Skip to main content

ಕಾರ್ತೀಕ ಮಾಸವೆಂದರೆ..........

ಬರೆದಿದ್ದುNovember 29, 2010
1ಅನಿಸಿಕೆ

ಕಾರ್ತೀಕ ಮಾಸವೆಂದರೆ....
ಹಕ್ಕಿಗಳ ಚಿಲಿಪಿಲಿ ನಿಧಾನವಾಗಿ ಶುರುವಾಗುವ ಕಾಲ, ಬೆಂಗಳೂರೆಂಬ ಬಯಲು ಸೀಮೆಯಲ್ಲಿ ಚಳಿ ದಾಪುಗಾಲಿಡುತ್ತಾ ಬರುವ ಕಾಲ, ನಿರ್ಜನ ಬಯಲುಗಳಲ್ಲಿ ತೆರೆಯ ಹಾಗೆ ಮಂಜು ಸುರಿಯುವ ಕಾಲ, ಸೋಂಬೇರಿಗಳಿಗಿದು ಹೇಳಿ ಮಾಡಿಸಿದ ಕಾಲ, ನಿಧಾನವಾದ ಮುಂಜಾನೆ, ಚುರುಗುಡುವ ಬಿಸಿಲಿನ ಅಪರಾಹ್ನ, ಸಂಜೆ ಐದೂ ಮುಕ್ಕಾಲಿಗೇ ಕತ್ತಲು ಕತ್ತಲಾಗುವ ಕಾಲ.
ಹಳೇ ಸ್ಟಾಕಿನ ಟೋಪಿ ಸ್ವೆಟರುಗಳು ಮಾರಾಟವಾಗುವ ಕಾಲ, ಬಾರುಗಳೆಲ್ಲಾ ಗಿಜಿಗುಡುವ ಕಾಲ, ಪ್ರೇಮಿಗಳಿಗಿದು ಸರಸದ ಕಾಲ, ವಿರಹಿಗಳಿಗಿದು ಪರಮ ವೇದನೆಯ ಕಾಲ, ತುಂಬಿದ ತುಟಿಗಳು ಒಡೆಯುವ ಕಾಲ, ಒಡೆದ ಹೃದಯಗಳು ಬೆಸೆಯುವ ಕಾಲ, ಅಬ್ಬಬ್ಬಾ! ವಿಪರೀತ ಕಾಲ.
ಅವರೇಕಾಳಿನ ಕಾಲ, ಕಡಲೇ ಕಾಯಿನ ಕಾಲ, ಬಡವರಿಗೆ ಚಳಿಗಾಲ, ಉಳ್ಳವರಿಗೆ ಬೆಚ್ಚಗಿನ ಕಾಲ,  ಮರಗಿಡಗಳೆಲ್ಲಾ ತಮ್ಮ ಸಂಪತ್ತನ್ನು ಕಳೆದು ಕೊಂಡು ದರಿದ್ರರಾಗುವ ಕಾಲ.
ತುಮುಕೂರು ಹೈವೇ ರಸ್ತೆಯ ಬದಿಯಲ್ಲಿ ಪಡಪೋಶಿ ಟೈರು ತುಂಡಿಗೆ ಬೆಂಕಿಯಿಟ್ಟು ಚಳಿಕಾಯಿಸಿ ಕೊಳ್ಳುವ ಕಾಲ. ಆಗ ತಾನೇ ಹರೆಯಕ್ಕೆ ಕಾಲಿಟ್ಟ ಕಿಶೋರಿಯ ಎಳೇ ಕೆನ್ನೆ ತುಟಿಯನ್ನು ಯಾವ ಎಗ್ಗೂ ಇಲ್ಲದೆ ಚಳಿ ಎಂಬ ಪರಮ ನಿರ್ದಯಿ  ಮುಖ ತುಟಿ ನೋಡದೆ ರಕ್ತ ಬರುವ ಹಾಗೆ ಚುಂಬಿಸುವ ಕಾಲ.
ಈಶ್ವರನ ದೇವಸ್ತಾನಗಳಲ್ಲಿ ಬೆಳಗಿನ ಜಾವವೇ ಘಂಟೆ ಮೊಳಗುವ ಕಾಲ, ಸಂಜೆ ಹೋದರೆ, ದೀಪಗಳ ಕಾಲ. ಎಲ್ಲಾ ದೀಪಗಳಲ್ಲೂ ದೇವರ ಮುಖ ಕಾಣಲು ಹೊರಟ ಯುವಕನೊಬ್ಬ, ತನ್ನ ಪ್ರೇಯಸಿಯ ಕಣ್ಣುಗಳನ್ನು ಕಂಡು ತಬ್ಬಿಬ್ಬಾಗುವ ಕಾಲ. ಆ ತಬ್ಬಿಬ್ಬನ್ನು ಕಂಡು ಹುಸಿನಗುವ ತರಳೆಯರು ಮತ್ತೊಂದು ದೀಪ ಹಚ್ಚುವ ಕಾಲ.
ದೀಪಾವಳಿಯ ದೀಪದ ಕಾಲ, ಪಟಾಕಿಯ ಕಾಲ, ಹರಟೆ ಪಟಾಲಮ್ಮಿನ ಕಾಲ, ರಾತ್ರಿ ಏಳಕ್ಕೇ ನಿದ್ರೆ ಬರಿಸುವ ಕಾಲ, ದಂಪತಿಗಳು ರಾತ್ರಿ ಮತ್ತೆ ಮತ್ತೆ ಎದ್ದೇಳುವ ಕಾಲ,ಬೆಳಗಿನ ಜಾವ ಎಷ್ಟು ಹೊತ್ತು ಮಲಗಿದರೂ ಇನ್ನಷ್ಟು ಹೊತ್ತು ಮಲಗಬೇಕೆನ್ನಿಸುವ ಕಾಲ
ಛಳಿಗಾಲ,ಛಳಿಗಾಲ,ಛಳಿಗಾಲ.

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಕೆಎಲ್ಕೆ ಸೋಮ, 11/29/2010 - 22:51

ಚೆನ್ನಾಗಿದೆ ನಿಮ್ಮ 'ಗಾಲ'ದ ವರ್ಣನೆ, ಶೈಲಿ ಹಾಗೂ ಕಲ್ಪನೆ.
ಆದರೆ  ಬೆಂಗಳೂರಿನ ಆ ಛಳಿಗಾಲ ತನ್ನ ಹಳೆಯ ಖದರು ಕಳೆದುಕೊೞುತ್ತಿದೆ ಎಂಬುದೇ ವಿಪರ್ಯಾಸ ಹಾಗೂ ವಿಶಾದ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.