Skip to main content

ಮನೆಯಂಗಳದಲ್ಲಿ ಮೈದುಂಬಿದ ಚಿತ್ರೋತ್ಸವ

ಬರೆದಿದ್ದುJune 20, 2013
noಅನಿಸಿಕೆ

ತುರುವೇಕೆರೆ: ಹಲವು ವ್ಯಾಪಾರಿ ಚಿತ್ರಗಳು ನಮ್ಮ ದೇಶೀ ಸಂಸ್ಕೃತಿ ಹಾಗೂ ನೆಲ ಸಂಸ್ಕೃತಿಗೆ ವಿರುದ್ಧವಾದ ಅಗ್ಗದ ಜನಪ್ರಿಯ ಸಂಸ್ಕೃತಿಯ ಮೂಲಕ ಯುವ ಸಮೂಹವನ್ನು ಭಾವೋನ್ಮಾದಕ್ಕೆ ನೂಕುತ್ತಿವೆ. ಡೇಟಿಂಗ್,ವಾಲಂಟೈನ್,ಕೊಕೋಕಾಲಾ ಸಂಸ್ಕೃತಿಯನ್ನು ಮೆರೆಸುತ್ತಾ ನಾಗರಿಕ ವಿಕಾರಗಳಿಗೆ ಯುವಕರನ್ನು ತೆರೆಯುತ್ತಿದೆ ಈ ಅಮಲಿನ ಅಪೀಮಿಗೆ ಬಲಿಯಾದ ಯುವಜನರು ಅಸ್ಮಿತೆ ಹಾಗೂ ಕನ್ನಡತನವನ್ನೇ ಕಳೆದುಕೊಂಡಿದ್ದಾರೆ ಎಂದು ಆಗಾಗ್ಗೆ ಕಲಾತ್ಮಕ ಚಿತ್ರಗಳ ಶ್ರೇಷ್ಠ ನಿರ್ದೇಶಕರು ತಮ್ಮ ಅಸಮಾಧಾನವನ್ನು ತೋಡಿಕೊಳ್ಳುತ್ತಲೇ ಇರುತ್ತಾರೆ.

ಕಲಾತ್ಮಕ ಚಿತ್ರಗಳು ವ್ಯಾಪಾರಿ ಚಿತ್ರಗಳೊಂದಿಗೆ ಸ್ಪರ್ಧೆಗಿಳಿಯುವ ಸಾಧ್ಯತೆಗಳೇ ಇಲ್ಲ. ಅವುಗಳನ್ನು ಜನ ನೋಡುವಂತೆ ಮಾಡುವುದೇ ಸಾಹಸದ ಸಂಗತಿಯಾಗಿದೆ. ಪ್ರಚಾರ, ಥಿಯೇಟರ್ ಯಾವುದೂ ಸಿಗದೆ ಅಂತಹ ಚಿತ್ರಗಳು ವರುಷಗಟ್ಟಲೆ ಡಬ್ಬದಲ್ಲಿ ಕೊಳೆಯುತ್ತಿವೆ. ಇವು ಕೇವಲ ಪ್ರಶಸ್ತಿಗೆಂದೇ ಮಾಡಿದ ಚಿತ್ರಗಳು ಎಂದು ಹಣೆಪಟ್ಟಿ ಹೊತ್ತು ಜನರನ್ನು ತಲುಪಲಾಗದೆ ಶೋಚನೀಯ ಪರಿಸ್ಥಿತಿ ಉದ್ಭವಿಸಿದೆ

ಹಲ ವ್ಯಾಪಾರಿ ಚಿತ್ರಗಳು ಬೃಹತ್ ಬಜೆಟ್, ನವೀನ ತಂತ್ರಜ್ಞಾನ ಹಾಗೂ ಅಗಾಧ ವೃತ್ತಿಪರತೆಯೊಂದಿಗೆ ತಯಾರಾಗುತ್ತವೆ. ಇದು ನಿಜಕ್ಕೂ ಸಾಹಸವೇ ಸರಿ.ಆದರೆ ಈ ಎಲ್ಲಾ ಶ್ರಮ ಆರೋಗ್ಯಕರ ಮನರಂಜನೆಯ ಅಭಿವ್ಯಕ್ತಿಯಾಗುತ್ತಿಲ್ಲ ಎಂಬುದೇ ದುರಂತ. ಬಹುತೇಕ ವ್ಯಾಪಾರಿ ಚಿತ್ರಗಳು ಸಾಮಾಜಿಕ ಹಾಗೂ ನೈತಿಕ ಜವಾಬ್ಧಾರಿಯನ್ನೇ ಮರೆತಿವೆ. ಈ ಹಿನ್ನೆಲೆಯಲ್ಲಿ ಈಚೆಗೆ ತುಮಕೂರು ಜಿಲ್ಲೆ ತುರುವೇಕೆರೆಯ ಚಿದಂಬರೇಶ್ವರ ಗ್ರಂಥಾಲಯದ ಲಲಿತಾ ರಾಮಚಂದ್ರ ದಂಪತಿ ತಮ್ಮ ಮನೆಯಲ್ಲಿ ಚಿತ್ರೋತ್ಸವ ನಡೆಸುವ ಸಾಹಸ ಮಾಡಿದರು.

ಪ್ರಶಸ್ತಿ ವಿಜೇತ ಗುಣಾತ್ಮಕ ಚಿತ್ರಗಳನ್ನು ಜನರಿಗೆ ತಲುಪಿಸಲು ಪ್ರಾರಂಭವಾದ ಅಭಿಯಾನವೇ ಚಿತ್ರೋತ್ಸವಗಳು. ಸ್ಥಳೀಯ ಚಿತ್ರಮಂದಿರವೊಂದನ್ನು ಬಾಡಿಗೆಗೆ ಹಿಡಿದು ವಾರ ಕಾಲ ಪ್ರಶಸ್ತಿ ವಿಜೇತ ನಿರ್ದೇಶಕರ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ಬೆರಳೆಣಿಕೆಯಷ್ಟು ಜನ ಈ ಚಿತ್ರಗಳನ್ನು ನೋಡುತ್ತಿದ್ದರು. ಈ ಖರ್ಚು ವೆಚ್ಚಗಳೂ ದುಬಾರಿ ಎನಿಸಿ ಚಿತ್ರಮಂದಿರಗಳು ಅವಕ್ಕೂ ಅವಕಾಶ ಕೊಡದಂತಾದ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೊಸಅಲೆಯ ಚಿತ್ರಗಳ ಪ್ರದರ್ಶನ ಬಹುತೇಕ ಸ್ಥಗಿತಗೊಂಡಂತಾಗಿತ್ತು. ಇದನ್ನು ಮನಗಂಡ ಹಲವು ನಿರ್ದೇಶಕರು ಬಿ.ಸುರೇಶ್ ನಾಯಕತ್ವದಲ್ಲಿ ಗಿರೀಶ್ ಕಾಸರವಳ್ಳಿ, ಪಿ.ಶೇಷಾದಿ ಅವರನ್ನು ಒಳಗೊಂಡ ತಂಡ ಮೀಡಿಯಾ ಟೂರಿಂಗ್ ಟಾಕೀಸ್ ಪರಿಕಲ್ಪನೆ ಮೂಲಕ ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳನ್ನು ಪ್ರದರ್ಶಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಸ್ಥಳೀಯ ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕರಾದ ರಾಮಚಂದ್ರ ದಂಪತಿ ತಮ್ಮ ಮನೆಯಲ್ಲೇ ವಾರ ಕಾಲ ಪಿ.ಶೇಷಾದ್ರಿ ಚಿತ್ರಗಳ ಚಿತ್ರೋತ್ಸವ ನಡೆಸುವ ತೀರ್ಮಾನ ಮಾಡಿದರು. ರೈಲ್ವೆ ಇಲಾಖೆಯ ನಿವೃತ್ತ ನೌಕರ ರಾಮಚಂದ್ರ ಸಾಹಿತ್ಯ ಪರಿಚಾರಿಕೆಯಂತೆಯೇ ಸಿನಿಮಾ ರೀಲು ಪರಿಚಾರಿಕೆ ನಡೆಸಿದರು.

ಲಲಿತಾ ರಾಮಚಂದ್ರ ದಂಪತಿ ತಾವು ಹೊಸದಾಗಿ ಕಟ್ಟಿದ ಮನೆಯೊಂದನ್ನೇ ಸಾರ್ವಜನಿಕ ಗ್ರಂಥಾಲಯವಾಗಿ ಮಾರ್ಪಡಿಸಿದ್ದಾರೆ.ಅದರ ಆವರಣದಲ್ಲಿ ವಾರ ಕಾಲ ಪಿ.ಶೇಷಾದ್ರಿ ನಿರ್ದೇಶಿತ ಬೇರು, ವಿಮುಕ್ತೆ, ಬೆಟ್ಟದ ಜೀವ, ತುತ್ತೂರಿ, ಅಥಿತಿ, ಮುನ್ನುಡಿ, ಭಾರತೀ ಸ್ಟೋರ್ ಚಿತ್ರಗಳನ್ನು ಪ್ರತಿ ಸಂಜೆ ಪ್ರದರ್ಶಿಸಿದರು. ಚಿತ್ರ ಪ್ರದರ್ಶನದ ನಂತರ ಮಕ್ಕಳ ಸಾಹಿತಿ ಟಿ.ನಾಗರಾಜ ಶೆಟ್ಟಿ, ವೈದ್ಯರಾದ ಡಾ.ನಾಗರಾಜ್, ಡಾ.ಸತೀಶ್, ಮೊದಲಾದ ಸಂಪನ್ಮೂಲ ವ್ಯಕ್ತಿಗಳು ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು. ಕಲಾತ್ಮಕ ಚಿತ್ರಗಳ ರಸಗ್ರಹಣ ಹೇಗೆ? ಎಂಬುದರ ಕುರಿತು ವಿಚಾರ ಸಂಕಿರಣವನ್ನೂ ಏರ್ಪಡಿಸಲಾಗಿತ್ತು. ಚಿತ್ರೋದ್ಯಮಕ್ಕೆ 100 ವರ್ಷ ತುಂಬಿದ ನೆನಪಾಗಿ ಸಿನಿಮಾ ನಡೆದು ಬಂದ ಹಾದಿಯ ಭಿತ್ತಿಚಿತ್ರಗಳನ್ನೂ ಅನಾವರಣಗೊಳಿಸಲಾಗಿತ್ತು. ಸುಮಾರು 100ಕ್ಕೂ ಹೆಚ್ಚು ಜನರು ಸೀರಿಯಲ್ ನೋಡುವುದನ್ನು ಬಿಟ್ಟು ಪ್ರತಿದಿನ ಈ ಚಲನಚಿತ್ರಗಳನ್ನು ವೀಕ್ಷಿಸಿ ಸಂವಾದದಲ್ಲಿ ಪಾಲ್ಗೊಂಡದ್ದು ಅಗ್ಗಳಿಕೆ ಎನಿಸಿತ್ತು.

ಶಿಷ್ಟ ಸಂಸ್ಕೃತಿ,ಪರಂಪರೆಯ ಪುನರುತ್ಥಾನಕ್ಕೆ ಸಿನಿಮಾ ರಸಗ್ರಹಣ ಚಳುವಳಿಯೊಂದು ರೂಪುಗೊಳ್ಳಬೇಕಿದೆ.ಈ ಚಳುವಳಿ ರಸ್ತೆಗಳಲ್ಲಿ ಮಾಡುವ ಚಳುವಳಿಯಲ್ಲ. ಮನೆ ಮನೆಗಳಲ್ಲಿ-ಮನ ಮನಗಳಲ್ಲಿ ಸದ್ದಿಲ್ಲದೆ ಪ್ರಾರಂಭವಾಗಬೇಕಾದ ಚಳುವಳಿ.ಅಂತಹ ಚಳುವಳಿಗೆ ಲಲಿತಾ ರಾಮಚಂದ್ರ ದಂಪತಿ ನಾಂದಿ ಹಾಡಿದ್ದಾರೆ ಎಂದು ನಿರ್ದೇಶಕ ಪಿ.ಶೇಷಾದ್ರಿ ಹೇಳಿದ್ದು ಅಕ್ಷರಶಃ ಸತ್ಯ ಎನಿಸಿತು. ಪ್ರತಿ ಕುಟುಂಬವೂ ಕನಿಷ್ಠ 15 ದಿನಕ್ಕೊಂದು ಇಂತಹ ಚಿತ್ರ ವೀಕ್ಷಿಸಲು ಮಕ್ಕಳಿಗೆ ಅವಕಾಶ ಮಾಡಿಕೊಟ್ಟರೆ ಮೌಲ್ಯಾಧಾರಿತ ಯುವ ಪೀಳಿಗೆಯ ನಿರ್ಮಾಣದಲ್ಲಿ ಭಾಗಿಯಾಗಿ ಸಾಮಾಜಿಕ ಜವಾಬ್ಧಾರಿ ಮೆರೆದಂತಾಗುತ್ತದೆ ಎಂಬುದೂ ಅಷ್ಟೇ ಸತ್ಯ.
~ತುರುವೇಕೆರೆ ಪ್ರಸಾದ್ 

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.