Skip to main content

ಕೆಲವು ಝೆನ್ ಕತೆಗಳು

ಬರೆದಿದ್ದುOctober 24, 2007
2ಅನಿಸಿಕೆಗಳು

ಹೊರಗಡೆ ಜಗುಲಿಯಲ್ಲಿ ಅಭ್ಯಾಸಕ್ಕೆ ಕುಳಿತ ಇಬ್ಬರು ಬೌದ್ಧ ವಟುಗಳ ಮಧ್ಯೆ ತಮ್ಮ ಮಠದ ಮೇಲೆ ಫಟಫಟಿಸುತ್ತಿದ್ದ ಧರ್ಮಧ್ವಜದ ಕುರಿತಾಗಿ ವಾಗ್ವಾದವೇರ್ಪಟ್ಟಿತ್ತು. ಮೊದಲನೆಯವನು ವಿಶ್ಲೇಷಿಸಿದ, "ನೋಡು, ಹೊಡ್ಕೋತಾ ಇರೋದು ಧ್ವಜ!" ಎರಡನೆಯವನು ಅದನ್ನು ಅಲ್ಲಗಳೆಯುತ್ತ ಹೇಳಿದ, "ಅಲ್ಲ! ನಿಜವಾಗಿ ಹೊಡ್ಕೋತಾ ಇರೋದು ಗಾಳಿ!" ಅಲ್ಲೇ ಇದ್ದ ಇವರ ಗುರುಗಳು ಇವರಿಬ್ಬರ ಮಾತುಗಳಿಂದ ಕೋಪಗೊಂಡು ಗರ್ಜಿಸಿದರು, "ಅಲ್ಲ...! ಹೊಡ್ಕೋತಾ ಇರೋದು ನಿಮ್ಮಿಬ್ಬರ ನಾಲಿಗೆಗಳು!"

ನಾಲ್ವರು ಬೌದ್ಧ ಭಿಕ್ಷುಗಳು ತಮ್ಮ ಅಧ್ಯಯನದ ಭಾಗವಾಗಿ ಎರಡು ವಾರಗಳ ಮಟ್ಟಿಗೆ ಮೌನವ್ರತವನ್ನಾಚರಿಸಲು ನಿರ್ಧರಿಸಿದರು. ಮೊದಲನೇ ದಿನದ ಸಂಜೆ, ಅವರು ಹೊತ್ತಿಸಿಟ್ಟಿದ್ದ ದೀಪ ಗಾಳಿಯಿಂದಾಗಿ ತೊನೆದಾಡಲಾರಂಭಿಸಿ ನಂದಿಹೋಯಿತು. ತಕ್ಷಣ ಮೊದಲನೇ ಭಿಕ್ಷು ಹೇಳಿದ, "ಓಹ್! ದೀಪ ಆರಿ ಹೋಯಿತು!" ಎರಡನೆಯವನು ಕೇಳಿದ, "ನಾವು ಮೌನವ್ರತದಲ್ಲಿದ್ದೇವೆ, ಮಾತನಾಡಬಾರದಿತ್ತು ಅಲ್ವೇ?" ಮೂರನೆಯವನು ಸಿಟ್ಟಿನಿಂದ ನುಡಿದ, "ನೀವಿಬ್ರೂ ಮೌನ ಮುರಿದಿರಿ!" ಅದಕ್ಕೆ ನಾಲ್ಕನೆಯವನು ನಗುತ್ತಾ ಹೇಳಿದ, "ನಮ್ಮ ನಾಲ್ವರಲ್ಲಿ ನಾನೊಬ್ಬನೇ ನೋಡಿ ಮೌನವಾಗುಳಿದಿದ್ದು!"

ಚಕ್ರವರ್ತಿಯು ಒಮ್ಮೆ ಮಹಾಗುರು ಗುಡೋವನ್ನು ಕೇಳಿದ, "ಜ್ಞಾನೋದಯವಾದ ವ್ಯಕ್ತಿ ಸತ್ತಾಗ ಏನಾಗುತ್ತಾನೆ?"
ಗುಡೋ ಪ್ರಶ್ನಿಸಿದ, "ನನಗೆ ಹೇಗೆ ಗೊತ್ತಾಗಬೇಕು?"
"ಯಾಕೆಂದರೆ ತಾವು ಮಹಾಗುರುವು!"
ಚಕ್ರವರ್ತಿಯ ಮಾತಿಗೆ ಗುಡೋ ನಗುತ್ತ ನುಡಿದ, "ಹೌದು, ಆದರೆ ನಾನಿನ್ನೂ ಸತ್ತಿಲ್ಲವಲ್ಲ!"

ಯಾವುದೋ ಒಂದು ಸಮಾರಂಭದಲ್ಲಿ ಒಬ್ಬ ಝೆನ್ ಗುರುವನ್ನು ಭೇಟಿಯಾದ ಮನಶಾಸ್ತ್ರಜ್ಞನೊಬ್ಬ ತನ್ನೊಳಗೆ ಬಹಳ ದಿನದಿಂದ ಕಾಡುತ್ತಿದ್ದ ಪ್ರಶ್ನೆಯೊಂದನ್ನು ಕೇಳಿದ, "ನಿಜವಾಗಿ, ನೀವು ಜನರಿಗೆ ಹೇಗೆ ಸಹಾಯ ಮಾಡ್ತೀರಿ?"
ಝೆನ್ ಗುರು ನಗುತ್ತ ಉತ್ತರಿಸಿದ, "ನಾನು, ಅವರನ್ನು ಯಾವ ಪ್ರಶ್ನೆಯನ್ನೂ ಕೇಳಲಾಗದ ಸ್ಥಿತಿಗೆ ಕರೆದೊಯ್ಯುತ್ತೇನೆ!"

ಒಂದಾನೊಂದು ಕಾಲದಲ್ಲಿ ಪಂಡಿತೋತ್ತಮನಾದ ತತ್ವಜ್ಞಾನಿಯೊಬ್ಬನಿದ್ದ. ಅವನು ತನ್ನಿಡೀ ಜೀವನವನ್ನು ಝೆನ್‌ನ ಅಧ್ಯಯನಕ್ಕೋಸ್ಕರ ಮೀಸಲಿಟ್ಟಿದ್ದ. ಕೊನೆಗೂ ಅವನಿಗೆ ಝೆನ್ ಜ್ಞಾನೋದಯವಾಯಿತು. ಅಂದು ಅವನು ತಾನು ಅಭ್ಯಸಿಸಿದ ಎಲ್ಲ ಪುಸ್ತಕಗಳನ್ನೂ ತನ್ನ ಅಂಗಳಕ್ಕೆ ಹೊತ್ತೊಯ್ದು ರಾಶಿ ಹಾಕಿ ಸುಟ್ಟುಹಾಕಿದ!

ಹೊಸದಾಗಿ ಮಠ ಸೇರಿದ್ದ ಬೌದ್ಧ ವಟುವೊಬ್ಬ ತನ್ನ ಗುರುವನ್ನು ಕೇಳಿದ, "ಅಧ್ಯಯನಕ್ಕೆ ನಾನು ಹೇಗೆ ತಯ್ಯಾರಾಗಬೇಕು?" ಗುರುವು ಉತ್ತರಿಸಿದ, "ನನ್ನನ್ನೊಂದು ಗಂಟೆಯೆಂದುಕೋ. ಮೆಲ್ಲನೆ ತಟ್ಟಿದರೆ ಮೆತ್ತಗೆ ರಿಂಗಣಿಸುತ್ತೇನೆ, ಜೋರಾಗಿ ಹೊಡೆದು ನೋಡು, ದೊಡ್ಡದಾದ ಘಂಟಾಘೋಷವಾಗುತ್ತೇನೆ!"

ಸುಪ್ರಸಿದ್ದ ತಾವೋ ಮಹಾಗುರು ಚುಅಂಗ್ ಜು ನಿದ್ದೆಯಲ್ಲಿ ಒಂದು ಕನಸು ಕಂಡ. ಆ ಕನಸಿನಲ್ಲಿ ಅವನೊಂದು ಚಿಟ್ಟೆಯಾಗಿದ್ದ. ತನ್ನೆಲ್ಲ ವ್ಯಕ್ತಿತ್ವದ ಕುರುಹೂ ಇಲ್ಲದೇ ಬರೀ ಚಿಟ್ಟೆಯಾಗಿ ಅಲ್ಲಿ ಇಲ್ಲಿ ಹಾರಾಡುತ್ತ, ನಲಿದಾಡುತ್ತಿದ್ದವನಿಗೆ ಎಚ್ಚರಾಯಿತು; ಮಲಗಿದ್ದ ತನ್ನ ವ್ಯಕ್ತಿತ್ವದ ಅರಿವಾಯಿತು. ಆದರೆ ಅವನು ಮತ್ತೆ ಯೋಚಿಸಿದ, "ನಾನು, ಚಿಟ್ಟೆಯಾದ ಹಾಗೆ ಕನಸು ಕಂಡ ಮನುಷ್ಯನೇ ಅಥವಾ ಈಗ ನಾನು ಮನುಷ್ಯನಾಗಿರುವಂತೆ ಕನಸು ಕಾಣುತ್ತಿರುವ ಚಿಟ್ಟೆಯೇ?"

ಒಂದು ದಿನ ಚುಅಂಗ್ ಜು ಮತ್ತು ಆತನ ಸ್ನೇಹಿತ ನದಿ ದಂಡೆಯ ಮೇಲೆ ನಡೆಯುತ್ತಿದ್ದರು. ಚುಅಂಗ್ ಹೇಳಿದ, "ಈ ನದಿಯೊಳಗೆ ಈಜಾಡುತ್ತಿರುವ ಮೀನುಗಳನ್ನು ನೋಡು, ಈಜಿಕೊಂಡು, ಮೋಜು ಮಾಡ್ತಾ ಖುಷಿಯಾಗಿವೆ!"
ಇದಕ್ಕೆ ಸ್ನೇಹಿತ ಆಕ್ಷೇಪಿಸಿದ, "ನೀನು ಮೀನಲ್ಲ! ಹಾಗಾಗಿ ನಿನಗೆ ನಿಜವಾಗ್ಯೂ ಇವು ಖುಷಿಯಾಗಿವೆಯೋ ಇಲ್ವೋ ಅಂತಾ ಗೊತ್ತಿರೋಕೆ ಸಾಧ್ಯವೇ ಇಲ್ಲ!" ಚುಅಂಗ್ ಮರುಸವಾಲೆಸೆದ, "ನೀನು ನಾನಲ್ಲ! ಹಾಗಾಗಿ ಮೀನುಗಳು ಖುಷಿಯಾಗಿವೆಯೋ ಇಲ್ವೋ ಅಂತಾ ನನಗೆ ನಿಜವಾಗಿ ಗೊತ್ತಿದಿಯೋ ಗೊತ್ತಿಲ್ವೋ ಅಂತಾ ನಿನಗೆ ಗೊತ್ತಿರೋಕೆ ಸಾಧ್ಯವೇ ಇಲ್ಲ!!"

ಎಲ್ಲ ಧರ್ಮಗಳನ್ನೂ ಅವುಗಳ ತಿರುಳನ್ನೂ ಓದಿ ಅಭ್ಯಸಿಸಿಕೊಂಡಿದ್ದ ಪಶ್ಟಿಮದ ವಿದ್ವಾಂಸನೊಬ್ಬ ಝೆನ್‌ನ ಬಗ್ಗೆ ತಿಳಿಯಬೇಕೆಂದುಕೊಂಡ. ಮೊದಲು ಝೆನ್ ಬಗ್ಗೆ ಇದ್ದ ಮಹಾನ್ ಗ್ರಂಥಗಳನ್ನೆಲ್ಲ ಓದಿ ತಿಳಿದುಕೊಂಡು, ನಂತರ ಬೌದ್ಧ ಮಠವೊಂದಕ್ಕೆ ಭೇಟಿಯಿತ್ತು ಅಲ್ಲಿ ಧರ್ಮಗುರುವಿನ ಮೂಲಕ ಇನ್ನಷ್ಟು ಅಭ್ಯಸಿಸಬೇಕು ಎಂದುಕೊಂಡ. ಕೊನೆಗೆ ಅವನು ಬಂದು ಗುರು ಚುಅಂಗ್ ಜು ವನ್ನು ಭೇಟಿಯಾಗಿ, ತನ್ನ ಇಂಗಿತವನ್ನೂ, ತನ್ನ ಅಭ್ಯಾಸಕ್ಕಾಗಿ ಮಾಡಿಕೊಂಡಿದ್ದ ಸಿದ್ಧತೆಗಳನ್ನೂ ಹೇಳಿಕೊಂಡ. ಗುರು ಜು ಬಂದ ವಿದ್ವಾಂಸನನ್ನು ಉಪಚರಿಸುತ್ತ, ಅವನ ಮುಂದಕ್ಕೊಂದು ಚಹಾದ ಬಟ್ಟಲನಿಟ್ಟು ಚಹಾ ಸುರಿಯಲಾರಂಭಿಸಿದ. ಬಟ್ಟಲು ಅರ್ಧವಾಗಿ ಮುಕ್ಕಾಲಾಗಿ ತುಂಬಿಯೇ ಬಿಟ್ಟಿತು. ಆದರೂ ಜು ಚಹಾ ಸುರಿಯುವುದನ್ನು ನಿಲ್ಲಿಸಲಿಲ್ಲ. ಇದನ್ನೆಲ್ಲ ನೋಡುತ್ತಿದ್ದ ವಿದ್ವಾಂಸ ಉದ್ಗರಿಸಿದ, "ಏನು ಮಾಡ್ತಾ ಇದ್ದೀರಿ ತಾವು? ಚಹಾದ ಬಟ್ಟಲು ತುಂಬಿದೆ, ನೀವು ಸುರಿದ ಚಹಾ ಹೊರಕ್ಕೆ ಚೆಲ್ಲುತ್ತಿದೆ!" ನಸುನಕ್ಕು ಚುಅಂಗ್ ಜು ಉತ್ತರಿಸಿದ, "ನೀನೂ ಈ ಚಹಾದ ಬಟ್ಟಲ ರೀತಿಯೇ! ಇಲ್ಲಿಗೆ ಬರುವ ಮೊದಲೇ ಝೆನ್ ಬಗ್ಗೆಗೆಲ್ಲ ನಿನಗೆ ತಿಳಿದಂತೆಯೇ ತಲೆಗೆ ತುಂಬಿಕೊಂಡು ಬಂದಿದೀಯಾ. ಈಗ ನಾನು ಕೊಡುವ ಜ್ಞಾನವೆಲ್ಲ ಈ ಹೊರಚೆಲ್ಲಿದ ಚಹಾದಂತೆ ಪೋಲಾಗುತ್ತದೆ. ನಿನ್ನಾತ್ಮವೂ, ತಲೆಯೂ ಝೆನ್‌ನ ಬಗ್ಗೆ ಯಾವುದೇ ಪೂರ್ವನಿರ್ಧಾರಿತ ಆಲೋಚನೆಗಳಿಂದ ಮುಕ್ತವಾಗಿದ್ದರೆ ತಾನೇ ನಾನು ನಿನಗೆ ನಿಜವಾದ ಝೆನ್‌ನ ದರ್ಶನ ಮಾಡಿಸಲಿಕ್ಕಾಗುವುದು?!"

ಒಂದಾನೊಂದು ಕಾಲದಲ್ಲಿ ಕಲ್ಲು ಕುಂಚಟಿಗನೊಬ್ಬನಿದ್ದ. ಅವನಿಗೆ ತನ್ನ ಬಗ್ಗೆ, ಸಮಾಜದಲ್ಲಿ ತನ್ನ ಸ್ಥಿತಿಗತಿಯ ಬಗ್ಗೆ ತುಂಬ ಅಸಮಧಾನವಿತ್ತು. ಒಂದು ದಿನ ಅವನು ಊರಿನ ಅತಿದೊಡ್ಡ ಸಿರಿವಂತನೊಬ್ಬನ ಮನೆಯ ಮುಂದೆ ಹಾದುಹೋಗುತ್ತಿದ್ದ. ತೆರೆದಿದ್ದ ಹೆಬ್ಬಾಗಿಲಿನಿಂದ ಅವನು ಅವನು ಆ ಸಿರಿವಂತನ ಶ್ರೀಮಂತಿಕೆಯನ್ನೂ, ಅವನನ್ನು ನೋಡಲು ಬಂದಿದ್ದ ಇತರೇ ವ್ಯಕ್ತಿಗಳನ್ನು ನೋಡಿ ತನ್ನ ಸ್ಥಿತಿಯ ಬಗ್ಗೆ ಹಳಿದುಕೊಂಡ, "ಎಷ್ಟು ಪ್ರಭಾವಿ ಇರಬಹುದು ಈ ಸಿರಿವಂತ? ನಾನಾದರೂ ಇವನಾಗಿದ್ದಿದ್ದರೆ?!"
ಏನಾಶ್ಚರ್ಯ! ಥಟ್ಟನೆ ಅವನೊಬ್ಬ ಅತೀ ದೊಡ್ಡ ಹಾಗೂ ಪ್ರಭಾವಿ ಸಿರಿವಂತನಾಗಿ ಬದಲಾಗಿದ್ದ. ಅವನೆಣಿಕೆಗೂ ಮೀರಿದ ಸಿರಿ ಸಂಪತ್ತು, ವೈಭೋಗಗಳನ್ನು ಅನುಭವಿಸುತ್ತ, ಜೊತೆಗೆ ಇವನಂತೆಯೇ ಇದ್ದ ಇತರ ಸಿರಿವಂತರ ದ್ವೇಷಾಸೂಯೆಗಳಿಗೂ ಪಕ್ಕಾಗಿ ಜೀವಿಸುತ್ತಿದ್ದ.
ಹೀಗಿರಲಾಗಿ ಒಂದುದಿನ, ಅವನಿದ್ದ ಊರಿನ ಮೂಲಕ ಆ ಪ್ರಾಂತ್ಯದ ದೀವಾನನೊಬ್ಬನ ಕ್ಯಾರವಾನ್ ಹಾದುಹೋಯಿತು. ಆ ದೀವಾನನ ಸಿರಿವಂತಿಕೆ, ಅವನ ಹಿಂದೆ-ಮುಂದಿದ್ದ ಸೇವಕರು, ಅವನು ಏರಿ ಬರುತ್ತಿದ್ದ ಮೇಣೆ, ಎಲ್ಲರೂ ಅವನಿಗೆ ಕೊಡುತ್ತಿದ್ದ ನಜರು-ಮುಜರೆಯೆಲ್ಲವನ್ನೂ ನೋಡಿ ಈ ಸಿರಿವಂತ ಮತ್ತೆ ಕರುಬಿದ, "ಎಷ್ಟೊಂದು ಶಕ್ತಿಶಾಲಿಯಿರಬಹುದು, ಈ ದೀವಾನ! ಈ ಸಿರಿವಂತಿಕೆಯೆಲ್ಲ ಇವನಿಗಿರುವ ಪ್ರಭಾವ, ದರ್ಪದ ಮುಂದೆ ನಗಣ್ಯ! ನಾನಾದರೂ ಈ ದೀವಾನನಾಗಿದ್ದಿದ್ದರೇ?!"
ಮತ್ತೆ ಅವನಿಗೇ ಅಚ್ಚರಿಯಾಗಿರುವಂತೆ ಅವನು ದೀವಾನನಾಗಿ ಬದಲಾಗಿದ್ದ. ಉಳಿದೆಲ್ಲ ಶ್ರೀಮಂತರ ಕಣ್ಣುರಿಗೆ ಗುರಿಯಾಗಿ, ವೈಭವೋಪೇತ ಜೀವನ ನಡೆಸಲಾರಂಭಿಸಿದ. ಒಮ್ಮೆ, ಹೀಗೇ ತನ್ನ ವಂದಿಮಾಗಧರೊಂದಿಗೆ ಸಾಲಂಕೃತ ಮೇಣೆಯೊಳಗೆ ಕುಳಿತು ಬೇರ್ಯಾವುದೋ ಊರಿಗೆ ಮೆರವಣಿಗೆ ಹೊರಟಿದ್ದ. ಮಾರ್ಗಮಧ್ಯೆ ಅವನಿಗೆ ತುಂಬಾ ಆಯಾಸವಾಯಿತು. ಮೇಣೆಯೊಳಗೆ ಕುಳಿತು, ಬಿಸಿಲಿಗೆ ಬೆವರುತ್ತ ಆಕಾಶದೆಡೆಗೆ ನೋಡಿದ. ಬೇಸಗೆಯ ಸೂರ್ಯ ಕರುಣೆಯಿಲ್ಲದೇ, ದೀವಾನ-ಜವಾನನ ವ್ಯತ್ಯಾಸವಿಲ್ಲದೇ ಎಲ್ಲರನ್ನೂ, ಎಲ್ಲವನ್ನೂ ತನ್ನ ಶಾಖದಿಂದ ಸುಡುತ್ತಿದ್ದ. ಆ ಸೂರ್ಯನನ್ನು ನೋಡುತ್ತಲೇ ಈ ದೀವಾನನಿಗೆ ತನ್ನ ದೈನೇಸೀ ಸ್ಥಿತಿಯ ಅರಿವಾಯಿತು. ಭೂಮಿ ಮೇಲೆ ಏನೆಲ್ಲ ಆಗಿದ್ದರೂ ಈ ಸೂರ್ಯನ ಮುಂದೆ ನಾವೆಲ್ಲ ಕಾಲಕಸದ ಸಮ ಎಂದು ಹಳಿದುಕೊಳ್ಳುತ್ತ, "ನಾನಾದರೂ ಈ ಸೂರ್ಯನಾಗಿದ್ದಿದ್ದರೇ?" ಎಂದುಕೊಂಡ ಮತ್ತು ಮರುಕ್ಷಣವೇ ಅವನು ಸೂರ್ಯನಾಗಿ ಬದಲಾಗಿದ್ದ.
ಹೀಗೆ ಸೂರ್ಯನಾಗಿ ಉರಿಯುತ್ತ, ಭೂಮಿಯ ಮೇಲಿರುವ ಸಕಲ ಚರಾಚರ ಜೀವರಾಶಿಗಳನ್ನೂ ತನ್ನ ಬಿಸಿಲಿನಿಂದ ದಣಿಸುತ್ತ, ಸುಡುತ್ತ, ಅವರೆಲ್ಲರ ಕೋಪ-ಶಾಪ-ತಾಪಗಳಿಗೆ ಗುರಿಯಾಗುತ್ತ ಬಹುಗರ್ವದಲ್ಲಿ ಇರಲಾಗಿ ಒಂದುದಿನ ಅವನ ಮುಂದೆ ದೊಡ್ಡದಾದ ಮೋಡವೊಂದು ಅಡ್ಡ ಬಂತು. ಇವನು ಗರ್ವದಿಂದ ತನ್ನ ಬಿಸಿಲಿನಿಂದ ಮೋಡವನ್ನು ಕರಗಿಸಿಯೇ ಬಿಡುತ್ತೇನೆ ಎಂದುಕೊಂಡು ತನ್ನ ಪ್ರಖರವಾದ ಕಿರಣಗಳನ್ನು ಚೆಲ್ಲಿದ. ಏನೇ ಮಾಡಿದರೂ ಅವನಿಗೆ ತನಗೂ ಭೂಮಿಗೂ ಅಡ್ಡಲಾಗಿದ್ದ ಆ ಬೃಹದ್-ಮೋಡವನ್ನು ಕರಗಿಸಲಾಗಲಿಲ್ಲ. ಅವನು ತನ್ನ ದೀನ ಸ್ಥಿತಿಗೆ ತಾನೇ ನಾಚಿಕೆಪಟ್ಟುಕೊಳ್ಳುತ್ತ, "ಆದರೆ ಈ ಮೋಡವಾಗಬೇಕು ನಾನು! ಸೂರ್ಯನ ಬಿಸಿಲೂ ಇದನ್ನು ಕರಗಿಸಲಾಗದಲ್ಲ!" ಎಂದುಕೊಂಡ ಮತ್ತು ತಾನು ಬಯಸಿದಂತೆಯೇ ದೊಡ್ಡದಾದ ಕಾರ್ಮೋಡವಾಗಿ ಬದಲಾಗಿದ್ದ.
ತಾನು ಕಾರ್ಮೋಡವಾಗಿ, ಎಲ್ಲೆಡೆ ಸಂಚರಿಸುತ್ತ ಇರಲಾಗಿ ಅವನಿಗೆ ತನ್ನ ಹೊಸ ಕೊರತೆಯ ಅರಿವಾಯಿತು. ಅವನು ಸೂರ್ಯನ ಬೆಳಕಿಗೂ ಜಗ್ಗದೇ ಎಲ್ಲೆಡೆ ಕಾರ್ಗತ್ತಲು ಕವಿಯುವಂತೆ ಮಾಡಿ, ಭೂಲೋಕದ ಜೀವಿಗಳಿಗೆ ರಾತ್ರಿಯ ಭ್ರಮೆಯನ್ನುಂಟುಮಾಡಿ ಖುಷಿ ಪಟ್ಟುಕೊಳ್ಳೂತ್ತಿದ್ದುದ್ದೇನೋ ನಿಜ, ಆದರೆ ಅವನನ್ನು ಗಾಳಿಯು ಯಾವಾಗ ಬೇಕಂದರೆ ಆವಾಗ ಹಾರಿಸಿಕೊಂಡು ಹೋಗಿಬಿಡುತ್ತಿತ್ತು. ಅವನು ಇಷ್ಟಪಟ್ಟ ಕಡೆ ಇರಲು ಬಿಡದೇ ತನ್ನ ಬಲದಿಂದ ಗಾಳಿಯು ತನಗೆ ಬೇಕಾದಲ್ಲಿಗೆ ಒಯ್ದುಬಿಡುತ್ತಿತ್ತು. ಗಾಳಿಯ ಆಟಾಟೋಪದಿಂದ ಬೇಸತ್ತ ಮೋಡವಾಗಿದ್ದವನು ಕೊನೆಗೂ "ಆದರೆ ಈ ಗಾಳಿಯಾಗಬೇಕು!" ಎಂದುಕೊಂಡನು, ಮತ್ತು ಹೆಚ್ಚಿನ ಸಾವಕಾಶವಿಲ್ಲದೇ ತಾನು ಗಾಳಿಯಾಗಿ ಬದಲಾದನು!
ಅವನು ಗಾಳಿಯಾಗಿ ಭೂಮಿಯ ಮೇಲಿದ್ದ ಎಲ್ಲವನ್ನೂ ಹಾರಿಸಿಕೊಂಡು ಹೋಗುತ್ತ, ಮರಗಿಡಗಳೆಡೆಯಿಂದ ಸುಳಿದಾಡುತ್ತ, ಒಣಹಾಕಿದ್ದ ಬಟ್ಟೆಗಳನ್ನೆಲ್ಲ ಬೀಳಿಸುತ್ತ, ಇತರ ಮೋಡಗಳನ್ನು ತನಗೆ ಬೇಕಾದಲ್ಲಿಗೆ ಸೆಳೆದೊಯ್ಯುತ್ತ ಖುಷಿಯಾಗಿದ್ದನು. ಒಂದು ದಿನ ಹೀಗೇ ಜೋರಾಗಿ ಬೀಸುತ್ತಿರಲಾಗಿ ಪರ್ವತದ ತುದಿಯಲ್ಲಿದ್ದ ಕೋಡುಗಲ್ಲೊಂದಕ್ಕೆ ಢೀ ಕೊಟ್ಟನು. ತನ್ನ ರಭಸಕ್ಕೂ ವೇಗಕ್ಕೂ ಅಲುಗದೇ ಎದೆಯೆತ್ತಿ ನಿಂತಿದ್ದ ಆ ಕೋಡುಗಲ್ಲನ್ನು ಕಂಡು ಗರ್ವಭಂಗವಾಗಿ ಅವನು ತನ್ನೆಲ್ಲ ಮಾರುತ-ಶಕ್ತಿಯನ್ನು ಬಿಟ್ಟು ತಳ್ಳಿದನು, ದೂಡಿದನು, ಗುದ್ದಿದನು, ಏನೇ ಆದರೂ ಅವನಿಂದ ಆ ಕೋಡುಗಲ್ಲನ್ನು ಇನಿತೂ ಅಲುಗಾಡಿಸಲಾಗಲಿಲ್ಲ. ಕೊನೆಗೂ ಸೋತು, "ಛೇ! ನನಗಿಂತ ಈ ಕೋಡುಗಲ್ಲೇ ಶಕ್ತಿಯುಳ್ಳದ್ದು ಅನ್ನೋದಾದ್ರೆ ನಾನು ಈ ಕೋಡುಗಲ್ಲಾದ್ರೆ ಎಷ್ಟು ಚೆಂದ!" ಎಂದು ಹಂಬಲಿಸಿದನು. ಮತ್ತೆ ಎಂದಿನಂತೆ ತಾನೊಂದು ಬಲಶಾಲಿಯಾದ ಬೃಹತ್ತಾದ ಕೋಡುಗಲ್ಲಾಗಿ ಬದಲಾಗಿದ್ದನು.
ಹೀಗೇ ವರ್ಷಗಳುರುಳಿದವು. ಆ ಕೋಡುಗಲ್ಲು ಬಿಸಿಲಿಗೂ, ಗಾಳಿ, ಮಳೆಗೂ ಅಂಜದೇ ಅದುರದೇ ಬಲವಾಗಿ ಪರ್ವತದ ತುದಿಯಲ್ಲಿ ನಿಂತಿತ್ತು. ಒಂದುದಿನ ಬೆಳಿಗ್ಗೆ ಅವನಿಗೆ ತನ್ನ ಮೈಯಲ್ಲಿ ನೋವುಂಟಾದಂತಾಗಿ ಎಚ್ಚರಾಯಿತು. ಯಾರೋ ತನ್ನನ್ನು ಹೊಡೆದು-ಬಡೆದು ಮಾಡುತ್ತಿರುವುದು ತಿಳಿದುಬಂದು, "ಯಾರಪ್ಪಾ, ಇದು ನನ್ನಂತಹ ಬಲಿಷ್ಠನಿಗೇ ನೋವು ಕೊಡುತ್ತಿರುವವರು?" ಎಂದುಕೊಂಡು ನೋಡಿದದವನಿಗೆ ತನ್ನ ಕಲ್ಲು-ಮೈಯನ್ನು ತನ್ನ ಉಳಿಯಿಂದ ಕಡಿಯುತ್ತ, ಕೆತ್ತುತ್ತಿದ್ದ ಕಲ್ಲು-ಕುಂಚಟಿಗನೊಬ್ಬ ಕಾಣಿಸಿದನು!

ನನ್ನ ಲೇಹ್-ಲದ್ಧಾಕ್ ಪ್ರವಾಸ ಕಥನದ ಭಾಗವಾಗಿ ಈ ಝೆನ್ ಕತೆಗಳನ್ನು ನಾನು ಅಂತರ್ಜಾಲದ ಬೇರೆ ಬೇರೆ ತಾಣಗಳಿಂದ ಹೆಕ್ಕಿ, ಓದಿ, ಭಾವಾನುವಾದ ಮಾಡಿದ್ದೇನೆ. ನೀವೂ ಈ ಕತೆಗಳಲ್ಲಿ ಕೆಲವನ್ನಾದರೂ ಒಂದಲ್ಲಾ ಒಂದು ರೂಪಿನಲ್ಲಿ ತಿಳಿದುಕೊಂಡಿರಲಿಕ್ಕೂ ಸಾಕು. ಸಾಮತಿಗಳಂತೆ ಇರುವ ಈ ಕತೆಗಳು ಬೌದ್ಧಧರ್ಮದ ಹೊಳವನ್ನೂ, ದೇವರು, ಧರ್ಮ, ಮುಕ್ತಿ, ಗುರು, ಶಿಷ್ಯ ಮುಂತಾದ ವಿಷಯಗಳನ್ನೂ, ಜೀವನದರ್ಶನವನ್ನೂ ತುಂಬಾ ಚುರುಕಾಗಿ, ಮೊನಚಾಗಿ ಪರಿಚಯ ಮಾಡಿಕೊಡುತ್ತವೆ. ಅಂತರ್ಜಾಲದಲ್ಲಿ ಸಿಕ್ಕ ಸಾವಿರಾರು ಸಣ್ಣ ಕತೆಗಳಲ್ಲಿ ನಿಮಗೆ ಸುಲಭವಾಗಿ ಅರ್ಥವಾಗುವಂಥವುಗಳನ್ನು(!) ಮಾತ್ರ ನಾನಿಲ್ಲಿ ಅನುವಾದಿಸಿದ್ದೇನೆ. ಇವನ್ನು ಓದಿ ನೀವು ಇನ್ನಷ್ಟು ಕುತೂಹಲಿಗಳಾದರೆ ನಿಮಗಾಗಿಯೇ, ನಿಮ್ಮ ಓದಿಗಾಗಿಯೇ ಅಂತರ್ಜಾಲವುಂಟು, (ನನ್ನ ಮೆಚ್ಚಿನ ತಾಣ) ವಿಕಿಪಿಡಿಯಾ ಕೂಡಾ ಉಂಟು!

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/09/2009 - 12:39

ಜೆನ ಕತೆಗಳು ಬಾರತಿಯರಿಗೆ ಹೊಸತು ಅನ್ನಿಸುವುದಿಲ್ಲ.ಇಂತಾ ಅನೇಕ ಕತೆಗಳು ನಮ್ಮಲ್ಲಿ ಇವೆ.ದೇಸಿ ಆಕಳ ಹಾಲು ರುಚಿಯೋ,ಜರ್ಸಿ ಆಕಳ ಹಾಲು ರುಚಿಯೋ? ಕುಡಿಯವರಿಗೆ ಬಿಡೋಣ.ನಿಮ್ಮ ಪ್ರಯತ್ನಕ್ಕೆ ನನ್ನ ಬೆಂಬಲವಿದೆ.

Viji (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 02/05/2011 - 16:35

ಕಥೆಗಳು ತುಂಬಾ ಚೆನ್ನಾಗಿವೆ........ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.