Skip to main content

ಕಳಚಿದ ಪೊರೆ -ಸಣ್ಣ ಕತೆ - ೧೭ - ತಪ್ಪು ಮಾಡಲ್ಲ

ಬರೆದಿದ್ದುFebruary 24, 2015
noಅನಿಸಿಕೆ

                                                       ಕಳಚಿದ ಪೊರೆ -ಸಣ್ಣ ಕತೆ - ೧೭ ತಪ್ಪು ಮಾಡಲ್ಲ


                              'ಹೋಗೆ, ನಿಮ್ಮಪ್ಪನ ಹತ್ರ ಹೋಗಿ ಐವತ್ತು ಸಾವಿರ ತಗೊಂಡ್ಬಾ, ಇಲ್ಲಾಂದ್ರೆ ಮತ್ತೇ ಈ ಮನೆ ಹೊಸ್ಲು ತುಳಿಬೇಡ, ಹೋಗು' ಎಂದು ಪಂಕಜಮ್ಮ ತನ್ನ ಸೊಸೆಯ ತಲೆ ಮೇಲೆ ಮೊಟಕಿದರು. ಶೀಲಾ ಅಮ್ಮಾ ಎಂದು ಕಿರುಚುತ್ತಾ 'ಬೇಡಾ ಅತ್ತೆ, ಹೀಗೆಲ್ಲಾ ಮಾತಾಡ್ಬೇಡಿ, ಅಲ್ಲಿ ತುಂಬಾ ಕಷ್ಟಾ ಇದೆ, ಇಗಾಗ್ಲೆ ಮದ್ವೆಗೆ ಮಾಡಿರೋ ಸಾಲ ಕೂಡ ಅಪ್ಪ ತೀರ್ಸಿಲ್ಲಾ, ಹಣಕಾಸಿಗೆ ತುಂಬಾ ತೊಂದ್ರೆ ಇದೆ, ನಿಮ್ಮ ದಮ್ಮಯ್ಯಾ ಅತ್ತೆ, ಬೇಕಾದ್ರೆ ಯಾವ್ದಾದ್ರೂ ಕೆಲ್ಸಕ್ಕೆ ಹೋಗ್ತೀನಿ, ಮನೇಲೂ ದುಡಿತೀನಿ, ತವ್ರಿಗೆ ಮಾತ್ರ ನಾನು ಹೋಗಲ್ಲಾ' ಎಂದು ಎಷ್ಟು ಗೋಗರೆದ್ರು ಪಂಕಜಮ್ಮ ಕೇಳಲಿಲ್ಲ, ಪುನಹ ಬಯ್ದು ಬಟ್ಟೆ ಎತ್ತಿ ಹೊರಗೆ ಬಿಸಾಡಿದಳು. ಕೊನೆಗೆ ವಿಧಿ ಇಲ್ಲದೇ ಶೀಲಾ ಬಟ್ಟೆ ತೆಗೆದುಕೊಂಡು ಯೋಚಿಸುತ್ತಾ ಹೊರಗೆ ಹೊರಟಳು. ಸಂಜೆ ಮನೆಗೆ ಬಂದ ಮಗ ಶೀಲಾ ಕಾಫಿ ತೊಗೊಂಡ್ಬಾ ಎಂದು ಮಡದಿಯನ್ನು ಕರೆದ, ಅವಳು ಉತ್ತರ ಕೊಡದಿದ್ದಾಗ ತಾಯಿಯನ್ನು ಕೇಳಿದ, 'ಅಮ್ಮಾ ಶೀಲಾ ಎಲ್ಲಿ', ತಾಯಿ ಕೂಡಲೇ ಹೇಳಿದಳು, 'ಏನೋಪ್ಪ ನನ್ಗೇನು ಗೊತ್ತು, ಬಟ್ಟೆಗಳ್ನ ಬ್ಯಾಗಲ್ಲಿ ಇಟ್ಕೋಂಡು ಹೋದ್ಲು, ಕೇಳಿದ್ರೆ ತವರ್ಗೋಗ್ತೀನಿ, ಎಂಟತ್ತು ದಿನ ಬರಲ್ಲಾ ಅಂತ ಗೊಣಗಾಡ್ತಾ ಹೋದ್ಲು'. ಮಗನಿಗೆ ಅನುಮಾನ ಬಂದು ತಾಯಿನ ಕೇಳಿದ, 'ನೀನೆನಾದ್ರೂ ಅವ್ಳನ್ನ ಬಯ್ದಾ, ಅಥವಾ ಏನಾದ್ರೂ ಅಂದ್ಯಾ, ನಿನ್ ಬಾಯಿ ಸುಮ್ನಿರಲ್ಲಾ ಅಂತ ನಂಗೊತ್ತು, ಅದ್ಕೆ ಅವ್ಳು ಬೇಜಾರು ಮಾಡಿಕೊಂಡು ಹೋಗಿರ್ತಾಳೆ', ಎಂದು ಗೊಣಗುತ್ತಾ ಸರಿ ಕಾಫಿ ಕೊಡು ನಾನು ಮೊಬೈಲ್ನಲ್ಲಿ ಮಾತಾಡ್ತೀನಿ ಎಂದು ರೂಮಿಗೆ ಹೊರಟು ಬಟ್ಟೆ ಬದ್ಲಾಯಿಸಿ ಶೀಲಾಗೆ ಫೋನ್ ಮಾಡಿದ. 'ಆಕೆ ಮಾತಾಡುತ್ತಾ ಅತ್ತೆ ತುಂಬಾ ಒರ್ಟಾಗಿ ಮಾತಾಡಿದ್ರಿಂದ ಮನ್ಸಿಗೆ ತುಂಬಾ ನೋವಾಯ್ತುರೀ, ನೀವ್ ಎಷ್ಟು ಪ್ರೀತಿಯಿಂದ ಮಾತಾಡ್ತೀರಾ, ನೀವು ಮನೆಯಿಂದ ಹೊರಗೆ ಹೋದ್ಮೆಲೆ ಅತ್ತೆ ತುಂಬಾ ಕಾಟ ಕೊಡ್ತಾರೆ, ನಿಮಗೋಸ್ಕರ, ನಿಮ್ ಪ್ರೀತಿಗೋಸ್ಕರ ನಾನು ಎಲ್ಲಾ ಸಹಿಸ್ಕೊಂಡಿದೀನಿ. ನಿಮ್ಮತ್ರ ಇಷ್ಟು ದಿನ ಎಲ್ಲಾ ಮುಚ್ಚಿಟ್ಟಿದೀನಿ, ಈಗ ನಿಜ ಹೇಳ್ತಿದೀನಿ, ಅತ್ತೆ ತಲೆ ಮೇಲೆ ಹೊಡಿತಾರೆ, ತುಂಬಾ ಬಯ್ತಾರೆ, ಐವತ್ತು ಸಾವ್ರ ತಗೊಂಡ್ಬಾ ಅಂತ ತುಂಬಾ ಹಿಂಸೆ ಕೊಟ್ಟಿದಾರೆ, ಅದ್ಕೆ ಬೇಜಾರಾಗಿ ನಾನು ನಿಮ್ಗೆ ಹೇಳ್ದೆ ಇಲ್ಲಿಗೆ ಬಂದ್ಬಿಟ್ಟೆ, ಸಾರಿ ನನ್ ರಾಜಾ'. ಅವನಿಗೆ ನಿಜ ಗೊತ್ತಾಯ್ತು. ಕೂಡಲೇ ಹೇಳಿದ 'ಒಂದ್ಕೆಲ್ಸ ಮಾಡು, ನೀನು ಕೂಡ್ಲೆ ಬಂದ್ಬಿಡು, ನಾನು ನೀನು ಬೇರೆ ಮನೆಗೆ ಹೋಗಿ ಸಂಸಾರ ಮಾಡೋಣ ಅಥ್ವ ಅಮ್ಮನ್ನ ಊರಿಗೆ ಕಳ್ಸ್ತೀನಿ' ಎಂದ. ಶೀಲಾ ಹೇಳಿದಳು ನಾನು ಬರಲ್ಲ, ಬರಲ್ಲಾ ಅಂದ್ರೆ ಬರಲ್ಲಾ ನನ್ಗೂ ಸ್ವಾಭಿಮಾನ ಇದೆ,  ನೆನ್ನೆ ಚೆನ್ನಾಗಿ ಬಯ್ಸ್ಕೊಂಡು ನಾಳೆ ಬರಕ್ಕೆ ನಾನ್ ತಯಾರಿಲ್ಲ, ನಾನು ಇನ್ನು ಆರ್ ತಿಂಗ್ಳು ಬರಲ್ಲ, ನಾನು ನಿಮ್ಗೆ ಬೇಕಿದ್ರೆ ನೀವೆ ಮುಂದಿನ ಭಾನುವಾರ ಅತ್ತೆ ಜೊತೆ ಊರಿಗೆ ಬನ್ನಿ, ನಿಮ್ಗೊಂದು ಸರ್ಪ್ರೈಸ್ ನ್ಯೂಸ್ ಹೇಳ್ತೀನಿ ಎಂದಳು. ಸರಿ ಎಂದು ಫೋನಿಟ್ಟ. ಭಾನುವಾರ ಮಡದಿಯನ್ನ ನೋಡಲು ಅಮ್ಮ ಬರಲೊಪ್ಪದಿದ್ದರೂ ಬಲವಂತವಾಗಿ ಕರೆದುಕೊಂಡು ಹೊರಟ. ಶೀಲಾಳ ತಂದೆ ತಾಯಿ ಆತ್ಮೀಯವಾಗಿ ಬರಮಾಡಿಕೊಂಡು ಊಟ ಮುಗಿಸಿ ಬೀಗರೊಡನೆ ಮಾತಿಗೆ ಇಳಿದರು. 'ನೋಡಿ ತಾಯಿ ರಾಜೀವ ನಿಮ್ಗೆ ಒಬ್ನೆ ಮಗ, ಶೀಲಾ ನಮ್ಗು ಒಬ್ಳೆ ಮಗ್ಳು, ನಮ್ಗೆ ಇರೋ ಎಂಟು ಎಕರೆ ತೋಟ, ನಾಲ್ಕು ಎಕರೆ ಹೊಲ, ಈ ಮನೆ ಎಲ್ಲಾ ಮುಂದಿನ್ವರ್ಷ ನನ್ನ ಮೊಮ್ಮಕ್ಕಳ  ಹೆಸ್ರಿಗೆ ಮಾಡ್ಬೇಕಂತ ನಾವಿಬ್ರೂ ತೀರ್ಮಾನ ಮಾಡಿದ್ದೀವಿ ಎಂದಾಗ ಆಕೆಗೆ ಏನೂ ತೋಚದೇ ಮಗನ ಮುಖ ನೋಡಿದಳು, ರಾಜೀವ ಶೀಲಾ ಕಡೆ ನೋಡಿದಾಗ ಕೂಡಲೇ ಶೀಲಾ ರಾಜೀವನಿಗೆ ಸನ್ನೆ ಮಾಡಿ ಕರೆಯುತ್ತಾ ಒಳಗೆ ಕರೆದು ಕೈ ಹಿಡಿದು ಹೇಳಿದಳು, 'ಸಾಹೇಬ್ರಿಗೆ ಅರ್ಥ ಆಗ್ಲಿಲ್ವಾ , ಮೊಮ್ಮಕ್ಕಳು ಅಂದ್ರೆ ನಮ್ಗೆ ಹುಟ್ತಿರೋ ಮಕ್ಕಳಿಗೆ ನಮ್ತಂದೆ ಆಸ್ತಿ ಬರೀತಾರಂತೆ, ಅಂದ್ರೆ ನೀವು, ನೀವು ಎಂದು ರಾಗ ಎಳೆಯುತ್ತಾ ನೀವು ತಂದೆ ಆಗ್ತೀದಿರಾ, ಅಂದ್ರೆ ನಾನೀಗ ನಿಮ್ಮ ಮಗುವಿಗೆ ತಾಯಿ ಆಗಿದ್ದೀನಿ, ನನಗೀಗ ನಾಲ್ಕು ತಿಂಗಳು' ಎಂದು ಗಂಡನ ಕೈಯ್ಯನ್ನು ಮೆದುವಾಗಿ ಒತ್ತಿದಳು ಪ್ರೀತಿಯಿಂದ, ರಾಜೀವನಿಗೆ ಸಂತೋಷ ಉಕ್ಕಿ ಹೆಂಡತಿಯ ಹಣೆಗೆ ಹೂಮುತ್ತನಿಟ್ಟು ಅವಳನ್ನು ಎದೆಗೆ ಒರಗಿಸಿಕೊಂಡ ಮೃದುವಾಗಿ, ಶೀಲಾಳಂತೂ ಅತ್ತೇ ಬಿಟ್ಟಳು ಪತಿಯ ಪ್ರೀತಿಗೆ ಮಾರುಹೋದಳು, ಕೊನೆಗೆ ಹೇಳಿದಳು ಸಾವಿರ ಜನ್ಮದ ಪುಣ್ಯವೋ ಏನೋ ನಿಮ್ಮಂಥ ಪತಿ ನನಗೆ ಸಿಕ್ಕಿರುವುದು,  ನಂತರ ಇಬ್ಬರೂ ಆನಂದದಿಂದ ಹೊರಗೆ ಬಂದಾಗ ರಾಜೀವನ ತಾಯಿ ಶೀಲಾಳ ಕೈಹಿಡಿದು ಹೇಳಿದಳು, 'ಶೀಲಾ ನನ್ನನ್ನು ಮನ್ನಿಸು ತಾಯಿ ದೇವತೆ ನೀನು, ನಿನಗೆ ತುಂಬಾ ತೊಂದರೆ ಹಿಂಸೆ ಕೊಟ್ಟರೂ ನನ್ನ ಮಗನಿಗಾಗಿ ಎಲ್ಲವನ್ನೂ ಸಹಿಸಿಕೊಂಡೆ, ಇನ್ಮೇಲೆ ಯಾವತ್ತೂ ತಪ್ಪು ಮಾಡಲ್ಲಾ, ಇಂದಿನಿಂದ ನೀನು ನನ್ನ ಸೊಸೆಯಲ್ಲ ಮಗಳು' ಎಂದಾಗ ಎಲ್ಲರಿಗೂ ಆಶ್ಚರ್ಯ ಜೊತೆಗೆ ಆನಂದವೂ ಆಯ್ತು. ಕೂಡಲೇ ಶೀಲಾ ಎಂದಳು 'ಅತ್ತೆ ಹಳೆದನ್ನು ಮರ್ತು ಬಿಡಿ ಎಲ್ಲರೂ ಒಂದಾಗಿ ಒಟ್ಟಾಗಿ ಜೊತೆಯಲ್ಲೇ ಇರೋಣ' ಎಂದಾಗ ರಾಜೀವನ ತಾಯಿ ಹೇಳಿದರು. 'ಇಂದಿನಿಂದ ಮನೆಯ ಜವಾಬ್ದಾರಿಯೆಲ್ಲಾ ನಿಂದೆ' ಎಂದು ಸೊಸೆಯನ್ನು ಕೊಂಡಾಡಿ ಹಾಡಿ ಹೊಗಳಿ ನಾಲ್ಕು ದಿನ ಇದ್ದು ಮಗ ಸೊಸೆಯೊಂದಿಗೆ ನಗರಕ್ಕೆ ಹೊರಟರು.


                                             * ರವಿಚಂದ್ರವಂಶ್ * 

ಲೇಖಕರು

Ravindranath.T.V.

ದೇಶಕ್ಕೆ ನನ್ನಿಂದ ಹತ್ತಾರು ಒಳ್ಳೆಯ ಕೆಲಸಗಳಾಗಬೇಕು, ಅದೇ ನನ್ನ ಗುರಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.