ಮಾಡಿಕೊಂಡು ಬಂದೆ. ನಂತರ ಆ ಗುಹೆಯನ್ನೊಮ್ಮೆ ಸುತ್ತು ಬಳಸಿ ಬಂದೆ, ಪಾರಿವಾಳ, ಬಾವಲಿಯ ಸದ್ದು ಗುಹೆಯನ್ನಾವರಿಸಿತ್ತು.

ವಿಭೂತಿ ಜಲಪಾತಕ್ಕೆ ಹೋಗಲು ಅಂಗಡಿಯವನನ್ನು ದಾರಿ ಕೇಳಿದೆ, ಯಾಣದಿಂದ ೮ ಕೀ.ಮಿ ದೂರದಲ್ಲಿತ್ತು ಜಲಪಾತ. ಅಲ್ಲಿಗೆ ಆ ಸಮಯದಲ್ಲಿ ಯಾವುದೇ ಬಸ್ ಸೌಕರ್ಯ ಇರಲಿಲ್ಲ, ಯಾಣ-ಕುಮಟಾ ಬಸ್ ಬರುವುದಕ್ಕಿನ್ನು ತುಂಬಾ ಸಮಯವಿತ್ತು. ೮ ಕೀ.ಮಿ ನಡೆಯುವ ಹುಚ್ಚು ಭರವಸೆಯೊಂದಿಗೆ ಜಲಪಾತದ ದಾರಿ ಹಿಡಿದಿದ್ದೆ. ೩ ಕೀ.ಮಿ ಕಾಡಿನಲ್ಲಿ ನಡೆಯುವಷ್ಟರಲ್ಲಿ ಜೀವ ಬಾಯಿಗೆ ಬಂದಿತ್ತು. ದಿನಾಲೂ ಸಿಟಿಬಸ್ಸಿನಲ್ಲಿ ಓಡಾಡುವಾಗ ವ್ರುದ್ದ & ಮಹಿಳೆಯರಿಗೆ ಸೀಟು ಬಿಟ್ಟುಕೊಟ್ಟ ಪುಣ್ಯವೋ ಏನೋ ಎನಿಸುತ್ತದೆ ೪ ಜನ ಇಂಜಿನಿಯರುಗಳು ಆ ಕಡೆಗೆ ಹೊರಟವರು ನನಗೆ ಡ್ರಾಪ್ ಕೊಟ್ಟರು, ಆ ದಿನ ಜಲಪಾತಕ್ಕೆ ಕಾರವಾರದ ಶಿವಾಜಿ B.C.A ಕಾಲೇಜಿನ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಬಂದಿದ್ದರು, ಅವರೊಡನೆ ಕುಣಿದು ಕುಪ್ಪಳಿಸಿ ಜಲಪಾತದಲ್ಲಿ ಸ್ನಾನಮಾಡಿದಾಗ ಅಲ್ಲಿವರೆಗೆ ಇದ್ದ ದಣಿವು, ಬೆವರು ಮಾಯವಾದವು.  ಜಲಪಾತದ ನೀರು ಎತ್ತರದಿಂದ ದುಮುಕುವಾಗ ಬೂದಿ ಸುರಿದಂತೆ ಕಾಣುತ್ತದೆ ಆದ್ದರಿಂದಲೇ ಈ ಜಲಪಾತಕ್ಕೆ ವಿಭೂತಿ ಜಲಪಾತ ಎಂಬ ಹೆಸರು ಬಂದಿದೆ. ಅಲ್ಲಿಯೇ ನನಗೆ ನೆದರ್‌ಲ್ಯಾಂಡಿನ 'ಕೆಂಪ್ & ಓಡಿನ್' ಪ್ರವಾಸಿ ದಂಪತಿಗಳು ಭೇಟಿಯಾದರು ಅವರ ಕಾರಿನಲ್ಲಿ 'ಮಾದನಗೆರಿ ಕ್ರಾಸ್' ತನಕ ಬಂದೆ, ಅಲ್ಲಿಂದ ನಾಗೇಂದ್ರ ಎಂಬ ಯುವಕ ಅಂಕೋಲಾ ಬಸ್ ನಿಲ್ದಾಣಕ್ಕೆ ಬೈಕಿನಲ್ಲಿ ತಂದುಬಿಟ್ಟ. ಅಲ್ಲಿಂದ ಹುಬ್ಬಳ್ಳಿಗೆ ಮರಳಿದೆ.

ಸಿಂಗಲ್ಲಾಗಿ ಚಾರಣ ಮಾಡುವ ಆಸೆಯೂ ನೆರವೇರಿತ್ತು, ಹೊಸ ಗೆಳಯರೊಂದಿಗೆ ಜಲಕ್ರೀಡೆಯಾಡುವ ಭಾಗ್ಯ ನನ್ನದಾಗಿತ್ತು, ಜೊತೆಗೆ  ಜೀವನದಲ್ಲೆನೋ ಹೊಸದು ಮಾಡಿದ ಖುಷಿ ಸಿಕ್ಕಿತ್ತು. ಮೊಬೈಲ್ ಚಾರ್ಜ ಇಲ್ಲದೆ ಸತ್ತಿದ್ದರಿಂದ ಒಂದೇ ಒಂದು ಫೊಟೊ ತಗೆಯಲಾಗಲಿಲ್ಲ, ಯಾಣಕ್ಕೆ ಹೋಗಿ ಬಂದ ಸಾಕ್ಷಿಯಾಗಿ ಬಸ್ ಟಿಕೆಟ್ಗಳಷ್ಟೆ ಜೇಬಿನಲ್ಲಿ ಕುಳಿತು ಕೊಂಡಿದ್ದವು. ನಾ ಹೋದ ಜಾಗದಲ್ಲಿದ್ದವರೆಲ್ಲಾ ಒಬ್ಬನೇ ಬಂದಿದ್ದಕ್ಕೆ 'ಏನ್ ಸಾರ್ ಲವ್ ಫೆಲ್ಯುರಾ?? ಅಂತ ಕೇಳುತ್ತಿದ್ದರು. ಹಾಗೆ ಕೇಳಿದವರಿಗೆಲ್ಲಾ ' ಹಂದಿಗಳು  ಗುಂಪಿನಲ್ಲಿ ಬರ್ತಾವೆ, ಸಿಂಹ ಸಿಂಗಲ್ಲಾಗಿ ಬರುತ್ತೆ' ಎಂಬ ರಜನೀಕಾಂತ್ರ ಡೈಲಾಗ್ ಹೊಡೆಯಬೇಕಾಗಿ ಬಂತು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.