Skip to main content

'ಸ್ವಯಂವರ' ಎಂಬ ಅವಾಂತರ ....!!!!!!!

ಬರೆದಿದ್ದುAugust 1, 2010
12ಅನಿಸಿಕೆಗಳು

ಬ್ಬಬ್ಬ್ಬಾ!!!!!!!! ನಾವು ನಮ್ಮ ಜಗತ್ತು, ನಮ್ಮ ವೈಜ್ಞಾನಿಕತೆ ಎಷ್ಟೊಂದು ಮುಂದುವರೆದಿದೆ. ಅದು ನಿಜಕ್ಕೂ ಸಂತಸವೇ. ಆದರೆ ಅದೇ ತಾಂತ್ರಿಕತೆ ಎಷ್ಟೆಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ ಎನ್ನುವುದನ್ನು ನೆನೆಸಿಕೊಂಡರೆ ಮೈಜುಮ್ಮೆನ್ನದಿರುವುದಿಲ್ಲ. ಈಗ ಅದನ್ನೆಲ್ಲ ಹೇಳಿ ನಿಮ್ಮ ತಲೆಗೆ ಹುಳು ಬಿಡುವಿದಿಲ್ಲ ಬಿಡಿ. ಸದ್ಯಕ್ಕೆ ಕೇವಲ 'ಟಿ.ವಿ' ಎಂಬ ಒಂದುಕಾಲದ ಮೂರ್ಖಪೆಟ್ಟಿಗೆ ಎಷ್ಟೊಂದು ಜನರನ್ನು ಮೂರ್ಖರನ್ನಾಗಿಸಿದೆ ನೋಡಿ!!
ಮೊದಮೊದಲು ಟಾಟಾ-ಬಿರ್ಲಾ, ಅಂಬಾನಿ, ಬಜಾಜ್, ಐಟಿಸಿ ಮತ್ತಿತರ ಕಂಪನಿಗಳ ಜೋಬಿಗೆ Advertizeಗಳ ರೂಪದಲ್ಲಿ ಕೈಹಾಕಿ ಕಾಸು ಕಾಣುತ್ತಿದ್ದ ಚಾನಲ್ ಗಳು, ನಿಧಾನವಾಗಿ ನಮ್ಮ ಸಂಸ್ಕೃತಿಯ ಮೇಲೆ ಯಾವರೀತಿಯ ದಾಳಿಯಿಟ್ಟವೆಂದರೆ ಇಂದು ಅವೇನೇ ಮಾಡಿದರೂ ಅದು ನಮ್ಮ ಸಂಸ್ಕೃತಿಯ ಭಾಗವೆಂದೇ ನಾವೂ ನೀವೂ ಎಲ್ಲರೂ ನಂಬುವಂತಿದೆ. ಅಷ್ಟೂ ಸಾಲದೆಂಬಂತೆ ಇಂದು ಬೆಳ್ಳಂಬೆಳಿಗ್ಗೆ ಜೋತಿಷ್ಯ ಕಾರ್ಯಕ್ರಮಗಳನ್ನು ಪ್ರಸಾರಮಾಡುವಮೂಲಕ ಬೀದಿ ಬದಿ ಕುಳಿತು ಗಿಳಿ ಶಾಸ್ತ್ರ ಹೇಳುತ್ತಾ ಹೊಟ್ಟೆಹೊರೆದುಕೊಳ್ಳುತ್ತಿದ್ದವರ ಬಾಯಿಗೆ ಮಣ್ಣುಹಾಕಿವೆ. ಅದು ಹೋಗಲಿ ಅಂದರೆ ಊರೂರು ತಿರುಗಿ ಹತ್ತಾರುಕಡೆ ವಿಚಾರಿಸಿ ಒಂದು ಗಂಡಿಗೆ ಒಂದು ಒಳ್ಳೆಯ ಹೆಣ್ಣಿನ ಸಂಬಂದಗಳನ್ನು ಹುಡುಕಿ ಐನೂರು ಸಾವಿರವೋ ತೆಗೆದುಕೊಂಡು ಸಂಸಾರದೂಗಿಸುತ್ತಿದ್ದ ಬಡಪೆಟ್ಟಿಗೆಗೂ ನಮ್ಮ ಮಾಜಿ ನಟೀಮಣಿ ರಕ್ಷಿತಾರಂತಹವರು ಸುತ್ತಿಗೆಯ ಮೊಳೆಯೊಡೆದಿದ್ದಾರೆ.
 ಕಳೆದ ಭಾನುವಾರ ಎಂದಿನಂತೆ ಹತ್ತು ಗಂಟೆಗೆ ಎದ್ದು ಹಬೆಯಾಡುತ್ತಿದ್ದ ಕಾಫಿಯ ಕಪ್ಪಿಗೆ ತುಟಿಯಿಟ್ಟು ಟಿ.ವಿಯ ರಿಮೋಟಿಗೊಂದು ಮೊಟುಕಿ, ಚಾನಲ್ ಗಳನ್ನು ಬದಲಾಯಿಸುತ್ತಾ ಕುಳಿತೆ. ಸುವರ್ಣ ಚಾನಲ್ ನಲ್ಲಿ ಆ ವಾರ ಪೂರ್ತಿ ಪ್ರಸಾರವಾಗಿದ್ದ 'ಸ್ವಯಂವರ' ಕಾರ್ಯಕ್ರಮದ ಮರುಪ್ರಸಾರ ಬರುತ್ತಿತ್ತು. ಆ ಅಸಂಬದ್ದ reality showಗಳನ್ನು ನೋಡಲು ಇಷ್ಟವಿಲ್ಲದ್ದಿದ್ದರಿಂದ ಚಾನಲ್ ಬದಲಾಯಿಸಿದೆ. ಆ ತರಹದ ಕಾರ್ಯಕ್ರಮಗಳು ಸಮಾಜಕ್ಕೆ ಒಳಿತುಮಾಡುವುದಕ್ಕಿಂತ ಕೇಡು ಬಗೆದಿರುವುದೇ ಹೆಚ್ಚೆಂದು ನನ್ನ ಅಭಿಪ್ರಾಯ. ಅಷ್ಟರಲ್ಲಿ ನನ್ನ ಭಾವಮೈದುನ ಹರಿ
''ಭಾವ! ಭಾವ! ಬದ್ಲಾಯಿಸ್ಬೇಡಿ ಈವಾರ ಪೂರ್ತಿ ಆ programme ನೋಡೋಕಾಗ್ಲಿಲ್ಲ ಪ್ಲೀಸ್!" ಅಂದ. ವಿದಿಯಿಲ್ಲದೆ ಕಾಫಿ ಹೀರೋವರೆಗೆ ಕಷ್ಟಪಟ್ಟು ಆ ಕಾರ್ಯಕ್ರಮ ನೋಡುವ ಅನಿವಾರ್ಯತೆಗೆ ಸಿಲುಕಿದೆ. ಯಾರೋ ಒಬ್ಬ ಜುಬ್ಬ ಪೈಜಾಮ ಹಾಕಿದ ಸತ್ತನಾಯಿ ಎಳೆಯುವವರು ತಲೆಗೆ ಎಣ್ಣೆ ಬಳಿದುಕೊಂಡವರಂತೆ ಎಣ್ಣೆ ಬಳಿದುಕೊಂಡ (ಆತನ ಮೇಲೆ ಇಷ್ಟು ಕೋಪವನ್ನು ವ್ಯಕ್ತಪಡಿಸುತ್ತಿತುವ ಕಾರಣ ಮುಂದೆ ನಿಮಗೇ ತಿಳಿಯುತ್ತದೆ) ವ್ಯಕ್ತಿಯೊಬ್ಬ ಅಲ್ಲಿ ಬಂದಿದ್ದ ವಧುವಿಗೆ ಆ ಸ್ಪರ್ಧೆಗೆ ಬಂದಿರುವ ಹುಡುಗರ ಜನ್ಮದಿನಾಂಕವನ್ನಾಧರಿಸಿ ಅವರ ಭವಿಷ್ಯವೇಳುತ್ತಿದ್ದ. ಹಾಗೆ ಹೇಳುತ್ತಾ ಒಬ್ಬ ಹುಡುಗನ ಜನ್ಮದಿನಾಂಕವನ್ನು ನೋಡಿ,
"ಈ ದಿನಾಂಕದಲ್ಲಿ ಹುಟ್ಟಿದವರನ್ನು ಮದುವೆಯಾಗುವುದಿರಲಿ ಭೂಮಿಯ ಮೇಲೂ ಅವರು ಬದುಕಲು ಅರ್ಹರಲ್ಲ" ಎಂಬ ಅರ್ಥಬರುವಂತೆ ಘೋಷಿಸಿಬಿಟ್ಟ. ಆ ಕ್ಷಣದಲ್ಲಿ ಆತ ನನಗೆ ನಮ್ಮ ಸಂಸ್ಕೃತಿಯ ಭಯೋತ್ಪಾದಕನಂತೆ ಕಂಡ. ಎಲ್ಲರೂ ತಿಳಿದ ಮಟ್ಟಿಗೆ ಜ್ಯೋತಿಷ್ಯಶಾಸ್ತ್ರವೆಂಬುದು ನಮ್ಮ ದೇಶದ ಅಷ್ಟೇ ಏಕೆ ಪ್ರಪಂಚದ ಖಗೋಳಶಾಸ್ತ್ರದ ಭದ್ರಬುನಾದಿ.ಅದು ಮನುಷ್ಯ ಬದುಕಲು ಬೇಕಾಗುವ ಜೀವನೋತ್ಸಾಹವನ್ನು ತುಂಬುತ್ತದೆ. ಜೀವನದಲ್ಲಿ ಮುಂದೇನು ಎನ್ನುವಾಗ ಧೈರ್ಯ ತುಂಬಿ ಜೀವನದ ಮೇಲಿ ನಂಬಿಕೆ ಬರುವಂತೆ ಮಾಡುವುದು ನಮ್ಮ ಜ್ಯೋತಿಷ್ಯ. ಅದು ಇಂದು ಇಂತಹ ಅರೆಬರೆ ತಿಳಿದವರಿಂದ ನಂಬಿಕೆ ಹುಟ್ಟಿಸುವ ಬದಲು ಮೂಡನಂಬಿಕೆ ಮೂಡಲು ಕಾರಣವಾಗಿರುವುದು ಪ್ರಸ್ತುತ ಸ್ಥಿತಿಯ ದುರಂತವೇ ಸರಿ. ಈ ರೀತಿ ಯೋಚನಾಲಹರಿ ಹರಿಯುವಷ್ಟರಲ್ಲಿ ನನ್ನ ಪಾಲಿನ ಕಾಫಿ ಮುಗಿದಿತ್ತು. ಲೋಟ ಕೆಳಗಿಟ್ಟು ಮೇಲೆದ್ದೆ. ಹರಿಗೂ ಸಹ ಬೇಜಾರಾಗಿರಬೇಕೆನಿಸುತ್ತೆ. ಮಧ್ಯಾನ್ಹ ತಾನು ಸ್ನೇಹಿತನ ನಿಶ್ಚಿತಾರ್ಥವೊಂದಕ್ಕೆ ಹೊರಟಿರುವುದಾಗಿಯೂ ಊಟಕ್ಕೆ ಕಾಯಬೇಡಿರೆಂದು ತಿಳಿಸಿ ಹೊರಟ.
ಸುಮಾರು ೩ ಘಂಟೆಯ ಸುಮಾರಿಗೆ ವಾಪಸ್ಸು ಬಂದು ನನ್ನವಳಿಗೆ ಅಂದರೆ ಅವನ ಅಕ್ಕನಿಗೆ
"ಊಟ ಕೊಡಕ್ಕ ಹೊಟ್ಟೆ ಹಸಿತೀದೆ" ಅಂದ. ನಮಗೋ ಆಶ್ಚರ್ಯ!! ತಡೆಯದೇ ಕೇಳಿದೆ.
"ಯಾಕಯ್ಯ? ಎಂಗೇಜ್ಮೆಂಟ್ ನಲ್ಲಿ ಊಟ ಹಾಕ್ಲಿಲ್ವೋ?" ರೇಗಿಸಿದೆ
"ಅಯ್ಯೋ! ಯಾಕೇಳ್ತೀತೀ ಭಾವ!! ಆ ದರಿದ್ರ ಸ್ವಯಂವರ ಕಾರ್ಯಕ್ರಮದಿಂದಾಗಿ ನನ್ನ ಸ್ನೇಹಿತನ ಮದ್ವೆ ಮುರಿದುಬಿತ್ತು" ಅಂದ.
"ಏಕೆ? ಏನಾಯ್ತು?"
"ಏನಿಲ್ಲ ಭಾವ ಬೆಳಿಗ್ಗೆತಾನೆ ನೋಡಿದ್ರಲ್ಲ ಆ programmeನ, ಅವನ್ಯಾವನೋ ಹೇಳಿದ್ನಲ್ಲ ಆ ಡೇಟ್ ನಲ್ಲಿ ಹುಟ್ಟುದೋರು ಸರೀ ಇಲ್ಲಾಂತ, ಅದಕ್ಕೆ ನಿಂತೋಯ್ತು, ಯಾಕಂದ್ರೆ ನನ್ನ friend ಕೂಡ ಹುಟ್ಟಿರೋದು ಅದೇ ಡೇಟ್ ನಲ್ಲಿ" ಅಂದ.
ಈಗ ನೀವೇ ಹೇಳಿ ಇದು ಅವಾಂತರವಲ್ಲದೆ ಮತ್ತಿನ್ನೇನು. ಇವುಗಳಿಗೆ ಕಡಿವಾಣಹಾಕಲು ಯಾವುದೇ ಮಾರ್ಗಗಳಿಲ್ಲವೇ?
ಇದು ನಿಜಕ್ಕೂ ಚಿಂತಿಸಬೇಕಾದ ವಿಷಯ. ಅಲ್ಲವೇ?

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 08/02/2010 - 12:07
ವಿನಯ್_ಜಿ ಸೋಮ, 08/02/2010 - 12:33

ಉಮಾಶಂಕರ್ ರವರೆ,
ನಿಮ್ಮ ಭಾವಮೈದುನ ಹರಿ ಯವರ ಮಿತ್ರನ ಎಂಗೇಜ್ಮೆಂಟ್ ರದ್ದಾದುದ್ದ ಕೇಳಿ ಬೇಸರವಾಯಿತು. ಬಹುಶಃ ಜನರ ಮೌಢ್ಯದ ಪರಮಾವಧಿ ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಈ ಕಾರ್ಯಕ್ರಮ ನೋಡಿದ ಮತ್ತು ಎಂಗೇಜ್ಮೆಂಟ್ ರದ್ದುಗೊಳಿಸಿದ ಜನರೇ ಉದಾಹರಣೆ ಎನ್ನಿ...!!! ನೀವು ಕೆಳಗಿನ ಇ-ಮೇಲ್ ವಿಳಾಸಕ್ಕೆ ಒಂದು ಪತ್ರ ಬರೆದುಬಿಡಿ... ಹಾಗೇ ಅವರಿಗೆ ಮುಂದೆ ಟಿ.ವಿ ಯಲ್ಲಿ ಈ ರೀತಿಯ "ಪುಕ್ಕಟೆ ಸಲಹೆ" ಗಳನ್ನ ನೀಡದಂತೆ ಗಮನವಿರಿಸಲು ಹೇಳಿ...
suvarna@suvarna.tv
ಆ ಹುಡುಗನಿಗೆ ಮುಂದೆ ಇನ್ನೂ ಒೞೆಯ-ಸುಸಂಸ್ಕೃತ ಹುಡುಗಿ ಸಿಕ್ಕಿ, ಮದುವೆಯಾಗಿ ಚೆನ್ನಾಗಿ ಬಾಳಲಿ ಎಂದು ಹರಸುವೆ... :)
-- ವಿನಯ್

ಗುರು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 08/02/2010 - 15:37

" ಯಾರೋ ಒಬ್ಬ ಜುಬ್ಬ ಪೈಜಾಮ ಹಾಕಿದ ಸತ್ತನಾಯಿ ಎಳೆಯುವವರು ತಲೆಗೆ ಎಣ್ಣೆ ಬಳಿದುಕೊಂಡವರಂತೆ ಎಣ್ಣೆ ಬಳಿದುಕೊಂಡ ವ್ಯಕ್ತಿಯೊಬ್ಬ "...... ಅದ್ಭುತವಾದ ಹೋಲಿಕೆ ಮಾರಾಯ್ರೆ........ ನಕ್ಕು ನಕ್ಕು ಸಾಕಯ್ತು..... Smile 

Basavaraj G ಗುರು, 08/05/2010 - 18:57

ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ಸ್ವಯಂವರದಲ್ಲಿನ ಜ್ಯೋತಿಷಿಯ ಬಗ್ಗೆ ವರ್ಣನೆ ಮತ್ತು ಅನಿಸಿಕೆ ಸರಿಯಾಗಿದೆ. ನಮ್ಮ ಜನ ಇನ್ನು ವೈಜ್ಞಾನಿಕವಾಗಿ ಅಲೋಚನಾ ಪರರಾಗಿಲ್ಲ. ಕನ್ನಡದ ಎಲ್ಲಾ ಛಾನಲುಗಳು ಟಿಆರ್‌ಪಿ ಹೆಚ್ಚಿಸಿಕೊಳ್ಳಲು ವೀಕ್ಷಕರಿಗೆ ಹಳಸಲು ವಿಷಯಗಳನ್ನು ವಿನೂತನವೆಂಬಂತೆ, ಅವೈಜ್ಞಾನಿಕ ವಿಷಯಗಳನ್ನು ಹೊಸದಾಗಿ ಕಂಡುಹಿಡಿದವರಂತೆ ಬಿತ್ತರಿಸುತ್ತಿದ್ದಾರೆ. ವಾಕರಿಕೆ ಬರಿಸುವ ಇಂತಹ ಕಾರ್ಯಕ್ರಮಗಳನ್ನು ಜನತಿರಸ್ಕರಿಸಬೇಕು.

ತಲೆಹರಟೆ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 08/07/2010 - 12:36

 ನಾವು ಬಖ್ರಾಗಳಾಗಲು ತಯಾರಿರುವವರೆಗೆ ನಮ್ಮನ್ನು ಬಖ್ರಾಗಳನ್ನಾಗಿ ಮಾಡುವವರು ಇರ್ತಾರೆ. ಪಾಶ್ಚಾತ್ಯ ಜೀವನ ಶೈಲಿಯ ಅಂಧಾನುಕರಣೆಯೇ ಜೀವನದ ಪರಮೋದ್ದೇಶ ಎಂದು ನಂಬಿರುವ ಮೂರ್ಖರು ಗಂಟೆಗಟ್ಲೆ 'reality shows'  ಎಂಬ ಅಸಹ್ಯ ಕಾರ್ಯಕ್ರಮಗಳನ್ನು ಮೈಯೆಲ್ಲಾ ಕಣ್ಣಾಗಿ ನೋಡ್ತಾ ಇದ್ದ್ರೆ ದುಡ್ಡು ದೋಚುವುದೇ ಧ್ಯೇಯವಾಗಿರುವ ಟಿ. ವಿ. ಚಾನಲ್ ಗಳು ಇನ್ನೇನು ಮಾಡ್ತಾರೆ ?

ಹೇಳುವವರಿಗೆ ಬುದ್ದಿ ಇಲ್ಲ ಅ೦ದ್ರೆ ನಮ್ ಜನಾನು ಹ೦ಗೇ ಮಾಡ್ತಾರೆ...

MAMATHA.P ಧ, 08/11/2010 - 13:33

ಸರ್ ನಿಜವಾಗಲು programme ಬಗ್ಗೆ ಚಿ೦ತಿಸಲೇ ಬೇಕು. ನಮ್ಮ ಸ೦ಸ್ಕೃತಿಯೇ ಮಾಯವಾಗುತಿದೆ  ಅನಿಸುತ್ತಿದೆ. ನಿಮ್ಮ ಭಾವಮೈದುನ ಹರಿ ಯವರ ಮಿತ್ರನ ಎಂಗೇಜ್ಮೆಂಟ್ ಮುರಿದು ಬಿದುದ್ದಕ್ಕು ಈ Programme ಕಾರಣ ಎ೦ದು ಇನ್ನು ಬೆಸರ ಅನಿಸುತ್ತಿದೆ,  ತಿಳಿಸುವ  ಶೈಲಿ ತು೦ಬ ಚೆನ್ನಾಗಿ ಮೂಡಿಬ೦ದಿದೆ ಉಮಾಶ೦ಕರ್ ಸರ್.

ಉಮಾಶಂಕರ ಬಿ.ಎಸ್ ಶುಕ್ರ, 08/13/2010 - 12:12

ಮಾನ್ಯ ಅನಾಮಿಕ ಬಂಧುಗಳೆ, ಶ್ರೀ ವಿನಯ್ ರವರೆ, ಶ್ರೀ ಗುರು, ಶ್ರೀ ಬಸವರಾಜ್, ಶ್ರೀ ತಲೆಹರಟೆ, ಶ್ರೀ ಶ್ರೀನಿಧಿ ಹಂಡೆ ಮತ್ತು ಮಮತಾ ರವರೆ ನಿಮ್ಮ ಪ್ರಜ್ಞಾಪೂರ್ವಕ ಅಭಿಪ್ರಾಯಗಳಿಗೆ ವಂದನೆಗಳು. ಎಲ್ಲಿಯವರೆಗೆ ಮೋಸಹೋಗಲು ಜನರು ತಯಾರಿರುತ್ತಾರೋ ಅಲ್ಲಿಯವರೆಗೂ ಮೋಸಮಾಡುವವರು ಇರುತ್ತಾರೆಂಬ ನಾಣ್ಣುಡಿಯಂತೆ, ಎಲ್ಲಿಯವರೆಗೂ ಮೂಢನಂಬಿಕೆಗಳನ್ನು ನಂಬಲು ತಯಾರಿರುತ್ತಾರೋ ಅಲ್ಲಿಯವರೆಗೂ ನಂಬಿಸುವವರೂ ಇರುತ್ತಾರೆ.
ಜಾತಕಗಳನ್ನು ನೋಡಿ ಎಲ್ಲಾಸರಿಯಾಗಿವೆ ಎಂದು ಮದುವೆಯಾದ ಜೋಡಿಯಲ್ಲಿ ಯಾವೊಂದೂ ಜೋಡಿಯೂ ಸುಖವಾಗಿರುವುದ ನಾ ಕಾಣೆ. ಜಾತಕಗಳನ್ನು ಹೊಂದಿಸಿ ಮದುವೆಯಾದರೆ ಚೆನ್ನಾಗಿರುತ್ತಾರೆಂಬ ನಂಬಿಕೆಯಿಂದ ನಮ್ಮ ಹಿರಿಯರು ಜಾತಕಗಳನ್ನು ಹೊದಿಸುತ್ತಾರಷ್ಟೆ. ಅದನ್ನೇ ಆ ಚಾನಲ್ಲ್ ಮೂಢನಂಬಿಕೆಯಾಗಿ ಮಾರ್ಪಡಿಸುತ್ತಿದೆ ಎನಿಸುತ್ತದೆ. ದಂಪಂತಿಗಳು ಸುಖವಾಗಿರಬೇಕಾದರೆ, ಪರಸ್ಪರ ನಂಬಿಕೆ, ಸಹಬಾಳ್ವೆ, ಸಹನೆ, ಪ್ರೀತಿ ವಿಶ್ವಾಸಗಳು ಬಲು ಮುಖ್ಯ. ಅದನ್ನೇನಾದರೂ ತೋರಿಸಿದ್ದಲ್ಲಿ ಆ ಚಾನಲ್ ಗೆ Hat's off ಎನ್ನಬಹುದಿತ್ತು. ಅಲ್ಲವೇ?

ಉಮಾಶಂಕರ ಬಿ.ಎಸ್ ಶುಕ್ರ, 09/03/2010 - 18:11

ಪ್ರಿಯ ವಿಸ್ಮಯನಗರಿಗರೆ ಒಂದು ಸಂತಸದ ವಿಷಯವೆಂದರೆ ಆ ಅವಾಂತರದ ಸ್ವಯಂವರ ಕಾರ್ಯಕ್ರಮ ನಿಂತು ಹೋಗಿದೆ :)

Prabhu Sandood… (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 09/16/2010 - 16:59

ಪ್ರೀಯ ಉಮಾಶಂಕರ್,
ನಿಮ್ಮ ವಿಶ್ಲೀಷಣೆ ಚೆನ್ನಾಗಿದೆ. ನಾನು ಒಂಡೆರಡು ಬಾರಿ ನನ್ನ ಸ್ನೇಹತನ ಮನೆಗೆ ಹೋಗಿದ್ದಾಗ ಆ ಧಾರವಾಹಿಯನ್ನು ಇಷ್ಟವಿಲ್ಲದ್ದಿದರೂ ಅವರೂ ನೋಡುವಾಗ ವಿಧಿಯಿಲ್ಲದೇ ನೋಡಬೇಕಾಗಿ ಬಂದಿದ್ದು ವಿಪರ್ಯಾಸ.
ನಾನ್ಉ ನಿಮ್ಮ ವೀಶ್ಲೇಷಣೆಯನ್ನು ನೋಡಿದಾಗ ಅಂತಹ ಅಸಂಬಂದ ಧಾರವಾಹಿಗಳನ್ನು ಇವರು ಪರಭಾಷ ಪ್ರಭಾವಕ್ಕೆ ಒಳಪಟ್ಟು ಚಾನಲ್ ಗಳ ಟಿಆರ್ ಪಿ ಹೆಚ್ಚಿಸಲು ಮಾಡುವ ಕಸರತ್ತು. ಅದರಲ್ಲೂ ಮಹಿಳೆಯರನ್ನು ಒಲೈಸುವ ಒಂದು ವಿಧಾನ, .
ಆ ಕಾರ್ಯಕ್ರಮದಲ್ಲಿ ಒಂದು ಹುಡುಗಿಗೆ, ಆರು ಹುಡುಗರು ನಿಖರವಾಗಿ ತಿಳಿದಿಲ್ಲ ಅಂದಾಜಿನಲ್ಲಿ ಹಾಕುತ್ತಿದ್ದೇನೆ ಅವರ ಅಭಿಪ್ರಾಯದಂತೆ ಅಂದರೆ ದಿನಕೊಬ್ಬರಂತೆ ಎಲಿಮೀನೇಟ್ ಆಗುತ್ತಾರಂತೆ.
ಪೂರ್ತಿಯಾಗಿ ಆ ಧಾರವಾಹಿಯನ್ನು ನೋಡುವವರು ಆ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಇತರೆ ಯುವಕರನ್ನು ಮದುವೆಯಾಗಲು ಒಪ್ಪುವರೇ? ಇವರು ಯಾವ ಮುಖವೆತ್ತಿಕೊಂಡು ವಧುವನ್ನು ಕೇಳಲು ಹೋಗುವರು.
ನಿಜಕ್ಕೂ ಇಂದೊಂದು ಹೀನಾಯ ಧಾರವಾಹಿಗಯೇ ಸರಿ, ಕೇವಲ ಜನರ ಮಾನ ತೆಗೆಯಲು ಇರುವಂತಹ ಒಂದು ಕ್ರಿಯೇ ಎಂಬುದೇ ನನ್ನ ಅಭಿಪ್ರಾಯ
 
ಇಂತಿ ನಿಮ್ಮವ
ಪ್ರಭು ಸಂಡೋಡ್ ಮಹಾರಾಜ್
 

ಉಮಾಶಂಕರ ಬಿ.ಎಸ್ ಗುರು, 09/16/2010 - 17:08

ನಿಮ್ಮ ಪ್ರತಿಕ್ರಿಯೆಗೆ ಬಹಳ ಧನ್ಯವಾದಗಳು ಪ್ರಭು ಸಂಡೋಡ್ ಮಹಾರಾಜ್ ರವರೆ,
ನಮ್ಮ ಪುಣ್ಯ ಈ ಧಾರಾವಾಹಿಯ ಪ್ರಸಾರ ನಿಂತಿದೆ.

ನಿರಂಜನ್ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 03/27/2011 - 06:46

ನಿಮ್ಮ ಅಭಿಪ್ರಾಯ ಸರಿಯಾಗಿದೆ. ಅದರಲ್ಲ್ಲೂ ಮಕ್ಕಳ ಮನಸ್ಸಿನ ಮೇಲೆ ಘಾಸಿ ಮಾಡುವ ರಿಯಾಲಿಟಿ ಶೋಗನ್ನು ನಿಲ್ಲಿಸಬೇಕು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.