ಇಂಗು ತಿಂದ ಮಂಗು
ಇಂದು ಎದ್ದ ತಕ್ಷಣ ಮನೆ ನಿಶ್ಯಬ್ದ
ಬಚ್ಚಲಲ್ಲಿ ನಲ್ಲಿ, ಅಡುಗೆ ಮನೆ ಪಾತ್ರೆಗಳು ಎಲ್ಲವೂ
ಸ್ತಬ್ಧ
ಕಣ್ಣು ತಿಕ್ಕಿ ನಿದ್ರೆ ಓಡಿಸಿದೆ
ಸೋಫಾದಲ್ಲಿ ಕುಳಿತಿದ್ದ ಶ್ರೀಮತಿಯ ಕಂಡೆ
ಎಂದಿನಂತೆ ಸಮೀಪಿಸಿ ಅಪ್ಪಿಕೊಳ್ಳ ಹೋದೆ
ಹಿಂದೆಂದೂ ಕೇಳಿರದ ಗದ್ಗದ ಕಂಠ ಕೇಳಿದೆ
ನನ್ನಿಂದೇನಾದರೂ ತಪ್ಪು ನಡೆದಿದೆಯೇ ಎಂದುಕೊಂಡೆ
ಅಂಥದ್ದೇನೂ ಇಲ್ಲವೆಂದು ತಿಳಿದು ಸಮಾಧಾನಗೊಂಡೆ
ಹುಷಾರಿಲ್ಲವೇನೋ ಎಂದುಕೊಂಡು ಸುಮ್ಮನೇ ನಿಂತೆ
ಅವಳೇ ಹೇಳಿದಳು ಕೆಲಸದವಳಿಂದು ಬರೋದಿಲ್ವಂತೆ
ಕಣ್ಣೀರ ಕಟ್ಟೆ ಒಡೆದಿರಲು ಕಾರಣ ತಿಳಿಯಿತು
ಇನ್ನು ಅಡಿಗೆ ಮಾಡಲು ಕೇಳದಿರುವುದೇ ಒಳಿತು ಎನ್ನಿಸಿತು
ಕಸ ಗುಡಿಸಿದೆ, ಪಾತ್ರೆ ತೊಳೆದೆ, ತರಕಾರಿ ಹೆಚ್ಚಿದೆ
ಅಮ್ಮಾವ್ರು ಅತ್ತು ಅತ್ತು ದಣಿದು ಮಲಗಿದ್ದ ಕಂಡೆ
ಅಡಿಗೆ ಮಾಡಿದೆ, ಸ್ನಾನ ಮಾಡಿ ರೆಡಿಯಾದೆ
ಚಹಾ ಮಾಡಿ, ಅವಳನ್ನ ಎಚ್ಚರಿಸಿದೆ
ಏನೂ ಚಿಂತಿಸಬೇಡ, ಎಲ್ಲ ಕೆಲಸ ಆಗಿದೆ ಎಂದೆ
ಕಣ್ಣೀರು ನಿಂತು ಸಂತೋಷ ಹರಿದು ಬಂತು
ಅದೇ ಖುಷಿಯಲ್ಲಿ ನನಗೊಂದು ಮುತ್ತು ಸಿಕ್ತು
ಸುರ್ ಎಂದು ಗುಟುಕು ಎಳೆದು ನಕ್ಕಳು
ಇನ್ನೇನೂ ಕೆಲಸವಿಲ್ಲ, ಹಾಯಾಗಿ ಟಿ.ವಿ. ನೋಡುವೆ ಎಂದಳು
ಎಲ್ಲ ಕೆಲಸ ನನ್ನ ಮೈಮೇಲೇ ಬಿತ್ತಲ್ಲ ಎಂದು
ಚಿಂತೆಯಾಗಿತ್ತೆಂದಳು
ನೀವು ಎಲ್ಲ ಮಾಡಿಬಿಟ್ರಲ್ಲ, ಇನ್ನೇನು ಟಿ.ವಿ. ಮುಂದೆ
ಕೂರೋದು ಎಂದಳು
ನನ್ನ ಮುಖದಲ್ಲಿ ಆಶ್ಚರ್ಯದ ಛಾಪು ಕಂಡು ಮತ್ತೆ ಹಲ್ಲು
ಕಿರಿದಳು
ಅದೇನೂ? ಆಫೀಸಿಗೆ ಹೋಗುವುದಿಲ್ವೇ ಎಂದು ಕೇಳಲು
ಇವತ್ತು ರಜೆ, ನೆನಪಿಲ್ಲವೇ ನಿಮಗೆ ಎಂದಾಗ ಕಣ್ಣಗಲಿಸಿ
ನೋಡಿದೆ
ಇನಾದರೇನೀಗ, ನಾನು ಇಂಗು ತಿಂದ ಮಂಗನಂತಾಗಿದ್ದೆ!
ಸಾಲುಗಳು
- 299 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ