Skip to main content

ಎಲ್ಲಾ ಸರಿಯಾಗಿರಲು, ಲೈಫು ಬೋರಾಗುವುದು!

ಬರೆದಿದ್ದುApril 23, 2010
12ಅನಿಸಿಕೆಗಳು

ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ
ಹೊರಗೆ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ಮೋಹನ ಸುಮ್ಮನೆ ಕೂತು ಸಿಗರೇಟು ಸುಡುತ್ತಿದ್ದ. ಎಲ್ಲಿಂದಲೋ ತೇಲಿ ಬರುತ್ತಿದ್ದ ಹದವಾದ ಮಣ್ಣಿನ ವಾಸನೆ.ಅವನ ಮನ್ನಸ್ಸಿನಲ್ಲಿ ನೂರೆಂಟು ತರಂಗಗಳನ್ನೆಬ್ಬಿಸುತ್ತಿತ್ತು. ಕಭಿ ಕಭಿ ಮೇರೆ ದಿಲ್ ಮೈ ಖಯಾಲ್ ಆತಾ ಹೈ ಎಂದು ಗುನುಗುತ್ತಾ ಇನ್ನೊಂದು ಸಿಗರೇಟಿಗೆ ಬೆಂಕಿ ಕೊಟ್ಟ.ಇಂತಹ ಮಳೆಯ ದಿನಗಳಲ್ಲೇ ಅಲ್ಲವೇ ನನ್ನ ಬಾಲ್ಯದ ಬಂಗಾರದ ದಿನಗಳು ಶ್ರೀಮಂತವಾದದ್ದು. ಇದೆ ಮಳೆಯಲ್ಲೇ ಅಲ್ಲವೇ ನನ್ನ ಪುಟ್ಟ ಪುಟ್ಟ ಗೆಳೆಯರೊಡಗೂಡಿ ಕಪ್ಪೆ ಗೂಡು ಕಟ್ಟುತ್ತಿದ್ದೆವಲ್ಲ ?.ಎಷ್ಟು ವರ್ಷಗಳು ಸುಖಾಸುಮ್ಮನೆ ಕಳೆದು ಹೋಯಿತು ಎಂದುಕೊಂಡ. ಆದರೆ ತನ್ನ ಬಾಲ್ಯದ ದಿನಗಳನ್ನು ನೆನಸಿಕೊೞುತ್ತಿದ್ದ ಹಾಗೆ ಅವನಿಗೆ ನೆನಪಾದವಳು ಬೃಂದಾ . ಒಮ್ಮೆ ಅವನ ಮನಸು ಆಹ್ಲಾದಕರ ಸುವಾಸನೆಯಿಂದ ತುಂಬಿದಂತಾಯಿತು.
ಒಂದನೇ ಕ್ಲಾಸಿನಿಂದ ಏಳನೇ ಕ್ಲಾಸಿನವರೆಗೂ ಓದಿದ ಕಿನ್ನರ ವಿದ್ಯಾಲಯದಲ್ಲಿ ಕ್ಲಾಸ್ ಮೇಟ್ ಆಗಿದ್ದವಳು.
ಅವಳೊಂದಿಗೆ ಹಂಚಿಕೊಂಡು ತಿಂದ ಲಂಚ್ ಬಾಕ್ಸ್ ರುಚಿ. ಅವಳೊಡನೆ ಆಡಿದ ಜಗಳಗಳು. ಕ್ಲಾಸಿಗೇ ಫಸ್ಟ್ ಬರಲು ನಡೆಸುತ್ತಿದ್ದ ಪೈಪೋಟಿ. ಹಾಡು, ಚರ್ಚೆ, ಪ್ರಬಂಧ ಮುಂತಾದ ಸ್ಪರ್ಧೆಗಳಲ್ಲಿ ಗೆದ್ದ ಬಹುಮಾನಗಳು ಎಲ್ಲ ನೆನಪಿಗೆ ಬಂತು. ಯಾವುದೋ ಬೆಚ್ಚಗಿನ ನೆನಹುಗಳು ಅವನನ್ನು ಮುತ್ತಿದಂತಾಯಿತು. ಅವನ ತುಟಿಗಳ ಮೇಲೆ ಕಂಡೂ ಕಾಣದಂತಹ ಕಿರುನಗೆಯ ಲಾಸ್ಯ. ಸುಮಾರು ಹದಿನಾಲ್ಕು ವರ್ಷವಾಯಿತೇನೋ ಅವಳನ್ನು ನೋಡಿ. ಏಳನೇ ಕ್ಲಾಸಿನಲ್ಲಿದ್ದಗಲೇ ಅವರಪ್ಪನಿಗೆ ಮೇಘಾಲಯಕ್ಕೆ ವರ್ಗವಾಗಿ ಅವಳು ಹೊರಟು ಹೋದಳು. ಅದಾದ ನಂತರ ನಾನು ಹೈಸ್ಕೂಲ್ ಗೆ ಬೇರೆ ಕಡೆ ಸೇರಿಕೊಂಡೆ. ಸುಮಾರು ಏಳೆಂಟು ವರ್ಷಗಳಿಂದ ಅವಳಿಗೋಸ್ಕರ ಹುಡುಕದ ಜಾಗವಿಲ್ಲ. ಆರ್ಕುಟ್, ಫೇಸ್ ಬುಕ್ಕು, ನಿಂದ ಹಿಡಿದು ಹಳೆಸ್ಕೂಲಿನ ಗೆಳೆಯರು, ಟೀಚರ್ಸು, ಅವಳ ಹಳೆ ಮನೆ ಎಲ್ಲಾ ಕಡೆ ಹುಡುಕಿದ್ದಾಯ್ತು. ಇನ್ನಿರುವುದು ಒಂದೇ ದಾರಿ; ಅಲ್ಲಿ ಪ್ರಯತ್ನಿಸಬೇಕು ಅಂದುಕೊಂಡ.
ಕಾದಿರುವಳು ಕೃಷ್ಣಾ; ರಾಧೇ ...........ಬೃಂದಾವನದ ನಂದನದಲ್ಲಿ
ಬೃಂದಾ ತನ್ನ ಆಫೀಸು ಕೆಲಸವನ್ನೆಲ್ಲಾ ಮುಗಿಸಿ ಒಮ್ಮೆ ಸಮಯ ನೋಡಿಕೊಂಡಳು. ಇನ್ನೂ ಐದೂವರೆ. ಯಾಕೋ ಇಷ್ಟು ಬೇಗ ಮನೆಗೆ ಹೋಗಲು ಮನಸ್ಸಾಗಲಿಲ್ಲ. ಮತ್ತೆಲ್ಲಿಗೆ ಹೋಗುವುದು ಎಂದು ಒಮ್ಮೆ ಯೋಚಿಸಿದಳು. ಈ ಊರಿಗೆ ರಿಸರ್ಚಿಗೆ ಅಂತ ಬಂದು ಮೂರ್ನಾಲ್ಕು ವರ್ಷಗಳಾಗಿರಬೇಕು. ಹೇಳಿಕೊಳ್ಳುವಂತಹ ಗೆಳೆಯರೂ ಇಲ್ಲ. ಒಬ್ಬಳೇ ಸಿನೆಮಾಕ್ಕೆ ಹೋಗಿ ಅಭ್ಯಾಸವಿಲ್ಲ. ಇತ್ತೀಚೆಗೆ ಲೈಬ್ರೆರಿಯೂ ಕೂಡ ಬೋರು.
ಯಾವುದಾದರು ಪುಸ್ತಕ ಹಿಡಿದುಕೊಂಡು ಕಾಫಿ ಡೇ ಗೆ ಹೋಗುವುದೇ ಸರಿ ಎಂದು ತೀರ್ಮಾನಿಸಿದಳು. ಕಾಫಿ ಡೇ ನಲ್ಲ್ಲಿ ಕುಳಿತಿದ್ದಾಗ ಯಾರೋ ತನ್ನ ಇಬ್ಬರು ಚಿಕ್ಕ ಮುದ್ದಾದ ಮಕ್ಕಳು ಬಣ್ಣ ಬಣ್ಣದ ಬಟ್ಟೆ ತೊಟ್ಟು ಅಲ್ಲೇ ಸುಳಿದಾಡುತ್ತಿದ್ದಿದ್ದನ್ನು ಗಮನಿಸಿದಳು. ಅವಳಿಗೆ ತಕ್ಷಣ ನೆನಪಾದದ್ದು, ಬೆಂಗಳೂರಿನಲ್ಲಿ ಕಳೆದ ತನ್ನ ಬಾಲ್ಯ. ಮತ್ತು ಬಾಲ್ಯ ಸ್ನೇಹಿತ ಮೋಹನ. ಮೋಹನನ ನೆನಪು ಬರುತ್ತಲೇ ಅವಳ ಮನಸ್ಸು ಯಾವುದೋ ತಿಳಿನೀರಿನ ತೊರೆಯಲ್ಲಿ ಮಿಂದೆದ್ದ ಹಾಗಾಯಿತು. ತನ್ನಲ್ಲೇ ಒಮ್ಮೆ ಇಡಿಯಟ್ ಎಂದು ಗದರಿಸಿಕೊಂಡು ಸಂಭ್ರಮಿಸಿದಳು.
ಈಗವನು ಏನು ಮಾಡುತ್ತಿರಬಹುದು? ನನ್ನ ನೆನಪಿದೆಯೋ? ಇಲ್ಲವೋ ? ಅವನ ಬುದ್ದಿವಂತಿಕೆ ನೆನೆಸಿಕೊಂಡರೆ ಖಂಡಿತಾ ಯಾವುದಾದರು ಉತ್ತಮ ಉದ್ಯೋಗದಲ್ಲಿರುತ್ತಾನೆ, ಇಲ್ಲವೇ ಅವನ ಒರಟುತನ ನೆನಸಿಕೊಂಡರೆ ಒಬ್ಬ ಬೀದಿ ರೌಡಿಯಾಗಿರುತ್ತಾನೆ ಅಂದುಕೊಂಡಳು. ಎಷ್ಟು ವಯೋಲೆಂಟ್ ಆಗಿದ್ದ, ಅವನ ಒರಟುತನವೇ ಅವನ ಅಮೂಲ್ಯ ಆಕರ್ಷಣೆ ಅಂದುಕೊಂಡಳು. ತನ್ನನ್ನು ಬಿಳಿ ಜಿರಳೆ ಎಂದು ಛೇಡಿಸುತ್ತಿದ್ದಿದ್ದು, ತನ್ನ ಜಡೆಯನ್ನು ನೋವಾಗುವ ಹಾಗೆ ಎಳೆಯುತ್ತಾ ಹೈ ಹೈ ಎನ್ನುತ್ತಿದ್ದಿದ್ದು, ಎಲ್ಲ್ಲ ನೆನಪಾಯಿತು. ಈಗ ಎಲ್ಲಿರಬಹುದು ಅವನು? ಹಳೆ ಫ್ರೆಂಡ್ಸ್ ಯಾರೂ ಕಾಂಟ್ಯಾಕ್ಟ್ನಲ್ಲಿಲ್ಲ; ಸೊ ಹೇಗೆ ಹುಡುಕುವುದು ಅವನನ್ನು ಎಂದು ಯೋಚಿಸುತ್ತಾ ಕುಳಿತು ಕೊಂಡಳು. ಹೊರಗೆ ಸಣ್ಣಗೆ ಮಳೆ ಶುರುವಾಗಿ, ಮನೆಯ ನೆನಪಾಯಿತು. ಮಳೆ ನಿಲ್ಲುವವರೆಗೂ ಕಾಯುವುದು ಬೇಡ ಎಂದು ಯೋಚಿಸಿ, ತುಂತುರು ಮಳೆಯಲ್ಲಿ ಹೆಜ್ಜೆ ಹಾಕುತ್ತಾ ಹೊರಟಳು.
ದಯವಿರಲಿ ದಯವಿರಲಿ ದಾಮೋದರ
ದಾಮೋದರ ಹೆಗಡೆ ಅವತ್ತು ಮಾಮೂಲಿ ಟೈಮಿಗೆ ಆಫೀಸಿಗೆ ಬಂದರು. ಒಮ್ಮೆ ಹೊಗೆಸೊಪ್ಪು ಹಾಕಿಕೊಂಡು ಅದನ್ನು ಉಗಿದು ಬಂದರು. ಟಾಯ್ಲೆಟ್ಟಿಗೆ ಹೋಗಿ ಕನ್ನಡಿಯಲ್ಲಿ ಐದು ನಿಮಿಷ ಮುಖ ನೋಡಿಕೊಂಡರು. ಬೋಳು ಹಣೆಯ ಸುತ್ತ ಇನ್ನೂ ಉಳಿದಿದ್ದ ನಾಲ್ಕಾರು ಕೂದಲುಗಳನ್ನು ಬಾಚಿಕೊಂಡರು. ಪರವಾಗಿಲ್ಲ ವಯಸ್ಸಾದರೂ ಗೊತ್ತಾಗುವುದಿಲ್ಲ ಎಂದು ತನ್ನನ್ನು ತಾನೇ ಸಮಾಧಾನ ಪಡಿಸಿಕೊಂಡು ಬಂದು ಕೂರುವಷ್ಟರಲ್ಲಿ, ರಿಸೆಪ್ಶನ್ನಿಂದ ಫೋನು ಬಂತು. ಯಾರೋ ಮೋಹನ ಎಂಬ ಹುಡುಗ ನಿಮ್ಮನ್ನು ನೋಡಬೇಕಂತೆ ಎಂದು ರಿಸೆಪ್ಶನ್ ಹೇಳಿದಾಗ ಕಳಿಸು ಎಂದು ಹೇಳಿ ಫೋನಿಟ್ಟರು. ಯಾರಿರಬಹುದು ಈ ಮೋಹನ, ಬಹುಶಃ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ನೋಡಿ ಬರುವ ಅಭಿಮಾನಿಗಳಲ್ಲಿ ಇವನೂ ಒಬ್ಬನಿರಬಹುದು ಎಂದು ಯೋಚಿಸುತ್ತಾ ಕುಳಿತುಕೊಂಡರು.
ಒಳಗೆ ಬಂದ ಮೋಹನನನ್ನು ದಿಟ್ಟಿಸಿ ನೋಡಿದರು. ಬಹುಷಃ ವಯಸ್ಸು ಇಪ್ಪತ್ತೈದರ ಆಸುಪಾಸು ಇರಬಹುದು. ನನಗೊಬ್ಬ ಗಂಡು ಮಗನಿದ್ದಿದ್ದರೆ ಹೀಗೆ ಇರಲಿ ಅಂತಾ ಬಯಸುತ್ತಿದ್ದೆ; ಅಂದುಕೊಂಡರು.ಮದುವೆಯಾಗದೆ ಉಳಿದಿದ್ದಕ್ಕೆ ಬೇಜಾರಾಗುತ್ತಿದ್ದೆ. ಅವನ ಗಾಂಭೀರ್ಯ ತುಂಬಿದ ಮುಖದಲ್ಲಿ ಇರುವುದು ಉಡಾಫೆಯೋ ಅಥವಾ ಸ್ವಾಭಿಮಾನವೋ ಗುರುತಿಸುವುದು ಕಷ್ಟವಾಯಿತು.
ಮೊದಲು ಅವನೇ ಮಾತನಾಡಿದ " ಸರ್, ನನ್ನ ಹೆಸರು ಮೋಹನ ಅಂತಾ. ಬೆಂಗಳೂರಿನಲ್ಲೇ ಪ್ರೈವೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡ್ತಾ ಇದ್ದೀನಿ. ನಾನು ಓದಿದ್ದು ಜಯನಗರದ ಕಿನ್ನರ ವಿದ್ಯಾಲಯದಲ್ಲಿ. ನಾನು ಓದುವಾಗ ಬೃಂದಾ ಅಂತಾ ಒಬ್ಬಳು ಕ್ಲಾಸ್ ಮೇಟ್ ಇದ್ದಳು. ಬಹಳ ಕ್ಲೋಸ್ ಫ್ರೆಂಡ್. ಆ ಸ್ಕೂಲ್ ಬಿಟ್ಟ ಮೇಲೆ ಅವಳನ್ನು ನೋಡಲಿಕ್ಕೆ ಆಗಲಿಲ್ಲ. ನನ್ನ ಮಾವ ಇಂತಹ ಪತ್ರಿಕೆಯಲ್ಲಿ ಶೇರು ಕಾಲಂ ಬರಿತಾರೆ ಅಂತ ಅವಳೊಮ್ಮೆ ನನಗೆ ಹೇಳಿದ್ದಳು. ಅವಳು ಹೇಳಿದ ದಾಮೋದರ ಹೆಗಡೆ ಬಹುಶಃ ನೀವೇ ಇರಬೇಕು ಅಂತಾ ಹುಡುಕಿಕೊಂಡು ಬಂದೆ. ನೀವೇ ಬೃಂದಾಳ ಮಾವ ಆಗಿದ್ದರೆ, ನಾನು ಅವಳ ಅಡ್ರೆಸ್ಸ್ ಅಥವಾ ಫೋನ್ ನಂಬರ್ ತಿಳಿದು ಕೊೞಬಹುದೇ? ಎಂದು ಕೇಳಿದ. ಅವನ ಮುಖ ನೋಡುತ್ತಿದ್ದರೆ ಅವನಲ್ಲಿ ಯಾವುದೇ ಕಪಟ ವಂಚನೆ ಕಾಣದಿದ್ದರೂ, ಬೇರೆ ಊರಿನಲ್ಲಿರುವ ತರುಣಿಯ ವಿವರಗಳನ್ನು ಅನಾಮಿಕನೊಬ್ಬನಿಗೆ ಕೊಡುವುದು ತರವಲ್ಲವೆನ್ನಿಸಿತು.
" ಆ ದಾಮೋದರ ಹೆಗಡೆ ನಾನೇ, ಈಗ ಸಧ್ಯಕ್ಕೆ ಅವಳ ನಂಬರ್ ನನ್ನ ಹತ್ತಿರ ಇಲ್ಲ. ನಿಮ್ಮ ಫೋನ್ ನಂಬರ್ ಕೊಟ್ಟು ಹೋಗಿರಿ. ಅವಳು ಫೋನ್ ಮಾಡಿದಾಗ ನಾನೇ ಕೊಡುತ್ತೇನೆ" ಎಂದರು. ಆ ಹುಡುಗ ಮರುಮಾತನಾಡದೆ ಎದ್ದು ಹೋದಾಗ ಬೇಸರವಾಯಿತು. ಈ ಕಾಲದ ಹುಡುಗರಿಗೆ ಎಂಥಾ ಹುಚ್ಚುತನಗಳು ಎಂದು ಕೊಳ್ಳುತ್ತಾ, ತಂಗಿಗೆ ಫೋನ್ ಮಾಡಿದಾಗ ಬೃಂದಾ ಜೊತೆ ಮಾತನಾಡಬೇಕು ಎಂದು ಕೊಂಡರು.
ಜೊತೆಗೆ, ನನ್ನ ಹಾಗೆ ಒಂದು ದಿನಕ್ಕೂ ಇನ್ನೊಂದು ದಿನಕ್ಕೂ ವ್ಯತ್ಯಾಸವಿಲ್ಲದೇ ಜೀವನ ಸಾಗಿಸುವುದಕ್ಕಿಂತಾ, ಈ ಥರ ಸಣ್ಣ ಪುಟ್ಟ ಸಾಹಸಗಳನ್ನು ಮಾಡುವುದೇ ಚಂದ. ಅಂದುಕೊಂಡರು
ಸ್ನೇಹ: ಜನ್ಮ ಜನ್ಮಾಂತರಗಳನ್ನು ಹಾದು ಹರಿಯುವ ತಿಳಿ ನೀರಿನ ತೊರೆ.
ಮೊದಲ ಬಾರಿ ಇಬ್ಬರು ಭೇಟಿಯಾದಾಗ ಇಬ್ಬರು ಕಣ್ಣುಗಳು ಆನಂದಾಶ್ರುಗಳಿಂದ ತುಂಬಿತ್ತು.ನೋಡಿದೊಡನೆ ಓಡಿ ಹೋಗಿ ತಬ್ಬಿಕೊಳ್ಳಬೇಕೆಂದು ಇಬ್ಬರಿಗೂ ಅನ್ನಿಸಿದರೂ, ಈ ನಾಗರಿಕ ಸಮಾಜ, ಸುತ್ತಲಿನ ಜನ, ತಮ್ಮ ಪ್ರಸ್ತುತ ವಯಸ್ಸು ಮುಂತಾದ ವಿಷಯಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮೊದಲು ಒಂದಷ್ಟು ದಿನ ಬಾರಿ ಶಾಲಾ ದಿನಗಳ ಬಗ್ಗೆ ಮಾತನಾಡಿದ್ದಾಯ್ತು. ನಂತರ ಆಮೇಲೆ ಏನೇನಾಯ್ತು ಎಂದು ಇಬ್ಬರು ಪ್ರಶ್ನಿಸಿಕೊಂಡು, ಉತ್ತರವನ್ನೂ ಕೊಟ್ಟುಕೊಂಡರು. ಅವಳು ಬೆಂಗಳೂರಿನಲ್ಲಿ ಇವನೊಡನೆ ಗಲ್ಲಿ ಗಲ್ಲಿ ,ರೋಡು ರೋಡು ಅಲೆದಿದ್ದಾಯ್ತು. ನಕ್ಕಿದ್ದಾಯ್ತು, ಅತ್ತಿದ್ದಾಯ್ತು. ಬೈಕಿಂಗು, ಚಾರಣ ಅಂತಾ ಸಣ್ಣ ಪುಟ್ಟ ಸಾಹಸಗಳನ್ನೂ ಮಾಡಿದ್ದಾಯ್ತು
ಎಂಟಿಆರ್ ಮಸಾಲೆ ಯಿಂದ ಹಿಡಿದು ಜೆ ಸಿ ರೋಡಿನ ಇರಾನಿ ಚಾಯ್ ತನಕ ಎಲ್ಲದರ ರುಚಿ ನೋಡಿದ್ದು ಆಯಿತು. ಮಾತನಾಡಿದ್ದಂತು ಲೆಕ್ಕವೇ ಇಲ್ಲ. ಮಾತನಾಡದ ವಿಷಯವೇ ಇಲ್ಲ. ಬಹುಷಃ ಮರದ ಬಾಯಾಗಿದ್ದರೆ ಒಡೆದು ಹೋಗುತ್ತಿತ್ತೋ ಏನೋ?
( ಒಟ್ಟಿನಲ್ಲಿ ಅವರು ಅನುಭವಿಸಿದ ಆನಂದ, ಸಂಭ್ರಮಗಳನ್ನು ಬಡಲೇಖಕನಾದ ನನ್ನಿಂದ ವಿವರಿಸುವುದು ಅಸಾಧ್ಯ )
ಬೋದಿಲೇರ್ ಎಂಬ ಪಾಪಿಯ ಸುಳ್ಳು ಮತ್ತು ಫೆಮಿನಿಸ್ಟ್ ಥಿಯರಿ ಎಂಬ ತಗಡು ವಾದ.
"ಕಲಾವಿದನಾದವನು ದಡ್ಡಿಯನ್ನು ಪ್ರೀತಿಸಬೇಕು. ದಡ್ಡಿ ಕೂತು ನಿಮ್ಮ ಮಾತು ಕೇಳುತ್ತಿದ್ದರೆ, ಅವಳ ಕಣ್ಣಲ್ಲಿ ತುಳುಕುವ ಗೊಂದಲ, ಆಶ್ಚರ್ಯಗಳು ಎಷ್ಟು ಚೆನ್ನಾಗಿರುತ್ತದೆ. ಜಾಣೆಯರು ಹಗಲಿನಂತೆ, ಬಟ್ಟ ಬಯಲಿನಂತೆ. ತಲೆಯ ಕೆಲಸದಿಂದ ಹಿಂಡಿ ಹಿಪ್ಪೆಯಾದವರು. ಬುದ್ದಿವಂತ ಹೆಂಗಸರ ಮುಖದ ಮೇಲೆ ತಿಳುವಳಿಕೆಯ ದರಿದ್ರ ಗೆರೆಗಳು ಮೂಡಿರುತ್ತದೆ; ಅವರ ಎದೆಯಿಂದ ರಹಸ್ಯ ಮಾಯವಾಗಿರುತ್ತದೆ. ಎಲ್ಲದಕ್ಕೂ ಲೆಕ್ಕಾಚಾರ ಗಂಟು ಹಾಕಿ ಸಂತೋಷ ಕಳೆದು ಕೊಂಡಿರುತ್ತಾರೆ. ಆದರೆ ದಡ್ಡಿಯರಲ್ಲಿ ಸದಾ ಸುಖದ ಕಾರಂಜಿ ಪುಟಿಯುತ್ತಿರುತ್ತದೆ."
ಮೋಹನ ಅಂಗಾತವಾಗಿ ಮಲಗಿಕೊಂಡು ಬೋದಿಲೇರನ ಈ ಸಾಲುಗಳನ್ನೇ ಕುರಿತು ಯೋಚಿಸುತ್ತಿದ್ದ. ಮೊದಲ ಬಾರಿಗೆ ಬೋದಿಲೇರ್ ಮಹಾ ಸುಳ್ಳ ಎನ್ನಿಸಿತು. ಬೃಂದಾ ಪ್ರಖರ ಬುದ್ದಿವಂತಿಕೆಯುೞ  ಹುಡುಗಿಯಾಗಿದ್ದರೂ, ಅವಳ ಮುಖದ ಮೇಲೆ ಮುಗ್ದತೆಯ ಕಲೆ ಮಾಸಿರಲಿಲ್ಲ. ಅವಳ ನಡುವಳಿಕೆ ಹೈ ಸ್ಕೂಲು ಹುಡುಗಿಯರನ್ನು ನೆನಪಿಸುವಂತಿತ್ತು. ಸದಾ ತಾನೂ ಸಂತೋಷವಾಗಿದ್ದು, ಜೊತೆಗಿರುವವರನ್ನು ಕೂಡ ಖುಷಿಯಾಗಿಡುತ್ತಿದ್ದ ಹುಡುಗಿ. ಯಾಕೋ ಬರು ಬರುತ್ತಾ ನಾನು ಅವಳಡೆಗೆ ಹೆಚ್ಚು ಪರಿಭ್ರಮಿತನಾಗುತ್ತಿದ್ದೇನೆ ಎನ್ನಿಸಿತು. ಬಹುಷಃ ಪ್ರೀತಿ ಶುರುವಾಗಿದೆಯಾ ಎಂದು ಪ್ರಶ್ನಿಸಿಕೊಂಡ. ಅಷ್ಟೇ! ಪ್ಯಾಕು ಗಟ್ಟಲೆ ಸಿಗರೇಟು ಉರಿದು ಬರಿದಾಯಿತು. ಅವತ್ತು ರಾತ್ರಿ ಅವನು ನಿದ್ರಿಸಲಿಲ್ಲ.
ಇತ್ತ ಬೃಂದಾ ಮೇಡಂ ಸ್ಥಿತಿ ಕೂಡ ಇದಕ್ಕಿಂತ ಹೊರತಾಗಿರಲಿಲ್ಲ.
ಎಂಥಾ ಚೆಂದದ ಹುಡುಗ. ಅವನು ಹತ್ತಿರವಿದ್ದಷ್ಟು ಹೊತ್ತೂ ಯಾವುದೋ ಭದ್ರತಾ ಭಾವ ತನ್ನ ಸುತ್ತಾ ಸುತ್ತುತ್ತಿರುತ್ತದೆ. ಎಂಥ ಬಿಸುಪು ಅವನ ಅಂಗೈ. ಹತ್ತಿರ ಬಂದರೆ ಮಾತ್ರ ಸಿಗರೇಟು ವಾಸನೆ. ಬೈದರೆ " ನನ್ನ ಹೆಂಡತಿನ ಬೇಕಾದ್ರೂ ಬಿಡ್ತೀನಿ ಸಿಗರೇಟು ಬಿಡಲ್ಲ" ಎಂದು ಗಲಗಲನೆ ನಕ್ಕು ನಗಿಸಿಬಿಡುತ್ತಾನೆ. ಇಷ್ಟು ವರ್ಷ ನಾನು ಅವನನ್ನು ಮಿಸ್ ಮಾಡಿಕೊಂಡೆನಾ ಎನ್ನಿಸುತ್ತಿದೆ. ಮೊನ್ನೆ ರಾತ್ರಿ ಮೆಜೆಸ್ಟಿಕ್ ಹತ್ತಿರ ಸುಮ್ಮನೆ ಚಳಿ ಆಗ್ತಾ ಇದೆ ಅಂತಾ ಹೇಳಿದ್ದಕ್ಕೆ, ಎರಡೇ ನಿಮಿಷದಲ್ಲಿ ಕಾಶ್ಮೀರಿ ಶಾಲೊಂದನ್ನು ತಂದು ಕೈಗಿತ್ತು, ಒಪ್ಪಿಸಿಕೊಳ್ಳಿ ಹುಜೂರ್ ಅಂತ ನಾಟಕೀಯವಾಗಿ ನಿಂತನಲ್ಲ? ಶುದ್ದ ತರ್ಲೆ. ಇಷ್ಟು ದಿನ ಯಾರ್ಯಾರದೋ ಮಾತು ಕೇಳಿ ಪುರುಷ ದ್ವೇಷಿಯಾಗಿದ್ದೆ. ಈಗನ್ನಿಸುತ್ತಿದೆ, ಎಲ್ಲ ಪುರುಷರು ಒಂದೇ ಥರ ಅಲ್ಲ. ಮತ್ತು ಪುರುಷರ ಸಾಂಗತ್ಯದಲ್ಲೂ ಏನೋ ಭದ್ರತಾಭಾವವಿದೆ. ಹೆಣ್ಣಿನ ಧನ್ಯತೆಯಿರುವುದೇ ಅಂತಹ ಸಾಂಗತ್ಯದಲ್ಲಿ. ಅವನು ಕೊಡಿಸಿದ ಶಾಲು ಹೊದ್ದು ಮಲಗಿದರೆ. ಅಮ್ಮನ ಸೀರೆ ಹೊದ್ದು ಮಲಗಿದ ಅನುಭೂತಿ.ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡಳು. ಉತ್ತರ ಮಾತ್ರ ಸಿಗಲಿಲ್ಲ.
ಪಾಪೋಹಂ, ಪಾಪ ಕರ್ಮಾಹಾಂ, ಪಾಪಾತ್ಮಾಂ, ಪಾಪಸಂಭವಾಂ
ಮೋಹನ ಮತ್ತು ಬೃಂದಾ ಇಬ್ಬರೂ ಇವತ್ತು ಲಾಲ್ ಬಾಗಿಗೆ ಹೋಗೋಣ ಅಂತ ಮಾತನಾಡಿಕೊಂಡರು. ಲಾಲ್ ಬಾಗಿಗೆ ಬಂದು ತಲುಪಿದಾಗ ಸಂಜೆ ಐದಾಗಿತ್ತು. ಇವತ್ತು ಊಟ ಹೊರಗಡೆ ಮಾಡೋಣ ಅಂತಾ ಮೋಹನ ಘೋಷಿಸಿಬಿಟ್ಟ. ಎಲ್ಲಿ ಅಂತ ಕೇಳಿದ್ದಕ್ಕೆ. ವಿ ವಿ ಪುರಂ ಹತ್ತಿರದ ತಿಂಡಿ ಬೀದಿ ಅಂತಾ ವಿಚಿತ್ರ ರೋಡಿನ ಹೆಸರನ್ನು ಹೇಳಿದ. ಅಲ್ಲಿ ಸಿಗುವ ನೂರೆಂಟು ತರಾವರಿ ಭಕ್ಷ್ಯಗಳ ಬಗ್ಗೆ ಹೇಳಿ ಬೃಂದಾಳ ಬಾಯಲ್ಲಿ ನೀರೂರಿಸಿದ. ಲಾಲ್ ಬಾಗಿನ ಒಳಗೆ ಎಂಟ್ರಿ ಕೊಟ್ಟಾಗ ನಿಧಾನವಾಗಿ ಕತ್ತಲು ಮುಚ್ಚಿ ಕೊಳ್ಳುತ್ತಿತ್ತು. ಇಬ್ಬರೂ ಹರಟುತ್ತಾ ನಿಧಾನವಾಗಿ ನಡೆಯುತ್ತಿದ್ದರು. ಇದ್ದಕ್ಕಿದ್ದ ಹಾಗೆ ಮಳೆ ಹನಿಯಲು ಶುರುವಾಯಿತು. ಮೋಹನ ನೆನೆಯೋಣವೆಂದರೂ ಅವಳಿಗೆ ನೆಗಡಿ ಇದ್ದುದರಿಂದ ನೆನಯಲಾಗಲಿಲ್ಲ. ಇಬ್ಬರು ಹೋಗಿ ವಿಶಾಲವಾಗಿ ಚತ್ರಿಯಂತೆ ಹರಡಿದ್ದ ಮರವೊಂದರ ಕೆಳಗೆ ನಿಂತುಕೊಂಡರು. ಸ್ವಲ್ಪ ಹೊತ್ತಿನಲ್ಲೇ ಮಳೆ ನಿಂತು ಆಕಾಶ ಶುಭ್ರವಾಗಿ, ತಣ್ಣಗಿನ ಗಾಳಿ ಬೀಸತೊಡಗಿತು. ಸರಿ ಇನ್ನು ಹೊರಡೋಣವೆಂದುಕೊಂಡು ಹೆಜ್ಜೆ ಹಾಕಿದರು. ಎಲ್ಲ ಕಡೆ ನೀರು ತುಂಬಿ ಸಣ್ಣ ಸಣ್ಣ ಕೆಸರು ಗುಂಡಿಗಳಾಗಿತ್ತು. ಒಂದು ದೊಡ್ಡ ಗುಂಡಿ ಎದುರು ನಿಂತು ಬೃಂದಾ ಸಹಾಯಕ್ಕಾಗಿ ಮೋಹನನಿಗೆ ಕೈಚಾಚಿದಳು. ಇವನು ಕೈ ನೀಡಿ ಎಳೆದು ಕೊಳ್ಳುವಷ್ಟರಲ್ಲಿ ಅವಳು ಕೆಸರಿನ ಮೇಲೆ ಕಾಲಿಟ್ಟು ಸರ್ರನೆ ಜಾರಿದಳು. ಮೋಹನ ಅವಳು ಬೀಳದಿರಲೆಂದು ಅವಳ ಸೊಂಟವನ್ನು ಹಿಡಿದುಕೊಂಡ. ಅವಳೂ ಆಸರೆಗಾಗಿ ಇವನ ಎರಡೂ ಕೈಗಳಲ್ಲಿ ಬಂಧಿಯಾದಳು.
ಒಂದು ಕ್ಷಣ ಏನೂ ನಡೆಯಲಿಲ್ಲ.
ಮೋಹನನಲ್ಲಿದ್ದ ಪುರುಷ ಜಾಗೃತನಾದ. ನಿಧಾನವಾಗಿ ಅವಳ ಮುಖದೆಡೆಗೆ ಸರಿದು ತುಟಿಯಮೇಲೆ ತುಟಿಯ ಮುದ್ರೆ ಒತ್ತಿದ. ಕೆಲವು ಕ್ಷಣ ಹಾಗೆ ಕಳೆಯಿತು. ಆಗ ಅವಳಲ್ಲಿದ್ದ ಹೆಣ್ಣು ಜಾಗೃತ ವಾದಳು. ಗಟ್ಟಿಯಾಗಿ ಅವನನ್ನು ದೂರ ತಳ್ಳಿದಳು. ದಿಗ್ಭ್ರಾಂತನಾದ ಮೋಹನ ಒಮ್ಮೆ ಅಪ್ರತಿಭನಾಗಿ ನಿಂತು ಕೊಂಡ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಕೆಲವು ಕ್ಷಣಗಳೇ ಬೇಕಾಯಿತು. ಮೋಹನ ನಿಧಾನವಾಗಿ ಸಾರಿ ಅಂದ. ಬೃಂದಾ ಅದಕ್ಕೇನೂ ಉತ್ತರಿಸಲಿಲ್ಲ. ನಂತರ ಅವರಿಬ್ಬರ ನಡುವೆ ಮೌನವೇ ರಾಜ್ಯವಾಳಿತು. ಅವಳನ್ನು ಮನೆಗೆ ಡ್ರಾಪ್ ಮಾಡುವವರೆಗೂ ಸುಮ್ಮನಿದ್ದಳು. ಮೋಹನ ಗುಡ್ ನೈಟ್ ಅಂದ. ಅವಳು ಅದಕೂ ಉತ್ತರಿಸಲಿಲ್ಲ.
ನನ್ನ ಓಲೆ ಒಲೆಯಲ್ಲ, ಮಿಡಿವ ಒಂದು ಹೃದಯ
ಮೋಹನ ಮಾರನೆ ದಿನ ಬೆಳೆಗ್ಗೆ ಎದ್ದಾಗ ಹತ್ತು ಘಂಟೆ. ಮತ್ತೆ ಒಂದುವರೆ ಕ್ವಾರ್ಟರ್ ಅಂದ್ರೆ ಸುಮ್ನೆನಾ? ಸಿಗರೇಟಿಗಾಗಿ ಹೊರಬಂದಾಗ ಕಾಗದವೊಂದನ್ನು ಅವರಮ್ಮ ಕೈಗೆ ತಂದಿತ್ತರು. ರೂಮಿಗೆ ಓಡಿ ಹೋಗುವಷ್ಟರಲ್ಲಿ; ಅದನ್ನು ಬೃಂದಾ ತಂದು ಕೊಟ್ಟಳೆ೦ದೂ, ಎಬ್ಬಿಸಬೇಡಿ ಅಂತಾ ಹೇಳಿದಳೆಂದೂ, ಹೇಳಿದ್ದು ಕಿವಿಗೆ ಬಿತ್ತು. ಕಾಗದ ತೆರೆದಾಗ............
ಪ್ರಿಯ ಮಿತ್ರ,
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂದಿಸಿಹುದೋ ಕಾಣೆ.
ಸ್ನೇಹವೆಂದರೆ ಜನ್ಮಾಂತರಗಳನ್ನು ಹಾದು ಹರಿಯುವ ತಿಳಿ ನೀರಿನ ತೊರೆ.
ಇವೆಲ್ಲಾ ನಾನು ಹೇಳಿದ ಮಾತುಗಳಲ್ಲಾ. ನನಗೆ ನೀನು ಹೇಳಿದ ಮಾತುಗಳು. ನಾನು ಅಷ್ಟು ವರ್ಷಗಳ ಹಿಂದೆ ನಿನ್ನನ್ನು ತೊರೆದು ಹೊದಾಗಿನಿಂದಲೂ ನಿನ್ನನ್ನು ನೆನಪಿಸಿಕೊಳ್ಳುತ್ತಿದ್ದೆ. ನನ್ನ ಸಂತೋಷದ ದುಃಖದ ಘಳಿಗೆಯಲ್ಲಿ ನನಗೆ ಮೊದಲು ನೆನಪಾಗುತ್ತಿದ್ದ ವ್ಯಕ್ತಿ ನೀನೆ. ಯಾಕೆಂದರೆ ನೀನು ಕೇವಲ ಸ್ನೇಹಿತನಲ್ಲ ಆತ್ಮ ಬಂಧು .
ಇರಲಿ ಬಿಡು, ನಿನ್ನೆ ನಡೆದ ಘಟನೆಯ ಬಗ್ಗೆ ನನಗೇನು ದುಃಖವಿಲ್ಲ. ನನಗೆ ದುಃಖವಾಗಿದ್ದು ಕೇವಲ ನಿನ್ನ ಹಾದಿ ತಪ್ಪಿದ ಸಂಯಮ ನೋಡಿ. ಇದರಿಂದ ನಾನು ನೊಂದಿದ್ದೇನೆ, ಯಾಕೆಂದರೆ ನನ್ನ ಕಲ್ಪನೆಯ ಆದರ್ಶದ ಗೆಳೆಯನ ನೈತಿಕ ದೌರ್ಬಲ್ಯ ನೋಡಿ.
ಇನ್ನು ಸುಮಾರು ಆರು ತಿಂಗಳು ನಿನಗೆ ಒಂದು ಶಿಕ್ಷೆ ವಿಧಿಸಿದ್ದೇನೆ. ಅಂದರೆ ನಾನು ಇನ್ನಾರು ತಿಂಗಳು ಕಾರ್ಯನಿಮಿತ್ತವಾಗಿ ಪರ ಊರಿಗೆ ಹೋಗುತ್ತಿರುವುದರಿಂದ ನಿನಗಿನ್ನು ಸಧ್ಯಕ್ಕೆ ಸಿಗಲಾರೆ. ದಯವಿಟ್ಟು ಫೋನು ಮಾಡುವ, ಪತ್ರ ಬರೆಯುವ ಹಾಗು ಭೇಟಿಯಾಗುವ ಸಾಹಸಕ್ಕೆ ಕೈ ಹಾಕಬೇಡ. ಆರು ತಿಂಗಳ ನಂತರ ನಿನ್ನ ಆತ್ಮಶುದ್ದಿಯಾಗಿದ್ದರೆ ಹೇಳು. ನಾನೇ ಬಂದು ಮುಖತಃ ಭೇಟಿಯಾಗುತ್ತೇನೆ.
ನನಗಾಗಿ ಕಾಯುವೆ ಎಂದು ನಂಬಿರುವ
ಬೃಂದಾ
 
 
ಎಲ್ಲಾ ಸರಿಯಾಗಿರಲು ಲೈಫು ಬೋರಾಗುವುದು
ಯಾಕೋ ಮೋಹನನಿಗೆ ಮನಸೆಲ್ಲಾ ಖಾಲಿ ಖಾಲಿ ಆದಂತೆನಿಸಿತು. ಸಾಕಷ್ಟು ಸಿಗರೇಟು ಸುಟ್ಟು ಭಸ್ಮವಾಯಿತು. ಕೆಲಸಕ್ಕೆ ಹೋಗಲು ಮನಸ್ಸಾಗಲಿಲ್ಲ. ನಿನ್ನೆ ಒಂದು ದಿನ, ಒಂದು ಕ್ಷಣ ಮನಸ್ಸು ಜಾರಿದ್ದಕ್ಕೆ ನನ್ನ ಆತ್ಮ ಬಂಧುವಿನ ಸಾನಿಧ್ಯವನ್ನೇ ಕಳೆದು ಕೊಳ್ಳಬೇಕಾಯಿತಲ್ಲ ಎಂದು ಚಡಪಡಿಸಿದ. ಎಷ್ಟು ವರ್ಷಗಳಿಂದ ಭೇಟಿಯಾಗಲು ಹಾತೊರೆಯುತ್ತಿದ್ದ ಗೆಳತಿ ಕೈ ಜಾರಿದ್ದಕ್ಕೆ ಕಣ್ಣೀರಿಟ್ಟ.
ನಂತರ ಆರುತಿಂಗಳು ತಾನೇ ಎಂದುಕೊಂಡು ಸುಮ್ಮನಾದ. ಈ ಮೂರೂ ದಿನಗಳಲ್ಲಿ ಕಳೆದ ನೆನಪುಗಳು ಆರು ವರ್ಷಗಳಿಗೆ ಸಾಕಾಗುವಷ್ಟಿದೆ ಎಂದು ಕೊಂಡು ನಿಟ್ಟುಸಿರಾದ.
ಇರಲಿ ಎಲ್ಲಾ ಸರಿಯಾಗಿರಲು ಲೈಫು ಬೋರಾಗುವುದು ಎಂದು ತನ್ನನ್ನು ತಾನೆ ಸಮಾಧಾನ ಪಡಿಸಿಕೊಂಡು, ಹೊಸ ಸಿಗರೇಟಿಗೆ ಬೆಂಕಿ ಸೋಕಿಸಿದ.
ಹೊರಗೆ ಸಣ್ಣಗೆ ಮಳೆ ಶುರುವಾಗಿ, ಕಿಟಕಿಯಿಂದ ಬಂದ ಮಣ್ಣಿನ ಪರಿಮಳ ಬೃಂದಾಳ ನೆನಪನ್ನು ಹೊತ್ತು ತಂದಿತ್ತು.

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/26/2010 - 11:33

ಅದು ವಿಧ್ಯಾಲಯ ಅಲ್ಲ. ವಿದ್ಯಾಲಯ, ತಿದ್ದುಕೊಳ್ಳಿ
ಶೀರ್ಷಿಕೆ ಯಾವುದೋ ಜನಪ್ರಿಯ ಹಾಡಿನಿಂದ ಕದ್ದ ಮಾಲು, ಒಪ್ಪಿಕೊಳ್ಳಿ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/26/2010 - 12:07

ಬರೀ ಇದೇ ಅಯ್ತು ಈ ಸ್ವಾಮಿದು.... ಭಾರಿ ಸ್ಟ್ರಾಂಗ್ ಅಯ್ತೆ ಈ ಅಸಾಮಿ... ಇಡೀ ಹೊತ್ತು ಅಲ್ಲಿಂದ ಕದ್ದದ್ದು, ಇಲ್ಲಿಂದ ಕದ್ದದ್ದು ಅಂತಯ್ತಲ್ಲಾ ಬರಿ ಇದೇನಾ ಕೆಲ್ಸನಾ ಇರೋದು ಮಾಡೋಕೆ? - ಸಿದ್ಧು

ಬಾಲ ಚಂದ್ರ ಸೋಮ, 04/26/2010 - 17:48

ಧನ್ಯವಾದಗಳು,
ಜೊತೆಗೆ ಒಂದೆರೆಡು ಮಾತು
೧) ಶೀರ್ಷಿಕೆ ಯಾವ ಹಾಡಿನಿಂದ ಕದ್ದದ್ದು ಎಂದು ತಿಳಿಸಿದರೆ ಉಪಕಾರವಾಗುತ್ತದೆ. ಯಾಕೆಂದರೆ ನಾನೂ ಕೂಡ ಆ ಸಾಲನ್ನು ಎಲ್ಲೋ ಕೇಳಿದ ಹಾಗೆ ನೆನಪು. 
* ಸದಾಶಿವರವರ ಕಥೆಯೊಂದರ ಶೀರ್ಷಿಕೆ  "ಮತ್ತೆ ಮಳೆ ಹುಯ್ಯುತಿದೆ, ಎಲ್ಲಾ ನೆನಪಾಗುತಿದೆ" ಇದು ಯು ಆರ್ ಅನಂತಮೂರ್ತಿಯವರ ಕವನವೊಂದರ ಸಾಲು.
* ಇತ್ತೀಚೆಗೆ ಬಂದ ಬಂಜಗೆರೆ ಜಯಪ್ರಕಾಶ್ ರವರ  ವಿವಾದತ್ಮಕ ಕೃತಿ "ಆನು ದೇವಾ ಹೊರಗಣವನು" ವಚನವೊಂದರ ಸಾಲು
* ಒಂದೆರೆಡು ವರ್ಷಗಳ ಹಿಂದೆ ಬಿಡುಗಡೆಯಾದ ಸೂರಿಯವರ ಉತ್ತಮ ಕೃತಿ " ಎನ್ನ ಭವದ ಕೇಡು" ಕೂಡ ವಚನವೊಂದರ ಸಾಲು
* ಜೋಗಿ (ಗಿರೀಶ್ ರಾವ್) ಬಗ್ಗೆ ತಿಳಿದವರಿಗೆ ಅವರ "ನದಿಯ ನೆನಪಿನ ಹಂಗು" ಕಾದಂಬರಿ ಖಂಡಿತಾ ತಿಳಿದಿರುತ್ತದೆ. ಆ ಸಾಲು ಬರುವುದು ಗಿರೀಶ್ ಕಾರ್ನಾಡ್ ರವರ  ನಾಟಕವೊಂದರಲ್ಲಿ ( ಬಹುಷಃ ಹಯವದನ)
ಹೀಗೆ ಉದಾಹರಿಸುತ್ತಾ ಹೋದರೆ ಸುಮಾರು ಇನ್ನೂ ಹದಿನೈದು ಉದಾಹರಣೆ ಕೊಡಬಲ್ಲೆ.
೨) ಈ ಲೇಖನದಲ್ಲಿ ಸುಮಾರು ಭಾವಗೀತೆಯ ಸಾಲುಗಳನ್ನು ಸೇರಿಸಿಕೊಂಡಿದ್ದೇನೆ. ಅದನ್ನು ಕೂಡ ಕದ್ದದ್ದು ಎಂದು ಆಕ್ಷೇಪ ವ್ಯಕ್ತಪಡಿಸಿಲ್ಲವೇಕೆ?
೩) ಟೀಕೆ ಎಂದರೆ ನಿಘಂಟಿನ ಪ್ರಕಾರ ಗುಣದೋಷ ವಿಮರ್ಶೆ ಎಂದರ್ಥ. ಗುಣವನ್ನು ನೋಡದೆ ಕೇವಲ ದೋಷವನ್ನು ಹುಡುಕಿದರೆ ಇದನ್ನು ಪೂರ್ವಾಗ್ರಹವೆಂದು ಭಾವಿಸಬಹುದೇ?
ವಂದನೆಗಳೊಂದಿಗೆ
ಸಸ್ನೇಹ
ಬಾಲ ಚಂದ್ರ 

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/27/2010 - 10:01

ಪರಮಪೂಜ್ಯ ಬಾಲಚಂದ್ರಃ
ಅದು ಕದ್ದ ಸಾಲು ಒಪ್ಪಿ ಎಂದೆ. ಕದ್ದುದಕ್ಕೆ ಸಮರ್ಥನೆ ಕೇಳಿರಲಿಲ್ಲ. ಅದರ ಅಗತ್ಯ ಇರಲಿಲ್ಲ.
ಇತ್ತೀಚೆಗೆ ಬಂದ ಸೂರ್ಯಕಾಂತಿ ಚಿತ್ರದ "ಒಂದು ರೌಂಡು ಹೊಡೆದು ನೋಡು ಭೂಮಿ ತುಂಬಾ ಚಿಕ್ಕದು" ಹಾಡಿನಲ್ಲಿ ಈ ಸಾಲು ಇದೆ.
ಟೀಕೆಗೆ ತನ್ನನ್ನು ಒಡ್ಡಿಕೊಂಡವನು ಬೆಳೆಯುತ್ತಾನೆ; ಇಲ್ಲ ಕೊಳೆಯುತ್ತಾನೆ. ಆಯ್ಕೆ ತಮಗೆ ಬಿಟ್ಟದ್ದು.
ಇನ್ನು ಮುಂದೆ ತಮ್ಮ ಯಾವ ಲೆಖನಕ್ಕೂ ನನ್ನ ಪ್ರತಿಕ್ರಿಯೆ ಇಲ್ಲ.

ಬಾಲ ಚಂದ್ರ ಧ, 04/28/2010 - 12:56

ಖಂಡಿತಾ ನಿಮಗೆ ಸಮಜಾಯಿಷಿ ಕೊಡುವ ಅಗತ್ಯ ನನಗೂ ಇಲ್ಲ. ಯಾಕೆಂದರೆ ನೀವು ಯಾರಿಗೂ ಉತ್ತರದಾಯಿಯೂ ಅಲ್ಲ. ಆದರೆ ಸಮಜಾಯಿಷಿ ಕೊಡುತ್ತಿರುವುದು ನಿಮಗಲ್ಲ, ಸಮಸ್ತ ವಿಸ್ಮಯದ ಓದುಗರಿಗೆ, ಯಾಕೆಂದರೆ ಸುಮ್ಮನೆ ನೀವು ಹೇಳಿದ್ದನ್ನು ಒಪ್ಪಿಕೊಂಡರೆ ಅದರ ಪೂರ್ವಾಪರ ತಿಳಿಯದ ಓದುಗರು ಅನ್ಯಥಾ ಭಾವಿಸುವ ಸಾಧ್ಯತೆಯಿದೆ.
 ಹಾಗೆಯೇ ತನಗೆ ಸ್ಪೂರ್ತಿದಾಯಕ ಸಾಲುಗಳನ್ನು ಕಥೆ ಕಾದಂಬರಿಗಳಲ್ಲಿ ಬಳಸಿಕೊೞುವುದು ವಾಡಿಕೆ. ಅದು ಅಪರಾಧವೇನೂ ಅಲ್ಲ.
ನೀವು ಇನ್ನೂ ಯೋಗರಾಜ್ ಭಟ್ ಮೇನಿಯಾದಿಂದ ಹೊರಬಂದಂತೆ ಕಾಣುತ್ತಿಲ್ಲ.  ಅದಕ್ಕಾಗಿ ನಿಮ್ಮ ಮಾತನ್ನು ಪೂರ್ವಾಗ್ರಹವೆಂದು ಭಾವಿಸಿ ಅಷ್ಟೆಲ್ಲಾ  ಹೇಳಬೇಕಾಯಿತು.
"ಟೀಕೆಗೆ ತನ್ನನ್ನು ಒಡ್ಡಿಕೊಂಡವನು ಬೆಳೆಯುತ್ತಾನೆ; ಇಲ್ಲ ಕೊಳೆಯುತ್ತಾನೆ" ಎಂಬ ನಿಮ್ಮ ಮಾತು ನಿಜ. ಆದರೆ ಟೀಕೆ ಆರೋಗ್ಯಪೂರ್ಣವಾಗಿರಲೆಂದು ನನ್ನ ಸಲಹೆ. ಬೆಳೆಯುವ ಮೊಳಕೆಗಳಿಗೆ ನೀರೆರೆಯದಿದ್ದರೂ ಪರವಾಗಿಲ್ಲ. ಚಿವುಟುವ ಸಾಹಸ ಏಕೆ? ಟೀಕೆ ಮಾಡುವುದು ಲೇಖಕರನ್ನು ಬೆಳೆಸುವ ಪ್ರಯತ್ನ ಎಂದು ತಾವು ತಪ್ಪು ತಿಳಿದ ಹಾಗಿದೆ. ಯಾಕೆಂದರೆ ಯಾವುದೇ ಟೀಕೆಗಳಿಗೆ ಒಡ್ಡಿಕೊೞದೆ ಸಾವಿರಾರು ಲೇಖಕರು ಹುಟ್ಟಿಲ್ಲವೆ. ಶಿವರಾಮ ಕಾರಂತ, ಪಿ. ಲಂಕೇಶ್, ಹಾಗೂ ಗೋ. ಕೃ. ಅಡಿಗ ಮುಂತಾದವರೂ ಸಹ ಟೀಕೆಗಳಿಗೆ ಸಿಡಿದೇಳುತ್ತಿದ್ದರು.
ಹೋಗಲಿ, ಎಲ್ಲರ ಬರಹಗಳಿಗೆ ನೀವು  ಕಟುವಾಗಿ ವಿಮರ್ಶಿಸುತ್ತೀರಿ. ನಿಮ್ಮ ಬರಹಗಳಿಂದಾದರೂ ಹೇಗೆ ಬರೆಯಬೇಕೆಂದು ಕಲಿಯೋಣವೆಂದರೆ. ಇದುವರೆಗೂ ನಿಮ್ಮ ಒಂದು ಲೇಖನವನ್ನೂ ನಾನು ಓದಿಲ್ಲ. ಏನಾದರೂ ಬರೆಯಬಾರದೇ?
ಲೇಖಕನಾಗುವುದಕ್ಕಿಂತ ವಿಮರ್ಶಕನಾಗುವುದು ಸುಲಭವೆಂದು ತಾವು ತಿಳಿದಿರಬೇಕು.
ನಿಮ್ಮ ಆರೋಗ್ಯಪೂರ್ಣ ಟೀಕೆಗಳಿಗೆ ಸದಾ ಸ್ವಾಗತ,
(ಕೊನೆಗೊಂದು ಸಿಡಿಮಾತುಃ- ನನ್ನ ಲೇಖನದಲ್ಲಿರುವ ಸಣ್ಣ ಕಾಗುಣಿತ ದೋಷವನ್ನೂ ತಿದ್ದುವ ನೀವು, ನಿಮ್ಮ ಟೀಕೆಯಲ್ಲಿ  ಲೇಖನವನ್ನು ಲೆಖನ ಎಂದು ಬರೆದಿದ್ದೀರಿ. ಕಂಡವರ ದೋಷ ಹುಡುಕುವ ಮುನ್ನ  ತಾವು ತಿದ್ದಿಕೊೞುವುದನ್ನು ಕಲಿಯಿರಿ)
ಧನ್ಯವಾದಗಳೊಂದಿಗೆ
ಸಸ್ನೇಹ
ಬಾಲ ಚಂದ್ರ
 
 
 

ಶಿವಕುಮಾರ ಕೆ. ಎಸ್. ಸೋಮ, 04/26/2010 - 16:33

ಚೆನ್ನಾಗಿದೆ! ಹರಿವು ಇನ್ನಷ್ಟು ಬಿಗಿಯಾಗಿರಬೇಕಾಗಿತ್ತು. ಒಂದು ಉದ್ದದ ಕತೆಯ ವಿಷಯವಸ್ತುವನ್ನು 'ಕ್ವಿಂಟೆನ್ ಟರಾಂಟಿನೋ' ಶೈಲಿಯಲ್ಲಿ ಎಡಿಟ್ ಮಾಡಿಡೋ ಯತ್ನ! ಮಧ್ಯ ಮಧ್ಯದಲ್ಲಿ ತುಂಬಾ ಅನ್ನಿಸೋ ಶೂನ್ಯ ಪ್ರದೇಶಗಳು...ಜೊತೆಗೆ ಸಕ್ಕತ್ ಮೋಸ, ನಾನು ಕದ್ದ ಲೈನು ನಿನ್ನ ಬರಹದ ಒಳಗೂ! 'ನನ್ನ ಓಲೆ ಒಲೆಯಲ್ಲ, ಮಿಡಿವ ಒಂದು ಹೃದಯ!'ಮ್! ಮತ್ತೆ ಮತ್ತೆ ಮಳೆ ಬಂದರೆ ಮತ್ತೆ ಮತ್ತೆ ಮಣ್ಣಿನ ವಾಸನೆ ಬರುತ್ತಾ?' (ರಾತ್ರಿ ಮಳೆ ಬಿದ್ದು ನೆನೆದು ಹದವಾದ ನೆಲಕ್ಕೆ ಬೆಳಗಿನ ಜಾವ ಮತ್ತೆ ಮಳೆಬಿದ್ದು ಪರಿಮಳವೆದ್ದು ಅವಳ ನೆನಪು ತಂದಿತೇ?)ಹೀಗೇ ಸುಮ್ಮನೇ!
Wink Wink

ಬಾಲ ಚಂದ್ರ ಸೋಮ, 04/26/2010 - 17:39

ಶಿವಣ್ಣಾ,
ತುಂಬಾ ಧನ್ಯವಾದಗಳು.
ಖಂಡಿತಾ ನಾನು 'ಕ್ವಿಂಟೆನ್ ಟರಾಂಟಿನೋ'  ಓದುಗನಲ್ಲ. ಹಾಗೂ ಸಿ ಅಶ್ವಥ್ ಅಭಿಮಾನಿಗಳೆಲ್ಲ " ನನ್ನ ಓಲೆ..........." ಖಂಡಿತಾ ಕೇಳಿರುತ್ತಾರೆ. ಸೋ ಅದರ ಸಾಕಷ್ಟು ಕೞರಲ್ಲಿ ನಾನೂ ಒಬ್ಬWink
ಜೊತೆಗೆ, ಈ ಮಾತನ್ನು ಪ್ರಾಮಾಣಿಕ ಆಸಕ್ತನಾಗಿ ಕೇಳುತ್ತಿದ್ದೇನೆ. 
೧)ಈ ಕತೆಯನ್ನು ಹೇಗೆ ಬಿಗಿಗೊಳಿಸಬೇಕಾಗಿತ್ತು? 
೨) ಕಥೆಯ ಮಧ್ಯದಲ್ಲಿ ಬರುವ ಶೂನ್ಯ ಪ್ರದೇಶಗಳು ಯಾವುವು?
ದಯವಿಟ್ಟು ಇದನ್ನು ತಿಳಿಸಿದರೆ ನಾನು ಅಭಾರಿ.
ಲೇಖಕನಾಗಿ ನಾನಿನ್ನೂ ಭಾರೀ ಎಳೆಸೆಂದು ನನಗೆ ತಿಳಿದಿದೆ. ನಿಮ್ಮಂತಹ  ಪಕ್ಕಾ ಪ್ರೊಫೆಶನಲ್ ಬರಹಗಾರರ ಶೈಲಿ ನನಗಿನ್ನೂ ಬರುವುದಿಲ್ಲ . ಬಲ್ಲವರಿಂದ ವಿಮರ್ಶೆಗೊಳಗಾದರೆ ಅದನ್ನು ಸುಕೃತವೆಂದು ಭಾವಿಸುತ್ತೇನೆ.
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ.
ಸಸ್ನೇಹ
ಬಾಲ ಚಂದ್ರ

ಉಮಾಶಂಕರ ಬಿ.ಎಸ್ ಮಂಗಳ, 04/27/2010 - 06:52

ಎಲ್ಲಾ ಸರಿಯಾಗಿಲ್ಲದಿದ್ದರೂ ಬೋರು, ಒಟ್ಟಿನಲ್ಲಿ ಬೋರು ಎನ್ನುವ ಬೋರ್ ಮನಸ್ಸನ್ನು ಕೊರೆಯಲು ಸಿದ್ದ ವಾಗಿರುತ್ತದೆ.

BENKY ಧ, 04/28/2010 - 14:25

ಮಸ್ತ್ ..........

swapna ಶುಕ್ರ, 04/30/2010 - 11:54

ತುಂಬಾ ಒೞೆಯ ಲೇಖನ... ಒಂದು ದಿನ, ಒಂದು ತಿಂಗಳು, ಒಂದು ವರ್ಷ, ಕಳೆದರೆ ಒಂದು ಗಂಡನ್ನು ಒಂದು ಹೆಣ್ಣು ಅರ್ಥ ಮಾಡಿಕೊೞಲಾಗಲೀ ಅಥವಾ ಒಂದು ಹೆಣ್ಣು ಒಂದು ಗಂಡನ್ನು ಅರ್ಥ ಮಾಡಿಕೊೞಲಾಗಲೀ ಸಾಧ್ಯವಿಲ್ಲ.. ಒಬ್ಬ ಹೆಣ್ಣು ಯಾವ ಪರಿಸ್ಥಿತಿಯಲ್ಲಿ ಹೇಗೆ ಯೋಇಸುತ್ತಾಳೆ, ಆರ್ ವೈಸ್ ವೆರ್ಸಾ... ಅದನ್ನ ತಿಳಿದುಕೊೞೋದಕ್ಕೆ ಹಲವಾರು ವರ್ಷಗಳ ಒಡನಾಟ ಬೇಕು.. ಬರೀ ಪರಸ್ಪರರ ಆಸೆ, ಇಂಗಿತ ಗಳನ್ನು ಅರಿತುಕೊಂಡರೆ ಮಾತ್ರ ಸಾಲದು, ಅವರ ದೌರ್ಬಲ್ಯಗಳನ್ನು ಕೂಡ ನಾವು ಜಯಿಸಿಕೊೞಬೇಕು.. ಅಷ್ಟು ತಿಳ್ಕೊಂಡವರು ಇಷ್ಟರ ಮಟ್ಟಿಗೆ ಬರೆಯಲು ಸಾಧ್ಯ.........
ಧನ್ಯವಾದಗಳು...
ಸ್ವಪ್ನಾ ಶಶಿಧರ್ ಭಟ್

Prasanna P (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 05/23/2010 - 22:20

ಮಿತ್ರ ಬಾಲಚಂದ್ರ,ತಮ್ಮ ಲೇಖನ ತುಂಬಾ ಚೆನ್ನಾಗಿದೆ. ತಮ್ಮ ಬರೆಯುವ ಶೈಲಿ ನನಗೆ ಇಷ್ಟವಾಯಿತು. ಲೇಖನವನ್ನು ಓದುತ್ತಿದರೆ ಅದರಲ್ಲಿ ಬರುವ ಪಾತ್ರಗಳು ಕಣ್ಣಮುಂದೆ ಇರುವಹಾಗೆ ಭಾಸವಗುತ್ತದೆ.ಲೇಖನದ ಶೀರ್ಷಿಕೆ ಯಾವುದೊ ವಂದು ಲೇಖನದಿಂದ ಅಥವಾ ಕವನದಿಂದ ತೆಗೆದುಕೊೞುವುದು ತಪ್ಪಲ್ಲಾ ಅನ್ನೊದು ನನ್ನ ಅಭಿಪ್ರಾಯ. ಬರೆಯುವ ಶೈಲಿ ಮತ್ತು ಅದರ ತಾತ್ಪರ್ಯ ಸ್ವಂತದ್ದಾಗಿದ್ದರೆ ಸಾಕು. ತಮ್ಮ ಬರಹದಲ್ಲಿ ನಾನು ಅದನ್ನು ಕಾಣಬಲ್ಲೆ.ಧನ್ಯವಾದಗಳುಪ್ರಸನ್ನ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.