Skip to main content

ಅನೈತಿಕತೆಗೆ ಒತ್ತು ನೀಡುತ್ತಿರುವ ಸಾಮಾಜಿಕ ತಾಣಗಳು

ಇಂದ ಹಕೀಂ
ಬರೆದಿದ್ದುSeptember 20, 2015
noಅನಿಸಿಕೆ

*ಅನೈತಿಕತೆಗೆ ಒತ್ತು ನೀಡುತ್ತಿರುವ ಸಾಮಾಜಿಕ ತಾಣಗಳು*

ಇದು ಇಪ್ಪತ್ತೊಂದನೇ ಶತಮಾನ. ಇಲ್ಲಿ ಕಂಪ್ಯೂಟರ್ ಗಳದ್ದೇ ಕಾರುಬಾರು. ಹಲವು ವಿಧಗಳಲ್ಲಿ ಹುಟ್ಟಿ ಬಂದ ಸಾಮಾಜಿಕ ತಾಣಗಳೇ ಇಂದು ವಿಶ್ವವನ್ನು ಆಳುತ್ತಿರುವಂತಿದೆ. ಮಾನವನ ಜೀವನದ ಹೆಚ್ಚಿನ ಸಮಯವು ಸಾಮಾಜಿಕ ತಾಣಗಳಲ್ಲೇ ವ್ಯಯಿಸಲ್ಪಡುತ್ತಿದೆ ಎಂಬುದು ನಗ್ನ ಸತ್ಯ. ಉಪಯೋಗ-ದುರುಪಯೋಗಗಳೆರಡನ್ನೂ ಜಂಟಿಯಾಗಿ ಕೊಂಡೊಯ್ಯುತ್ತಿರುವ ಈ ಸಾಮಾಜಿಕ ತಾಣವು ಕೆಲವು ರೀತಿಯಲ್ಲಿ ಸಮಾಜಕ್ಕೆ ಉಪಕಾರಿಯಾಗಿಯೂ, ಇನ್ನು ಕೆಲವು ರೀತಿಯಲ್ಲಿ ಸಮಾಜವನ್ನೇ ನಶಿಸುವಂತಹ ಮಾರಕಾಯುಧವಾಗಿಯೂ ಪ್ರಚಲಿತಗೊಂಡಿದೆ. ಹೊಸ ವಿಶ್ವವೊಂದನ್ನು ನಿರ್ಮಿಸುವಷ್ಟರಷ್ಟು ಸಾಮರ್ಥ್ಯದ ಈ ತಾಣಗಳು ಇರುವ ಒಂದು ವಿಶ್ವವನ್ನೇ ಕೆಡಹಿ ಹಾಕುವಲ್ಲಿ ಶ್ರಮಿಸುತ್ತಿದೆ ಎಂಬ ವಿಚಾರ ಖೇದನೀಯ..

ಆದುನಿಕ ತಂತ್ರಜ್ಞಾನ ಯುಗವೆಂಬ ನಾಮದಲ್ಲಿ ಗುರುತಿಸಲ್ಪಡುವ ಈ ಶತಮಾನವು ಹಲವು ಬದಲಾವಣೆಗೆ ಸಾಕ್ಷಿಯಾಗಿದೆ. ವಿಶ್ವದ ಸರ್ವ ಕಾರ್ಯ-ಕಾರಣಗಳು ತಂತ್ರಜ್ಞಾನಗಳಿಂದಾಗಿಯೇ ಇಂದಿಲ್ಲಿ ನಡೆಯುತ್ತಿದೆ. ಆಧುನಿಕ ಸವಲತ್ತು, ಗಣತಂತ್ರ ವ್ಯವಸ್ಥೆಗಳಿಂದಾಗಿ ಪುರಾತನಗಳು ಇತಿಹಾಸವಾಗಿದೆ. ಹುಟ್ಟಿನಿಂದ ಸಾವಿನವರೆಗೂ, ಬೇಕಿದ್ದಲ್ಲಿ ಹುಟ್ಟುವ ಮೊದಲೂ, ಸಾವಿನ ಬಳಿಕವೂ ತಂತ್ರಜ್ಞಾನಗಳಿಂದಲೇ ವ್ಯವಹಾರ-ಅವ್ಯವಹಾರಗಳು ನಡೆಯುತ್ತಿದೆ. ಆಧುನಿಕತೆಗಳಿಂದ ಬದಲಾವುಗೊಂಡು ಮಿಂಚುತ್ತಿರುವ ಈ ಯುಗವೊಂದರಲ್ಲಿ ತಂತ್ರಜ್ಞಾನಗಳಿಲ್ಲದ ಜೀವನವು ಪ್ರಯಾಸದಾಯಕವೂ, ಅನಿರೀಕ್ಷಿತವೂ ಆಗಿದೆ. ಹಳ್ಳಿಯಿಂದ ದಿಲ್ಲಿಯವರೆಗೂ, ಮನೆ ಹಿತ್ತಲಿಂದ ವೈಟ್ ಹೌಸ್ ವರೆಗೂ ಆಧುನಿಕತೆಗಳೇ ತುಂಬಿ ತುಳುಕುತ್ತಿದೆ. ಒಟ್ಟಾರೆ ಈ ಯುಗದಲ್ಲಿನ ಜೀವನವು ರಸದಾಯಕವೂ, ಅಷ್ಟೇ ಮಾರಕವೂ ಆಗಿರುತ್ತದೆ.

ಆಧುನಿಕತೆಯಿಂದಾಗಿ ಪ್ರಭಲಗೊಂಡ ಹಲವುಗಳಲ್ಲಿ ಒಂದು ಇಂಟರ್ನೆಟ್.
ಹಲವು ಬಿಂದುಗಳನ್ನು ಒಂದಾಗಿ ಸಂಪರ್ಕಿಸುವ ಜಾಲವಾಗಿರುವ ಈ ಅಂತರ್ಜಾಲವು ಆಧುನಿಕ ತಂತ್ರಜ್ಞಾನದಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದೆ, ನೀಡುತ್ತಿದೆ. ಕಛೇರಿ ಕೆಲಸದಿಂದ ಸಾಹಿತ್ಯ ಲೋಕಕ್ಕೂ ಈ ಅಂತರ್ಜಾಲ ಪಟ್ಟಾಗಿ ನಿಂತಿದೆ. ಸಮಾಜಕ್ಕೆ ಒಳಿತನ್ನು-ಕೆಡುಕನ್ನು ಮನವರಿಕೆ ಮಾಡಿ ಕೊಡುವಲ್ಲಿಯೂ ಅಂತರ್ಜಾಲದ ಪಾತ್ರ ಶ್ಲಾಘನೀಯ.
ಅನಿರ್ದಿಷ್ಟ ವಿಧಗಳಲ್ಲಿ ಪುಳಕಿತಗೊಂಡ ಅಂತರ್ಜಾಲ ತಾಣಗಳ ಪೈಕಿ ಸಾಮಾಜಿಕ ತಾಣವೂ ಒಂದು. ಸಮಾಜದ ಉನ್ನತಿಗಾಗಿಯೇ ಹುಟ್ಟಿಕೊಂಡವುಗಳು.

ಇಂದು ಅಪರಿಮಿತ ಸಂಖ್ಯೆಯಲ್ಲಿ ಸಾಮಾಜಿಕ ಜಾಲ ತಾಣಗಳು ಪ್ರಚಲಿತದಲ್ಲಿದ್ದರೂ, ಕೆಲವೊಂದು ಭಾರೀ ಸುದ್ದಿಯಲ್ಲಿದೆ. ಫೇಸ್ಬುಕ್, ವಾಟ್ಸಾಪ್ ಗಳಂತಹ ಕೆಲವುಗಳು ಯುವ ಜನತೆಯ ಜೀವನ ಭಾಗವಾಗಿ ಪರಿಣಮಿಸಿದೆ. ಅನ್ನವಿಲ್ಲದಿದ್ದರೂ ಜೀವಿಸಬಹುದು; ಫೇಸ್ಬುಕ್, ವಾಟ್ಸಾಪ್ ಗಳಿಲ್ಲದೆ ಜೀವನ ಸಾಧ್ಯವೇ ಇಲ್ಲ ಎಂಬ ಸಿದ್ಧಾಂತದೊಂದಿಗೆ ಬದುಕುವವರೇ ಹೆಚ್ಚು. ಈ ಹುಚ್ಚಲ್ಲೇ ಸೌಹೃದತ್ವವನ್ನು ವೃದ್ಧಿಸಲು ಪ್ರಯತ್ನಿಸುತ್ತಾರೆ. ಆದರೆ ಅದಕ್ಕೆ ಕೆಲವೊಂದು ರಾದ್ದಾಂತಗಳು ಅಡ್ಡಿಪಡಿಸುತ್ತದೆ. ಧರ್ಮದ ಬಗ್ಗೆ ಗಂಧಗಾಳಿಯಿಲ್ಲದ ಕೆಲವೊಂದು ಧರ್ಮದ್ರೋಹಿಗಳು ಧರ್ಮದ ಹೆಸರಿನಲ್ಲಿ ಇಲ್ಲ-ಸಲ್ಲದ ವಿಚಾರಗಳನ್ನು ಹರಿಯಬಿಟ್ಟು ಸಮಾಜದೊಳಗೆ, ಸಾಮಾಜಿಕ ತಾಣದೊಳಗೆ ಗೌರವಕ್ಕೆ ಕುಂದು ತರುವುದನ್ನೇ ಹವ್ಯಾಸವಾಗಿಸಿದವರು ಸೌಹಾರ್ದತೆಗೆ ನಾಂದಿ ಹಾಡಿಸುತ್ತದೆ. ಜಾತಿ-ಧರ್ಮದ ಹೆಸರಲ್ಲಿ, ಭಿನ್ನಾಭಿಪ್ರಾಯಗಳ ಭಿನ್ನತೆಯಲ್ಲಿ ಗದ್ದಲಗಳನ್ನು ಸೃಷ್ಟಿಸುವುದರಲ್ಲೇ, ಇತರರ ತೊಂದರೆಯಲ್ಲಿ ಖುಷಿ ಕಾಣುವ ಕೆಲವರಿಂದ ಸಮಾಜ ನಾಶವಾಗುತ್ತಿದೆ.

ಸೌಹಾರ್ದತೆಯನ್ನು ವೃದ್ಧಿಸಬೇಕಾಗಿದ್ದ ಸಾಮಾಜಿಕ ತಾಣಗಳು ಅನೈತಿಕತೆಯ ತಾಂಡವಾಡುತ್ತಿದೆ ಅನ್ನುವುದು ಬೇಸರದ ವಿಚಾರ. ಸಂಸ್ಕೃತಿಯನ್ನು, ಆಚಾರ-ವಿಚಾರಗಳನ್ನು ಅನುಚಿತ ರೀತಿಯಲ್ಲಿ ಚಿತ್ರಿಸಿ ಕಲಹವನ್ನು ಸೃಷ್ಟಿಸುತ್ತಾ ಕಾಲ ಕಳೆಯುವವರು ಬಹಳಷ್ಟು ಮಂದಿ.
2+2=5 ಎಂಬ ರೀತಿಯಲ್ಲಿ ಒಂದು ಸತ್ಯ ವಿಚಾರಕ್ಕೆ ಇಲ್ಲದ ಹಳಸಿದ ಮಸಾಲೆಗಳನ್ನು ಸೇರಿಸಿ ಸಾಮಾಜಿಕ ತಾಣಗಳಲ್ಲಿ ತೇಲಿಬಿಟ್ಟು ಜನರೆಡೆಯಲ್ಲಿನ ಪರಸ್ಪರ ಭಿನ್ನತೆಯನ್ನು ಹುಟ್ಟು ಹಾಕುವಲ್ಲಿ ಹಲವರು ಸಫಲರಾಗಿದ್ದಾರೆ/ಸಫಲರಾಗುತ್ತಿದ್ದಾರೆ.

ಇದರೊಂದಿಗೆ ನೈತಿಕತೆಯಿಂದ ಮಿನುಗಬೇಕಿದ್ದ ಸಾಮಾಜಿಕ ತಾಣಗಳನ್ನು ಅಶ್ಲೀಲತೆಗಾಗಿ ಬಳಸುವವರೂ ವಿರಳವಾಗಿದ್ದಾರೆ. ಕಾಮ-ಕ್ರೋಧ-ಮದ-ಮೋಹ-ಮತ್ಸರ ಇತ್ಯಾದಿಗಳ ತೋರ್ಪಡಿಕೆಗಾಗಿಯೂ ಸಾಮಾಜಿಕ ತಾಣಗಳು ಬಳಕೆಯಾಗುತ್ತಿದೆ ಎಂಬುದು ಸಾಮಾಜಿಕ ತಾಣಗಳ ಸಾಧನೆಗೆ ಸಂದ (ಅ)ಗೌರವ. ಅಂದ ಮೇಲೆ ಎಲ್ಲರೂ ಹಾಗಲ್ಲ. ಕೊಳೆತ ಹಣ್ಣಿನ ರಾಶಿಯಲ್ಲಿ ಒಂದಾದರೂ ಒಳ್ಳೆಯದು ಇರಬಾರದೆಂದಿಲ್ಲ. ಆದರೆ ಹೆಚ್ಚಾಗಿ ಇರುವುದು ಕೊಳೆತವುಗಳೇ.. ಇಲ್ಲೂ ಅಷ್ಟೇ. ಸಮಯ ಸಾಗಾಟಕ್ಕಾಗಿ, ಪ್ರತಿಭೆಗಳ ತೋರ್ಪಡಿಕೆಗಾಗಿ, ಸಾಮಾಜಿಕ ಸಾಧನೆಗಳಿಗಾಗಿ, ಸೇವಾ ಕಾರ್ಯಗಳಿಗಾಗಿ, ಚರ್ಚೆಗಳಿಗಾಗಿ, ಭಾವನೆಗಳ ಹಂಚಿಕೆಗಾಗಿ ಹೀಗೆ ಹಲವಾರು ಸದುದ್ದೇಶಗಳಿಗಾಗಿ ಸಾಮಾಜಿಕ ತಾಣಗಳನ್ನು ಬಳಸುವರೂ ಹೆಚ್ಚಾಗಿಯೇ ಇದ್ದಾರೆ. ಸಮಾಜದೊಳಗೆ ಇಂದು ನಡೆಯುವ ಕಲಹಗಳಿಗೆ ಸಾಮಾಜಿಕ ತಾಣಗಳೂ ಕಾರಣಕರ್ತ ಎಂಬುದು ಇನ್ನೊಂದು ವಿಚಾರ.

ಇನ್ನಾದರೂ ಸಮಾಜ ಒಂದಲ್ಪ ಬದಲಾಗಬೇಕು. ದುರುದ್ದೇಶಗಳನ್ನು ಬದಿಗೊತ್ತಿ ಈ ತಂತ್ರಜ್ಞಾನಿಕ ವರವನ್ನು ಸದುದ್ದೇಶಕ್ಕಾಗಿ ಉಪಯೋಗಿಸಲು ಸಮಾಜದ ಜನತೆ ಆರಂಭಿಸಬೇಕು. ಸಮಾಜದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಪೂರ್ಣವಿರಾಮ ಹಾಕಿ ನೈತಿಕತೆಯ ನೀತಿಯನ್ನು ಎಲ್ಲೆಡೆ ಹರಿಯಲು ಸಾಮಾಜಿಕ ತಾಣಗಳು ಬಳಕೆಯಾಗಬೇಕು. ಇದರಿಂದಾಗಿ ದೇಶದ ಜನರು ಸಂಸ್ಕೃತಿಯನ್ನು ಅರಿಯುವಂತಾಗಬೇಕು.. ಇದುವೇ ನಮ್ಮ ಮುಂದಿರುವ ಪ್ರಮುಖ ಗುರಿಯಾಗಬೇಕು..

#ಹಕೀಂ.ಪದಡ್ಕ

ಲೇಖಕರು

ಹಕೀಂ

ಹಕೀಂ.ಪದಡ್ಕ

ನಾನು ನಾನೇ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.