Skip to main content

ಇಲ್ಲಿ ಕವಿತೆ ಹುಟ್ಟುವುದಿಲ್ಲ, ಯಾಕೆಂದರೆ...

ಬರೆದಿದ್ದುDecember 13, 2010
4ಅನಿಸಿಕೆಗಳು

ಇಲ್ಲಿ ಕವಿತೆ ಹುಟ್ಟುವುದಿಲ್ಲ, ಯಾಕೆಂದರೆ
ಇಲ್ಲಿ ಯಾರೂ ಹಸಿವಿನಿಂದ ಅಳುವುದಿಲ್ಲ,
ಬತ್ತಿದ ಮೊಲೆಗಳನ್ನೇ ಚೀಪಿ ಸುಮ್ಮನಾಗಿಬಿಡುತ್ತಾರೆ.
ರಾಗ ದ್ವೇಷಗಳನ್ನು ಹರಿಯಬಿಡುವುದಿಲ್ಲ
ಎಲ್ಲಾ ಎದೆಯೊಳಗಿಟ್ಟುಕೊಂಡು ಯಾಂತ್ರಿಕರಾಗಿದ್ದಾರೆ.
 
ಮತ್ತೆ ಯಾಕೆಂದರೆ,
ಇಲ್ಲಿ ಹಕ್ಕಿಗಳು ಹಾಡುವುದಿಲ್ಲ, ಅವೆಲ್ಲಾ ಪತರಗುಟ್ಟಿಹೋಗಿವೆ
ಸಹಜತೆಯ ಗಾಳಿ ಬೀಸುವುದಿಲ್ಲ, ಅದಕ್ಕೆ ಗಿಡಮರಗಳು ತೂಗುವುದಿಲ್ಲ.
ಮಕ್ಕಳು ಜೋಕಾಲಿಯಾಡುವುದಿಲ್ಲ, ಗಂಡ ಹೆಂಡತಿ ಜಗಳವಾಡುವುದಿಲ್ಲ
ಅಜ್ಜಿಯ ಕಥೆಗಳನ್ನು ಹೇಳುವರಿಲ್ಲ, ಮೊದಲಿಗೆ ಕೇಳುವವರೇ ಇಲ್ಲ
 
ಇಲ್ಲಿ ಕವಿತೆಗಳು ಹುಟ್ಟುವುದಿಲ್ಲ,
ಇಲ್ಲಿ ನದಿ ಹರಿಯುವುದಿಲ್ಲ, ಬಂಡೆ ನೋಡುವುದಿಲ್ಲ
ಮೀನುಗಳು ಆಡುವುದಿಲ್ಲ, ಸೂರ್ಯ ಮುಳುಗುವುದಿಲ್ಲ
ಕೊಳಲಿನ ಕರೆಗೆ ಯಾರೂ ಓಗೊಡುವುದಿಲ್ಲ
ಮತ್ತೆ ತನ್ನೊಳಗಿನ ತಂತಿಯನ್ನು ಮೀಟುವುದಿಲ್ಲ
 
ಕಾಮವೆಂಬುದು ಮೂರುವರೆ ನಿಮಿಷಗಳಲ್ಲಿ
ಸುರಿದು ಬರಿದಾಗುವ ಖಾಸಗಿ ಕರ್ತವ್ಯ.
ಮಕ್ಕಳು, ಸಾಕಲೇಬೇಕಾದ ಅನಿವಾರ್ಯತೆ
 ಸುಕ್ಕುಗಟ್ಟಿದ ವೃದ್ದರು ಭಯ ಹಿಡಿಸುತ್ತಾರೆ,
 
ಅದಕ್ಕೆ ಇಲ್ಲಿ ಕವಿತೆಗಳು ಹುಟ್ಟುವುದಿಲ್ಲ.

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

manju sringeri (ಪ್ರಮಾಣಿಸಲ್ಪಟ್ಟಿಲ್ಲ.) ಧ, 12/22/2010 - 13:19

ತು೦ಬ ಚನಾಗಿದೆ.ಎನ್ನಾದರು ಕವಿತೆ ಹಟ್ಟಲಿ

ಜಿ.ಎಸ್.ಯಲ್ಲಪ್ಪ (ಪ್ರಮಾಣಿಸಲ್ಪಟ್ಟಿಲ್ಲ.) ಧ, 12/22/2010 - 16:18

ತುಂಬ ಅದ್ಭುತವಾದ ಕಲ್ಪನೆ. ಕವಿತೆ ತುಂಬ ಅರ್ಥಪೂರ್ಣವಾಗಿದೆ. ತುಂಬ ಹಿಡಿಸಿತು.

ಪುಂಡರ ಗಂಡ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 05/07/2011 - 18:45

ಕವಿತೆ ಹುಟ್ಟೋಲ್ಲ ಅಂತಾ ಗದ್ಯ ಬರೆದಂತಿದೆ (;

ಬಾಲ ಚಂದ್ರ ಸೋಮ, 05/09/2011 - 11:47

ಹೌದು ಸರ್,
ಸರಿಯಾಗೇ ಗಮನಿಸಿದ್ದೀರಾ, ಕವಿತೆ ಹಾಗೂ ಗದ್ಯದ ನಡುವಣ ವ್ಯತ್ಯಾಸದ ಬಗ್ಗೆ ನಿಮಗಿರುವ
 ಅಪೂರ್ವ ಪಾಂಡಿತ್ಯ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸಿದೆ.\
ಸಸ್ನೇಹ
ಬಾಲ ಚಂದ್ರ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.