Skip to main content

ಮತ್ತೇರಿಸುವ ಮುತ್ತು

ಇಂದ hisushrutha
ಬರೆದಿದ್ದುApril 17, 2007
1ಅನಿಸಿಕೆ

ಶಿಲ್ಪಾ ಶೆಟ್ಟಿಗೆ ರಿಚರ್ಡ್ ಗೇರ್ ಮೊನ್ನೆ ಮುತ್ತು ಕೊಟ್ಟಿದ್ದು ಇವತ್ತಿನ ಪೇಪರುಗಳಲ್ಲಿ ದೊಡ್ಡ ಸುದ್ದಿ. ಸಿಟ್ಟಿಗೆದ್ದ ಶಿಲ್ಪಾ ಅಭಿಮಾನಿಗಳು ಅವಳ ಪೋಸ್ಟರುಗಳಿಗೆ ಬೆಂಕಿಯಿಡುತ್ತಿರುವ ಚಿತ್ರಗಳು. ರಿಚರ್ಡ್ ಗೇರ್ ವಿರುದ್ಧ ಕೂಗುತ್ತಿರುವ ಘೋಷಣೆಯ ಸದ್ದೂ ಇದೆ ಪೇಪರಿನಲ್ಲಿ. 'ಗೇರ್ ತನ್ನ ಈ ಹೊಲಸು ವರ್ತನೆಗಾಗಿ ಕ್ಷಮೆ ಕೋರಬೇಕು; ಇಲ್ಲವೇ ತಕ್ಷಣ ಭಾರತ ಬಿಟ್ಟು ತೊಲಗಬೇಕು' ಎಂದು ಪ್ರತಿಭಟನಾಕಾರರು ಕೂಗಾಡುತ್ತಿದ್ದಾರೆ. ಈ ಸುದ್ದಿಯನ್ನು ವೈಭವೀಕರಿಸಿ ಬರೆಯುತ್ತಿರುವ ಮೀಡಿಯಾದ ಮೇಲೆ ಶಿಲ್ಪಾ ಸಿಟ್ಟಾಗಿದ್ದಾಳೆ. 'ಇಂಥಾ ಸುದ್ದಿಯನ್ನೆಲ್ಲಾ ದೊಡ್ಡದು ಮಾಡಿದರೆ ನಾವು ವಿದೇಶಿಯರ ದೃಷ್ಟಿಯಲ್ಲಿ ಸಣ್ಣವರಾಗುತ್ತೀವಿ' ಎಂದು ಅಲವತ್ತುಕೊಂಡಿದ್ದಾಳೆ. ಒಂದು ಮುತ್ತನ್ನು ಅರಗಿಸಿಕೊಳ್ಳಲು ಅವಳು ಪಡುತ್ತಿರುವ ಪಾಡು ನೋಡಿದರೆ ಬೇಸರವಾಗುತ್ತದೆ.

ಆದರೆ ನನ್ನ ಆಶ್ಚರ್ಯ ಏನೆಂದರೆ, ಮುತ್ತು ಪಡೆವಾಗ ಆದ ರೋಮಾಂಚನವನ್ನು ಶಿಲ್ಪಾ ಎಲ್ಲೂ ಹೇಳಿಕೊಂಡಿಲ್ಲ. ಗೇರ್ ನಂತಹ ಗೇರ್. ಜಗತ್ತಿನ ಅತ್ಯಂತ 'ಸೆಕ್ಸಿ ಮ್ಯಾನ್' ಎಂಬ ಖ್ಯಾತಿಯ ಗೇರ್. ಶ್ರೀಮಂತ ಹಾಲಿವುಡ್ ನಟ ಗೇರ್. ಆತ ಕೊಟ್ಟ ಮುತ್ತು ಶಿಲ್ಪಾಗೆ ಯಾವ ರೀತಿಯ ಖುಷಿಯನ್ನು ಕೊಟ್ಟಿರಬಹುದು? ಸಿನಿಮಾಗಳಲ್ಲಿ ಅಭಿನಯಿಸುವಾಗ ಇಂತಹ ಎಷ್ಟೋ ಮುತ್ತೆತ್ತಿರಾಯರಿಂದ ಮುತ್ತು ಕೊಡಿಸಿಕೊಳ್ಳುವ ಶಿಲ್ಪಾಗೆ ಇದು ಏನೂ ಅನ್ನಿಸಲಿಲ್ಲವೇ? ಅದು ಹೇಗೆ ಸಾಧ್ಯ? ಒಂದು ಮುತ್ತು.. ಅಚಾನಕ್ಕಾಗಿ ಪಡೆದ ಒಂದು ಚುಂಬನ.. ಹುಡುಗಿ ಶಿಲ್ಪಾಳಲ್ಲಿ ಒಂದು ಮಧುರ ಅಲೆ ಎಬ್ಬಿಸಲಿಲ್ಲವೇ? ಆಕೆಯ ರಾತ್ರಿಯ ಅಂದಿನ ಕನಸಿನಲ್ಲಿ ಗೇರ್ ಬರಲಿಲ್ಲವೇ? ಗೇರ್‌ನ ಮುತ್ತು ಸಹ ಮತ್ತು ತರಿಸುವುದಿಲ್ಲವೆಂದರೆ ಹುಡುಗಿಯರು ಇನ್ನು ಯಾರ ಮೊರೆ ಹೋಗಬೇಕು?

ಹೋಗಲಿ, ಚುಂಬಿಸುವಾಗ ತುಟಿಗಂಟಿದ ಶಿಲ್ಪಾಳ ಮುಖದ ಕ್ರೀಮು, ಪೌಡರು, ಎಟ್ಸೆಟ್ರಾ.. ಗೇರ್‌ನನ್ನು ಕಾಡುತ್ತಿಲ್ಲವೇ? ಬಾಗಿದಾಗ ಮೈಗಂಟಿದ ಅವಳ ಸೀರೆಯ ಅತ್ತರು ರಿಚರ್ಡ್‌ನ ಧೃತಿಯನ್ನು ಸ್ವಲ್ಪವಾದರೂ ಕೆಡಿಸಲಿಲ್ಲವೇ?

ಈ ಪ್ರಶ್ನೆಗಳಿಗೆ ಉತ್ತರ 'ಇಲ್ಲ' ಎಂಬುದಾದರೆ ಅದು ಸುಳ್ಳು. ಸುಳ್ಳಲ್ಲ; ಅದು ಸತ್ಯ ಎಂದಾದರೆ ನಾವೆಲ್ಲಾ ಸಿನಿಮಾ ನೋಡಿ, ನಮ್ಮ ಪ್ರೀತಿಯ ನಟ-ನಟಿಯರನ್ನು ನೋಡಿ ಕಲ್ಪಿಸಿಕೊಳ್ಳುವ ಮಧುರ ಆಲೋಚನೆಗಳಿಗೆ ಅರ್ಥವೆಲ್ಲಿದೆ? ಎಲ್ಲಾ ಕನ್ನಡಿಯೊಳಗಿನ ಗಂಟು ಎಂದಾಯ್ತಲ್ಲಾ?

* * *

ಒಂದ್ಸಲ ನಮ್ಮನೆ ಆಳು ಗುತ್ಯಪ್ಪ ಹೇಳ್ತಿದ್ದ: ಪಕ್ಕದ ಊರಿನ ರಾಯರ ಮನೆಗೆ ಅವನು ಕೆಲಸಕ್ಕೆ ಹೋಗಿದ್ನಂತೆ. ಅವತ್ತು ಭಾನುವಾರ. ಟೀವಿಯಲ್ಲಿ ಯಾವುದೋ ಪಿಚ್ಚರ್ ಬರುತ್ತಿತ್ತು. ತುಂಬಾ ಜನ ಕುಳಿತು ಪಿಚ್ಚರ್ ನೋಡುತ್ತಿದ್ದರು. ರಾಯರ ಮಗಳೂ ಇದ್ದಳಂತೆ. ಸಿನಿಮಾದ ಮಧ್ಯೆ ಹೀರೋ ಹೀರೋಯಿನ್ನಿಗೆ ಮುತ್ತು ಕೊಡುವ ಸೀನ್ ಬಂತಂತೆ. ಅವಾಗ ರಾಯರ ಮಗಳು 'ಅಯ್ಯೋ! ಅದು ಹೆಂಗೆ ಮುತ್ತು ಕೊಡಿಸಿಕೊಳ್ತಾರೇನೋ! ನಮಗಾದ್ರೆ ಒಂಥರಾ ಆಗೊತ್ತಪ್ಪ. ನಾಚ್ಕೆ ಆಗುತ್ತೆ!' ಅಂದಳಂತೆ! ಜನ ಎಲ್ಲ ಮುಸಿಮುಸಿ ನಕ್ಕರಂತೆ. ನಮ್ಮನೆ ಆಳು ಗುತ್ಯಪ್ಪನ ಪ್ರಕಾರ 'ರಾಯರ ಮಗಳು ಹಂಗೆ ಹೇಳಿದ್ಲು ಅಂದಮೇಲೆ ಅವಳಿಗೆ ಮುತ್ತು ಕೊಡಿಸಿಕೊಂಡು ಗೊತ್ತಿರಬೇಕಲ್ಲವೇ?! ಅವಳು ಸಾಮಾನ್ಯದವಳಲ್ಲ! ಸಿಕ್ಕಾಪಟೆ ಜೋರಿದಾಳೆ!' ಗುತ್ಯಪ್ಪನ ಮಾತಿಗೆ ಅವನ ಯೋಚನಾಲಹರಿಗೆ ನಾನು ತಲೆದೂಗಿದ್ದೇನು ಸುಳ್ಳಲ್ಲ.

* * *

ಮುತ್ತಿನ ಬಗ್ಗೆ ಮತ್ತಷ್ಟು ಹುಡುಕಿದಾಗ ಕೆಲವು ಆಸಕ್ತಿಕರ ವಿಷಯಗಳು ದೊರಕಿದವು. ಒಬ್ಬ ಅವರೇಜ್ ಮನುಷ್ಯ ತನ್ನಾಯಸ್ಸಿನ ೨೦,೧೬೦ ನಿಮಿಷಗಳನ್ನು ಮುತ್ತು ಕೊಡುವುದರಲ್ಲಿ ಕಳೆಯುತ್ತಾನಂತೆ! ಒಂದು ನಿಮಿಷದ ಚುಂಬನಕ್ಕೆ ೨೬ ಕ್ಯಾಲೋರಿಯಷ್ಟು ಶಕ್ತಿ ವ್ಯಯವಾಗುತ್ತದಂತೆ. ಪ್ರಪಂಚದ ಐವತ್ತು ಪ್ರತಿಶತಕ್ಕೂ ಹೆಚ್ಚು ಜನ ತಮ್ಮ ಹದಿನಾಲ್ಕನೇ ವಯಸ್ಸಿನ ಒಳಗೇ ಪ್ರಥಮ ಚುಂಬನದ ಅನುಭವ ಪಡೆದಿರುತ್ತಾರಂತೆ. (ಮಗುವಾಗಿದ್ದಾಗ ಪಡೆಯುವ 'ಪಪ್ಪಿ'ಯನ್ನೂ ಇದರಲ್ಲಿ ಸೇರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ!). ಮುತ್ತು ಕೊಡುವುದಕ್ಕೆ ಒಟ್ಟು ಮೂವತ್ನಾಲ್ಕು ಮೂಳೆಗಳು ಏಕಕಾಲದಲ್ಲಿ ಕೆಲಸ ಮಾಡಬೇಕಾಗುತ್ತದಂತೆ. ೧೮೯೬ರಲ್ಲಿ ಬಿಡುಗಡೆಯಾದ 'ದಿ ಕಿಸ್' ಅನ್ನೋ ಸಿನಿಮಾದಲ್ಲಿ ಮೊದಲ ಕಿಸ್ಸಿಂಗ್ ಸೀನ್ ತೋರಿಸಿದ್ದಂತೆ.

ಚುಂಬನದಿಂದ ಅನೇಕ ಲಾಭಗಳಿವೆ. ಮುತ್ತು ಕೊಟ್ಟುಕೊಳ್ಳುವುದರಿಂದ (ಕೊಟ್ಟು - ಕೊಳ್ಳುವುದು!) ಬಾಯಲ್ಲಿ ಲಾಲಾರಸ ಹೆಚ್ಚುತ್ತದಂತೆ. ಇದರಿಂದ ಹಲ್ಲುಗುಳಿ (tooth decay) ಆಗುವುದು ಕಮ್ಮಿಯಾಗುತ್ತದಂತೆ. ಮುತ್ತು ಕೊಡುವುದು ಟೆನ್ಷನ್ನನ್ನು ಕಮ್ಮಿ ಮಾಡುತ್ತದಂತೆ. (ಆದರೆ ಗೇರ್-ಶಿಲ್ಪಾ ಕೇಸಲ್ಲಿ ಇದು ಉಲ್ಟಾ ಆಯ್ತು; ಪಾಪ!). ಸುದೀರ್ಘ ಚುಂಬನ ದೇಹದ ತೂಕವನ್ನು ಕಮ್ಮಿ ಮಾಡುತ್ತದೆ ಎಂಬುದು ಇತ್ತೀಚಿನ ಶೋಧದಿಂದ ತಿಳಿದು ಬಂದಿದೆ. ಅದು ದೇಹದ 'ಫಿಟ್‌ನೆಸ್' ಕಾಯ್ದುಕೊಳ್ಳಲು ಸಹಾಯ ಮಾಡುತ್ತದಂತೆ.

ಮುತ್ತು ಸಾಮಾನ್ಯವಾಗಿ ಸಿಹಿಯಾಗಿರುತ್ತದೆ (ಅಂತೆ). ಕಹಿಮುತ್ತು ಅನ್ನೋ ಪದ ಬಳಕೆಯಲ್ಲಿದ್ದಂತಿಲ್ಲ. ತುಟಿಗೆ ತುಟಿ ಸೇರಿಸಿದರೆ ಅದು ಸ್ಮೂಚಿಂಗ್. ಕೆನ್ನೆಗೋ ಗಲ್ಲಕ್ಕೋ ಹಣೆಗೋ ಮತ್ತೆಲ್ಲಿಗೋ ಕೊಟ್ಟರೆ ಅದು ಬರೀ ಮುತ್ತು. ನಲ್ಲೆಯ ಮುತ್ತಿನಿಂದ ಮೈಮರೆಯುವ ನಲ್ಲ ಅವಳನ್ನು ಮದುವೆಯಾಗಿ ಆಮೇಲೆ ಪ್ರತಿದಿನವೂ ಅವಳಿಂದ ಮುತ್ತು-ರತ್ನದ ಬೇಡಿಕೆ ಸ್ವೀಕರಿಸುವ ಕಷ್ಟಕ್ಕೆ ಬೀಳುವುದು ತೀರಾ ಸಾಮಾನ್ಯ ಸಂಗತಿ.

ಮುತ್ತಿನಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಕೆಲವು:

* ಕೆನ್ನೆಗೆ ಮುತ್ತು (Cheek Kiss): ಸ್ನೇಹಕ್ಕಾಗಿ ಕೊಟ್ಟುಕೊಳ್ಳುವ ಸಾಮಾನ್ಯ ಮುತ್ತು. ಮೊದಲ ‘ಡೇಟ್’ ದಿನ ಈ ಮುತ್ತು ಕೊಟ್ಟುಕೊಳ್ಳುವುದು ಸಾಮಾನ್ಯ. ಸಂಗಾತಿಯ ಹೆಗಲ ಮೇಲೆ ಕೈ ಹಾಕಿ ಗಟ್ಟಿಯಾಗಿ ಕೆನ್ನೆಗೆ ಮುತ್ತೊತ್ತಬೇಕು.
* ಕಿವಿಗೆ ಮುತ್ತು (Earlobe Kiss): ಕಿವಿಯನ್ನು ಕಚ್ಚಿ (ಜೋರಾಗಲ್ಲಾರೀ!), ಚೀಪುವುದು! ಈ ಪ್ರಕ್ರಿಯೆಯಲ್ಲಿ ಜಾಸ್ತಿ ಶಬ್ದ ಮಾಡುವುದು ಅಪಾಯ. ಏಕೆಂದರೆ ನಿಮ್ಮ ಸಂಗಾತಿ ಕಿವುಡಾಗುವ ಸಂಭವವಿರುತ್ತದೆ!
* ಮೂಗು ಮರ್ದನ (Eskimo Kiss): ಇಬ್ಬರೂ ತುಂಬಾ ಹತ್ತಿರ ಬಂದು ಪರಸ್ಪರರ ಮೂಗನ್ನು (ಮೂಗಿನಿಂದಲೇ) ತಿಕ್ಕಾಡುವುದು. ಇದನ್ನೂ ಮುತ್ತಿನ ಪಟ್ಟಿಗೆ ಸೇರಿಸಿದ ಮಹಾನುಭಾವರು ಯಾರೋ ಗೊತ್ತಿಲ್ಲ.
* ಹಣೆಗೆ ಮುತ್ತು (Forehead Kiss): ‘ಮದರ್ಲಿ ಕಿಸ್’ ಎಂದು ಜನಜನಿತವಾದ ಇದು ಕೇವಲ ಸ್ನೇಹದ ದ್ಯೋತಕ. ಈ ಮುತ್ತು ‘ಮುತ್ತಿಸಿಕೊಂಡವ’ರಿಗೆ ಏನೋ ಸಮಾಧಾನ ನೀಡುತ್ತದೆ.
* ಹಣ್ ಮುತ್ತು (Fruity Kiss): ಇಬ್ಬರ ಬಾಯಲ್ಲೂ ಹಣ್ಣಿನ ಚೂರನ್ನು ಕಚ್ಚಿಕೊಂಡು (ದ್ರಾಕ್ಷಿ, ಸ್ಟ್ರಾಬೆರಿಯಂತ ರಸಭರಿತ ಹಣ್ಣು ಇದಕ್ಕೆ ಸೂಕ್ತ), ತುಟಿಗೆ ತುಟಿ ಹಚ್ಚಿ ಚುಂಬಿಸುವುದು. ಹಣ್ಣಿನ ರಸ ಹೀರಿ ಖಾಲಿಯಾದರೂ ಅಧರದ ಮಾಧುರ್ಯವನ್ನು ಹೀರುತ್ತಾ ಚುಂಬನವನ್ನು ಮುಂದುವರಿಸಲು ಅಡ್ಡಿಯಿಲ್ಲ.
* ವ್ಯಾಘ್ರ ಚುಂಬನ (Tiger Kiss): ಸಂಗಾತಿಗೆ ತಿಳಿಯದಂತೆ ಹಿಂದಿನಿಂದ ಹೋಗಿ ಗಬ್ಬಕ್ಕನೆ ‘ಗ್ರಾಬ್’ ಮಾಡಿ ಜೋರಾಗಿ ಮುತ್ತಿಡುವುದು. ಈ ಸಪ್ರೈಸ್ ಚುಂಬನ ಆಕೆ/ಆತ ನನ್ನು ರೋಮಾಂಚನಗೊಳಿಸುತ್ತದೆ.
* ಪಾತರಗಿತ್ತಿ ಮುತ್ತು (Butterfly Kiss): ಉಸಿರಿನಷ್ಟು ಸಮೀಪಕ್ಕೆ ಹೋಗಿ ನಿಮ್ಮ ಸಂಗಾತಿಗೆ ಮುತ್ತೊತ್ತುವಾಗ ನಿಮ್ಮ ಕಣ್ಣುಗಳು ಪಟಪಟನೆ ಬಡಿದುಕೊಂಡರೆ ಅದು ಪಾತರಗಿತ್ತಿ ಮುತ್ತು! ಈ ಥರದ ಮುತ್ತು ಸಂಗಾತಿಯೆಡೆಗೆ ನಿಮ್ಮ ಹೃದಯ ತೆರೆದುಕೊಳ್ಳುವಂತೆ ಮಾಡುತ್ತವೆ.
* ಮಾತಿನಲ್ಲೇ ಮುತ್ತು (Talking Kiss): ಸಂಗಾತಿಯ ಬಾಯ ಸಮೀಪಕ್ಕೆ ಹೋಗಿ ಏನನ್ನೋ ಉಸುರುವುದು! ಯಾರಾದರೂ ನೋಡಿ ಸಿಕ್ಕಿಬಿದ್ದರೆ, ‘ಇಲ್ಲ, ನಾನು ಅವಳಿಗೆ ಮುತ್ತು ಕೊಡುತ್ತಿರಲಿಲ್ಲ. ಗುಟ್ಟು ಹೇಳುತ್ತಿದ್ದೆ’ ಎಂದು ಹೇಳಿ ತಪ್ಪಿಸಿಕೊಳ್ಳುವುದು!
* ಇಂಟರ್‌ನೆಟ್ ಮುತ್ತು (Internet Kiss): ಇಷ್ಟೆಲ್ಲಾ ಹೇಳಿ ಇದನ್ನು ಹೇಳದಿದ್ದರೆ ನೀವು ಮುನಿಸಿಕೊಳ್ಳುತ್ತೀರಿ. ಏನಿಲ್ಲ, ತೀರಾ ಸುಲಭ. ಚಾಟಿಂಗ್ ಮಾಡುವಾಗ ಅಥವಾ ಸ್ಕ್ರಾಪ್ ಬರೆಯುವಾಗ ಈ ಚಿಹ್ನೆಯನ್ನು ಬಳಸಿದರಾಯ್ತು: :-*

ಸಾಕು. ತುಂಬಾ ಜಾಸ್ತಿ ಆಯ್ತು. ಯಕ್ಚುವಲೀ, ಇವತ್ತು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ. ಬೆಳಗಿನಿಂದ ನನಗೆ ಮೂಡ್ ಔಟ್. ನನ್ನ ಮೂಡೇ ಆವಿಯಾಗಿ ಹೋಗಿ ಆಗಸದಲ್ಲಿ ಮೋಡವಾದಂತಿದೆ. ಹೀಗಾಗಿ, ಏನಾದರೂ ಇಂಟರೆಸ್ಟಿಂಗ್ ವಿಷಯವನ್ನು ಓದಿ ಮನಸ್ಸನ್ನು ಸರಿ ಮಾಡಿಕೊಳ್ಳೋಣ ಅಂತ ಇಂಟರ್‌ನೆಟ್ಟಿನಲ್ಲಿ ಹುಡುಕ ಹೊರಟೆ. ಆಗ ಸಿಕ್ಕಿದ್ದು ಇದು! ಹೀಗಾಗಿ, ನಿಮಗೆ ಈ ಮಾಹಿತಿಯಿಂದ ಮತ್ತೇರಿ, ಯಾವುದಾದರೂ ವಿಧಾನವನ್ನು ಪ್ರಯೋಗ ಮಾಡಲು ಹೋಗಿ ಹೆಚ್ಚು-ಕಮ್ಮಿ ಆದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಇಲ್ಲಿರುವ ಮಾಹಿತಿಯೆಲ್ಲವನ್ನೂ ನಾನು ಪಡೆದದ್ದು ಅಂತರ್ಜಾಲದಿಂದ. ನನ್ನ ಅನುಭವ ಎಳ್ಳಷ್ಟೂ ಇಲ್ಲ.

ಮತ್ತೊಂದು ವಿಷಯ: ನೀವು ಈ ವಿಧಾನವನ್ನು ಪ್ರಯೋಗಿಸಲೇಬೇಕು ಎಂದಾದರೆ ದಯವಿಟ್ಟು ಅದನ್ನು ನಿಮ್ಮ ಸಂಗಾತಿಯ ಮೇಲೇ ಪ್ರಯೋಗಿಸಿ. ಅದಿಲ್ಲದಿದ್ದರೆ ‘ಪ್ರಥಮ ಚುಂಬನಂ ದಂತ ಭಗ್ನಂ’ ಆದೀತು; ಎಚ್ಚರ!

http://hisushrutha.blogspot.com/

ಲೇಖಕರು

hisushrutha

ಮೌನಗಾಳ

ನಾನು ಸುಶ್ರುತ. ಊರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ದೊಡ್ಡೇರಿ ಎಂಬ ಪುಟ್ಟ ಹಳ್ಳಿ. ಸಧ್ಯಕ್ಕೆ ರಾಜಧಾನಿಯಲ್ಲಿ ಉದ್ಯೋಗಿ. ಸಾಹಿತ್ಯ, ಸಂಗೀತ, ಸಿನಿಮಾ ಮತ್ತು ಕಲೆ ನನ್ನ ಆಸಕ್ತಿಗಳು. ಕತೆ, ಕವಿತೆ ಬರೆಯುವುದು ಇತ್ತೀಚಿಗೆ ರೂಢಿಸಿಕೊಂಡಿರುವ ಹವ್ಯಾಸ. ನನ್ನ ಬಗ್ಗೆ ಹೆಚ್ಚು ಇಲ್ಲಿದೆ: http://hisushrutha.googlepages.com/

ಅನಿಸಿಕೆಗಳು

ರಾಜೇಶ ಹೆಗಡೆ ಧ, 04/18/2007 - 08:28

ಬಹುಶಃ ಪಾಶ್ಚಿಮಾತ್ಯ ಲೈಫ್ ಸ್ಟೈಲ್ ಕಾಮನ್ ಆಗಿರೋ ಈ ಹೈ ಕ್ಲಾಸ್ ಸೊಸೈಟಿಯಲ್ಲಿ ಕಿಸ್ಸಿಂಗ್ ತಪ್ಪಲ್ಲದೇ ಇರಬಹುದು. ಹಾಗಂತ ಭಾರತದಂತ ದೇಶದಲ್ಲಿ ಸ್ಟೇಜ್ ಮೇಲೆ ಮುತ್ತು ಕೊಡುವದು ತಪ್ಪು.

ರಿಚರ್ಡ್ ಗೇರ್ ಭಾರತಕ್ಕೆ ಬರುವಾಗ ಕನಿಷ್ಟ ಇಲ್ಲಿನ ರೀತಿ ರೀವಾಜು ತಿಳಿಯುವ ಪ್ರಯತ್ನ ಮಾಡದಿರುವದು ಆಶ್ಚರ್ಯ ಆಗುತ್ತದೆ!

ಏನೆ ಇರಲಿ ಮಾಧ್ಯಮಗಳು ಸಹ ಕಡ್ಡಿಯನ್ನು ಗುಡ್ಡ ಮಾಡುವ ಕಲೆ ಸಾಧಿಸಿವೆ. ನ್ಯೂಸ್ ಚಾನೆಲ್ ಗಳಂತೂ ಒಂದು ಚಿಕ್ಕ ವಿಷಯ ಸಿಕ್ಕರೆ ಸಾಕೂ ಇಡೀ ದಿನ ಅದರ ಬಗ್ಗೆ ಗಂಟಲು ಹರಿಯುವ ಹಾಗೆ ಕೂಗಾಡುತ್ತಾರೆ.

ಗುತ್ಯಪ್ಪನ ಕಥೆ ಕೇಳಿ ನಕ್ಕು ನಕ್ಕು ಹೊಟ್ಟೆ ಹುಣ್ಣಾಯ್ತು! ತುಂಬಾ ಚೆನ್ನಾಗಿದೆ.

ಇಷ್ಟೊಂದು ರೀತಿಯ ಕಿಸ್ ಇದೆ ಅಂತಾ ಗೊತ್ತೇ ಇರಲಿಲ್ಲ! ನಮ್ಮ ಜ್ಞಾನ ಭಂಡಾರ ಹೆಚ್ಚಾದಂತಾಯ್ತು! ಮುಂದೆ ಲೈಫ್‌ನಲ್ಲಿ ಉಪಯೋಗಕ್ಕೆ ಬರಬಹುದು!

ವಂದನೆಗಳು
--ರಾಜೇಶ ಹೆಗಡೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.