Skip to main content

ನಗದು ಹಣ ಮುದ್ರಣ ಸ್ಥಗಿತವಾಗಲಿ!

ಇಂದ Prakash. P
ಬರೆದಿದ್ದುFebruary 25, 2015
3ಅನಿಸಿಕೆಗಳು

ಪ್ರಾಚೀನ ಕಾಲದಲ್ಲಿ ಜನರು ಮಾಡುತ್ತಿದ್ದ ವಸ್ತು ವಿನಿಮಯ ವ್ಯವಹಾರದಲ್ಲಿ ಅನೇಕ ನ್ಯೂನ್ಯತೆಗಳನ್ನು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರವಾಗಿ "ನಾಣ್ಯ ಮತ್ತು ನೋಟುಗಳ" ಮುದ್ರಣವನ್ನು ಆರಂಭಿಸಿದರು. ಆದರೆ ಇದರ ಪ್ರತಿಫಲ ಏನಾಯಿತೆಂದರೆ ’ಕುದಿಯುವ ಬಾಣಲಿಯಿಂದ ತಪ್ಪಿಸಿಕೊಂಡು ಉರಿಯುವ ಬೆಂಕಿಗೆ ಬಿದ್ದಂತಾಯಿತು’ ಇವತ್ತಿನ ಆರ್ಥಿಕ ವ್ಯವಸ್ಥೆ.

ನಿಯಂತ್ರಿಸಲು ಸಾಧ್ಯವಿಲ್ಲವೇ?

ಕಪ್ಪು ಹಣ, ಖೋಟಾ ನೋಟು, ಮನಿ ಲಾಂಡ್ರಿ, ಭ್ರಷ್ಟಾಚಾರ, ಸರ್ಕಾರಿ ಕಾಮಗಾರಿಗಳಲ್ಲಿ ಕಮಿಷನ್ ದಂಧೆ, ಸರ್ಕಾರಿ ಕಛೇರಿಗಳಲ್ಲಿ ಲಂಚಾವತಾರ, ಆಸ್ತಿ ಮಾರಾಟಗಳಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗುವ ಭಾರೀ ನಷ್ಟ, ನಗರ ಬಸ್ ಸಾರಿಗೆಗಳಲ್ಲಿ ಚಿಲ್ಲರೆ ಅಭಾವ ಎಂಬ ಕಾರಣ ನೀಡಿ ಶೇಖರಿಸುವ ಹಣ, ಚೆಕ್ ಪೋಸ್ಟ್ ಗಳಲ್ಲಿ ಅಕ್ರಮ ಹಣ ವಸೂಲಿ, ಬಸ್ ನಿಲ್ದಾಣಗಳ ಶೌಚಾಲಯಗಳಲ್ಲಿ ನಿಗದಿಗಿಂತ ಅಧಿಕ ಹಣವನ್ನು ದರ್ಪದಿಂದ ವಸೂಲಿ ಮಾಡುವುದು, ರೈಲ್ವೇ ಸ್ಟೇಷನ್ ಮತ್ತು ಬಸ್ ನಿಲ್ದಾಣಗಳಲ್ಲಿರುವ ಅಂಗಡಿಗಳಲ್ಲಿ ಗರಿಷ್ಠ ದರಕ್ಕಿಂತ ಅಧಿಕ ಬೆಲೆಗೆ ಸರಕುಗಳ ಮಾರಾಟ!

ಚುನಾವಣಾ ಸಮಯಗಳಲ್ಲಿ ಹಂಚಲ್ಪಡುವ ಅಕ್ರಮ ಹಣ, ಅದ್ದೂರಿ ಮದುವೆ ವೆಚ್ಚಗಳು, ವರದಕ್ಷಿಣೆ, ಪ್ರಭಾವಿ ವ್ಯಕ್ತಿಗಳು ಮುಂಚೂಣಿಗೆ ಬರಲು ಅದ್ದೂರಿಯಾಗಿ ಹುಟ್ಟು ಹಬ್ಬಗಳನ್ನು ಆಚರಿಸುವುದು, ಬಿ.ಫಾರಂ ನೀಡಲು , ಎಂ.ಎಲ್.ಸಿ ಸ್ಥಾನ ನೀಡಲು ಹಣದ ಬೇಡಿಕೆ! ಇವುಗಳಿಗೆ ಅಂತ್ಯವೇ ಇಲ್ಲವೇ?

 ಮಾನ್ಯ ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಅಧೋಗತಿಗೆ ಕೊಂಡೊಯ್ಯುವ "ನಗದು ಹಣವನ್ನು" ಸಂಪೂರ್ಣವಾಗಿ ನಿಷೇಧಿಸಿ ಪರ್ಯಾಯ ಮಾರ್ಗವನ್ನು ಜಾರಿಗೆ ತರಬಹುದು. 

ಯಾವುದದು ಪರ್ಯಾಯ ಮಾರ್ಗ?

ಕಾಗದದ ಮೇಲೆ ಮೌಲ್ಯವನ್ನು ಮುದ್ರಿಸುವ ಬದಲು ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ "ಆನ್ ಲೈನ್" ಮೂಲಕ "ನಗದು ವರ್ಗಾವಣೆಯ" ಬದಲು "ಮೌಲ್ಯ ವರ್ಗಾವಣೆ" ಅಂದರೆ ಅಂಕಿ ಅಂಶಗಳ ಮೂಲಕ ಮೌಲ್ಯವನ್ನು ವರ್ಗಾಯಿಸುವ ವ್ಯವಸ್ಥೆ ಜಾರಿಯಾಗಬೇಕು.

ಉದಾ: ವ್ಯಕ್ತಿಯ ಸಂಬಳಕ್ಕೆ ಅಂಕಿ ಅಂಶಗಳ ಮೂಲಕ ಮೌಲ್ಯವನ್ನು ನಿರ್ಧರಿಸಬೇಕು. ನಿರ್ಧರಿಸಿದ ಮೌಲ್ಯವನ್ನು ಆನ್ ಲೈನ್ ಮೂಲಕ ಆತನ ಖಾತೆಗೆ ವರ್ಗಾಯಿಸಬೇಕು. ವರ್ಗಾಯಿಸಲ್ಪಟ್ಟ ಮೌಲ್ಯವನ್ನು ಆತನೂ ಸಹ ಆನ್ ಲೈನ್ ಮೂಲಕವಾಗಿಯೇ ಖರ್ಚುಮಾಡಬೇಕು. ಹೀಗೆಯೇ ಎಲ್ಲೆಡೆ ನೋಟು ಅಥವಾ ನಾಣ್ಯ ಚಲಾವಣೆಯ ಬದಲು ಈಗಿರುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾದರಿಯಲ್ಲೇ "ಮೌಲ್ಯ" ಚಲಾವಣೆ (ವರ್ಗಾವಣೆ) ಜಾರಿಗೆ ಬರಬೇಕು.

 ಹೀಗೆ ಮಾಡುವುದರಿಂದ ಲಾಭವೇನು?

1. ಕಪ್ಪು ಹಣ ನಿಯಂತ್ರಣ: ಎಲ್ಲಾ ವ್ಯವಹಾರವೂ ಆನ್ ಲೈನ್ ಮೂಲಕ ನಡೆಯುವುದರಿಂದ ಕಪ್ಪು ಹಣ ಉತ್ಪತ್ತಿಯಾಗುವ ಪ್ರಮೇಯವಿಲ್ಲ. ಇದರ ಮೂಲಕ ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗುವುದು.

2. ಲಂಚ, ಭ್ರಷ್ಟಾಚಾರಗಳಿರುವುದಿಲ್ಲ: ಕಪ್ಪು ಹಣದ ಉತ್ಪತ್ತಿ ಇಲ್ಲ ಎಂದ ಮೇಲೆ ಲಂಚ ನೀಡಲು ಸಾಧ್ಯವಿಲ್ಲ. ಕೊಟ್ಟರೂ ಆನ್ ಲೈನ್ ಮೂಲಕವೇ ಕೊಡಬೇಕಾಗುತ್ತದೆ. ಆಗ ಅದನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಿರುತ್ತದೆ.

3. ಸರ್ಕಾರಿ ಕಾಮಗಾರಿಗಳಲ್ಲಿ ನಡೆಯುವ ಕಮೀಷನ್ ದಂಧೆ ನಿಯಂತ್ರಣವಾಗುತ್ತದೆ.

4. ಖಾಸಗಿ ಆಸ್ತಿ ಮಾರಾಟಗಳಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟ ನಿಯಂತ್ರಿಸಲ್ಪಡುತ್ತದೆ.

5. ಮೀಟರ್ ಬಡ್ಡಿ, ಕಂಡ ಬಡ್ಡಿ, ಮುಂತಾದ ಅಕ್ರಮ ವ್ಯವಹಾರಗಳು ನಿಯಂತ್ರಿಸಲ್ಪಡುತ್ತದೆ.

6. ನೋಟು ಮುದ್ರಣಕ್ಕಾಗಿ ರಿಜರ್ವ್ ಬ್ಯಾಂಕಿನಲ್ಲಿಟ್ಟಿರುವ ಟನ್ ಗಟ್ಟಲೆ ಚಿನ್ನ ಒಂದೇ ಕಡೆ ಕೊಳೆಯುವುದು ಬೇಕಾಗಿಲ್ಲ. ಚಿನ್ನ ತನ್ನ ಮೌಲ್ಯವನ್ನು ಕಳೆದು ಕೊಂಡು ಜನ ಸಾಮಾನ್ಯರು ಸಮಾನವಾಗಿ ಉಪಯೋಗಿಸುವಂತಾಗುತ್ತದೆ.

7. ದೇಶದ ಎಲಾ ಪ್ರಜೆಗಳ ವೈಯಕ್ತಿಕ ತಲಾದಾಯ, ಖರ್ಚುವೆಚ್ಚಗಳ ಸಮಗ್ರ ಮಾಹಿತಿ ಸರ್ಕಾರಕ್ಕೆ ಸುಲಭವಾಗಿ ಲಭಿಸುತ್ತದೆ. ಇದರಿಂದ ಅನಗತ್ಯವಾಗಿ ಮೀಸಲಾತಿ ನೀಡುವುದು ತಪ್ಪಿ ಅವಶ್ಯಕತೆ ಇರುವ ಜನರಿಗೆ ನೇರವಾಗಿ ಮೀಸಲಾತಿ ಸೌಲಭ್ಯಗಳನ್ನು ತಲುಪಿಸಲು ಸಾಧ್ಯ. ಇದರಿಂದ ಬಡತನ ನಿರ್ಮೂಲವಾಗಿ ದೇಶ ಅಭಿವೃದ್ಧಿಯೆಡೆಗೆ ಸಾಗುತ್ತದೆ. 

ಗಾಂಧಿ ಕಂಡ ಕನಸು ನನಸಾಗುತ್ತದೆ, ಮೋದಿಯ ಸ್ವಚ್ಚ ಭಾರತ ಎಲ್ಲಾ ರಂಗಗಳಲ್ಲೂ ಸ್ವಚ್ಚವಾಗುತ್ತಾ, ಭ್ರಷ್ಟಾಚಾರ ರಹಿತ ನವ ಭಾರತ ನಿರ್ಮಾಣಕ್ಕೆ ನಾಂದಿಯಾಗುತ್ತದೆ.

?? 

ನಗದು ರೂಪದಲ್ಲಿ ವ್ಯವಹರಿಸುವುದರಿಂದಾಗುವ ಅನಾನುಕೂಲಗಳೇನು?

1. ಖೋಟಾನೋಟುಗಳ ನಿಯಂತ್ರಣ ಕಷ್ಟ. ಸಿಬ್ಬಂದಿಯ ಜೊತೆಗೆ ಪರಿಶೀಲನೆಗೋಸ್ಕರ ಯಂತ್ರವನ್ನೂ ಅವಲಂಭಿಸಬೇಕಾಗುತ್ತದೆ.

2. ಬ್ಯಾಂಕುಗಳ ಸರಣಿ ರಜೆ ಬಂದಾಗ ವ್ಯವಹಾರ ಕುಂಠಿತವಾಗುತ್ತದೆ. ಅದರಲ್ಲೂ ದೇಶದ ಅನೇಕ ಕಡೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ರಿಲೆಯನ್ಸ್ ಸಮೂಹ, ಮೋರ್, ಬಿಗ್ ಬಜಾರ್, ಈಸೀ ಡೇ ಮುಂತಾದ ಕಂಪೆನಿಗಳಲ್ಲಿ ವ್ಯವಹಾರದ ಮೂಲಕ ಸಂಗ್ರಹವಾಗುವ ನಗದು ಹಣವನ್ನು ಶೀಘ್ರದಲ್ಲಿ ತನ್ನ ಮೂಲ ಖಾತೆಗೆ ಜಮಾ ಮಾಡಲು ತಡವಾಗುತ್ತದೆ. ಹೀಗೆ ತಡವಾಗುವುದರಿಂದ ವ್ಯವಹಾರದಲ್ಲಿ ಕುಂಠಿತವಾಗುವುದಲ್ಲದೆ ಕಳ್ಳತನದ ಅಪಾಯ ಹೆಚ್ಚು. ಬೆಂಕಿ ಮುಂತಾದ ಅಪಘಾತಗಳ ಅಪಾಯ ಹೆಚ್ಚಿರುತ್ತದೆ.

3. ಚಿಲ್ಲರೆ ಅಭಾವದ ಸಮಸ್ಯೆ ಹೆಚ್ಚು. ಇದರಿಂದ ಗ್ರಾಹಕರಿಗೇ ಅನೇಕ ಭಾರಿ ನಷ್ಟ.

ಮೇಲಿನ ಎಲ್ಲಾ ಅಂಶಗಳನ್ನು ಗಮನಿಸುವಾಗ ನಗದು ಹಣವಿಲ್ಲದ ಪ್ರಪಂಚವನ್ನು ನಾವೆಲ್ಲರೂ ಸ್ವಾಗತಿಸುವುದು ಒಳ್ಳೇಯದಾಗಿದೆ.

??

ಪ್ರಕಾಶ್. ಪಿ. 9945804171

ರೆಹೋಬೋತ್ ಡಿಜಿಟಲ್ ಆರ್ಟ್ಸ್, ಮೈಸೂರು

ಲೇಖಕರು

Prakash. P

ಬೆಳಕಾಗಲಿ...!

ಅನಿಸಿಕೆಗಳು

ರಾಜೇಶ ಹೆಗಡೆ ಗುರು, 02/26/2015 - 06:16

ತುಂಬಾ ಉತ್ತಮವಾದ ವಿಚಾರ ಪ್ರಕಾಶ್ ಅವರೇ,

ಆನಲೈನ್ ಹಣ ಚಲಾವಣೆ ಬಂದರೆ ನಾಣ್ಯ, ನೋಟುಗಳ ಮುದ್ರಣ, ತಯಾರಿಕೆ ವೆಚ್ಚ ಉಳಿಯುತ್ತದೆ. ಇನ್ನು ಬೃಷ್ಟಾಚಾರ ಕೂಡಾ ಸಂಪೂರ್ಣ ನಿರ್ಮೂಲನೆ ಆಗದಿದ್ದರೂ ಕಡಿಮೆ ಆದೀತು.

ನಗರ ಪ್ರದೇಶಗಳಲ್ಲಿ ಈಗಾಗಲೆ ಆನಲೈನ್ ಹಣ ಬಳಕೆ ಪರೋಕ್ಷವಾಗಿ ಆರಂಭವಾಗಿದೆ. ಉದಾಹರಣೆಗೆ ಹೆಚ್ಚಿನ ಜನರಿಗೆ ಸಂಬಳ ಬ್ಯಾಂಕ್ ಅಕೌಂಟಿಗೆ ಬರುತ್ತೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಲ್ಲಿಯೇ ವ್ಯವಹಾರ ಇತ್ಯಾದಿ.

 

 

revanna ಗುರು, 02/26/2015 - 22:37

ಧನ್ಯವಾದಗಳು ಸರ್

JAYARAM NAVAGRAMA ಶುಕ್ರ, 04/17/2015 - 11:55

ಅಣ್ಣಾ ಇದೇ ವಿಚಾರ ಫೇಸ್ಬುಕ್ನಲ್ಲಿ ಬರೆದೂ ಬರೆದೂ ಸುಸ್ತಾಗಿದ್ದೇನೆ ಈಗ ತಾನೇ ನಿಮ್ ಪೋಸ್ಟ್ ನೋಡಿದೆ ನಿಮ್ಮ ಮತ್ತು ನನ್ನ ಇಂಗಿತ ಒಂದೇ ಆದರೂ ಕಳ್ಳ ಕಾಕರಿಗೆ ಇದು ಅಪಾಯಕಾರಿ ಸೋ ಕಳ್ಳರಿಂದ ನಡೆಸಲ್ಪಡುವ ತನಕ ಇದು ಖಂಡಿತಾ ಜಾರಿ ಆಗಲ್ಲ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.