Skip to main content

ಕುಸಿಯುತ್ತಿರುವ ಕನ್ನಡಿಗರ ಸಂಖ್ಯೆ!

ಬರೆದಿದ್ದುAugust 27, 2013
noಅನಿಸಿಕೆ

ನಂಬಿದರೆ ನಂಬಿ, ಬಿಟ್ಟರೆ ಬಿಡಿ.... ಕನ್ನಡಿಗರು ಕಾಣೆಯಾಗುತ್ತಿದ್ದಾರೆ. ಅರ್ಥಾತ್ ಕನ್ನಡಿಗರ ಸಂಖ್ಯೆ ನಿಧಾನ ಗತಿಯಲ್ಲಿ ಕುಸಿಯುತ್ತಿದೆ. ದೇಶದ ಅತಿ ದೊಡ್ಡ ಸಮಸ್ಯೆ ಜನಸಂಖ್ಯಾ ಸ್ಪೋಟ ಎಂದು ಹಿಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಆದರೆ ನಂಬಿ, ಕನ್ನಡಿಗರ ಸಮಸ್ಯೆ ಜನಸಂಖ್ಯಾ ಕುಸಿತ! ದೇಶದ ಹೆಸರಲ್ಲಿ ದೇಶನಾಯಕರೆನ್ನಿಸಿಕೊಂಡ ಹಿಂದಿ ಧೂರ್ತರು ನಮಗೆ ನೀಡಿದ ಬಳುವಳಿ ಇದು. ನಂಬಲು ಕಷ್ಟವೇ ? ಲೇಖನವನ್ನು ಓದುತ್ತಾ ಹೋಗಿ.

ಇಡಿಯ ದೇಶ ಒಂದು ಎಂದು ಹೇಳುತ್ತಿರುವವರಿಗೆ ಕನ್ನಡಿಗರು ಇದ್ದರೇನು ಬಿಟ್ಟರೇನು ಎಂಬ ಮನಸ್ಥಿತಿ ಇರಬಹುದು. ಹಾಗಾಗಿಯೇ ಏನೋ ಇಡಿಯ ದೇಶಕ್ಕೂ ಒಂದೇ ರೀತಿಯ ಟಿ.ಎಫ್.ಆರ್. (ಟೋಟಲ್ ಫರ್ಟಿಲಿಟಿ ರೇಟ್) ಪ್ರಮಾಣವನ್ನು ನಿಗದಿ ಮಾಡಿದರು. ಆದರೆ ಈಗಾಗಲೆ ನಿಗದಿತ ಟಿ.ಎಫ್.ಆರ್. ಸಾಧಿಸಿರುವ ಕರ್ನಾಟಕದಂತಹ ರಾಜ್ಯಕ್ಕೆ ಇಡೀ ದೇಶದ ಟಿ.ಎಫ್.ಆರ್. ಅನ್ನೇ ಮತ್ತೆ ಹೇರಿರುವ ಮೂಲಕ ಕನ್ನಡಿಗರನ್ನು ನಿರ್ಮೂಲನೆ ಮಾಡಲು ಕೇಂದ್ರ ಹೊಂಚು ಹಾಕಿರುವಂತಿದೆ.
ಟಿ.ಎಫ್.ಆರ್. ಅಂದರೇನು ?
ಟೋಟಲ್ ಫರ್ಟಿಲಿಟಿ ರೇಟ್ ಅಥವಾ ರಿಪ್ಲೇಸ್‌ಮೆಂಟ್ ರೇಟ್ ಅನ್ನುವುದು ಯಾವುದೆ ಒಂದು ಸಮಾಜದಲ್ಲಿ ಹೆಣ್ಣೊಬ್ಬಳಿಗೆ ಆಕೆಯ ಜೀವಿತಾವಧಿಯಲ್ಲಿ ಹುಟ್ಟುವ ಸರಾಸರಿ ಮಕ್ಕಳ ಸಂಖ್ಯೆಯಾಗುತ್ತದೆ. ಇನ್ನೂ ವಿವರಿಸಿ ಹೇಳಬೇಕೆಂದರೆ ಒಂದು ಕುಟುಂಬದಲ್ಲಿ ಗಂಡ-ಹೆಂಡತಿಯರಿದ್ದಾರೆ ಅಂದುಕೊಳ್ಳೋಣ. ಅಂದರೆ ಆ ಕುಟುಂಬದ ಜನಸಂಖ್ಯೆ ೨ ಎಂದಾಯ್ತು. ಅವರ ಸಾವಿನ ನಂತರವೂ ಆ ಕುಟುಂಬದ ಜನಸಂಖ್ಯೆ ಅಷ್ಟೇ ಇರಬೇಕೆಂದರೆ ಇವರು ಕೇವಲ ಎರಡು ಮಕ್ಕಳನ್ನಷ್ಟೇ ಮಾಡಿಕೊಳ್ಳಬೇಕಷ್ಟೇ ? ಅಂದರೆ ಹೆಂಡತಿಯು ಆಕೆಯ ಜೀವಿತಾವಧಿಯಲ್ಲಿ ಕೇವಲ ಎರಡು ಮಕ್ಕಳಿಗೆ ಮಾತ್ರ ಜನ್ಮ ನೀಡಬೇಕು. ಅಂದರೆ ಆ ಕುಟುಂಬವು ತನ್ನ ಜನಸಂಖ್ಯೆಯನ್ನು ಉಳಿಸಿಕೊಳ್ಳಲು ಟಿ.ಎಫ್.ಆರ್. ೨ನ್ನು ಕಾಯ್ದುಕೊಳ್ಳಬೇಕೆಂದಾಯ್ತು. ಇದರಲ್ಲಿ ಇನ್ನೂ ಕೆಲವೊಂದು ಅಂಶಗಳು ಅಡಗಿವೆ. ಅವೇನೆಂದರೆ ಒಂದು ದೊಡ್ಡ ಸಮುದಾಯ ವ್ಯವಸ್ಥೆಯನ್ನು ತೆಗೆದುಕೊಂಡರೆ ಸರಾಸರಿ ಮದುವೆಯಾಗುವ ವಯಸ್ಸು ವ್ಯತ್ಯಾಸವಾಗುತ್ತದೆ. ಮದುವೆ ತಡವಾಗುತ್ತದೆ. ಹುಟ್ಟಿದ ಮಕ್ಕಳೂ ಸಾಯುತ್ತವೆ. ಅಕಾಲಿಕ ಮರಣಗಳಾಗುತ್ತವೆ. ಇಲ್ಲೆಲ್ಲಾ ಜನಸಂಖ್ಯೆ ಕಡಿಮೆಯಾಗಿ ಬಿಡುವ ಕಾರಣದಿಂದ ಟಿ.ಎಫ್.ಆರ್. ೨ರ ಬದಲು ೨.೧ ಇರಬೇಕು ಎಂದು ಪ್ರಪಂಚದ ಬಹುತೇಕ ದೇಶಗಳು ಮನಗಂಡು ಒಪ್ಪಿಕೊಂಡಿವೆ. ಹಾಗಾಗಿ ಕನ್ನಡಿಗರ ಸಂಖ್ಯೆಯನ್ನು ನಾವು ಉಳಿಸಿಕೊಳ್ಳಲು ಟಿ.ಎಫ್.ಆರ್. ೨.೧ ಇರಲೇಬೇಕಾದ ಅನಿವಾರ್ಯತೆ ಕೂಡಾ ನಮಗಿದೆ.
ಆದರೆ ಆಗುತ್ತಿರುವುದೇನು ?
ನಮ್ಮ ದೇಶದ ಸಧ್ಯದ ಟಿ.ಎಫ್.ಆರ್. ೨.೬ ನಷ್ಟು ಇದೆ. ಅಂದರೆ ಇದು ಹೆಚ್ಚುತ್ತಿರುವ ಜನಸಂಖ್ಯೆಯ ಧ್ಯೋತಕವಾಗಿದೆ. ಹಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಭಾರತದ ಯೋಜನಾ ಆಯೋಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ೨೦೨೦ರೊಳಗೆ ಭಾರತದ ಟಿ.ಎಫ್.ಆರ್. ೨.೧ ನಷ್ಟು ಬರಬೇಕೆಂದು ಅದು ಹಲವಾರು ಯೋಜನೆಗಳನ್ನು ರುಪಿಸಿದೆ. ಇದೆಲ್ಲವೂ ಸರಿಯೇ ಆದರೂ ಅದು ಕೈಗೊಂಡಿರುವ ಕ್ರಮಗಳಲ್ಲಿ ಆಗಿರುವ ಎಡವಟ್ಟುಗಳನ್ನು ಗಮನಿಸಿದರೆ ಕನ್ನಡಿಗರನ್ನು ದಮನಿಸಲೆಂದೇ ಉದ್ದೇಶವಿಟ್ಟುಕೊಂಡಿರುವಂತೆ    ತೋರುತ್ತಿದೆ.
ಏಕೆಂದರೆ ಇವರು ಪ್ರತಿ ರಾಜ್ಯಕ್ಕೂ ಪ್ರತ್ಯೇಕವಾದ ಟಿ.ಎಫ್.ಆರ್. ಗುರಿಯನ್ನು ನೀಡಿದ್ದು ಇದು ಕನ್ನಡಿಗರಿಗೆ ಮಾರಕವಗುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿವೆ. ಏಕೆಂದರೆ ನಿಜವಾಗಿಯೂ ನಮ್ಮ ರಾಜ್ಯದಲ್ಲಿ ಜನಸಂಖ್ಯೆಯ ಸಮಸ್ಯೆ ಇಲ್ಲ. ಏಕೆಂದರೆ ಬೇರೆ ಯಾವುದೆ ರಾಜ್ಯಕ್ಕೆ ಹೋಲಿಸಿದರೂ ಕನ್ನಡಿಗರ ಸರಾಸರಿ ಸಂಖ್ಯೆ ಕಡಿಮೆಯೆ. ಅಂದರೆ ಕನ್ನಡಿಗರ ಟಿ.ಎಫ್.ಆರ್. ಈಗಾಗಲೆ ೨.೦ ಇದೆ. ಅಂದರೆ ದೇಶದ ಸರಾಸರಿ ಟಿ.ಎಫ್.ಆರ್.ಗಿಂತ (೨.೬) ತೀರಾ ಕಡಿಮೆಯೆ. ಹಾಗೆ ನೋಡಿದರೆ ಜನಸಂಖ್ಯೆಯ ನಿಜವಾದ ಸಮಸ್ಯೆ ಇರುವುದು ಬಿಹಾರ, ಉತ್ತರಪ್ರದೇಶ ಮುಂತಾದ ಹಿಂದಿಯವರ ರಾಜ್ಯಗಳಲ್ಲಿಯೇ ಹೊರತೂ ಕರ್ನಾಟಕದಲ್ಲಿ ಅಲ್ಲ. ಆದರೆ ಯೋಜನಾ ಆಯೋಗವು ಜನಸಂಖ್ಯೆ ಮಿತಿ ಮೀರಿರುವ ಉತ್ತರದ ರಾಜ್ಯಗಳಿಗೆ ಟಿ.ಎಫ್.ಆರ್. ನಿಗಧಿ ಮಾಡುವುದನ್ನು ಬಿಟ್ಟು ಕರ್ನಾಟಕದಂತಹ ರಾಜ್ಯಕ್ಕೇ ಇನ್ನೂ ಕಡಿಮೆ ಟಿ.ಎಫ್.ಆರ್. ನಿಗಧಿ ಮಾಡಿದೆ.
ಕರ್ನಾಕಟಕದಲ್ಲಿ ೨೦೦೪ ರಲ್ಲಿ ಟಿ.ಎಫ್.ಆರ್.೨.೩ ಇತ್ತು. ಆದರೆ ಅದೀಗ ೨.೦ಕ್ಕೆ ಬಂದಿದೆ. ಇದು ಕೂಡಾ ೨೦೧೧ರ ಗಣತಿಯಲ್ಲಿ ತಿಳಿದು ಬಂದಿದ್ದು. ಅಂದರೆ ಕಳೆದೆರಡು ವರ್ಷದಲ್ಲಿ ಇನ್ನಷ್ಟು ಕಡಿಮೆಯಾಗಿರಲಿಕ್ಕೂ ಸಾಕು. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದ ಯೋಜನಾ ಆಯೋಗವು ೨೦೨೦ರ ಹೊತ್ತಿಗೆ ಕರ್ನಾಟಕವು ಟಿ.ಎಫ್.ಆರ್. ೧.೮ ಅನ್ನು ಸಾಧಿಸಬೇಕು ಎಂದು ಗುರಿ ನಿಗಧಿ ಮಾಡಿದೆ. ಇದು ಯಾವ ನ್ಯಾಯ ?
ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ
ಇತ್ತ ನಮ್ಮ ರಾಜ್ಯಕ್ಕೆ ೨೦೨೦ರ ಹೊತ್ತಿಗೆ ಟಿ.ಎಫ್.ಆರ್. ೧.೮ ಇರಬೇಕು ಎಂದು ನಿಗಧಿ ಮಾಡಿರುವ ಯೋಜನಾ ಆಯೋಗವು ಜನರಿಂದ ತುಂಬಿ ತುಳುಕುತ್ತಿರುವ ಬಿಹಾರ, ಉ.ಪ್ರ.ದಂತಹ ರಾಜ್ಯಗಳಿಗೆ ೨೦೨೦ಕ್ಕೆ ಟಿ.ಎಫ್.ಆರ್. ೩.೦ನ್ನು ಸಾಧಿಸಬೇಕು ಎಂದು ಹೇಳಿದೆ. ಅಂದರೆ ಹೆಚ್ಚು-ಕಡಿಮೆ ಹಿಂದಿಯವರ ಅರ್ಧದಷ್ಟು ಮಾತ್ರ ಕನ್ನಡಿಗರ ಸಂಖ್ಯೆಯ ಟಿ.ಎಫ್.ಆರ್. ಇರಬೇಕು ? ಹಾಗೆಯೆ ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ನೀಡಿರುವ ಟಿ.ಎಫ್.ಆರ್. ಗುರಿ ೨.೬! ಇದು ಕನ್ನಡಿಗರ ಪಾಲಿನ ಅತಿ ದೊಡ್ಡ ಮರ್ಮಾಘಾತವಾಗಲಿದ್ದು ಇದರಿಂದ ಕನ್ನಡಿಗರ ಸಂತತಿ ನಿಧಾನವಾಗಿ ನಶಿಸುವುದರಲ್ಲಿ ಸಂಶಯವಿಲ್ಲ. ಏಕೆಂದರೆ ನಮ್ಮ ಸಂಖ್ಯೆಯನ್ನು ಯಥಾವತ್ ಉಳಿಸಿಕೊಳ್ಳಲಿಕ್ಕಾದರೂ ಟಿ.ಎಫ್.ಆರ್. ೨.೧ ಆದರೂ ಇರಲೇಬೇಕು. ಆದರೆ ಕೇಂದ್ರವು ಜನರಿಂದ ತುಂಬಿ ತುಳುಕುತ್ತಿರುವ ಹಿಂದಿ ರಾಜ್ಯಗಳಿಗೆ ಹೆಚ್ಚು ಟಿ.ಎಫ್.ಆರ್. ನಿಗದಿ ಮಾಡಿದೆ.
ಜನಸಂಖ್ಯಾ ನಿಯಂತ್ರಣ ಬೇಡವೆ ?
ಇದೆಲ್ಲ ಸರಿ, ಹಾಗದರೆ ಕನ್ನಡಿಗರ ಸಂಖ್ಯೆಯನ್ನು ಉಳಿಸಿಕೊಳ್ಳುವ ನೆಪದಲ್ಲಿ ಜನಸಂಖ್ಯಾ ನಿಯಂತ್ರಣವನ್ನು ಮರೆಯಬೇಕೆ ? ಎಂದೂ ಪ್ರಶ್ನಿಸಬಹುದು. ನಿಜ, ಮಿತಿ ಮೀರಿದ ಜನಸಂಖ್ಯೆಯೂ ರಾಜ್ಯದ, ದೇಶದ ಪ್ರಗತಿಗೆ ಮಾರಕವಾಗಬಲ್ಲುದು. ಆದರೆ ನಾವಿಲ್ಲಿ ವಾಸ್ತವ ಸಂಗತಿಯನ್ನು ಅರಿತುಕೊಳ್ಳಬೇಕು. ಅದೇನೆಂದರೆ ಕನ್ನಡಿಗರ ಜನಸಂಖ್ಯೆ ಎಂದೂ ಮಿತಿ ಮೀರಿಯೆ ಇಲ್ಲ! ಕರ್ನಾಟಕದಲ್ಲಿ ಜನಸಂಖ್ಯೆ ಅಂತ ಏರಿದ್ದರೆ ಅದು ಪರಭಾಷಿಕರದ್ದೇ ಅಧಿಕ. ಕನ್ನಡಿಗರ ಸಂಖ್ಯೆ ಎಲ್ಲಾ ಕಾಲದಲ್ಲೂ ಎಷ್ಟಿರಬೇಕೋ ಅಷ್ಟು ಇದೆ. ಆದರೂ ಕೇಂದ್ರದ ಹಿಂದಿವಾಲಗಳು ಕನ್ನಡಿಗರ ಸಂಖ್ಯೆಯನ್ನು ನಿಯಂತ್ರಿಸಲು ಇನ್ನಿಲ್ಲದ ಶ್ರಮ ವಹಿಸುತ್ತಿದ್ದಾರೆ. ಇದನ್ನು ನಾವು ಪ್ರಶ್ನಿಸಬೇಕಾಗಿದೆ.
ಜನಸಂಖ್ಯಾ ನಿಯಂತ್ರಣ ದೇಶದ ಉಳಿವಿಗಾಗಿ ಬೇಕೇ ಬೇಕು. ಆದರೆ ಅದು ಸಾಗಬೇಕಾದ ಕ್ರಮವಾದರೂ ಹೇಗೆ ? ಹೆಚ್ಚಿರುವ ಜನಾಂಗವನ್ನು ಹಾಗೆಯೆ ಹೆಚ್ಚಲು ಬಿಟ್ಟು ಕಡಿಮೆ ಇರುವ ಜನಾಂಗವನ್ನು ಇನ್ನಷ್ಟು ಕಡಿಮೆ ಮಾಡುವ ಹುನ್ನಾರವಾದರೂ ಯಾಕೆ ? ನಿಜವಾಗಿ ಆಗಬೇಕಾದುದೇನೆಂದರೆ ಎಲ್ಲಿ ಜನಸಂಖ್ಯೆ ಮಿತಿ ಮೀರಿದೆಯೋ ಅಲ್ಲಿ ಹೆಚ್ಚಿನ ನಿಗಾ ವಹಿಸಿ ಜನಸಂಖ್ಯೆಯನ್ನು ನಿಯಂತ್ರಿಸಲು ಪ್ರಯತ್ನಿಸಬೇಕಲ್ಲವೆ? ಅದನ್ನು ಬಿಟ್ಟು ಅಲ್ಲಿ ಹೆಚ್ಚಾದುದನ್ನು ಇಲ್ಲಿ ಸರಿ ಪಡಿಸುವ ದುರಾಲೋಚನೆ ಎಷ್ಟು ಸರಿ ?
ಮೇಲಾಗಿ ಹೆಚ್ಚು ಸುಶಿಕ್ಷಿತರಾದ ಕನ್ನಡಿಗರು ಈಗೆಲ್ಲಾ ಒಂದೇ ಮಗು ಸಾಕು ಎಂಬ ಸಿದ್ದಾಂತಕ್ಕೆ ಅಂಟಿಕೊಳ್ಳುತ್ತಿದ್ದಾರೆ. ಇದೂ ಕೂಡಾ ಕನ್ನಡಿಗರ ಸಂಖ್ಯೆ ಕುಸಿಯಲು ಕಾರಣ. ಹೊತ್ತು ಹೆತ್ತು ಸಾಕಲು ಹಿಂಜರಿಯುವ ಆಧುನಿಕ ಮಹಿಳೆಯರ ಮನೋಭಾವದಿಂದಾಗಿಯೂ, ಆಧುನಿಕ ಜೀವನ ಶೈಲಿ, ಮಗುವಿನ ಭವಿಷ್ಯದ ಚಿಂತೆ, ವಿದ್ಯಾಭ್ಯಾಸಕ್ಕೆ ತಗಲುವ ಲಕ್ಷಾಂತರದ ಹಣ - ಇವೆಲ್ಲಾ ಕಾರಣಗಳು ಸೇರಿಕೊಂಡು ಎರಡೆರಡು ಮಕ್ಕಳನ್ನು ಹೆರುವವರ ಸಂಖ್ಯೆ ಕುಸಿಯುತ್ತಿದೆ. ಇದರಿಂದ ಕನ್ನಡಿಗರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ ಉಂಟಾಗಿದೆ.
ಕನ್ನಡಿಗರೆ ಎಚ್ಚೆತ್ತುಕೊಳ್ಳಿ
ಹಿಂದಿಯವರು ಹಾಗೂ ಕೆಲವು ಕನ್ನಡನಾಸ್ತಿಗಳು ಸೇರಿಕೊಂಡು ನಿಧಾನವಾಗಿ ಕನ್ನಡಿಗರನ್ನು ಇಲ್ಲವಾಗಿಸುವ ಹುನ್ನಾರದಲ್ಲಿ ತೊಡಗಿದ್ದಾರೆಂಬುದಕ್ಕೆ ನೂರಾರು ಕಾರಣಗಳು ಸಿಗುತ್ತಿವೆ. ಅವುಗಳಲ್ಲಿ ಇದು ಒಂದು ಉದಾಹರಣೆ ಮಾತ್ರ. ಕನ್ನಡಿಗರೊಂದೇ ಅಲ್ಲ, ಭಾರತವನ್ನು ಹಿಂದೂ ದೇಶ ಮಾಡುವ ಜೊತೆಗೆ ಹಿಂದಿ ದೇಶ ಮಾಡುವ ಕೆಲಸವೂ ಸಾಗಿದೆ. ಅವರ ಇಂತಹ ದುಷ್ಟ ಕೆಲಸದಲ್ಲಿ ಕನ್ನಡಿಗರಾದ ನಾವೂ ಸಹ ಅರಿವಿಲ್ಲದೆ ಭಾಗಿಯಾಗುತ್ತಿದ್ದೇವೆ. ದೇಶದ ಅನೇಕ ಭಾಷೆಗಳು ಸದ್ದಿಲ್ಲದೇ ನಶಿಸಿವೆ. ಇನ್ನೂ ಕೆಲವಾರು ಭಾಷೆಗಳು ಈಗಲೋ ಆಗಲೋ ಎಂಬಂತೆ ಎದುಸಿರು ಬಿಡುತ್ತಿವೆ. ಕನ್ನಡದಂತಹ ಕೆಲವೊಂದು ಭಾಷೆಗಳು ನಿಲ್ಲುವ ತ್ರಾಣವನ್ನು ನಿಧಾನಕ್ಕೆ ಕಳೆದುಕೊಳ್ಳುತ್ತಿವೆ.
ಬೇಕಾದರೆ ಒಂದು ನೂರು ವರ್ಷದ ನಂತರ ಕನ್ನಡದ ಸ್ಥಿತಿ ಹೇಗಾಗಬಹುದು ಎಂದು ನೀವೇ ಯೋಚಿಸಿ ನೋಡಿ... ನೂರು ವರ್ಷದ ನಂತರವೂ ಕನ್ನಡ ಉಳಿದಿರುತ್ತದೆ, ಉಳಿದಿದ್ದರೂ ಈಗಿರುವಷ್ಟೇ ದೃಡವಾಗಿ ಇರುತ್ತದೆ ಎಂಬ ಭರವಸೆ ನಿಮಗೆ ಇದೆಯೆ ? ಕಂಡಿತಾ ಇರಲು ಸಾಧ್ಯವಿಲ್ಲ. ಆಂಗ್ಲದ ಅತಿಯಾದ ಬಳಕೆ ಹಾಗೂ ವ್ಯಾಮೋಹದಿಂದ ಕನ್ನಡಕ್ಕೆ ಮರ್ಮಾಘಾತವಾಗಿದೆ. ಅದರ ಜೊತೆಗೆ ನಮ್ಮ ದೇಶವಾಸಿಗಳೇ ನಮಗೆ ಮೋಸವೆಸಗುತ್ತಿದ್ದಾರೆ. ಅದಕ್ಕೂ ಮಿಗಿಲಾಗಿ ಹಲವು ಕನ್ನಡಿಗರೆ ತಿಳಿದೋ ತಿಳಿಯದೆಯೋ ಇಂಗ್ಲೀಷ್, ಹಿಂದಿ, ಸಂಸ್ಕೃತದ ವ್ಯಾಮೋಹಕ್ಕೊಳಗಾಗಿ ಕನ್ನಡಕ್ಕೆ ಮಾರಕವಾಗಿದ್ದಾರೆ. ಹಿಂದಿಯವರ ದೂರ್ತ ರೂಪವನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಾಗಿದೆ.
ಕನ್ನಡಿಗರಿಗೆ ತಮಿಳರು ಮಾತ್ರ ವಿರೋಧಿಗಳು, ಅವರ ವಲಸೆಯಿಂದ ಕನ್ನಡಕ್ಕೆ ತೊಂದರೆ ಎಂಬುದರ ಜೊತೆಗೆ ಅವರಿಗಿಂತಲೂ ಹೆಚ್ಚಿನ ಗಂಡಾಂತರ ಹಿಂದಿಯವರಿಂದ ಹಾಗೂ ಹಿಂದಿಯಿಂದ ಉಂಟಾಗುತ್ತಿದೆ. ದೇಶಭಕ್ತಿಯ ಹೆಸರಲ್ಲಿ ಒಂದು ಜನಾಂಗವನ್ನೇ ನಿರ್ನಾಮ ಮಾಡುವ ಇಂತಹ ಹುನ್ನಾರಗಳನ್ನು ನಾವು ಬೇಗನೆ ಅರಿತುಕೊಳ್ಳದೇ ಹೋದರೆ ನೂರಾರು ವರ್ಷಗಳ ಇತಿಹಾಸದ ಒಂದು ಭಾಷೆ ಹಾಗೂ ಜನಾಂಗ ಮತ್ತದೆ ಇತಿಹಾಸದ ಬುಟ್ಟಿ ಸೇರುವುದರಲ್ಲಿ ಅನುಮಾನವಿಲ್ಲ.
ಕನ್ನಡಿಗರೆ ಮನೆಗಿಬ್ಬರು ಮಕ್ಕಳಿರಲಿ ಎಂಬ ಸಿದ್ದಾಂತವನ್ನು ರೂಢಿಸಿಕೊಳ್ಳಿ. ಒಂದು ಮಗುವನ್ನು ಸಾಕಲು ಶಕ್ತರಾದ ನಿಮಗೆ ಇನ್ನೊಂದು ಮಗು ಭಾರವೆನ್ನಿಸಲಾರದು. ಒಂದೇ ಮಗುವನ್ನು ಎನೇನೋ ಓದಿಸಿ ವಿದೇಶಕ್ಕೆ ಕಳಿಸಿ ನೀವು ಒಂಟಿಯಾಗುವ ಬದಲು ಇಬ್ಬರನ್ನು ಸಾಧ್ಯವಾದಷ್ಟು ಓದಿಸಿ ನಮ್ಮ ದೇಶ/ರಾಜ್ಯದಲ್ಲೆ ನೌಕರಿ ಕೊಡಿಸಿ ಸಂತೋಷವಾಗಿರಿ.

ಲೇಖಕರು

ಪಿಸುಮಾತು

ಕಾದಂಬರಿಗಳು : ಜೀವನ ಪಥ, ಅವಿರತ ಹೋರಾಟ, ಅಜ್ಞಾತ ಕವಿಯ ಮೃತ್ಯು ಗೀತೆ

ಮಿನಿ ಕಾದಂಬರಿಗಳು : ಒಲವಿಂದಲೇ ಗೆಲ್ಲುವೆ, ಮಿ.ಪ್ರೇಮಿ, ಅಂಡಮಾನ್, ಸಾವೇ ಸಾವೇ ಟೈಂ ಪ್ಲೀಸ್ ಇತ್ಯಾದಿ ಒಟ್ಟು ೬.

ಕಥೆಗಳು : ಸುಮಾರು 25. ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕಥಾ ಸಂಕಲನ : ಸವಿ ನೆನಪುಗಳು ಬೇಕು

ಹಲವರು ಕವನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಬ್ಲಾಗ್ : http://pisumathu4u.blogspot.in
ಟ್ವಿಟರ‍್ : http://twitter.com/pisumathu
ಫೇಸ್‌ಬುಕ್ : http://www.facebook.com/profile.php?id%3D100000728343733
ಉದ್ಯೋಗ : Web Design & Hosting (http://www.pisumathu.com)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.