Skip to main content

ದೀಪದಿಂದ ದೀಪವ ಹಚ್ಚ ಬೇಕು ಮಾನವ….

ಬರೆದಿದ್ದುDecember 28, 2012
noಅನಿಸಿಕೆ

ಅವತ್ತು ಶನಿವಾರ, ನಾನು ಧನಂಜಯಣ್ಣ ಮಾಮೂಲಿಗಿಂತ
ಸ್ವಲ್ಪ ಮುಂಚೆನೆ ಆಫೀಸ್ ನಿಂದ ಹೊರಟ್ವಿ, ವಾರಾಂತ್ಯ ಅನ್ನೊ ಖುಷಿಯ ಜೊತೆ, ಇನ್ನು ಸೋಮವಾರದಿಂದ ಮೂರು
ದಿವಸ ದೀಪಾವಳಿ ರಜ ಅನ್ನೊ ಹುಮ್ಮಸ್ಸು. ತಿಂಗಳ ಹಿಂದೆನೆ ಬಸ್ ಟಿಕೆಟ್ ಬುಕ್ ಮಾಡೊಕೆ ಮರೆತು ಹೋದ
ನನಗೆ ಈ ಬಾರಿ ಭಾನುವಾರ ಸೇರಿ ಸಾಲು ಸಾಲು ರಜೆ ಇದ್ರು ಕೂಡ ಮೂರು ದಿವಸದ ದೀಪಾವಳಿನಲ್ಲಿ ಊರಿಗೆ ಹೋಗಿ
ಆಚರಿಸೋಕೆ ನನಗೆ ಸಿಗೋದು ಎರಡು ದಿವಸ ಮಾತ್ರ. ಯಾಕಂದ್ರೆ ನಂಗೆ ಟಿಕೆಟ್ ಸಿಕ್ಕಿದ್ದೆ ಸೋಮವಾರ ರಾತ್ರಿ
ಬಸ್ ಗೆ. ಹೀಗೆ ಸಂತೋಷ ಬೇಸರದಿಂದ ಸಮ್ಮಿಳಿತವಾಗಿದ್ದ ನನ್ನ ಯೋಚನೆಗಳಿಗೆ ಬ್ರೇಕ್ ಹಾಕಿದ್ದು ನನ್ನ
ಬೈಕ್ ನ ಹಿಂದಿನ ಸೀಟ್ ನಲ್ಲಿ ಕೂತಿದ್ದ ಧನಂಜಯಣ್ಣ. ಎದುರಿಗಿದ್ದ ಪಟಾಕಿ ಅಂಗಡಿ ನೋಡಿ.

“ನಿಲ್ಸು, ನಿಲ್ಸು, ನಿಲ್ಸು….” ಅಂತ ನನ್ನ ಹೆಗಲನ್ನ
ನಾಲ್ಕು ಸಾರಿ ತಟ್ಟಿದ್ರು.

“ಐದೇ ನಿಮಿಷ…. ಸ್ವಲ್ಪ ಪರ್ಚೇಸ್ ಇದೆ…. ನೀನು
ಬಾ ಒಬ್ನೆ ಏನ್ ಮಾಡ್ತೀಯ ಇಲ್ಲಿ” ಅಂದ್ರು,

ದೀಪಾವಳಿಗೆ ಸಿಗೊ ರಜಾ, ಎಣ್ಣೆ ಸ್ನಾನ, ದೋಸೆ ಕಜ್ಜಾಯ
ಬಿಟ್ರೆ ಈ ಪಟಾಕಿ, ಭೂಚಕ್ರ ಇದರಲ್ಯಾವುದರಲ್ಲು ಮೊದಲಿನಿಂದಲೂ ನಂಗೆ ಆಸಕ್ತಿ ಇರಲಿಲ್ಲ. ಅದೂ ಅಲ್ಲದೆ
ಅಂಗಡಿಯ ಒಳಗೆ ಕಾಲಿಡೊಕೆ ಜಾಗ ಇಲ್ಲದಷ್ಟು ತುಂಬಿದ ಜನಸಾಗರವನ್ನ ನೋಡಿ ನಂಗೆ ಅವರ ಜೊತೆ ಹೋಗೊ ಮನಸಾಗಲಿಲ್ಲ.

“ಪರವಾಗಿಲ್ಲ, ನೀವು ಹೋಗ್ಬನ್ನಿ, ನಾನು ಇಲ್ಲೆ
ಇರ್ತೀನಿ” ಅಂತ ಅವರನ್ನ ಅಲ್ಲಿಂದ ಕಳುಹಿಸಿ. ಹೆಲ್ಮೆಟ್ ತೆಗೆದು ಬೈಕ್ ಟ್ಯಾಂಕ್ ಮೇಲೆ ಇಟ್ಟು, ಸುಮ್ಮನೆ
ಆ ಕಡೆ ಈ ಕಡೆ ನೋಡ್ತಾ ಇದ್ದೆ. ದೂರದಲ್ಲಿ ನೇತಾಜಿ ಪಾರ್ಕಿನ ಬೇಲಿಯ ಪಕ್ಕದ ದೊಡ್ಡ ಮರದ ಕೆಳಗೆ ಫುಟ್
ಪಾತ್ ನಲ್ಲಿ ಇಬ್ಬರು ಹುಡುಗಿಯರು ಮತ್ತೊಬ್ಬ ಚಿಕ್ಕ ಹುಡುಗ ಕೂತಿದ್ದು ಕಾಣಿಸ್ತು. ಮಾಮೂಲಿಯಾಗಿ ಬೆಳಗ್ಗೆ
ಆಫೀಸ್ ಹೋಗೊವಾಗ ಹೂ ರಾಶಿ ಹಾಕೊಂಡು ಕೂರ್ತಾ ಇದ್ದದ್ದು ನೋಡಿದ್ದೆ, ಸಂಜೆ ಅವರನ್ನ ಅಲ್ಲಿ ನೋಡಿದ್ದು
ನೆನಪಿರ್ಲಿಲ್ಲ. ಅದು ಅಲ್ಲದೆ ಇವತ್ತು ಹೂವಿನ ಜೊತೆ ಪಕ್ಕದಲ್ಲಿ ಇನ್ನೂ ಏನೊ ಸಣ್ಣ ರಾಶಿ ಕಾಣಿಸ್ತಿತ್ತು.
ತುಂಬಾ ಜನ ಅಲ್ಲಿ ಬಂದು ಅದನ್ನ ತುಂಬಾ ಹೊತ್ತು ನೋಡಿ, ನೋಡಿ ಮತ್ತೆ ಅಲ್ಲೆ ಇಟ್ಟು ಹೋಗ್ತಿದ್ರು.
ಏನು ಅನ್ನೊ ಸಣ್ಣ ಕುತೂಹಲದಿಂದ ನೋಡೊಣ ಅನ್ನೊ ಮನಸಾಯ್ತು. ಅಷ್ಟು ಹೊತ್ತಿಗಾಗಲೆ ಧನಂಜಯಣ್ಣ ಅಂಗಡಿಯಿಂದ
ಹೊರಗಡೆ ಬರೋದು ಕಾಣಿಸ್ತಿತ್ತು. ಹತ್ತಿರ ಬಂದವರ ಕೈಯಲ್ಲಿ ಇದ್ದಿದ್ದು ಒಂದೇ ಒಂದು ಪ್ಲಾಸ್ಟಿಕ್ ಕವರ್.

“ಏನ್ ಧನಂಜಯಣ್ಣ, ಇಷ್ಟೇನ ದೀಪಾವಳಿ ಪರ್ಚೇಸ್”
ಅಂದೆ.

“ಇಷ್ಟೆನಪ್ಪ, …ಈ ಸಿಟಿನಲ್ಲಿ ಜೋರಾಗಿ ಪಟಾಕಿ ಹೊಡ್ಯೋಣ
ಅಂದ್ರೆ ನಮ್ಮ ಅಕ್ಕ ಪಕ್ಕದವರನ್ನೂ ನೋಡಿಕೊಳ್ಳ ಬೇಕಲ್ವ?” ಅಂದ್ರು

“ಓ ನೀವು ಹೇಳೊದು ನೋಡಿದ್ರೆ, ನಾವು ನಮಗೋಸ್ಕರ
ಆರಾಮಾಗಿ ಬದುಕೋದು ಬಿಟ್ಟು, ಅಕ್ಕ ಪಕ್ಕ ದವರಿಗೋಸ್ಕರ ಅಡ್ಜಸ್ಟ್ ಮೆಂಟ್ ಬದುಕು ಬದುಕ ಬೇಕು ಅನ್ನಿ?......
ನೀವು ಪಟಾಕಿ ಹೊಡೆಯೋದಕ್ಕೆ ನಂಗೇನು ಅಭ್ಯಂತರ ಇಲ್ಲ” ಅಂತ ಹೆಲ್ಮೆಟ್ ಹಾಕಿ ಬೈಕ್ನಲ್ಲಿ ಕೂತೆ.

“ನೀನಿರೋದು ನಮ್ಮ ಮನೆ ರೈಟ್ ಸೈಡ್ ನಲ್ಲಿ ನಿಂದೇನೊ
ಓಕೆ, ಆದ್ರೆ ಲೆಫ಼್ಟ್ ಸೈಡು??? ನಮ್ಮ ದೇಶದಲ್ಲಿ ರೈಟು ಎಷ್ಟು ಮುಖ್ಯಾನೋ ಲೆಫ಼್ಟು ಅಷ್ಟೆ ಮುಖ್ಯ”
ಅಂತ ನಗುತ್ತಾ ಅವರು ಬೈಕ್ ಹತ್ತಿದ್ರು.

“ಅಂದ್ರೆ ನೀವು ಎರಡನ್ನೂ ಸರಿದೂಗಿಸೋ ‘ತೃತಿಯ ರಂಗ’
ಅನ್ನಿ???” ಅಂತ ಸಣ್ಣ ಬಡ ಹಾಸ್ಯ (ಇಂಗ್ಲಿಷ್
ನ ಪಿ.ಜೆ) ಮಾಡಿದೆ.

ಅಲ್ಲಿಂದ ಮನೆ ಕಡೆ ಹೊರಟ್ವಿ, ದಾರಿಯಲ್ಲಿ ಆ ಮಕ್ಕಳು
ರಾಶಿ ಹಾಕಿಕೊಂಡು ಕೂತಿದನ್ನ ನೋಡ್ದೆ. ಒಬ್ಬಳು ಮಾಮೂಲಿ ಥರ ಹೂ ರಾಶಿ ಹಾಕೊಂಡಿದ್ಲು. ಪಕ್ಕದಲ್ಲಿ
ಕೂತ ಹುಡುಗಿ ಕೆಂಪಗಿನ ಚಿಕ್ಕ ಚಿಕ್ಕ ವಸ್ತುಗಳ ರಾಶಿ ಹಾಕಿದ್ಲು, ಬೈಕ್ ಓಡಿಸ್ತಿದ್ದ ನನಗೆ ಹೆಲ್ಮೆಟ್
ನ ಸಣ್ಣ ಕಿಂಡಿಯಲ್ಲಿ ಅದು ಏನು ಅಂತ ಸರಿಯಾಗಿ ಕಾಣಲಿಲ್ಲ.

***

ನಾನಿದ್ದಿದ್ದು ಧನಂಜಯಣ್ಣನ ಮನೆ ಪಕ್ಕದ ಚಿಕ್ಕ
ಬಾಡಿಗೆ ಮನೆಯಲ್ಲಿ, ಒಬ್ಬಂಟಿ ಬ್ಯಾಚುಲರ್ ಜೀವನ. ಒಂದೆ ಆಫಿಸ್ ನಲ್ಲಿ ಕೆಲಸ ಮಾಡೊದ್ರಿಂದ, ಅವರ ಮನೆಯಲ್ಲಿ
ಸಲುಗೆಯಿಂದ ಓಡಾಡ್ತಾ ಇದ್ದೆ. ಹೆಚ್ಚು ಕಮ್ಮಿ ಊಟ, ತಿಂಡಿ ಎಲ್ಲಾ ಅಲ್ಲೆ ಅನ್ನ ಬಹುದು. ಬಂದು ಅರ್ಧಗಂಟೆ
ಆಗಿರ್ಲಿಲ್ಲ ಏನೊ ಬೇಜಾರು ಅಂತ ಅವರ ಮನೆಗೆ ಹೋದೆ. ಸಂಜೆ ಅಂಗಡಿಯಿಂದ ತಂದಿದ್ದ ಕವರ್ ನ ತೆರಿತಾ ಕೂತಿದ್ರು.
ಪಕ್ಕದಲ್ಲಿ ಅವರ ಚಿಕ್ಕ ಮಗಳು ‘ಮಿಂಚು’ ಅಪ್ಪ ಏನು ತಂದಿದಾರೆ ಅಂತ ಕುತೂಹಲದ ಬೆರಗು ಕಣ್ಣಿನಿಂದ ನೋಡ್ತಾ
ಕೂತಿದ್ಲು. ನಾನು ಬಂದಿದ್ದು ನೋಡಿ ಮಾಮೂಲಿ ಕುಶಲೋಪರಿ ಮಾತನಾಡಿ ಅತ್ತಿಗೆ, ಅಂದ್ರೆ ಧನಂಜಯಣ್ಣನ ಅರ್ಧಾಂಗಿ!!!
ಕಾಫಿ ಮಾಡೋಕೆ ಒಳಗಡೆ ಹೋದ್ರು. ಮಗಳ ಒತ್ತಾಯಕ್ಕೆ ಅಂತ ತಂದಿದ್ದ ಕೆಲವು, ಕಲರ್ ಕಡ್ಡಿ, ಭೂ ಚಕ್ರ
ಹೀಗೆ ದೀಪಾವಳಿಯ ಬತ್ತಳಿಕೆಯಿಂದ ಒಂದೊಂದೆ ವಸ್ತುಗಳು ಹೊರಗಡೆ ಬರ್ತಾ ಇದ್ದವು. ಕೊನೆಯದಾಗಿ ಅವರ ಕವರ್
ನಿಂದ ಹೊರಬಂದ ಕಪ್ಪು ವಿದ್ಯುತ್ ವಯರ್ ಗಳನ್ನ ಸುರುಳಿ ಸುತ್ತಿದಂತೆ ಇದ್ದ ಹೊಸ ವಸ್ತುವಿನ ಕಡೆ ನನ್ನ
ಗಮನ ಹರಿಯಿತು. ಅದಕ್ಕೆ ಒಂದಷ್ಟು ಪ್ಲಾಸ್ಟಿಕ್ ಹಣತೆಗಳು ಜೋತಾಡುತ್ತಿದುವು.

“ಇದೇನು ಪ್ಲಾಸ್ಟಿಕ್ ಹಣತೆನ ???” ಅಂದೆ

“ಹಾಂ….. ಇದರಲ್ಲಿ ಎಂಟು ಹಣತೆ ಇದೆ, ನಮ್ಮನೆ ಮನೆ
ಕಾಂಪೌಂಡ್ ಗೆ ಇದು ಸಾಕು. ಎಣ್ಣೆ ಬೇಡ, ಬತ್ತಿ ಬೇಡ ಪ್ಲಗ್ ಸಿಕ್ಕಿಸೋದು ಸ್ವಿಚ್ ಹಾಕೋದು. ಈ ಸರ್ತಿ
ನಮ್ಮದು ಪರಿಸರ ಸ್ನೇಹಿ ದೀಪಾವಳಿ ಹ… ಹ… ಹ “  ಅಂತ
ಮತ್ತೆ ಬಡ ಹಾಸ್ಯ.

ನಮ್ಮಲ್ಲಿ ಪಂಚೆ, ಕಚ್ಚೆಯ ಜಾಗಕ್ಕೆ ಗೋಣಿ ಚೀಲದ
ಪ್ಯಾಂಟ್ ಗಳು ಬಂತು, ಅಮ್ಮ ನ ಜಾಗಕ್ಕೆ ಮಮ್ಮಿ ಬಂತು, ಅಷ್ಟೆ ಯಾಕೆ ಅಚ್ಚ ಕನ್ನಡದ ದೀಪಾವಳಿಯ ಜಾಗಕ್ಕೆ
ದಿವಾಲಿ ಬಂದು ನಮ್ಮ ದಿವಾಳಿ ಆಯ್ತು. ಈಗ ಪ್ಲಾಸ್ಟಿಕ್ ಹಣತೆ ವಾಹ್….. ಅಂತ ಮನಸಿಗೆ ಯೋಚನೆ ಬಂದು
ನನ್ನ ಪಾಡಿಗೆ ನಾನೆ ಸಣ್ಣಕ್ಕೆ ನಕ್ಕೆ.

***

ಮರುದಿವಸ ಭಾನುವಾರ, ಇಡೀ ದಿವಸ ಜಾಹಿರಾತು ಗಳ ಮಧ್ಯೆ
ಬರುವ ಅಲ್ಪ ಸ್ವಲ್ಪ ಕಾರ್ಯಕ್ರಮಗಳನ್ನ ಟಿವಿ ಯಲ್ಲಿ ನೋಡ್ತ ಸಮಯ ಸಂಹಾರದ ಕೆಲಸ ಬಿಟ್ಟರೆ ಬೇರೆ ಏನು
ಕೆಲಸವಿರಲಿಲ್ಲ. ನಮ್ಮಲ್ಲಿ ಮನೆಗೆ ಹಬ್ಬಕ್ಕೆ ಮುಂಚೆ ಸ್ವೀಟ್, ಪಟಾಕಿ ತಂದರೆ ಒಂದು ತೊಂದರೆ ಇದೆ.
ಸ್ವೀಟ್ ಡಬ್ಬ ಗಳನ್ನ ಪಟಾಕಿ ಡಬ್ಬಗಳನ್ನ ನೋಡಿ ಸ್ಯಾಂಪಲ್ ಸ್ಯಾಂಪಲ್ ಅಂತ ಹಬ್ಬದ ಹಿಂದಿನ ದಿವಸ ಓಪನ್
ಮಾಡದೇ ಇದ್ದರೆ ತಿಂದ ಅನ್ನ ಕರಗೋದೇ ಇಲ್ಲ. ಸೋಮವಾರ ಹಬ್ಬ ಶುರುವಾಗೋದಿದ್ರೂ ಕೂಡ ಭಾನುವಾರದಿಂದಲೆ
ಅಲ್ಲೊಂದು ಇಲ್ಲೋಂದು ಢಂ ಢಂ ಶಬ್ದಗಳು ಕೇಳೊಕೆ ಶುರುವಾಗುತ್ತೆ. ಧನಂಜಯಣ್ಣನೂ ಕೂಡ ಪ್ರಯೋಗಾರ್ಥವಾಗಿ
ತಮ್ಮ ಮನೆ ಕಾಂಪೌಂಡ್ ದಂಡೆಯ ಮೇಲೆ ಸಾಲಾಗಿ ಸ್ವಯಂ ಘೋಷಿತ ಪರಿಸರ ಸ್ನೇಹಿ ಪ್ಲಾಸ್ಟಿಕ್ ದೀಪವನ್ನ
ಹಚ್ಚೊದಕ್ಕೆ ಸಜ್ಜಾದ್ರು. ತಲೆಗೆ ಹೊದ್ದರೆ ಕಾಲಿಗಿಲ್ಲ, ಕಾಲಿಗೆ ಹೊದ್ದರೆ ತಲೆಗಿಲ್ಲ ಅನ್ನೋಹಾಗೆ,
ಕಾಂಪೌಂಡ ನಲ್ಲಿ ದೀಪ ಇಟ್ಟರೆ ಪ್ಲಗ್ ಎಲ್ಲಿಯು ಚುಚ್ಚೊಕಾಗಲ್ಲ, ಮನೆಯೊಳಗಡೆ ಪ್ಲಗ್ ಚುಚ್ಚಿದರೆ ಕಾಂಪೌಂಡ್
ಗೆ ತರಲು ವಯರ್ ಉದ್ದವಿಲ್ಲ. ಸರಿ ಮನೆಯ ಯಾವುದೋ ಮೂಲೆಯಲ್ಲಿದ್ದ ಸಂಪರ್ಕ ವಿಸ್ತ್ರುತ್ ಡಬ್ಬ(ಎಕ್ಸ್
ಟೆನ್ಷನ್ ಬಾಕ್ಸ್) ವೂ ಹೊರಬಂತು, ಸಂಪರ್ಕವೂ ಆಯಿತು. ದೀಪವೂ ಉರಿಯಿತು. “ಅಬ್ಬಾ…” ಅನ್ನೊ ಉಸಿರು ಬಿಡುವ ಹೊತ್ತಿಗೆ ಬಂದ ಸಣ್ಣ ಗಾಳಿಗೆ ಹಣತೆಗಳು ಕಾಂಪೌಂಡ್
ದಂಡೆ ಬಿಟ್ಟು ಗೋಡೆಯ ಮೇಲೆ ನೇತಾಡೊಕೆ ಶುರುವಾಯ್ತು. ಮತ್ತೆ ಅದನ್ನ ದಂಡೆ ಮೇಲಿಟ್ಟು ಪ್ಲಾಸ್ಟಿಕ್
ಹಣತೆಗಳ ನಡುವೆ ಇದ್ದ ವಯರ್ ಗಳ ಮೇಲೆ ಸಣ್ಣ ಸಣ್ಣ ಕಲ್ಲುಗಳನ್ನಿಟ್ಟು ಗಾಳಿಗೆ ಅಲುಗಾಡದಂತೆ ಮಾಡಿದ
ಧನಂಜಯಣ್ಣನಿಗೆ ಹಬ್ಬ ಶುರುವಾಗೊ ಮುನ್ನವೇ ಸುಸ್ತಾಗಿತ್ತು.

ಸಂಜೆ ಎಲ್ಲಾದರೂ ಹೊರ ಹೋಗೊ ಮನಸಾಯಿತು. ಧನಂಜಯ್ಯಣ್ಣ
ಮತ್ತು ಮನೆಯವರು ಹಬ್ಬದ ತಯಾರಿಯಲ್ಲಿದ್ದರಿಂದ ನಾನೊಬ್ಬನೆ ಹೊರಟೆ. ಹತ್ತಿರದಲ್ಲೇ ಇದ್ದ ನೇತಾಜಿ ಪಾರ್ಕ್
ಗೆ ಹೋಗಿ ಕೂತರೆ ಅಲ್ಲೂ ಕೂಡ ಭಾನುವಾರದ ಜನಸಾಗರ ಕಾಣಲಿಲ್ಲ. ಎಲ್ಲರೂ ಕೂಡ ಹಬ್ಬದ ತಯಾರಿಯಲ್ಲಿದ್ದಿರ
ಬಹುದು. ಸ್ವಲ್ಪ ಕತ್ತಾಲಾಗುತ್ತಿದ್ದ ಹಾಗೆ ಅಲ್ಲಿಂದ ಹೊರಟೆ. ಹೊರಗಡೆ ಹೂ ಮಾರುವ ಜಾಗದಲ್ಲಿ ಇವತ್ತು
ಒಬ್ಬಳು ಹುಡುಗಿ ಮಾತ್ರ ಕೂತಿದ್ದಳು. ಚಿಕ್ಕ ಹುಡುಗಿ ಹತ್ತನ್ನೆರಡು ವಯಸ್ಸಿರ ಬಹುದು. ಆದ್ರೆ ಅವಳ
ಬಳಿ ಇವತ್ತು ಹೂ ಇರಲಿಲ್ಲ. ಹತ್ತಿರ ಹೋಗಿ ನೋಡಿದೆ ಅದು ಪುಟ್ಟ ಪುಟ್ಟ ಮಣ್ಣಿನ ಹಣತೆಗಳ ಚಿಕ್ಕ ರಾಶಿ.
ಇನ್ನು ಹತ್ತಿರ ಹೋಗಿ ಒಂದು ಹಣತೆ ಕೈಗೆತ್ತಿಕೊಂಡೆ. ಆ ಹುಡುಗಿಯ ಕಣ್ಣುಗಳು ಅರಳಿನಿಂತವು

“ಬೇಕ ಅಣ್ಣ????” ಅಂತ ಉತ್ಸಾಹದಿಂದ ಕೇಳಿದಳು.

ಹಣತೆಗಳು ಗಾತ್ರದಲ್ಲಿ ಸಣ್ಣದಾದರೂ ಅಚ್ಚುಕಟ್ಟಾದ
ವಿನ್ಯಾಸವಿತ್ತು. ಒಂದು ಹಣತೆಗೆ ಕಮ್ಮಿ ಅಂದರು ಹತ್ತರಿಂದ ಹದಿಮೂರು ರೂಪಾಯಿಯಾದರೂ ಇರಬಹುದು ಅಂತ
ಲೆಕ್ಕ ಹಾಕಿದೆ. ಆದರೂ ಕೊಳ್ಳುವ ಅವಶ್ಯಕೆಯೆನು ನನಗೆ ಇಲ್ಲದ್ದರಿಂದ.

“ಇಲ್ಲ ಸುಮ್ಮನೆ ನೋಡಿದ್ದು ಅಷ್ಟೆ” ಅಂದಾಗ ಅರಳಿದ್ದ
ಅವಳ ಮುಖ ಸಣ್ಣಗೆ ಬಾಡಿ ಹೋಯಿತು. ಹೊರಡೊಕೆ ಎದ್ದು ನಿಂತೆ.

“ಜೋಡಿ ಹತ್ತು ರೂಪಾಯಿ ಅಣ್ಣ, ಒಂದು ಜೋಡಿ ಹಣತೆನಾದ್ರು
ತೆಗೊಳಿ ಅಣ್ಣ “ ಅಂದಾಗ ಆಶ್ಚರ್ಯ ಆಯ್ತು. ಹತ್ತು ರೂಪಾಯಿಗೆ ಜೋಡಿ??? ಪ್ಲಾಸ್ಟಿಕ್ ಹಣತೆಯ ಅವಸ್ತೆಯನ್ನ
ನೋಡಿದ ನನಗೆ ಹತ್ತು ರೂಪಾಯಿ ಜೋಡಿ ಅಂದಾಗ ಮತ್ತೆ ಸಣ್ಣಗೆ ಮನಸ್ಸು ಆ ಕಡೆ ಸೆಳೆಯೋದಕ್ಕೆ ಶುರುವಾಯ್ತು.
ಮತ್ತೆ ತಿರುಗಿ ಹಣತೆಗಳ ಮೇಲೆ ಕೈಯಾಡಿಸೋದಕ್ಕೆ ಶುರುಮಾಡಿದೆ. ನಡುತಲೆಯನ್ನ ಒಪ್ಪವಾಗಿ ಬಾಚಿ ಎರಡು
ಜಡೆಯನ್ನ ಹೆಣೆದಿದ್ದ ಆ ಮುದ್ದು ಹುಡುಗಿಯ ಕಣ್ಣುಗಳು ಮತ್ತೆ ಉತ್ಸಾಹದಿಂದ ನನ್ನ ಕೈಗಳನ್ನೆ ಗಮನಿಸುತ್ತಿದ್ದವು.
ನಾಲ್ಕು ಹಣತೆಗಳನ್ನ ಆರಿಸಿ ತೆಗೆದೆ.

“ಈ ನಾಲ್ಕು ಹಣತೆ ಸಾಕು” ಅಂತ ಇಪ್ಪತ್ತು ರೂಪಾಯಿ
ಜೇಬಿಂದ ತೆಗೆದು ಹುಡುಗಿ ಕೈಗಿಟ್ಟೆ. ಸಂತೋಷದ ಕಣ್ಣುಗಳು ನನ್ನನ್ನೇ ನೋಡ್ತಿದ್ದವು. ಅವಳ ಮುಖವನ್ನ
ನೋಡಿ ಮತ್ತೆ ಮನಸಲ್ಲೆ ಲೆಕ್ಕ ಹಾಕಿದೆ, ಜೋಡಿಗೆ ಹತ್ತು ಅಂದರೆ 4 ಹಣತೆಗೆ 20ರೂಪಾಯಿ ಸರಿಯಾಗಿದೆ.

ಖುಶಿಯಿಂದ ದುಡ್ಡು ತೆಗೊಂಡ್ಳು. ಆ ಖುಷಿಯ ನಡುವೆಯು
ಆ ಪುಟ್ಟ ಕಣ್ಣುಗಳಲ್ಲಿ ಸಣ್ಣಗೆ ಹರಿದ ಕಣ್ಣೀರನ್ನ ಗಮನಿಸಿದೆ, ಕೈಯಿಂದ ಮೆಲ್ಲಗೆ ವರೆಸಿಕೊಂಡು ಕೆಂಪಗಾಗಿದ್ದ
ಕಣ್ಣುಗಳು ಮತ್ತೆ ನನ್ನನ್ನ ನೋಡಿ ಮಂದಹಾಸ ಬೀರಿದವು. ಹೊರಡಲು ಅಣಿಯಾಗಿದ್ದರೂ ನನಗೆ ಅವಳ ಸಂತೋಷ ಭರಿತ
ಕಣ್ಣೀರಿನ ಕಾರಣ ತಿಳಿಯಬೇಕು ಅನ್ನಿಸ್ತು.

“ನಿನ್ನೆ ಇಂದ ಎಷ್ಟು ಹಣತೆ ಮಾರಿದೆ ಪುಟ್ಟ
???” ಅಂತ ಮಾತಿಗೆಳೆದೆ. ಅವಳಿಗೆ ಏನನ್ನಿಸ್ತೋ ಏನೊ

“ಒಂದು ಇಲ್ಲ ಅಣ್ಣ, ಎಲ್ಲಾರು ಬರ್ತಾರೆ ನೋಡ್ತಾರೆ,
ಐದು ರುಪಾಯಿ ಅಂದ್ರೆ ಮೂರು ರುಪಾಯಿ ಎರಡು ರುಪಾಯಿ ಅಂತ ಚೌಕಾಸಿ ಮಾಡ್ತಾರೆ. “ ಅಂತ ಅಳು ಮಿಶ್ರಿತ
ದನಿಯಲ್ಲಿ ಹೇಳೊದಕ್ಕೆ ಶುರು ಮಾಡಿದ್ಲು. ಈ ಪುಟ್ಟ ಹುಡುಗಿಯ ಹತ್ತಿರ ಇಂತಹ ಕೀಳು ಮಟ್ಟದ ಚೌಕಾಸಿಗಿಳಿಯುವ
ಜನರ ಮನಃಸ್ಥಿತಿಯನ್ನ ನೋಡಿ ನನಗೆ ಅಸಹ್ಯ ಅನ್ನಿಸ್ತು. ಮತ್ತೆ ತನ್ನ ಪುಟ್ಟ ಕೈಗಳಿಂದ ಕಣೀರು ಒರೆಸಿಕೊಂಡಳು.

“ಇಷ್ಟು ಹಣತೆಯನ್ನ ನಾನು ಮಾರಾಟ ಮಾಡ್ಲಿಲ್ಲ ಅಂದ್ರೆ,
ನಮ್ಮನೆಲಿ ಈ ವರ್ಷ ದೀಪಾವಳಿನೆ ಇಲ್ಲಾ ಅಣ್ಣ….” ಅಂತ ಹೇಳಿ ಅತ್ತಾಗ ನನಗೇನು ಮಾಡ ಬೇಕು ಅಂತನೆ ತೋಚಲಿಲ್ಲ.
ಅವಳ ಆ ಮಾತು ಕೇಳಿ ತುಂಬಾನೆ ಬೇಜಾರಾಯ್ತು, ಚಿಕ್ಕ ಚಿಕ್ಕ ಹಣತೆಯನ್ನ ಮಾರಿ ದೊಡ್ಡ ದೀಪಾವಳಿಯ ಕನಸು
ಕಾಣೊ ಕಣ್ಣುಗಳು, ಈ ಕೊಳಕು ಪ್ರಪಂಚದ ಸತ್ಯ ಅರಿಯದೇ ಮನೆಯಲ್ಲಿ ಸಂತೋಷದಿಂದ ದೀಪಾವಳಿ ಆಚರಿಸಬೇಕು
ಅಂತ ಇರೋ ಈ ಮುಗ್ಧ ಹೃದಯಕ್ಕೆ ಸಹಾಯಮಾಡ ಬೇಕು ಅಂತ ನಿರ್ಧಾರ ಮಾಡಿದೆ. ಅವಳ ಹತ್ತಿರ ಒಟ್ಟಿಗೆ 30
ಹಣತೆಗಳಿದ್ದವು ನನಗೆ ಮಾರಿದ್ದು ಬಿಟ್ಟರೆ ಉಳಿದದ್ದು 26. ಅದಷ್ಟನ್ನೂ ಅವಳು ತಂದಿದ್ದ ಪುಟ್ಟ ಪ್ಲಾಸ್ಟಿಕ್
ಚೀಲಕ್ಕೆ ಹಾಕಿ. 150 ರೂಪಾಯಿ ಅವಳ ಕೈಗಿಟ್ಟೆ. ಒಂದು ಸರ್ತಿ ನನ್ನ ಮುಖವನ್ನ ನೋಡಿ ಮತ್ತೆ ಆ ನೋಟುಗಳನ್ನ
ನೋಡಿ ಗಟ್ಟಿಯಾಗಿ ಅದಕ್ಕೊಂದು ಮುತ್ತು ಕೊಟ್ಳು.

ಅವಳ ಕಣ್ಣಲ್ಲಿ ಸುರಿತಾ ಇದ್ದ ಕಣ್ಣೀರನ್ನ ಒರೆಸಿದೆ

“ಅಳ್ಬೇಡ…. ಮನೆಗ್ ಹೋಗು….ದೇವರು ಒಳ್ಳೆಯದು ಮಾಡ್ಲಿ
” ಅಂದೆ

“ನಿಮ್ಮಿಂದ ತುಂಬ ಉಪಕಾರ ಆಯ್ತು, ಬರ್ತೀನಣ್ಣ”
ಅಂತ ಹೇಳಿ ಒಂದು ಕೈಯಲ್ಲಿ ಗಟ್ಟಿಯಾಗಿ ದುಡ್ಡಿ ಹಿಡಕೊಂಡು ಇನ್ನೊದು ಕೈಯಲ್ಲಿ ಕಣ್ಣೀರು ಒರೆಸಿಕೊಂಡು
ಖುಶಿಯಿಂದ ಓಡಿದ್ಲು. ಪಟ ಪಟನೆ ಹಾರುತ್ತಿದ್ದ ಆ ಪುಟ್ಟ ಜಡೆಗಳನ್ನ ನೋಡಿದ್ರೆ ಗೊಂಬೆಗೆ ಜೀವ ಬಂದು
ಓಡ್ತಾ ಇರೊ ಹಾಗೆ ಭಾಸವಾಗ್ತಿತ್ತು.

***

ಮನೆಗೆ ಬಂದವನಿಗೂ ಆ ಹುಡುಗಿಯ ಮುದ್ದು ಮುಖವೇ ನೆನಪಾಗ್ತಿತ್ತು.
ಬರೇ ಪಟಾಕಿಗೆ ಸಾವಿರಾರು ರುಪಾಯಿ ಉಡಯಿಸೋರ ಮಧ್ಯೆ. ಬರೇ ಹಣತೆ ಮಾರಿ ಬರುವ 150 ರುಪಾಯಿಯಲ್ಲಿ ಹಬ್ಬ
ಮಾಡೊ ಆ ಹುಡುಗಿಯ ಉತ್ಸಾಹ ನೋಡಿ ಬೇಜಾರಯ್ತು. ಏನೊ ಸಣ್ಣ ಯೋಚನೆ ಹೊಳೆಯಿತು. ಕೂಡಲೆ ಹಣತೆಗಳನ್ನ ತೆಗೆದುಕೊಂಡು
ಹೊರಗಡೆ ಬಂದೆ. ಧನಂಜಯಣ್ಣನ ಪರಿಸರ ಸ್ನೇಹಿ ಪ್ಲಾಸ್ಟಿಕ್ ದೀಪ ಆಗಲೇ ಉರಿತಾ ಇತ್ತು.. ಸೀದ ಅಂಗಡಿಗೆ
ಹೋಗಿ ಸ್ವಲ್ಪ ಎಣ್ಣೆ ಬತ್ತಿಯನ್ನ ತಗೊಂಡು ಬಂದೆ. ಮನೆಯ ಕಾಂಪೌಂಡ್ ದಂಡೆಯ ಮೇಲೆ ಸ್ವಲ್ಪ ಸ್ವಲ್ಪ
ಅಂತರದಲ್ಲಿ ಹಣತೆಗಳನ್ನ ಇಟ್ಟು ಎಣ್ಣೆಯಲ್ಲಿ ಅದ್ದಿ ಬತ್ತಿ ಇಟ್ಟು ಎಲ್ಲದಕ್ಕೂ ಎಣ್ಣೆ ತುಂಬಿದೆ.
ಒಂದೊಂದೆ ಹಣತೆಯನ್ನ ಹಚ್ಚುತ್ತಾ ಬಂದೆ. ಮನೆಯಿಂದ ಹೊರ ಬಂದು ನೋಡಿದ ಧನಂಜಯಣ್ಣ.

“ಅರೆ ದೀಪಾವಳಿ ಇವತ್ತೆ ಶುರುನ????” ಅಂತ ಉತ್ಸಾಹದಿಂದ
ಮಗಳನ್ನ ಹೆಂಡತಿಯನ್ನ ಕೂಗಿದರ್ರು. ನನ್ನ ಮನೆಯ ಎಡಬದಿಯ ಕಾಂಪೌಂಡ್ ಮತ್ತು ಅವರ ಮನೆಯ ಕಾಂಪೌಂಡ್ ಎರಡೂ
ಒಂದೆ ನಾನು ಎಣ್ಣೆ ತುಂಬಿ ಇಟ್ಟಿದ್ದ ಹಣತೆಯನ್ನ ಅವರು ಕೂಡ ಅವರ ಮನೆಯ ಅಂಗಳದಲ್ಲಿ ನಿಂತು ಹಚ್ಚೊದಕ್ಕೆ
ಶುರು ಮಾಡಿದ್ರು. ಅಲ್ಲಲ್ಲಿ ಪಟಾಕಿಯ ಢಮ್ ಢಮ್ ಶಬ್ದಗಳು ಕೇಳುತ್ತಾ ಇದ್ದವು. ಇನ್ನೇನು ಎರಡು ಮೂರು
ಹಣತೆ ಹಚ್ಚುವುದು ಬಾಕಿ ಇದೆ ಅನ್ನುವ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಕರೆಂಟ್ ಹೋಯ್ತು. ಪಕ್ಕದ ಮನೆಗಳು
ಮನೆಯೆದುರಿದ್ದ ಅಂಗಡಿ, ಬೀದಿ ದೀಪ ಎಲ್ಲವೂ ಆಫ್! ಧನಂಜಯ್ಯಣ್ಣನ ಪ್ಲಾಸ್ಟಿಕ್ ಹಣತೆಯ ಸುಳಿವೇ ಇರಲಿಲ್ಲ.

ಇಡೀ ಬೀದಿಗೆ ಬೀದಿಯೇ ಕತ್ತಲು ಕತ್ತಲು….. ಇಂತಹ
ಕತ್ತಲಿನ ನಡುವೆ ನನ್ನ ಅಂಗಳದ ತುಂಬ ತುಂಬಿಕೊಂಡಿದ್ದ ಹಣತೆಯ ಸಾಲುಗಳನ್ನ ನೋಡಿ ನಾನೆ ಬೆರಗಾಗಿ ಹೋದೆ.
ಕಣ್ಣ ಮುಂದೆ ದೀಪೋತ್ಸವದ ಹೊಸ ಪ್ರಪಂಚವೇ ಸೃಷ್ಟಿಯಾಗಿತ್ತು. ಪಕ್ಕದಲ್ಲಿ ಹಣತೆ ಹಚ್ಚುತ್ತಿದ್ದ ಧನಂಜಯಣ್ಣ,
ಅತ್ತಿಗೆಯೂ ಕೂಡ ಕಣ್ಣ ಮುಂದಿದ್ದ ಹಣತೆಗಳ ಸೌಂದರ್ಯವನ್ನ ನೋಡಿ ಕಣ್ಣ ಮುಚ್ಚೋದೆ ಮರೆತು ಹೋಗಿತ್ತು.
 ಹುಟ್ಟಿನಿಂದ ಇಲ್ಲಿಯವರೆಗೆ ನಾನು ಯಾವತ್ತು ಈ ರೀತಿಯ
ಬೆಳಕಿನ ಹಬ್ಬವನ್ನ ಕಂಡಿರಲಿಲ್ಲ. ಧನಂಜಯ್ಯಣ್ಣನ ಪ್ಲಾಸ್ಟಿಕ್ ಹಣತೆಯಾಗಲಿ, ಊರಿನ ನೆನಪಾಗಲಿ ಯಾವುದು
ನನ್ನ ಕಣ್ಣ ಮುಂದೆ ಬರಲಿಲ್ಲ. ನನ್ನ ಕಣ್ಣ ಮುಂದೆ ಪ್ರತ್ಯಕ್ಷವಾದದ್ದು ಈ ಹಣತೆಗಳನ್ನ ಮಾರುತ್ತಿದ್ದ
ಆ ಪುಟ್ಟ ಹುಡುಗಿಯ ಮುಖ.

“ನಿಜ… ನಾನು ದುಡ್ಡು ಕೊಟ್ಟಾಗ
ಖುಷಿಯಿಂದ ಕಣ್ತುಂಬಿದ್ದ ಆ ಹುಡುಗಿಯ ಕಣ್ಣಲ್ಲಿದ್ದ ಕಾಂತಿಗು, ನಾನು ಹಚ್ಚಿದ ಈ ಹಣತೆ ಹೊರ ಹೊಮ್ಮಿಸುತ್ತಿರುವ  ಬೆಳಕಿನ ಕಾಂತಿಗೂ ಯಾವ ವ್ಯತ್ಯಾಸವೂ ಇರಲಿಲ್ಲ”

 

ಲೇಖಕರು

Manoranjan Noo…

ನಾನೊಬ್ಬ ಹವ್ಯಾಸಿ ಬರಹಗಾರ...ಸಮಯ ಸಿಕ್ಕಾಗೆಲ್ಲ Internet ನಲ್ಲಿ ಏನಾದ್ರೂ ತದುಕಾಡ್ತಾ ಇರ್ತಿನಿ , ಇಲ್ಲಾಂದ್ರೆ ಹಾಡು ಕೇಳೋದು, ಅದು ಇಲ್ಲಾಂದ್ರೆ ನನ್ನದೇ ಕಲ್ಪನಾ ಲೋಕದಲ್ಲಿ ಏನಾದ್ರೂ ಹೊಸತನ್ನ ಮಾಡ್ಕೆಕು ಅಂತ ಅದರಲ್ಲೇ ಮುಳುಗಿರೋದು. ಜೊತೆಗೆ ಪುಸ್ತಕ ಹಿಡ್ಕೊಂಡು ಏನಾದ್ರು ಗೀಚಬೇಕು ಅನ್ನೋ ಹವ್ಯಾಸ ನಂದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.