Skip to main content

ಕರ್ನಾಟಕದಲ್ಲಿ ಈಗ ಕನ್ನಡ ಶಾಲೆಗಳು ನಿಜಕ್ಕೂ ಎಷ್ಟು ಇದ್ದಿರಬಹುದು?

ಬರೆದಿದ್ದುOctober 26, 2014
noಅನಿಸಿಕೆ

ಬೆಂಗಳೂರಿನ ಆರ್ಕಿಡ್ ಎಂಬ ಖಾಸಗಿ ಶಾಲೆ ಇತ್ತೀಚೆಗೆ ಕನ್ನಡ ಮಾಧ್ಯಮ ಅನುಮತಿ ರಾಜ್ಯ ಸರಕಾರದಿಂದ ಪಡೆದು ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿರುವ ಸುದ್ಧಿ ಬಂತು. ಆಗ ನನ್ನ ಮನಸ್ಸಿನಲ್ಲಿ ಬಂದ ಪ್ರಶ್ನೆ ನಿಜಕ್ಕೂ ಕರ್ನಾಟಕದಲ್ಲಿ ಎಷ್ಟು ಕನ್ನಡ ಶಾಲೆಗಳು ನಿಜಕ್ಕೂ ನಡೆಯುತ್ತಿರಬಹುದು?

ಹಿಂದಿನಿಂದಲೂ ಬೆಂಗಳೂರಿನಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸುವದು ಕಡಿಮೆ. ಆದರೆ ಇಂದು ಅದು ಗ್ರಾಮಾಂತರ ಪ್ರದೇಶಕ್ಕೂ ಹರಡಿದೆ. ಹೞಿಗಳಲ್ಲಿ ಪಟ್ಟಣಕ್ಕೋ ಅಥವಾ ದೂರದಲ್ಲಿರೂ ಇಂಗ್ಲೀಷ್ ಮಿಡಿಯಂ ಸ್ಕೂಲ್ ಗೆ ಮಕ್ಕಳನ್ನು ಕಳುಹಿಸುವದು ಸರ್ವೇ ಸಾಮಾನ್ಯವಾಗುತ್ತಿದೆ.

ಆದರೆ ಸರಕಾರ ಪ್ರಕಟಿಸುವ ಲೆಕ್ಕ ನೋಡಿದರೆ ಎಲ್ಲ ಕಡೆ ಕನ್ನಡ ಮಾಧ್ಯಮ ಶಾಲೆಗಳೇ ಇರುವದು. ಇದು ಬರಿ ಕೃಷ್ಣನ ಲೆಕ್ಕ ಅನ್ನುವದರಲ್ಲಿ ಅನುಮಾನವಿಲ್ಲ. ಇಂದು ಹೆಚ್ಚಿನ ಕನ್ನಡ ಮಾಧ್ಯಮ ಶಾಲೆ ನಡೆಸುತ್ತಿರುವದು ಸರಕಾರ ಮಾತ್ರವಾ? ಖಾಸಗಿ ಶಾಲೆಗಳು ಕೇವಲ ಕನ್ನಡ ಶಾಲೆಗೆ ಅನುಮತಿ ಪಡೆದು ಸಿಬಿಎಸ್ ಸಿ ಹಾಗೂ ಐಸಿಎಸ್ ಸಿ ಗೆ ಅರ್ಜಿ ಹಾಕಿ ಅವರ ಅನುಮತಿಗೆ ಕಾಯುತ್ತಾ ಗುಟ್ಟಾಗಿ ಇಂಗ್ಲೀಷ್ ಮಾಧ್ಯಮದಲ್ಲಿಯೇ ಶಾಲೆ ನಡೆಸುತ್ತಿವೆಯೇ?

ಒಂದು ಕಡೆ ಸರಕಾರಿ ಕನ್ನಡ ಶಾಲೆಗಳು ಜನರ ಕೊರತೆಯಿಂದ ಮುಚ್ಚುತ್ತಿವೆ. ಇನ್ನೊಂದು ಕಡೆ ಆಂಗ್ಲ ಖಾಸಗಿ ಶಾಲೆಗಳು ಕೊಬ್ಬಿ ಬೆಳೆಯುತ್ತಿವೆ.

ಇದೇ ಕಾರಣಕ್ಕೆ ಇಂದು ಉತ್ತಮ ಕನ್ನಡ ಮಾಧ್ಯಮ ಶಾಲೆಗಳು ದುರ್ಲಭವಾಗಿದ್ದರೆ ಇನ್ನೊಂದು ಕಡೆ ಹೊಟ್ಟೆ ಪಾಡಿನ ಭಾಷೆಯಾದ ಇಂಗ್ಲೀಷ್ ಮಾಧ್ಯಮದಲ್ಲಿ ಮಕ್ಕಳಿಗೆ ಕಲಿಸುವ ಅನಿವಾರ್ಯತೆಗೆ ನಾವು ಕನ್ನಡಿಗರು ಸಿಲುಕಿದ್ದೇವೆ.

ಇಂದು ಕನ್ನಡ ಶಾಲೆ ಮುಚ್ಚಲು ಮುಖ್ಯ ಕಾರಣ ಜಾಗತೀಕರಣ, ಕನ್ನಡಿಗರಿಗೆ ಭಾಷಾಭಿಮಾನ ಇಲ್ಲ ಎಂಬ ಮಿಥ್ಯೆಯನ್ನು ಹೇಳುತ್ತೇವೆ. ಆದರೆ ಕನ್ನಡ ಶಾಲೆಗಳು ಮುಚ್ಚಲು ಅತಿ ಮುಖ್ಯ ಕಾರಣ ಕಳಪೆ ಗುಣಮಟ್ಟದ ಮುದ್ರಣ ಹೊಂದಿದ ಪುಸ್ತಕ ಹಾಗೂ ಅದರಲ್ಲಿ ತುಂಬಿರುವ ಅಷ್ಟೇ ಕಳಪೆ ವಿಷಯಗಳು ಕಾರಣ. ಒಮ್ಮೆ ಐಸಿಎಸ್ ಸಿ ಹಾಗೂ ಸಿಬಿಎಸ್ ಸಿ ಇಂಗ್ಲೀಷ್ ಮಾಧ್ಯಮದ ಮಕ್ಕಳು ಓದುವ ಪುಸ್ತಕದಲ್ಲಿರುವ ಮಾಹಿತಿ, ವಿವರ ಹಾಗೂ ಕನ್ನಡ ಮಾಧ್ಯಮದ ಶಾಲೆ ಪುಸ್ತಕದ ವಿಷಯ ಹೋಲಿಕೆ ಮಾಡಿ ನೋಡಿ. ನಾವು ಖಾಸಗಿ ಶಾಲೆಗಳು ಡೊನೇಷನ್ ಪಡೆಯುವದನ್ನು ವಿರೋಧಿಸಿದೆವು ಹೊರತು ಅಲ್ಲಿನ ಪ್ಲಸ್ ಪಾಯಿಂಟ್ ಏನು ಅನ್ನುವದರ ಬಗ್ಗೆ ತಲೆ ಕೆಡಿಸಿಕೊೞಲಿಲ್ಲ.

ಕೇವಲ ಸನ್ಮಾನ, ಸಾಹಿತ್ಯ ಸಮ್ಮೇಳನ, ಹಿಂದಿ ದೂಷಣೆಯೇ ಕನ್ನಡ ಭಾಷೆಯ ಬೆಳವಣಿಗೆ ಎಂಬ ಮನೋಭಾವ ನಾವು ತ್ಯಜಿಸುವದಿಲ್ಲವೋ ಅಲ್ಲಿಯವರೆಗೆ ಕನ್ನಡಮ್ಮನ ಭವಿಷ್ಯ ಅನಿಶ್ಚಿತ. ಆ ಸನ್ಮಾನ, ಸಾಹಿತ್ಯ ಸಮ್ಮೇಳನಕ್ಕೆ ವ್ಯಯಿಸುವ ನೂರಾರು ಕೋಟಿಗಳನ್ನು ಕನ್ನಡ ಶಿಕ್ಷಣ ಅಭಿವೃದ್ಧಿಗೆ ಖರ್ಚು ಮಾಡಿ ಪುಸ್ತಕದಲ್ಲಿ ಅದರ ಕಂಟೆಂಟ್ ಅಲ್ಲಿ ರಾಜಕೀಯ ಮಾಡದೇ ಪ್ರಾಮಾಣಿಕ ಪ್ರಯತ್ನ ಪಟ್ಟರೆ ಕನ್ನಡ ಭಾಷೆ ಅಧೋಗತಿಯಿಂದ ಏರುಗತಿಯ ಕಡೆಗೆ ಮುಖ ಮಾಡೀತು!

ನಿಮ್ಮ ಅನಿಸಿಕೆ ಏನು?

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.