Skip to main content

ವೈದ್ಯೊ ನಾರಾಯಣಹರಿ..?

ಇಂದ Praveen kumar
ಬರೆದಿದ್ದುMay 17, 2015
noಅನಿಸಿಕೆ

    ರೀ... ಬೇಗ ಬನ್ರೀ ಇಲ್ಲಿ ದಿವ್ಯಾ ಯಾಕೊ ವದ್ದಾಡ್ತಿದಾಳೆ..ಸರಿಯಾಗಿ ಉಸಿರಾಡ್ತಿಲ್ಲ..! ಬೆಳಿಗ್ಗೆ ತಾನೆ ಹೆಂಡತಿಯ ತವರು ಮನೆಯಲ್ಲಿ ಪೇಪರ್ ಓದುತ್ತಿದ್ದ ನನ್ನ ಸ್ನೇಹಿತ ಹೆಂಡತಿಯ ಮಾತಿಗೆ ಎದ್ದು ಬಿದ್ದು ಒಳಗೊಡಿದ್ದಾನೆ..  ಯಾಕೆ ಪುಟ್ಟಿ ಯಾಕಮ್ಮ ಎನಾಯ್ತು..?  ಅಂತ ತನ್ನ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಸುಧಾರಿಸಲು ಪ್ರಯತ್ನಿಸಿದ್ದಾನೆ..  ಮಗುಗೆ ಉಸಿರಾಡಲು ತುಂಬಾ ಕಷ್ಟವಾಗ್ತಿದೆ.. ಮಗುವಿನ ಗಂಟಲಲ್ಲಿ ಎನೊ ಸಿಕ್ಕಿ ಹಾಕಿಕೊಂಡಿದೆ ಅನ್ನೊದು ಅವನಿಗೆ ಅರ್ಥವಾಗಿದೆ.. ದಂಪತಿಗಳಿಬ್ಬರು ಗಾಬರಿಗೆ ಬಿದ್ದು ಎನು ಮಾಡಬೇಕು ಅನ್ನೊದೆ ಅವರಿಗೆ ಗೊತ್ತಾಗ್ಲಿಲ್ಲ.. ಅತ್ತೆ, ಮಾವ, ಅಕ್ಕ ಪಕ್ಕದ ಮನೆಯವರು ಎಲ್ರೂ ಸೇರಿ ಪ್ರಯತ್ನಪಟ್ಟಿದ್ದಾರೆ..ಊಹು.. ಗಂಟಲಲ್ಲಿ ಸಿಕ್ಕಿಕೊಂಡಿದ್ದನ್ನು ತೆಗೆಯಲು ಆಗಲೆ ಇಲ್ಲ.

ತಕ್ಷಣ ದಂಪತಿಗಳಿಬ್ಬರು ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ.ಅಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿ ಮಗು ಅಡಕೆ ಚೂರು ತಿಂದಿದೆ ಅದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ.. ಇನ್ನೆರಡು ತಾಸಿನಲ್ಲಿ  ಮಗುವನ್ನು ಜಿಲ್ಲಾ ಕೇಂದ್ರದ ಅಸ್ಪತ್ರೆಗೆ ಕರೆದೊಯ್ಯದಿದ್ದರೆ ನಿಮ್ಮ ಮಗು ಬದುಕೊದೆ ಕಷ್ಟ... ಅಂದು. ಜಿಲ್ಲಾ ಕೇಂದ್ರದ ಪ್ರಸಿದ್ದ ಅಸ್ಪತ್ರೆಯ ವಿಳಾಸ ನೀಡಿದ್ದಾರೆ..  ಹೌಹಾರಿದ ದಂಪತಿಗಳಿಬ್ಬರು ಮಗುವಿನ ಸಮೇತ ಎದ್ದೇನೊ...ಬಿದ್ದೇನೊ... ಅಂತ ಜಿಲ್ಲಾ ಕೇಂದ್ರದ ಅಸ್ಪತ್ರೆಗೆ ದೌಡಾಯಿಸಿದ್ದಾರೆ.. ತನ್ನ ಹೆಂಡತಿಯ ತವರೂರಿನಿಂದ ಆ ಅಸ್ಪತ್ರೆ ಸರಿಯಾಗಿ ಎರಡು ತಾಸು ಪ್ರಯಾಣದ  ದೂರದಲ್ಲಿದೆ. ಬಾಡಿಗೆ ಕಾರು ಮಾಡಿಕೊಂಡು ಆ ಆಸ್ಪತ್ರೆಗೆ ಮಗುವನ್ನು ಕರೆತಂದು ಅಡ್ಮಿಟ್ ಮಾಡಿದ್ದಾರೆ.   

   ಅದೊಂದು ಜಿಲ್ಲಾ ಕೇಂದ್ರ ಪಟ್ಟಣದ ಪ್ರಸಿದ್ದ ಆಸ್ಪತ್ರೆ.. ಹೈ-ಟೆಕ್ ಬೇರೆ. ಹೈ-ಟೆಕ್ ಅಂದ್ರೆ ಕೇಳಬೇಕೆ.. ದುಬಾರಿ ವೆಚ್ಚದ ಚಿಕಿತ್ಸಾ ಕೇಂದ್ರ  ( ಸುಲುಗೆ ಕೇಂದ್ರ..? ). ಅಲ್ಲಿರೊರೆಲ್ಲಾ ದೊಡ್ಡ ದೊಡ್ಡ  ವೈದ್ಯರೆ..! ಮಗುವನ್ನು ಬರೊಬ್ಬರಿ ಹದಿನೆಂಟು ದಿನಗಳವರೆಗೆ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಿದ್ರು..! ಅದರಲ್ಲಿ ಐದು ದಿನ ಐ ಸಿ ಯು ನಲ್ಲಿ..!  ದಂಪತಿಗಳಿಬ್ಬರೂ ಎನೂ ಹೇಳೊ ಹಾಗೂ ಇಲ್ಲ ಎನೂ ಕೇಳೊ ಹಾಗೂ ಇಲ್ಲ.. ಸುಮ್ಮನೆ ವೈದ್ಯರು ಹೇಳಿದ್ದನ್ನು ಇವರು ಮಾಡಬೇಕಷ್ಟೆ..ವೈದ್ಯರನ್ನು ಹೆಚ್ಚು ಪ್ರಶ್ನೆ ಮಾಡೊ ಹಾಗಿಲ್ಲ.. ಅಷ್ಟಕ್ಕೂ  ಇವರ ಪ್ರಶ್ನೆಗಳಿಗೆ ಉತ್ತರಿಸಲು ವೈದ್ಯರಿಗೆ ಪುರುಸೊತ್ತಿಲ್ಲ.. ದಂಪತಿಗಳಿಬ್ಬರಿಗೆ ತಿಳಿ ಹೇಳುವಷ್ಟು ವ್ಯವಧಾನವೂ ವೈದ್ಯರಿಗೆ ಇಲ್ಲ...! ದಿನಕ್ಕೆರಡರಂತೆ ದೊಡ್ಡ..ದೊಡ್ಡ ಕವರ್ ನ ತುಂಬಾ ಔಷಧಗಳನ್ನು ತಂದು ಕೊಟ್ಟಿದಷ್ಟೆ ಬಂತು. ಅದನ್ನೆನು ಅವರು ಮಗುವಿಗೆ ಕೊಡುತ್ತಿದ್ದರಾ...?  ಅಥವಾ  ಅದೇ ಆಸ್ಪತ್ರೆಯ ಅವರಣದಲ್ಲಿದ್ದ ಮೇಡಿಕಲ್ ಶಾಪ್ ಗೆ ಮಾರಿಕೊಳ್ಳುತ್ತಿದ್ದರಾ..? ದೇವ್ರಿಗೆ ಗೊತ್ತು...! ಒಟ್ಟಿನಲ್ಲಿ ಆಸ್ಪತ್ರೆಯ ಬಿಲ್ ಮಾತ್ರ ಭಾರವಾಗುತ್ತಲೆ ಇತ್ತು..! ಕೊನೆಗೊಮ್ಮೆ ಇವನು ತಲೆಕೆಟ್ಟು ಎನು ಎತ್ತ ಅಂತ ಅಲ್ಲಿನ ನರ್ಸ್ ಗೆ ಕೇಳಿದ್ರೆ..ನಿಮಗೆ ಮಗು ಮುಖ್ಯನಾ...ದುಡ್ಡು ಮುಖ್ಯನಾ..?  ಅಂತಾ ಆಕೆ ವಕ್ರ ಮುಸುಡಿ ಮಾಡಿಕೊಂಡು ಇವನನ್ನ ದುರುದುರನೆ ನೋಡಿಬಿಟ್ಳು..! ಎನಾದ್ರೂ ಮಾಡಿಕೊಳ್ಳಲಿ ಇವರ ಸಹವಾಸನೇ ಬೇಡ..ಮಗು ಹುಷಾರಾದ್ರೆ ಸಾಕು ಅನ್ನಿಸಿಬಿಟ್ಟಿದೆ.  ಹದಿನೆಂಟು ದಿನಗಳ ತರುವಾಯ ಮಗುವನ್ನು ಡಿಸ್ಚಾರ್ಜ್ ಮಾಡಲಾಯಿತು. ಮಗು ಗುಣಮುಖವಾಗಿತ್ತು.. ಆದರೆ ಆಸ್ಪತ್ರೆಯ ಬಿಲ್ ಮಾತ್ರ ಎತ್ತಲಾರದಷ್ಟು ಭಾರವಾಗಿತ್ತು...! ಒಂದು ವರ್ಷದ ಮಗು ಆಕಸ್ಮಿಕವಾಗಿ ಅಡಿಕೆ ಚೂರು ತಿಂದು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದ್ದಕ್ಕೆ..ಜಿಲ್ಲಾ ಕೇಂದ್ರದ ಆ ಪ್ರಸಿದ್ದ ಆಸ್ಪತ್ರೆ ಹದಿನೆಂಟು ದಿನಗಳ ಕಾಲ ಅಡ್ಮಿಟ್ ಮಾಡಿಕೊಂಡು ಹಣ ವಸೂಲಿ ಮಾಡಿದ್ದು.. ಕೇವಲ ಒಂದು ಲಕ್ಷದ ಎಂಟು ಸಾವಿರದ ಐದುನೂರ ಎಪ್ಪತೈದು ರೂಪಾಯಿಗಳು ಮಾತ್ರ..! ದಂಪತಿಗಳಿಬ್ಬರು ಹಣ ಪಾವತಿ ಮಾಡೊದ್ರಲ್ಲಿ ಸುಸ್ತೆದ್ದು ಹೋದ್ರು..!

    ಈ ಘಟನೆ ಒಂದು ಉದಾಹರಣೆ ಮಾತ್ರ..ಇಂತಾ ನೂರಾರು ಘಟನೆಗಳು ಎಲ್ಲಾ ಕಡೆ ದಿನನಿತ್ಯ ನಡೆಯುತ್ತಲೆ ಇದೆ. ನಾವೆಲ್ಲಾ ವೈದ್ಯರನ್ನು ಜೀವ ಉಳಿಸೊ ದೇವರು ಅಂತಾನೆ ನಂಬ್ತೀವಿ..! ಆದ್ರೆ ಅದೇ ವೈದ್ಯ ದೇವರುಗಳು ನಮ್ಮ ನಂಬಿಕೆಗಳ ಜೊತೆ ಚೆಲ್ಲಾಟ ಆಡಿ ತಮ್ಮಮ್ಮ ತೀಜೋರಿ ತುಂಬಿಸ್ಕೊಳ್ತಾರೆ..! ಎಲ್ಲಾ ವೈದ್ಯರು ಹಾಗೆ ಇಲ್ಲ..ಆದರೆ ಹೆಚ್ಚಿನ ವೈದ್ಯರೆಲ್ಲಾ..ಹಣದ ಪಿಪಾಸುಗಳಾಗಿದ್ದಾರೆ.. ಮನುಷ್ಯನ ಜೀವಕ್ಕಿಂತ ಹಣವೇ ಮುಖ್ಯವಾಗಿದೆ ಅವರಿಗೆಲ್ಲಾ..!  ಕಷ್ಟಪಟ್ಟು ಶ್ರಮವಹಿಸಿ ಪ್ರಾಮಾಣಿಕವಾಗಿ ಓದಿ ವೈದ್ಯಕೀಯ ಕೋರ್ಸ್ ಮುಗಿಸುವ ವೈದ್ಯರು ಸಾಮಾನ್ಯವಾಗಿ ಸಹೃದಯಿಗಳಾಗಿರುತ್ತಾರೆ..ತಮ್ಮ ವೃತ್ತಿಯ ಬಗ್ಗೆ ಅಭಿಮಾನವುಳ್ಳವರಾಗಿರುತ್ತಾರೆ.ವೃತ್ತಿಯನ್ನು ರೋಗಿಗಳ ಸೇವೆಗೆ ಮೀಸಲಿಟ್ಟಿರುತ್ತಾರೆ. ಅಂತವರು ಜನಪ್ರಿಯ ವೈದ್ಯರೂ  ಆಗಿರುತ್ತಾರೆ... ಇನ್ನುಳಿದವು ಇದಾವಲ್ಲ ಅಡ್ನಾಡಿ ಡಾಕ್ಟರ್ ಗಳು.. ಅಪ್ಪ ಮಾಡಿಟ್ಟಿದ್ದ ಹಣದಿಂದನೊ ಅಥವಾ ದೊಡ್ಡ ಜನರ ಶಿಫಾರಸ್ಸಿನಿಂದಾನೊ ತಿಪ್ಪರಲಾಗ ಹಾಕಿ ಪ್ರತಿಷ್ಟೆಗೊಸ್ಕರ ವೈದ್ಯಕಿಯ ಶಿಕ್ಷಣಕ್ಕೆ ಸೇರಿಕೊಳ್ತಾವೆ....ಹೋಗಲಿ ಅಲ್ಲಾದ್ರೂ ಕಷ್ಟಪಟ್ಟು ಓದ್ತಾವಾ...? ಊಹು..ಅವರಪ್ಪನಾಣೆಗೂ ಸಾಧ್ಯವಿಲ್ಲ.. ಮತ್ತದೆ ತಿಪ್ಪರಲಾಗ ಹಾಕೊದೇ ಕೆಲ್ಸ...! ಕೋರ್ಸ್ ಮುಗಿಸೊದ್ರೊಳಗಾಗಿ ಸಕಲ ಮೋಜು ಮಸ್ತಿ ಪಾರಾಯಣ ಮಾಡಿರ್ತಾವೆ..! ಹೀಂಗಾದ್ರೆ ಅವು ಪಾಸಾಗೊದೆಂಗೆ..? ಐತಲ್ಲ ಮತ್ತದೆ ಅಪ್ಪನ ಖಜಾನೆ..! ಅದನ್ನು ಬಗೆದು ಹಣ ಖರ್ಚು ಮಾಡಿ ಹೆಂಗೂ ಪಾಸಾಗಿಬಿಡ್ತಾವೆ. ಅಂತವು ಡಾಕ್ಟರ್ ಅಂತ ಹಣೆ ಮೇಲೆ ಬೊರ್ಡ್ ಹಾಕ್ಕೊಂಡ್ ಮೇಲೆ ಜನಸಾಮಾನ್ಯರ ಗೋಳು ಶುರುವಾಗುತ್ತೆ ನೋಡಿ..! ಅಂಥಾ ಅಡ್ನಾಡಿ ಡಾಕ್ಟರ್ ಗಳಿಗೆ ಜನಸಾಮಾನ್ಯರು ಬೆವರು ಹರಿಸಿ ಕಷ್ಟಪಟ್ಟು ಗಳಿಸಿದ ಹಣದ ಬೆಲೆ ಗೊತ್ತಿರುವುದಿಲ್ಲ...ಯಾಕೆಂದ್ರೆ ಅವು ಮೊದ್ಲೆ ಕಷ್ಟಪಟ್ಟು ವಿದ್ಯೆ ಕಲಿತಿರುವುದಿಲ್ಲ...! ಅವರುಗಳ ಟಾರ್ಗೆಟ್ ಎನಿದ್ರೂ  ಅತಿ ಶೀಘ್ರವಾಗಿ ಹಣ ಮಾಡೊದು, ಮೋಜು ಮಸ್ತಿ ಜೀವನ ಮಾಡೊದು ಮತ್ತೆ ಫಾರಿನ್ ಟೂರ್...! ಇಂತಹ ಅದ್ಬುತ ಆದರ್ಶ ಹೊಂದಿರುವ ಅಡ್ನಾಡಿ ಡಾಕ್ಟರ್ ಗಳು ವೈದ್ಯಕೀಯ ಲೋಕದ ಸೇವೆಯನ್ನು ಹೇಗೆ ತಾನೆ ಪವಿತ್ರ ಅಂತಾ ಭಾವಿಸ್ತಾರೆ ಅಲ್ವಾ...? ಅವರಿಗದು ಪ್ರತಿಷ್ಟೆಯ ಕೆಲಸ ಅಷ್ಟೆ..! 

    ಈ ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ಹಾಗೂ ಜವಾಬ್ದಾರಿಯುತವಾದ ಸೇವೆ ಅಂದ್ರೆ ಅದು ವೈದ್ಯಕೀಯ ಸೇವೆ. ಯಾಕೆಂದ್ರೆ ನಾವ್ಯಾರೂ ಭಕ್ತಿ ಶ್ರದ್ದೆಯಿಂದ ಕೈ ಮುಗಿಯುವ ದೇವ್ರನ್ನ ಕಣ್ಣಾರೆ ಕಂಡಿಲ್ಲ.. ಅಂತಹ ಪೂಜನೀಯ ಸ್ಥಾನವನ್ನು  ನಾವೆಲ್ಲಾ ವೈದ್ಯರಿಗೆ ಕೊಟ್ಟಿದ್ದಿವಿ. ನಂಬಿದ ಭಕ್ತರಿಗೆ ದೇವ್ರು ಯಾವತ್ತು ಮೋಸ ಮಾಡೊಲ್ಲ ಅನ್ನೊ ನಂಬಿಕೆ ಜನಸಾಮಾನ್ಯರದು.. ಅಂತಹ ಸ್ಥಾನ ಪಡೆದ ವೈದ್ಯರು ಸಹೃದಯಿಗಳು ಆಗಿರಬೇಕಲ್ಲವೆ..? ಕೇವಲ ಹಣ ಮಾಡೊದಕ್ಕೆ ನೀವು ವೈದ್ಯರಾಗೊದಾದ್ರೆ ದಯವಿಟ್ಟು ವೈದ್ಯಕೀಯ ಲೋಕಕ್ಕೆ ಬರಬೇಡಿ..! ಅಂತವರಿಗೊಸ್ಕರಾನೆ  ರಾಜಕೀಯ,ಕಳ್ಳತನ,ದರೋಡೆ,ದಗಲ್ಬಾಜಿ ಇನ್ನೂ ಅನೇಕ ಮನೆಹಾಳ ಕೆಲಸಗಳು ಖಾಲಿ ಇವೆ..! ಅಲ್ಲಿಗೆ ಹೋಗಿ ಅವರಿಗೆಲ್ಲಾ ಬೇಕಾದಷ್ಟು ಸಂಪಾದನೆ ಮಾಡಬಹುದು..! ಸ್ವಾರ್ಥ,ದುರಾಸೆಗಳಿಂದ ದಯವಿಟ್ಟು ವೈದ್ಯಕೀಯ ಲೋಕವನ್ನು ದೂರ ಇಡಿ..! 

  ಅಂದ ಹಾಗೆ ಮೊನ್ನೆ ತಾನೆ ಭೂಕಂಪ ಸಂಭವಿಸಿದ ನೆರೆಯ ರಾಷ್ಟ್ರ ನೇಪಾಳಕ್ಕೆ ಕೆಲವು ಸಹೃದಯಿ ವೈದ್ಯರುಗಳು ತಮ್ಮ ಸ್ವಇಚ್ಚೆಯಿಂದ ಹೋಗಿ ನಿಸ್ವಾರ್ಥದಿಂದ  ದುರ್ಘಟನೆಯಲ್ಲಿ ನೊಂದ ಜನರ ಸೇವೆ ಮಾಡಿ ಬಂದಿದ್ದಾರೆ. ಅಂತಹ ಡಾಕ್ಟರ್ ಗಳು ವೈದ್ಯ ಲೋಕಕ್ಕೆ ಭೂಷಣರು.. ಅವರಿಗೆಲ್ಲಾ ನಮ್ಮ ಹೃತ್ಪೂರ್ವಕ ವಂದನೆಗಳು..! ನಿಸ್ವಾರ್ಥದಿಂದ ರೋಗಿಗಳ ಸೇವೆ ಮಾಡೊದ್ರಲ್ಲಿ ಸಿಗೊ ಸುಖ ಸಂತೋಷ...ಕೋಟಿಗಟ್ಟಲೆ ಕಟ್ಟೊ ಸಾಮ್ರಾಜ್ಯದಿಂದ ದೇವ್ರಾಣೆಗೂ ಸಿಗೊಲ್ಲ...! 

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.