Skip to main content

ಮಾನವೀಯತೆ

ಇಂದ Praveen kumar
ಬರೆದಿದ್ದುApril 4, 2015
noಅನಿಸಿಕೆ

ಮಟ ಮಟ ಮಧ್ಯಾನ್ಹ ನಾನು ಕಾರಿನಲ್ಲಿ ನನ್ನ  ಊರಿಗೆ ಹೊಗುತ್ತಿದ್ದೆ... ಯಾವುದೊ ಒಂದು ಹಳ್ಳಿ ಬಂತು.. ರಸ್ತೆಲಿ ಹಂಪ್ ಇದ್ದದ್ದರಿಂದ ಕಾರಿನ ವೇಗವನ್ನು ನಿಧಾನ ಮಾಡಿದೆ.. ಆ ಹಳ್ಳಿಯ ರಸ್ತೆ ಬದಿಯಲ್ಲಿ ಒಂದಷ್ಟು ಜನ ಗುಂಪುಗೂಡಿದ್ದರು. ಯಾರೊ ಒಬ್ಬಾತ ರಸ್ತೆಯ ಮಗ್ಗುಲಲ್ಲಿ ಬಿದ್ದಿದ್ದ..  ನಂಗೂ ಸಹಜ ಕುತೂಹಲವಾಯ್ತು  ತಕ್ಷಣ ಕಾರನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಆ ಗುಂಪಿನ ಹತ್ತಿರ ಹೋದೆ...ಜನರೆಲ್ಲಾ ರಸ್ತೆಯ ಮಗ್ಗುಲಲ್ಲಿ ಬಿದ್ದಿದ್ದಾತನ ಬಗ್ಗೆ ಏನೇನೊ ಮತಾಡಿಕೊಳ್ಳುತ್ತಿದ್ದರು... 

ಇಷ್ಟೊತ್ತಿನಲ್ಲೆ ಕುಡಿದು ಬಿದ್ದಿದ್ದಾನಲ್ರಿ...!  ಏನ್ ಕಾಲ ಬಂತೊ....ಏನೊ..!   ನಾನು ಹತ್ತಿರ ಹೋಗಿ ನೋಡಿದೆ ಹೆಚ್ಚೆಂದರೆ ಹದಿನೆಂಟರ ಅಸುಪಾಸಿನ ಹುಡುಗ... ಮುಖ ನೆಲಕ್ಕೆ ಮಾಡಿ ಬಿದ್ದಿದ್ದ....ಅಲ್ಲಲ್ಲಿ ತರುಚಿತ ಗಾಯವಾಗಿತ್ತು... ಸಣ್ಣದಾಗಿ ಮುಲುಗುತ್ತಿದ್ದ... ತಕ್ಷಣ ನಾನು ಯಾರಾದ್ರು ಸ್ವಲ್ಪ ನೀರಿದ್ರೆ ಕೊಡ್ರಪ್ಪ ಅಂದೆ... ಸಾರ್ ಇಂತವರನ್ನೆಲ್ಲಾ ನಾವು ದಿನ ನೋಡ್ತಿವಿ...ಬೆಳಿಗ್ಗೆಯಿಂದನೆ ಕುಡಿದು ಕುಡಿದು ಎಲ್ಲೆಂದರಲ್ಲೆ ಬಿದ್ದುಕೊಳ್ತಾರೆ... ಇಂತವರಿಗೆಲ್ಲಾ ಸಹಾಯ ಮಾಡಬಾರದು ಸಾರ್  ಯಾರೊ ಒಬ್ಬಾತ ಹೇಳಿದ...

ಪರವಾಗಿಲ್ಲಪ್ಪ ಸ್ವಲ್ಪ ಆತನಿಗೆ ನೀರು ಕುಡಿಸಿ ನೋಡ್ತಿನಿ..ಅಂದೆ...ಅಷ್ಟರಲ್ಲೆ ಯಾರೊ ಒಬ್ಬ ವೃದ್ದ ಹೆಣ್ಣುಮಗಳು ನೀರು ತಂದು ಕೊಟ್ಟರು... ಕೊಂಚ ಅವನ ಮೈಮೇಲೆ ನೀರು ಸಿಂಪಡಿಸಿ ಆತನ ಭುಜ ತಡವಿ ನಿಧಾನವಾಗಿ ಎಬ್ಬಿಸಿ ಕುಳಿಸಿದೆ.. ಆತ ಕುಡಿದಿರಲಿಲ್ಲ... ನೀರು ನೀರು ಅಂತ ಕೈಸನ್ನೆಯಲ್ಲೆ ಹೇಳಿದ... ಮತ್ತಷ್ಟು ನೀರು ತರಿಸಿ ಆತನಿಗೆ ಕುಡಿಸಿದೆ... 

ನೀರು ಕುಡಿದ ಆತ ಅಪ್ಪಾ...ಅಪ್ಪಾ ಅಂತ ಬಿಕ್ಕಳಿಸಲಾರಂಬಿಸಿದ...ತಕ್ಷಣ ನಾನು ಯಾಕಪ್ಪ ಎನಾಯ್ತು...? ಅಂತ ಕೇಳಿದೆ....ಅದಕ್ಕೆ ಅವನು.. ಅಣ್ಣಾ...ನಮ್ಮಪ್ಪ ಸತ್ತುಹೊದ್ರಣ್ಣ... ನಾ ನಮ್ಮೂರಿಗೆ ಹೊಂಟಿದ್ದೆ..ತಲೆ ಚಕ್ರ ಬಂದು ಬಿದ್ದು ಬಿಟ್ಟೆ... ನಿನ್ನ ಕಾಲಿಡಿತಿನಿ ಅಣ್ಣಯ್ಯ ನಾ ನಮ್ಮಪ್ಪ ನ್ನ ನೋಡಬೇಕು..ನನ್ನ ಅಲ್ಲಿಗೆ ಕಳಿಸಿ ಕೊಡಣ್ಣ..ಅಂದ..  ಅಲ್ಲಿ ಜನ ಜಂಗುಳಿಯಾಗತೊಡಗಿತು.  ಆತ ಉಟ್ಟಿದ್ದ ಬಟ್ಟೆಯೆಲ್ಲ ತೀರ ಗಲೀಜಾಗಿತ್ತು...ಯಾರೂ ಆತನನ್ನ ಮುಟ್ಟಲು ಕೂಡ ತಯಾರಿರಲಿಲ್ಲ....ತಕ್ಷಣ ನಾನು ಆತನನ್ನು ನಿಧಾನವಾಗಿ ಎಬ್ಬಿಸಿ ನನ್ನ ಕಾರಿನ ಬಳಿ ಕರೆದುಕೊಂಡು ಹೋಗಿ ಕಾರಿನಲ್ಲಿ ಕುಳ್ಳಿರಿಸಿದೆ... ಅಲ್ಲಿ ನೆರದಿದ್ದ ಜನರೆಲ್ಲಾ ಏನೊ ಒಂತರಾ ನನ್ನ ಬಗ್ಗೆ ಅಸಹ್ಯವಾಗಿ ನೋಡಿದ್ರು... ನಾನು ಆತನನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡೆ .... ಅಲ್ಲೆ ಇದ್ದ ಒಂದು ಗೂಡಂಗಡಿಯಿಂದ ನಾಲ್ಕು ಬಾಳೆ ಹಣ್ಣು ತೆಗೆದುಕೊಂಡು ಆತನಿಗೆ ತಿನ್ನಲು ಕೊಟ್ಟೆ..ಆತನಿಗೆ ಅದೆಷ್ಟು ಹಸಿವಾಗಿತ್ತೊ ಏನೊ ಗಬಗಬನೆ ಬಾಳೆ ಹಣ್ಣು ತಿಂದ..... ಕಾರನ್ನು ಸ್ಟಾರ್ಟ್ ಮಾಡಿ...ಕೊಂಚ ದೂರ ಬಂದೆ... ಹೇಳಪ್ಪ ಎನಾಯ್ತು ಅಂದೆ...  ಅಣ್ಣಾ... ನಮ್ಮೂರು ರಾಯಚೂರು ಹತ್ತಿರದ ಮಾನ್ವಿ...ನಾನು ಹರಿಹರದಲ್ಲಿ ಹೋಟೆಲೊಂದರಲ್ಲಿ ಕೆಲಸ ಮಾಡ್ತಿದಿನಿ... ಅಪ್ಪಯ್ಯ ನಿನ್ನೆ ರಾತ್ರಿ ತೀರಿ ಹೊದ್ರು ಅಂತಾ ಅಕ್ಕ ಫೋನ್ ಮಾಡಿದ್ಲು... ನನ್ನ ಬಳಿ ಊರಿಗೆ ಹೋಗುವಷ್ಟು ಹಣ ಇರಲಿಲ್ಲ...ನಮ್ಮ ಹೋಟೆಲ್ ಮಾಲೀಕನ ಬಳಿ ಹಣ ಕೇಳಿದೆ..ಆತ ಕೊಡೊಕ್ಕಾಗಲ್ಲ ಬೇಕಿದ್ರೆ ಇರು ಇಲ್ಲ ಅಂದ್ರೆ ಜಾಗ ಖಾಲಿ ಮಾಡು ಅಂದ..ನನ್ನ ಬಳಿ ಸ್ವಲ್ಪ ದುಡ್ಡಿತ್ತು.. ಬೆಳಿಗ್ಗೆಯವರೆಗೂ ಯಾರಿಂದನಾದ್ರು ಹಣ ಸಿಗುತ್ತಾ ಅಂತ ಪ್ರಯತ್ನಪಟ್ಟೆ..ಯಾರೂ ಹಣ ಕೊಡ್ಲಿಲ್ಲ... ನನ್ನೂರಿಗೆ ಬರುವಷ್ಟು ದುಡ್ಡು ನನ್ನ ಬಳಿ ಇರಲಿಲ್ಲ...  ಆದ್ರೂ ಎನಾದ್ರು ಆಗಲಿ ಅಂತಾ ಇವತ್ತು ಬೆಳಿಗ್ಗೆ ನಮ್ಮೂರಿಗೆ ಹೋಗೊ ಬಸ್ ಹತ್ತಿದೆ... ಬಸ್ ಊರು ದಾಟುತ್ತಿದ್ದಂತೆ  ಕಂಡಕ್ಟರ್ ಟಿಕೇಟ್ ತೆಗೆದುಕೊಳ್ಳಲೇ ಬೇಕು ಅಂತ ಪಟ್ಟು ಹಿಡಿದ...ನನ್ನ ಬಳಿ ಹಣ ಇಲ್ಲ..ನಿಮಗೆ ಪುಣ್ಯ ಬರ್ತೈತಿ ನಮ್ಮಪ್ಪ ಸತ್ತಾನ..ನಾ ನಮ್ಮೂರಿಗೆ ಹೋಗಬೇಕು..ದಯವಿಟ್ಟು ನನ್ನ ಅಲ್ಲಿಗೆ ಬಿಟ್ಟು ಬಿಡ್ರಿ ಅಂತ ಅಂಗಲಾಚಿ ಬೇಡಿಕೊಂಡೆ...ಯಾರಿಗೂ ನನ್ನ ಮೇಲೆ ಕರುಣೆ ಬರ್ಲಿಲ್ಲ.. ಊರಿಂದ ತುಂಬಾ ದೂರ ಬಂದಿದ್ದ ಬಸ್ ನಿಂದ ನನ್ನ ಕೆಳಗಿಳಿಸಿ ಬಿಟ್ಟರು...  ದಾರಿಲಿ ಹೋಗೊ ಬರೊ ಗಾಡಿಗಳಿಗೆಲ್ಲಾ ಕೈ ಮಾಡಿದೆ. ಯಾರೂ ನಂಗೆ ಸಹಾಯ ಮಾಡ್ಲಿಲ್ಲ.. ಅಪ್ಪಯ್ಯನನ್ನು ನೋಡ್ಲೆ ಬೇಕಿತ್ತು.. ಬೇರೆ ದಾರಿ ಇಲ್ಲದೆ ಒಂದೆ ಸಮನೆ ಅಲ್ಲಿಂದ ಒಡೊಡುತ್ತಾ ಬಂದೆ.. ಈ ಹಳ್ಳಿ ಹತ್ರ ಬರ್ತಿದ್ದಂಗೆ ಬಿಸಿಲಿಗೆ ತಲೆ ಸುತ್ತಿ  ಬಂದು ಬಿದ್ದುಬಿಟ್ಟೆ...!

ಅವನ ಸ್ತಿತಿ ಕಂಡು ನಂಗೆ ಅಯ್ಯೊ ಪಾಪ ಅನಿಸಿತ್ತು..! ಒಂದು ಕ್ಷಣ ಅಲ್ಲಿ ನೆರೆದಿದ್ದ ಜನರ ಬಗ್ಗೆ ಅಸಹ್ಯ ಎನಿಸಿತ್ತು..ಎನೊಂದು ವಿಚಾರಿಸದೆ ಸುಖಾ ನುಮ್ಮನೆ ಇವನನ್ನು ಕುಡುಕ ಅಂತೆಲ್ಲ ಅನುಮಾನಿಸಿ ಬಿಟ್ಟರಲ್ಲ...! ಕಾರಿನ ವೇಗ ಹೆಚ್ಚಿಸಿದೆ...ಸೀದಾ ರಸ್ತೆ ಬದಿಯ ಒಂದು ಢಾಬಾಕ್ಕೆ ಅವನನ್ನು ಕರ್ಕೋಂಡು ಹೋಗಿ ಹೊಟ್ಟೆ ತುಂಬಾ ಊಟ ಮಾಡಿಸಿದೆ... ಅಮೇಲೆ ತಕ್ಷಣ ಅವನನ್ನು ಹರಪನಹಳ್ಳಿಯ ಬಸ್ ಸ್ಟಾಂಡ್ ಗೆ ಕರೆದುಕೊಂಡು ಹೋಗಿ ಹೊಸಪೇಟೆಗೆ ಹೊಗುವ ಬಸ್ ಹತ್ತಿಸಿ ಅವನ ಕೈಯಲ್ಲಿ ಮುನ್ನೂರು ರೂಪಾಯಿ ಕೊಟ್ಟೆ.... ಅಣ್ಣಾ...ನೀ ನನ್ನ ಪಾಲಿನ ದೇವ್ರಣ್ಣ ಅಂತ ಅವನು ನನ್ನ ಕಾಲು ಹಿಡಿಯಲು ಬಂದ...ಛೆ..ಛೆ ನೀ ಹೀಗೆಲ್ಲಾ ಮಾಡಬೇಡ..ಮೊದ್ಲು ನಿನ್ನ ಅಪ್ಪಯ್ಯನ ನೋಡು ಹೋಗು ಎಂದೆ... ಅಣ್ಣಾ ನಿನ್ನ ಫೋನ್ ನಂಬರ್ ಕೊಡಣ್ಣ  ಮುಂದೆ ಯಾವಾಗ್ಲಾದ್ರು ನಿನ್ನ ಹಣಾನ ನಿಂಗೆ ವಾಪಸ್ ಕೊಡ್ತೀನಿ ಅಣ್ಣಾ..ಅಂದ.. ಅದೇನೂ ಬೇಡ ಅಂದು ನಾನು ನನ್ನ ಫೋನ್ ನಂಬರ್ ಅವನಿಗೆ ಕೊಟ್ಟೆ..! ಆತನನ್ನು ಕಳಿಸಿಕೊಟ್ಟ ಮೇಲೆ ಏನೋ ಒಂತಾರ ನನ್ನ ಮನಸ್ಸಿಗೆ ಸಮಾಧಾನವಾಯ್ತು..! 

ಕೆಲವು ದಿನಗಳ ನಂತರ ನಾನು ಆ ಘಟನೆಯನ್ನು ಮರೆತು ಬಿಟ್ಟೆ....! 

ಸುಮಾರು ಐದಾರು ತಿಂಗಳು ಆಯ್ತು..ಅದೊಂದು ದಿನ ನನ್ನ ನಂಬರ್ ಗೆ ಒಂದು ಕಾಲ್ ಬಂತು ನಮಸ್ಕಾರ ಅಣ್ಣಾ...  ಯಾರೂ ಅಂತ ನಂಗೆ ಗೊತ್ತಾಗ್ಲಿಲ್ಲ....ನಮಸ್ಕಾರ ಯಾರು..? ಅಂದೆ.    ಅಣ್ಣಾ....ನಾನಣ್ಣಾ ರಮೇಶ....! ಯಾವ ರಮೇಶ...? ಅಣ್ಣಾ ನಾನಣ್ಣಾ... ನಮ್ಮಪ್ಪಯ್ಯ ತೀರಿಕೊಂಡಿದ್ದಾಗ ನೀ ನಂಗೆ ಸಹಾಯ ಮಾಡಿದ್ಯಲ್ಲ ಅಣ್ಣಾ..ನನ್ನ ಪಾಲಿನ ದೇವ್ರು...!    ಹಾ ಇದು ಅವನೇ... ಅರೆ..ಹೇಗಿದ್ದಿಯೋ.... ನಿನ್ನ ಹೆಸರೆ ನಂಗೆ ಗೊತ್ತಿರ್ಲಿಲ್ಲಪ್ಪ..! ಅಣ್ಣಾ...ನಿನ್ನ ಹೆಸರೂ ನಂಗೆ ಗೊತ್ತಿಲ್ಲ ಅಣ್ಣಾ  ಆದ್ರೆ ನೀ ನನ್ನ ಪಾಲಿನ ದೇವ್ರು ಅನ್ನೊದು ಮಾತ್ರ ನಂಗೆ ಗೊತ್ತಣ್ಣ...! ಅವತ್ತು ಆ ಘಟನೆ ನಡೆದಿದ್ದ ದಿನ ಗಲಿಬಿಲಿಯಲ್ಲಿ ನಾನು ಅವನ ಹೆಸರು ಕೇಳಿರಲಿಲ್ಲ...ಅವನು ನನ್ನ ಹೆಸರು ಕೇಳಿರಲಿಲ್ಲ... ಪರಿಶುದ್ದವಾದ  ಮಾನವತೆಯಲ್ಲಿ ನಂಗೆ ಹೆಸರು ಮುಖ್ಯ ಅನಿಸಲೇ ಇಲ್ಲ..! ಈಗ ಆತನೆ ಹೇಳಿದ್ದರಿಂದ ಆತನ ಹೆಸರು ರಮೇಶ ಅಂತಾ ಗೊತ್ತಾಗಿತ್ತು..!  ಹೆ...ಹಾಗೆಲ್ಲ ಅನ್ನಬ್ಯಾಡ ಬಿಡಪ್ಪ...ನಾನಲ್ಲದಿದ್ದಿದ್ರೆ ಬೇರೆ ಯಾರಾದ್ರೂ ನಿಂಗೆ ಸಹಾಯ ಮಾಡೆ ಮಾಡ್ತಿದ್ರು..! ಅಣ್ಣಾ..ಅದು ನಿನ್ನ ದೊಡ್ದತನ.. ನೀ ಹೇಗಿದ್ದೀಯಾ ಅಣ್ಣಾ...!  ನಾನು ಚೆನ್ನಾಗಿದ್ದೀನಿ ರಮೇಶಾ ನೀ ಹೇಗಿದ್ದಿಯಪ್ಪ...? ಅಣ್ಣಾ ಅವತ್ತು ನೀ ನಂಗೆ ಸಹಾಯ ಮಾಡಿ ನಮ್ಮೂರಿಗೆ ಕಳಿಸಿಕೊಟ್ಟೆಯಲ್ಲ...ನಾನು ನಮ್ಮೂರಿಗೆ ಹೊಗುವಸ್ಟರಲ್ಲಿ ರಾತ್ರಿ ಒಂಭತ್ತು ಗಂಟೆಯಾಗಿತ್ತು...ನಮ್ಮವರೆಲ್ಲಾ ನಂಗೊಸ್ಕರ ಕಾದು ಕಾದು...ಕೊನೆಗೆ ಅಪ್ಪಯ್ಯನ ಅಂತ್ಯ ಸಂಸ್ಕಾರ ಮಾಡಿಬಿಟ್ಟಿದ್ರು... ನಂಗೆ ಅಪ್ಪಯ್ಯನ ಮುಖ ನೋಡೊಕೆ ಆಗಲೇ ಇಲ್ಲ... ನಾನು ನಮ್ಮಪ್ಪಯ್ಯನ ಸಮಾಧಿ ಮೇಲೆ ಬಿದ್ದು ಅತ್ತು ಅತ್ತು... ಮನಸ್ಸು ಹಗುರ ಮಾಡಿಕೊಂಡೆ... ಎರಡು ತಾಸು ಮೊದಲೆ ಬಂದಿದ್ರೆ ಅಪ್ಪನ ಮುಖ ನೋಡಬಹುದಿತ್ತು...ಆಗಲಿಲ್ಲ..ಆದ್ರೆ ದೇವ್ರು ನಿನ್ನಂಥ ಅಣ್ಣನನ್ನು ನಂಗೆ ಕೊಟ್ಟ... ನಿನ್ನ ಸಹಾಯಾನ ನಾನು ನನ್ನ ಜನ್ಮದಲ್ಲೆ ಮರೆಯೊಲ್ಲ ಅಣ್ಣಾ...! ಮನುಷ್ಯನಾಗಿ ನಾನು ನನ್ನ ಕರ್ತವ್ಯ ಮಾಡಿದೆ ಬಿಡು ರಮೇಶ ಅಂದ ಹಾಗೆ ನೀನು ಈಗ ಎಲ್ಲಿದ್ದಿಯಾ..? ಏನ್ ಮಾಡ್ಕೊಂಡಿದ್ದಿಯಾ..?

ಅಣ್ಣಾ ನಾನೀಗ ಬೆಂಗಳೂರಲ್ಲಿ ಇದ್ದಿನಿ...ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೆರ್ಕೊಂಡಿದ್ದಿನಿ...!  ಕಷ್ಟಪಟ್ಟು ದುಡಿತಿದಿನಿ.... ಆಗ ನೀ ನಂಗೆ ಸಹಾಯ ಮಾಡಿದ್ಯಲ್ಲ.. ಹಂಗೆ ನಾನೂ ಕೂಡ ಬಡವರಿಗೆ, ನೊಂದವರಿಗೆ,ಕಷ್ಟದಲ್ಲಿರೊರಿಗೆ ಸಹಾಯ ಮಾಡ್ತೀನಿ..ಅಣ್ಣಾ..! ನಾನು ಮೂಕವಿಸ್ಮಿತವಾದೆ...! 

ಆತ್ಮೀಯ ಒದುಗರೆ ಇದು  2005 ರಲ್ಲಿ ನನ್ನ ಆತ್ಮೀಯ ಸ್ನೇಹಿತ ನಾಗರಾಜನ ಜೀವನದಲ್ಲಿ ನಡೆದ ನೈಜ ಘಟನೆ...! 

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.