Skip to main content

ಕಂದಾ ಬೇಡವೋ ಸಿಗರೇಟ್ ಸೇದಬೇಡಾ!

ಬರೆದಿದ್ದುFebruary 22, 2010
7ಅನಿಸಿಕೆಗಳು

ಹುಷಃ ನಮ್ಮಮ್ಮನ ಮೂಡು ಅವತ್ತು ಸರಿ ಇರಲಿಲ್ಲ. ಅದನ್ನು ಅವರು ಬಾಯಿ ಬಿಟ್ಟು ಹೇಳದಿದ್ದರೂ ಅಡಿಗೆ ಮನೆಯಿಂದ ಬರುತ್ತಿದ್ದ, ಡಿಜಿಟಲ್ ಮತ್ತು ಡಬಲ್ ಡಾಲ್ಬಿ ಸೌಂಡು ಎಫೆಕ್ಟಿನಿಂದಲೇ ಕಂಡು ಹಿಡಿಯಬಹುದಾಗಿತ್ತು. ಭಾನುವಾರ ಬೇರೆ. ಕ್ರಿಕೆಟ್ಟು ಮ್ಯಾಚು ಇದ್ದುದರಿಂದ ಹೊರಗಡೆ ಎಲ್ಲೂ ಕಾಲಿಡುವ ಹಾಗಿಲ್ಲ. ಸೊ, ಪರಿಹಾರೋಪಾಯಕ್ಕಾಗಿ ಯೋಚಿಸತೊಡಗಿದೆ. ರಾಜಿ ಸಂಧಾನವೇ ಅತ್ಯುತ್ತಮ ಮಾರ್ಗವೆಂದು ಅರ್ಧ ಘಂಟೆಯಲ್ಲಿ ಹೊಳೆಯಿತು.( ಬೇರೆ ಮಾರ್ಗವೂ ಇರಲಿಲ್ಲ ಎನ್ನಿ) ನಾನೇ ಮಾತಿಗೆಳೆದೆ.
ಏನಮ್ಮ ಸಂಡೇ ಸ್ಪೆಷಲ್?
ನನ್ನ ತಿಥಿ.! (ಗ್ಯಾರಂಟೀ ಇವರ ಮೂಡು ಸರಿ ಇಲ್ಲ )
ಓಹ್ ಸ್ವೀಟ್. ಆದ್ರೆ ನಾನು ಕೇಳಿದ್ದು ತಿಂಡಿ ಮಮ್ಮಿ.
ಚಿತ್ರಾನ್ನ
ಚಿತ್ರಾನ್ನ!!!!!!!!!!!!!!!!!( ಬಹುಷ; ಇವತ್ತು ನಾನು ಎಡಗಡೆ ಮಗ್ಗುಲಲ್ಲಿ ಎದ್ದನಾ?)
ಮಮ್ಮಿ ಬೇರೆ ಏನಾದ್ರೂ option ?
ಹೂ
ಏನು option ಇದೆ ಮಾಮ್?
ಇನ್ನು ಎರಡು option ಇದೆ.
very nice  ಯಾವುದು ಮಮ್ಮಿ ?
ಬೇಕಾದ್ರೆ ತಿನ್ನು, ಬೇಡಾಂದ್ರೆ ಬಿಡು. ಇವೆರೆಡೇ option.
 (ನಾನು ಎಡಗಡೆ ಮಗ್ಗುಲಲ್ಲಿ ಎದ್ದಿದ್ದು ಅಂತಾ ಕನಫರ್ಮಾಗಿ ಹೋಯ್ತು. ಆದರೆ ರಾಜಿ ಸಂಧಾನ ಆಗದಿದ್ದರೆ. ಇವತ್ತು ಮನೆ ನರಕ ಆಗುವುದು ಗ್ಯಾರಂಟಿ. ಆದರೆ ಈ ಬ್ಯಾಡ್ ಮೂಡಿಗೆ ಕಾರಣ ಏನು? ಗೊತ್ತಾಗ್ತ ಇಲ್ವಲ್ಲ. ಮತ್ತೆ ನಾನೆ ಮಾತನಾಡಿಸಿದೆ.)
ಯಾಕಮ್ಮಾ ಈ ಸಿಟ್ಟು ನಾನು ನಿನ್ನ ಒಡಹುಟ್ಟಿದ ಕಂದಾ (!?) ಅಲ್ವೇನಮ್ಮಾ.?
( ಈ ನಾಟಕ ಡೈಲಾಗ್ ಯಾಕೊ ವರ್ಕ್ ಔಟ್ ಆಗ್ಲಿಲ್ಲ )
ಅಮ್ಮಾ. ಏನಾಯ್ತು ಅಂತ ಹೇಳೂ. ನಾನು ರಾತ್ರಿ ಎರಡು ಘಂಟೆ ಇಂದ ನೋಡ್ತಾ ಇದೀನಿ. ಮಗನ್ನ ಬೈಯೋ ಟೈಮಾ ಅದು.
( ಈ ಮಾತು ಆಡಿದ ಮೇಲೆ ನನಗೆ ಜ್ನಾನೋದಯವಾಯಿತು.)
ರಾತ್ರಿ ಮನೇಗೆ ಬರೋ ಟೈಮಾ ಅದು.( ನಮ್ಮಮ್ಮನ ಜ್ವಾಲಮುಖಿ ಸ್ಪೋಟವಾಯಿತು) ಅರ್ಧ ಘಂಟೇ , ಕುಳಿತ ಜಾಗದಲ್ಲೇ ಸಹಸ್ರ ನಾಮಾರ್ಚನೆಗಳು (ವಿಥ್ ಮಂತ್ರ ಪುಷ್ಪ ) ಶೋಡಶೋಪಚಾರ ಸೇವೆ ( ವಿಥ್ ಪಾತ್ರೆ ಸೌಂಡು ) ಎಲ್ಲಾ ಆಯಿತು.
ನಾನು ಕಣ್ಣು ಬಿಟ್ಟಾಗ  ಮೌನವಾಗಿತ್ತು. ಒಮ್ಮೆ ಸುತ್ತ ಮುತ್ತ ವೀಕ್ಷಿಸಿದಾಗ ಅದು ನಮ್ಮ ಮನೆ ಅಂತ ಗೊತ್ತಾಯಿತು. ಮತ್ತೆ ರಾಜಿ ಮಾಡಿಕೊೞುವ ದುಸ್ಸಾಹಸಕ್ಕೆ ಕೈ ಹಾಕಿದೆ.
ಅದಕ್ಯಾಕಮ್ಮಾ ಇಷ್ಟು ಕೋಪ. ವೀಕೆಂಡ್ ಅಲ್ವಾ? ಪ್ರೆಂಡ್ಸ ಎಲ್ಲಾ ಸಿಕ್ಕಿದ್ರು. ಮಾತಾಡ್ತ ಲೇಟಾಗೋಯ್ತು. ನೋಡಿದ್ರು ವಾಪಸ್ ಬರುವಾಗ ಗಾಡಿ ಬೇರೆ ಕೆಟ್ಟೋಯ್ತು. some time its happens mummy.
ನಾನು ಕುಳಿತ ಜಾಗಕ್ಕೆ ಒಂದು ವಸ್ತು ಬಾಂಬಿನ ತೆರೆದಿ ಬಂದು ಬಿತ್ತು. ಅದೇನೆಂದು ನೋಡುವ ಮೊದಲೇ ಇನ್ನೊಂದು ವಸ್ತು ಅದೇ ಸ್ಟೈಲಿನಲ್ಲಿ ಬಂದು ಮುಖಕ್ಕೆ ಅಪ್ಪಳಿಸಿತು.
ನೋಡಿದರೆ ಒಂದು GOLD FLAKE LIGHTS  ಸಿಗರೇಟು. ಒಂದು ಬೆಂಕಿ ಪೊಟ್ಟಣ. ( ನನ್ನ ಹಣೆಬರಹ ಇವತ್ತು ಡಿಸೈಡಾಗಿ ಹೋಯ್ತು )
ಇದು ನನ್ನ ಬ್ರಾಂಡ್!!  ಅಲ್ಲಲ್ಲ. ಇದೆಲ್ಲಿ ಸಿಕ್ತಮ್ಮಾ ನಿನಗೆ ?
ನಿನ್ನ ಜರ್ಕಿನ್ ಜೇಬಿನಲ್ಲಿ.
ಅದು ಅಲ್ಲಿ ಹೇಗೆ ಬಂತು ?
ಅದನ್ನೇ ನಾನು ನಿನ್ನನ್ನು ಕೇಳ್ತಾ ಇರೋದು ?
ನಾನು ನಿಜವಾಗಲೂ ಸೇದಲ್ಲಾ ಮಮ್ಮಿ. ನಿನ್ನಾಣೆ
ಥೂ ಅಯೋಗ್ಯ. ನನ್ನ ಪ್ರಾಣ ಯಾಕೆ ತೆಗಿತೀಯಾ.
ನಿಜವಾಗಲೂ ಮಮ್ಮಿ.
ಮತ್ತೆ ರಾತ್ರಿ ನಿನ್ನ ಬಾಯಿಂದ ಹೆಣ ಸುಟ್ಟ ವಾಸನೆ ಬರ್ತಾ ಇತ್ತು? ಹೌದಾ, ಅಲ್ವಾ
( ಥೂ ನಮ್ಮಮ್ಮನಿಗೆ ರಸಿಕತೆ ಅನ್ನೋದೇ ಇಲ್ಲಾ. ಅಂಥಾ ಬ್ಲೆಂಡೆಡ್ ಫ್ಲೇವರ್ ನ್ನು ಯಾವುದಕ್ಕೆ ಹೋಲಿಸ್ತಾ ಇದಾರೆ? ITC ಕಂಪನಿಯವರು ಕೇಳಿಸಿಕೊಂಡಿದ್ರೆ ನೇಣು ಹಾಕಿಕೊಂಡಿರೋರು)
ಮಮ್ಮಿ ಅದು.............
ನಿಜ ಬೊಗಳೊ. ಸೇದುತ್ಯಾ ಇಲ್ವಾ.
(ರೆಡ್ ಹ್ಯಾಂಡಾಗಿ ಸೀಸಾದ ಮೇಲೆ ಯಾವ ಲಾಯರ್ ಏನು ಮಾಡ್ತಾನೆ. ಇನ್ನೂ ಮುಚ್ಚಿಟ್ಟರೆ , ನಮ್ಮಮ್ಮನ ಪ್ರೆಷರ್ ಏರುತ್ತಾ ಹೋಗತ್ತೆ. ಪೂರ್ತಿ ಮುಳುಗಿದವನಿಗೆ ಚಳಿಯೇನು? ಮಳೆಯೇನು? so ಸರೆಂಡರ್ ಆದರೆ ಶಿಕ್ಷೆ ಕಡಿಮೆ ಆಗಬಹುದು)
ಅದು ಹುಡುಗ್ರೆಲ್ಲಾ ಬಲವಂತ ಮಾಡಿದ್ರು. ಅದಕ್ಕೆ................ಒಂದೇ ಒಂದು...............
(ಈ ಬಾರಿ ಬಾಂಬು ಸ್ಪೋಟವಾಯಿತು.)
ಮಕ್ಕಳಿಗೆ ತಾಯಿ ಇರಬಾರ್ದಂತೆ. ಹಸುಗೆ ಕರು ಇರಬಾರ್ದಂತೆ.ನಾನು ಸತ್ತಿದ್ರೆ ನಿಮಗೆ ಬುದ್ದಿ ಬಂದಿರೋದು. ಇಷ್ಟು ಚಿಕ್ಕ ವಯಸ್ಸಿಗೆ ಇಂಥಾ ಮನೆಹಾಳ ಅಭ್ಯಾಸಗಳು. ಅದ್ಯಾವ ದರಿದ್ರ ಫ್ರೆಂಡ್ಸೋ ಇದನ್ನೆಲ್ಲಾ ಕಲಿಸೋರು. ಸಿಗರೇಟು ಪ್ಯಾಕಿನ ಮೇಲೆ ನೋಡಿಲ್ವಾ. ಆರೋಗ್ಯಕ್ಕೆ ಹಾನಿಕರ ಅಂತ ಹಾಕಿರ್ತಾರೆ?
ಅದಕ್ಕೆ ಅಮ್ಮಾ ನಾನು ಪ್ಯಾಕೇ ತಗಳಲ್ಲ. ಒಂದೊಂದೇ...........
ಥೂ. ನನ್ನ ಹತ್ರ ಇಂಥಾ ತಮಾಷೆ ಎಲ್ಲಾ ಮಾಡ್ಬೇಡಾ. ಏನೋ ಬರುತ್ತೆ ಸಿಗರೇಟು ಸೇದಿದ್ರೆ?
ಹೊಗೆ
ಹೊಗೆ ಹಾಕಿಸ್ಕೊತಿಯಾ, ಮನೆ ಮುಂದೆ. ನಿಮ್ಮಾವ, ಚಿಕ್ಕಪ್ಪಾ ಎಲ್ಲಾ ನೋಡು ಎಂಥಾ ಸಭ್ಯಸ್ತರು. ಅವರನ್ನಾರೂ ನೋಡಿ ಕಲೀಬಾರ್ದ. ಎಲ್ಲಿಂದ ಬಂತೋ ನಿನಗೆ ಈ ದರಿದ್ರ ಅಭ್ಯಾಸ.
ಅದು ರಕ್ತದಲ್ಲಿ ಬಂದಿರೋದಮ್ಮಾ.
( ನಮ್ಮಮ್ಮನ ಉರಿನೋಟ ಅಲ್ಲೇ ಪೇಪರ್ನಲ್ಲಿ ಮುಖ ಹುದುಗಿಸಿ ಕೂತಿದ್ದ ನಮ್ಮಪ್ಪನ ಮೇಲೆ ಬಿತ್ತು.ಇಷ್ಟು ಹೊತ್ತು ನಮ್ಮಪ್ಪ. ಮೂಕ ಪ್ರೇಕ್ಷಕರಾಗಿ ಒಳಗೊಳಗೇ ನಗುತ್ತಾ ಈ ಪ್ರಹಸನವನ್ನು ವೀಕ್ಷಿಸುತ್ತಿದ್ದರು. ಈ ಆಕಸ್ಮಿಕ ಬೆಳವಣಿಗೆ ನೋಡಿ ಒಮ್ಮೆಗೇ ಬೆವೆತು ಹೋದರು. ನನ್ನಮೇಲೆ ಒಂದು ಕ್ರೂರ ನೋಟ ಬೀರಿ. ಅಲ್ಲಿಂದ ಸಭಾತ್ಯಾಗ ಮಾಡಿಬಿಟ್ಟರು )
 ಆ ಸುಬ್ಬು , ಆನಂದ ಈ ಸತಿ  ಮನೆಗೆ ಬರಲಿ ಹಲ್ಲು ಕಿರ್ಕೊಂಡು ಆಂಟೀ ಅಂತಾ.
ಮಮ್ಮಿ ಅವರಿಗೇನೂ ಹೇಳ್ಬೇಡಾ. ಅವರೇನೂ ನನಗೆ ಕಲಿಸಲಿಲ್ಲ.
ಮತ್ತೆ
ನಾನೆ ಅವರಿಗೆ. ಇಲ್ಲ ಇಲ್ಲ ಆ ವಿಷಯ ಬಿಡಮ್ಮಾ. ಇನ್ಮೇಲಿಂದಾ ಸೇದಲ್ಲಾ.
ಹೋದ ಸತಿ ಪಕ್ಕದ್ಮನೆ ಶಾರದಾಂಟಿ ನೀನು ಸಿಗರೇಟು ಸೇದೊದು ನೋಡಿ ನಾನು ಬೈದಾಗಲೂ ಹೀಗೆ ಹೇಳಿದ್ದೆ.
ಈ ಸತಿ ನಿಜವಾಗಲೂ ಬಿಡ್ತೀನಿ ಮಮ್ಮಿ.
ಹೌದು. ಜೀವಮಾನ ಎಲ್ಲಾ ಗಂಡಂಗೆ ಬುದ್ದಿ ಹೇಳಿದ್ದಾಯ್ತು. ಈಗ ಮಗನಿಗೆ. ಇಂಥಾ ಜೀವನ ನನ್ನ ಶತ್ರೂಗೂ ಬೇಡಾ. ಅದೇನೂಂತ ಇಂಥ ಗಂಡಾ ಮಕ್ಕಳ್ನಾ ಕಟ್ಕೊಂಡು ಹೆಣಗೋದಕ್ಕಿಂತ. ಆ ಭಗವಂತಾ ನನ್ನ ಕರಿಸ್ಕೊಂಡು ಬಿಟ್ಟಿದ್ರೆ ಚೆನ್ನಾಗಿರೋದು.
( ಈ ರೀತಿಯ ವಾಕ್ಪ್ರಹಾರ ಸುಮಾರು ಒಂದುವರೆ ಘಂಟೆಯ ನಂತರ ಮುಕ್ತಾಯ ವಾಯಿತು . ನನಗೆ ಮೂರ್ಛೆ ಬರುವ ಹಾಗಾಗಿತ್ತು)
             ೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦
(ಅದಾಗಿ ಸುಮಾರು ಒಂದು ತಿಂಗಳಾದ ಮೇಲೆ ಬೈಕ್ ಓಡಿಸುವಾಗ ಅಪಘಾತವಾಗಿ ಕಾಲಿಗೆ ಏಟಾಯಿತು. ಲಿಗಮೆಂಟ್ ಫಾಕ್ಚರ್ ಅಂತಾ ಡಾಕ್ಟರ್ ನಾಮಕರಣ ಮಾಡಿ ಹದಿನೈದು ದಿನ ಬೆಡ್ ರೆಸ್ಟ್ ಮಾಡುವಂತೆ ಸೂಚಿಸಿದರು. ಮೊದಲ ದಿನ ಹೇಗೋ ಕಳೆದು ಹೋಯ್ತು. ಮಾರನೇ ದಿನ ಸಾಧ್ಯವೇ ಇಲ್ಲದೇ ನಿಧಾನವಾಗಿ ಕುಂಟುತ್ತಾ ಎದ್ದು ನಡೆದು ಕೊಂಡು, ಪಕ್ಕದ ರೋಡಿನಲ್ಲಿದ್ದ ಅಂಗಡಿಗೆ ಹೋಗಿ ಅಗ್ನಿಕಾರ್ಯ ಮುಗಿಸಿಕೊಂಡು ಬಂದೆ)
ರಾತ್ರಿ ಮಲಗುವಾಗ ನಮ್ಮಪ್ಪ ರೂಮಿಗೆ ಬಂದರು
ಹ್ಯಾಗಿದಿಯಪ್ಪಾ ಕಾಲು?
ಪರ್ವಾಗಿಲ್ಲಪ್ಪ. ನೋವು ಸ್ವಲ್ಪ ಕಡಿಮೆ ಆಗಿದೆ. ನಡೆಯೋಕೆ ಕಷ್ಟಾ.
ಮತ್ತೆ ನಿಮ್ಮಮ್ಮ ಹೇಳ್ತಾ ಇದ್ಲು ಮಧ್ಯಾಹ್ನ ಅದೇಲ್ಲೋ ನಡಕೊಂಡೇ ಹೋಗಿದ್ಯಂತೆ?
ಇಲ್ವಲ್ಲಾ?
ಮುಚ್ಚೋ ಬಾಯಿ. ಸುೞು ಬೊಗಳಬೇಡಾ
ಓಹ್ ಅದಾ. ಸುಮ್ನೆ ಕೂತು ಕೂತು ಬೇಜಾರಾಯ್ತು. ಅದಕ್ಕೇ ಒಂದು ವಾಕ್ ಹೋಗಿ ಬಂದೇ.
ಮತ್ತೆ ನಡದ್ರೇ ನೋವಾಗತ್ತೇ ಅಂದೇ?
ಅದು......................
ಮುಟ್ಟಾಳ.ತಗೋ ಅಂತಾ ಜೇಬಿಂದ ಒಂದು ಪ್ಯಾಕ್ GOLD FLAKE LIGHTS ತೆಗೆದು ಕೊಟ್ಟರು.
ಅದೇನು ಹಾಳಾಗ್ತಿಯೋ, ನನ್ನ ಕಣ್ಣ ಮುಂದೇನೇ ಹಾಳಾಗು. ನಿಮ್ಮಮ್ಮಂಗೆ ಹೇಳ್ಬೇಡಾ. ಇಬ್ರದೂ ಗ್ರಹಚಾರ ಬಿಡಿಸ್ತಾಳೆ ಆಮೇಲೆ. ಮೇಲೇ ಟೆರೇಸ್ ಗೆ ಹೋಗಿ...........ಅಯ್ತಾ. ಸುಮ್ನೇ ಅಲ್ಲಿ ಇಲ್ಲಿ ಓಡಾಡಿ ನೋವು ಮಾಡ್ಕೋಬೇಡಾ.
ಸಂಕೋಚದಿಂದ ನನ್ನ ಮನಸ್ಸು ಮುದುಡಿಹೋಗಿತ್ತು. ಹೂ ಅಂದೆ
ಅಡಿಗೆ ಮನೆಯಿಂದ ನಮ್ಮಮ್ಮನ ಹಾಡು ಕೇಳಿಸುತ್ತಿತ್ತು.
"ಕಂದಾ ಬೇಡವೋ ಮಣ್ಣು ತಿನ್ನಬೇಡ
ಕಂದಾ ಬೇಡವೋ ಮಣ್ಣು ತಿನ್ನಬೇಡಾ"
 
 
 
 
 
 

ಲೇಖಕರು

ಬಾಲ ಚಂದ್ರ

ಹೊಳೆ ದಂಡೆ

ನನ್ನ ಲೇಖನಗಳನ್ನು ಓದಿ
ನನ್ನ ಬಗ್ಗೆ ನಿಮಗೇ ತಿಳಿಯುತ್ತೆ.

ಅನಿಸಿಕೆಗಳು

Bharath.K ಸೋಮ, 02/22/2010 - 14:27

ಬಾಲ ಚಂದ್ರರೆ ಇದು ಸ್ವಂತ ಅನುಭವನ ??? ಅಥವಾ ಯಾವುದೂ ಕಥೆನ ??? Innocent ಎಕೆಂದರೆ ನೀವು ಬರೆದಿರುವ ರೀತಿ ಚೆನ್ನಾಗಿದೆ ಮತ್ತು ಎಲ್ಲ ಕಣ್ಣ ಮುಂದೆನೇ ನಡೆದಂತಿತ್ತು... Smile
- cigarette smoking is injurious to health

ಗುಡುಗು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 02/22/2010 - 17:17

ಹೊಹ್ಹೋ! ಸಿಗರೇಟ್ ಸೇದುವ ನಮ್ಮಂಥವರಿಗೆಲ್ಲಾ ದಾರಿ ದೀಪ, ಆಶಾ ಕಿರಣ. ಒದೆ ತಿನ್ನುವದನ್ನ ತಪ್ಪಿಸಿಕೊಳ್ಳಲು ಸೂಕ್ತ ಟಿಪ್ಸ್... ಚೆನ್ನಾಗಿದೆ. ಚೆನ್ನಾಗಿದೆ...

ಸುಪ್ತವರ್ಣ ಗುರು, 02/25/2010 - 10:52

ಚೆನ್ನಾಗಿದೆ! ಮಣ್ಣು ತಿನ್ನೋದು ಬಿಟ್ರೋ ಇಲ್ವೋ ಗೊತ್ತಾಗ್ಲಿಲ್ಲ!

ಶಿವಕುಮಾರ ಕೆ. ಎಸ್. ಗುರು, 02/25/2010 - 18:38

Goood! ಚೆನ್ನಾಗಿ ಬರ್ದಿದೀಯ ಬಾಲು! ಅಮ್ಮಂದಿರೆಲ್ಲ ಒಂದೇ ಥರಾ. ತಪ್ಪು ಯಾರು ಮಾಡಿದರೂ ಶಿಕ್ಷೆಯೆಲ್ಲ ನಮಗೇ ಆಗಲಿ ದೇವರೇ ಅಂದು ಕೊೞುವವರು. ಏನಾಯ್ತು, ಕಾಲು ಹುಶಾರಾಯ್ತಾ? ಜೋಪಾನಾ ಗುರು, 'ಧೂಮಪಾನ ಆರೋಗ್ಯಕ್ಕೆ ಹಾನಿಕರ'

manjusringeri (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/03/2010 - 21:22

mooru bittonu orige doddonu anodu edakena? any way chanagitu.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 03/28/2010 - 16:07

ಇದೆಂತಾ ಬರೀತೀರಿ ರೀ.... ನಿಜವಾಗ್ಲೂ .......................
"ಕಂದಾ ಬೇಡವೋ..........."
ULTIMATE !!!!!!!!!!!!!!

ಶಿವ ಶುಕ್ರ, 04/09/2010 - 20:30

ಏನಾದ್ರು ಸರಿ ದಮ್ ಬಿಡೋದು ಬಹಳ ಕಷ್ಟ ಗುರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.