Skip to main content

ನನ್ನ ಧಾಟಿಯ ನೀನರಿಯೆ, ನನ್ನ ಹಾಡೇ ಬೇರೆ!

ಬರೆದಿದ್ದುMarch 22, 2010
18ಅನಿಸಿಕೆಗಳು

"ಹೇಳು, ಈಗೇನ್ಮಾಡಣಾಂತ ಅಂದ್ಕೊಂಡಿದೀಯಾ?"  ಮೌನದ ಕೊಳಕ್ಕೆ ಥಟ್ಟನೆ ಮಾತಿನ ಕಲ್ಲೆಸೆದಳು.
ಒಂದು ಕ್ಷಣ ಏನು ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ. ಮತ್ತೆ ಮೌನಕ್ಕೆ ಶರಣಾಗಿ ಇನ್ನೊಂದು ಸಿಗರೇಟು ಹಚ್ಚಿದೆ. ಅವಳು ನಕ್ಷತ್ರಗಳ ಬಗ್ಗೆ ಅಭ್ಯಾಸ ಮಾಡುತ್ತಾ ನಿಂತುಕೊಂಡಳು,.
ನಮ್ಮಿಬ್ಬರ ಗೆಳೆತನ ಸುಮಾರು ಒಂದೂವರೆ ವರ್ಷದ್ದು. ಆಫೀಸಿನಲ್ಲಿ ಪರಿಚಯವಾಗಿ, ಕಾಫಿ ಡೇನಲ್ಲಿ ಗಾಢವಾಗಿ, ಮಲ್ಲೇಶ್ವರಂನ ನಿರ್ಜನ ಬೀದಿಗಳಲ್ಲಿ ಆಪ್ತವಾಗಿ, ಈಗ ನಾವು ಬರೀ ಫ್ರೆಂಡ್ಸು ಎಂದರೆ ಸ್ಯಾಂಕಿ ಟ್ಯಾಂಕಿನ ಬಳಿ ಕೞೇಕಾಯಿ ಮಾರುವವನೂ ಕೂಡ ನಂಬುತ್ತಿರಲಿಲ್ಲ.
ಆದರೇನೋ ಗೊತ್ತಿಲ್ಲ. ಇದ್ದಕ್ಕಿದ್ದಂತೇ ನಮ್ಮ ಮೇಡಮ್ಮು ನಮ್ಮನ್ನು ಅವಾಯ್ಡು ಮಾಡಲು ಶುರು ಮಾಡಿದರು. ಯಾವಾಗ ಕೇಳಿದರೂ, ಈಗ ನಾನು ಸ್ವಲ್ಪ ಬ್ಯುಸಿ, ಇಲ್ಲ ನಾಳೆ ಸಿಗೊಕ್ಕಾಗಲ್ಲ, ನಾನು ಭಾನುವಾರ ಮನೆಯವರ ಜೊತೆ  ಹೊರಗೆ ಹೋಗ್ತಾ ಇದ್ದಿನಿ. ಇತ್ಯಾದಿ ಇತ್ಯಾದಿ. ನಾನು ಕೂಡ ನೋಡುವಷ್ಟು ನೋಡಿ, ಕೊನೆಗೆ  ಇನ್ನುಮುಂದೆ ನಿರ್ಲಕ್ಷಿಸಬೇಕು ಅಂದು ಕೊಂಡೆ. ಆದರೆ ನಿರ್ಲಕ್ಷಿಸುವುದು ಅಷ್ಟು ಸುಲಭವಾಗಿರಲಿಲ್ಲ. ಇಬ್ಬರಿಗೂ!
ಸರಿ ಒಮ್ಮೆ ಇಬ್ಬರೂ ಕೂತು ಬಗೆಹರಿಸಿಕೊೞದಿದ್ದರೆ, ನನ್ನ ಸಿಗರೇಟು ಖರ್ಚು ಮತ್ತು ಅವಳ ಕರ್ಚೀಫು ಕರ್ಚು ಎರಡೂ ಬಜೆಟ್ಟು ಮೀರುವುದೆಂದು ಜ್ನಾನೋದಯವಾಗಿ, ಒಮ್ಮೆ ಅವಳು ಆಫೀಸಿನಲ್ಲಿ ಎದುರಾದಾಗ ಸಾಯಂಕಾಲ ಮಾಮೂಲಿ ಜಾಗದಲ್ಲಿ ಸಿಗಲು ಹೇಳಿದಳು. ನಾನೂ ಮರುಮಾತನಾಡದೇ ಒಪ್ಪಿಕೊಂಡೆ.
ಸರಿ. ಕರೆದಿರುವವಳು ಅವಳು. ಅವಳೇ ಮಾತು ಶುರುಮಾಡಲಿ ಅಂತ ನಾನು ಸುಮ್ಮನಿದ್ದೆ.
"ಸರಿ ಇನ್ನು ಹೊರಡೋಣ" ಎಂದಳು.
"ಆಯ್ತು, ನಾನು ಬೈಕ್ ತೆಗೆದುಕೊಂಡು ಬರ್ತೀನಿ. ನೀನಿಲ್ಲೇ ನಿಂತಿರು" ಎಂದೆ
"ನಾನ್ಯಾಕೆ ಕರೆದಿದ್ದು ಕೇಳಲ್ವಾ?"
"ಹೇಳೋ ಹಾಗಿದ್ರೆ ಇಷ್ಟು ಹೊತ್ತೂ ಏನು ಗೆಣಸು ಕೆತ್ತುತ್ತಾ ಇದ್ರಾ"
ಇದ್ದಕ್ಕಿದ್ದಂತೆ ಕಣ್ಣಲ್ಲಿ ಗಂಗಾ-ಭಾಗೀರಥಿ ಪ್ರತ್ಯಕ್ಷವಾಗಿ ಹರಿಯಲಾರಂಭಿಸಿತು. ಈ ಹುಡುಗೀರಿಗೆ ಅಳು ಅನ್ನುವುದು ಒಂಥರಾ ಸಮಯಕ್ಕೊದಗುವ ದೇವರು. ಅದನ್ನು ಅವರು ಯಾವ ರೀತಿ ಬೇಕಾದರೂ ಬಳಸಿಕೊೞಬಹುದು.
"ಈಗೇನಾಯ್ತೂಂತಾ" ನಾನು ಸಿಡುಕಿದೆ
"ಹೌದು, ನಿನಗೆ ನಾನು ಸತ್ರೆಷ್ಟು ,ಇದ್ರೆಷ್ಟು? ನೀನಾಯ್ತು, ನಿನ್ನ ದರಿದ್ರ ಫ್ರೆಂಡ್ಸಾಯ್ತು. ಬಿಟ್ರೆ ಆ ಸುಡುಗಾಡು ಆಫೀಸು. ನಿಂಗೆ ನೆನಪಿದ್ಯಾ? ನೀನಾಗೆ ನೀನು ನನಗೆ ಫೋನ್ ಮಾಡಿ ಎಷ್ಟು ದಿನಾ ಆಯ್ತು ಅಂತಾ. ಹೋಗ್ಲಿ ನನ್ನ ಮನೇಗೆ ಡ್ರಾಪ್ ಮಾಡಿ ಎಷ್ಟು ದಿನಾ ಆಯ್ತು ಅಂತ ಗೊತ್ತಾ. ಯಾಕ್ ಹೀಗ್ ಮಾಡ್ತಾ ಇದ್ಯಾ?" ಒಂದೇ ಸರ್ತಿ ಜಡಿಮಳೇ ಬಂದು ನಿಂತಂತಾಯ್ತು.
"ಹೌದು. ನಾನು ಕಾಲ್ ಮಾಡ್ಲಿಲ್ಲಾ. ಡ್ರಾಪ್ ಕೊಡ್ತೀನಿ ಬಾ ಅಂತಾ ಕರೀಲಿಲ್ಲಾ. ನಿಜ ತಪ್ಪಾಯ್ತು. ಆದ್ರೆ ನೀನೇ ಫೋನ್ ಮಾಡಬಹುದಿತ್ತಲ್ಲಾ? ನೀನೆ, ಬಾ ಇವತ್ತು ನನ್ನ ಡ್ರಾಪ್ ಮಾಡು ಅಂತಾ ಕೇಳ ಬಹುದಿತ್ತಲ್ಲಾ?"
"ದರಿದ್ರ ಈಗೋ ನಿಂದು, ಮೊನ್ನೆ ಆ ಹೊಸ cs ರಮ್ಯಾ ಜೊತೆ, ಅದೇನ್ ಕಿಸಿತಾ ನಿಂತಿದ್ದೆ. ಅವಳಿಗೆ ಒಂದಿನಾ ಮನೇಗೂ ಡ್ರಾಪ್ ಮಾಡಿದ್ಯಂತೆ"
"ಓಹೋ! ಇದಾ ಮ್ಯಾಟರು. ಕೊಂಕಣಾ ಸುತ್ತಿ ಮೈಲಾರಕ್ಕೆ ಬಂದಗಾಯ್ತು. ಈ ಮಾತು ಮೊದಲೇ ಕೇಳ ಬಹುದಿತ್ತಲ್ಲಾ?"
"ಈಗ್ಲಾದ್ರೂ ಬೊಗಳು"
"ಬೌ ವೌ ಬೌಬೌ"
" ತಮಾಷೇ ಸಾಕು, ಹೇಳು"
"ನೋಡು ನೀನು ಅಂದ್ಕೊಂಡ ಹಾಗೆ ಏನೂ ಇಲ್ಲ. ಹೊಸದಾಗಿ ಬಂದಿರೋದ್ರಿಂದಾ ಅವಳಿಗೆ ಟ್ರೈನ್ ಮಾಡ್ತಾ ಇದ್ದೆ ಅಷ್ಟೇ"
"ಮತ್ತೆ ಡ್ರಾಪು ಕೊಟ್ಟಿದ್ದು"
" ಅವರಮ್ಮ ಅವತ್ತು ರಾಮಯ್ಯ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ರು. ಅರ್ಜೆಂಟಾಗಿ AB+ ಬ್ಲಡ್ ಬೇಕಾಗಿತ್ತಂತೆ. ನನ್ನತ್ರ ಬಂದು ರಿಕ್ವೆಸ್ಟ್ ಮಾಡಿಕೊಂಡ್ಲು. ನಂದೂ ಅದೇ ಆಗಿರೋದ್ರಿಂದಾ ಡೊನೇಟ್ ಮಾಡೋದಿಕ್ಕೆ ಹೋಗಿದ್ದೆ."
 "ನಿಜ್ವಾಗ್ಲೂ"
"ಬೇಕಾದ್ರೆ ಆವತ್ತಿನ ಡೇಟ್ ನಲ್ಲಿರೋ ಡಾನರ್ ಸರ್ಟಿಫಿಕೇಟ್ ತೋರಿಸ್ತೀನಿ"
"ಐ ಆಂ ಸಾರಿ"
" ಇರಲಿ ಬಿಡು. ಇದೇನೂ ಹೊಸದಲ್ಲಾ ನಂಗೆ. ನೀನು ಇಷ್ಟೆಲ್ಲಾ ನೋವು ಕೊಟ್ಟು. ನೋವು ಅನುಭವಿಸಿ ನರಳೋದಕ್ಕಿಂತಾ ನನ್ನ ಹತ್ರ ಕ್ಲಾರಿಫೈ ಮಾಡ್ಕೊಂಡಿದ್ರೆ ಚೆನ್ನಾಗಿರೋದು"
"ಅಷ್ಟೇ ಅಲ್ಲಾ. ನಂದಿನ್ನು ಸುಮಾರು ಕಂಪ್ಲೇಟ್ಸ್ ಇವೆ"
ಒಮ್ಮೆ ಸುಮ್ಮನೆ ವಾಚು ನೋಡಿಕೊಂಡೆ. ಜ್ವಾಲಾ ಮುಖಿ ಮತ್ತೆ ಸ್ಪೋಟಿಸಿತು
" ಪ್ರತಿ ದಿನಾ ಆದ್ರೆ ರಾತ್ರಿ ಹತ್ತು ಘಂಟೆವರೆಗೂ ಆಫೀಸಿನಲ್ಲಿ ಬಿದ್ದಿರ್ತಿಯಾ, ನಾನು ಜೊತೆ ಇರ್ಬೇಕಾದ್ರೆ ಮಾತ್ರ ನಿಂಗೆ ಟೈಮಾಗುತ್ತೆ. ಅಲ್ವಾ?"
"ನೋಡು, ನಾನು ಬೇಕಾದ್ರೆ ರಾತ್ರಿ ಪೂರ್ತಿ ನಿನ್ನ ಮುಖಾ ನೋಡ್ತಾ ಕೂತಿರ್ತೀನಿ. ಆದ್ರೆ ನನ್ನ ಕೆಲಸದ ಬಗ್ಗೆ ಮಾತ್ರ ಮಾತಾಡಬೇಡಾ"
"ಯಾವಾಗ ಕೇಳಿದ್ರೂ ಹೀಗೆ ಸಿಡುಕ್ತ್ಯಾ., ಪ್ರತೀ ತಿಂಗಳೂ ಆ ಬುಕ್ಸಿಗೆ ಸಾವಿರಾರು ರುಪಾಯಿ ಸುರಿತಿಯಾ. ನಂಗೊಂದು ಜಾಕ್ಲೇಟ್ ತಂಕೊಡು ಅಂದ್ರೆ ಮರ್ತೋಯ್ತು ಅಂತ್ಯಾ"
"ಈಗೇನು? ನಿಂಗೆ ಚಾಕ್ಲೇಟ್ ತಾನೇ ಬೇಕು. ಬಾ ನಿನ್ನೆ ತಾನೆ ಸ್ಯಾಲರಿ ಆಗಿದೆ. ನಿಂಗೆ ಚಾಕ್ಲೇಟಿನಲ್ಲೇ ತುಲಾಭಾರ ಮಾಡಸ್ತೀನಿ"
"ಅತ್ತು ಕರೆದು ಔತಣಕ್ಕೆ ಹೇಳಿಸ್ಕೊಂಡಿದ್ರಂತೆ"
ನನಗೆ ಅಸಹನೆ ಹೆಚ್ಚುತ್ತ ಹೋಯ್ತು. ಪ್ಯಾಕಿನಿಂದ ಸಿಗರೇಟು ಹೊರಗೆಳೆದು ಅಂಟಿಸಿಕೊಂಡೆ.
"ನೋಡು, ನೋಡು, ಇನ್ನು ಹದಿನೈದು ದಿನದಲ್ಲೇ ಸಿಗರೇಟು ಬಿಟ್ಬಿಡ್ತೀನಿ ಅಂತ ನನ್ನಮೇಲೆ ಆಣೆ ಮಾಡಿ ಎಂಟು ತಿಂಗಳಾಯ್ತು ಅಲ್ಲಲ್ಲ ಒಂಬತ್ತು ಈ ಮಾರ್ಚ್ ಕಳೆದ್ರೆ. ಭಾನುವಾರ ಪಿವಿಆರ್ ಗೆ ಕರೆದ್ರೆ, ಸುಮ್ನೆ ದುಡ್ಡು ದಂಡಾ. ವೀಕ್ ಡೇಸ್ ನಲ್ಲಿ ಹೋಗೋಣ ಅಂತ್ಯಾ. ತಿಂಗಳಿಗೆ ಸಾವಿರಾರು ರುಪಾಯಿ ಸುಟ್ಟು ಬೂದಿ ಮಾಡ್ತ್ಯಲ್ಲಾ,  ನಾಚ್ಕೆ ಆಗಲ್ವಾ?"
ಇಲ್ಲಿಗೆ ನನ್ನ ಸಹನೆಯ ಕಟ್ಟೆ ಒಡೆದು ಹೋಯ್ತು.
"ನೋಡಿ ಮಿಸ್............ ನಾನು ನಿಮಗೆ ಪರಿಚಯವಾದಾಗ ನಾನು ಸಿಗರೇಟು ಸೇದೋದು, ಬುಕ್ಸ್ ಓದೋದು, ಫಿಲ್ಮ್ ನೋಡಿದ್ರೆ ತಲೆನೋವು ಬರೋದು,  ಸಾಕಷ್ಟು ಪೋಲಿಪ್ರೆಂಡ್ಸ್ ಇರೋದು,  ಎಲ್ಲಾ ನಿಮಗೆ ಗೊತ್ತಿತ್ತು ತಾನೆ?"
"ಗೊತ್ತಿತ್ತು"
"ಹಾಗಿದ್ರಿ ಕೇಳೀ. ನಾನು ಸರ್ವಗುಣ ಸಂಪನ್ನನ ಥರಾ ಆಕ್ಟ್ ಮಾಡಿ ನಿಮ್ಮನ್ನು ಪಟಾಯಿಸಿಕೊೞಲಿಲ್ಲ"
" ನಾನು ಹಾಗೆ ಹೇಳಲಿಲ್ಲ"
"ಮಧ್ಯೆ ಮಾತಾಡ್ಬೇಡಾ, ಪೂರ್ತಿ ಹೇಳೂವರೆಗೂ ಕೇಳು. ನನಗೆ ನನ್ನದೂ ಅಂತಾ ಒಂದು ಪರ್ಸನಲ್ ಲೈಫ್ ಇದೆ. ಅದ್ರಲ್ಲಿ ಸ್ವಂತ ನಮ್ಮ ಮನೆಯವರೂ ಕೂಡ ಇಂಟರ್ಫಿಯರ್ ಆಗೋದು ನನಗೆ ಹಿಡಿಸೋಲ್ಲ. ಈ ಬುಕ್ಸು, ಫ್ರೆಂಡ್ಸು, ಗಿಟಾರು, ಮ್ಯೂಸಿಕ್, ಸಿಗರೇಟು ಎಲ್ಲಾ ನನ್ನ ಜೀವನದ ಭಾಗಗಳು. ಹಾಗಂತ ಇವಿಷ್ಟೇ ನನ್ನ ಜೀವನ ಅಲ್ಲ. ಆಫ್ ಕೋರ್ಸ್ ನೀನೂ ಕೂಡಾ ನನ್ನ ಜೀವನದ ಒಂದು ಭಾಗ ಅಷ್ಟೇ. ಇದ್ರಲ್ಲೆಲ್ಲಾ ನೀನು ತಲೆ ತೂರ್ಸೋದು ನನಗೆ ಹಿಡಿಸೋಲ್ಲ. ಇದೆಲ್ಲಾ ನಿನಗೆ ಮೊದಲೇ ಗೊತ್ತಿದ್ದರೂ ಯಾಕೆ ನಂಗೆ ಕ್ಲೋಸಾದೆ?  ಇಂಥಾ ದರಿದ್ರ ವ್ಯಕ್ತಿತ್ವದ ಜೊತೆ ಇದ್ದೂ ನನ್ನ ಸಹಿಸಿಕೊೞೋ ಹಾಗಿದ್ರಿ ಇರು. ಇಲ್ಲಾಂದ್ರೆ ಸುಮ್ನೇ ಮೊದಲಿನ ಥರಾ ಫ್ರೆಂಡ್ಸ್ ಆಗಿರೋಣ್"
ಉಸಿರೆಳೆದು ಕೊಂಡೆ. ಅವಳ ಮುಖ ನೋಡಿದೆ.  ಅವಳು ಗುಟ್ಟು ಬಿಟ್ಟು ಕೊಡಲಿಲ್ಲ
ಅಷ್ಟರಲ್ಲಿ . ರೋಸೂವು..........ರೋಸೂವು ಅನ್ನುತ್ತಾ ಗುಲಾಬಿ ಹೂಗಳನ್ನು ಮಾರುತ್ತಾ ಚಿಕ್ಕ ಹುಡುಗನೊಬ್ಬ ನನ್ನ ಹತ್ತಿರ ಬಂದ. ನನ್ನನ್ನು ನೋಡಿ ಪರಿಚಯದ ನಗೆ ನಕ್ಕ. ರೋಸುವ್ ಕೊಡ್ಲಾ ಸಾರ್? ಅಂತ ನನ್ನ  ಬಳಿ ಕೇಳಿದ. ನಾನೊಮ್ಮೆ ಪ್ರಶ್ನಾರ್ಥಕವಾಗಿ ಅವಳ ಮುಖ ನೋಡಿದೆ.
"ಕೊಡು, ದುಡ್ಡು ಅವರತ್ರ ಇಸ್ಕೋ"  ಅಂದ್ಲು
ರೋಸೂವು ಅವಳ ಕಂಗಳಲ್ಲಿ ಅರಳಿ, ಕೆನ್ನೆಯಲ್ಲಿ ನಗುತ್ತಿತ್ತು
 

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

ಗುಡುಗು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/25/2010 - 14:00

ಹನಿ ಹನಿ ಪ್ರೇಮ್ ಕಹಾನಿ! ಚೆನ್ನಾಗಿ ಬರೀತಿದ್ದಿರಾ ಕಣ್ರೀ, ಗುಡ್ ಲಕ್!!!

Vishy ಶುಕ್ರ, 03/26/2010 - 09:47

ಓದುತ್ತಾ ಹೋದರೆ, ನೀವಿಬ್ಬರೂ ಇಲ್ಲೆ ಪಕ್ಕದಲ್ಲಿ ಕೂತು ಮಾತನಾಡುತಿರುವ ಹಾಗೆ ಭಾಸವಾಗುತಿತ್ತು. ಅದ್ಭುತವಾಗಿ ಬ೦ದಿದೆ.

ಬಾಲ ಚಂದ್ರ ಶುಕ್ರ, 03/26/2010 - 10:40

ಪ್ರೀತಿಯ,
ಉಮಾಶಂಕರ್, ಗುಡುಗು ಹಾಗು ವಿಷಯ್ ಅವರಿಗೆ ಧನ್ಯವಾದಗಳು
ಸಸ್ನೇಹ,
ಬಾಲ ಚಂದ್ರ

ಮುಸ್ತಾಫ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/26/2010 - 14:04
csp (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/26/2010 - 18:48

Superr! climax ಸ್ವಲ್ಪ change aagidre inna super.:

swapnashashidh… (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 03/27/2010 - 11:59

ಚೆನ್ನಾಗಿದೆ...
ಆದ್ರೆ ಒಬ್ಬ್ ಹುಡುಗಿ ಆಗಿ ಈ ಕತೆ ಬರೀರಿ ನೋಡೋಣ?
one matu, nimmman ista padtalalla hudugi, avalu baree nimman matra ista padtale, nim chtagalannagli, nim oratu tanavannagli alla.. avugalan sahiskoltale aste, a hudugi yak ast complaint madidlu heli? avligen nim mele hottekichcha? athvaa avlu dudida duddal neev cigarete sedtira anta sitta? eradoo alla... nim lungs ge est hoge tumbatto..  adanna, adara parinamagalanna neneskondu avl hridaya odedu hogta iratte, aval karulu sudta iratte,
neev hudguru (am not blaming you boys... just VASTAVA... ) nav nim jote illa anta adru nim business, nim friens anta kaledu hogi bidtira... adre nav hudgir idivalla.. navu neev mado kelsada 10 pattu jasti kelsa madta idru, namge nimginta 100 friens jasti idru, nimginta 1000 pattu jasti bookworm galagidru nimgal vishya bandre baree adan matra yochne madtivi, yavag nimge santhosha kodo sandarbhagalu baratto avagella kodtane irtivi... namgoo feelings irtave, nimginta jasti bhavanegalirtave, nimge baree business yochne adre, baree dudidu tand hako yochne adre namge adara maintanance jote nim bagge kooda personal care tagobekagatte,,, avlu one chocolate keliddakke, expect madiddakke nim sahane miti meeritu, avlige chocolate mukhya agirodilla.. a chocolate kodovaga nim kannal kano preeti, aradhane mukhya agirutte anta neev yak yochne madodilvo? nang artha agodilla... its not only your problem.... its the problem of alll guys...
nijja heltini, nim hudugi nimminda  bayasodu hani preetina.... avlu nimge avl edeliro preeti sagara vanne dhare eredirtale, nimminda hani expect madod tappa? heli? NANNA DHATIYA NEENARIYE anta bardidirala... nim dhatiyan aritukonde avlu nakkiddu, avlu gulabi hoo iskondiddu,,, nann hade bere anta neev bere hadoke horataroo adakke ragavagodu avale....
Once again am not blaming you guys..... just try to understand once...

ಬಾಲ ಚಂದ್ರ ಶನಿ, 03/27/2010 - 13:39

ಓದುಗರ ಅನುಕೂಲಕ್ಕಾಗೆ ಸ್ವಪ್ನಾ ಶಶಿಧರ್ ಭಟ್ ಅವರು ಬರೆದ ಈ ಲೇಖನವನ್ನು ಕನ್ನಡ ಲಿಪಿಗೆ ಭಾಷಾಂತರಿಸಲಾಗೆದೆ- ಬಾಲ ಚಂದ್ರ)
ಚೆನ್ನಾಗಿದೆ...
 
ಆದ್ರೆ ಒಬ್ಬ್ ಹುಡುಗಿ ಆಗಿ ಈ ಕತೆ ಬರೀರಿ ನೋಡೋಣ?
ಒಂದು ಮಾತು, ನಿಮ್ಮನ್ನು ಇಷ್ಟ ಪಡ್ತಾಳಲ್ಲ ಆ ಹುಡುಗಿ, ಅವಳು ನಿಮ್ಮನ್ನು ಮಾತ್ರ ಇಷ್ಟ ಪಡ್ತಾಳೆ. ನಿಮ್ಮ ಚಟಗಳನ್ನಾಗಲೀ, ನಿಮ್ಮ ಒರಟುತನವನ್ನಾಗಲೀ ಅಲ್ಲ. ಅವುಗಳನ್ನು ಸಹಿಸಿಕೊಳ್ತಾಳೆ ಅಷ್ಟೇ. ಆ ಹುಡುಗೆ ಯಾಕೆ ಅಷ್ಟು ಕಂಪ್ಲೇಟ್ ಮಾಡ್ತಾಳೆ ಹೇಳಿ? ಅವಳಿಗೇನು ನಿಮ್ಮ ಮೇಲೆ ಹೊಟ್ಟೆ ಕಿಚ್ಚಾ? ಅಥವಾ ಅವಳು ದುಡಿದ ದುಡ್ಡಲ್ಲಿ ನೀವು ಸಿಗರೇಟ್ ಸೇದ್ತೀರಿ ಅಂತಾ ಸಿಟ್ಟಾ? ನಿಮ್ಮ ಲಂಗ್ಸ್ ಗೆ ಎಷ್ಟು ಹೊಗೆ ತುಂಬತ್ತೋ? ಅದನ್ನ, ಅದರ ಪರಿಣಾಮಗಳನ್ನ ನೆನೆಸ್ಕೊಂಡು ಅವಳ ಹೃದಯ ಒಡೆದು ಹೋಗ್ತಾ ಇರುತ್ತೆ.  ಅವಳು ಕರುಳು ಸುಡ್ತಾ ಇರುತ್ತೆ..
 
ನೀವು ಹುಡುಗ್ರು (am not blaming you boys... just ವಾಸ್ತವ... ) ನಾವು ನಿಮ್ಮ ಜೊತೆ ಇಲ್ಲದೆ ಇದ್ರೂ ನಿಮ್ಮ ಬ್ಯುಸಿನೆಸ್, ನಿಮ್ಮ ಫ್ರೆಂಡ್ಸ್ ಅಂತಾ ಕಳೆದು ಹೋಗಿ ಬಿಡ್ತೀರಿ. ಆದ್ರೆ ನಾವು ಹುಡುಗೀರ್ ಇದೀವಲ್ಲ, ನಾವು ನೀವ್ ಮಾಡೋ ಕೆಲ್ಸದ ಹತ್ತು ಪಟ್ಟು ಕೆಲ್ಸ ಜಾಸ್ತಿ ಮಾಡ್ತಾ ಇದ್ರೂ, ನಿಮಗಿಂತಾ ನೂರು ಫ್ರೆಂಡ್ಸ್ ಜಾಸ್ತಿ ಇದ್ರೂ, ನಿಮಗಿಂತಾ ಸಾವಿರಪಟ್ಟು ಜಾಸ್ತಿ ಬುಕ್ ವಾರ್ಮ್ ಗಳಾಗಿದ್ರೂ, ನಿಮ್ಮ ವಿಷಯ ಬಂದ್ರೆ ಬರೀ ಅದನ್ನ ಮಾತ್ರ ಯೋಚನೆ ಮಾಡ್ತೀವಿ. ಯಾವಾಗ ನಿಮ್ಗೆ ಸಂತೋಷ ಕೊಡೋ ಸಂದರ್ಭ ಬರುತ್ತೋ ಆವಾಗೆಲ್ಲಾ ಕೊಡ್ತಾನೇ ಇರ್ತೀವಿ. ನಮ್ಗೂ ಫೀಲಿಂಗ್ಸ್ ಇರ್ತಾವೆ. ನಿಮಗಿಂತಾ ಜಾಸ್ತಿ ಭಾವನೆಗಳಿರ್ತವೆ. ನಿಮಗೆ ಬರೀ ಬ್ಯುಸಿನೆಸ್ ಯೋಚನೆ ಆದ್ರೆ, ಬರೀ ದುಡಿದು ತಂದು ಹಾಕೋ ಯೋಚನೆ ಆದ್ರೆ, ನಮಗೆ ಅದ್ರ ಮೇಂಟೇನೆನ್ಸ್ ಜೊತೆ ನಿಮ್ಮ ಬಗ್ಗೆ ಕೂಡ ಪರ್ಸನಲ್ ಕೇರ್ ತಗೋಬೇಕಾಗುತ್ತೆ. ಅವಳು ಒಂದು ಚಾಕ್ಲೇಟ್ ಕೇಳಿದ್ದಕ್ಕೆ, ಎಕ್ಸೆಪ್ಟ್ ಮಾಡಿದ್ದಕ್ಕೆ ನಿಮ್ಮ ಸಹನೆ ಮಿತಿ ಮೀರಿತು. ಅವಳಿಗೆ ಚಾಕ್ಲೇಟ್ ಮುಖ್ಯ ಆಗಿರ್ಲಿಲ್ಲ. ಚಾಕ್ಲೇಟ್ ಕೊಡಿಸುವಾಗ ನಿಮ್ಮ ಕಣ್ಣಲ್ಲಿ ಕಾಣೋ ಪ್ರೀತಿ, ಆರಾಧನೆ ಮುಖ್ಯ ಆಗಿರುತ್ತೆ ಅಂತ ನೀವು ಯಾಕೆ ಯೋಚನೆ ಮಾಡೋದಿಲ್ವೋ? ನಂಗೆ ಅರ್ಥ ಆಗಲ್ಲ.its not only your problem.... its the problem of alll guys...
ನಿಜ ಹೇಳ್ತೀನಿ ನಿಮ್ಮ ಹುಡುಗಿ ನಿಮ್ಮಿಂದ ಬಯಸೋದು ಹನಿ ಪ್ರೀತೀನ. ಅವಳು ನಿಮಗೆ ಅವಳ ಎದೇಲಿರೋ ಪ್ರೀತಿ ಸಾಗರವನ್ನೇ ಧಾರೆ ಎರೀತಾಳೆ.ನಿಮ್ಮಿಂದ ಹನಿ ಎಕ್ಸೆಪ್ಟ್ ಮಾಡೋದು ತಪ್ಪಾ? ಹೇಳೀ? ನನ್ನ ಧಾಟಿಯ ನೀನರಿಯೇ ಅಂತ ಬರ್ದಿದೀರಲ್ಲಾ, ನಿಮ್ಮ ಧಾಟಿಯನ್ನು ಅರಿತುಕೊಂಡೇ ಅವಳು ನಕ್ಕಿದ್ದು. ಅವಳು ಗುಲಾಬಿ ಹೂ ಇಸ್ಕೊಂಡಿದ್ದು.ನನ್ನ ಹಾಡೇ ಬೇರ್ಏ ಅಂತಾ ನೀವು ಬೇರಿ ಹಾಡೋಕೆ ಹೊರಟರೂ ಅದಕ್ಕೆ ರಾಗವಾಗೋದು ಅವಳೇ.
nce again am not blaming you guys..... just try to understand once...
 

ಬಾಲ ಚಂದ್ರ ಶನಿ, 03/27/2010 - 13:56

ಸ್ವಪ್ನಾ ಮೇಡಂ,
ಹೆಚ್ಚು ಕಡಿಮೆ ನನ್ನ ಕಥೆಯಷ್ಟೇ ಉದ್ದವಾದ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
 ಆದರೆ ನಿಮ್ಮ ತಪ್ಪು ತಿಳುವಳಿಕೆಗಾಗಿ ವಿಷಾದಿಸುತ್ತೇನೆ. ಏಕೆಂದರೆ ಇದು ನನ್ನ  ಅನುಭವ ಅಲ್ಲ. ಕೇವಲ ನನ್ನ ಕಲ್ಪನೆ ಅಷ್ಟೇ. ತೀರ ಇತ್ತೀಚೆಗೆ,  ಕನ್ನಡದ ಹಳೆಯ ಹಾಡುಗಳನ್ನು ಮೆಲಕು ಹಾಕುತ್ತಿದ್ದಾಗ ಈ ಹಾಡಿನ ಸಾಲು ನನ್ನ ಮನತಟ್ಟಿತು. ಅದನ್ನೇ ಸ್ವಲ್ಪ ವಿಸ್ತರಿಸಿದರೆ ಒಂದು ಚೆಂದದ ಕಥೆಯಾಗುತ್ತದೆ ಎನ್ನಿಸಿತು. ಅದರ ಫಲವೇ ಈ ಲೇಖನ. ನಮ್ಮ ಹುಡುಗಿ, ರೋಸೂವು, ಚಾಕ್ಲೇಟು ಎಲ್ಲಾ ನನ್ನ ಕಲ್ಪನಾರೂಪಕಗಳೇ ಹೊರತು, ನೀವಂದು ಕೊಂಡ ಹಾಗೆ ನಿಜವಲ್ಲ.
any how ಹುಡುಗಿಯರ ಬಗ್ಗಿ ನಿಮಗಿರುವ ಕಾಳಜಿ ಪ್ರಶಂಸನೀಯ. ನೀವಂದಂತೆ ಅವರು ನಮಗಿಂತಾ ಹೆಚ್ಚು ದುಡಿಯುವವರೂ, ಓದುವವರೂ, ನಮ್ಮ ಬಗ್ಗೆ ಕಾಳಜಿ ವಹಿಸುವವರೂ ಆಗಿರಬಹುದು,. ಆ ದಣಿವರಿಯದ ಚೇತನಕ್ಕೆ ನನ್ನ ನಮನಗಳು. but MEN IS A MEN. . ಅವನ ಹುಂಬತನ, ಸಿಟ್ಟು, ಹುಚ್ಚುತನಗಳನ್ನು ಬದಲಾಯಿಸುವುದು ಕಷ್ಟ. ಆದರೆ ನೆನಪಿಟ್ಟುಕೊೞಿ  ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೊಳಗಾಗುವರ ಸಂಖ್ಯೆಯಲ್ಲಿ ಹುಡುಗರದೇ ಸಿಂಹಪಾಲು. once again MEN IS A MEN  ಪ್ರೀತಿಯಲ್ಲಿ ಕೂಡ ನಮ್ಮದು ಹುಚ್ಚು ಪ್ರೀತಿ.
ಒಬ್ಬ ಹುಡುಗಿಯಾಗಿ ಈ ಕಥೆ ಬರೀರಿ ನೋಡೋಣ, ಅಂತಾ ಓಪನ್ ಚಾಲೆಂಜ್ ಹಾಕಿದ್ದೀರಲ್ಲ, ದಯವಿಟ್ಟು ನೀವೊಬ್ಬ ಹುಡುಗನಾಗಿ ಇದನ್ನು ಓದಿ. ಆಗ ಅರ್ಥವಾದೀತು.
 
ಕೊನೆಯದಾಗಿ,
ಇದೊಂದು ಕನ್ನಡದ ಅಂತರ್ಜಾಲ ತಾಣ. ದಯವಿಟ್ಟು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿ
ಸಸ್ನೇಹ
ಬಾಲ ಚಂದ್ರ
 

swapna ಭಾನು, 03/28/2010 - 13:36

ಬಾಲಚಂದ್ರ ರವರೇ,
ಇದೇ ಕಾರಣಕ್ಕೆ ನಾನು ಎರಡೆರಡು ಬಾರಿ  ಬರೆದಿದ್ದೇನೆ, ನಾನು ಹುಡುಗರನ್ನು ದ್ವೇಷಿಸ್ತಾ ಇಲ್ಲ, ನಾನು ಹುಡುಗರನ್ನು ಬ್ಲೇಮ್ ಮಾಡ್ತಾ ಇಲ್ಲ.. ಅಂತ...
ನಿಮ್ಮ ಸ್ವಂತ ಅನುಭವ ಅಲ್ಲದಿದ್ದರೂ ನಿಮ್ಮನ್ನು ಉದ್ದೇಶಿಸಿ ಹೇಳಿದೆ, ಹರ್ಟ್ ಆಗಿದ್ರೆ ಕ್ಷಮಿಸಿ...
ಆದ್ರೆ ಒಂದು ಮಾತು..ನಾವು ಬರೆಯೋ ಕಥೆ ನಮ್ಮ ಜೀವನದಲ್ಲಿ ನಡೆಯದೆ ಇದ್ದಿರಬಹುದು.. ಆದ್ರೆ ನಾವು ಬರೆಯೋ ಕಥೆ, ಕವನಗಳಲ್ಲಿ ನಮ್ಮ ಅಭಿಲಾಷೆಗಳು ಇರುತ್ತವೆ.. ನಮ್ಮ ಧೋರಣೆಗಳು ಇರುತ್ತವೆ.. ನಾನು ವಿಸ್ಮಯ ನಗರಿಯ ಕವನ ಕಾಲಂ ಗೆ ಒಂದು ಕವನ ಬರೆದಿದೀನಿ, ಓದಿ ನೋಡಿ, ಅದು ನನ್ನ ಜೀವನ ಅಲ್ಲ.. ನನ್ನ ಅನುಭವ ಅಲ್ಲ.. ಆದ್ರೆ ನನ್ನ ಅಭಿಲಾಷೆ... ನನ್ನ ಇಚ್ಛೆ.. ನಾನು ರಾಧೆಯಾಗಬೇಕು ಅಂತ.. ಸೋ ಒಬ್ಬ ರಾಧೆಯಾದರೆ ನಾನು ಹೇಗಿರ್ತೇನೆ, ನನ್ನ ಮನಸ್ಸಲ್ಲಿ ಕೃಷ್ಣ ಹೇಗೆ ಹೇಗೋ ಬಿಂಬಿಸ್ತಾನಲ್ಲ, ಹಾಗೆಯೇ ನಿಮ್ಮ ಮನಸ್ಸಲ್ಲಿ ಅವನ ಪ್ರತಿಬಿಂಬ ಇರ್ಬೇಕು ಅಂತ ನಾನು ಎಕ್ಸ್ಪೆಕ್ಟ್ ಮಾಡೋದು ತಪ್ಪಾಗತ್ತೆ..
ಇಲ್ಲಿ ಕೂಡಾ ನೀವು ನನ್ನ ಅಭಿಪ್ರಾಯವನ್ನ ಇದೇ ರೀತಿ ಮಿಸ್ ಅಂಡರ್ ಸ್ಟಾಂಡ್ ಮಾಡಿಕೊಂಡಿದೀರಾ..ನೀವು ನಾನು ನಿಮ್ಮಿಂದ ನಿಮ್ಮ ಹುಡುಗರ ಸಹ್ಜ್ ಗುಣಗಳನ್ನ ಬಿಟ್ಟು ಬಿಡಿ ಅಂತ ಹೇಳ್ತಾ ಇಲ್ಲ, ಬಾಲಚಂದ್ರ ರವರೇ, ಆಫ್ ಕೋರ್ಸ್, ನಾವು ಹುಡುಗೀರಿಗೂ ಕೂಡ ನಿಮ್ಮ ತರಾನೇ ಜನ್ಮ ಸಹಜವಾದ ಸ್ವಭಾವಗಲಳಿರುತ್ತವೆ.. ಅಭಿಪ್ರಾಯಗಳಿರುತ್ತವೆ.. ಅದನ್ನ ನಾವು ಬದಲಾಯಿಸಿಕೊಳ್ ಬೇಕಾಗುತ್ತದೆ ಕೆಲವೊಮ್ಮೆ.. ನಾನು ಹೇಳ್ತಾ ಇರೋದು, ನಿಮ್ಮದು ತಪ್ಪ್ಪು ಅಂತ ಅಲ್ಲ ಇವರೇ...
ಒಬ್ಬ ಹುಡುಗಿ ತನ್ನ ಸ್ವಭಾವದಲ್ಲಿ ಏರುಪೇರುಗಳನ್ನು ಯಾರೇ ಗುರುತಿಸಿದರೂ ಅದು ಹೌದೋ ಅಲ್ವೋ ಅಂತ್ ಯೋಚನೆ ಮಾಡಿ ಅದು ಸರಿ ಅಂತ್ ಅನ್ನಿಸಿದ್ರೆ ಅದನ್ನ ಫಾಲೋ ಮಾಡ್ತಿವಿ,ಅದೂ ನಮಗೆ ಅತಿ ಪ್ರಿಯವಾದವರು, ಅಥವಾ ನಮ್ಮನ್ನ ಅತೀ ಪ್ರೀತಿಸೋರು ಹೇಳಿದ್ರೆ ಅಂತೂ ಅದು ತಪ್ಪೋ ಒಪ್ಪೋ, ಒಪ್ಪಿಕೊಂಡು ಬಿಡ್ತಿವಿ..
ನಾವು ಹುಡುಗೀರು ಒಬ್ಬ ಗಂಡಸಿನ ಎದುರು (ಅವನು ಅಪ್ಪ, ಅಣ್ಣ, ಗಂಡ, ಮಾವ, ಗೆಳೆಯ ಯಾರೇ ಆಗಿರಬಹುದು) ಒಮ್ಮೆ ತಲೆ ತಗ್ಗಿಸಿ, ಅವನ ಮಾತಿಗೆ ಬೆಲೆ ಕೊಟ್ವಿ ಅಂದ್ರೆ ನಾವು ಸಾಯೋ ತಂಕ ಆ ಬೆಲೆನ ಉಳಿಸ್ಕೊಂಡಿರ್ತೀವಿ.. ಅವನು ಮುಂದೆ ಜೀವನದಲ್ಲಿ ಎಷ್ಟು ಕೆಳಮಟ್ಟಕ್ಕೆ ಇಳಿದರೂ, ಅವನಿಗೆ ಆಸರೆಯಾಗಿ ನಿಲ್ತೀವಿ ಹೊರತು ನೀನು ನನ್ನ ಜೀವನದ ಒಂದು ಭಾಗ ಅಷ್ಟೆ, ನನ್ನ ಹಾಡಿನ ಧಾಟಿ ಬೇರೆ ಅಂತ್ ನಾವು ಹೇಳೋದಿಲ್ಲ..
ಅದೇ ಒಬ್ಬ ಹುಡುಗ ತಾನು ಪ್ರೀತಿಸಿದ ಹುಡುಗಿ (ಅವಳು ಅಕ್ಕ, ತಂಗಿ...... ) ಒಂದು ಚೂರು ತನ್ನ ಮೇಲೆ ಹಿಡಿತ ಸಾಧಿಸೋಕೆ ಪ್ರಯತ್ನ ಪಡ್ತಾ ಇದಾಳೆ ಅಂತ ಅನ್ನಿಸಿದ್ ಕೂಡ್ಲೆ ಅದೇ ಮಾತುಗಳನ್ನ ಉದುರಿಸಿಬಿಡ್ತಾನೆ.. ನಿಜವಾಗಲೂ ಅವನಿಗೆ ಅ ಇಂಟೆನ್ ಶನ್ ಇರದೇ ಇರಬಹುದು, ಆದ್ರೆ ಆ ಮಾತಿಂದ ಅವಳ ಹೃದಯಕ್ಕೆ ಎಷ್ಟು ನೋವು ಕೊಟ್ಟಿರ್ತಾನೆ ಅನ್ನೊ ಅರಿವು ಅವನಿಗೆ ಇರೋದಿಲ್ಲ..
ನಮಗೂ ಗೊತ್ತಾಗತ್ತೆ.. ಅವಳನ್ನ ಬಿಟ್ಟು ಇರೋಕೆ ಆಗದೆ, ಅವಳ ಅತೀ ಕೇರ್ ಗೆ ಉತ್ರ ಹೇಳೋಕೂ ಆಗದೆ ಅವನು ಆ ತರ ಮಾತಾಡಿರ್ತಾನೆ ಅಂತ.. ಆದ್ರೆ ದುಡುಕುತನ ನಿಮ್ಮ ಹತ್ರ ಆ ತರ ಮಾತಾಡಿಸಿ ಬಿಡತ್ತೆ.. ನಿಜ ಹೇಳ್ತಿನಿ, ನಾನು ನಿಮ್ಮನ್ನ ಬ್ಲೇಮ್ ಮಾಡಿದ್ದಲ್ಲ..
ನಾನು ವಿವಾಹಿತೆ.. ನನ್ನ ಸ್ವಂತ ಅನುಭವ ಹೇಳ್ತೀನಿ, ನಾನು ಮದುವೆಗೆ ಮೊದಲು ಅಣ್ಣ, ಅಪ್ಪನ ಜೊತೆ ಇದ್ದಾಗ ಅಣ್ಣಂಗೆ ನನ್ನ ಮದುವೆ ವಿಷಯದಲ್ಲಿ ಏನಕ್ಕಾದ್ರೂ ಕೋಪ ಬಂದ್ರೆ ನೀನ್ ಹೀಗೆ ಅವ್ರು ಬೇಡ ಇವ್ರು ಬೇಡಾ ಅಂತ ಕೂತಿರು, ಕೊನೆಗೆ ಮದುವೆ ಆಗದೆ ಇದ್ರೆ ನನ್  ಮನೆಗಂತೂ ಬಂದು ಕೂರೋದ್ ಆಗತ್ತೆ ನೋಡ್ತಾ ಇರು ಅಂತ ಬೈತಾ ಇದ್ದ..ಅದನ್ನೇ ನಾನು ಸೀರಿಯಸ್ ಆಗಿ ತಗೊಂಡಿದ್ರೆ  ಏನಾಗ್ತಾ ಇತ್ತು ಹೇಳಿ.. ಆದ್ರೆ ಅವನ ಮನ್ಸಲ್ಲಿ ಆ ತರ ಭಾವನೆ ನಿಜವಾಗ್ಲೂ ಇತ್ತಾ ಅಂತ ಯೋಚ್ನೆ ಮಾಡಿದ್ರೆ ಖಂಡಿತಾ ಇಲ್ಲ.. ಇವತ್ತು ನಾನು ಪ್ರಗ್ನೆಂಟ್ ಅಂತ್ ಕಾಲ್ ಮಾಡಿ ಹೇಳಿದ್ರೆ ಯಾಕೆ ಈ ತರ ಮಾಡಿಕೊಂಡೆ? ನಿಂಗ್ ಯಾಕ್ ಬೇಕಿತ್ತು ಇವಾಗ? ನಿಂಗ್ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ನಾನು ಕೂಡ ಇರೋದಿಲ್ಲ ಗೊತಾಯ್ತಾ ಅಂತ ಹೇಳಿ ಫೋನ್ ಇಟ್ಟ..
ನಾನು ಹೇಳೊಕ್ ಪ್ರಯತ್ನ ಪಡ್ತಾ ಇರೋದು, ನಾವು ನಮ್ಮ ಪ್ರೀತಿ ಪಾತ್ರರ ವಿಷಯದಲ್ಲಿ ಹೇಗೆ ನಮ್ಮ ಸಿಟ್ಟು, ಸಿಡುಕು, ಬಿಗುಮಾನಗಳನ್ನು  ಬಿಟ್ಟು ನಿಮ್ಮ ಹತ್ರ ಬರ್ತೀವೋ ಹಾಗೆನೆ ನೀವು ಯಾಕೆ ಇರಬಾರದೂ? ಅಂತ .. ಚೇಂಜ್ ನಮ್ಮಿಂದ ನೀವು ಬಯಸ್ತೀರಲ್ಲ.. ಹಾಗೆನೇ ನಾವು  ನಿಮ್ಮಿಂದ ಬಯಸ್ತಾ ಇರ್ತೀವಲ್ವಾ?
ನಿಮ್ಮ ಕಥೆಯನ್ನ ಒಬ್ಬ ಹುಡುಗನಾಗಿ ಓದಿಕೊಂಡೆ,. ಅಭಿಪ್ರಾಯವನ್ನ ಹುಡುಗಿಯಾಗಿ ಬರೆದೆ... ತಪ್ಪಾಗಿದ್ದರೆ, ಬೇಸರವಾಗಿದ್ದರೆ ಕ್ಷಮೆ ಇರಲಿ...
ಮತ್ತೆ.. ಒಂದು ವರ್ಷದ ನಂತರ ಇದೇ ಮೊದಲು ನಾನು ವಿಸ್ಮಯ ನಗರಿಯಲ್ಲಿ ಬರೀತಾ ಇರೋದು.. ಅದಕ್ಕೆ ಬೇಗ ಬರೀಬೋದು ಅಂತ ಇಂಗ್ಲೀಷ್ ನಲ್ಲಿ ಬರೆದೆ.. ಈಗ ಅಭ್ಯಾಸ ಮಾಡಿಕೊಂಡು ಬರೀತೀನಿ.. ಸಲಹೆಗಾಗಿ ಧನ್ಯವಾದಗಳು..
ಸ್ವಪ್ನಾ ಶಶಿಧರ್
 

ಬಾಲ ಚಂದ್ರ ಸೋಮ, 03/29/2010 - 09:22

ಸ್ವಪ್ನಾರವರೇ,
ಖಂಡಿತಾ ನಿಮ್ಮ ಯೋಚನಾಲಹರಿ ಕೂಡಾ ಆಲೋಚನಾರ್ಹ. ಆದರೆ ನನ್ನ ಲೇಖನದಲ್ಲಿ ನಾನು ಅಭಿವ್ಯಕ್ತಿಪಡಿಸಿರುವ ವಿಷಯ " ಹೀಗೇ ಆಗತ್ತದೆ ಎಂದಲ್ಲ, ಹೀಗೆ ಆಗಿತ್ತು ಎಂದೂ ಅಲ್ಲ, ಹೀಗೂ ಆಗಬಹುದು ಎಂಬ ಸಾಧ್ಯತೆ ಮಾತ್ರ" ದಯವಿಟ್ಟು ಇದನ್ನು ಗಮನಿಸಿ. ಒಬ್ಬ ಲೇಖಕನಾಗಿ ಬದುಕನ್ನು ಎಲ್ಲಾ ದೃಷ್ಟಿಕೋನಗಳಿಂದ ನೋಡುವಾಗ ಈ ರೀತಿ ಕೂಡ ನಡೆಯಬಹುದಾದ ಸಾದ್ಯತೆ ಒಂದಿದೆಯಲ್ಲವೇ?
"ನನ್ನ ಧಾಟಿಯ ನೀನರಿಯೇ, ನನ್ನ ಹಾಡೇ ಬೇರೆ" ಎಂಬ ಹಾಡಿನಲ್ಲಿ ವ್ಯಕ್ತವಾಗುವುದು, ನಾಯಕನ attitude.  ಅದು ಎಲ್ಲಾ ಹುಡುಗರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.  ಆ attitude ಗುಣವೇ ಈ ಲೇಖನದ ಮೂಲವಸ್ತು.
ನೀವು ಈ ಲೇಖನವನ್ನು ವಿಮರ್ಶಾತ್ಮಕವಾಗಿ ಓದದೇ, ಕೇವಲ ಒಬ್ಬ ಓದುಗಳಾಗಿ ಓದಿ ಮೆಚ್ಚಿದರೆ ನನ್ನ ಪ್ರಯತ್ನ ಸಾರ್ಥಕವೆಂದು ನಂಬುತ್ತೇನೆ.
ಧನ್ಯವಾದಗಳು,
ಸಸ್ನೇಹ,
ಬಾಲ ಚಂದ್ರ
 
 

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/31/2010 - 09:56

Men is Men ಅನ್ನೋ ವಾಕ್ಯ ಪ್ರಯೋಗ ತಪ್ಪು. ಅದು Men are Men ಅಥವಾ Man is Man ಎಂದು ಆಗಬೇಕು.
 

ತೇಜಸ್ವಿನಿ ಹೆಗಡೆ ಸೋಮ, 03/29/2010 - 10:38

ವಾಸ್ತವಿಕತೆಯಿಂದ ಕೂಡಿದ ಚುರುಕಾದ ಸಂಭಾಷಣೆ ಕಥೆಯನ್ನು ಸರಾಗವಾಗಿ ಹಾಗೂ ಆಸಕ್ತಿಕರವಾಗಿ ಓದಿಸಿಕೊಂಡು ಹೋಗುತ್ತದೆ. ತುಂಬಾ ಚೆನ್ನಾಗಿದೆ.

ಶಿವಕುಮಾರ ಕೆ. ಎಸ್. ಮಂಗಳ, 03/30/2010 - 18:18

ಎಲ್ರೂ ಹೇಳೋದ್ನೆಲ್ಲ ಹೇಳ್ಲಿ ಅಂತಾ ಸುಮ್ಮನಿದ್ದೆ. ತರ್ಲೆ ನನ್ಮಗ! ಹುಡ್ಗೀರ್ನೆಲ್ಲ ಹಿಂಗ್ ಗೋಳು ಹೊಯ್ಕೋತಾರೇನೋ? ಜೊತೆಗೆ 'ಇದು ನನ್ನ  ಅನುಭವ ಅಲ್ಲ. ಕೇವಲ ನನ್ನ ಕಲ್ಪನೆ ಅಷ್ಟೇ' ಅಂತಾ ಹೇಳಿ ನಾನೇನೂ ರಿಯಲ್ಲಾಗಿ ಮಾಡಿಲ್ಲ ಅಂತಾ ಪೋಸು ಬೇರೆ ಕೊಡ್ತೀಯಾ? Laughing Laughing Laughingಚೆನ್ನಾಗಿದೆ... 'ಕಲ್ಪನೆ' ನಿಜಾ ಅನ್ನಿಸುವಷ್ಟು ಬಲವಾಗಿದೆ, ಜಾಸ್ತಿ ಸಮಜಾಯಿಶಿ ಕೊಟ್ಕೋಬೇಡಾ, ನನಗೆ ಆ ನಿಮ್ಮ 'ಮೇಡಮ್ಮು' ಗೊತ್ತು! Laughing Laughing Laughing

ಬಾಲ ಚಂದ್ರ ಮಂಗಳ, 03/30/2010 - 21:10

ಶಿವಣ್ಣಾ.......
ಅಳಿದುಳಿದಿರೋ ಎಂಟಾಣೆ ಮರ್ಯಾದೆನೂ ಯಾಕಣ್ಣ ಕಳೀತಿಯಾ? ನಮ್ಮ್ ಮೇಡಂ ಮೇಲಾಣೆ, ಅಂಥಾವ್ರು ಯಾರೂ ಇಲ್ಲಾ!
ಅದೆಲ್ಲಾ ಇರ್ಲಿ, ಯಾಕಣ್ಣಾ ನಿಮ್ಮ ಪತ್ತೇನೆ ಇಲ್ಲಾ? ನಿಮ್ಮ ಲೇಖನಗಳನ್ನು ಓದಿ ಶಾನೆ ದಿನಾ ಆಯ್ತು, ಅಂಗೇ ಒಸಿ ಏನಾರಾ ಗೀಚ್ಬಾರ್ದಾ?
 
ಸಸ್ನೇಹ
ಬಾಲ ಚಂದ್ರ

Dhruva ಶುಕ್ರ, 04/09/2010 - 21:54

ಪಾಪ ಬಾಲಚಂದ್ರ ಅವರನ್ನ ಬಿಟ್ಬಿಡ್ರಿ ಸ್ವಪ್ನ ಅವರೆ, ನಾನು ಪ್ರೀತಿಸಿದ ಹುಡುಗ ಹೀಗೆ ಇರಬೇಕು ಅನ್ನೋ ಹಂಬಲ ಯಾಕೆ? ಅವನು ಹೇಗಿದ್ದಾನೋ ಹಾಗೆ ತಾನೆ ನಿಮಗೆ ಇಷ್ಟ ಆಗಿದ್ದು? ಇಲ್ಲ ಬಾಲಚಂದ್ರ ಹೇಳೋ ಹಾಗೆ act ಮಾಡಿ ಫೋಸ್ ಕೊಟ್ಟು (ಸುೞು ಹೇಳೀ) ಪ್ರೀತಿಸಿದ್ರೆ ನೀವ್ಹೇಳೋ ಅಷ್ಟು ಮಾತು ಒಪ್ಪಬಹುದು. after all ಇದು ಕಥೆ ಅಂತ ಅವರೆ ಬೇಡ್ಕೋತಾ ಇದಾರೆ. ಅವರನ್ನ ಮಾತಿಗೆಳೀಲೇಬೇಕು ಅನ್ನೋ ಹಾಗಿದೆ ನಿಮ್ಮ ವಿಮರ್ಶಾ ಧಾಟಿ. ಪ್ರೀತಿ ಅಂದ್ರೆ ಬೇಲಿ ಅಲ್ಲ ಅಂತ ನಾನ್ ತಿಳ್ಕೊಂಡಿದ್ದೀನಿ. ಗಂಡ ಅಂತೀರ.. ಅಣ್ಣ ಅಂತೀರ... ಹಾಗಿರ್ತೀವಿ ಅಂತೀರ.. ಹೀಗಿರ್ತೀವಿ ಅಂತೀರ.. ಹೀಗಿರ್ಬೇಕು ಅಂತೀರ... ಇಲ್ದಿದ್ರೆ ಸಿಟ್ ಮಾಡ್ಕೊತೀರಾ.. ಇಷ್ಟ್ರಲ್ಲಿ ಹುಡುಗನಿಗೆ ಪ್ರೀತಿ ಅಂದ್ರೆ ಏನನ್ನಿಸಬಹುದು ನೀವೇ ಯೋಚಿಸಿ... ಏನಂತೀರ ಬಾಲಚಂದ್ರ ಅವರೇ...

shruthi ಶನಿ, 10/23/2010 - 13:26

ಒಂದ್ ಮಾತು ಬಾಲಚಂದ್ರರವರೇ, ಸ್ವಪ್ನರವರ ಮಾತಿನಲಿ ನನಗ್ಯಾವ್ ತಪ್ಪು ಕಾಣಿಸುತಿಲ್ಲ ಹುಡುಗರು ಅವರೆಸ್ಟು ಪ್ರೀತಿಸ್ತಾರೇಂತಾ ಹೇಳ್ತಾರೆಯೇ ಹೊರತು ಆ ಹುಡುಗಿ ತನ್ನನ್ನೆಸ್ಟು ಪ್ರೀತಿಸ್ತಾಳೇಂತ ತಿಳಿಯೋ ಪ್ರಯತ್ನಾನು ಕೂಡ ಮಾಡೋದಿಲ್ಲ ಅವಳಿಂದ ಬೆಟ್ಟದಶ್ಟು ಬಯಸೋ ಹುಡುಗ ಹನಿ ಪ್ರೀತಿಯನು ನೀಡ್ದಿದ್ದರೆ ಹೇಗೆ ಹೇಳಿ?? ಪ್ರತೀ ಹೆಣ್ಣು ತನ್ನ ಪ್ರಿಯತಮನ ಕಣ್ಣಿನ ಪ್ರೀತೀನ ಬಯಸುತ್ತಾಳೆಯೇ ಹೊರತು ಅವನು ಸಂಪಾದಿಸುವ ಹಣವನ್ನಲ್ಲ . ಇದು ನನ್ನ ಅನಿಸಿಕೆಯೇ ಹೊರತು ನಿಮಗೆ ನಿಂದನೆಯಲ್ಲ. ತಪ್ಪಿದ್ದರೆ ಕ್ಷಮಿಸಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.