Skip to main content

ಮಿತಿಯ ಅಂಕೆ, ಸಾಮರ್ಥ್ಯದ ಶಂಕೆ...

ಬರೆದಿದ್ದುNovember 10, 2012
noಅನಿಸಿಕೆ

ನನ್ನಿಂದ ಇದು ಸಾಧ್ಯವಿಲ್ಲ,ನನಗೆ ಅದು ಸಾಧ್ಯವಿಲ್ಲ. ಇಂತಹ ಮಾತುಗಳನ್ನು ನಾವು ಆಗಾಗ ಕೇಳಿಸಿಕೊಳ್ಳುತ್ತಿರುತ್ತೇವೆ.ಕೈ,ಕಾಲು,ಬುದ್ಧಿ ಎಲ್ಲವೂ ಸರಿಯಾಗಿ ಇರುವವರೇ ಇಂತಹ ಮಾತುಗಳನ್ನು ಆಡಿದರೆ ಆಶ್ಚರ್ಯಪಡಬೇಕಾಗುವುದಲ್ಲದೆ ಮತ್ತೇನೂ ಸಾಧ್ಯವಿಲ್ಲ.ಅದನ್ನು ಫಲಾಯನ ವಾದವೆನ್ನಬಹುದಲ್ಲವೇ? ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಇತಿ-ಮಿತಿಗಳನ್ನು ಅರಿಯುವ ಸಾಮರ್ಥ್ಯ ಇದ್ದೇ ಇರುತ್ತದೆ. ಆದರೂ ತನ್ನ ಮಿತಿಯನ್ನು ದಾಟಲಾರದಂತಹ ಕೋಟೆ-ಕಂದಕಗಳನ್ನು ನಮ್ಮ ಸುತ್ತಲೂ ನಾವೇ ನಿರ್ಮಿಸಿಕೊಂಡಿರುತ್ತೇವೆ ಹಾಗು ಅದನ್ನು ದಾಟಲಾರದ ಹೆಳವರಾಗಿರುತ್ತೇವೆ.

ವೇದಗಳು ಸಾರಿರುವಂತೆ ಪ್ರತಿಯೊಬ್ಬರೂ ’ಅಮೃತ ಪುತ್ರ’ರೇ, ಪಾಪದ ಪಿಂಡಗಳಂತೂ ಖಂಡಿತ ಅಲ್ಲ.ಹಾಗೆ ನಮ್ಮ ರಾಷ್ಟ್ರಕವಿ ಕುವೆಂಪುರವರು ಹೇಳಿರುವಂತೆ ಹುಟ್ಟಿನಿಂದ ಪ್ರತಿಯೊಬ್ಬರೂ ವಿಶ್ವಮಾನವರೇ, ಆದರೆ ಬೆಳೆ ಬೆಳೆಯುತ್ತಾ ನಮ್ಮ ತನವನ್ನು ಕಳೆದುಕೊಂಡು ಹೆಳವರಾಗುತ್ತಾ, ಬದುಕನ್ನು ನರಕವಾಗಿಸಿಕೊಳ್ಳುತ್ತಾ ಸಾಗುತ್ತೇವೆ.ಎಷ್ಟು ವಿಪರ್ಯಾಸವಲ್ಲವೇ? ಇದಕ್ಕೆ ಮುಲಕಾರಣ ನಮ್ಮನ್ನು ನಾವು ಅರಿಯದೇ ಇರುವುದೇ ಆಗಿದೆ. ನಮ್ಮ ಸಾಮರ್ಥ್ಯಗಳನ್ನು ಅರಿಯುವುದು ಕೂಡ ಬಹಳ ಕಠಿಣವಾದ ಕೆಲಸವೇ ಆಗಿದೆ. ಇದಕ್ಕೆ ಉತ್ತರವೆಂಬಂತೆ ಗೀತೆ ಹೇಳುತ್ತದೆ ನಮ್ಮ ಸಾಮರ್ಥ್ಯ ನಮ್ಮ ಮಿತಿಗಳನ್ನು ದಾಟುವಷ್ಟಿದೆ ಎಂದು. ನಮ್ಮ ಸ್ಥಿತಿ ಹೇಗಿದೆ ಎಂದರೆ ನಾವು ನಮ್ಮ ಮಿತಿಗಳಿಗೆ ಅಂಟಿಕೊಂಡು ಅದರಿಂದ ಹೊರಬರಲಾರದವರಾಗಿ ನರಳುತ್ತೇವೆ.ನಮ್ಮ ಮಿತಿ ದೈಹಿಕವಾಗಿರಬಹುದು,ಭಾವನಾತ್ಮಕವಾಗಿರಬಹುದು ಅಥವಾ ಮಾನಸಿಕವಾಗಿರಬಹುದು. ಅದು ಸಣ್ಣದಿದ್ದರೂ,ಬೆಟ್ಟದಷ್ಟದೆಂದು ಭ್ರಮಿಸಿ ಕಷ್ಟಪಡುವವರು ನಾವೇ!.ನಮ್ಮ ಸಾಮರ್ಥ್ಯ ನಮ್ಮ ಮಿತಿಗಳನ್ನು ಮೀರುವಷ್ಟಿದೆ ಎಂಬ ಸಾಕ್ಷಾತ್ಕಾರ ನಮಗಾದಲ್ಲಿ ಮಾತ್ರ ನಾವು ಮುಟ್ಟಿದ್ದೆಲ್ಲವೂ ಚಿನ್ನ ವಾಗುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದಲೇ ವೇದ ’ ಅಹಂ ಬ್ರಹ್ಮಾಂಸ್ಮಿ’ ’ ನಿಮಗೆ ಮಿತಿಗಳಿಲ್ಲ’ ಎಂದು ಸಾರಿವೆ.
ನಮ್ಮ ದೇಹಕ್ಕೆ, ಮನಸ್ಸಿಗೆ ಮಿತಿಗಳಿರಬಹುದಾದರೂ ನಮ್ಮ ಆತ್ಮ ಅಮಿತವಾದುದು.ಅದ್ದರಿಂದ ನಮ್ಮ ಜೀವನ ಈ ಮಿತಿ-ಅಮಿತಗಳ ಒಡನಾದಲ್ಲಿಯೇ ಅಡಕವಾಗಿದೆ. ಕೆಲವು ಮಹಾನ್ ವ್ಯಕ್ತಿಗಳು ತಮ್ಮ ಮಿತಿಗಳನ್ನು ದಾಟಿ ಏನೆಲ್ಲಾ ಸಾಧಿಸಿದರು ಎಂಬುದು ಅವರ ಸಾಹಸಗಾಥೆಯನ್ನು ಓದಿದರೆ ಸಾಕು ಮೈಯೆಲ್ಲಾ ಜುಮ್ಮೆನ್ನುವುದು. ನಿಮಗೆಲ್ಲಾ ಸ್ಟೀಫನ್ ಹಾಕಿಂಗ್ ಗೊತ್ತಿರಬಹುದು. ಅತನನ್ನು ನೋಡಿದರೆ ಇವನೇನೂ ಮಾಡಲಾರ? ಎಂಬ ಭಾವನೆ ನಮ್ಮಲ್ಲಿ ಮೊಡದೇ ಇರದು. ಆತನ ದೈಹಿಕ ಮೈಕಟ್ಟಿನಲ್ಲಿ ಅನೇಕ ಮಿತಿಗಳಿವೆ, ಆದರೆ ಅದಕ್ಕಿಂತಲೂ ಆತನ ಮನಸ್ಸು,ಬುದ್ಧಿ ಮಿತಿಗಳನ್ನು ದಾಟಿ ಎಲ್ಲಾ ಸಾಮರ್ಥ್ಯಗಳನ್ನು ಬಟ್ಟೀ ಇಳಿಸಿಕೊಂಡಿದೆ. ಹಾಗೇ ಬಿಥೋವನ್ ತನ್ನ ಅತ್ಯತ್ತಮ ಸಿಂಫನಿಯನ್ನು ರಚಿಸಿದಾಗ ಅವನು ಕಿವುಡನಾಗಿದ್ದ. ಹೆಲೆನ್ ಕೆಲ್ಲರ್ ಹೆಸರು ಯಾರು ಕೇಳಿಲ್ಲ? ಆಕೆಯೂ ದೈಹಿಕವಾಗಿ ಮಿತಿಗೊಳಪಟ್ಟಿದ್ದರೂ ಆಕೆ ಮಹಾನ್ ಮಹಿಳೆಯಾದಳು.

ಥಾಮಸ್ ಆಲ್ವ ಎಡಿಸನ್ ಪ್ರಪಂಚಕ್ಕೆ ಬೆಳಕು ನೀಡಿದಾತ ಕಿವುಡನಾದರೂ ಜಗತ್ತಿನ ಅತಿದೊಡ್ಡ ವಿಜ್ಯಾನಿಗಳಲ್ಲಿ ಒಬ್ಬನಾಗಿದ್ದಾನೆ.ಸಿಂಪ್ಸನ್ ಎಂಬಾತನಿಗೆ ಎಲುಬುಗಳ ರೋಗವಿತ್ತು. ಆದರೂ ಆತ ಅಮೇರಿಕಾದ ಅತಿಪ್ರಸಿದ್ಧ ಫುಟ್ ಬಾಲ್ ಆಟಗಾರನೆನಿಸಿದ. ಕ್ರಿಕೇಟ್ ಆಟದಲ್ಲಿ ಅತ್ಯುತ್ತಮ ಕ್ಷೇತ್ರರಕ್ಷಕ ಎನಿಸಿಕೊಂಡಿದ್ದ ದಕ್ಷಿಣ ಆಫ್ರೀಕಾದ ಆಟಗಾರ ಜಾಂಟಿ ರೋಡ್ಸ್ ಕೂಡ ಅಪಸ್ಮಾರ ( ಮೂರ್ಛೆರೋಗ)ದಿಂದ ಬಳಲುತ್ತಿದ್ದ. ಕನ್ನಡ ಚಿತ್ರರಂಗದ ಬಾಲಣ್ಣ ( ಬಾಲಕೃಷ್ಣ) ಯಾರಿಗೆ ತಾನೆ ಗೊತ್ತಿಲ್ಲ? ಅವರ ಅಭಿನಯಕ್ಕೆ ಮನಸೋಲದವರು ಯಾರಿಲ್ಲ ಹೇಳಿ!, ಆದರೆ ಅವರೂ ಕೂಡ ಕಿವುಡರಾಗಿದ್ದರೆಂದು ಎಷ್ಟು ಜನಕ್ಕೆ ತಿಳಿದಿದೆ? ಇವರೆಲ್ಲರಿಗೂ ಮಿತಿಗಳಿದ್ದವು, ಆ ಮಿತಿಗಳ ಜೊತೆಗೆ ಸಾಮರ್ಥ್ಯಗಳೂ ಮೇಳೈಸಿದ್ದವು ಎಂಬುದನ್ನು ನಾವು ಅರಿಯಬೇಕಿದೆ. ಇಷ್ಟೆಲ್ಲಾ ಹೇಳಬೇಕಾಗಿದ್ದು ಏಕೆಂದರೆ ನಾವು ನಮ್ಮ ಮಿತಿಗಳ ಅಡಿಯಾಳಾಗಿ ನಮ್ಮ ಸಾಮರ್ಥ್ಯಗಳನ್ನು ಅರಿಯದೆ ಜೀವನದಲ್ಲಿ ತೊಳಲಾಡುತ್ತೇವೆ. ಆ ಮಿತಿಯನ್ನು ದಾಟಿ ನಮ್ಮ ಸಾಮರ್ಥ್ಯದ ನಿಜವಾದ ಸ್ವರೂಪವನ್ನು ತೋರಿದಾಗಲೇ ನಾವು ಕೂಡ ಏನನ್ನಾದರೂ ಸಾಧಿಸಲು ಸಾಧ್ಯ. ಆ ಮಿತಿಯ ಪರಿಧಿಯ ದಾಟಿ ಸಾಮಾರ್ಥ್ಯದ ನಿಜರೂಪವನ್ನು ಎಚ್ಚರಿಸೋಣ ಬನ್ನಿ. ಜ್ಯಾನದ ಬೆಳಕಿನಲ್ಲಿ ಜೀವನ ಸಾರ್ಥಕಗೊಳಿಸಿಕೊಳ್ಳೋಣ.


ಲೇಖಕರು

Nagendra Kumar K S

ಎಲ್ಲಿ ಜಾರಿತೋ ಮನವು........

ನನ್ನ ಕಾಲೇಜಿನ ದಿನಗಳಲ್ಲಿ ನನ್ನ ಭಾವನೆಗಳನ್ನು ಹೇಳಿಕೊಳ್ಳುವ ಒಂದು ಮಾಧ್ಯಮವನ್ನಾಗಿ ಬರವಣಿಗೆ ಆರಂಬಿಸಿದೆ. ಅದೇ ಒಂದು ಪ್ರೇರಣೆ ಇಲ್ಲಿಯವರೆವಿಗೂ ಎಳೆದುತಂದಿದೆ. ನೂರಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದೇನೆ, ಆದರೆ ಎಲ್ಲೂ ಪ್ರಕಟಣೆಗೆ ಕೊಟ್ಟಿಲ್ಲ. ನನ್ನಲ್ಲಿರುವ ಅಗಾಧವಾದ ಶಕ್ತಿ ಸುಮ್ಮನೆ ವ್ಯರ್ಥವಾಗುತ್ತಿದೆ ಎನ್ನುವ ಭಾವನೆ ಬಂದ ಮೇಲೆ ನನ್ನ ಕವನಗಳನ್ನು ಓದುಗರ ಮುಂದಿಟ್ಟು ನನ್ನ ಯೋಗ್ಯತೆಯನ್ನು ತಿಳಿದುಕೊಳ್ಳಬೇಕೆಂಬ ಹಂಬಲದಿಂದ ಇಲ್ಲಿಗೆ ಬಂದಿದ್ದೇನೆ. ಹಾಗೆ ನನ್ನ ಎಲ್ಲಾ ಕವನಗಳನ್ನು ಈ ಕೆಳಕಂಡ ಬ್ಲಾಗ್ ನಲ್ಲಿ ಕೂಡ ಓದಬಹುದಾಗಿದೆ, ಓದಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ದಾಖಲಿಸಿ.
http://www.anisha-mypoems.blogspot.com

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.