ಮಕ್ಕಳಾಟ
ಶರತ್ ಅಂದು ಕೊಂಚ ತಡವಾಗಿಯೇ ಎದ್ದಿದ್ದ. ಮದುವೆಯಾಗಿ ಎರಡು ದಿನ ಆಗಿತ್ತಷ್ಟೇ. ಪತ್ನಿ
ಸುಷ್ಮಾ ಚಹಾ ಮಾಡುತ್ತಿದ್ದಳು. ತಾಯಿ ತನ್ನ ಬಾಲ್ಯದ ಗೆಳತಿಯೊಡನೆ ಏನೋ ಚರ್ಚೆ
ವಿಚರ್ಚೆಯಲ್ಲಿ ತೊಡಗಿದ್ದರು. ಊರಲ್ಲಿದ್ದ ಬಂಗಾರ ಬೆಳೆವ ಗದ್ದೆಯನ್ನು ಅತ್ಯಂತ
ಅವಸರದಿಂದ ಮಾರಿದ್ದ ಪತಿರಾಯರ ಮೇಲಿನ ಮುನಿಸು ಅಲ್ಲಿ ಆಗಾಗ ವ್ಯಕ್ತವಾಗುತ್ತಿತ್ತು.
ನರಹರಿರಾಯರ ಕಾಲಕ್ಕೆ ಭೂಮಿ ಬಂಗಾರ ಕೊಡುತ್ತಿತ್ತು ಅನ್ನೋದು ನಿಜ. ಆದರೆ ಸುತ್ತ
ಮುತ್ತೆಲ್ಲ ನೀರಿಗಾಗಿ ಕೊರೆದ ತೂತುಗಳ ದೆಸೆಯಿಂದಾಗಿ ರಾಯರ ಕೆರೆ ಬತ್ತಿ ಒಣಗಿತ್ತು.
ಬೇಸಿಗೆಯಲ್ಲಿ ನೀರಿನ ಕೊರತೆಯಿಂದಾಗಿ ಫಸಲು ಕೊಡುತ್ತಿದ್ದ ಅಡಕೆ ಮರಗಳು ಸೊರಗಿ ಬಾಡಿ
ಸಾಯತೊಡಗಿದ್ದವು. ಯಾವ ಗೊಬ್ಬರ ಹಾಕಿದರೇನು? ಎಷ್ಟು ಪೋಷಣೆ ಮಾಡಿದರೇನು? ನೀರೇ
ಇಲ್ಲದಿದ್ದರೆ?
ಪದ್ಮಮ್ಮನ ವಿರೋಧದ ನಡುವೆಯೂ ರಾಯರು ಆರು ಕಾಸಿನ ಆಸ್ತಿಯನ್ನು ಮೂರು ಕಾಸಿಗೆ ಮಾರಿ
ತಮ್ಮ ಏಕೈಕ ಪುತ್ರ ಶರತ್ ನ ಸುಂದರ ಭವ್ಯ ಬಂಗಲೆಗೆ ಎಂಟ್ರಿ ಪಡೆದಿದ್ದರು. 60-40 ರ ಸೈಟ್. ಸುಂದರವಾದ ಮನೆ. ಕೈಗೊಬ್ಬ ಕಾಲಿಗೊಬ್ಬ ಎಂಬಂತೆ ಆಳುಗಳು. ಕೈತುಂಬಾ ಸಂಪಾದನೆ
ಇರುವ ಸ್ವಂತ ಫ್ಯಾಕ್ಟ್ರಿ. ಇಷ್ಟಿದ್ದರೂ ಆರು ವರ್ಷದ ಹಿಂದೆ ಮಾರಿದ ಆ ಭೂಮಿಯ ಚಿಂತೆ ತಾಯಿಯನ್ನು ಈಗಲೂ ಕಾಡುತ್ತಿರುವುದು ಶರತ್ ಗೆ ವಿಸ್ಮಯ ಹುಟ್ಟಿಸಿತ್ತು.
ಅವನು ಹಾಗೇ ಮೈಮುರಿಯುತ್ತಾ ಎದ್ದು ಅಂಗಳದಾಚೆ ನಡೆದ. ಅಲ್ಲಿ ಏಳೆಂಟು ಮಕ್ಕಳು. ಪಕ್ಕದ
ಮನೆಯವು, ಊರಿಂದ ಮದುವೆಗೆಂದು ಬಂದವು, ಎಲ್ಲ ಸೇರಿದ್ದವು. ಶಾಲೆಗೆ ರಜಾ. ಹಾಗಾಗಿ ಎಲ್ಲ
ಆಟ ಆಡೋದಕ್ಕೆ ಒಂದೆಡೆ ಸೇರಿದ್ದಾರೆ. ಎಂಟರಿಂದ ಹನ್ನೆರಡರ ಹರೆಯದ ಮಕ್ಕಳು . ಗಂಡು
ಹೆಣ್ಣು ಎಲ್ಲ ಸೇರಿವೆ. ಊರಲ್ಲಿ ತಾನು ಬಾಲ್ಯ ಕಳೆದ ನೆನಪಾಯಿತು ಶರತ್ ಗೆ. ಮಕ್ಕಳ ಆ
ಮುದ್ದು ಮುಖದ ಮುಗ್ದ ನಡತೆಯ ಆಟವನ್ನು ನೋಡಿದರೆ ಬೇರೇನೂ ಬೇಕೆನಿಸದು. ಟಿವಿಯ ಯಾವ
ಪ್ರೋಗ್ರಾಮ್ ಕೂಡಾ ಇಂತಾ ಸುಂದರ ಕಾರ್ಯಕ್ರಮ ಬಿತ್ತರಿಸಲು ಸಾಧ್ಯವಿಲ್ಲ.
ಇಲ್ಲಿ ವಂಚನೆ ಇಲ್ಲ. ನಟನೆ ನಾಟಕೀಯತೆ ಇಲ್ಲ. ಏನಿದ್ದರು ನ್ಯಾಚುರಲ್. ಮಕ್ಕಳ
ಆಟವನ್ನು ಗಮನಿಸುವ ಸಲುವಾಗಿ ಮತ್ತೆ ಒಳಬಂದು ತನ್ನ ಬೆಡ್ ರೂಂ ಗೆ ಹೋದ ಶರತ್.
ಕಿಟಕಿಯನ್ನು ತುಸು ಓರೆ ಮಾಡಿ ಮಕ್ಕಳಿಗೆ ಕಾಣದಂತೆ ಮರೆಯಾಗಿ ಕುಳಿತ.
ಪಕ್ಕದ ಮನೆಯ ಶ್ವೇತಾ ಸೀರೆ ಉಟ್ಟಿದ್ದಳು. ಊರಿಂದ ಬಂದಿದ್ದ ಗಿರಿಜತ್ತೆಯ ಮೊಮ್ಮಗ
ಮಯೂರ್ ಮದುಮಗನಾಗಿ ಅಲಂಕಾರಗೊಂಡಿದ್ದ.
'ಓಹ್! ಇದು ಮದುವೆಯಾಟ' ಶುಷ್ಮಾ ಚಹಾ ತಗೊಂಡು ಬೆಡ್ ರೂಮಿಗೇ ಬಂದಳು. ಶರತ್
ಸನ್ನೆಯಿಂದಲೆ 'ಮಾತಾಡಬಾರದೆಂ'ಬಂತೆ ಸೂಚಿಸಿದ.
ಶುಷ್ಮಾ ಶರತ್ ನ ಪಕ್ಕದಲ್ಲೇ ಕುಳಿತು ಮಕ್ಕಳ ಆಟ ಗಮನಿಸತೊಡಗಿದಳು. ಮದುಮಗ ಮದುಮಗಳು
ಮಂಟಪಕ್ಕೆ ಬಂದರು. ಬ್ರಾಹ್ಮಣ ವೇಷಧಾರಿ ಮಂತ್ರ ಮಣಮಣಿಸಿದ. ವಾಲಗದವರು ಊದಿದರು.
ಮಯೂರ್ ಶ್ವೇತಾಳ ಕೊರಳಿಗೆ ಕರಿಮಣಿ ಕಟ್ಟಿದ.
ಶರತ್ಗೆ ಅಚ್ಚರಿಯಾಗಿತ್ತು. "ಮಕ್ಕಳು ಎಷ್ಟೊಂದು ಕರಾರುವಾಕ್ ಮದುವೆ ಆಟ
ಕಾಪಿ ಮಾಡಿ ಆಡುತ್ತಿವೆ!? ಅಬ್ಬಾ! ನಮ್ಮ ಮದುವೆಯ ಚಿತ್ರಣವೇ ಇದು"
"ಹೌದು ರೀ, ಎಷ್ಟು ಸೊಗಸಾಗಿದೆ ಅಲ್ವಾ?"
" ನೋಡು ಶುಷ್ಮಾ! ಮದುಮಗ ಕಾಶೀಯಾತ್ರೆಗೆ ಹೊರಟ ನೋಡು"
ಶುಷ್ಮಾ ಕೂಡಾ ಎಲ್ಲ ಮರೆತು ಈ ಆಟ ನೋಡೋದರಲ್ಲಿ ತಲ್ಲೀಣಳಾದಳು..
ಗತ ಜೀವನದ ನೆನಪೊಂದು ಅವಳಂತರಂಗವ ಹೊಕ್ಕು ಎದೆ ಹಿಂಡುವಂತಾ ವೇದನೆ ಆಗತೊಡಗಿತು.
ಅವಳ ಅಂದಿನ ಆ ಬಾಲ್ಯದ ಮದುವೆ ಆಟದಲ್ಲಿ ಅವಳನ್ನು ಮದುವೆ ಆದವನು ಹದಿನಾರರ ಪೋರ.
ಎಲ್ಲ ಅವನ ವಯಸ್ಸಿನ ಗೆಳೆಯರೇ. ಶುಷ್ಮಾ ಒಬ್ಬಳೇ ಚಿಕ್ಕವಳು. ಯಾರೂ ಇಲ್ಲದ ಸಮಯ ಶುಷ್ಮಾಳ
ಮನೆಯಲ್ಲೇ ಆಡಿದ ಆಟವಿದು. ಅವರ ಮದುವೆ ಆಟದಲ್ಲಿ ಅಂದು ನಿಷೇಕ ಪ್ರಸ್ತದ ದೃಶ್ಯವೂ
ಇತ್ತು! ಮದುವೆ ಆದ ಗಂಡು ಕೋಣೆಗೆ ಹೋಗುವುದು. ಆ ಮೇಲೆ ಮದುಮಗಳು ಕೋಣೆಗೆ ಹಾಲು
ತಗೊಂಡು ಹೋಗುವುದು.. ಮುಗ್ದೆ ಶುಷ್ಮಾ ಅದನ್ನೆಲ್ಲ ಅಭಿನಯಿಸಿದ್ದಳು. ಅವಳು ಒಳ
ಹೋಗುವುದಕ್ಕೂ ಹೊರಗಿದ್ದ ಗೆಳೆಯರು ಬಾಗಿಲು ಮುಚ್ಚುವುದಕ್ಕೂ ಅವರಜ್ಜಿ ಪೇಟೆಯಿಂದ
ಮನೆಗೆ ಬರುವುದಕ್ಕು ಒಂದಕ್ಕೊಂದು ಎನಿಸಿ ಇಟ್ಟಂತೆ ಸಮಯ ಹೊಂದಿಕೆಯಾಗಿತ್ತು.
"ಇಲ್ಲೇನ್ ಮಾಡ್ತಿದ್ದೀರೋ?"
" ಮದುವೆ ಆಟ ಆಡ್ತಾ ಇದೀವಿ ಅಜ್ಜೀ"
ಶುಷ್ಮಾ ಎಲ್ಲೋ?"
"ಅವಳೇ ಮದುಮಗಳು ಅಜ್ಜೀ ಮದುಮಗನ ರೂಮಿಗೆ ಹೋಗಿದಾಳೆ"
ಅಜ್ಜಿಗೆ ಪಾದದಿಂದ ನೆತ್ತಿ ತನಕ ಉರಿಯತೊಡಗಿತು. ಮಕ್ಕಳ ಈ ನಿಷ್ಕಳಂಕ ಮಾತಿಗೆ ಅಜ್ಜಿ
ಕಾಮದ ಲೇಪನ ಬೆರೆಸಿ ಅಪಾರ್ಥ ಕಲ್ಪಿಸಿಯೇ ಬಿಟ್ಟಿತ್ತು. ಒಡನೆಯೇ ಬಾಗಿಲು ನೂಕಿ ಒಳ ನುಗ್ಗಿತ್ತು.
ಅಲ್ಲಿ ನೋಡುವುದೇನು? ಮಕ್ಕಳಿಬ್ಬರೂ ಅಕ್ಕ ಪಕ್ಕ ಕುಳಿತು ಚೌಕಾಬಾರ ಆಡುತ್ತಿದ್ದರು.
ಅಜ್ಜಿ ಅದೊಂದನ್ನೂ ಗಮನಿಸದೇ ಮದುಮಗನಿಗೆ ಪೊರಕೆಯಿಂದ ಚೆನ್ನಾಗಿ ಬಾರಿಸಿತು. ಭಯಗೊಂಡ
ಮಕ್ಕಳು ಓಡಿಹೋದರು. ಅಜ್ಜಿ ಅಷ್ಟಕ್ಕೇ ಸುಮ್ಮನಾಗದೇ "ತೆಗೆಯೇ ನಿನ್ನ..."
ಎಂದು ಸುಷ್ಮಾಳ ನಿಕ್ಕರ್ ತೆಗೆಸಿ, ಮುಟ್ಟಿ ತಟ್ಟಿ ಪರೀಕ್ಷಿಸಿತು.
ಅಜ್ಜಿಯ ಆ ಪರೀಕ್ಷೆಯ ಹಿಂದಿನ ಪತ್ತೆದಾರಿಕೆಯ ಪರಿ ಅರ್ಥ ಆದದ್ದು ಶುಷ್ಮಾ
ಪಿಯುಸಿಗೆ ಸೇರಿದಾಗಲೇ. ಗೆಳತಿಯರಿಂದ, ಪುಸ್ತಕದಿಂದ..
ಮಾಹಿತಿಗಳು ದೊರೆತಾಗ ಶುಷ್ಮಾ ಮೊದಲ ಬಾರಿಗೆ ನಾಚಿದ್ದಳು. ಅಂದಿನ ಆ ಮದುಮಗ ಅವಳ ಮನ
ಸೇರಿ ಕಾಡಲು ತೊಡಗಿದ. ಅವನನ್ನು ನೋಡಲೇಬೇಕು. ಮಾತಾಡಲೇಬೇಕು. ಎಂಬ ನಿರ್ಧಾರ ದಿನದಿಂದ
ದಿನಕ್ಕೆ ಬೆಳೆದು ಒಂದು ದಿನ ಅವನ ಮನೆ ಹುಡುಕುತ್ತಾ ಹೊರಟಳು. ಅವನೀಗ ದೊಡ್ಡ ಶ್ರೀಮಂತ.
ತಿಂಗಳಲ್ಲೇ ಲಕ್ಷಾಂತರ ರುಪಾಯಿ ವ್ಯವಹಾರ ಇರುವ ತರುಣ. ಆದರು ಶುಷ್ಮಾಳನ್ನು ಆದರದಿಂದ ಸ್ವಾಗತಿಸಿದ. ಮದುವೆ ಆಟದ ನೆನಪನ್ನು ಆತನೇ
ನೆನಪಿಸಿ ಮನಸಾರೆ ನಕ್ಕು ಬಿಟ್ಟ.
"ಅರೆ ನಿಮಗದು ನೆನಪುಂಟಾ!"
" ಏನು ನೆನಪಿಲ್ಲದೇ? ನಿಮ್ಮಜ್ಜಿ ಕೊಟ್ಟ ಏಟಿಗೆ ನಮ್ಮಮ್ಮನೂ ನಾಲ್ಕು ಸೇರಿಸಿದ್ದರು. ಮೂರು
ದಿನ ಜ್ವರ ಬಂದಿತ್ತು"
ಹೀಗೆ ಶುರುವಾದ ಮರುಪರಿಚಯ ಅವರನ್ನು ಅಗಲಲಾರದ ಪ್ರೇಮಿಗಳನ್ನಾಗಿಸಿತ್ತು. ಹಿರಿಯರ ಒಪ್ಪಿಗೆಯೂ ಸಿಕ್ಕಿತ್ತು.
ಆದರೆ ವಿಧಿಯಾಟವೇ ಬೇರೆಯಿತ್ತು. ಹಪ್ತಾ ಕೊಡಲು ನಿರಾಕರಿಸಿದನೆಂಬ ಕಾರಣಕ್ಕೆ ಆತನನ್ನು
ಹಾಡು ಹಗಲೇ ಆತನ ಅಂಗಡಿ ಎದುರೇ ಕೊಚ್ಚಿ ಕೊಂದಿದ್ದರು ಪಾತಕಿಗಳು. ಶುಷ್ಮಾಗೆ ಹುಚ್ಚು
ಹಿಡಿಯುವುದೇನೋ ಎಂಬಂತ ಸಂಕಟ. ರಾತ್ರಿ ಹಗಲೂ ದುಃಖ, ವೇದನೆ, ಬದುಕಿಗೇ ಅಂತ್ಯ ಹಾಡಲೇ?
ಎಂದವಳು ಚಿಂತಿಸುತ್ತಿರುವಾಗಲೇ ಅವಳ ಬದುಕಲ್ಲಿ ತಂಗಾಳಿಯಾಗಿ ಸುಳಿದು ತಂಪರೆದವನೇ
ಶರತ್. ಶುಷ್ಮಾಳ ಬದುಕಲ್ಲಿ ಭರವಸೆಗಳ ತುಂಬಿ ಅವಳಂತರಂಗಕ್ಕೆ ಹೊಕ್ಕು ಗದ್ದುಗೆ ಏರಿ
ಇಂದು ಅವಳ ಬಾಳಲ್ಲಿ ಅಧಿಕೃತ ಯಜಮಾನನಾಗಿ ಅವಳ ದುಃಖ ನೀಗಿದವನು, ಬಾಳು ಬೆಳಗಿದವನು ಈ
ಶರತ್.
"ರೀ ಬೇಡರೀ, ಕಾಶೀಯಾತ್ರೆಗೇ ಕೊನೆಗೊಳ್ಳಲಿ. ಆ ಆಟ ಸಾಕು ನಿಲ್ಲಿಸಿರೀ, ಹೋಗ್ರೀ ಪ್ಲೀಸ್"
"ಶುಷ್ಮಾ, ಇಷ್ಟೇ ಆಯಿತಂತೆ ಇನ್ನೊಂದಿಷ್ಟು ನೋಡೋಣ ಬಿಡೆ. ಬೇಕೆಂದರೆ ಸಿಕ್ಕೀತೇ ಆ
ಮುಗ್ಧರ ಆಟ?"
ಶರತ್ ಶುಷ್ಮಾಳನ್ನು ಸಮಾಧಾನಿಸಿದಷ್ಟೂ ಶುಷ್ಮಾಳ ಸಂಕಟ ಹೆಚ್ಚಾಗುತ್ತಲೇ ಇತ್ತು.
ಮಕ್ಕಳು ಅವುಗಳ ಪಾಡಿಗೆ ಮದುವೆ ಆಟ ಆಡುತ್ತಲೇ ಇದ್ದವು.
ಸಾಲುಗಳು
- 415 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ