Skip to main content

"ಯಾರಿಗೋಸ್ಕರ ಸಿನಿಮಾ ಮಾಡಲಿ, ಅಭಿಮಾನಿಗಳೇ ನನ್ನ ಸಿನಿಮಾ ನೋಡ್ತಿಲ್ಲ" .

ಬರೆದಿದ್ದುJanuary 5, 2010
6ಅನಿಸಿಕೆಗಳು

ವಿಸ್ಮಯ ನಗರಿಯ ಓದುಗರಲ್ಲಿ ಒಂದು ಮನವಿ. 1988 ರಿಂದ ನಾನು ಡಾ.ವಿಷ್ಣುವಿನ ಬಹುದೊಡ್ಡ ಅಭಿಮಾನಿ. ಈಗೇನಾದರೂ ಅವರ ಬಗ್ಗೆ ಲೇಖನ ಬರೆದರೆ ಅದು ಮುಖವಾಣಿ ಆಗಿಬಿಡುವ ಸಂಭವವೇ ಜಾಸ್ತಿ. ಈ ಕಾರಣದಿಂದಲೇ ಅವರ ಬಗ್ಗೆ ನನಗೇನನಿಸುತ್ತೆ ಅನ್ನುವುದಕ್ಕಿಂತ ಮುಖ್ಯವಾಗಿ ನಿಜ ಅರ್ಥದಲ್ಲಿ ವಿಷ್ಣು ಏನಾಗಿದ್ದರು ಎಂಬುದನ್ನು ತಿಳಿಸಲು ಹೊರಟಿದ್ದೇನೆ. ಅವರ ಮತ್ತು ನನ್ನ ಮೊದಲ ಬೇಟಿ, ಅವರೊಂದಿಗೆ ನನ್ನ ಮಾತುಕತೆ, ವಿಷ್ಣು ಸೇನಾ ಸಮಿತಿಯಲ್ಲಿರುವ ನನ್ನ ಇನ್ನಿತರ ಸ್ನೇಹಿತರೊಂದಿಗೆ ಅವರಾಡಿದ್ದ ಅಂತರಾತ್ಮದ ಮಾತುಗಳು ಇವೇ ಮೊದಲಾದಂತಹ ಕೆಲವು ವಿಷಯಗಳನ್ನು ನಾನು ಇಲ್ಲಿ ದಾಖಲಿಸ ಹೊರಟಿದ್ದೇನೆ. ಜನನಾಯಕ ಸಿನಿಮಾ ನೋಡಿದಾಗಿನಿಂದ ನಾನು ಅವರ ಅಪ್ಟಟ ಅಭಿಮಾನಿ. ಜಗತ್ತಿನಲ್ಲಿ ಮತ್ತ್ಯಾರನ್ನು ಆ ಮಟ್ಟದಲ್ಲಿ ಪ್ರೀತಿಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನಾನು ಅವರನ್ನು ಪ್ರೀತಿಸುತ್ತಿದ್ದೆ.
ಯಾವುದೇ ಪುಸ್ತಕದಲ್ಲಿ, ಯಾವುದೇ ದಿನಪತ್ರಿಕೆಯಲ್ಲಿ ಅವರ ಹೆಸರು ಯಾವ ಮೂಲೆಯಲ್ಲಿದ್ದರೂ ನನ್ನ ಕಣ್ಣುಗಳು ಕ್ಷಣಮಾತ್ರದಲ್ಲಿ ಗುರುತಿಸಿಬಿಡುತ್ತಿದ್ದವು. ಪ್ರಾರಂಭದಲ್ಲಿ " ಒಂದು ಸಾರಿ ವಿಷ್ಣುವನ್ನು ನೋಡಿ, ಅವರ ಪಕ್ಕ ಕೂತು ಮಾತನಾಡುವುದೇ ನನ್ನ ಜೀವಮಾನದ ಗುರಿ" ಅಂದ್ಕೋತಿದ್ದ ನಾನು, ಒಮ್ಮೆ ಮಾತನಾಡಿಯಾದ ಮೇಲೆ " ಇನೈದು ವರ್ಷದಲ್ಲಿ ವಿಷ್ಣು ಅವರ ನಾಯಕತ್ವದಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡಬೇಕು ಅಂತ ದೃಡ ನಿರ್ಧಾರ ಕೈಗೊಂಡಿದ್ದೆ ಅದಕ್ಕಾಗಿ ತುಂಬಾ ಕಷ್ಟಪಟ್ಟು ದುಡೀತಿದ್ದೆ. ಆದರೆ ಈಗ ಎಲ್ಲವೂ ಶೂನ್ಯ.. . . !!
ಒಮ್ಮೆ ವಿಷ್ಣು ನಮ್ಮ ಕಛೇರಿಯ ರಾಜ್ಯೋತ್ಸವ ಸಮಾರಂಭಕ್ಕೆ ಬಂದಿದ್ದರು. ಅಂದು ನಾನು ಅವರ ಬಗ್ಗೆ ಭಾಷಣ ಮಾಡಿದ್ದೆ. ಅದೇ ನನ್ನ ಮತ್ತು ಅವರ ಮೊದಲ ಬೇಟಿ. ಆ ಭಾಷಣದ ಸಂದರ್ಭದಲ್ಲಿ " ಆ ಕಾಲಕ್ಕೆ ಸುಪ್ರಬಾತ ಸಿನಿಮಾ ವಿವಿಧ ವಿಭಾಗಗಳಲ್ಲಿ ಒಟ್ಟು 5 ಪ್ರಶಸ್ತಿಗಳನ್ನು ಪಡೆದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆ ನಿರ್ಮಿಸಿತ್ತು" ಎಂದಾಗ ವಿಷ್ಣು ನನ್ನ ನೋಡಿ ಕಣ್ಣುಹೊಡೆದಿದ್ದರು ಆಗ ಇಡೀ ಸಭೆಯೇ ಚಪ್ಫಾಳೆ ತಟ್ಟಿ ಆನಂದ ವ್ಯಕ್ತಪಡಿಸಿತ್ತು. ಆ ಕ್ಷಣವನ್ನು, ಆ ಕಣ್ಣನ್ನು ಬಹುಶಃ ನನ್ನ ಈ ಜನ್ಮದಲಿ ಮರೆಯಲಾರೆ. ಆ ಸಭೆಯ ಸಲುಗೆ ಪಡೆದು ಅದೊಮ್ಮೆ ವಿಷ್ಣು ಮತ್ತು ಕೊಬ್ರಿ ಮಂಜುರವರನ್ನು ನನ್ನ ಸ್ನೇಹಿತರೊಂದಿಗೆ ಬೇಟಿಯಾಗಿದ್ದೆ. ಆ ಸಂದರ್ಭದಲ್ಲಿ ನಾನು ಕನ್ನಡದ ಬಗ್ಗೆ ಒಂದೆರೆಡು ಪ್ರಶ್ನೆಗಳನ್ನು ಕೇಳಿದ್ದೆ ಅದಕ್ಕೆ ಅವರು ಸುಮಾರು 5 ನಿಮಿಷಗಳ ಕಾಲ ನನ್ನ ಕಣ್ಣಲ್ಲಿ ಕಣ್ಣಿಟ್ಟು ಅದೆಷ್ಟು ಸೊಗಸಾಗಿ ಕನ್ನಡದ ಬಗ್ಗೆ ಮಾತನಾಡಿದರು ಎಂದರೆ ನನ್ನಿಂದ ನಂಬೋಕೆ ಆಗಲಿಲ್ಲ ನಮ್ಮ ಸಿಂಹ ಇಷ್ಟೊಂದು ಸರಳನಾ ಅಂತ. ನನ್ನಂತ ಒಬ್ಬ ಸಾಮಾನ್ಯ ಅಭಿಮಾನಿ ಜೊತೆ ಅಷ್ಟೊಂದು ಸರಳವಾಗಿ ಬೆರೆಯುವ ಮನಸ್ಸು ಬೇರೆ ಯಾರಿಗೆ ತಾನೆ ಇರಲು ಸಾಧ್ಯ ಅನಿಸಿತ್ತು. ಒಬ್ಬ ಮಹಾನ್ ಸ್ಟಾರ್ ಹೀಗೂ ಇರ್ತಾರ ಅಂತ ನನ್ನ ಸ್ನೇಹಿತರೆಲ್ಲ ಆಶ್ಚರ್ಯಗೊಂಡಿದ್ದರು.
ಇಡೀ ಕನ್ನಡನಾಡೇ ಭಾವಿಸಿತ್ತು ಕನ್ನಡ ಕಲಾಪ್ರಪಂಚಕ್ಕೆ ಎರಡು ಕಣ್ಣು ಒಂದು ಡಾ.ರಾಜ್ ಆದರೆ ಮತ್ತೊಂದು ಡಾ.ವಿಷ್ಣು ಅಂತ. ಆದರೆ ನೀವು ಬದುಕಿದ್ದಷ್ಟು ದಿನವೂ ಆ ರೀತಿ ಭಾವಿಸಲೇ ಇಲ್ಲ. " ಡಾ.ರಾಜ್ ಒಂದು ಶಿಖರವಾದರೆ ಅವರ ಮುಂದೆ ನಾನೊಂದು ಸಣ್ಣ ಗುಡ್ಡ" ಎನ್ನುತಲೇ ಇದ್ದುಬಿಟ್ಟಿರಿ. ಈ ನಿಮ್ಮ ಮಾತು ವಿರೋದಿ ಗುಂಪಿಗೆ ಅರ್ಥವಾಗಲೇ ಇಲ್ಲ. . ನಿಮ್ಮ ತಂದೆಯವರ ಶವದ ಮೇಲೆ ಕಲ್ಲು ಹಾಕಿ ನಿಮಗೆ ತಂದೆಯವರ ದರ್ಶನ ಭಾಗ್ಯ ಕೊಡದವರನ್ನು ಕ್ಷಮಿಸಿದಿರಿ, ನಿಮ್ಮದಲ್ಲದ ತಪ್ಪಿಗೆ ಕಲ್ಯಾಣಮಂಟಪದ ಹಿಂಬಾಗಿಲಿನಿಂದ ಓಡಿಹೋಗುವಂತೆ ಮಾಡಿದವರನ್ನು ಮತ್ತೆ ಕ್ಷಮಿಸಿದಿರಿ "ಹೊಡೆಯುವವನು ಗ್ರೇಟ್ ಅಲ್ಲ ಪದೇ ಪದೆ ಹೊಡೆಸಿಕೊಂಡು ಎದ್ದು ನಿಲ್ತಾನಲ್ವ ಅವನು ಗ್ರೇಟ್" ಅಂತ ಹೇಳಿ ನಿಮಗಾದ ನೋವನ್ನು ಮರೆಯಲು ಪ್ರಯತ್ನಸಿದಿರಿ ಆ ಮೂಲಕ ಸ್ವಾಮಿ ವಿವೇಕಾನಂದ, ಬುಧ್ಧರಂತಹವರ ಪುಸ್ತಕಗಳಲ್ಲಿ ಕೇಳಿದ್ದಂತಹ ಕ್ಷಮಾಗುಣದ ಮಾತುಗಳನ್ನು ತಾವು ಅಳವಡಿಸಿಕೊಂಡು ನಿಮ್ಮ ಅಭಿಮಾನಿಗಳು ಮಾತ್ರವಲ್ಲ ಇಡೀ ನಾಡಿನ ಜನರ ದೃಷ್ಟಿಯಲ್ಲಿ ಚಿತ್ರಜೀವನ ಮತ್ತು ನಿಜಜೀವನ ಎರಡರಲ್ಲೂ ಕೋಟಿಗೊಬ್ಬ ಅಂತ ಸಾಭೀತುಪಡಿಸಿಬಿಟ್ಟಿರಿ.
ಹಾಸನದ ವಿಷ್ಣು ಸೇನಾ ಸಮಿತಿಯಲ್ಲಿ ನನ್ನ ಸ್ನೇಹಿತರೊಬ್ಬರಿದ್ದಾರೆ. ಅವರೊಮ್ಮೆ ಕೇಳಿದರಂತೆ ಅಣ್ಣಾ.. ಇತ್ತೀಚೆಗೆ ನಿಮ್ಮ ಸಿನಿಮಾಗಳ ಮದ್ಯೆ ಅಂತರ ಜಾಸ್ತಿ ಆಗ್ತಿದೆ ಅಂತ. ಅದಕ್ಕೆ ವಿಷ್ಣು ನೊಂದು ನುಡಿದಿದ್ದರಂತೆ. " ಯಾರಿಗೋಸ್ಕರ ಸಿನಿಮಾ ಮಾಡಲಿ, ಅಭಿಮಾನಿಗಳೇ ನನ್ನ ಸಿನಿಮಾ ನೋಡ್ತಿಲ್ಲ" ಅಂತ. ಅಣ್ಣಾ .. ಅದ್ಯಾವ ಅಯೋಗ್ಯ ನಿಮ್ಮ ಮನಸ್ಸಿನಲ್ಲಿ ಅಂತಹದೊಂದು ಭಾವನೆ ಮೂಡಲು ಕಾರಣನಾದನೋ ಗೊತ್ತಿಲ್ಲ. ನೀವೊಮ್ಮೆ ಮೊನ್ನೆ ಕಣ್ತೆರೆಯಬೇಕಾಗಿತ್ತು, ಸುಮಾರು 18 ಕಿಮಿ ಗಳ ಉದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲಿ ಕಂದಮ್ಮಗಳಿಂದ ಹಿಡಿದು ಮುದುಕರವರೆಗೆ ನಿಂತಿದ್ದರಲ್ಲ ಜನ ಅವರನ್ನು ನೀವೊಮ್ಮೆ ನೋಡಬೇಕಿತ್ತು..? ನಮ್ಮ ಅಣ್ಣಾ ಬರುವ ರಸ್ತೆ ಸ್ವಚ್ಚವಾಗಿರಬೇಕು ಅಂತ ನೀವು ಮೆರವಣಿಗೆ ಹೊರಟ ರಸ್ತೆಗಳನ್ನೆಲ್ಲ ಅಭಿಮಾನಿಗಳು ತೊಳೆದು ಶುಭ್ರಗೊಳಿಸುತ್ತಿದ್ದ ದೃಶ್ಯವನ್ನು ನೀವೇನಾದರೂ ನೋಡಿದಿದ್ದರೆ ಬಹುಶಃ ಇನ್ನು 100 ಸಿನಿಮಾಗಳಲ್ಲಿ ಅಭಿನಯಿಸುವ ಹುಮ್ಮಸ್ಸು ನಿಮಗೆ ಬರುತ್ತಿತ್ತೇನೋ. ಹಾಗೇ, ಆಗ ನಿಮಗೆ ಗೊತ್ತಾಗುತ್ತಿತ್ತು ನೀವು ಕಳೆದುಕೊಂಡದ್ದೇನು ಅಂತ. ಅಣ್ಣಾ ನಿಮ್ಮ ಜೊತೆ ಇದ್ದವರೆಲ್ಲಾ ನಿಮ್ಮನ್ನು ಬೆಳೆಸುವವರಾಗಿರಲಿಲ್ಲ ಅವರೆಲ್ಲ ನಿಮ್ಮನ್ನು ಅವಲಂಬಿಸಿದವರಾಗಿದ್ದರು. ಅದರಿಂದಾಗಿಯೇ ನೀವು ನಿಮ್ಮ ಅಭಿಮಾನಿಗಳ ನಿರೀಕ್ಷೆಯ ಮಟ್ಟಕ್ಕೆ ಏರಲಾರದೆ ಹೋದಿರಿ.
ವಿಷ್ಣು ಸೇನಾ ಸಮಿತಿ ಇದ್ದರೂ ಅದು ಯಾವತ್ತೂ ಗರ್ಜಿಸಲೇ ಇಲ್ಲ. ಅದರ ಫಲವಾಗಿಯೇ ಸಾರಾ(ಯಿ) ಗೋವಿಂದು ತರದ ಅವಕಾಶವಾದಿಗಳು ಕೂಡ ನಿಮ್ಮ ಬಗ್ಗೆ ಮಾತನಾಡಿ ಅರಗಿಸಿಕೊಳ್ಳುವಂತಾದುದು. ಸಣ್ಣಪುಟ್ಟ ವಿಷಯಗಳಿಗೆಲ್ಲ ನಿಮ್ಮ ಪ್ರತಿಕೃತಿ ದಹನ ಮಾಡುತ್ತಿದ್ದರೆ ಕೇಳುವವರೇ ಇರಲಿಲ್ಲ ಅಣ್ಣ. ಕನ್ನಡನಾಡಿನಲ್ಲೇ ನೀವು ಪರಕೀಯರಂತೆ ಬದುಕಬೇಕಾದ ಅನಿವಾರ್ಯತೆ ಸೃಷ್ಠಿ ಮಾಡಿಕೊಂಡುಬಿಟ್ಟಿರಿ. ಆಗೆಲ್ಲ ತೆರೆಮರೆಯಲ್ಲಿದ್ದಂತಹ ನನ್ನಂತಹ ಲಕ್ಷಾಂತರ ಅಭಿಮಾನಿಗಳಿಗೆ ಎಷ್ಟು ದುಃಖವಾಗಿತ್ತು ಗೊತ್ತಾ..? ನಮ್ಮ ಸಾಮಾರ್ಥ್ಯದ ಬಗ್ಗೆ ಬೇರೆಯವರಿಗೆ ತಿಳೀದಿದ್ದರೆ ಅದು ನಮ್ಮ ತಪ್ಪಲ್ಲ ಆದರೆ ನಮ್ಮ ಸಾಮರ್ಥ್ಯದ ಬಗ್ಗೆ ನಮಗೇ ತಿಳಿಯದಿದ್ದರೆ ಅದು ಖಂಡಿತ ನಮ್ಮದೇ ತಪ್ಪು. ಇಂತಹದೊಂದು ತಪ್ಪು ನಿಮ್ಮಿಂದಾಗಬಾರದಿತ್ತು. ಅನ್ನುವದೊಂದನ್ನು ಬಿಟ್ಟರೆ ಖಂಡಿತವಾಗಿಯೂ ನೀವು ಬದುಕಿದ ರೀತಿ, ನಿಮ್ಮ ಆದರ್ಶಗಳು, ಸಹನೆ, ಶಾಂತಿ ಬರೀ ಅಭಿಮಾನಿಗಳು ಮಾತ್ರವಲ್ಲ ಇಡೀ ಕನ್ನಡನಾಡಿಗೆ ಕಳಶಪ್ರಾಯ. ಜನ ನಿಮ್ಮ ಬಗ್ಗೆ ಏನ್ ಮಾತಾಡಿಕೊಳ್ತಾರೆ ಗೊತ್ತಾ ಅಣ್ಣಾ..!!
 
 ನೀವೊಬ್ಬರು ದೇವಮಾನವರಂತೆ. ಯಾರಿಗೂ ಯಾವತ್ತಿಗೂ ಕೇಡುಬಗೆದರಲ್ಲವಂತೆ, ಕೇಡುಬಗೆದವರನ್ನೂ ಕ್ಷಮಿಸಿದಂತಹ ಮಹಾನುಭಾವರಂತೆ. ಸರಳತೆಗೆ ಡಾ.ರಾಜ್ ಆದರೆ ಸಹನೆ ಮತ್ತು ಶಾಂತಿಗೆ ಡಾ.ವಿಷ್ಣು ಅಂತ ಇಡೀ ನಾಡೇ ನಿಮ್ಮನ್ನು ಕೊಂಡಾಡುತ್ತಿದೆ. ನಮಗೆ ಯಾರ್ಯಾರೋ ಸತ್ತಾಗಲೂ ಇಷ್ಟು ನೋವಾಗಲಿಲ್ಲ ಆದರೆ ವಿಷ್ಣು ಸತ್ತಾಗ ನಿಜಕ್ಕೂ ಅತ್ತುಬಿಟ್ಟಿದ್ದೆ ಅಂತ ಒಬ್ಬ ವಿಷ್ಣುವನ್ನು ವಿರೋಧಿಸುತ್ತಿದ್ದವ ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ ಅಣ್ಣ. ನೀವು ಸಂತನಂತೆ ಬದುಕಿ ಎಂತಹ ತಪ್ಪು ಮಾಡಿಬಿಟ್ಟಿರಿ ಅಂತ ನೀವು ಬದುಕಿದ್ದಾಗ ನನಗನ್ನಿಸುತ್ತಿತ್ತು ಆದರೆ ಈಗ ಡಾ.ವಿಷ್ಣು ಅಭಿಮಾನಿ ಅಂತ ಹೇಳಿಕೊಳ್ಳೋಕೆ ಎಷ್ಟೊಂದು ಹೆಮ್ಮೆ ಅನ್ನಿಸ್ತಿದೆ ಅಂದರೆ ಅದನ್ನು ಪದಗಳಲ್ಲಿ ವರ್ಣಿಸೋಕೆ ಅಸಾಧ್ಯ. ನೀವು ನಮ್ಮನ್ನು ಬಿಟ್ಟುಹೋದಿರಿ ಅಂತ ಬೆಳಗಿನ ಜಾವ 4 ಘಂಟೆಗೆ ಗೊತ್ತಾದಾಗ ನಾನು ಅದೆಷ್ಟು ಅತ್ತಿದ್ದೆ ಗೊತ್ತಾ. ಬೆಳಿಗ್ಗೆ 5.30 ಕ್ಕೆ ನಿಮ್ಮ ಮನೆಗೆ ಬಂದು ಅಲ್ಲಿಂದ ಬಸವನಗುಡಿ ಮೈದಾನಕ್ಕೆ, ಅಲ್ಲಿಂದ ಅಭಿಮಾನ್ ಸ್ಟುಡಿಯೋಗೆ ಹೋಗಿ ನಿಮ್ಮ ಚಿತೆ ಆರುವ ತನಕ ಅಲ್ಲೇ ಕುಳಿತು ಮನೆಗೆ ಬರುವಷ್ಟರಲ್ಲಿ ರಾತ್ರಿ 11 ಘಂಟೆ. ಅದಾಗಲೇ ವಿಪರೀತ ಜ್ವರದಿಂದ ನಾನು ಸುಸ್ತಾಗಿಹೋಗಿದ್ದೆ. 2ದಿನ ಊಟ ಮಾಡಲೂ ಆಗಲಿಲ್ಲ. ಆದರೆ ಯಾವಾಗ ಸಕರ್ಾರ ನಿಮ್ಮ ವಿಷಯದಲ್ಲಿ ತೀರಾ ಮುತುವರ್ಜಿವಹಿಸಿತೋ ಒಂದೇ ದಿನದಲ್ಲಿ ಭೂಮಿಯನ್ನು ಹಸ್ತಾಂತರ ಮಾಡಿತೋ, ವಿಷ್ಣು ಹೆಸರಲ್ಲಿ ಪ್ರವಾಸಿ ತಾಣ, ಫಿಲ್ಮ್ ಸಿಟಿ, ಮಾಡ್ತೀವಿ ಅಂತ ಹೇಳಿತೋ ಕೂಡಲೇ ನನ್ನ ಎಲ್ಲಾ ನೋವು ಮಾಯ. ಹೊಸವರ್ಷ ನಿಜಕ್ಕೂ ಸಂತೋಷದಿಂದಲೇ ಬರಮಾಡಿಕೊಂಡೆ. ಕೊನೆಮಾತು ಬದುಕಿದ್ದಾಗ " ನಾನು ರಾಜ್ ಎಂಬ ಶಿಖರದ ಮುಂದೆ ಸಣ್ಣ ಗುಡ್ಡ ಮಾತ್ರ ಅಂತ ಭಾವಿಸಿದ್ದ ನೀವು, ವಿಧಿವಶರಾದ ಮೇಲೆ ರಾಜ್ ಗೆ ಸರಿಸಮಾನರಾಗಿ ಹೋದಿರಿ. ಬಹುಶಃ ಇದಕ್ಕೇ ಇರಬೇಕು ನಾವು ಮಾಡಿದ ಪುಣ್ಯ ನಮ್ಮನ್ನು ಕಾಪಾಡುತ್ತೆ ಅನ್ನೋದು.
 
[img_assist|nid=5819|title=ಚಿರನಿದ್ರೆಯಲಿ..|desc=|link=none|align=left|width=150|height=116] [img_assist|nid=5820|title=ಕುಚುಕು...|desc=|link=none|align=center|width=150|height=116] [img_assist|nid=5821|title=ಧರ್ಮಪತ್ನಿ|desc=|link=none|align=left|width=150|height=101] [img_assist|nid=5823|title=ಅಭಿಮಾನ.|desc=|link=none|align=left|width=101|height=150]

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಕೆಎಲ್ಕೆ ಮಂಗಳ, 01/05/2010 - 10:28

ಶ್ರೀನಿವಾಸ್ ,
ವಿಷ್ಣು ಬಗ್ಗೆ ನಾನರಿಯದ ಅನೇಕ ಸಂಗತಿ ತಿಳಿಸಿದ್ದೀರಿ. ಲೇಖನ ತುಂಬಾ ಹೃದಯಸ್ಪರ್ಷಿ !!

ವಿನಯ್_ಜಿ ಮಂಗಳ, 01/05/2010 - 11:47

ಶ್ರೀನಿವಾಸ್ ರವರೆ,
ನಿಮ್ಮ ಲೇಖನ ನಮ್ಮಂತಹ ವಿಷ್ಣು ಅಭಿಮಾನಿಗಳಿಗೆ ಬಹಳಷ್ಟು ಉತ್ತಮ ಮಾಹಿತಿ ನೀಡಿದೆ.... :)
" ಯಾರಿಗೋಸ್ಕರ ಸಿನಿಮಾ ಮಾಡಲಿ, ಅಭಿಮಾನಿಗಳೇ ನನ್ನ ಸಿನಿಮಾ ನೋಡ್ತಿಲ್ಲ" ಅಂತ. ಅಣ್ಣಾ .. ಅದ್ಯಾವ ಅಯೋಗ್ಯ ನಿಮ್ಮ ಮನಸ್ಸಿನಲ್ಲಿ ಅಂತಹದೊಂದು ಭಾವನೆ ಮೂಡಲು ಕಾರಣನಾದನೋ ಗೊತ್ತಿಲ್ಲ. ನೀವೊಮ್ಮೆ ಮೊನ್ನೆ ಕಣ್ತೆರೆಯಬೇಕಾಗಿತ್ತು, ಸುಮಾರು 18 ಕಿಮಿ ಗಳ ಉದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲಿ ಕಂದಮ್ಮಗಳಿಂದ ಹಿಡಿದು ಮುದುಕರವರೆಗೆ ನಿಂತಿದ್ದರಲ್ಲ ಜನ ಅವರನ್ನು ನೀವೊಮ್ಮೆ ನೋಡಬೇಕಿತ್ತು..? ನಮ್ಮ ಅಣ್ಣಾ ಬರುವ ರಸ್ತೆ ಸ್ವಚ್ಚವಾಗಿರಬೇಕು ಅಂತ ನೀವು ಮೆರವಣಿಗೆ ಹೊರಟ ರಸ್ತೆಗಳನ್ನೆಲ್ಲ ಅಭಿಮಾನಿಗಳು ತೊಳೆದು ಶುಭ್ರಗೊಳಿಸುತ್ತಿದ್ದ ದೃಶ್ಯವನ್ನು ನೀವೇನಾದರೂ ನೋಡಿದಿದ್ದರೆ ಬಹುಶಃ ಇನ್ನು 100 ಸಿನಿಮಾಗಳಲ್ಲಿ ಅಭಿನಯಿಸುವ ಹುಮ್ಮಸ್ಸು ನಿಮಗೆ ಬರುತ್ತಿತ್ತೇನೋ. ಹಾಗೇ, ಆಗ ನಿಮಗೆ ಗೊತ್ತಾಗುತ್ತಿತ್ತು ನೀವು ಕಳೆದುಕೊಂಡದ್ದೇನು ಅಂತ."
--- ವಿಷ್ಣು ಪರಮಾಭಿಮಾನಿಯಾದ ನೀವು ಅವರ "ಸಿರಿವಂತ" ಚಿತ್ರವನ್ನ ನೋಡದೆ ಇರಲಾರಿರಿ... ಅದರಲ್ಲಿ ಕೊನೆಯ ದೃಶ್ಯ ದೇವದೂತರು ಆ ಚಿತ್ರದಲ್ಲಿನ ವಿಷ್ಣು ಪಾತ್ರವನ್ನು ಕರೆದುಕೊಂಡು ಹೋಗುವಾಗ ಅವರು ಹೇಳುವ ಸಂಭಾಷಣೆ: "ನಾನು ಗೆದ್ದೆ, ಎಲ್ಲಾರು ಹೇಳ್ತಾರೆ ಈ ಭೂಮಿಯಿಂದ ಯಾರು ಎನನ್ನು ಎತ್ತಿಕೊಂಡು ಹೋಗುವುದಿಲ್ಲ ಅಂತಾ... ಅದರೆ ನಾನು ಈ ಜನರ ಪ್ರೀತಿ, ವಿಶ್ವಾಸ ಎಲ್ಲಾ ನನ್ನ ಜೊತೆ ಹೊತ್ತೊಯುತ್ತಿದ್ದೇನೆ.... ನಾನೇ ಧನ್ಯ..." ನಿಜಕ್ಕೂ ಅವರ ಅತ್ಮಕ್ಕೆ ಅಲ್ಲಿ ನೆರೆದಿದ್ದ ಅಭಿಮಾನಿಗಳ ನೋಡಿ ಹೀಗೆ ಅನಿಸಿರಬಹುದು... "ಸಾಹಸ ಸಿಂಹ" ಕನ್ನಡಿಗರ ಮನದಲ್ಲಿ ಎಂದೆಂದೂ ಅಮರ.... :)

ಹರೀಶ್ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/11/2010 - 08:51

ತುಂಬಾ ಚನ್ನಾಗಿ ವಿಷ್ಣು ಬಗ್ಗೆ ವಿವರಿಸಿದ್ದಿರಿ, ತುಂಬಾ ವಿಚಾರಗಳನ್ನು ತಿಳಿದುಕೂಂಡೆ,harish.udupi3@gmail.com

ಆಶ್ವಿನಿ ನಟರಾಜ್ (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/13/2010 - 11:11

ನನಗೆ ಗೊತ್ತು ಶ್ರೀನಿವಾಸ್ ನೀನು ಎಷ್ಟು ನೋವು ಅನುಭವಿಸಿಧಿಯ ಅಂತ, ಯಾಕೆಂದರೆ ನನಗೆ ಗೊತ್ತು ನೀನು ವಿಷ್ಣುವರ್ಧನ್ ಅವರನ್ನೂ ಎಷ್ಟು ಇಷ್ಟ ಪದುತಿಧೆ ಅಂತ ಆದರೆ ವಿಧಿ ಅಂತ ಒಂದು ಇದೆ ಅಲ್ಲ ಅದು ಒಳ್ಳೆಯವರನ್ನೇ ಬೇಗ ತನ್ನ ಬಳಿಗೆ ಕರೆದುಕೊಂಡು ಆಗೋದು.  ನನಗೆ ತುಂಬಾ ಮನಸಿಗೆ ನೋವು ಆಯಿತು ಅವರ ಸಾವಿನ ಸುದ್ಹಿ ಕೇಳಿದಾಕ್ಷಣ ಶಾಕ್ ಆಯಿತು.  ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಥಿಸುಥೆನೆ.
ವಿಷ್ಣು ಸಾರ್ ಮೇಲೆ ಇರುವ ನಿಮ್ಮ ಅಪಾರ ಅಭಿಮಾನಕ್ಕೆ ನನ್ನ ಕೊಟ್ಟಿ ವಂದನೆಗಳು.  ವಿಷ್ಣು ಸಾರ್ ಮತ್ತೆ ಹುಟ್ಟಿ ಬರಲಿ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/26/2010 - 11:40

nija lekhana hrudayasparshi... aadre ello tumba hogalike jaasti aytu ansatte... manushya igilla avara saavina dukha 11 dinakke kai tolkondu mugiyodalla.. aadare adashtu naavu nam baraha athava yaavde kelasa adashtu vastunishtavaagirbeku ansatte

Jyothi Subrahmanya ಗುರು, 11/24/2011 - 18:47

ಶ್ರೀನಿವಾಸ್ಒಬ್ಬ ಅಭಿಮಾನಿಯ ಮನದಾಳದ ಮಾತುಗಳನ್ನ ಓದಿ ನಿಜವಾಗಿಯು ಖುಷಿ ಆಯ್ತು.  ವಿಷ್ಣು ಸರ್ ಯಾವತ್ತೂ ರಾಜಕುಮಾರ್ ಜೊತೆ ಪೈಪೋಟಿಗೆ ಇಳಿದಿಲ್ಲ.  ಈ ವಿಷ್ಯ ಆ ಇಬ್ಬರೂ ದಿಗ್ಗಜರಿಗೂ ಗೊತ್ತಿತ್ತು.  ಆದ್ರೆ ಅವರ ಸುತ್ತ ಇರೋರಿಗೆ ಗೊತ್ತಾಗಿಲ್ಲ ಅಷ್ಟೆ.  ಅವರ ನಟನೆ ನೈಜ ಅನಿಸ್ತಿತ್ತೇ ಹೊರತು ನಟನೆ ಅನಿಸ್ತಾ ಇರಲಿಲ್ಲ.  ಕನ್ನಡ ಚಿತ್ರರಂಗ ಇವತ್ತು ಅನಾಥವಾಗಿದೆ ಅಷ್ಟೆ.... ಧನ್ಯವಾದಗಳು ನಿಮ್ಮ ಎಲ್ಲಾ ಮಾಹಿತಿಗೆ.... ಆ ಪರಿಶುದ್ಧ ಆತ್ಮ ನಿಜವಾಗ್ಯೂ ಶಾಂತಿಯನ್ನ ಪಡೆದಿರುತ್ತೆ....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.