Skip to main content

ಧರಣಿಮಂಡಲ ಮಧ್ಯದೊಳಗೆ

ಬರೆದಿದ್ದುOctober 9, 2012
5ಅನಿಸಿಕೆಗಳು

“ತಿಂಗಳು ಕೊನೆ ಅಂದ್ರೆ ಸಾಕು, ಮನೆಗೆ ಹೋಗೊದಿಕ್ಕೆ ಭಯವಾಗುತ್ತೆ, ಪ್ಯಾಂಟ್ ನಿಂದ ಪರ್ಸ್ ಹೊರಗಡೆ ತೆಗೆದಾಗ ನೂರರ ಒಂದು ನೋಟು, ಹತ್ತು, ಇಪ್ಪತ್ತು ರುಪಾಯಿ, ಒಂದಷ್ಟು ಪುಡಿ ಚಿಲ್ಲರೆ ನೋಡಿದರೆ ಗಂಟಲು ಒಣಗುತ್ತೆ, ಎಟಿಎಮ್ ಕಾರ್ಡ್ ಹಿಡ್ಕೊಂಡು ಡ್ರಾ ಮಾಡೊದಿಕ್ಕೆ ಹೋಗಿ ಎಟಿಎಮ್ ನಲ್ಲಿ ಬ್ಯಾಲನ್ಸ್ ಚೆಕ್ ಮಾಡಿದ್ರೆ, ಎಟಿಮ್ ಯಂತ್ರ ಸಾಲ ಕೊಡುವವನ ಹಾಗೆ ನಾನು ಸಾಲಗಾರನ ಹಾಗೆ ಸಂಕೋಚದಿಂದ ದುಡ್ಡು ತೆಗೆದು ಕೊಳ್ಳುತ್ತಿದ್ದೀನೋ ಅನ್ನುವಂತೆ ಭಾಸವಾಗುತ್ತೆ, ಪುಟ್ಟಿಯ ಸ್ಕೂಲ್ ಫೀಸ್, ಹೆಂಡತಿಯ ತರಕಾರಿ ಲಿಸ್ಟು, ಅಪ್ಪನ ಔಷಧಿ ಖರ್ಚು. ಅದರ ಜೊತೆಗೆ ಕರೆಂಟ್ ಬಿಲ್ಲು, ನೀರಿನ ಬಿಲ್ಲು”

ಹೀಗೆ ತನ್ನ ತಲೆಯ ಮೇಲೆ ಇಡೀ ಪ್ರಪಂಚವನ್ನ ಹೊತ್ತು ಕೊಂಡು ಹೊಗುತ್ತಿದ್ದೀನಿ ಅನ್ನೊ ಹಾಗೆ ಯೋಚನೆ ಮಾಡ್ತಾ ಗಣಪಯ್ಯ ಆಫಿಸ್ ಇಂದ ಮನೆ ಕಡೆ ಹೆಜ್ಜೆ ಹಾಕ್ತಾ ಇದ್ದ.

ಒಂದಾನೊಂದು ಕಾಲದಲ್ಲಿ ತಾಳ್ಮೆಯ ಮೂರ್ತಿ ಅಂತ ಅನಿಸಿ ಕೊಂಡಿದ್ದ ಈ ಗಣಪಯ್ಯ, ಇವತ್ತು ಚಿಕ್ಕ ಚಿಕ್ಕ ವಿಷಯಕ್ಕೂ ಸಿಡುಕಿ ಬೀಳ್ತಾನೆ, ಚಿಕ್ಕವಯಸ್ಸಿನಲ್ಲೇ ತೀರಿ ಹೋದ ಅಮ್ಮ, ವರ್ಗಾವಣೆ ಅಂತ ಊರೂರು ತಿರುಗೊ ಪೊಸ್ಟ್ ಮಾಸ್ಟರ್ ಅಪ್ಪ, ಇವನ ವಿಷಯವಾಗಿ ಯಾವಗಲೂ ಸಿಡುಕಿ ಬೀಳೊ ದೊಡ್ಡಮ್ಮ. ಹೀಗೆ ಎಲ್ಲಾ ಇದ್ದು ಏನು ಇಲ್ಲದೇ ಇರುವವನ ಹಾಗೆ ಇವನು ಬೆಳೆದಿದ್ದ, ಆದರು ಇವನಿಗೆ ತುಂಬು ಕುಟುಂಬ, ಸಂಬಂಧ ಸಂಭ್ರಮಗಳು, ಎಲ್ಲರ ಜೊತೆ ಸೇರೋದು ಅಂದರೆ ಎಲ್ಲಿಲ್ಲದ ಖುಷಿ, ಹಬ್ಬ ಹರಿ ದಿನಗಳಿಗೆ ತುಂಬಿ ಕೊಳ್ಳುವ ಮನೆ, ಮಾನವ ಸಂಬಂಧಗಳ ಬಗ್ಗೆ ಅವನಿಗಿದ್ದ ಗೌರವ, ಅವನಿಗೆ ಅವನೇ ಸಾಟಿ,

ಡಿಗ್ರಿ ಹೋಲ್ಡರ್ ಅನ್ನೊ ಅಹಂ ಕೂಡ ಅವನಲ್ಲಿ ಇರಲಿಲ್ಲ, ಪಿತ್ರಾರ್ಜಿತವಾಗಿ ತನ್ನ ಪಾಲಿಗೆ ಬಂದ ಹೊಲ, ಗದ್ದೆ, ತೋಟದಲ್ಲಿ, ರೈತನಹಾಗೆ ದುಡಿದ, ಮಂಜಿನ ಕೊಪ್ಪದ ಪ್ರಕೃತಿಯ ಮಡಿಲಲ್ಲಿ ಮಗುವಾಗಿದ್ದ, ಎಲ್ಲರ ಜೀವನದ ಹಾಗೆ ಅವನ ಜೀವನದಲ್ಲೂ ಮದುವೆ ಅನ್ನೊ ಶಾಸ್ತ್ರವೂ ಮುಗಿಯಿತು, ಮನೆ-ಮನೆಯವರು, ಮಳೆ-ಬೆಳೆ, ಹಸು-ಕರು, ಹೊಲ-ಕೆರೆ.  ‘ಸ್ವರ್ಗಕ್ಕೆ ಕಿಚ್ಚು ಇಟ್ಟ ಹಾಗೆ ಅಂತಾರಲ್ಲ’ ಅದು ಇವನನ್ನು ನೋಡಿಯೆ ಹೇಳಿರ ಬಹುದು ಅನ್ನುವ ನೆಮ್ಮದಿಯ ಜೀವನವನ್ನ ಸಾಗಿಸ್ತಾಇದ್ದ.

          ಕಾಲ ಬದಲಾಗುತ್ತೆ, ತನ್ನೊಂದಿಗೆ ಎಲ್ಲವನ್ನೂ ಬದಲಾಯಿಸುತ್ತೆ

 ಅವತ್ತು ಶುಕ್ರವಾರ, ಮಂಜಿನ ಕೊಪ್ಪದಲ್ಲಿ ಸಂಭ್ರಮವೋ ಸಂಭ್ರಮ, ಆ ಊರಲ್ಲಿ ಆ ಕಾಲದಲ್ಲಿ ಇದ್ದಿದ್ದು ಅದೊಂದೆ ಹೇರ್ ಕಟ್ಟಿಂಗ್ ಶಾಪ್ ಅನ್ನಬಹುದು. ‘ಜೈ ಭಾರತ್’ ಹೇರ್ ಕಟ್ಟಿಂಗ್ಸ್.   ನಾಗರಾಜಯ್ಯ!!! ಆ ಶಾಪ್ ಗೆ ಮಾಲಿಕನೂ ಹೌದು, ಕೆಲಸದಾಳು ಹೌದು, ಗಣಪಯ್ಯನ ಮಟ್ಟಿಗೆ ಅವನೇನು ಅಪರಿಚಿತನಲ್ಲ, ನಾಗರಾಜಯ್ಯನ ಮಗ ಕೃಷ್ಣಪ್ಪ ಮತ್ತು ಇವನು ಒಂದು ಕಾಲದ ಸ್ನೇಹಿತರು. ಮಂಜಿನ ಕೊಪ್ಪದ ಅವತ್ತಿನ ಸಂಭ್ರಮಕ್ಕೂ ಆ ಕೃಷ್ಣಪ್ಪನೇ ಕಾರಣ. ಅವತ್ತು ‘ಜೈ ಭಾರತ್’ ಕಟ್ಟಿಂಗ್ ಶಾಪ್ ನ ಎದುರು ಒಂದು ಕಾರು ನಿಂತಿತ್ತು. ಈ ಪುಟ್ಟ ಹಳ್ಳಿಯ ಮುಗ್ದ ಜನರಿಗೆ ಕಾರು ಎಂದರೆ ರಾಮಾಯಣದ ಪುಷ್ಪಕ ವಿಮಾನಕ್ಕೆ ಸಮಾನ. ಅದು ಕೃಷ್ಣಪ್ಪ ಬೆಂಗಳೂರಿನಿಂದ ಬಂದಿದ್ದ ಕಾರು, ಅಷ್ಟು ದೂರದ ಊರಿನಿಂದ ಕಾರಿನಲ್ಲಿ ಮಂಜಿನ ಕೊಪ್ಪಕ್ಕೆ ಬರೋದು ಅಂದರೆ ಸಾಮಾನ್ಯದ ವಿಷಯವಲ್ಲ. ಮಕ್ಕಳಿಂದ ಹಿಡಿದು ಹಿರಿಯರ ಬಾಯಲ್ಲೂ ಅದೇ ವಿಚಾರ, ಕಾರಿನದ್ದೇ ಸಂಭ್ರಮ.

ನಮ್ಮ ಗಣಪಯ್ಯನಿಗೆ ಸ್ನೇಹಿತ ಅನ್ನೊ ಹಳೆ ಪರಿಚಯದಲ್ಲಿ ಗೆಳೆಯ ಕೃಷ್ಣಪ್ಪನನ್ನ ಮಾತನಾಡಿಸೋ ಮನಸಾಯಿತು. ಕೃಷ್ಣಪ್ಪಾನು ಅಷ್ಟೆ ಖುಷಿಯಿಂದ ಗಣಪಯ್ಯನನ್ನ ಮಾತನಾಡಿಸಿದ. ತೋಟದ ಕಡೆ ಹೊರಟಿದ್ದ ಕೃಷ್ಣಪ್ಪ ಗಣಪಯ್ಯನನ್ನೂ ಕರಕೊಂಡು  ಕಾರಿನಲ್ಲೇ ತೋಟದ ಕಡೆ ಹೊರಟ. ಈ ಹಳ್ಳಿಯ ಸಂದಿಗೊಂದಿಯಲ್ಲಿ ಆ ಕಾರು ಲೀಲಾಜಾಲವಾಗಿ ಮುಂದೆ ಸಾಗ್ತಾ ಇತ್ತು.

ಹಳೆಯ ಗೆಳೆಯ ಅಂತ ಕೃಷ್ಣನ ಜೊತೆ ಮಾತಿಗೆ ಹೋಗದೇ ಇದ್ದಿದ್ರೆ ಬಹುಷಃ ಗಣಪಯ್ಯನಿಗೆ ಇವತ್ತಿನ ಪರಿಸ್ಥಿತಿ ಬರ್ತಾ ಇರ್ಲಿಲ್ವೋ ಏನೊ. ಅವತ್ತಿನ ದಿವಸ ಕಾರಿನಲ್ಲಿ ಹೋಗ್ತಾ ಇದ್ದಾಗ ದಾರಿಯಲ್ಲಿ ಕೃಷ್ಣಪ್ಪ ಮಾತಿಗಿಳಿದ, ಬೆಂಗಳೂರು, ಬೆಂಗಳೂರಿನ ಜೀವನದ ರೀತಿ ನೀತಿಯನ್ನ ರಂಗು ರಂಗಾಗಿ ವರ್ಣಿಸೊದಿಕ್ಕೆ ಶುರು ಮಾಡಿದ, ಆಧುನೀಕತೆ, ತಂತ್ರಜ್ಞಾನದ ಮಹತ್ವವನ್ನ ತಿಳಿಸುವವನಂತೆ ಕನ್ನಡ ಶಬ್ದ ಭಂಢಾರವನ್ನೇ ಜಾಲಾಡಿಬಿಟ್ಟ, ಶುರುವಾತಿನಲ್ಲಿ ಗಣಪಯ್ಯ ಅಷ್ಟೇನು ಆಸಕ್ತಿ ತೋರದೇ ಇದ್ದರೂ, ಕಲ್ಲು ಬೊಂಬೆಯನ್ನೂ ಕೂಡ ಬೆಂಗಳೂರಿಗೆ ಹೊರಡುವಂತೆ ಮಾಡುವ ಕೃಷ್ಣನ ಮಾತಿಗಾರಿಕೆಗೆ ಸ್ವಲ್ಪ ವಿಚಲಿತನಾಗಿದ್ದ, ತಾನೊಂದು ಹೊಸ ವ್ಯಾಪಾರ ಶುರುಮಾಡುವುದಾಗಿಯೂ, ಅದರಲ್ಲಿ ದುಡ್ಡು ಹೂಡಿದರೆ ಜೀವನ ಪರ್ಯಂತ ಆರಾಮಾಗಿ ಇರಬಹುದು ಅನ್ನೊ ಹೊಸ ಆಸೆಯನ್ನ ಹುಟ್ಟಿಸಿದ್ದ.

ಅವತ್ತು ರಾತ್ರಿ ಮನೆಗೆ ಬಂದ  ಗಣಪಯ್ಯನಿಗೆ ಬೆಂಗಳೂರಿನ ವಿಷಯಕ್ಕೆ ಪೂರ್ಣ ಮನಸ್ಕನಾಗಿ ಸಿದ್ದನಿಲ್ಲದಿದ್ದರೂ, ಪೂರ್ತಿಯಾಗಿ ಆ ವಿಷಯವನ್ನು ಹೊರಹಾಕೊದಕ್ಕೂ ಸಾಧ್ಯವಾಗಲಿಲ್ಲ, ಊರಿನಲ್ಲಿ ಹಜಾಮತ್ ಕೆಲಸ ಮಾಡಿ ಕೊಂಡಿದ್ದ ನಾಗರಾಜಯ್ಯನಿಗೂ, ಅವನ ಮಗ ಕೃಷ್ಣಪ್ಪನಿಗೂ ಇದ್ದ ವ್ಯತ್ಯಾಸವನ್ನ ಯೋಚಿಸಿದ, ನಾಗರಾಜಯ್ಯ ಜೀವನ ಪರ್ಯಂತ ಅದೇ ಕೆಲಸವನ್ನ ಮಾಡಿಕೊಂಡು ಬಂದ ಈಗಲೂ ಹಾಗೆ ಇದ್ದಾನೆ… ಆದರೆ ಮಗ???     ಓದಿ ಬೆಂಗಳೂರಿಗೆ ಹೋದವನು ನಾಲ್ಕೇ ವರ್ಷಕ್ಕೆ ಕಾರಿನಲ್ಲಿ ವಾಪಾಸ್ ಬಂದ. ನನ್ನ ಜೊತೆ ಕಾಲೇಜು ಓದಿದವರು ಇವತ್ತು ಬೆಂಗಳೂರು, ಮುಂಬೈ ಅಂತ ಒಳ್ಳೆ ಜೀವನ ಸಾಗಿಸ್ತಾ ಇದ್ದರೆ, ಆದ್ರೆ ನಾನು!............... ಡಿಗ್ರಿ ಮಾಡಿ ಇಲ್ಲೆ ಇದ್ದು ಜೀವನ ವ್ಯರ್ಥ ಮಾಡ್ತಾ ಇದಿನೋ ಏನೊ ಅಂತ ಅವನಿಗೆ ಅನಿಸೊದಿಕ್ಕೆ ಶುರುವಾಯ್ತು.

ಎರಡು ಮೂರು ದಿನಗಳಾದರೂ ಅವನಿಗೆ ಯಾವ ನಿರ್ಧಾರಕ್ಕೂ ಬರೋದಿಕ್ಕೆ ಆಗಲೆ ಇಲ್ಲ, ಆದರೆ ಕೃಷ್ಣಪ್ಪನ ಮನೆ ಮುಂದೆ ನಿಂತಿದ್ದ ಕಾರನ್ನ ನೋಡಿದಾಗಲೆಲ್ಲ ಮತ್ತೆ ಮತ್ತೆ ಮನಸ್ಸಿನಲ್ಲಿ ಆಸೆಗಳು ಚಿಗುರುತ್ತ ಸಾಗಿತ್ತು. ಕೃಷ್ಣಯ್ಯನ ಜೀವನ ಶೈಲಿ, ಮಾತುಗಾರಿಕೆ, ಅವನ ಹೊಸ ವ್ಯಾಪಾರದ ಬಗ್ಗೆ ಅವನಲ್ಲಿದ್ದ ಐಡಿಯಾಗಳು, ಅದರ ಬಗ್ಗೆ ಅವನಿಗಿದ್ದ ಆತ್ಮ ವಿಶ್ವಾಸದ ಮಾತುಗಳು, ನಿದ್ರಿಸುವವನಿಗೆ ಹಾಸಿಗೆ ಸಿಕ್ಕಿತು ಅನ್ನೊ ಹಾಗೆ, ಗಣಪಯ್ಯನ ಮನಸ್ಸಿನಲ್ಲಿ ವ್ಯಾಪಾರ – ಬೆಂಗಳೂರು ಅನ್ನೋ ಆಸೆ ದೃಢವಾಗುತ್ತಾ ಸಾಗಿತು. ಕೇವಲ ಕೃಷಿಯಿಂದ ಜೀವನ ಸಾಗೊಲ್ಲ, ಮುಂದೆ ಮಕ್ಕಳಿಗೆ ಈ ಹಳ್ಳಿಯಲ್ಲಿದ್ದುಕೊಂಡು ಒಳ್ಳೆಯ ಶಿಕ್ಷಣ ಸಾಧ್ಯವಿಲ್ಲಾ ಅನ್ನೋ ಯೋಚನೆ ಒಂದು ಕಡೆ, ಹಾಗು ಹೀಗೊ ಬೆಂಗಳೂರಿಗೆ ಹೊರಡೋಕೆ ಸಿದ್ದನಾದ. ವ್ಯಾಪಾರ ಶುರು ಮಾಡುವ ಮೊದಲು ಕೃಷ್ಣಪ್ಪ ಗಣಪಯ್ಯನನ್ನು ಕರೆದುಕೊಂಡು ಬೆಂಗಳೂರಿಗೆ ಹೊರಟ,

ಬೆಂಗಳೂರಿಗೆ ಕಾಲಿಟ್ಟ ಗಣಪಯ್ಯನಿಗೆ, ತಾನೆಲ್ಲೋ ಫಾರಿನ್ ನಲ್ಲಿ ಇದಿನೋ ಏನೊ ಅಂತ ಅನ್ನಿಸಿ ಬಿಡ್ತು, ಬೆಳ್ಳಂ ಬೆಳಗ್ಗೆ ಸಿಟಿ ಬಸ್ ನ ಬಾಗಿಲಿನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯವನ್ನು ನೋಡಿ “ ಅಬ್ಬಾ, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗೊದಿಕ್ಕೆ ಇಲ್ಲಿನ ಜನರಿಗೆ ಅದು ಎಂತಹ ಉತ್ಸಾಹ, ಎಂತಹ ಶಿಸ್ತಿನ ಸಿಪಾಯಿಗಳು, ಎಂಥಾ ಶಿಸ್ತಿನ ಜೀವನ!!!!!” ಅಂತ ಆಶ್ಚರ್ಯಪಟ್ಟ. ವ್ಯಾಪಾರದ ಬಗ್ಗೆ ಕೆಲವು ವ್ಯಕ್ತಿಗಳನ್ನ ಭೇಟಿ ಮಾಡಿದ, ಮನಸ್ಸಿನಲ್ಲಿದ್ದ ಅಲ್ಪ ಸ್ವಲ್ಪ ಅಳುಕೂ ದೂರವಾಯ್ತು, ಕೃಷ್ಣಪ್ಪನನ್ನು ಪೂರ್ತಿಯಾಗಿ ನಂಬಿಬಿಟ್ಟ.

ಊರಿಗೆ ಬಂದವನೆ ತನ್ನ ಹೊಸ ಯೋಜನೆಯ ಬಗ್ಗೆ ಯಾರಿಗೂ ಹೇಳದೆ, ಮುಂದಿನ ಕೆಲಸ ಶುರು ಹಚ್ಚಿಕೊಂಡ, ತನ್ನ ಹೊಲ, ಗದ್ದೆ, ತೋಟದಲ್ಲಿ ಮುಕಾಲುಭಾಗ ಮಾರಿದ, ಅದರಿಂದ ಬಂದ 2 ಲಕ್ಷ ರುಪಾಯಿಯನ್ನ ವ್ಯಾಪಾರದಲ್ಲಿ ಹೂಡುವಂತೆ ಕೃಷ್ಣಪ್ಪನ ಕೈಗಿಟ್ಟ.

ಅವತ್ತೆ ಕೊನೆ, ಗಣಪಯ್ಯ ಕೃಷ್ಣಪ್ಪನ ಮುಖವನ್ನ ಮತ್ತೆ ನೋಡಲೇ ಇಲ್ಲ, ಸಂಬಂಧಪಟ್ಟ ಡಾಕ್ಯುಮೆಂಟ್ಸ್ ಗಳನ್ನ ಎರಡೆ ದಿನದಲ್ಲಿ ತರುವುದಾಗಿ ಹೊರಟು ಹೋದ ಕೃಷ್ಣಪ್ಪ ಮತ್ತೆ ಬರಲೇ ಇಲ್ಲ, ಅವನನ್ನ ಹುಡುಕಿ ಬೆಂಗಳೂರಿಗೆ ಹೊರಟ ಗಣಪಯ್ಯನಿಗೆ ತಿಳಿದದ್ದು, ಹೊಸ ವ್ಯಾಪಾರ, ವ್ಯವಹಾರದ ರೀತಿಯಲ್ಲಿ ಮಾತನಾಡಿದ ವ್ಯಕ್ತಿಗಳು ಎಲ್ಲಾ ಸುಳ್ಳು ಅಂತ. ಅವಿವೇಕಿಯಾಗಿ ತಾನು ಮಾಡಿದ ಮೂರ್ಖ ಕೆಲಸಕ್ಕೆ, ತನ್ನ ಮೇಲೆ ಅವನಿಗೆ ಅಸಹ್ಯವಾಯ್ತು, ದುಡ್ಡು ಕಳಕೊಂಡು ಕಂಗಾಲಾದ.

 ವಾಪಾಸು ಊರಿಗೆ ಬಂದು ಅಪ್ಪ ನಾಗರಾಜಯ್ಯನ ಗ್ರಹಚಾರ ಬಿಡಿಸಬೇಕು ಅಂತ ಬಂದವನು ಅವನು, ಆದರೆ ಅವನ ಗ್ರಹಚಾರಾನೆ ನೆಟ್ಟಗಿಲ್ಲದೇ ಇದ್ರೆ ಯಾರು ಏನು ಮಾಡೊಕಾಗುತ್ತೆ? ಇವನು ಬೆಂಗಳೂರಿಗೆ ಹೋಗಿದ್ದ ಎರಡು ದಿವಸದಲ್ಲಿ, ಕೃಷ್ಣಪ್ಪ ಬಂದು  ನಾಗರಾಜಯ್ಯನನ್ನ ಕರೆದುಕೊಂಡು ಹೊಗಿದ್ದ, ಮನೆಗೆ ಬೀಗ ಹಾಕಿತ್ತು, ಭ್ರಮಾನಿರಸನಾಗಿದ್ದ ಅವನಿಗೆ ಇದ್ದ ಕೊನೆಯ ದಾರಿಯೂ ಮುಚ್ಚಿ ಕೊಂಡಿತ್ತು. ಗಣಪಯ್ಯನಿಗೆ ಅಳಿದುಳಿದ ಜಮೀನಿನಲ್ಲಿ ಮಾಡೋಕೆ ಯಾವ ಕೆಲಸವೂ ಉಳಿದಿರಲಿಲ್ಲ, ಎರಡುವಾರಗಳು ಕಳೆಯಿತು, ಜಮೀನು ಮಾರಿದ್ದು, ಮೋಸ ಹೊಗಿದ್ದು, ಯಾವುದನ್ನೂ ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಒಂದು ದಿವಸ ರಾತ್ರಿ ತನ್ನ ಹೆಂಡತಿಯಲ್ಲಿ ಎಲ್ಲಾ ವಿಷಯ ಹೇಳಿದ. ಇನ್ನು ಸ್ವಲ್ಪ ದಿವಸ ಹೊದರೆ ನಾನು ಹೊಲ ಗದ್ದೆ ಮಾರಿದ್ದು, ಮೊಸ ಹೋಗಿದ್ದು ಎಲ್ಲರಿಗೂ ಗೊತ್ತಾಗುತ್ತೆ, ಇದೆಲ್ಲ ನನ್ನ ಅವಿವೇಕದಿಂದ ಆಗಿದ್ದು, ಈ ಅವಮಾನವನ್ನ ಎದುರಿಸೋಕೆ ಸಿದ್ದವಿಲ್ಲ ಅಂದವನು, ಅವನು ಬೆಂಗಳೂರಿನ ಯಾವ ಮೂಲೆಯಲ್ಲಿದ್ದರೂ ಹುಡುಕಿ, ಒದ್ದು ಹಣವಸೂಲಿ ಮಾಡಿಕೊಂಡು ಬರುವುದಾಗಿ, ಮತ್ತೆ ಬೆಂಗಳೂರು ಕಡೆ ಹೊರಟ.

ನಾವೆಲ್ಲ 30-40 ರುಪಾಯಿ ಕೊಟ್ಟು ಹೇರ್ ಕಟ್ಟಿಂಗ್ ಮಾಡಿಸ್ಕೊಂಡು ಬರ್ತೀವಿ, ಆದ್ರೆ ಗಣಪಯ್ಯ, 2ಲಕ್ಷ ಕೊಟ್ಟು ಕಟ್ಟಿಂಗ್ ಮಾತ್ರ ಅಲ್ಲ, ಪೂರ್ತಿಯಾಗಿ ನುಣ್ಣಗೆ ಬೋಳಿಸಿಕೊಂಡಿದ್ದ, ಅವನು ಬೆಂಗಳೂರಿಗೆ ಬಂದು ಹದಿನೈದು ವರ್ಷ ಆಗಿತ್ತು, ಅವತ್ತು ಕೃಷ್ಣಪ್ಪನನ್ನ ಹುಡುಕಿಕೊಂಡು ಬಂದವನು ವಾಪಾಸ್ ಊರಿಗೆ ಹೊಗಲಿಲ್ಲ, ಪೊಲೀಸ್ ಕಂಪ್ಲೇಂಟ್ ಕೊಟ್ಟು ಏನೆಲ್ಲ ಮಾಡಿದ್ರೂ ಕೃಷ್ಣಪ್ಪನ ಸುಳಿವೆ ಸಿಗಲಿಲ್ಲ, ಬೆಂಗಳೂರಿಗೆ ಬಂದವನು ಅವನ ಡಿಗ್ರಿ ಸರ್ಟಿಫಿಕೇಟ್ ಹಿಡ್ಕೊಂಡು ಹೇಗೊ ಒಂದು ಸಣ್ಣ ಕೆಲಸ ಹುಡುಕಿಕೊಂಡ, ಅವನು ಊರು ಬಿಟ್ಟು ಬಂದ ಕೆಲವೇ ದಿವಸಕ್ಕೆ ಅವನ ವಿಷಯ ಊರೆಲ್ಲಾ ಹಬ್ಬಿ ಕೊಳ್ತು, ಕೆಲವು ತಿಂಗಳು ಬಿಟ್ಟು ಅವನ ಹೆಂಡತಿ, ಅಪ್ಪನೂ ಬೆಂಗಳೂರಿಗೆ ಬಂದು ಇವನ ಜೊತೆನೆ ಇದ್ದು ಬಿಟ್ರು.

ಹೀಗೆ ಜೀವನ ಸಾಗ್ತಾ ಇತ್ತು, ಊರಲ್ಲಿ ನೆಮ್ಮದಿಯಾಗಿ ಜೀವನ ಸಾಗಿಸ್ತಾ ಇದ್ದ ಗಣಪಯ್ಯ ಇವತ್ತು, ಪೈಸ ಪೈಸನೂ ಲೆಕ್ಕ ಹಾಕುತ್ತ, ಅಳೆದು ತೂಗಿ ಖರ್ಚು ಮಾಡೊ ಪರಿಸ್ಥಿಗೆ ತಲುಪಿದ್ದಾನೆ,

ಅವತ್ತು ಶನಿವಾರ ಆಗಿದ್ರಿಂದ 5 ಗಂಟೆಗೆಲ್ಲಾ ಆಫೀಸ್ ಇಂದ ಹೊರಟಿದ್ದ, ಬೇರೆ ದಿವಸ ಆಗಿದ್ರೆ 8-9 ಗಂಟೆ ಆದ್ರು ಹೊರಡೊ ಯೊಚನೆ ಮಾಡ್ತಿರ್ಲಿಲ್ಲ.

ಈಗ ಅವನೂ ಕೂಡ ಬೆಂಗಳೂರಿನ ಶಿಸ್ತಿನ ಸಿಪಾಯಿ, ಇನ್ನೊಂದು ಬಸ್ ಗೆ ಕಾಯುವ ತಾಳ್ಮೆ ಈಗ ಅವನಲಿಲ್ಲ, ಜನ ತುಂಬಿ ಕೊಂಡು ಒಂದೇ ಕಡೆ ವಾಲಿ ಕೊಂಡಿದ್ದ ಬಸ್ ಗೆ ತನ್ನ, ಒಂದು ಕಾಲು, ಕಿಟಕಿಗೆ ಒಂದು ಕೈ, ಹೀಗೆ ನೇತಾಡಿಕೊಂಡು ಹೇಗೊ ತನ್ನ ಸ್ಟಾಪ್ ಸೇರಿಕೊಂಡ, ಮತ್ತೆ 5 ನಿಮಿಷ ಕಾಲುದಾರಿ, ಆಗಲೆ ಮಳೆ ಮೆಲ್ಲಗೆ ಶುರುವಾಗಿತ್ತು, ಹೇಳ ಬೇಕಂದ್ರೆ ಕಳೆದ ಹದಿನೈದು ವರ್ಷಗಳಲ್ಲಿ ಗಣಪಯ್ಯ ನಗೋದನ್ನೆ ಮರೆತಿದ್ದ, ತಿಂಗಳ ಕೊನೆ, ಮನೆಯನ್ನ ಸಂಭಾಳಿಸೋದೆ ಸದ್ಯಕ್ಕೆ ಅವನ ದೊಡ್ಡ ಸಮಸ್ಯೆ, ಟಿಫಿನ್ ಬಾಕ್ಸ್ ನ ಬ್ಯಾಗ್ ಹಿಡ್ಕೊಂಡು, ಫೂಟ್ ಪಾತ್ ಮೇಲೆ ನಡೆದು ಬರ್ತಿದ್ದ, ಕೆಲವು ಕಡೆ ನಡೆದಾಡುವುದಕ್ಕೂ ಜಾಗವಿಲ್ಲದೆ ವಾಹನವನ್ನ್ ಅಡ್ಡವಾಗಿ ನಿಲ್ಲಿಸಿದ್ರು, ಹಾಗಂತ ಫೂಟ್ ಪಾತ್ ನಿಂದ ರಸ್ತೆಗಿಳಿದರ್, ಬೈಕ್, ಆಟೊಗಳ ಹಾರನ್ ಶಬ್ದ, ಎಲ್ಲವೂ ಗಣಪಯ್ಯನ ಅಸಹನೆಯನ್ನ ಕೆಣಕುತ್ತಾ ಇತ್ತು.

ಅವನ ಬದಲಾವಣೆಯಲ್ಲಿ ಇದೂ ಒಂದು ಮುಖ್ಯವಾದ ಬದಲಾವಣೆ,ಅದೇನಂದ್ರೆ, ತಿಂಗಳ ಬಜೆಟ್ ತೂಗಿಸೋದಕೆ ಪ್ರತಿ ತಿಂಗಳ ಕೊನೆಯ 15 ದಿವಸ ಅವನು ಮನೆಗೆ ಹಾಲು ತರ್ತಾಇರ್ಲಿಲ್ಲ, ಹಾಗಾಗಿ, ಮನೆಯಲ್ಲಿ ಹದಿನೈದು ದಿವಸ ಕಾಫಿ,ಟೀ ಏನು ಇಲ್ಲ, ಹಾಗಂತ ಇವನು ಕುಡಿಯೋದಿಲ್ಲಾ ಅಂತ ಅಲ್ಲ, ಪ್ರತೀ ದಿನ ಮನೆಯ ಹತ್ರ ಇರೊ ಶ್ಯಾಮಣ್ಣನ ಕಾಂಡಿಮೆಂಟ್ಸ್ ನಲ್ಲಿ ಅವನೊಬ್ಬನೇ 4 ರುಪಾಯಿಯ ಕಾಫಿ ಕುಡಿದು ಮನೆಗೆ ಬರ್ತಾ ಇದ್ದ.

ಅದೇನೊ ಗೊತ್ತಿಲ್ಲ ಅವತ್ತು ಗಂಟೆ 6 ಆದರೂ ಶ್ಯಾಮಣ್ಣನ ಶಾಪ್ ಓಪನ್ ಆಗಿರ್ಲಿಲ್ಲ, ಸ್ವಲ್ಪ ಹೊತ್ತು ಕಾದ ಗಣಪಯ್ಯ, ಮಳೆ ಜೋರಾಗಬಹುದು ಅಂತ ಅಲ್ಲಿಂದ ಮತ್ತೆ ಮನೆ ದಾರಿ ಕಡೆಗೆ ಸ್ವಲ್ಪ ದೂರ ಹೊರಟ, ಅದೇ ಸಮಯಕ್ಕೆ ಎದುರುಗಡೆಯಿಂದ  ಬೈಕ್ ನಲ್ಲಿ ಯಾರೊ ಜೋರಾಗಿ ಹಾರನ್ ಹಾಕಿಕೊಂಡು ವೇಗವಾಗಿ ಬರೋದು ಕಾಣಿಸ್ತು,

          “ಅರೆ, ಅದು ಶ್ಯಾಮಣ್ಣ ಮತ್ತವನ ಹೆಂಡತಿ ಅಲ್ವ???” ಅಂತ ಗಣಪಯ್ಯ ನೋಡುತ್ತಾ ನಿಂತ

ನೇರವಾಗಿ ಅವನ ಕಡೆಗೆ ಬಂದ ಬೈಕು, ಅದರಲ್ಲಿದ್ದ ಶ್ಯಾಮಣ್ಣ

          “ಬನ್ನಿ ಸಾರ್, ಅಂಗಡಿ ಓಪನ್ ಮಾಡ್ತೀನಿ….” ಅಂತ ಗಣಪಯ್ಯನಿಗೆ ಕೂಗಿ ಹೇಳಿ ಹಾಗೆ ಮುಂದೆ ವೇಗವಾಗಿ ಹೋದ

ಗಣಪಯ್ಯ ಇನ್ನೇನು ತಿರುಗ ಬೇಕು ಅನ್ನೋವಷ್ಟರಲ್ಲಿ ಅಲ್ಲಿದ್ದ ಕೆಲವು ಹುಡುಗಿಯರು ಕಿಟಾರನೆ ಕಿರುಚಿದರು. ಗಣಪ್ಪಯನ್ನಿಗೆ ಒಂದೆ ಸಾರಿ ಗಾಬರಿಯಾಗಿ ಎದೆ ಹಿಡಿದುಕೊಂಡಹಾಗಾಯಿತು. ಅಲ್ಲಿ ಏನಾಯ್ತು ಅನ್ನೊದನ್ನ ಗಮನಿಸಿದ.

ಬೈಕನಲ್ಲಿ ವೇಗವಾಗಿ ಹೋದ ಅಂಗಡಿ ಶ್ಯಾಮಣ್ಣ ಎದುರಿಗಿದ್ದ ಒಂದು ಹಸುವನ್ನ ನೋಡಿ ಜೋರಾಗಿ ಹಾರನ್ ಹಾಕಿದ್ದ, ಜೋರಾದ ಹಾರನ್ ಶಬ್ದಕ್ಕೆ ಹೆದರಿದ ಹಸು ಒಂದೆ ಸಮನೆ ಎಗರಿತ್ತು, ಒದ್ದೆ ನೆಲದ ಮೇಲೆ ಕಾಲು ಜಾರಿ, ಪಕ್ಕದಲ್ಲೆ ಅರ್ಧ ಒಡೆದು ಹೋಗಿದ್ದ ಮ್ಯಾನ್ ಹೋಲ್ ನ ಮುಚ್ಚಳಕ್ಕೆ ಅದು ಕಾಲು ಹಾಕಿಕೊಡು ಎಳೆಯೊದಕ್ಕೆ ಆಗದೆ ಸಿಕ್ಕಿ ಹಾಕಿಕೊಂಡಿತ್ತು. ಶ್ಯಾಮಣ್ಣ ತಕ್ಷಣ ಪಕದಲ್ಲೆ ಬೈಕ್ ನಿಲ್ಲಿಸಿ ಕೆಳಗಿಳಿದ.

ಇದನ್ನೆಲ್ಲ ನೋಡಿದ ಗಣಪಯ್ಯನಿಗೆ ಕೋಪ ನೆತ್ತಿಗೇರಿತು, ಅವನ ಮುಖದಲ್ಲಿ ಅಸಹನೆ ಮಿತಿಮೀರಿತ್ತು.

          “ಥೂ, ಈ ಹುಡಿಗೀರು ಬೇರೆ, ಮುಂಡೆವು ಬೇರೆ ಕೆಲಸ ಇಲ್ಲ, ನಾನು ಯಾರೊ ಬಿದ್ದು ಆಕ್ಸಿಡೆಂಟ್ ಆಯ್ತು ಅಂದು ಕೊಂಡೆ, ಯಾವ್ದೊ ಹಸು ಕಾಲು ಸಿಕ್ಕಿ ಹಾಕಿಕೊಂಡಿದ್ದಕ್ಕೆ ಈ ತರ ಕಿರುಚುತಾರೆ” ಅಂತ ಬೈಕೊಂಡ. ಅಷ್ಟು ಹೊತ್ತಿಗೆ ಅವನ ಎದೆ ಬಡಿತ ಸಾಮಾನ್ಯ ಸ್ಥಿತಿಗೆ ಬಂದಿತ್ತು. ಅಷ್ಟು ಹೊತ್ತಿಗೆ ಮಳೆ ಸ್ವಲ್ಪ ಜೋರಾಯ್ತು. ಅಲ್ಲೆ ಪಕ್ಕದಲ್ಲಿ ನೀರು ಬೀಳದ ಹಾಗೆ ಒಂದು ಮನೆ ಗೇಟ್ ಹತ್ರ ಹೋಗಿ ನಿಂತು ಕೊಂಡ,

ಬೈಕ್ ನಿಂದ ಕೆಳಗಿಳಿದ ಶ್ಯಾಮಣ್ಣ ಆ ಹಸು ಕಾಲನ್ನ ಬಿಡಿಸೋದಿಕ್ಕೆ ಮುಂದಾದ, ಅವನ ಹೆಂಡತಿ ಅಂಗಡಿ ಬಾಗಿಲು ತೆಗೆಯೋದು ಗಣಪಯ್ಯನಿಗೆ ದೂರದಿಂದಲೇ ಕಾಣಿಸ್ತು, ಇನ್ನು ಇಲ್ಲಿ ನಿಲ್ಲೊ ಬದಲು ಅವನ ಅಂಗಡಿ ಹತ್ತಿರ ಕಾಫಿ ಕುಡ್ಕೊಂಡು ನಿಲ್ಬೋದು ಅಂತ ನಿರ್ಧರಿಸಿದೋನು ಕೈಯಲ್ಲಿದ್ದ ಬ್ಯಾಗ್ ನ ತಲೆ ಮೇಲೆ ಇಟ್ಕೊಂಡು ಶ್ಯಾಮಣ್ಣನ ಅಂಗಡಿ ಹತ್ತಿರ ಓಡಿದ,

ಜಿಗಿದ ರಭಸಕ್ಕೆ ಆ ಹಸುವಿನ ಕಾಲು ಅರ್ಧದಷ್ಟು ಒಳಗೆ ಹೋಗಿತ್ತು, ಉಳಿದ ಮೂರು ಕಾಲಲ್ಲೆ ನೋವಿನಿಂದ ಆಕಡೆ ಈ ಕಡೆ ತಿರುಗುತ್ತಾ ಒದ್ದಾಡ್ತಾ ಇತ್ತು, ಹತ್ತಿರದ ಮನೆ ಹುಡುಗ ಶ್ಯಾಮಣ್ಣನ ಸಹಾಯಕ್ಕೆ ಬಂದ, ಕಿರಿದಾದ ರಸ್ತೆಯಲ್ಲಿ, ಸಣ್ಣ ಮಟ್ಟಿನ ಟ್ರಾಫಿಕ್ ಜಾಮ್ ಆಗಿತ್ತು, ಬರೀ ಹಾರನ್ ಶಬ್ದದ ಕಿರಿಕಿರಿ, ಗಣಪಯ್ಯ ಅಲ್ಲಿ ಬರೋದನ್ನ ನೋಡಿ ಶ್ಯಾಮಣ್ಣ ಸಹಾಯಕ್ಕೆ ಕರೆದ, ಗಣಪಯ್ಯ ಅದನ್ನ ನೋಡಿದರೂ ಶ್ಯಾಮಣ್ಣನ ಮುಖವನ್ನ ನೋಡಿ ಸಣ್ಣಗೆ ನಕ್ಕನೆ ಹೊರತು, ಸಹಾಯಕ್ಕೆ ಹೋಗುವ ಮನಸು ಮಾಡಲಿಲ್ಲ, ಯಾವುದೋ ಹಸುವಿನ ತೊಂದರೆಗೆ ತಾನು ಯಾಕೆ ಸಿಕ್ಕಿ ಹಾಕಿ ಕೊಳ್ಳ ಬೇಕು ಅನ್ನೊದು ಇವನ ಆಲೋಚನೆ.

ಶ್ಯಾಮಣ್ಣನ ಹೆಂಡತಿ ಕಾಫಿ ಮಾಡೊದಿಕ್ಕೆ ಸಿದ್ದ ಮಾಡ್ತಾ ಇದ್ದಳು

“ಒಂದು ಕಾಫಿ”

 ಅಂತ ಹೇಳಿ ಕುಳಿತ ಗಣಪಯ್ಯ ಓರೆ ಕಣ್ಣಿನಿಂದ ಆ ಹಸುವಿನ ಕಡೆ ನೋಡುತ್ತ ಕುಳಿತನೇ ಹೊರತು, ಸಹಾಯಕ್ಕೆ ಇಳಿಯಲಿಲ್ಲ, ಮಳೆ ಜೋರಾಯ್ತು, ಆ ವಾಹನದ ಕಿರಿ ಕಿರಿಯ ನಡುವೆ ಎಲ್ಲರು ಬಂದು ಆ ದೃಶ್ಯವನ್ನ ಇಣುಕುವವರೆ ಹೊರತು ಯಾರು ಕೂಡ ಸಹಾಯಕ್ಕೆ ಮನಸ್ಸು ಮಾಡಲಿಲ್ಲ, ಇಪ್ಪತ್ತು ನಿಮಿಷ ಆಗಿರ್ಬೋದು, ಕಾಫಿ ಕುಡಿದು ಗಣಪಯ್ಯ ಮಳೆ ಕಮ್ಮಿ ಆಗಲಿ ಅಂತ ಅಲ್ಲೇ ಕುಳಿತಿದ್ದ. ಶ್ಯಾಮಣ್ಣ ಹೇಗೊ ಮಾಡಿ ಹಸುವಿನ ಕಾಲನ್ನ ಹೊರ ತೆಗೆದ, ಇನ್ನೂ ಗಾಬರಿಯಲ್ಲಿದ ಹಸು ವೇಗವಾಗಿ ಕಾಲು ಹೊರಗೆಳೆಯೋ ರಭಸದಲ್ಲಿ ಶ್ಯಾಮಣ್ಣನ ಮುಸುಡಿಗೆ ಒದ್ದು ಬಿಟ್ಟಿತು. ತುಟಿಯಿಂದ ಸುರಿತಾ ಇರೊ ರಕ್ತವನ್ನ ಕೈಯಲ್ಲಿ ಒತ್ತಿ ಹಿಡ್ಕೊಂಡು ಎದ್ದು ನಿಂತ ಶ್ಯಾಮಣ್ಣ ಅಲ್ಲೆ ಆ ಕಡೆ ನಿಂತಿದ್ದ ಹಸುವಿನ ಬಳಿ ಹೋಗಿ ಅದರ ಮೈಯನ್ನ ಮೂರು ನಾಲ್ಕು ಸಾರಿ ಪ್ರೀತಿಯಿಂದ ಸವರಿ ಅಂಗಡಿಕಡೆ ವಾಪಾಸ್ ಆದ, ಬಂದವನೆ ಹೆಂಡತಿ ಹತ್ತಿರ ಆ ಹಸುವಿಗೆ ನಾಲ್ಕು ಬಾಳೆ ಹಣ್ಣ ಕೊಟ್ಟು ಬಾ ಅಂತ ಕಳುಹಿಸಿದ. ಇದನ್ನೆಲ್ಲ ದೂರದಿಂದ ನೋಡುತ್ತ ಕುಳಿತಿದ್ದ ಗಣಪಯ್ಯ ಶ್ಯಾಮಣ್ಣನನ್ನು ನೋಡಿ,

          “ಏನ್ ಶ್ಯಾಮಣ್ಣ , ಸಮಾಜ ಸೇವೆ ಮಾಡೋಕೆ ಹೋಗಿ, ಮೂತಿ ಹೊಡುಸ್ಕೊಂಡ್ರಲ್ಲ” ಅಂತ ಹೇಳಿ ನಗೋದಕ್ಕೆ ಶುರು ಮಾಡಿದ. ಅವನ ನಗುವನ್ನ ನೋಡಿ ಶ್ಯಾಮಣ್ಣ

“ಮುಚ್ರಿ ಬಾಯಿ, ನಗ್ತಿರಲ್ಲ,…. ಮನುಶ್ಯರ ನೀವು? ಮನುಶ್ಯತ್ವ ಇದ್ಯ ನಿಮಗೆ???” ಅಂದ

ಗಣಪ್ಪಯ್ಯನ ಮುಖದಲ್ಲಿ ನಗು ಮಾಯವಾಯ್ತು, ಸುರಿತಾ ಇರೋ ರಕ್ತವನ್ನ ಒಂದು ಬಟ್ಟೆಯಲ್ಲಿ ಒರೆಸಿಕೊಂಡ ಶ್ಯಾಮಣ್ಣ ಮತ್ತೆ ಮಾತು ಮುಂದುವರೆಸಿದ

“ನಿಮಗೆ ಗೊತ್ತಾ …, ನಾನು ಚಿಕ್ಕವಯಸ್ಸಿನಲ್ಲೆ ನಮ್ಮ ಅಮ್ಮನನ್ನ ಕಳ್ಕೊಂಡವನು, ನನ್ ಅಪ್ಪ ನಮ್ ಮನೆಲಿದ್ದ ಗೌರಿ ಅನ್ನೊ ಹಸು ಹಾಲನ್ನು ಕರೆದು ಅದನ್ನ ನನಗೆ ಕುಡಿಸಿ ನನ್ನನ್ನ ಬೆಳೆಸಿದ್ರು, ಹಾಗಾಗಗಿ ಹಸು ಅಂದ್ರೆ ನಂಗೆ ಅಮ್ಮನ್ ಸಮಾನ ಅಂತ ನಂಬಿ ಕೊಂಡು ಬಂದವನು ಸರ್ ನಾನು….. ಯಾವ ಹಸುವನ್ನ ನೋಡಿದ್ರು ನಂಗೆ ನನ್ನ ಅಮ್ಮಾನೆ ನೆನಪಾಗ್ತಾಳೆ ಸರ್” ಅಂದ,

ಗಣಪಯ್ಯ ಸ್ತಬ್ದವಾಗಿ ನಿಂತಿದ್ದ

“ನಾವೆಲ್ಲ ಪ್ರಕೃತಿಯ ಮಕ್ಕಳಲ್ವ ಸಾರ್, ಹಾಲು, ಅಕ್ಕಿ, ಬೆಳೆ, ಮಳೆ ಅಂತ ಎಲ್ಲಾ ಅದನ್ನೆ ಅವಲಂಬಿಸಿದಿವಿ, ನಾವೇನಾದ್ರು ವಾಪಾಸ್ ಕೊಟ್ಟಿದಿವ ಸರ್ ಪ್ರಕೃತಿಗೆ??? ಇವತ್ತು ಆ ಹಸು ನೋವಲ್ಲಿ ಒದ್ದಾಡ್ತ ಇತ್ತು, ಇದಾದ್ರು ಒಂದು ಅವಕಾಶ ಏನೊ ಋಣ ತೀರಿಸೋಣ ಅಂತ ಅದರ ಸಹಾಯಕ್ಕೆ ಹೊಗಿದ್ದೆ, ನಿಮ್ಮನ್ನೂ ಕರೆದೆ, ಆದ್ರೆ ನೀವು?... ದಿನಾ ಇಲ್ಲಿ ಬಂದು ಕೊಚ್ಚಿ ಕೊಳ್ತೀರ ನಾನು ಹಳ್ಳಿಯಲ್ಲಿದ್ದೆ, ಉಳುಮೆ ಮಾಡ್ತಾ ಇದ್ದೆ, ಹಸು ಮೇಯಿಸ್ತಾ ಇದ್ದೆ ಅಂತ, ಇವತ್ತು ಒಂದು ಜೀವ ನೋವಲ್ಲಿದೆ ಬಂದು ಸಹಾಯ ಮಾಡೊಣ ಅಂತ ಅನ್ನಿಸಲಿಲ್ಲ ನಿಮಗೆ…., ನಿಮ್ಮನ್ನ ಮತ್ತೆ ಹೇಗೆ ಹಳ್ಳಿಯವರು ಅಂತ ಹೇಳೊದು, ಹಳ್ಳಿ ಜನ ಹೀಗಿರ್ತಾರ ಸರ್?”

ಆ ಮಾತಗಳನ್ನ ಎದುರಿಸೋಕೆ ಆಗದ ಗಣಪಯ್ಯ ಆ ಮಳೆಯಲ್ಲೆ ಹೊರಬಿದ್ದ,

ಈಗ ಪಕ್ಕದ ಹಾರನ್ ಶಬ್ದ ಅವನಿಗೆ ಕಿರಿ ಕಿರಿ ಅನ್ನಿಸಲಿಲ್ಲ, ಮಳೆಗೆ ಒದ್ದೆ ಆಗ್ತಾ ಇದಿನಿ ಅಂತ ಅವ್ನಿಗೆ ಅನ್ನಿಸಲಿಲ್ಲ, ತನ್ನನ್ನ ತಾನೆ ಮತ್ತೆ ನೆನಪಿಸಿಕೊಂಡ

“ಹೌದು, ನನ್ನ ಹತ್ರ ಎಲ್ಲ ಇತ್ತು, ಭೂಮಿ, ನೀರು, ಹಸು-ಕರು, ಅದಕ್ಕಿಂತ ಮುಖ್ಯವಾಗಿ ನೆಮ್ಮದಿ, ಆದ್ರೆ ಈಗ? ದುಡ್ಡು ದುಡ್ಡು ಅಂತ ನಾನು ಎಲ್ಲವನ್ನ ಮಾರಿಕೊಂಡೆ, ಅಂದರೆ ನನ್ನ ತಾಯಿಯಂತ ತಾಯಿಯನ್ನೆ ಮಾರಿಕೊಂಡ ಹಾಗಾಗ್ಲಿಲ್ವ? ಇವತ್ತು ನನ್ನ ಪರಿಸ್ಥಿತಿ ಏನು? ಹೆಂಡತಿ, ಮಗು, ಅಪ್ಪ ಅನ್ನೊದು ನನಗೆ ಹೊರೆನ? ಅದು ನನ್ನ ಕರ್ತವ್ಯ ಅಲ್ವ? ಪ್ರಕೃತಿಯ ನಿಯಮ ಅಲ್ವ? ಯಾವತ್ತೋ ನಾನು ಮಾಡಿದ ಮೂರ್ಖತನದ ತಪ್ಪಿಗೆ ನನ್ನ ಮಗು ಯಾಕೆ ಶಿಕ್ಷೆ ಅನುಭವಿಸ ಬೇಕು? ಹದಿನೈದು ದಿವಸ ಮನೆಗೆ ಹಾಲಿಲ್ಲ ಅಂತ ಹೇಳಿ ನಾನು ಮಾತ್ರ ಇಲ್ಲಿ ಕಾಫಿ ಕುಡಿತಾ ಇದಿನಿ ಅಂದ್ರೆ, ನಾನ್ಯಾಕೆ ಇಷ್ಟೊಂದು ಸ್ವಾರ್ಥಿಯಾದೆ, ಸಂಬಂಧಗಳ ಬಗ್ಗೆ ನನ್ನಲ್ಲಿದ್ದ ನಂಬಿಕೆಗಳು ಎಲ್ಲಿ ಸತ್ತು ಹೋಯ್ತು? ಆ ಮೂಕ ಪ್ರಾಣಿಯನ್ನ ಕಾಪಡೊದಕ್ಕಿಂತ ನನಗೆ ನನ್ನ ಸುಖಾನೆ ಹೆಚ್ಚಾಯ್ತ? ಈ ಸಿಟಿ ಬದುಕು ಇಷ್ಟೇನ? ಈಗ ನಾನು ಕೇವಲ ಹಣ ಉತ್ಪಾದನೆ ಮಾಡೊ ಯಂತ್ರಾನ?”

ಅವತ್ತಿನ ಆ ಘಟನೆ, ಶ್ಯಾಮಣ್ಣನ ಮಾತು ಅವನ ವಾಸ್ತವತೆಯನ್ನ ಪ್ರಶ್ನಿಸುತ್ತಾ ಹೋದವು, ಅವನ ಪಕ್ಕದಲ್ಲಿ ಅದೇ ಹಸು ಮುಂದೆ ಸಾಗಿತು, ಅದನ್ನೆ ನೋಡಿದ ಗಣಪಯ್ಯನಿಗೆ

“ನೂರು ಕೋಟಿ ದೇವರ ಮೂರ್ತ ರೂಪವಾದ ಆ ಕಾಮಧೇನು, ಮನುಷ್ಯರೂಪದಲ್ಲಿರುವ ಈ ರಾಕ್ಷಸ ಮನಸ್ಸನ್ನ ಸಂಹರಿಸಲಿ” ಅಂತ ಅವನು ಆಸೆ ಪಟ್ಟ

“ಬಾನಿಂದ ಭುವಿ ಸೇರುತಿರುವ ಈ ಮಳೆ ನಮ್ಮ ಸುತ್ತಲಿರುವ ಗಣಪಯ್ಯನಂತಹ ಮನಸ್ತಿತಿಯನ್ನ ತೊಳೆದು ಶುಭ್ರಗೊಳಿಸಲಿ”

 ಅಂತ ನಾನು ಹಾರೈಸೋಣ

 

ಲೇಖಕರು

Manoranjan Noo…

ನಾನೊಬ್ಬ ಹವ್ಯಾಸಿ ಬರಹಗಾರ...ಸಮಯ ಸಿಕ್ಕಾಗೆಲ್ಲ Internet ನಲ್ಲಿ ಏನಾದ್ರೂ ತದುಕಾಡ್ತಾ ಇರ್ತಿನಿ , ಇಲ್ಲಾಂದ್ರೆ ಹಾಡು ಕೇಳೋದು, ಅದು ಇಲ್ಲಾಂದ್ರೆ ನನ್ನದೇ ಕಲ್ಪನಾ ಲೋಕದಲ್ಲಿ ಏನಾದ್ರೂ ಹೊಸತನ್ನ ಮಾಡ್ಕೆಕು ಅಂತ ಅದರಲ್ಲೇ ಮುಳುಗಿರೋದು. ಜೊತೆಗೆ ಪುಸ್ತಕ ಹಿಡ್ಕೊಂಡು ಏನಾದ್ರು ಗೀಚಬೇಕು ಅನ್ನೋ ಹವ್ಯಾಸ ನಂದು.

ಅನಿಸಿಕೆಗಳು

radhakrishna ಭಾನು, 11/04/2012 - 13:12

Try to wright short and sweet strories.

Manoranjan Noo… ಭಾನು, 11/04/2012 - 16:28

ಸಲಹೆಗೆ ಧನ್ಯವಾದಗಳು....

ಮಣಿಕಂಟ ಶುಕ್ರ, 11/30/2012 - 18:26

ಕತೆ ತುಂಬಾ ಚನಾಗಿದೆ ತುಂಬಾ ದೂಡ್ಡ ಕತೆಯಲ್ಲಿ ತುಂಬಾ ಹೊಳ್ಳೆಯಾ ಅರ್ಥವಿದೆ

Pradeep Kumar K T (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 12/21/2012 - 17:53

Yes this story is heart toucheble,you are 100% right Mr Manoranjan we are going away from our velleges,values,believes,responcibalities.
We need to get back to our velleges to get back our peacefullness.
We have land plantation, each and everything in our native place but also we are in a HELL like BANGLORE.....

Manoranjan Noo… ಶುಕ್ರ, 12/28/2012 - 13:09

ಮಣಿಕಂಟ ಹಾಗೂ ಫ್ರದೀಪ್ ಅವರೆ ಧನ್ಯವಾದಗಳು...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.