Skip to main content

ಸೂಕ್ಶ್ಮಜೀವಿಗಳ ಪರಿಚಯ

ಬರೆದಿದ್ದುDecember 19, 2012
2ಅನಿಸಿಕೆಗಳು

ಬಹುಶ: ಮೇಲೆ ತಿಳಿಸಿದಂತ ಆಗುಂತಕರಿರದಿದ್ದರೆ ಇಂದಿನ ಮನುಷ್ಯನ ಜೀವನ ಎನ್ನುವುದು ದುಸ್ತರವಾಗುತ್ತಿತ್ತೋ ಏನೋ ಎನ್ನುವಷ್ಟರ ಮಟ್ಟಿಗೆ ಸೂಕ್ಷ್ಮಾಣುಗಳು ಜೀವನದ ಪ್ರತಿ ಮಜಲುಗಳಲ್ಲಿ ಹಾಸುಹೊಕ್ಕಾಗಿವೆ. ಹಿಂದೆ ಈ ಜೀವಿಗಳು ಬರೀ ರೋಗಕಾರಕಗಳು ಎಂದು ಮಾತ್ರ ನಂಬಿಕೆ ಇತ್ತು. ಈಗಲೂ ಇದೆ, ಮುಂದೆಯೂ ಇರುತ್ತದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಅಂದರೇ ಸುಮಾರು ವರ್ಷಗಳ ಹಿಂದೆ ಆಂತೋನಿ ವಾನ್ ಲೀವನ್ಹೋಕ್ ಎಂಬುವವನು ಸೂಕ್ಷ್ಮದರ್ಶಕದ ಮೂಲ ಆವಿಷ್ಕರಿಸಿ ಈ ಸೂಕ್ಷ್ಮಪ್ರಪಂಚದಲ್ಲಿ ಹೊಕ್ಕಾಗ ಇಡೀ ವಿಶ್ವವೇ ಬೆರಗಾಗಿತ್ತು.


ನಂತರದಲ್ಲಿ ಲೂಯಿಸ್ ಪಾಶ್ಚರ್ ಎನ್ನುವ ವಿಜ್ಞಾನಿ ಯಾವಾಗ ವಿವಿಧ ರೂಪದ ಸೂಕ್ಷ್ಮಜೀವಿಗಳನ್ನು ಕಂಡುಹಿಡಿದನೋ ಅಂದಿನಿಂದ ಈ ಸೂಕ್ಷ್ಮಪ್ರಪಂಚದ ಅನಾವರಣ ಇನ್ನೂ ಹೆಚ್ಚಾಗಿ ಆಗತೊಡಗಿತು. ಮುಂದೆ ರಾಬರ್ಟ ಕಾಕ್, ಅಲೆಕ್ಸಾಂಡರ್ ಫ್ಲೆಮಿಂಗ್, ಜೊಸೆಫ್ ಲಿಸ್ಟರ್, ಎಡ್ವರ್ಡ್ ಜೆನ್ನರ್ ಇನ್ನೂ ಮುಂತಾದವರು ಅನೇಕ ರೀತಿಯ ಸಂಶೋಧನೆಗಳನ್ನು ಮಾಡಿ ವಿಜ್ಞಾನದ ಪ್ರತಿ ವಿಭಾಗದಲ್ಲೂ ಉತ್ತಮವಾದಂತ ಕಾಣಿಕೆ ನೀಡಿದರು. ಇವರುಗಳು ಕಾರ್ಯ ಮಾಡಿದಂತಹ ಸಮಯ ಅಷ್ಟೊಂದು ಸುಲಭವಾಗಿರಲಿಲ್ಲ,


ಅನೇಕ ರೋಗಗಳು ದಾಳಿ ಮಾಡಿ ಎಷ್ಟೋ ಸಾವು ನೋವುಗಳಾಗುತ್ತಿದ್ದಂತಹ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾರ್ಯಪ್ರವೃತ್ತರಾಗಿ ಜೀವ ಸಂಕುಲವನ್ನೇ ಉಳಿಸಿದರು ಎಂದರೂ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಒಂದು ನಿದರ್ಶನವೆಂದರೆ, ಒಬ್ಬ ಮಹಿಳೆ ತನ್ನ ಸಿಡುಬು ರೋಗ ಪೀಡಿತ 14 ವರ್ಷದ ಜೇಮ್ಸ್ ಫಿಲಿಪ್ ಎಂಬ ಬಾಲಕನನ್ನು ಎಡ್ವರ್ಡ್ ಜೆನ್ನರ್ ಹತ್ತಿರ ತಂದು ಸಾವು, ಬದುಕು ಎರಡೂ ನಿನ್ನ ಕೈಯಲ್ಲಿ ಎಂದು ಹೇಳಿ ಬಿಟ್ಟು ಹೋಗುತ್ತಾಳೆ. ನಂತರ ಜೆನ್ನರ್ ತನ್ನ ಸಂಶೋಧಿಸಿದ ಚುಚ್ಚುಮದ್ದನ್ನು ನೇರವಾಗಿ ಆ ಬಾಲಕನ ಮೇಲೆ ಪ್ರಯೋಗಿಸಿಯೇ ಬಿಡುತ್ತಾನೆ. ಅದೃಷ್ಟವಶಾತ್ ಆ ಬಾಲಕ ಬದುಕುಳಿಯುತ್ತಾನೆ. ನಂತರ ಆ ಚುಚ್ಚುಮದ್ದು ಇಂದು ಜಗತ್ತನ್ನೇ ಹಲವಾರು ರೋಗಗಳಿಂದ ಉಳಿಸುತ್ತಿರುವ ಲಸಿಕೆಗಳ ಆವಿಷ್ಕಾರಕ್ಕೆ ನಾಂದಿಯಾಯಿತು. 


ಇದೇ ತರಹದಲ್ಲಿ ಲೂಯಿಸ್ ಪಾಶ್ಚರ್ ಹುಚ್ಚುನಾಯಿ ಕಡಿತಕ್ಕೆ ಲಸಿಕೆ, ಅಲೆಕ್ಸಾಂಡರ್ ಫ್ಲೆಮಿಂಗ್ ಆಂಟಿಬಯೋಟಿಕ್ಸ್ ಕಂಡುಹಿಡಿದದ್ದು ಹೀಗೆ ಹತ್ತು ಹಲವು ಆವಿಷ್ಕಾರಗಳು ಇಂದು ಮಾನವ ಸಂಕುಲವನ್ನೇ ಕಾಪಾಡುತ್ತಿವೆ. ಹಿಂದೆ ಯಾವುದೇ ರೋಗ ಬಂದರೂ ಅದೊಂದು ದೇವಿ ಅಥವಾ ಯಾವುದೇ ಶಾಪ ಎನ್ನುವಂತಹ ನಂಬಿಕೆ ಇದ್ದಂತಹ ಸಂದರ್ಭದಲ್ಲಿ ಆ ನಂಬಿಕೆಗಳ ವಿರುದ್ಧವಾಗಿ ಹಲವಾರು ಸಂಶೋಧನೆಗಳು ನಡೆದವು ಎಂದರೆ ಆ ವಿಜ್ಞಾನಿಗಳ ಶ್ರಮ ಎಷ್ಟು ಎನ್ನುವುದು ಗೊತ್ತಾಗುತ್ತದೆ. ಸೂಕ್ಷ್ಮಜೀವಿಗಳ ಕಾರ್ಯವೈಖರಿ ತುಂಬಾ ವಿಸ್ತಾರವಾದಂತಹವು.


ಪ್ರಸ್ತುತ ಸೂಕ್ಷ್ಮಾಣುಜೀವಿಗಳ ಕೊಡುಗೆಗಳು ಅಪಾರವಾಗಿವೆ. ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಲಸಿಕೆಗಳ ತಯಾರಿಕೆಯಲ್ಲಿ, ಆಂಟಿಬಯೋಟಿಕ್ಸ್ ತಯಾರಿಕೆಯಲ್ಲಿ, ಹೊಸ ಹೊಸ ಔಷಧಗಳ ತಯಾರಿಕೆಯಲ್ಲಿಯೂ ಕೂಡ ಸೂಕ್ಷ್ಮಾಣುಜೀವಿಗಳ ಪಾತ್ರ ಅತೀ ಮುಖ್ಯವಾಗಿದೆ. ಜೈವಿಕ ತಂತಜ್ಞಾನದಲ್ಲಿ ವಿವಿಧ ಸೂಕ್ಷ್ಮಜೀವಿಗಳನ್ನು ಬಳಸಿ ಹೊಸ ಆವಿಷ್ಕಾರಗಳೇ ಆಗಿವೆ. ಉದಾ: ಇ.ಕೋಲಿ ಎಂಬ ಬ್ಯಾಕ್ಟೀರಿಯಾದಿಂದ ಇನ್ಸುಲಿನ್ ಉತ್ಪಾದಿಸಬಹುದೆಂದು ಈಗಾಗಲೇ ಪ್ರಾಯೋಗಿಕವಾಗಿ ಒಪ್ಪಿಕೊಳ್ಳಲಾಗಿದೆ.


ಇನ್ನೂ ಹಲವು ಬೇರೆ ಬೇರೆ ಕ್ಷೇತ್ರಗಳನ್ನು ನೋಡುವುದಾದರೇ ಅವುಗಳಲ್ಲಿಯೂ ಸಹ ಈ ಜೀವಿಗಳ ಕೊಡುಗೆ ಗೊತ್ತಾಗುತ್ತದೆ. ಉದಾಹರಣೆಗೆ ಕೃಷಿಯನ್ನು ತೆಗೆದುಕೊಂಡರೆ, ಇಂದಿನ ಜನಮಾನಸದಲ್ಲಿ ರಾಸಾಯನಿಕ ಗೊಬ್ಬರ ಹಾಕಿದರೆ ಉತ್ತಮ ಇಳುವರಿ ಸಿಗುತ್ತದೆ ಎಂದು ಅತಿಯಾಗಿ ಬಳಸಿ ಭೂಮಿಯನ್ನು ಬಂಜರು ಮಾಡುತ್ತಿದ್ದೇವೆ ಎಂಬುದು ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸತ್ಯ ಕಹಿಯಾಗಿರುತ್ತದೆ ಎಂದು ಗೊತ್ತಿರಲಿ. ಹಾಗಾಗಿ ಸೂಕ್ಷ್ಮಜೀವಿಗಳಿಂದ ತಯಾರಾದ ಜೈವಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಹಾಗೂ ವರ್ಷದಿಂದ ವರ್ಷಕ್ಕೆ ಇಳುವರಿಯೂ ಕೂಡ ಅಧಿಕವಾಗುತ್ತ ಸಾಗುತ್ತದೆ. ಜೊತೆಗೆ ಮುಂದಿನ ಪೀಳಿಗೆಗೆ ಭೂಮಿಯನ್ನು ಉಳಿಸಬಹದು. ಉದಾ: ರೈಜೋಬಿಯಮ್ ಎಂಬ ಬ್ಯಾಕ್ಟೀರಿಯಾ ಅಗತ್ಯವಿರುವ ನೈಟ್ರೋಜನ್ ಸ್ಥಿರೀಕರಣ ಮಾಡಿ ಸಸ್ಯಗಳಿಗೆ ಒದಗಿಸುತ್ತದೆ.


ಹಾಗೇ ಮುಂದುವರೆಯುತ್ತ ಸಾಗಿದರೆ, ಹಾಲು ಮತ್ತು ಹಾಲಿನ ಸಂಸ್ಕರಣೆಯಲ್ಲಿ ಮತ್ತು ವಿವಿಧ ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ಲ್ಯಾಕ್ಟೋಬ್ಯಾಸಿಲಸ್ ಎಂಬ ಸೂಕ್ಷ್ಮಜೀವಿಗಳ ಪಾತ್ರ ಹಿರಿದು. ಕಾರಣವೇನೆಂದರೆ ಅತಿ ಬೇಗ ಕೆಡುವ ಪದಾರ್ಥಗಳಲ್ಲಿ ಒಂದಾದ ಹಾಲನ್ನು ಬೇರೆ ತರಹದ ಉತ್ಪನ್ನಗಳಾಗಿ ಪರಿವರ್ತಿಸಿ ಬಹಳಷ್ಟು ದಿನಗಳವರೆಗೆ ಇಡಲು ಇವುಗಳ ಕೆಲಸವೇ ಅದಕ್ಕೆ ಕಾರಣ. ಚೀಸ್, ಯೋಗಟರ್್, ಸ್ಕಿಮ್ಮಡ್ ಹಾಲು, ಹಾಲಿನ ಪೌಡರ್, ಇತ್ಯಾದಿ ಉತ್ಪನ್ನಗಳು ತಯಾರಾಗಲು ಸೂಕ್ಷ್ಮಜೀವಿಗಳ ಜೀವರಸಾಯನಿಕ ಕ್ರಿಯೆಗಳು ಕಾರಣವಾಗುತ್ತವೆ.


ಇನ್ನು ಆಹಾರ ಸಂಸ್ಕರಣ ವಿಭಾಗದಲ್ಲೂ ಕೂಡ ಈ ಜೀವಿಗಳ ಕೊಡುಗೆಗಳನ್ನು ಸ್ಮರಿಸಬಹುದು. ಆಹಾರ ಪೊಟ್ಟಣಗಳು ಕೆಡದಂತೆ ಕಾಪಾಡಲು ಇವುಗಳ ಅವಶ್ಯಕತೆ ಹೆಚ್ಚು.


ಅದೇ ರೀತಿ ಮದ್ಯಸಾರ ಉತ್ಪಾದಿಸಲು ಸ್ಯಾಕ್ಕರೋಮೈಸಿಸ್ ಸರ್ವೇಶಿಯೇ ಎಂಬ ಯೀಸ್ಟ್ ಕಾರಣ. ಇವುಗಳ ಕಿಣ್ವಗಳ ಸಹಾಯದಿಂದ ವಿವಿಧ ವಸ್ತುಗಳಿಂದ ಮದ್ಯವನ್ನು ತಯಾರಿಸಬಹುದು. ಬೀರ್, ವಿಸ್ಕಿ, ವೈನ್ ಅದ್ಯಾವುದೇ ಇರಲಿ ಅದಕ್ಕೆ ಇವಗಳೇ ಕಾರಣ. ಹಾಗೇ ಬ್ರೆಡ್, ಕೇಕ್, ತಯಾರಿಕೆಯಲ್ಲಿಯೂ ಯೀಸ್ಟ್ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತವೆ.


ಒಟ್ಟಿನಲ್ಲಿ ಹೇಳುವುದಾದರೆ ಎಷ್ಟೊಂದು ಅಪಾಯಕಾರಿಯಾಗಬಲ್ಲ ಸೂಕ್ಷ್ಮಜೀವಿಗಳು ಅಷ್ಟೇ ಉತ್ತಮವಾಗಿ ಮಾನವ ಜನಾಂಗಕ್ಕೆ ಉತ್ತಮ ಕೊಡುಗೆ ನೀಡಿ ಉಪಕಾರಿಯಾಗಿವೆ

ಲೇಖಕರು

ಅನಿಸಿಕೆಗಳು

Narsimhamurthy… ಧ, 12/19/2012 - 17:03

This is regarding the information of microorganisms

shravankumar (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 12/22/2012 - 17:03

Very good explaination about microorganisms.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.