Skip to main content

ಅಂತೆ ಕಂತೆಗಳ ಸಂತೆ

ಇಂದ deepak m
ಬರೆದಿದ್ದುFebruary 26, 2015
noಅನಿಸಿಕೆ

ಅಂತೆ
ಕಂತೆಗಳ ಸಂತೆ

ಗಂಟೆ
೧೧ ಆಗಿದ್ದರೂ ಬಿಸಿಲು ಆಗಲೇ ಎಷ್ಟೊಂದು ಜೋರಾಗಿತ್ತೆಂದರೆ, ಬರಿಗಣ್ಣಲ್ಲಿ ನೆಲವನ್ನು
ನೋಡಲಾಗುತ್ತಿರಲಿಲ್ಲ. ಮೆಜೆಸ್ಟಿಕ್ ಪ್ಲಾಟ್ ಫಾರ್ಮ್ ಗಳೆಲ್ಲ ಕಿಕ್ಕಿರಿದು ತುಂಬಿದ್ದವು. ಆ
ನೂಕುನುಗ್ಗಲಿನಲ್ಲಿ ಪ್ಲಾಟ್ ಫಾರ್ಮ್ ಮೇಲೆ ಸಮತೋಲನ ಕಾಯ್ದುಕೊಂಡು ನಿಲ್ಲುವುದೇ ದೊಡ್ಡ
ಸಾಹಸವಾಗಿತ್ತು ನನಗೆ. ಪ್ಲಾಟ್ ಫಾರ್ಮ್ ನಿಂದ ಕೆಳಗೆ ಥಳಥಳ ಹೊಳೆಯುತ್ತಿದ್ದ ಬಿಸಿಲಿನ
ಹೊಂಡದಲ್ಲಿ ಕಾಲಿಟ್ಟರೆ ಎಲ್ಲಿ ಸುಟ್ಟು ಬೂದಿಯಾಗುತ್ತೇವೆಯೋ ಎಂಬ ಭಯ. ಬಿಸಿಲಂತೂ ಕುಸ್ತಿ
ಪೈಲ್ವಾನನಂತೆ ಸೆಡ್ಡು ಹೊಡೆದು ಯಾರು ಬರ್ತೀರೋ ಬನ್ನಿ ಎಂದು ಸವಾಲು ಹಾಕಿ ಹಲ್ಲು ಕಿರಿಯುತ್ತ
ಅಲ್ಲೇ ಅಡ್ಡಾಡುತ್ತಿತ್ತು. ನಾನು ಮನೆಯಲ್ಲಿ ಸ್ನಾನ ಮಾಡಿ ಬಂದಿದ್ದೇನೆ ಎಂದರೂ ಸೂರ್ಯದೇವನಿಗೆ
ಅದೆಷ್ಟು ಪ್ರೀತಿ ಬಂದಿತ್ತೆಂದರೆ, ಮತ್ತೆ ನನ್ನನ್ನು ಅಡಿಯಿಂದ ಮುಡಿವರೆಗೆ ತೊಯ್ಸಿಬಿಟ್ಟ. ಬಸ್
ಗಳು ಒಂದಾದ ಮೇಲೊಂದು ಬಂದರೂ ನನಗೆ ಬೇಕಾದ ಬಸ್ ಬರುತ್ತಿರಲಿಲ್ಲ. ಈ ಜಂಜಾಟದ ಮಧ್ಯೆ ಆಫೀಸಿಗೆ
ಲೇಟ್ ಆಗಿಬಿಟ್ರೆ ಬಾಸ್ ಬಾಯಿ ಬೋಫೋರ್ಸ್ ಗನ್ ಆಗಿಬಿಡುತ್ತೆ. ಅದರಿಂದ ಸಿಡಿಯೊ ಒಂದೊಂದು
ಸಿಡಿಗುಂಡನ್ನ ಹ್ಯಾಗಪ್ಪಾ ಎದುರಿಸೋದು ಅಂತಾ ಚಿಂತೆ ಹೆಚ್ಚಾಗಿ ಇನ್ನಷ್ಟು ಬೆವೆತೆ. ನನಗೆ ಬೇಕಾದ
ಬಸ್ ಬಂತು ಆದರೆ, ಪ್ಲಾಟ್ ಫಾರ್ಮ್ ಬಳಿ ನಿಲ್ಲದೇ ಸ್ವಲ್ಪ ದೂರ ಹೋಗಿ ನಿಂತಿತು. ನಾನು ಇನ್ನೂ
ಓಡಿ ಹೋಗಿ ಹತ್ತಬೇಕು ಅಂದುಕೊಳ್ಳುವಷ್ಟರಲ್ಲಿ ನನ್ನ ಹಿಂದೆ ಮುಂದೆ ಅಕ್ಕ ಪಕ್ಕ ಇದ್ದ ಜನರೆಲ್ಲ
ಬೆಲ್ಲಕ್ಕೆ ಮುತ್ತಿಕೊಳ್ಳುವ ಇರುವೆಗಳಂತೆ ಬಸ್ಸಿಗೆ ಮುತ್ತಿಕೊಂಡರು. ಇವರೇನು ಬಸ್
ಹತ್ತುತ್ತಿದ್ದಾರೋ ಇಲ್ಲಾ ಬಸ್ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೋ
ಎನ್ನಿಸುತ್ತಿತ್ತು. ಅಷ್ಟೇ, ನನಗೆ ಆ ಬಸ್ ಹತ್ತುವ ಹೋರಾಟದಲ್ಲಿ ಪಾಲ್ಗೊಳ್ಳಲು ಧೈರ್ಯ ಬರಲಿಲ್ಲ.
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಅನ್ನೋ ಥರಾ ಜನ ಬಸ್ ಹತ್ತುವ ರೀತಿ ನೋಡುತ್ತ
ಮೈಮರೆತಿದ್ದ ನನ್ನ ತಲೆ ಮೇಲೆ ಮೊಟಕುತ್ತ ನಗುತ್ತಿದ್ದ ಸೂರ್ಯದೇವ. ಒಮ್ಮೆಲೇ ಪ್ರಜ್ಞೆ ಬಂದವನಂತೆ
ಓಡಿ ಪ್ಲಾಟ್ ಫಾರ್ಮ್ ನೆರಳಲ್ಲಿ ನಿಂತುಕೊಂಡೆ. ಆ ಬಸ್ಸು ತುಂಬಿದ್ದರೂ ಜನ ಹತ್ತುತ್ತಲೇ ಇದ್ದರು.
ಕಂಡಕ್ಟರ‍್ ಸಾಹೇಬರು ’ಹಾ ಸ್ವಲ್ಪ ಮುಂದೆ ಹೋಗಿ ನೋಡೋಣ, ಸಾರ‍್ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ
ನೋಡೋಣ. ಹಾಂ, ಅಲ್ಲಿ ಇನ್ನೂ ಇಬ್ಬರು ನಿಂತ್ಕೊಬಹುದು’ ಎಂದು ಬಸ್ ಹೊರಗಿನಿಂದಲೇ ಸೂಚನೆಗಳನ್ನ
ನೀಡುತ್ತಿದ್ದರು. ಅಷ್ಟರಲ್ಲಿ ಇಬ್ಬರು ಮುದಿ ದಂಪತಿಗಳು ಬಸ್ ಹತ್ತಲು ಹೊರಟಿರುವುದು ಕಂಡು ’ಈ
ವಯಸ್ಸಿನಲ್ಲಿ ಈ ರೀತಿ ಕಷ್ಟಪಡಬೇಕೆ? ಆಟೋ ಹಿಡಿದು ಹೋಗ್ಬಾರ್ದೆ?’ ಎಂದು ಒಂದೆಡೆ ಪ್ರಶ್ನೆ
ಉದ್ಭವಿಸಿದಾಗ, ಇನ್ನೊಂದೆಡೆ ’ಆಟೋ ದುಡ್ಡು ನಿಮ್ಮಪ್ಪ ಕೊಡ್ತಾನಾ? ಇಂಥ ಎಷ್ಟೋ ಜನ ಕಷ್ಟ
ಪಡಲೇಬೇಕಾದ ಅನಿವಾರ್ಯತೆ ಇದೆ ಇಲ್ಲಿ. ತೆಪ್ಪಗೆ ನಿಂತ್ಕೊ’ ಎಂದು ಉತ್ತರ ಬಂತು.

            ಸ್ವಲ್ಪ ಆ ಕಡೆ ಈ ಕಡೆ ಕಣ್ಣಾಡಿಸಿ ಆ ಮುದಿ
ಜೋಡಿಯತ್ತ ನೋಡಿದೆ. ಯಾರೋ ಒಬ್ಬ ಪುಣ್ಯಾತ್ಮ ಅವರ ಮೇಲೆ ಧೂಮಕೇತುವಿನಂತೆ ಅಪ್ಪಳಿಸಿದ.  ಆ ಯುವಕ ಹಾಯ್ದ ವೇಗಕ್ಕೆ ಅಜ್ಜಿ ನೆಲಕ್ಕಪ್ಪಳಿಸಿದಳು.
’ಅಯ್ಯಯ್ಯೋ! ಏನಾಯ್ತು?’ ಎಂದು ನೋಡುವಷ್ಟರಲ್ಲಿ ಸಾಕಷ್ಟು ಜನ ಸೇರಿಕೊಂಡು ಜಗಳ ಶುರುವಾಯ್ತು.
ಅಷ್ಟರಲ್ಲಿ ನನ್ನ ಬಸ್ ಬಂತು. ಈ ಇಬ್ಬರ ಜಗಳ ಮೂರನೆಯವನಿಗೆ ಲಾಭ ಅನ್ತಾರೆ ನೋಡಿ ಹಾಗೆ ಜನರೆಲ್ಲ
ಜಗಳದಲ್ಲಿ ಬ್ಯೂಸಿ ಇದ್ದ ಕಾರಣ ಬಸ್ ನಲ್ಲಿ ಜಾಸ್ತಿ ಜನ ಹತ್ತಲಿಲ್ಲ ಮತ್ತು ನನಗೆ
ಕುಳಿತುಕೊಳ್ಳಲು ಜಾಗ ಸಿಕ್ತು. ಆದರೆ ಕೆಳಗೆ ಬಿದ್ದ ಅಜ್ಜಿಗೆ ಏನಾಯ್ತೋ ಗೊತ್ತಾಗಲಿಲ್ಲ. ನಗರ
ಜೀವನ ಹೀಗೇ ನೋಡಿ. ಯಾರಿಗೆ ಏನೇ ಆದ್ರೂ ನಾವು ಮುಂದೆ ಸಾಗ್ತಾ ಇ‌ರ್ಬೇಕಾಗುತ್ತೆ. ಅದೇ ಕಹಿ
ಸತ್ಯ. ಕಹಿ ಅಂತಾ ಔಷಧಿ ಬೇಕಾದ್ರೆ ಬೇಡಾ ಅಂತಾ ತಳ್ಳಿಬಿಡ್ಬಹುದು. ಇದು ವಾಸ್ತವ ನೋಡಿ, ಅಂಗಲಾಚಿ
ಬೇಡಿಕೊಂಡರೂ ಮೂಗು ಹಿಸುಕಿ ಬಾಯಿ ತೆರೆಸಿ ಧುಮುಕಿ ಬಿಡುತ್ತದೆ. ಟೈಮ್ ನೋಡ್ದೆ, ಆಗಲೇ ಹತ್ತು
ನಿಮಿಷ ತಡವಾಗಿತ್ತು. ಏನೂ ಮಾಡೋಹಾಗಿರಲಿಲ್ಲ. ಸೀಟು ಕಿಟಕಿ ಬಳಿ ಸಿಕ್ಕ ಖುಷಿ ಬಹಳ ಹೊತ್ತು
ಉಳಿಯಲಿಲ್ಲ. ಯಾಕಂದ್ರೆ ಬಸ್ಸು ಮೆಜೆಸ್ಟಿಕ್ ದಾಟಿ ಹೊರಗೆ ಹೋಗಲು ಶ್ರಮಿಸುತ್ತಿತ್ತು. ಬಸ್ ಗಳು
ಒಂದಾದ ನಂತರ ಒಂದು ಎಡೆಬಿಡದೇ ಹೋಗುತ್ತಿದ್ದರೆ, ಪಾಪ ನಮ್ಮ ಮುದಿ ಬಸ್ಸು ದೈನ್ಯದಿಂದ ಪಿಕಿಪಿಕಿ
ನೋಡುತ್ತ, ಗೊರ‍್ ಗೊರ‍್ ಎಂದು ಸದ್ದು ಮಾಡುತ್ತ ನಿಂತಿತ್ತು. ಇತ್ತ ಬಿಸಿಲಿನ ಚೆಲ್ಲಾಟ
ಜೋರಾಗಿತ್ತು.

ಹಾಗೂ
ಹೀಗೂ ಕಷ್ಟಪಟ್ಟು ಬಸ್ಸು ಮೆಜೆಸ್ಟಿಕ್ ಹೊರಗೆ ಬಂತು. ಅದೇ ಸಮಯಕ್ಕೆ ಸರಿಯಾಗಿ ನನ್ನ ಬಾಸ್ ಕಾಲ್
ಬಂತು, “ಏನ್ ದೀಪಕ, ಎಲ್ಲಿದ್ದೀರಾ? ಇವತ್ತು ಪ್ರೆಸೆಂಟೇಶನ್ ಇದೆ ನಿಮ್ದು, ಮರೆತುಬಿಟ್ರಾ?”
ಎಂದಾಗ ನನ್ನ ಪ್ರಯಾಸದ ಪ್ರಯಾಣ ಶುರುವಾದ ರೀತಿ ವಿವರಿಸಿ ಹೇಳುವಷ್ಟು ತಾಳ್ಮೆ ನನಗಿರಲಿಲ್ಲ.
“ಸಾರ‍್, ಬಸ್ ಪಂಕ್ಚರ‍್ ಆಗಿ ಬೇರೆ ಬಸ್ ಹತ್ತಿ ಬರ್ತಿದಿನಿ ಸಾರ‍್. ಇನ್ನೇನು ಬಂದು ಬಿಡ್ತೀನಿ”
ಎಂದು ಸಲೀಸಾಗಿ ಸುಳ್ಳು ಹೇಳಿದೆ. ಮೊಬೈಲ್ ಸಹವಾಸಾನೇ ಬೇಡ ಅನ್ತಿದ್ದೋನು, ಮೊಬೈಲ್ ನ ಅತ್ಯಂತ
ಮುಖ್ಯ ಉಪಯೋಗವನ್ನೂ ಕರಗತ ಮಾಡಿಕೊಂಡಿದ್ದು ಅರಿತು ನನ್ನ ಮೇಲೆ ನನಗೇ ಆಶ್ಚರ್ಯವಾಯ್ತು. ಹೀಗೆ
ಕೆ.ಆರ‍್. ಸರ್ಕಲ್ ತಲುಪುವಷ್ಟರಲ್ಲಿ ಮತ್ತೆ ಟ್ರಾಫಿಕ್ ಜಾಮ್. ಕಾರಣ? ಯಾರೋ ಮಂತ್ರಿಗಳು
ವಿಧಾನಸೌಧದತ್ತ ಹೊರಟಿದ್ದರಂತೆ. ಅವರು ಬೇಗನೇ ತಲಪುವಂತೆ ಮಾಡಲು ಟ್ರಾಫಿಕ್ ತಡೆಹಿಡಿಯಲಾಗಿತ್ತು.
’ಇವರನ್ನ ಆರಿಸಿ ತರೋರೇ ನಾವು. ನಮ್ಮ ಕೆಲಸ ಮುಖ್ಯವಲ್ಲವೇ? ಇವರು ಮಾತ್ರ ಎಲ್ಲರ ಕೆಲಸಕ್ಕೂ
ಅಡ್ಡಿ ಮಾಡಿ ತಮ್ಮ ಕೆಲಸಕ್ಕೆ ಬೇಗ ತಲಪಬೇಕು, ಅದೇ ನಮ್ಮ ಕೆಲಸಕ್ಕೆ ಹೋಗುವುದು ತಡವಾದರೆ
ಪರವಾಗಿಲ್ಲ ಅನ್ನೋ ಈ ಪ್ರವೃತ್ತಿ ಯಾವಾಗ ಬದಲಾಗುವುದೋ? ಅಲ್ಲಾ, ಇಂಥ ಪರಿಸ್ಥಿತೀಲಿ ಯಾರಾದ್ರೂ
ಅರ್ಜೆಂಟಾಗಿ ಆಸ್ಪತ್ರೆಗೆ ಹೋಗಬೇಕಾಗಿದ್ದರೆ ಏನಪ್ಪಾ ಗತಿ?’ ಎಂದುಕೊಳ್ಳುತ್ತಿರುವಾಗಲೇ ಹಿಂದೆ
ಎಂಬ್ಯುಲೆನ್ಸ್ ಶಬ್ದ ಕೇಳಿಸಿತು. ಆಗಲೂ ಟ್ರಾಫಿಕ್ ತೆರವುಗೊಳ್ಳಲಿಲ್ಲ. ಕೆಂಪು ದೀಪದ ಕಾರುಗಳು
ಸಾಲಾಗಿ ಹೋದವು. ಒಬ್ಬ ಮಂತ್ರಿಗೆ ಇಷ್ಟೆಲ್ಲ ಭದ್ರತೆ, ಇವರಿಗೆ ಅಧಿಕಾರ ನೀಡುವ ಸಾಮಾನ್ಯ ಜನತೆ
ಹಾಡಹಗಲೇ ಎಲ್ಲಿ ಬೇಕಲ್ಲಿ ಅಪಾಯಕ್ಕೀಡಾಗುತ್ತಾರಲ್ಲ, ಇದ್ಯಾಕೆ ಹೀಗೆ? ಎಂದು ಯೋಚಿಸುತ್ತಿರುವಾಗ
ಆ ಎಂಬ್ಯುಲೆನ್ಸ್ ನಮ್ಮ ಬಸ್ ಪಕ್ಕದಲ್ಲೇ ಹಾಯ್ದು ಹೋಯ್ತು. ಅದರೊಳಗಿದ್ದ ರೋಗಿ ಕೊನೆಯುಸಿರೆಳೆದಂತಿತ್ತು.
ಏಕೆಂದರೆ ಆ ರೋಗಿಯ ಅಕ್ಕಪಕ್ಕದಲ್ಲಿ ಕುಳಿತಿದ್ದವರೆಲ್ಲ ಎದೆಬಡಿದುಕೊಂಡು ಅಳುತ್ತಿದ್ದರು. ’ಛೆ!
ಹೀಗಾಗಬಾರದಿತ್ತು...’ ಎಂದು ಧ್ವನಿ ಕೇಳಿಬರುತ್ತಿದ್ದಂತೆಯೇ ’ಬರೀ ವಿಮರ್ಶೆ, ಅವಲೋಕನ ಇದೇ
ಆಯ್ತು. ನನ್ನ ಕೈಲಿ ಏನೂ ಮಾಡಲಾಗದು. ನೀನು ಬಾಯಿ ಮುಚ್ಕಂಡು ಸುಮ್ನಿರಲೇ’ ಎಂದು ಮನಸ್ಸನ್ನ
ಸುಮ್ಮನೇ ಕೂಡಿಸಲು ನೋಡಿದೆ. ಲಗಾಮಿಲ್ಲದ ಕುದುರೆಯದು. ನನ್ನಂತಹ ಸಾಮಾನ್ಯ ಮನುಷ್ಯನಿಂದ
ನಿಯಂತ್ರಿಸಲಾದೀತೇ? ಅದು ಬಾಯಿ ಬಡಿದುಕೊಳ್ಳುತ್ತಿತ್ತು. ನಾನು ಹಾಗೇ ಕಿಟಕಿಯಿಂದಾಚೆ ಟ್ರಾಫಿಕ್,
ಬಿಸಿಲು, ಬಿಸಿಲಲ್ಲಿ ಓಡಾಡುತ್ತಿದ್ದ ಜನರನ್ನು ನೋಡುತ್ತ ಕುಳಿತೆ. ಈ  ಟ್ರಾಫಿಕ್ ಗೋಳು ನನ್ನನ್ನು ದಣಿಸಿಬಿಟ್ಟಿತ್ತು.
ಹಿತವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಹಾಯ್ ಎನ್ನಿಸಿ ಹಾಗೇ ಕಣ್ಣು ಮುಚ್ಚಿದೆ. ಒಂದೆರಡು ನಿಮಿಷ
ಅಷ್ಟೇ, ಬಾಸ್ ಕಾಲ್ ಬಂತು ’ದಿಸ್ ಇಸ್ ಟೂ ಮಚ್ ದೀಪಕ. ಅರ್ಧ ಗಂಟೆ ಲೇಟ್. ಆಫೀಸಿಗೆ ಬಂದು ನನ್ನ
ಭೇಟಿಯಾಗಿ’ ಎಂದು ಫೋನ್ ಇಟ್ಟುಬಿಟ್ಟರು.

            ’ಬರೀ ಆಫೀಸಿಗೆ ಬರುವುದೊಂದೇ ಅಲ್ಲ ನಮ್ಮ ಚಿಂತೆ. ಬಸ್ಸು ಹತ್ತಿ ಬರುವಾಗ ದಾರಿಯಲ್ಲಿ
ಸಣ್ಣ ರಣಭೂಮಿಯನ್ನೇ ದಾಟಿ ಬಂದತಹ ಅನುಭವವಾಗುತ್ತದೆ. ಅದೆಲ್ಲ ತಿಳ್ಕೊಂಡು ಮಾತಾಡ್ಬೇಕು. ಸುಮ್ನೆ
ಲೇಟ್ ಆಯ್ತು ಅಂತಾ ಕಿಡಿ ಕಾರಿದ್ರೆ?’ ಎಂದು ಮನಸ್ಸು ಮತ್ತೆ ಕೂಗಾಡಲು ಶುರು ಮಾಡಿತು. ಈ ಬಾರಿ
ಅದನ್ನು ಸುಮ್ಮನಿರಿಸಲಿಲ್ಲ. ಇರುವುದನ್ನೇ ಹೇಳಿದೆ, ಅದರಲ್ಲೇನು ತಪ್ಪಿಲ್ಲ ಅನ್ನಿಸಿತು.
ಅಲ್ಲದೇ, ಮನಸ್ಸು ಮಾತಾಡಿದ್ದು ಕೇಳುವವರಾದರೂ ಯಾರಿದ್ದಾರೆ ಇಲ್ಲಿ. ನಮ್ಮ ಕಿವಿಗಳೆಲ್ಲ ನಿತ್ಯದ
ಸಮಸ್ಯೆಗಳು, ಟ್ರಾಫಿಕ್ಕು, ಸುಳ್ಳು ಆಶ್ವಾಸನೆಗಳು, ಬಾಂಬ್ ಸ್ಪೋಟಗಳು ಇವುಗಳಿಂದಲೇ
ತುಂಬಿಕೊಂಡಿರುವಾಗ, ಮನಸ್ಸಿನ ಧ್ವನಿ ಕೇಳಿಸುವುದೆಂತು? 
ಎಂದು ಮತ್ತೆ ಹಾಗೇ ನಿದ್ರೆ ಹೋದೆ. ಯಾವ ಋತುವಾದರೇನು, ಗದ್ದಲ, ಗೊಂದಲ, ಮನೆ, ಪೇಟೆ
ಏನಾದರೇನು ಕನಸು ಎಲ್ಲಿಂದಲೋ ನುಸುಳಿಕೊಂಡು ಬಂದೇಬಿಡುತ್ತದೆ. ನನ್ನ ಕನಸಲ್ಲಿ ಯಾರೋ ಅಪ್ಸರೆ,
ನನ್ನ ತಲೆ ನೇವರಿಸುತ್ತ, ಕೆನ್ನೆ ಸವರಿ ಕುತ್ತಿಗೆ ತೀಡಿ ಮೆಲ್ಲಗೆ ಜೇಬಿನಲ್ಲಿ ಕೈ ಹಾಕಿ ಕಚಗುಳಿ
ಇಡುತ್ತಿದ್ದಳು. ನನಗೋ ಒಂದೆಡೆ ನಂಬಲಾಗುತ್ತಿಲ್ಲ, ಇನ್ನೊಂದೆಡೆ ಪರಮಾನಂದ. ಬಸ್ಸು ನಿಂತಿದ್ದು
ಅವಳಿಗೆ ಇಷ್ಟವಾಗಲಿಲ್ಲವೇನೋ, ಕಣ್ತೆರೆದು ನೋಡಿದರೆ ಮಾಯವಾಗಿದ್ದಳು. ಅವಳ ಜೊತೆ ನನ್ನ ಜೇಬಿನಿಂದ
ಸ್ಮಾರ್ಟ್ ಫೋನ್ ಮಾಯ! ಅಪ್ಸರೆ ಹೀಗ್ಯಾಕೆ ಮಾಡಿದಳು ಎಂದು ಕೇಳುವ ಅಗತ್ಯವಿರಲಿಲ್ಲ.
ಬೇಜಾರಾಯ್ತು. ಇನ್ನೊಂದು ಬಸ್ ಹಿಡಿಯಬೇಕೆಂದು ಸಿಗ್ನಲ್ ನಲ್ಲಿ ಇಳಿದುಕೊಂಡೆ. ಮಂಗಳಮುಖಿಯರು
ಬಂದವರೇ ನೂರು ರೂಪಾಯಿ ಕಿತ್ತುಕೊಂಡು, ಆಶೀರ್ವಾದ ಮಾಡಿ ಹೋದರು. ಬಸ್ ಹತ್ತಿ ನಿಂತುಕೊಂಡೆ. ಆ
ಬಸ್ಸು ಆಮೆ ವೇಗದಲ್ಲಿ ಸಾಗುತ್ತ ನಮ್ಮ ಆಫೀಸಿನ ಬಳಿ ನಿಂತುಕೊಂಡಿತು. ಬಸ್ಸು ಇಳಿದು ಓಡಿದೆ.
ಬಾಸ್ ನನ್ನ ಕ್ಯಾಬಿನ್ ಬಳಿಯೇ ನಿಂತುಕೊಂಡಿದ್ದರು. ಅಲ್ಲಿಂದ ಹೋಗುವಾಗ ನನಗೆ ಮಂಗಳಾರತಿ
ಎತ್ತಿದರು ಮತ್ತು ಅರ್ಧ ದಿನದ ಸಂಬಳ ಕಟ್ ಎಂಬ ಸಿಹಿ ಸುದ್ದಿ ನೀಡಿ ಹೋದರು. ನಾನು ಕುರ್ಚಿಯಲ್ಲಿ
ಕುಸಿದೆ. ’ಛೆ, ಏನ್ ಜೀವನಾನೋ ಇದು. ನಾನು ತಪ್ಪು ಮಾಡದಿದ್ರೂ ತಡವಾಗಿ ಬಂದೆ. ಯಾಕೆ ತಡ ಆಯ್ತು
ಅಂತಾ ಹೇಳಿದ್ರೆ ನಂಬೋರಿಲ್ಲ. ಅರ್ಧ ದಿನ ಸಂಬಳ ಹೋಯ್ತಲ್ಲಪ್ಪ’ ಅಂತಾ ಹಣೆ
ಚಚ್ಚಿಕೊಳ್ಳುತ್ತಿರುವಾಗ, ಮೆಜೆಸ್ಟಿಕ್ ನಲ್ಲಿ ನೆಲಕ್ಕೆ ಬಿದ್ದ ಅಜ್ಜಿ, ಟ್ರಾಫಿಕ್ ನಿಂತುಹೋಗಿ
ಎಂಬುಲೆನ್ಸ್ ನಲ್ಲಿ ಅಸುನೀಗಿದ ರೋಗಿ, ಅನಗತ್ಯವಾಗಿ ಟ್ರಾಫಿಕ್ ನಿಲ್ಲಿಸಿ ಸಾಮಾನ್ಯ ಜನರ ಜೀವನ
ಅಸ್ತವ್ಯಸ್ತ ಮಾಡಿ ಏನಾದರೆ ತನಗೇನು ಅನ್ನೋ ರೀತಿ ಹೊರಟು ಹೋದ ಜನಪ್ರತಿನಿಧಿ, ನನ್ನಿಂದ ನೂರು
ರೂಪಾಯಿ ಕಿತ್ತುಕೊಂಡ ಆ ಮಂಗಳಮುಖಿ, ರಣಬಿಸಿಲು, 
ದಿನನಿತ್ಯದ ಗೋಳಾಟ ನೆನಪಾಗಿ ಅದೇ ಗುಂಗಿನಲ್ಲಿ ಸಿಸ್ಟಮ್ ಆನ್ ಮಾಡಿದೆ. ಇಲ್ಲಿಯವರೆಗೆ
ನನ್ನ ತಲೆಯಲ್ಲಿ ಹೇನುಗಳಂತೆ ಬುಚುಗುಡುತ್ತಿದ್ದ ಆ ಆಲೋಚನೆಗಳನ್ನು ಹೊರ ತೆಗೆದು, ಒರೆದು ಕಸದ
ಬುಟ್ಟಿಗೆ ಹಾಕಿ, ನಿಟ್ಟುಸಿರು ಬಿಡುತ್ತ ಕಂಪ್ಯೂಟರ್ ಒಳ ಹೊಕ್ಕೆ. 

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.