Skip to main content

"ನಿನ್ನ ಕಣ್ಣೊಳಗಿನ ಕೇಳಲಾಗದ ಪ್ರಶ್ನೆಗಳಿಗೆ ನನ್ನ ಎದೆಯೊಳಗೆ ಹೇಳಲಾಗದ ಉತ್ತರಗಳಿವೆ ಹುಡುಗಿ,

ಇಂದ ಋಣಿ
ಬರೆದಿದ್ದುDecember 7, 2013
noಅನಿಸಿಕೆ

ನೀನು ಬೇಡವೆಂದೆ ನಿಂತು ನೋಡುವ ನೋಟ,

ಬೇಕೆಂದೆ ಧಿಕ್ಕರಿಸಿ ಹೋಗುವ ಹಠ ,

ಬೆರೆಯಲಾಗದೇ ಬಿಟ್ಟಂತೆ ಆಡುವ  ಆಟ,

ಬೇರೆ ಯಾವುದೇ ಉದ್ದೇಶವಿಲ್ಲದೆಯು ನನಗಿಷ್ಟ.

ನೀ ನಿಂತು ನೋಡುವುದಕ್ಕೆ ಹೇಗೆ ಉದ್ದೇಶಗಳಿಲ್ಲವೊ ಹಾಗೆ ನಾ ಕುಳಿತು ಬರೆಯುತ್ತಿರುವುದಕ್ಕು  ಉದ್ದೇಶಗಳಿಲ್ಲ ಹುಡುಗಿ.

ಇಷ್ಟಕ್ಕೂ ಇಲ್ಲಿನ ಉದ್ದೇಶವದು ಪ್ರೇಮ ನಿವೇದನೆಯೊ ಅಥವಾ ಪರಿಚಯ ಪ್ರದಾನವೋ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ

ಅದೇವುದೊ ತ್ರಿಮೂರ್ತಿಯ ಕೋಪಕ್ಕೆ ಸಿಲುಕಿ  ಧರೆಗೆ ಬಿದ್ದ ದೇವತೆಯ ಅಂದಕ್ಕೆ ಈ  ಸಾಮಾನ್ಯ ಹೆಸರಿನ, ಸಾದಾರಣ ರೂಪಿನ , ಸರಳ ಜೀವನ ಶೈಲಿಯ, ಸಹನೆ ಎಂದು ಕರೆಸಿಕೊಳ್ಳುವ ಸೋಮರಿತನವುಳ್ಳವನ, ತೀರ ಸಪ್ಪೆ ಅನಿಸಿಕೊಳ್ಳುವ ಭಾವನೆಗಳು  ಬರಹದ ಚೌಕಟ್ಟೋಂದ ನೀಡಲಾರವು ಎಂಬುದು ಎಷ್ಟು ಸತ್ಯವೋ  ಬ್ರಹ್ಮನೇ ಖುದ್ದಾಗಿ ಬಿಡುವು ಮಾಡಿಕೊಂಡು ಕುಳಿತರು ನಿನಗೊಬ್ಬ ಪ್ರತಿಸ್ಪರ್ಧಿಯ ಸೃಷ್ಟಿಸಲಾರ ಅನ್ನುವುದು ಅಷ್ಟೇ ಸತ್ಯ. ಎಂದೆಲ್ಲ ಹುಚ್ಚು ಹೊಗಳಿಕೆಗಳಿಂದ  ನಿನ್ನ ಅನಾವಶ್ಯಕವಾಗಿ ಗೊಂದಲಕ್ಕೀಡು ಮಾಡಿ  ನಾ ಸಾಧಿಸಿಕೊಳ್ಳಬೇಕಾದುದು ಏನು ಇಲ್ಲ  ಗೆಳತಿ. ಇದುವರೆವಿಗೂ ವಾಸ್ತವಗಳ ಜೊತೆ ಬದುಕಿರುವ ನನಗೆ ನಿನ್ನೆಡೆಗಿನ ಅದಮ್ಯ ಕುತೂಹಲಕೊಂದು ಆಕರ್ಷಣೆ, ಆಸೆ, ಆಸಕ್ತಿಯ ಆಕಾರ ನೀಡಲಾಗದಿದ್ದಕೆ ಬಲವಾದ ಕಾರಣಗಳಿವೆ. ಇದುವರೆವಿಗೂ ನಾ ಏನನ್ನು  ಕಳೆದುಕೊಳ್ಳದಿದ್ದರು ಗಳಿಸಿಕೊಳ್ಳಬಹುದಾದ ಹಲವಾರು ಅವಕಾಶಗಳನ್ನು ನಿನ್ನ ನಿರೀಕ್ಷೆಯ ಮುಂದೆ ನಿರ್ಲಕ್ಷಿಸಿ ಕುಳಿತಿದ್ದೇನೆ.

 ಹೆಚ್ಚೆಂದರೆ ಎದುರಿರುವವರೆಗೆ ಕಾಡಿದ ಹುಡುಗಿಯರ ನಡುವೆ ಸದ್ದಿಲ್ಲದೇ ಎದೆಯೊಳಗೆ ಪದ್ಮಾಸನ ಹಾಕಿ ಕುಳಿತುಕೊಂಡ ನಿನ್ನ ಹೊರದೂಡುವ ವ್ಯಕ್ತಿತ್ವವು ನಿನ್ನದಲ್ಲ ಆ ಮನೋಬಲವು ನನ್ನಲ್ಲಿ ಉಳಿದಿಲ್ಲ.  ಇತ್ತೀಚಿನವರೆಗು ಎದುರಾದ ಯಾವ ಅಪರಿಚಿತ ಹುಡುಗಿಯರನ್ನು ಬಿಡದೆ ಹಿತವಾಗಿ ಕಾಡಿದ್ದು ನಿಜವಾದರೂ ನೀನಲ್ಲದೆ ಅರೆಗಳಿಗೆಯು ಯಾರನ್ನು ಹಂಬಲಿಸಿದ, ಅರಿವಿಲ್ಲದೆಯು ಇನ್ನೊಬ್ಬರ ಹಿಂಬಾಲಿಸದ, ಅನಿವಾರ್ಯಕ್ಕು ಬೇರೊಬ್ಬರ ಬೆಂಬಲಿಸದ, ಅಪಾರ್ಥವಾಗಿ ಅವರಿವರನ್ನು  ಸಂಭಾಳಿಸದ, ಅನುಕೂಲಕ್ಕಾಗಿಯು  ಅನುರಾಗವದು ಸಂಭವಿಸದ, ಅಗತ್ಯಕಿಂತ ಅನಾವಶ್ಯಕವಾಗಿ ಸಂಭಾಸಿಸದ ಬದುಕು ನನ್ನದು.

ಚೂರು ಬೇಸರಿಸಿಕೊಳ್ಳದೆ ಇಡೀ ಜಗತ್ತನ್ನು ಪ್ರೀತಿಸಿದವನು ನಾನು, ಒಲವಿನ ಹತ್ತಾರು ಮುಖಗಳನ್ನು ತೀರ ಹತ್ತಿರದಿಂದ ನೋಡಿದ ಬಳಿಕ ಅನಿಸಿದ್ದು ಇಷ್ಟೇ " ಎಲ್ಲರನ್ನು ಪ್ರೀತಿಸಲು ಅರಿಯದವ ಯಾರನ್ನು ಪ್ರಿತಿಸಲಾರ" ಏಕೆಂದರೆ ಪ್ರೀತಿ ಎಂಬುದು ಗುರುವಾಗಬಲ್ಲದೆ ಹೊರತು ಗುರಿಯಾಗಲೋಲ್ಲದು. ಇದೇನೇ ಇದ್ದರು ಅದೆಷ್ಟೇ ಪ್ರೀತಿಸುವವನ ಎದೆಯಲ್ಲೂ ಅಸೂಹೆ ಹುಟ್ಟಿಸುವಷ್ಟು ನಾನು ನಿನ್ನ ಪ್ರೀತಿಸಬಲ್ಲೆ. ನಿನ್ನ ಪ್ರೀತಿಸಿದ ಪ್ರಖರತೆಯಲ್ಲೆ ಸಾಮಾಜಿಕ ಚೌಕಟ್ಟನ್ನು ಮೀರದೆ ಇತರರನ್ನು ಪ್ರೀತಿಸಬಲ್ಲೆ .

ಹಲವಾರು ಹಿತನಿರೀಕ್ಷಿತರು ನನ್ನಲೊಂದು ನಂಬಿಕೆಯ ಖಾತೆ ತೆರೆದು ಅವರ ಪರಮ ರಹಸ್ಯಗಳ  

ಠೇವಣಿಗಳ ಇಟ್ಟಿದ್ದಾರೆ. ಇಲ್ಲಿ ಯಾರದೋ ಕನವರಿಕೆಗಳಿಗೆ ಕಿವಿಯಾಗಿದ್ದೇನೆ, ನೋವುಗಳಿಗೆ ದ್ವನಿಯಾಗಿದ್ದೇನೆ, ಪ್ರಯತ್ನಗಳಿಗೆ ಜೋತೆಯಾಗಿದ್ದೇನೆ ಅನ್ನುವುದನ್ನು ಹೊರತುಪಡಿಸಿ ಅನುಮಾನಸ್ಪದವಾಗಿ ಸಹ ನಾನು ಬದುಕಿದ್ದು ಕಡಿಮೆ.

ಪರಿಚಿತಗೊಂಡ ಪ್ರತಿಯೊಬ್ಬರನ್ನು ಸಾಮಾಜಿಕ ಗೌರವ ಹೆಚ್ಚಿಸುವಂತೆ ನಡೆಸಿಕೊಳ್ಳುವುದು ನನಗೆ ಹುಟ್ಟಿನಿಂದಲೇ ಬಂದ ಅನುವಂಶಿಯ ಖಾಯಿಲೆ. ಶತ್ರುವನ್ನು ಸಹ ಅಹಿತಕಾರಿಯಾಗಿ ನಡೆಸಿಕೊಳ್ಳದ ಈ ಮಣ್ಣಿನ ಜನತೆಯ ಗುಣ ನಿನ್ನಷ್ಟಲ್ಲದಿದ್ದರು ಇತರರಂತೆ ನನ್ನಲ್ಲಿಯೂ ಸಹಜವಾಗಿ  ಬೆಳೆದುಬಂದಿದೆ, ಆದರೆ ಇತರರ ಹಣಕ್ಕೆ ಕೊಟ್ಟ ಬೆಲೆ, ಮನಸ್ಥಿತಿಗೆ ನೀಡಿದ ಪ್ರಾಮುಖ್ಯತೆ ನಾನಗಾಗಿ ಕೊಡಲಾಗುತ್ತಿಲ್ಲ ಅನ್ನುವುದು ಒಳ್ಳೆಯಾದೊ ಕೆಟ್ಟದ್ದೋ ನಿರ್ಧರಿಸಲಾಗುತ್ತಿಲ್ಲ.

 

 

ನನ್ನ ನಂಬಿಕೆಯೊಳಗೆ ಇರುವ ಏಕಮಾತ್ರ ದೇವನು ನಾನು ಗಳಿಸಿಕೊಳ್ಳಲಾಗದ್ದೆಲ್ಲವನ್ನು ಯಥೇಚ್ಚವಾಗಿ ಕೊಟ್ಟು ಉಳಿದಿದ್ದಕ್ಕೆ ಇಡಿ ಬದುಕ ಕರುಣಿಸಿದ್ದಾನೆ. ಈ ಬದುಕಿನಲ್ಲಿ ನಿನ್ನ ಇರುವಿಕೆಗಿಂತ ಹಿರಿದಾದ ಉಡುಗೊರೆ  ಇನ್ನ್ಯಾರಿಂದ  ತಾನೆ ಕೊಡಲು ಸಾದ್ಯ ಹೇಳು. ಈ ಬದುಕಿನ ವಯೋ ಸಹಜ ವೈಯಕ್ತಿಕ ಅವಶ್ಯಕತೆಗಳಿಗೆ ನೀನಲ್ಲದೆ ಇನ್ನ್ಯಾರೊ  ಸಿಕ್ಕುತ್ತಿದ್ದರು, ದಕ್ಕುತ್ತಿದ್ದರು, ಆಸಕ್ತಿ ತೋರಿದ್ದರೆ ಅವಕಾಶಗಳಿಗೇನು ಕೊರತೆಯೇನಿರಲಿಲ್ಲ. ಆದರೆ ನನಗೆ ಮನಸಿಗೊಬ್ಬ ಸಂಗಾತಿಯಲ್ಲದೆ ಮನೆಗೊಬ್ಬ ಸೊಸೆ, ಮನೆ ಮಂದಿಗೆಲ್ಲ ಮಗಳು ಬೇಕಾಗಿದೆ. ನನ್ನ ಮನೆತನವ ಹತ್ತಿರದಿಂದ ನೋಡಿದ ಪ್ರತಿ ಹುಡುಗಿಯ ಮನದಲ್ಲೂ ನನಗು ಇಂಥ ಕುಟುಂಬದಲ್ಲಿ ಹುಟ್ಟಬೇಕಿತ್ತು, ಬೆಳೆಯಬೇಕಿತ್ತು ಅಥವಾ ಬದುಕಬೇಕಿತ್ತು ಅನಿಸಿದ್ದರೆ ಅತಿಶಯೋಕ್ತಿಯಲ್ಲ. ಇಷ್ಟಕ್ಕೂ ಸೀಮೆಯಲ್ಲಿ ಇಲ್ಲದ ಸ್ಥಿತಿವಂತ ಕುಟುಂಬವಲ್ಲದಿದ್ದರೂ ನನ್ನದು ಶ್ರೀಮಂತ ಕುಟುಂಬ. ಇಲ್ಲಿ ಸುಖ, ಸಂತೋಷಗಳ ಆಚರಣೆಗೆ ವೇದಿಕೆ ಇರುವಂತೆ ಕಷ್ಟವೆಂದು ಅಂದುಕೊಳ್ಳಲು ಬಿಡದಂತೆ ಅನಿತುಕೊಳ್ಳುವ ಹೆಗಲುಗಳಿವೆ, ಮಬ್ಬುಗವಿಯದಂತೆ ಮನಸಿನ ಮುಂದೆ ಭರವಸೆಯ ಹಗಲುಗಳಿವೆ.

ನನ್ನ ಕೂಡು ಕುಟುಂಬದ ಒಲವಿನ ಹೊಳೆಗೆ ನನ್ನ ನಿನ್ನಂತ ಅನೇಕ ಅಣೆಕಟ್ಟುಗಳಿವೆ ಗೆಳತಿ. ಇಲ್ಲಿ ಪ್ರವಹಿಸುತ್ತಿರುವ ಮಂತ್ರಜಲದ ವಿಶಾಲ ಹರಿವಿನಲಿ ಹಸನಾಗದ ಬದುಕ್ಯಾವುದು. ನಂಬಿಕೆಯ ನೆಲದಲ್ಲಿ ಪ್ರೀತಿಯ ಬಿತ್ತಿ ಅಜೀವ ಸಾಮರಸ್ಯ ಬೆಳೆಯನ್ನು ವ್ಯವಸಾಹಿಸೋಣ . ಯಾವುದೊ ಹಳದಿ ಲೋಹವೊಂದಕ್ಕೆ ನಮ್ಮಿಬ್ಬರನ್ನು ಬೆಸೆಯಬಲ್ಲ ಸಾಂಪ್ರದಾಯಿಕ ನೈತಿಕತೆ ಇದೆಯೇ ಹೊರತು ಕೌಟುಂಬಿಕ ಜವಾಬ್ದಾರಿಗಳ ಆಳ ಅಗಲಗಲ ಅರಿವಿರುವುದಿಲ್ಲ . ಇಲ್ಲಿ ನಮ್ಮ ವಿಶ್ವಾಸದ ವಿಶಾಲ ಬಾಹುಗಳ ತೆಕ್ಕೆಯೊಳಗೆ ಬದುಕು ದಿನಂಪ್ರತಿ ಮೈ ಮುರಿದು ಏಳಬೇಕು ಮೈ ಮರೆತು ಮಲಗಬೇಕು. ಕೆಲವೇ ದಿನಗಳಲ್ಲಿ ಸಂಪೂರ್ಣ ಪರಿಚಯವಾಗಲಿರುವ ನಾವು ಪರಸ್ಪರ ಪರಿಪೂರ್ಣವಾಗುವುದೇ ವೈವಾಹಿಕತೆ ಎಂಬುದು ನನ್ನ ಅಭಿಪ್ರಾಯ.

 

ಆ ತಣ್ಣನೆಯ ಕಣ್ಣ ಸುಡುವ ನೋಟದ ಮುಂದೆ ನನ್ನ ಕೂರಿಸಿ ಬದುಕಿನ ಯಾವ ಗಳಿಗೆಯಲ್ಲಿ ಕೇಳಿದರು ನಿನ್ನ ಕುತೂಹಲದ ಕಣ್ಣುಗಳ ಕುರಿತೇ ಕಾದಂಬರಿಯೊಂದ ಬರೆದುಕೊಡಬಲ್ಲೆ ಹುಡುಗಿ. ಇದ ಮೀರಿ ನನ್ನೊಳಗೆ ಒಂದು ಮಹಾಕಾವ್ಯಕ್ಕಾಗುವಷ್ಟು ನಿನ್ನನ್ನು ಅಧ್ಯಯನ ಮಾಡಬೇಕು ಎಂಬ ಹಟವಿದೆ. ಈ ದಣಿವಿಲ್ಲದ ಎದೆಯ ಚಲವು, ಧ್ವನಿಯಿಲ್ಲದ ವಿದೇಯ ಒಲವಿಗೆ   ಶರಣಾಗತೊಡಗಿದರೆ ಪದ ಪತ್ರವಾಗುವುದು, ಪತ್ರ ಪ್ರಬಂಧವಾಗುವುದು ಎಷ್ಟೊತ್ತಿನ ಮಾತು.............

 "ನಿನ್ನ ಕಣ್ಣೊಳಗಿನ ಕೇಳಲಾಗದ ಪ್ರಶ್ನೆಗಳಿಗೆ

 ನನ್ನ ಎದೆಯೊಳಗೆ ಹೇಳಲಾಗದ ಉತ್ತರಗಳಿವೆ ಹುಡುಗಿ,

ನನ್ನ ಕಡುಗಪ್ಪು ಬಣ್ಣದ ಬದುಕಿನ ಖಾಲಿ ಹಾಳೆಯೊಳಗೆ

ಸಣ್ಣ ಖಾಸಗಿತನವೆಂಬ ಕಾಮನ ಬಿಲ್ಲಿನ ಚಿತ್ತಾರಗಳಿವೆ ಅಡಗಿ."

                                                                            ಪರಿಚಯವಿಲ್ಲದವನ ಪ್ರೇಮ ಪತ್ರ ಹಿಡಿದು ಕುರಿಸಿದ್ದಕ್ಕೆ ಸಣ್ಣದೊಂದು ಸಾರಿ

                                                                                                      ನಿರೀಕ್ಷಕ

 

ಲೇಖಕರು

ಋಣಿ

ನಿರೀಕ್ಷೆ

ಸಾಮಾನ್ಯ ಹೆಸರು, ಸಾದಾರಣ ರೂಪು, ಸಪ್ಪೆ ಅನಿಸುವ ಭಾವನೆವುಳ್ಳ ಸೋಮಾರಿ..........

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.