Skip to main content

ಬೀಸೋ ದೊಣ್ಣೆ ತಪ್ಪಿದರೆ! : ಭಾಗ ೧

ಬರೆದಿದ್ದುNovember 26, 2010
noಅನಿಸಿಕೆ

ಎಲ್ಲಾ ಶುರುವಾಗಿದ್ದು ಹೀಗೆ.
ಒಮ್ಮೆ ತಿಂಗಳ ಕೊನೆ. ಆಫೀಸಿನಲ್ಲಿ ಕೆಲಸ ಮುಗಿಯುವ ಹೊತ್ತಿಗೆ ಹತ್ತು ಘಂಟೆ. ಇನ್ನೇನು ಪಂಚ್ ಮಾಡಿ ಹೊರಡಬೇಕೆನ್ನೆವಷ್ಟರಲ್ಲಿ ಬೆಕ್ಕಿನಂತೆ ಎದುರಾದವಳು ಜಿತಾ ನಾಯರ್. ಇವಳು ನಮ್ಮ ಆಫೀಸಿಗೆ ಸೇರಿದ ಹೊಸ ಸಿ ಎಸ್. ನಮ್ಮ ಬ್ಯಾಚ್ ನಲ್ಲಿರುವ ಕೆಲವೇ ಮುದ್ದಾದ ಹುಡುಗಿಯರಲ್ಲೊಬ್ಬಳು. ವಯಸ್ಸು ಇಪ್ಪತ್ಮೂರು. ಅವಿವಾಹಿತೆ.( ಇನ್ನೂ ಸಿಂಪಲ್ಲಾಗಿ ಹೇಳಬೇಕೆಂದರೆ ನಮ್ಮಂತಹ ಹುಡುಗರ ಆಸಕ್ತಿಯನ್ನು ಹಿಡಿದಿಟ್ಟು ಕೊಳ್ಳುವಂತಹ ಎಲ್ಲಾ ಗುಣಗಳಿರುವ ಹುಡುಗಿ) ಇವಳ ಕನ್ನಡ ಸಹಿಸಿಕೊಳ್ಳಲು ಮಾತ್ರ ಸ್ವಲ್ಪ ಕಷ್ಟ.
ಅವಳೇ ಮೊದಲು ಮಾತಿಗೆಳೆದಳು
"ಏನ್ ಸಂದ್ರು ( ಚಂದ್ರು ಅಂತ ಅವಳು ಕರೆಯುತ್ತಿದ್ದ ರೀತಿ) ಸ್ಟೇ ಬ್ಯಾಕಾ?
ನನಗೂ ಬಿಡುವಾಗಿದ್ದರಿಂದ  ಮಾತಿಗೆ ನಿಂತು ಕೊಂಡೆ.
"ಹೌದು, ನೀನೇನು ಇಷ್ಟೊತ್ತರಲ್ಲಿ? ಕ್ಯಾಬ್ ಮಿಸ್ಸಾಯ್ತಾ?
ಅಷ್ಟು ಕೇಳಿದ್ದೇ ತಪ್ಪಾಯ್ತು. ಮಾತು ಗೇರುಸೊಪ್ಪೆಯ ಧಬಧಬೆಯಂತೆ ಹರಿಯುತು ಅವಳ ಪುರಾಣ.ಅವಳ ಟಿಎಲ್ ನ ಕಿರುಕುಳಗಳು, ಐದು ನಿಮಿಷವೂ ಹೆಚ್ಚು ಕಾಯದಿರುವ ಕ್ಯಾಬ್ ಡ್ರೈವರ್. ಆಫೀಸಿನಿಂದ ಎಂಟು ಕಿಲೋ ಮೀಟರ್ ದೂರವಿರುವ ಅವಳ ಮನೆ. ಇಷ್ಟು ಹೊತ್ತಿನಲ್ಲಿ ಅಲ್ಲಿರುವ ಬೀದಿ ನಾಯಿ ಹಾಗೂ ಪೋಲಿ ಹುಡುಗರ ಕಾಟ. ಇಷ್ಟೆಲ್ಲಾ ಹೇಳಿ ಆಮೇಲೆ ನನ್ನ ಮನೆ ಬಗ್ಗೆ ವಿಚಾರಿಸಿದಳು.
( ಇದೆಲ್ಲಾ ನಡೆಯುವಾಗ ನನ್ನ ಸೀನಿಯರ್, ಒಮ್ಮೆ ಓರೆನೋಟ ಬೀರಿಕೊಂಡು ನಮ್ಮನ್ನು ಹಾಯ್ದು ಹೋದರು. ಅವರು ಕೂಡ ಇವಳಿಗೆ ಲೈನ್ ಹೊಡೆಯುತ್ತಿರ ಬಹುದೆಂದು ನನಗೆ ಗುಪ್ತ ಗುಮಾನಿಯಿತ್ತು, ಯಾಕೆಂದರೆ ಇವಳು ನನ್ನ ಜೊತೆ ಮಾತನಾಡುವುದನ್ನು ನೋಡಿದಾಗಲೆಲ್ಲಾ, ನನ್ನ ಮೇಲೆ ಅವರ ಹಾರಾಟ ಹೆಚ್ಚಾಗುತ್ತಿತ್ತು)
" ಸೋ, ಇಷ್ಟೊತ್ತಿನಲ್ಲಿ ಡ್ರಾಪ್ ಮಾಡು ಅಂದ್ರೆ, ನಿಮ್ಗೆ ತೊಂದರೆ ಆಗುತ್ತೋ ಎನೋ?
( ಇಂಥಾ ಸಮಯದಲ್ಲಿ, ಹೌದು. ತೊಂದ್ರೆ ಆಗುತ್ತೆ, ನಾನಿನ್ನು ಹೊರಡ್ತೀನಿ. ಎನ್ನುವ ಗಂಡು ಬ್ರಹ್ಮಸೃಷ್ಟಿಯಿಂದ   ಇನ್ನೂ ಚಲಾವಣೆಗೆ ಬಂದಿಲ್ಲ)
"ತೊಂದ್ರೆ ಇಲ್ಲಾ ಬಾ" ಅಂತಾ ಕರೆದು ಮನೆಯವರಗೂ ಬಿಟ್ಟೆ.
ಬೈಕಿನಿಂದ ಇಳಿದು, ಥ್ಯಾಂಕ್ಸ್ ಹೇಳಿದವಳೇ
"ಸಂದ್ರೂ, ನಿಮ್ಮತ್ರ ಏನೋ ಮಾತನಾಡ್ಬೇಕಿತ್ತು, ನೀವು ಬೇಜಾರು ಮಾಡ್ಕೋಬಾರ್ದು" ಅಂದಳು.
"ಖಂಡಿತಾ ಇಲ್ಲಾ, ಹೇಳು" ಅಂದೆ
"ಮತ್ತೆ, ಮತ್ತೆ ನೀವು ನನ್ನನ್ನು ನೋಡುವಾಗಲೆಲ್ಲಾ ಏನೋ ಒಂಥರಾ ನೋಡ್ತೀರಾ. ಯಾಕೆ?" ಎಂದು ಕೇಳಿದವಳೇ ಉತ್ತರಕ್ಕಾಗಿ ಕಾಯದೇ ನಗುತ್ತಾ ಪುಟಪುಟನೇ ಓಡಿಹೊದಳು. ಯಾಕೋ ನನ್ನ ಎಡಗಣ್ಣು ಪಟಪಟನೇ ಹೊಡೆದುಕೊಳ್ಳಲಾರಂಭಿಸಿತು.
ವಿಪತ್ಕಾಲದ ಭಯಾನಕ ಮುನ್ಸೂಚನೆ ಒಂದು-
ಭಾನುವಾರ ಮನೆಯಲ್ಲೇ ಕೂತಿದ್ದೇ. ಟಿವಿ ನೋಡಲು ಕರೆಂಟ್ ಇರಲಿಲ್ಲ. ಓದಿದ್ದ ಪೇಪರನ್ನೇ ಹನ್ನೆರಡು ಸಲಾ ಓದಿ, ಇಪ್ಪತ್ತೆರೆಡು ಸಲ ಓದಿದ್ದ ಯಾವುದೇ ಕಾದಂಬರಿಯನ್ನು ಹಿಡಿದುಕೊಂಡಿದ್ದೆ. ನಾನು ಕುಳಿತಿರುವ ಜಾಗದಿಂದ ನಮ್ಮಮ್ಮ ಬಟ್ಟೆ ಒಗೆಯುತ್ತಿರುವುದು ಕಾಣಿಸಿತು.
ಒಮ್ಮೆ ಸೀರೆಯ ಸೆರಗನ್ನೆತ್ತಿ ಸೊಂಟಕ್ಕೆ ಸಿಗಿಸಿಕೊಂಡರು. ಕೈ ಬಳೆಗಳನ್ನೆಲ್ಲಾ ಹಿಂದಕ್ಕೆ ಮಾಡಿಕೊಂಡರು.ತುರುಬನ್ನೆತ್ತಿ ಮೇಲಕ್ಕೆ ಕಟ್ಟಿಕೊಂಡು, ಬಕೇಟಿನಲ್ಲಿದ್ದ ನನ್ನ ಪ್ಯಾಂಟನ್ನು ಕೈಗೆತ್ತಿಕೊಂಡರು. ಅಷ್ಟೇ........
ಮೈ ಮೇಲೆ ಒಮ್ಮೆ ವೀರವನಿತೆ ಒನಕೆ ಓಬವ್ವನ ಅವಾಹನೆ ಆದಂತೆನಿಸಿತು. ಎರಡೂ ಕೈಗಳಿಂದ ಪ್ಯಾಂಟನ್ನೆತ್ತಿ. ಬಚ್ಚಲು ಮನೆಯ ಚಪ್ಪಡಿ ಕಲ್ಲು ಮುರಿದು ಇಪ್ಪತ್ನಾಲ್ಕು ಚೂರಾಗುವಂತೆ ಎತ್ತಿ ಕುಕ್ಕಿದರು. ಒಮ್ಮೆ ನನ್ನೆದೆಯ ಮೇಲೇ ಕುಕ್ಕಿದಂತಾಯ್ತು.
"ಅಮ್ಮಾ" ಅಂತಾ ಹೃದಯ ವಿದ್ರಾವಕವಾಗಿ ಕಿರುಚಿದೆ.
"ನಿಮ್ಮಮ್ಮ ಇನ್ನೂ ಸತ್ತಿಲ್ಲಾ, ಯಾಕೆ ಹಂಗೆ ಬಡ್ಕೋತ್ಯಾ?" ಮಾರುತ್ತರ ಬಂತು
"ಅಮ್ಮಾ, ಲೂಯಿ ಫಿಲಿಪ್ ಪ್ಯಾಂಟ್ ಅದು. ಎರಡು ಸಾವಿರ ರುಪಾಯಿ. ಇನ್ನೂ ಮೊನ್ನೆ ತಾನೆ ತಗೊಂಡಿದ್ದು. ವಾಷಿಂಗ್ ಮಿಷಿನ್ನಲ್ಲಿ ಒಗಿ ಅಂತಾ ಸಾವಿರ ಸತಿ ಹೇಳಿದೀನಿ. ಅದಿರೋದ್ಯಾತಕ್ಕೆ? ನಾಲ್ಕು ದಿನಾ ಕೂಡ ಬರೋದಿಲ್ಲಾ ಆ ಪ್ಯಾಂಟು." ಅಬ್ಬರಿಸಿದೆ
ಭದ್ರಕಾಳಿಯ ಅವತಾರದ ದೃಷ್ಟಿ ಒಮ್ಮೆ ನನ್ನ ಮೇಲೆ ಬಿದ್ದಂತಾಯ್ತು.
"ಆ ಸುಡುಗಾಡು ವಾಷಿಂಗ್ ಮಿಷಿನಲ್ಲಿ ಒಗೆದ್ರೆ ಒಗೆದ್ಹಂಗೇ ಆಗಲ್ಲ. ಕೈ ಕಾಲು ಗಟ್ಟಿಯಾಗಿರೋ ವರ್ಗೂ ನಾನ್ಹಿಂಗೇ. ನಾಳೇ ಬರ್ತಾಳಲ್ಲ ನಿನ್ಹೆಂಡ್ತೀ? ಅವಳತ್ರಾ ಹೇಳು ಇದೆಲ್ಲಾ."
ಮರು ಮಾತನಾಡದೇ ಜಾಗ ಖಾಲಿ ಮಾಡಿದೆ.
ವಿಪತ್ಕಾಲದ ಭಯಾನಕ ಮುನ್ಸೂಚನೆ-ಎರಡು-
ಆಫೀಸಿಗೆ ಹೊತ್ತಾಗಿತ್ತು. ಒಂದು ಕೈಯಿಂದಾ ಬಟ್ಟೆ ಹಾಕಿ ಕೊಳ್ಳುತ್ತಾ, ಇನ್ನೊಂದು ಕೈಯಿಂದಾ ಪೇಪರ್ ಓದುತ್ತಾ. ಅಮ್ಮಾ ತಿಂಡಿ ಎಂದು ಕಿರುಚಿದೆ. ಕ್ಷಣಾರ್ಧದಲ್ಲಿ ನನ್ನ ಮುಂದೆ ತಿಂಡಿ ತಟ್ಟೆ ಬಂತು. ಕಣ್ಣೆತ್ತಿ ನೋಡಿದರೆ, ಒಮ್ಮೆ ಹೃದಯ ಸ್ತಂಭನವಾದಂತೆನಿಸಿತು.
ಮಹಿಳಾ ಮಣಿಯರ ಸಮಯ ಉಳಿಸುವ ಚಿಂತಾಮಣಿಯಾಗಿ, ನಮ್ಮಂತಯ ಯುವ ಪೀಳಿಗೆಯ ಆಜನ್ಮ ವೈರಿಯಾಗಿ, ಬಾಯಿ ಚಪಲವಿರುವಂತಹ ದುಷ್ಟರ ನಿಗ್ರಹಕ್ಕಾಗಿ ಅವತಾರವೆತ್ತಿದ, ಚಿತ್ರಾನ್ನ ಸ್ಟೀಲು ತಟ್ಟೆಯ ಪಲ್ಲಂಗದ ಮೇಲೆ ಪವಡಿಸಿದೆ.
ನಾನು ಬಾಯಿ ತೆಗೆಯುವ ಮೊದಲೇ  ಕಿವಿಗಪ್ಪಳಿಸಿದ ಕೆಲವು ಅಣಿಮುತ್ತಗಳ ಸ್ಯಾಂಪಲ್ಗಳು
* ನಿಮಗೇನು? ಮೂರು ಹೊತ್ತು,ಏನು ಮಾಡಿದ್ರೂ ತಿನ್ನೋದಕ್ಕೇ ಅಹಂಕಾರ!
*ಅದ್ಯಾವ ಮಾಯಾಂಗನೇ ಬಂದು ಇವನ ಕೈಲಿ ಏಗ್ತಾಳೋ? ನೋಡ್ಬೇಕು!
*ಯಾವುದಾದ್ರೂ ಅಡುಗೆ ಭಟ್ಟರ ಮಗಳನ್ನೇ ಕಟ್ಟಿದ್ರೆ, ಇವನ ಜೊತೆ ಬಾಳು ಮಾಡ್ಬೋದು!
*ನನಗೂ ವಯಸ್ಸಾಗ್ತ ಬಂತು( ದೇವರಾಣೆ ಇನ್ನೂ ಐವತ್ತೆರೆಡು) ದೇವರ ದಯದಿಂದ ಗಟ್ಟಿಮ ಮುಟ್ಟಾಗಿದ್ದೀನಿ, ನಾನು ಕಣ್ಮುಚ್ಚಿಕೊಳ್ಳೊದ್ರೊಳಗೆ ಇವನಿಗೊಂದು ಮದುವೆ ಆಗಿ, ಇವನದೂ ಅಂತಾ ಒಂದು ಸಂಸಾರ ನೋಡಿದ್ರೆ, ಸಾಕಾಗಿ ಹೋಗಿದೆ.
ಒಂದೂ ಮಾತಾನಾಡದೇ ಬಾಯ್ಮುಚ್ಚಿಕೊಂಡು ಚಿತ್ರಾನ್ನ ಅಷ್ಟನ್ನೂ ತಿಂದು ಮುಗಿಸಿದೆ. ನನ್ನ ಸ್ಥಿತಿ ನೆನೆಸಿಕೊಂಡು ಒಮ್ಮೆ ನನಗೇ ಕಣ್ಣು ತುಂಬಿ ಬಂತು, ಆಫ್ ಕೋರ್ಸ್ ಚಿತ್ರಾನ್ನದಲ್ಲಿ ಮೆಣಸಿನಕಾಯಿ ಕೂಡ ಸಿಕ್ಕಿತ್ತು. ನೀರು ಕೇಳಲೂ ಕೂಡ ಧೈರ್ಯವಾಗಲಿಲ್ಲ.
ಬಯಸದೇ ಬಿದ್ದ ಬಾಂಬುಃ-
ಅವತ್ತು ಭಾನುವಾರ.ಹೊರಗೆಲ್ಲೂ ಹೋಗಬೇಡ, ನಿನ್ನ ಜೊತೆ ಮಾತನಾಡುವುದಿದೆ ಎಂದು ಮನೆಯಲ್ಲಿ ಕಟ್ಟಾಜ್ನೆಯಾಗಿತ್ತು. ಅಂದು ರಜಾದಿನವಾಗಿದ್ದರಿಂದ ನಮ್ಮ ಲೊಕಾಲಿಟಿಯಲ್ಲಿರುವ ಚಿಳ್ಳೆಪಿಳ್ಳೆಗಳಿಗೆಲ್ಲಾ ಹಬ್ಬ. ನಾನು ಕೂಡಾ ಮೊನ್ನೆ ಬಸವನಗುಡಿ ಹತ್ತಿರ ಹೋಗಿದ್ದಾಗ ತೆಗೆದುಕೊಂಡ ಸೋಪಿನ ನೀರ್ಗುಳ್ಳೆ ಹಿಡಿದುಕೊಂಡು ಆ ಮಕ್ಕಳೊಂದಿಗೆ ಆಟವಾಡುತ್ತಿದ್ದೆ. ನಾನು  ಒಮ್ಮೆ ನೀರ್ಗುಳ್ಳೆ ಊದಿದಾಗ ಅದನ್ನು ಹಿಡಿಯಲು ಮಕ್ಕಳಲ್ಲೇ ಸ್ಪರ್ಧೆ ಏರ್ಪಡುತ್ತಿತ್ತು. ಅವರ ಕಿರುಚಾಟ ಅರ್ಧ ಊರಿಗೆ ಪ್ರತಿದ್ವನಿಸುತ್ತಿತ್ತು. ನನಗೂ ಈ ಆಟ ಬಹಳ ಮಜವಾಗಿತ್ತು.
ಒಳಗೆ ಪೇಪರ್ ಓದುತ್ತಿದ್ದ ನಮ್ಮಪ್ಪನಿಗೆ ತೊಂದರೆ ಆಗಿರಬೇಕು. ಕೋಪದಿಂದ ಹೊರಗೆ ಬಂದರು. ಅವರ ಉಗ್ರವತಾರ ನೋಡಿ ನಾನು ಸುಮ್ಮನಾಗಿವಿಟ್ಟೆ. ಬೈಗುಳ ನಿರಿಕ್ಷಿಸುತ್ತಾ ನಿಂತೆ. ಆದರೆ ನಮ್ಮಪ್ಪ ನನಗೊಂದೂ ಮಾತು ಬೈಯಲಿಲ್ಲ. ಆ ಚಿಕ್ಕ ಮಕ್ಕಳಿಗೆ ಬಂಗಾರದಂತಾ ಮಾತು ಹೇಳಿದರು. "ಅವನಿಗಂತೂ ಬುದ್ದಿ ಇಲ್ಲ, ನಿಮಗೂ ಇಲ್ವಾ"    
ಯಾವುದಾದರೂ ಗೋಡೆಗೆ ಬಲವಾಗಿ ತಲೆ ಚಚ್ಚಿಕೊಳ್ಳುವ ಆಸೆಯಾಯಿತು. ನಮ್ಮಪ್ಪ ಒಳಗೆ ಕರೆದರು.
ಒಳಗೆ ಹೋದಾಗ ಮನೆ ಪ್ರಶಾಂತವಾಗಿತ್ತು. ಯಾಕೋ ನನಗೆ ಆ ಮೌನ ಅಸಹಜವಾಗಿದೆ ಎನ್ನಿಸಿತು. ಯಾವುದೋ ಯುದ್ದದ ಮುನ್ಸೂಚನೆ ಇರಬಹುದೆಂದು ನನ್ನ ಒಳಮನಸ್ಸು ಎಚ್ಚರಿಸುವಷ್ಟರಲ್ಲಿ, ನಮ್ಮಪ್ಪ ರಣಕಹಳೆ ಊದಿಯೇ ಬಿಟ್ಟರು.
"ಇನ್ನೂ ಎಷ್ಟು ದಿನಾ ಹೀಗೆ ಇರ್ತಿಯಾ"
"ಇಲ್ಲಪ್ಪಾ, ಇನ್ಯಾವತ್ತೂ ಆ ಹುಡುಗರ ಜೊತೆ ವಾಟರ್ ಬಬಲ್ಸ್ ಆಟವಾಡೋಲ್ಲಾ."
" ಏ ಥೂ! ನಿನ್ನ ಹುಡುಗಾಟಿಕೆಗಿಷ್ಟು. ನಾನು ಅದಲ್ಲಾ ಹೇಳಿದ್ದು. ಮದುವೆ ಗಿದುವೆ ಅಂತಾ ನಿನಗೇನೂ ಯೋಚನೆ ಇಲ್ದೇ ಇರ್ಬೋದು. ಹೆತ್ತವರಾದ ನಮಗೂ ಇರಬೇಡವೇ? ನಿನ್ನ ಕ್ಲಾಸ್ ಮೇಟ್ಸ್ ನಲ್ಲಿ ಆಗ್ಲೇ ಮೂರು ಜನಕ್ಕೆ ಮದುವೆ ಆಯ್ತು ತಾನೆ"
" ಆದ್ರೆ ಇನ್ನೂ ನೂರಾರು ಜನ ಕ್ಲಾಸ್ ಮೇಟ್ಸ್ಗೆ ಮದುವೆ ಆಗಿಲ್ಲಪ್ಪಾ" ತಕ್ಷಣ ಉತ್ತರಿಸಿದೆ.
"ಈ ತಲೆಹರಟೆ ಎಲ್ಲಾ ಸಾಕು, ನಮ್ಗೂ ಬರ್ತಾ, ಬರ್ತಾ ವಯಸ್ಸು ಕಡಿಮೆ ಆಗೋಲ್ಲ. ನಾವಿಬ್ರೂ ತೀರ್ಮಾನಿಸಿ ಆಗೋಗಿದೆ. ಜಾಸ್ತಿ ಮಾತನಾಡ ಬೇಡ," ಎಂದರು
"ಅಪ್ಪಾ, ಅದ್ಹೆಂಗೆ ನೀವು ತೀರ್ಮಾನಿಸಿ ಬಿಟ್ರಿ, ನಂಗಿನ್ನೂ ಎರಡು ವರ್ಷ ಬೇಡ ಅಂತಾ ಹೇಳಿರಲಿಲ್ವಾ"  ನಾನು ಚೀತ್ಕರಿಸಿದೆ.
"ಈಗೇನು ನೋಡಿದ ತಕ್ಷಣ ನಾಳೇನೆ ಆಗೋಗತ್ತಾ, ನೋಡ್ತಾ ಇದ್ರೆ ಇನ್ನೆರೆಡು ವರ್ಷದಲ್ಲಾದರೂ ಆಗುತ್ತೆ" ಉತ್ತರ ಸಿದ್ದವಾಗಿತ್ತು
ನನ್ನ ಭವಿಷ್ಯದ ಪ್ಲಾನು, ನನ್ನ ಸಂಕಷ್ಟಗಳು, ಎಲ್ಲವನ್ನು ಅವರಮುಂದೆ ಅವಲತ್ತು ಕೊಂಡರೂ ಪ್ರಯೋಜನವಾಗಲಿಲ್ಲ. ಕೇಳುವಷ್ಟು ಕೇಳಿ ನಮ್ಮಪ್ಪ ಕೋಪದಿಂದ, ನಮ್ಮಮ್ಮ ಕಣ್ಣೀರಿನಿಂದ ವಿಜೃಂಭಿಸಿದರು. ಬೇರೆ ವಿಧಿಯಿಲ್ಲದೆ ಒಪ್ಪಲೇ ಬೇಕಾಯ್ತು.
ನಾಡಿದ್ದು ನಿಮ್ಮ ಚಿಕ್ಕಪ್ಪ ಬರ್ತಾರೆ ಅವರತ್ರ ಮಾತಾಡು" ನಮ್ಮಪ್ಪ ವಿಜಯೋತ್ಸಾಹದಿಂದ ಹೇಳಿದರು.
"ಅಂದ್ರೇ, ಎಲ್ಲಾ ಮೊದಲೇ ನೋಡಿಟ್ಟಿದ್ದೀರಾ?" ನಾನು ಕೇಳಿದೆ
"ಒಂದೆರೆಡು ಮನಸ್ಸಿನಲ್ಲಿದೆ, ಎಲ್ಲಾ ನಿನಗೆ ಗೊತ್ತಿರೋರೆ" ನಮ್ಮಪ್ಪ ಮುಗುಮ್ಮಾಗಿ ಹೇಳಿದರು
ತಕ್ಷಣ ನನ್ನ ಕಣ್ಣಮುಂದೆ ನಮ್ಮಪ್ಪನ ಮೂರ್ನಾಲ್ಕು ಜನ ತಂಗಿಯರೂ, ಅವರ ಅಸಂಖ್ಯಾತ ಹೆಣ್ಣು ಮಕ್ಕಳು ಬಂದರು.ಸಣ್ಣವಯಸ್ಸಿನಿಂದ ಜೊತೆಗೆ ಆಟವಾಡುತ್ತಾ ಬೆಳೆದವರು, ಇತ್ತೀಚೆಗೆ ಸಿಕ್ಕಾಗ ಬಹುವಚನದಲ್ಲಿ ಸಂಬೋಧಿಸಿದಾಗಲೇ ಅನುಮಾನ ಬಂದಿತ್ತು.
"ಪ್ರಾಣ ಹೋದ್ರೂ ನಾನು ಸಂಬಂಧದಲ್ಲಿ ಮದುವೆ ಆಗೋಲ್ಲ" ನಾನು ಖಡಾಖಂಡಿತವಾಗಿ ಹೇಳಿದೆ.
ಈ ಮಾತಿನಿಂದ ನಮ್ಮಪ್ಪನ ಮುಖ ಸ್ವಲ್ಪ ಕಳೆಗುಂದಿದರೂ, ನಮ್ಮಮ್ಮನ ಮುಖ ಬೆಳೆಗಿತು. ಅವರಿಗೆ ಮೊದಲಿನಿಂದಲೂ ತನ್ನ ತವರೂರಿನಿಂದ ಹೆಣ್ಣು ತರಬೇಕೆಂದು ಆಶೆಯಿತ್ತು.
"ಸರಿ, ಸರಿ ಅದೆಲ್ಲಾ ಆಮೇಲೆ ನೋಡೋಣ. ಮೊದಲು ನಿಮ್ಮ ಚಿಕ್ಕಪ್ಪನ ಜೊತೆ ಮಾತಾಡು" ನಮ್ಮಪ್ಪ ಮಾತು ಮುಗಿಸಿದರು.
ನಿಸ್ಸಹಾಯಕನಾಗಿ ನಿಟ್ಟುಸಿರಾದೆ.
ಹಾವಿನ ದ್ವೇಷ ಹನ್ನೆರಡು ವರುಷಃ-
ನಮ್ಮ ಚಿಕ್ಕಪ್ಪ ಸಕಾಲದಲ್ಲಿ ದಯಮಾಡಿಸಿದರು. ಇಂತಹ ಕೆಲಸಕ್ಕೆಲ್ಲಾ ಇವರು ಯಾವಾಗಲೂ ಮುಂದೆ. ಇವರ ಬಗ್ಗೆ ಒಂದು ಟಿಪ್ಪಣಿಯಿದೆ. ಸುಮಾರು ಇಪ್ಪತ್ನಾಲ್ಕು ವರ್ಷದ ಹಿಂದೆ, ಅಂದರೆ ನಾನಿನ್ನೂ ಒಂದು ವರ್ಷದ ಮಗುವಾಗಿದ್ದಾಗ, ಇವರೊಮ್ಮೆ ನನ್ನನ್ನು ಎತ್ತಿಕೊಂಡು ಆಡಿಸುತ್ತಿದ್ದರಂತೆ. ತಲೆಯಿಂದ ಮೇಲೆತ್ತಿ ಆಡಿಸುತ್ತಿದ್ದಾಗ ನಾನು ಇವರ ಮುಖದ ಮೇಲೆ ಕಕ್ಕ ಮಾಡಿಬಿಟ್ಟಿದ್ದೆನಂತೆ. ಈ ಘಟನೆ ನಮ್ಮ ಚಿಕ್ಕಪ್ಪನಿಗೆ ಮರೆಯಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ ಇವರು ನಮ್ಮ ಮನೆಗೆ ಬಂದಾಗಲೆಲ್ಲಾ ನಮ್ಮಪ್ಪ ಪದೇ ಪದೇ ಇದನ್ನು ಹೇಳಿಕೊಂಡು ಅಟ್ಟಹಾಸದಿಂದ ನಗುತ್ತಿದ್ದರು. ಆಗ ಇವರ ಮುಖ ಹುಳಿಹುಳಿಯಾಗುತ್ತಿತ್ತು.
ನಮ್ಮ ಚಿಕ್ಕಪ್ಪ ದೇಶಾವರಿಯಾಗಿ ಮಾತನಾಡುತ್ತಾ "ಎಷ್ಟು ಬೇಗ ಬೆಳೆದುಬಿಟ್ಟಿದ್ದೀಯಪ್ಪಾ, ಅಂತು ಪ್ರಬುದ್ದನಾಗಿದ್ದೀಯ. ಏನು ಯೋಚನೆ ಮಾಡಬೇಡ. ನೀನು ನನಗೆ ಮಗನ ಸಮಾನ.ನಿನಗೊಂದು ಒಳ್ಳೆ ಹುಡುಗಿ ಹುಡುಕಿ ಕೊಡುವ ಜವಾಬ್ದಾರಿ ನಂದು" ಎಂದರು
(ಇದೇ ಚಿಕ್ಕಪ್ಪ ಕೆಲವು ದಿನಗಳ ಹಿಂದಿನವರೆಗೂ ನನಗೆ ಅಪಾಪೋಲಿ, ತಲೆ ಹರಟೆ, ಶುದ್ದ ಹುಡುಗಾಟದ ಮಂಗ, ಅಧಿಕ ಪ್ರಸಂಗಿ,ಬೇಜವಾಬ್ದಾರಿ ಎಂದೆಲ್ಲಾ ಬಿರುದು ಕೊಟ್ಟಿದ್ದು ನೆನಪಾಯಿತು)
ಚಿಕ್ಕಪ್ಪ ಅವರ ಕಡತದಿಂದ ಒಂದಷ್ಟು ಫೋಟೋ ಹಾಗೂ ಜಾತಕಗಳನ್ನು ಹೊರತೆಗೆದರು.ಒಂದೊಂದೇ ಫೋಟೋ ನಮ್ಮ ಚಿಕ್ಕಪ್ಪನಿಂದ, ನನಗೆ, ನಮ್ಮಪ್ಪನಿಗೆ, ನಮ್ಮಮ್ಮನಿಗೆ ಕೈ ಬದಲಾಗುತ್ತಾ ಹೋಯಿತು. ಅದಕ್ಕೆ ನಮ್ಮ ಪ್ರತಿಕ್ರಿಯೆ ಇಂತಿತ್ತು.
ನಾನು- ಈ ಹುಡುಗಿಗೆ ಸ್ವಲ್ಪ ಮೆಳ್ಳಗಣ್ಣು ಇದ್ದ ಹಾಗಿದೆ
ಚಿಕ್ಕಪ್ಪ- ಮೆಳ್ಳಗಣ್ಣು ಅದೃಷ್ಟ ಕಣಪ್ಪಾ, ಕಣ್ಣು ನೋಡಬೇಡಾ ಗುಣಾ ನೋಡು.(ಫೋಟೊ ನೋಡಿ ಗುಣ ಅರಿಯುವ ವಿದ್ಯೆ ನಾನಿನ್ನೂ ಕಲಿತಿಲ್ಲ)
ನಮ್ಮಮ್ಮ-ಛೇ ಛೇ ಬೇಡ ಬೇಡಾ, ಮುಖದಲ್ಲಿ ಲಕ್ಷಣವೇ ಇರೋದಿಲ್ಲ.
ನಮ್ಮಪ್ಪ- ನಿನ್ನಿಷ್ಟಾ ಕಣಪ್ಪ.
ನಾನು- ಈ ಹುಡುಗಿ ತುಂಬಾ ದಪ್ಪ ಇದ್ದ ಹಾಗಿದೆ
ಚಿಕ್ಕಪ್ಪ-   ಹೆಹೆಹೆ, ಮೈ ಕೈ ತುಂಬಿ ಕೊಂಡು ಸಾಕ್ಷಾತ್ ಗಜ ಗೌರಿ ಥರಾ ಲಕ್ಷಣವಾಗಿದ್ದಾಳೆ.
ನಮ್ಮಮ್ಮ-ಛೇ ಬೇಡ ,ಇವನಿಗಿಂತಾ ದೊಡ್ಡೋಳ ಹಾಗೆ ಕಾಣಿಸ್ತಾಳೆ.
ನಮ್ಮಪ್ಪ- ನಿನ್ನಿಷ್ಟ ಬೇರೆ ಯಾವುದಾದ್ರೂ ನೋಡು.
ನಾನು- ಈ ಹುಡುಗಿಗೆ ಟಿಬಿ ಇದೆಯಾ ಚಿಕ್ಕಪ್ಪಾ, ಇಷ್ಟೊಂದು ಸೊರಗಿ ಹೋಗಿದ್ದಾಳೆ.
ಚಿಕ್ಕಪ್ಪಾ-ಹೆ ಹೆ ಹೆ ಇನ್ನೂ ಹುಡುಗಾಟಿಕೆ ಬಿಟ್ಟಿಲ್ಲಾ, ತೆಳ್ಳಗೆ ಒಳ್ಳೆ ಗೊಂಬೆ ಹಾಗಿದ್ದಾಳೆ.
ಚಿಕ್ಕಪ್ಪ ನನ್ನ ಕಕ್ಕ ಸನ್ನಿವೇಷವನ್ನು ಇನ್ನೂ ಮರೆತಿಲ್ಲವೆಂದು ಸುಸ್ಪಷ್ಟವಾಯಿತು. ಹಾವಿನ ದ್ವೇಷ ಹನ್ನೆರೆಡು ವರುಷವಾದರೆ, ಈ ಚಿಕ್ಕಪ್ಪನದು ಇಪ್ಪತ್ನಾಲ್ಕು ವರುಷ ಎಂದೆನಿತು.
ಚಿಕ್ಕಪ್ಪ ಮಾತ್ರ ಬೇಸರದಿಂದ " ನೀವೆಲ್ಲ ಈಗಿನ ಕಾಲದ ಹುಡುಗರಪ್ಪಾ, ಥಳಕು ಬಳಕಾಗಿರುವ ಹುಡುಗೀರೇ ಬೇಕು, ಇಂಥಾವೆಲ್ಲ ನಿಮಗೆಲ್ಲಿ ಸರಿ ಹೋಗ್ತಾವೆ" ಎಂದರು.
ನಾನು ತಕ್ಷಣವೇ ವಿಷಯ ಬದಲಾಯಿಸಿದೆ. ಯಾಕೆಂದರೆ ಇವರು ಇಂಥಾದ್ದೇ ಇನ್ನೂ ಎರಡು ಮೂರು ಡೈಲಾಗು ಹೊಡೆದಿದ್ದರೆ, ನಮ್ಮಮ್ಮ ಸಂಪೂರ್ಣವಾಗಿ ಅವರ ಪಕ್ಷ ವಹಿಸುವ ಸಂಭವವಿತ್ತು.
ಚಿಕ್ಕಪ್ಪ ಅದೂ ಇದು ಮಾತನಾಡಿ ನಾನು ಇನ್ನೊಮ್ಮೆ ಬರುತ್ತೇನೆಂದು ಹೊರಟು ಹೋದರು.
ಮುಂದಿನ ಭಾಗ ಬೀಸೋ ದೊಣ್ಣೆ ತಪ್ಪಿದರೆ! : ಭಾಗ ೨

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.