Skip to main content

ಕನ್ನಡವನ್ನು ಹಾರಲು ಬಿಡದ ಬೆಂಗಳೂರು ಇಂಟರ್ನ್ಯಾಶನಲ್ ಏರ್ ಪೋರ್ಟ್

ಬರೆದಿದ್ದುJune 2, 2009
19ಅನಿಸಿಕೆಗಳು

[img_assist|nid=4454|title=ಬೆಂಗಳೂರು ಇಂಟರ್ ನ್ಯಾಶನಲ್ ಏರ್ ಪೋರ್ಟ್|desc=|link=none|align=left|width=227|height=164]ರ್ನಾಟಕದಿಂದ ಹೊರರಾಜ್ಯ ಅಥವಾ ವಿದೇಶಕ್ಕೆ ವಿಮಾನದ ಮೂಲಕ ಪ್ರಯಾಣಿಸಿರುವ ಪ್ರತಿಯೊಬ್ಬರನ್ನೂ ಗಾಢವಾಗಿ ತಾಗಿರುವ ಅಂಶವೆಂದರೆ, "ಏರ್ಪೋರ್ಟ್ ಅಥವಾ ವಿಮಾನಗಳಲ್ಲಿ ಕನ್ನಡದ ಅನುಪಸ್ಥಿತಿ". ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ್ಗೊಂಡು, ವಿಮಾನಯಾನ ಸೇವೆ ನೀಡುವ ಪ್ರತಿಯೊಂದು ಸಂಸ್ಥೆಗಳಲ್ಲಿ ಕನ್ನಡದ ಬಳಕೆ "ತೀರಾ ಕಡಿಮೆ" ಅಥವಾ "ಇಲ್ಲವೇ ಇಲ್ಲ" ಎನ್ನಬಹುದು.

B.I.A.L ಅಂತೂ ಕನ್ನಡ ಪತ್ರಿಕೆಗಳಿಗೆ ಬಹಿಷ್ಕಾರನೇ ಹಾಕಿಬಿಟ್ಟಿದೆ. ಇದೇ ಕಾರಣಕ್ಕೆ ಕರ್ನಾಟಕ ಸರ್ಕಾರದಿ೦ದ ಛೀಮಾರಿ ಕೂಡ ಹಾಕಿಸಿಕೊ೦ಡಿದೆ.
B.I.A.L ನಲ್ಲಿ ಗ್ರಾಹಕರನ್ನು ಕನ್ನಡದಲ್ಲಿ ಮಾತಾಡಿಸುವುದಿಲ್ಲ. ವಿಶ್ರಾ೦ತಿ ಕೊಠಡಿಗಳಲ್ಲಿ, ತೆರಿಗೆ ರಹಿತ ಅ೦ಗಡಿಗಳಲ್ಲಿ ಮತ್ತು ವಿಮಾನದ ಒಳಗಡೆ ಕನ್ನಡದ
ದಿನಪತ್ರಿಕೆಗಳಾಗಲಿ, ಹೊತ್ತಿಗೆಗಳಾಗಲಿ ಸಿಗುವುದಿಲ್ಲ.
ನಾಮಫಲಕಗಳಲ್ಲಿ ಕನ್ನಡ ಮೂಲೆಗು೦ಪಾಗಿದೆ, ಮತ್ತು ಹಲವಾರು ಕಡೆ ನಾಮಫಲಕಗಳು ಹಿ೦ದಿ ಮತ್ತು ಇ೦ಗ್ಲೀಷ್ ನಲ್ಲಿ ಮಾತ್ರ ಇವೆ.

ಇವರ ಕನ್ನಡದ ಕಡೆಗಣನೆಯಿ೦ದ ಗ್ರಾಹಕರಿಗೆ ಉಂಟಾಗುತ್ತಿರುವ ಅನಾನುಕೂಲವನ್ನು ಕ೦ಡು ಸರ್ಕಾರಾವು ತಾನೂ ಒ೦ದು ಮಾತು ಹೇಳಿ ನೋಡೋಣ ಎ೦ದು, "ಗ್ರಾಹಕರಿಗೆ ಕನ್ನಡದ ದಿನಪತ್ರಿಕೆ ವಿಮಾನದ ಒಳಗೆ ಹಾಗು ಹೊರಗೆ ಸಿಗುವ ಹಾಗೆ ಮಾಡಿ ಅಂತ ಆದೇಶ ನೀಡಿದೆ".

ಹೊರಜಗತ್ತಿಗೆ ನಮ್ಮ ನಾಡಿನ ಹೆಬ್ಬಾಗಿಲಿನಂತಿರುವ ಏರ್ಪೋರ್ಟ್-ಗಳು ಈ ನಾಡಿನ ವಿಶೇಷತೆಯನ್ನು ಎತ್ತಿ ಸಾರುವಂತಿರಬೇಕಲ್ವಾ? ನಮ್ಮ ನಾಡಿಗೆ ಬರುವ ಅತಿಥಿಗಳನ್ನು ಕನ್ನಡದ ಕಂಪಿನೊಂದಿಗೆ ಬರಮಾಡಿಕೊಂಡರೆ ನಮ್ಮ ವಿಭಿನ್ನತೆ ಜಗತ್ತಿಗೆ ತೋರಿಸಿದಂತೆ.
ಇದರಿಂದ ನಮ್ಮಲ್ಲಿ ಬರುವ ಅತಿಥಿಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚುತ್ತದೆ ಎ೦ಬುದು B.I.A.L ಅರಿತುಕೊಳ್ಳಬೇಕು.

B.I.A.Lನಲ್ಲಿ ಆಗ್ತಿರೋ ಕಡೆಗಣನೆಗೆ ಕೈ ಜೋಡಿಸಿದ ಹಾಗೆ ಸ್ಪೈಸ್ ಜೆಟ್, ಕಿಂಗ್ ಫಿಷರ್ ನಂತಹ ವಿಮಾನಯಾನ ಸಂಸ್ಥೆಗಳು ತಮ್ಮ ಜಾಹೀರಾತುಗಳನ್ನು ಕೇವಲ ಇಂಗ್ಲಿಷ್-ನಲ್ಲಿ ಹಾಕುತ್ತಾರೆ. ಬೆಂಗಳೂರಿನಲ್ಲಿ ಎಲ್ಲೆಡೆ ಕಾಣಲು ಸಿಗುವ ಜಾಹಿರಾತುಗಳೇ ಇರಲಿ, ವಿಮಾನದೊಳಗೆ ಒದಗಿಸುವ ಸೇವೆಯಲ್ಲೇ ಇರಲಿ, ಎಲ್ಲೂ ಕನ್ನಡಕ್ಕೆ ಸೂಕ್ತ ಸ್ಥಾನ ಕೊಟ್ಟಿಲ್ಲ.
ಕನ್ನಡ ಬಲ್ಲವರು ವಿಮಾನಗಳಲ್ಲಿ ಪ್ರಯಾಣ ಮಾಡುವುದಿಲ್ಲ ಎಂದು ನ೦ಬಿಕೊ೦ಡಿದ್ದಾರಾ ?

ಕನ್ನಡಿಗರು ಎಷ್ಟೇ ಭಾಷೆ ಕಲಿತರೂ ಅವರ ಹೃದಯದ ಭಾಷೆ ಕನ್ನಡವೊಂದೇ, ಈ ನಮ್ಮ ಹೃದಯದ ಭಾಷೆ ಎತ್ತರೆತ್ತರ ಹಾರಲು ತಾನು ಅಡ್ಡ ಬರದ ಹಾಗೆ BIAL ನೋಡಿಕೊಳ್ಳಬೇಕು. ಬನ್ನಿ, "ಜಗತ್ತಿನೆಲ್ಲೆಡೆ ಕನ್ನಡದ ಕಂಪು ಪಸರಿಸಲು ನೀವು ಕಾರಣರಾಗಬಹುದು" ಅಂತ ಇವರಿಗೆ ತಿಳಿಸೋಣ.
"ಇದರಿಂದ ನಮ್ಮ ವಿಭಿನ್ನತೆಯ ಪರಿಚಯ ಜಗತ್ತಿಗೇ ಮಾಡಿಸಬಹುದು" ಅಂತ ನಾವು ತೋರಿಸಿಕೊಡೋಣ.
ಈ ವಿಷಯದ ಬಗ್ಗೆ B.I.A.L ಅಥವಾ ಬೇರೆ ವಿಮಾನಯಾನ ಸಂಸ್ಥೆಗಳಿಗೆ ಬರೆಯಲು ಈ ಮಿಂಚೆ-ಗಳನ್ನು ಬಳಸಿರಿ

BIAL: feedback@bialairport.com

Spicejet: custrelations@spicejet.com

Kingfisher: http://www.flykingfisher.com/feedback.aspx

indigo: customer.relations@goindigo.in

paramount: feedback@paramountairways.com

Jet airways: customerrelations@jetairways.com

ಲೇಖಕರು

ಪ್ರಿಯಾಂಕ್

ಸಮಯ ಸಿಕ್ಕಾಗ ತಿಳಿಸುತ್ತೇನೆ.
ಸದ್ಯಕ್ಕೆ ಕ್ಷಮೆ ಇರಲಿ.

ಅನಿಸಿಕೆಗಳು

Muttige ಮಂಗಳ, 06/02/2009 - 22:54

ಬೆಂಗಳೂರಿನಲ್ಲಿದ್ದವರೇ ಕನ್ನಡ ದಿನಪತ್ರಿಕೆ ಓದಲು ಹಿಂದೆ ಮುಂದೆ ನೋಡುತ್ತಾರೆ.ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಈಗಲೂ ಕನ್ನಡ ಪತ್ರಿಕೆ ದೊರೆಯದು.ನಮ್ಮ ಮನಸ್ಥಿತಿ ಯಾವಾಗ ಸರಿಯಾಗಿ ಕೀಳರಿಮೆ ಬಿಡುತ್ತೆವೆಯೋ ಆಗ ಸರಿ ಆಗಬಹುದು.ವಿಮಾನದಲ್ಲಿ ಪ್ರಯಾಣಿಸುವವರು ಕನ್ನಡ ಜಾಹೀರಾತಿಲ್ಲ,ಪೇಪರ್ ಇಲ್ಲ ಎಂದು ಯಾರದ್ರು ಗಲಾಟೆ ಮಾಡಿದ್ದಾರ??!! ಯಾರು ಇಲ್ಲ..

*"ಇದರಿಂದ ನಮ್ಮಲ್ಲಿ ಬರುವ ಅತಿಥಿಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚುತ್ತದೆ ಎ೦ಬುದು B.I.A.L ಅರಿತುಕೊಳ್ಳಬೇಕು." ಹೊರ ದೇಶದಿಂದ ಬಂದ ಅತಿಥಿಗಳು ಕನ್ನಡದ ಕಂಪನ್ನು ಸವಿಯಲು ಸಾಧ್ಯವೆ?!! ಕನ್ನಡದ ಕಂಪನ್ನು ಎಲ್ಲ ಕಡೆ ಹರಡಿ, ಅವರಿಗೆ ಸ್ವಾಗತ ನೀಡಿದರೆ ಅವರಿಗೆ ಅದು ಅರ್ಥನಾದರೂ ಆಗಬಹುದೇ? ಅದೇಗೆ ೧೦ ಪಟ್ಟು ಹೆಚ್ಚಾಗಬಲ್ಲದು?ಅಂಕಿ ಅಂಶಗಳನ್ನು ನೀಡಿದರೆ ಒಪ್ಪಬಹುದು..

Kaccho ಸುಬ್ಬ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/04/2009 - 23:45

"ವಿಮಾನದಲ್ಲಿ ಪ್ರಯಾಣಿಸುವವರು ಕನ್ನಡ ಜಾಹೀರಾತಿಲ್ಲ,ಪೇಪರ್ ಇಲ್ಲ ಎಂದು ಯಾರದ್ರು ಗಲಾಟೆ ಮಾಡಿದ್ದಾರ??!! ಯಾರು ಇಲ್ಲ.. "
ನಿಮ್ಮಲ್ಲಿ ಇನ್ನೂ ಈ ಅಳುಕಿದ್ದರೆ.. ಅಥವಾ ಇಲ್ಲಿ ಹೇಳುತ್ತಿರುವುದನ್ನು ನೀವು ನ೦ಬದಿದ್ದರೆ.. ಬನ್ನಿ..!! ನೀವೇ ಯಾಕೆ ಮೊದಲಿಗರಾಗಿ ಬಿ.ಐ.ಎ.ಎಲ್ ಗೆ ಪತ್ರ ಬರೆಯಬಾರದು?

ಕನ್ನಡಿಗರ ಮನಸ್ಥಿತಿ ಸರಿಹೋಗ್ಬೇಕು..ಕನ್ನಡಿಗರು ತಮ್ಮಲ್ಲಿರುವ ಕೀಳರಿಮೆ ತೊರೆಯಬೇಕು... ಎಲ್ಲಾರೂ ಜಾಗೃತ ಗ್ರಾಹಕರಾಗಬೇಕು... ಅವೆಲ್ಲ ಸರಿ.. ಆದ್ರೆ ಇದೆಲ್ಲಾಅ ಹೇಗಾಗತ್ತೆ.

ಸುಮ್ನೆ ಕೂತ್ರ೦ತೂ ಖ೦ಡಿತ ಆಗಲ್ಲ.. ಬಿ.ಐ.ಎ.ಎಲ್ ಗೆ ಬರೆದು ಯಾಕ್ ಸಾಮಿ ನಮ್ಮೂರಲ್ಲಿ ನಮ್ ಬಾಸೆ ಮಾತಾಡಕ್ ಬಗ್ಗೆ ಯಾಕೆ ತಾತ್ಸಾರ ಮಡ್ತಿರ ಅ೦ತ ಕೇಳೋದ್ರಿ೦ದ ಸರಿಯಾದ ದಿಕ್ಕಿನಲ್ಲಿ ಚಲಿಸಿದ ಹಾಗಾಗತ್ತೆ.

Kaccho ಸುಬ್ಬ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/04/2009 - 23:54

ಅವರಿಗೆ ಸ್ವಾಗತ ನೀಡಿದರೆ ಅವರಿಗೆ ಅದು ಅರ್ಥನಾದರೂ ಆಗಬಹುದೇ?
ಅರ್ಥ ಆಗ್ದಿದ್ರೆ ಕೇಳಿ ತಿಳ್ಕೊತಾರೆ.. ನೀವ್ಯಾಕ್ ಯೋಚ್ನೆ ಮಾಡ್ತಿರಾ.. ನಮ್ಮೂರ ವ್ಯವಸ್ಥೆ ಇರ್ಬೇಕಾದದ್ದು ನಮಗಾಗಿ.. ಈ ವ್ಯವಸ್ಥೆಗೆ ಬೇರೆಯವ್ರು ಹೊ೦ದ್ಕೋಬೇಕೇ ಹೊರ್ತು ವ್ಯವಸ್ಥೆನೇ ಅವರನ್ನು ಉದ್ದೇಶಿಸಿ ಕಲ್ಪಿಸೋದಲ್ಲ.

ಜಪಾನ್ ನಲ್ಲಿ ಅಲ್ಲಿನ ಜನ ಹಾಗೇ ಯೋಚ್ನೆ ಮಾಡಿದ್ರೆ. ಅವರ ಭಾಷೆ ಸ೦ಸ್ಕೃತಿ, ಅವರ್ಲ್ಲಿರುವ ಹೊಸತನ ಜಗತ್ತಿಗೆ ತಿಳಿಯುತ್ತಿರಲಿಲ್ಲ...

Kaccho ಸುಬ್ಬ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 06/05/2009 - 00:00

" ಹೊರ ದೇಶದಿಂದ ಬಂದ ಅತಿಥಿಗಳು ಕನ್ನಡದ ಕಂಪನ್ನು ಸವಿಯಲು ಸಾಧ್ಯವೆ?!!
ಎಲ್ಲಾ ಸಾಧ್ಯ.. ನ೦ಬಿಕೆ ಇರಬೇಕು. ನಿಮ್ಮ ಮು೦ದೆ ನೂರಾರು ದೇಶಗಳ ಉದಾಹರಣೆ ಕೊಟ್ರೂನೂ ನ೦ಬೋದಿಲ್ಲ... ಈ ರೀತಿ ಬದಲಾವಣೆ ಆಗೋದೇ ಇಲ್ಲ ಅನ್ನೋ ಮನಸ್ಸಿದ್ರೆ ಅದು ಆಗೋದೇ ಇಲ್ಲ.

ಆಗತ್ತೆ, ಕನ್ನಡದ ಕ೦ಪೂ ಸವಿಯಬಹುದು, ಕನ್ನಡದ ಕ೦ಪನ್ನು ಹರಡಲೂ ಬಹುದು.. ಕಳೆದ ಕೆಲ ದಿನಗಳ ಹಿ೦ದೆ ಜಪಾನ್ ನ ಚೀಬಾ ಸಾನ್ ಕನ್ನಡದ ಹಾಡುಗಳನ್ನು ಲಾಲ್ ಬಾಗ್ ನಲ್ಲಿ ಹಾಡುತ್ತಿದ್ದುದನ್ನು, ಅಲ್ಲಿ ಜನ ಮೈಮರೆತು ಹಾಡನ್ನು ಸವಿಯುತ್ತಿದ್ದುದನ್ನು ಮರೆತಿರಾ??

Kaccho ಸುಬ್ಬ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 06/05/2009 - 00:01

ಅದೇಗೆ ೧೦ ಪಟ್ಟು ಹೆಚ್ಚಾಗಬಲ್ಲದು?ಅಂಕಿ ಅಂಶಗಳನ್ನು ನೀಡಿದರೆ ಒಪ್ಪಬಹುದು..

ತಪಸ್ಸಿಗೆ ಮು೦ಚೆನೇ ವರ ಕೊಡಿ ಅ೦ತಿರಲ್ಲಾ..??

Kaccho ಸುಬ್ಬ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 06/05/2009 - 00:03

[quote=Kaccho ಸುಬ್ಬ]ಅದೇಗೆ ೧೦ ಪಟ್ಟು ಹೆಚ್ಚಾಗಬಲ್ಲದು?ಅಂಕಿ ಅಂಶಗಳನ್ನು ನೀಡಿದರೆ ಒಪ್ಪಬಹುದು..[/quote]

ತಪಸ್ಸಿಗೆ ಮು೦ಚೆನೇ ವರ ಕೊಡಿ ಅ೦ತಿರಲ್ಲಾ..??

ಕೆಎಲ್ಕೆ ಧ, 06/03/2009 - 11:08

ಪ್ರಿಯ ಮುತ್ತಿಗೆಯವರೇ,
ನಿಮ್ಮ ಈ ಅಭಿಪ್ರಾಯಕ್ಕೆ ನನ್ನ ಸಹಮತವಿಲ್ಲ. ತಮ್ಮ ಕನ್ನಡ ವಿರೋಧಿ ಧೋರಣೆ ಹಾಗೂ ಕನ್ನಡದ ಬಗ್ಗೆ ನಿಮಗಿರುವ ಕೀಳರಿಮೆ ಇದು ತೋರಿಸುತ್ತದೆ ಎಂದರೂ ತಪ್ಪಾಗಲಾರದು. BIAL ನ ಚೆಕ್-ಇನ್-ಕೌಂಟರ್ ನಲ್ಲಿ ಪ್ರಯಾಣಿಕರು ಕನ್ನಡ ಪತ್ರಿಕೆ ಕೇಳಿದ ಅನೇಕ ಉದಾಹರಣೆಗಳಿವೆ. 'ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್' ನಲ್ಲಿ ಅರೇಬಿಕ್ ಪತ್ರಿಕೆಗಳಿಗೆ ಅಗ್ರ ಸ್ಥಾನ. ಅಲ್ಲಿ ಅರಬರನ್ನು ಬಿಟ್ಟು ಬೇರಾರೂ ಹೋಗುವುದೇ ಇಲ್ಲವೇನು? ಅದಿರಲಿ, ತನ್ನ GDP ಗೆ ಪ್ರವಾಸೋದ್ಯಮವನ್ನೇ ಅತಿ ಹೆಚ್ಚು ಅವಲಂಬಿಸಿರುವ ಸ್ಪೇನ್ ದೇಶದ ಬಾರ್ಸಿಲೋನಾ ವಿಮಾನ ನಿಲ್ದಾಣಕ್ಕೆ (Aeropuerto de Barcelona) ಹೋಗಿ ನೋಡಿ. ಅಲ್ಲಿ ಸ್ಪ್ಯಾನಿಶ್ ಪತ್ರಿಕೆ ಬಿಟ್ಟರೆ ಸಿಗುವುದು ಫ್ರೆಂಚ್ ಪತ್ರಿಕೆ ಮಾತ್ರ!!

'ಹೊರ ದೇಶದಿಂದ ಬಂದ ಅತಿಥಿಗಳು ಕನ್ನಡದ ಕಂಪನ್ನು ಸವಿಯಲು ಸಾಧ್ಯವೆ?' ಎಂಬ ನಿಮ್ಮ ಪ್ರಶ್ನೆ ಅಪ್ರಭುಧ್ಧತೆಯಿಂದ ಕೂಡಿದ್ದು. ಪ್ರಜೆಯೊಬ್ಬ ವಿದೇಶಿ ನೆಲದಲ್ಲಿ ಕಾಲಿಡುವಾಗ ಬಯಸುವದೇ ಅದನ್ನು. ಆ ದೇಶದ ಸಂಸ್ಕೃತಿಯ ಕಂಪು ಸವಿಯಬೇಕು ಎನ್ನುವದೇ ಆತನ ಅಭಿಲಾಷೆಯಾಗಿರುತ್ತದೆ. ನಮ್ಮ ದೇಶದವರಿಗೆ ಆ ಕಂಪನ್ನು ಇತರರಿಗೆ ಉಣಬಡಿಸುವ ಮನೋ ಇಚ್ಛೆ ಇರಬೇಕು ಅಷ್ಟೇ.

ಇನ್ನು, 'ವಿಮಾನದಲ್ಲಿ ಪ್ರಯಾಣಿಸುವವರು ಕನ್ನಡ ಜಾಹೀರಾತಿಲ್ಲ,ಪೇಪರ್ ಇಲ್ಲ ಎಂದು ಯಾರದ್ರು ಗಲಾಟೆ ಮಾಡಿದ್ದಾರ?' ಎಂದು ಕೇಳಿದ್ದೀರಿ. ಹೌದು, ಕೆಳದಿರುವುದರಿಂದಲೇ, ಹೀಗಾಗಿರುವುದು.!!!ಕೇಳುವ ಅಗತ್ಯ ಖಂಡಿತ ಇದೆ. ನಿಜ ಹೇಳಬೇಕೆಂದರೆ, BIAL ನ ಅಧಿಕಾರ ಚುಕ್ಕಾಣಿ ಹಿಡಿದಿರುವ ಸ್ವಿಸ್ ಹಾಗೂ ಜರ್ಮನ್ ದೇಶೀಯರಿಗೆ ಅಲ್ಲಿ ಕನ್ನಡವನ್ನು ಕುಗ್ಗಿಸುವ ಯಾವ ಇರಾದೆಯೂ ಇಲ್ಲ. ಸಮಸ್ಯೆಯಿರುವುದು ನಮ್ಮಲ್ಲಿ. ನಮ್ಮ ಕನ್ನಡಿಗರಿಗೆ, ಸರಕಾರಕ್ಕೆ ಅಲ್ಲಿ ಕನ್ನಡ ಸಂಸ್ಕೃತಿ, ಬಳಕೆ ಬೆಳೆಸುವ ಯಾವ ಇರಾದೆಯೂ ಇಲ್ಲ. ಅದು ಹೊರಗಿನವರಿಂದಾದರೂ ಆಗಲಿ. ಪ್ರಿಯಾಂಕ್ ಹೇಳಿರುವ ಈ ಎಲ್ಲ ವಿಳಾಸಗಳಿಗೆ ಮಿಂಚೆ ಕಳಿಸುವುದು ಅತಿ ಸೂಕ್ತ. ನೀವೂ ಕಳಿಸಿ. ಬೆಂಗಳೂರಿನ ಯಾವ ಸ್ಥಳದಲ್ಲಿ ಕನ್ನಡ ಪತ್ರಿಕೆ ಸಿಗುವುದಿಲ್ಲ ಎಂಬ ಚರ್ಚೆ ಆಮೇಲೆ ಮಾಡೋಣ.

ಸೂ: ಈ BIAL ನ ಕನ್ನಡರಹಿತ ವಾತಾವರಣದಲ್ಲೂ ಕನ್ನಡ ಸಂಪೂರ್ಣ ಕ್ಷೀಣಿಸದಿರಲು ಅಲ್ಲಿಯ ಕೆಲವೇ ಕೆಲವು ಕನ್ನಡ ಮಿತ್ರರು ಪ್ರಯತ್ನ ಮಾಡಿದ್ದಾರೆ; ಕೆಲ ಮಟ್ಟಿಗೆ ಸಫಲರೂ ಆಗಿದ್ದಾರೆ. ನಮ್ಮ ಮಿಂಚೆಗಳು, ಅವರಿಗೆ ಪರೋಕ್ಷ ಬೆಂಬಲ ನೀಡೀತು!

konkubhatta ಧ, 06/03/2009 - 11:29

BIALನಲ್ಲಿ ಉದ್ಯೋಗ ಮಾಡುತ್ತಿರುವದರಿಂದ ಧೈರ್ಯವಾಗಿ ಹೇಳುತ್ತಿದ್ದೇನೆ.

ಮೊದಲು ಕನ್ನಡ ದಿನಪತ್ರಿಕೆ ಇರಲಿಲ್ಲ. ಆದರೆ ಈಗ ಇದೆ. ಪ್ರಜಾವಾಣಿ ಹಾಗೂ ವಿಜಯಕರ್ನಾಟಕ ಟರ್ಮಿನಲ್ ಬಿಲ್ಡಿಂಗಿನಲ್ಲಲ್ಲದೇ ಅಡ್ಮಿನ್ ಬ್ಲಾಕ್ , ಪ್ರಾಜೆಕ್ಟ್ ಆಫೀಸುಗಳಲ್ಲೂ ಲಭ್ಯವಿವೆ.

ವಿಮಾನ ನಿಲ್ದಾಣ ಹಾಕಿರುವ ನಾಮ ಫಲಕಗಳು ಎಲ್ಲಾ ಕಡೆ ಮೂರು ಭಾಷೆಗಳಲ್ಲಿ (ಹಿಂದಿ, ಕನ್ನಡ, ಇಂಗ್ಲಿಷುಗಳಲ್ಲಿ) ಇವೆ. ಕೆಲವುಕಡೆ ಎರಡೇ ಭಾಷೆಗಳಿವೆ. (ಕನ್ನಡ, ಇಂಗ್ಲಿಷು) ಆದರೆ ಹಿಂದಿ ಮತ್ತು ಇಂಗ್ಲೀಷು ಎರಡರಲ್ಲೇ ನಾಮಫಲಕಗಳಿಲ್ಲ. ಎಲ್ಲಿ ಅಂತ ಹೇಳಿದರೆ ಕೈಲಾಗಿದ್ದು ಮಾಡಬಹುದು.

ಇನ್ನು ಟರ್ಮಿನಲ್ ಬಿಲ್ಡಿಂಗಿನ ಒಳಗೆ ಎಲ್ಲ ಅಂಗಡಿಕಾರರೂ ತಪ್ಪದೇ ಕನ್ನಡದಲ್ಲಿ ನಾಮಫಲಕ ಹಾಕಿದ್ದಾರೆ. ಹುಡುಕಿದರೆ ಸಿಗುತ್ತದೆ. (ಬೆಂಗಳೂರಿನ ಕನ್ನಡದ ಹಾಗೆ :D )

ಪ್ರಿಯಾಂಕ್ ಧ, 06/03/2009 - 22:09

ಕೊಂಕುಭಟ್ಟ,
ಏರ್ಪೋರ್ಟ್-ನ ಟ್ರಾಲಿ-ಗಳಲ್ಲಿ ಕನ್ನಡವಿಲ್ಲ.
ಕೇವಲ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಇದೆ.

ಫೋಟೋ ನೋಡಿ.
ನೀವು ಕ್ರಮ ಕೈಗೊಳ್ಳಿ, ತುಂಬಾ ಧನ್ಯವಾದ.

konkubhatta ಶುಕ್ರ, 06/05/2009 - 10:41

ಟ್ರಾಲಿಗಳಲ್ಲಿ ಹಿಡಿಕೆಯ ಮೇಲೆ ಕನ್ನಡ ಹಾಕಲು ಸಾಧ್ಯವಿರಲಿಲ್ಲ. ಜರ್ಮನಿಯ ವ್ಯಾಂಝಲ್ ಎಂಬ ಕಂಪನಿಯಿಂದ ತರಿಸಿರುವ ಅವುಗಳ ಮೇಲೆ ಏ.ಏ.ಐ.ನಿರ್ದೇಶನದ ಪ್ರಕಾರ ಹಿಡಿಕೆಯ ಮೇಲಿನ ಬರೆಹವಿದೆ.

ಇದಕ್ಕೆ ಹೊರತಾಗಿ ಜಾಹಿರಾತುಗಳ ಭಾಷಾ ಮಾಧ್ಯಮದ ಮೇಲೆ ನಮಗೆಷ್ಟು ಅಧಿಕಾರವಿರಬಹುದು ಅಂತ ನಿಮಗೆ ತಿಳಿದಿರಬಹುದು ಎಂದುಕೊಳ್ಳುತ್ತೇನೆ. ಅದಕ್ಕಾಗಿ ಅಲ್ಲಿ ಕೂಡ ಕನ್ನಡ ತರಲು ಸಾಧ್ಯವಿಲ್ಲ.

ಖೇದವಾಗುತ್ತದೆ. ಆದರೆ ಸತ್ಯ.

Kaccho ಸುಬ್ಬ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/04/2009 - 23:36

ನಮಸ್ಕಾರ ಕೊ೦ಕುಭಟ್ಟರಿಗೆ,
ವಿಮಾನ ನಿಲ್ದಾಣಕ್ಕೆ ಸಾಕಷ್ಟು ಓಡಾಡಿದ ಅನುಭವ ನನಗೂ ಇದೆ.. ಆದ್ರೆ ಎಲ್ಲೂ ಕನ್ನಡದ ಪತ್ರಿಗೆಳಾಗ್ಲಿ, ಕನ್ನಡದ ವಾತಾವರಣ ಆಗ್ಲಿ, ಕನ್ನಡ ಮಾತಾಡೋರಾಗ್ಲಿ.. ಯಾರೂ ಸಿಗಲಿಲ್ಲ. ನಿಮ್ಮ ಸಿಬ್ಬ೦ದಿ ಜೊತೆ ಕನ್ನಡ ಮಾತಾಡಿದ್ರೆ ಮೇಲೆ ಕೆಳಗೆ ನೋಡ್ತರೆ...
ಹಾ.. ಕಸ್ಟಮ್ಸ್ ನಲ್ಲಿ ಕನ್ನಡದ ಒ೦ದೆರಡು ಮಾತು ಕೇಳಿದೆ.. ಅದು ಬಿಟ್ರೆ.. ಅದು ಕನ್ನಡನಾಡಿನಲ್ಲಿರುವ ವಿಮಾನ ನಿಲ್ದಾಣ ಅನ್ನೋ ಯಾವೊ೦ದು ಸೂಚನೆಯೂ ಕೊಡುವುದರಲ್ಲಿ ವಿಫಲವಾಗಿದೆ ಬಿ.ಐ.ಎ.ಎಲ್.

"ಇನ್ನು ಟರ್ಮಿನಲ್ ಬಿಲ್ಡಿಂಗಿನ ಒಳಗೆ ಎಲ್ಲ ಅಂಗಡಿಕಾರರೂ ತಪ್ಪದೇ ಕನ್ನಡದಲ್ಲಿ ನಾಮಫಲಕ ಹಾಕಿದ್ದಾರೆ. ಹುಡುಕಿದರೆ ಸಿಗುತ್ತದೆ" - ನೀವು ಹುಡುಕೋ ಹಾಗೇ ಕನ್ನಡವನ್ನು ನಿಮ್ಮ ನಾಮಫಲಕದಲ್ಲಿ ಬರ್ದಿದ್ದೀರ. :)

konkubhatta ಶುಕ್ರ, 06/05/2009 - 10:55

ಕಚ್ಚೋ ಸುಬ್ಬ ನಿಮಗೂ ನಮಸ್ಕಾರ.
ನಮ್ಮ ನಿಲ್ದಾಣದಲ್ಲಿ ಕನ್ನಡ ಮಾತನಾಡೊವರಾಗ್ಲಿ, ಕನ್ನಡದ ವಾತಾವರಣ ಆಗ್ಲಿ ಸಿಗದಿರಬಹುದು. ಆದರೆ ನಿಮಗೆ ಇಂಗ್ಲಿಷ್ ಪತ್ರಿಕೆ ಸಿಗುವಲ್ಲೇ ಪ್ರಜಾವಾಣಿ, ಮತ್ತು ವಿಜಯ ಕರ್ನಾಟಕ ಸಿಗುತ್ತವೆ. ಪ್ರಯತ್ನಿಸಿ.
ಅಲ್ಲದೇ ಕನ್ನಡ ಬರದ ಸಿಬ್ಬಂದಿ ನೀವು ಅವರ ಜೊತೆ ಕನ್ನಡ ಮಾತಾಡಿದ್ದರೆ ಮೇಲೆ ಕೆಳಗೆ ನೋಡಿರಬಹುದು. ಆದರೆ ಕನ್ನಡ ಬರುವವರು ಸರಿಯಾಗೇ ಕನ್ನಡದಲ್ಲೇ ಉತ್ತರ ಕೊಡುತ್ತಾರೆ.

ಆದರೆ ಕಸ್ಟಮ್ಸಿನಲ್ಲಿ ಕನ್ನಡ ಕೇಳಿದ ನೀವು ನಿಜಕ್ಕೂ ಅಭಿನಂದನಾರ್ಹರು. ಇರುವ ಹದಿನೇಳು ಕಸ್ಟಮ್ಸ್ ಸಿಬ್ಬಂದಿಗಳಲ್ಲಿ ಎಲ್ಲರೂ ಅನ್ಯ ಭಾಷೀಯರಾಗಿರುವದರಿಂದ ಇದು ಅಪರೂಪದ ಪ್ರಸಂಗ.

ನಾವು ನಮ್ಮ ಸಂಸ್ಥೆಯಲ್ಲಿ ಕನ್ನಡ ಬಳಕೆಗೆ ತರಲು ಯಥಾಶಕ್ತಿ ಶ್ರಮಿಸಬಹುದು. ಆದರೆ ಟರ್ಮಿನಲ್ ಬಿಲ್ಡಿಂಗಿನ ಒಳಗಿನ ಅಂಗಡಿಗಳನ್ನು ನಡೆಸುತ್ತಿರುವವರು ಬೇರೆಯವರಾದ್ದರಿಂದ ಅವರು ಹುಡುಕೋ ಹಾಗೆ ಕನ್ನಡ ಬೋರ್ಡು ಬರೆದರೂ ಸುಮ್ಮನಿರಬೇಕಾಗುತ್ತದೆ. ಅಲ್ಲದೇ ಸ್ವಿಸ್ , ಜರ್ಮನ್ ಮಾಲೀಕರಿರುವ ಸಂಸ್ಥೆಯಲ್ಲಿ ಎಲ್ಲವೂ ಕನ್ನಡ ಮಯವಾಗಿರಬೇಕು ಎಂದು ಅಪೇಕ್ಷಿಸುವ ಮುನ್ನ ಕನ್ನಡಿಗರೇ ಮಾಲೀಕರಾಗಿರುವ ಇನ್ ಫೋಸಿಸ್ , ವಿಪ್ರೋ ಹೋಗಲಿ ಕರ್ನಾಟಕ ಸರಕಾರದ ವ್ಯವಹಾರದ ಭಾಷೆಗಳಲ್ಲಿ ಇಂಗ್ಲಿಷು ಸುಳಿಯಬಾರದು ಅಲ್ಲವೇ?

ಬೆಣ್ಣೆ ಗೋವಿಂದು (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/03/2009 - 11:59

ಇದೇನು, ನಮ್ಮ ಮುತ್ಗಣ್ಣನವರು ಗಿರೀಶ್ ಕಾರ್ನಾಡ್ ಥರ ಮಾತಾಡ್ತಾ ಇದಾರಲ್ಲ!!! ಜ್ಞಾನಪೀಠಕ್ಕೆ ಕಣ್ಣು ಹಾಕಿದಾರೋ ಏನೋ?? ನಿಮ್ದೂ ತಪ್ಪಿಲ್ಲ ಬಿಡಿ; ನಮ್ಮ ಇನ್ಫಿ ನಾಣಿನೇ ವಿದೇಶೀಯರಿಗೆ ಇರಿಸು ಮುರುಸು ಆಗತ್ತೆ ಅಂತಾ ರಾಷ್ಟ್ರ ಗೀತೆ ಹಾಡೋದು ಬೇಡಾ ಅಂದಿರಲಿಲ್ವ?? ನಮ್ ನಾಣಿ ರಾಷ್ಟ್ರಪತಿ candidate ಬೇರೆ!!

Muttige ಧ, 06/03/2009 - 13:56

ಕೆಲ್ಕೆ ಅವರೆ, ಯಾರದರೂ ನಿಮ್ಮ ಅಭಿಪ್ರಾಯದ ವಿರುದ್ಧ ಇದ್ದರೆ ಅದು ಕನ್ನಡದ ಕೀಳರಿಮೆ ಮತ್ತು ವಿರೋಧಿ ಧೋರಣೆ ಆಗುತ್ತದೆಯೆ?! ಅಷ್ಟಕ್ಕೂ 'ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್' ತರ ಎಲ್ಲದೂ ನಮ್ಮದು ಇದೆಯಾ?
" ಪ್ರಜೆಯೊಬ್ಬ ವಿದೇಶಿ ನೆಲದಲ್ಲಿ ಕಾಲಿಡುವಾಗ ಬಯಸುವದೇ ಅದನ್ನು. ಆ ದೇಶದ ಸಂಸ್ಕೃತಿಯ ಕಂಪು ಸವಿಯಬೇಕು ಎನ್ನುವದೇ ಆತನ ಅಭಿಲಾಷೆಯಾಗಿರುತ್ತದೆ." ಎಂದಿದ್ದಿರ.ಕನ್ನಡದ ಕಂಪು ಎಂದರೆ ಕೇವಲ ಕನ್ನಡ ಮಾತಾಡುವುದಲ್ಲ ಕಣ್ರಿ. ವಿದೇಶಿಗರೊಂದಿಗೆ ಕನ್ನಡದಲ್ಲಿ ವ್ಯವಹರಿಸಿದರೆ,ಅವರೇಗೆ ನಮ್ಮ ಸಂಸ್ಕೃತಿ ಅರಿಯಲು ಸಾಧ್ಯ?
೮ ತಿಂಗಳ ಹಿಂದೆ ಹೊಂಗಕಾಂಗ್ ಗೆ ಹೋದಾಗ ಅಲ್ಲಿನ ಸ್ಥಳೀಯ ಪತ್ರಿಕೆಗಳನ್ನು ಕೇಳಿದಾಗ ತಕ್ಷಣದಲ್ಲಿ ಕೊಟ್ಟರು.ಆಮೇಲೆ ವಿಚಾರಿಸಿದರೆ ಅಲ್ಲಿನ ಸರಕಾರದ ಕಾನೂನೇ ಆ ರೀತಿ ಕಟ್ಟುನಿಟ್ಟಾಗಿ ಇದೆ.ನಮ್ಮಲ್ಲಿ ಅದಕ್ಕೂ ಹೋರಾಟ ಮಾಡಬೇಕು.ಎಲ್ಲವೂ ಕಟ್ಟಪ್ಪಣೆ ಬರುವ ತನಕ ಮಾಡೆವು ಎಂಬ ಭಾವ ನಮ್ಮಲ್ಲಿ ತೊಲಗ ಬೇಕಿದೆ.
ನಾವು ಅಲ್ಲಿನವರನ್ನು ಎಚ್ಚರಿಸುವುದರ ಜೊತೆ ನಮ್ಮ ಸರಕಾರವನ್ನೂ ಎಚ್ಚರಿಸುವ ಕೆಲಸ ಮಾಡಬೇಕಿದೆ.ಕಳೆದ ೪ ತಿಂಗಳ ಹಿಂದೆ ಏರ್ಪೊರ್ಟ್ ಗೆ ಹೋದಾಗ "ಸಂಸ್ಕೃತಿ ಮತ್ತು ಪ್ರವಾಸೋಧ್ಯಮ ಇಲಾಖೆ"ಯ ಕೌಂಟರ್ ಸಂಜೆ ೭ ಕ್ಕೆ ಕ್ಲೋಸ್ ಆಗಿತ್ತು!!.ಜೊತೆಗೆ ಎಲ್ಲಕಡೆ ಇಂಗ್ಲೀಷ್ ಹಿಂದಿ ಜೊತೆ ಕನ್ನಡದಲ್ಲೂ ನಾಮಫಲಕ ಇದ್ದವು.

ಕೇವಲ ಕನ್ನಡವನ್ನು ವ್ಯಾಕರಣ,ಶಬ್ದ,ದೀರ್ಘಾಕ್ಷರ ದೋಷ ಇಲ್ಲದೇ ಬರೆಯುವವರು ಮಾತ್ರ ಕನ್ನಡಾಭಿಮಾನಿಗಳು ಅಂಥ ನಿಮ್ಮ ಮನಸ್ಸಿನಲ್ಲಿದ್ದರೆ ತೆಗೆದು ಹಾಕಿ. ನನ್ನಂತ ತಪ್ಪು ಅಕ್ಷರ ಬಳಸುವವರೂ ಸಾಕಷ್ಟು ಮಂದಿ ಇದ್ದಾರೆ!.ಅವರೂ ಕನ್ನಡಿಗರೆ...:)

@ಬೆಣ್ಣೆ ಗೋವಿಂದಣ್ಣಾ, ಸ್ವಲ್ಪ ನಿಧಾನ ಬೆಣ್ಣೆ ಹಚ್ಚಣ್ಣಾ..ಬಹಳ ನೈಸ್ ಆದ್ರೆ ಬಿಳೋದು ಗ್ಯಾರಂಟಿ ಕಣಣ್ಣ., ನಂಗೇನಾದ್ರು ಜ್ನಾನಪೀಠ ಕೊಟ್ಟರೆ ನಿನ್ನಹೆಸರೆ ಹೇಳಿ ತಕೋತಿನಿ ಆಯ್ತಣ್ಣ...:)

ಕೆಎಲ್ಕೆ ಧ, 06/03/2009 - 14:38

ಪ್ರಿಯ ಮುತ್ತಿಗೆಯವರೇ,
ನನ್ನ ಅಭಿಪ್ರಾಯಕ್ಕೆ ವಿರೋಧಿಸಿದರೆ ಅದು ಖಂಡಿತಾ ಕನ್ನಡ ವಿರೋಧಿಯಲ್ಲ. ಕನ್ನಡ ವಿರೋಧಿ ಭಾವನೆಗಳನ್ನು ವ್ಯಕ್ತ ಪಡಿಸಿದರೆ ಮಾತ್ರ ಅದು ಕನ್ನಡ ವಿರೋಧಿ.( ನಿಮ್ಮನ್ನು, ನಿಮ್ಮ ಲೇಖನಗಳನ್ನು ಬಹಳ ದಿನಗಳಿಂದ ಗಮನಿಸುತ್ತಾ ಬಂದಿರುವ ನಾನು, ನೀವು ಕನ್ನಡ ವಿರೋಧಿ ಎಂದು ವಾದಿಸುವ ಮೂರ್ಖತನ ಮಾಡಲಾರೆ. ಈ ಮೇಲಿನ ಲೇಖನದ ಮೇಲಿನ ನಿಮ್ಮ ಅಭಿಪ್ರಾಯ ಕನ್ನಡ ವಿರೋಧಿ ಎನ್ನುವುದಷ್ಟೇ ನನ್ನ ಅಭಿಮತ)
ಇನ್ನು, ಬಯಾಲ್ ನಲ್ಲಿ ಕನ್ನಡ ಪತ್ರಿಕೆಗಳಿಗೆ ಬೇಕಷ್ಟು ಬೇಡಿಕೆ ಇದೆ. ಆದರೂ ಲಭ್ಯವಿರಲಿಲ್ಲ. ಅನೇಕ ಒತ್ತಾಯಗಳ ನಂತರವೇ ಈಗ ಸಿಗುತ್ತಿದೆ. ಕನ್ನಡ ಪತ್ರಿಕೆಗಳೂ ಆಂಗ್ಲ ಪತ್ರಿಕೆಗಳಷ್ಟೇ ಓದಲ್ಪಡುತ್ತವೆ!
ಕನ್ನಡ ಮಾತನಾಡುವುದರಿಂದ ಮಾತ್ರ ಕನ್ನಡ ಸಂಸ್ಕೃತಿ ಪಸರಿಸುತ್ತದೆ ಎಂದು ನಾನೆಲ್ಲೂ ಹೇಳಿಲ್ಲ. ವಿಮಾನ ನಿಲ್ದಾಣದ ನೆಲ steel grey ಗ್ರಾನೈಟ್ ನಿಂದ ಆವರಿಸಿರುವುದರ ಬದಲಾಗಿ, "ಮಂಡಲ "ಶೈಲಿಯ ಕೆತ್ತನೆ( ಮುಂಚೆ ಇದನ್ನೇ ಮಾಡಬೇಕು ಎಂದುಕೊಂಡಿದ್ದರು. ಅನೇಕ ಲಾಬಿಗಳಿಗೆ ಬಲಿಯಾಯಿತು ನಮ್ಮ ಮಂಡಲ pattern ) ಇದ್ದಿದ್ದರೆ ಅದು ಕನ್ನಡ ಸಂಸ್ಕೃತಿಯ ಕಂಪು ಬೀರುತ್ತಿತ್ತು. ಗೋಡೆಗಳ ಮೇಲೆ ಬರಿ ಜಾಹೀರಾತುಗಳು ರಾರಾಜಿಸುವ ಬದಲು, ನಡುವೆ ಅಲ್ಲೊಂದು ಇಲ್ಲೊಂದು ಯಕ್ಷಗಾನದ ಪಗಡೆ, ಕಿರೀಟ, ಭುಜ ಕೀರ್ತಿಯ ಚಿತ್ರ ಇದ್ದಿದ್ದರೆ ಅದು ವಿದೇಶೀಯರನ್ನು ಹೆಚ್ಚು ಆಕರ್ಷಿಸುತಿತ್ತು ಅನ್ನುವುದನ್ನು ನೀವೂ ಅಲ್ಲಗಳೆಯಲಾರಿರಿ.

ಇನ್ನು- ಪ್ರತಿಭಟನೆ, ಚಳುವಳಿ ಭಾರತೀಯ ಸಂಸ್ಕೃತಿ. ಪ್ರಜಾತಂತ್ರದ ಹೆಗ್ಗಳಿಕೆ. ಸರ್ಕಾರ ಮಾಡದಿದ್ದಾಗ ಪ್ರಜೆಯಾಗಿ ಮಾಡುವುದು ನಮ್ಮ ಹಕ್ಕು ಹಾಗೂ ಕರ್ತವ್ಯ.ಅದನ್ನು ಮಾಡಲು ಹೇಸಿಕೆಯೇಕೆ?

Muttige ಧ, 06/03/2009 - 16:27

ನೀವು ಹೇಳಿದಂತೆ ಜಾನಪದ ಶೈಲಿಯ ಸೊಗಡು ಇದ್ದಿದ್ದರೆ ಚೆನ್ನಾಗಿರೊದು.ನಮ್ಮ ಸಂಸ್ಕೃತಿ ಗೊತ್ತಿಲ್ಲದವರಿಗೆ ಗುತ್ತಿಗೆ ಕೊಟ್ಟಾಗ ಅವರೂ ಮನಸ್ಸು ಮಾಡರು.ಗೊತ್ತಿಲ್ಲದ ಸಂಗತಿ ತಿಳಿಸಿದಕ್ಕೆ ಧನ್ಯವಾದ...

Kaccho ಸುಬ್ಬ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/04/2009 - 23:28

ಜಾನಪದ ಶೈಲಿಯ ಸೊಗಡು ಇದ್ದಿದ್ದರೆ ಚೆನ್ನಾಗಿರುತ್ತಿತ್ತು.. ಹಾಗೆಯೇ ಬೆ೦ಗಳೂರು ಹ೦ಪಿಯಗೆ ಸೇರಿದ ನಾಡು ಎ೦ದು ಇವರು ನ೦ಬಿದ್ದರೆ... ಅಲ್ಲಿನ ಶಿಲ್ಪಕಲೆಗಳ ವಿನ್ಯಾಸವನ್ನು ವಿಮಾನ ನಿಲ್ದಾಣದಲ್ಲಿ ತು೦ಬ ಬಹುದಿತ್ತು..

ಗುತ್ತಿಗೆ ಕೊಟ್ಟಾಕ್ಷಣ ಹ೦ಪಿಯಿ೦ದ ದೂರವಾಗಬೇಕಿಲ್ಲ. ಬಿ.ಐ.ಎ.ಎಲ್ ಗೆ ಬರೆದು ಇದನ್ನೇ ಕೇಳಿದ್ದೇನೆ.. ಬೆ೦ಗಳೂರು ಹ೦ಪಿಗೆ ಸೇರಿಲ್ವಾ .. ಅಥವಾ ಹ೦ಪಿಗೆ ಬೆ೦ಗಳೂರು ಸೇರಲ್ವಾ ಅ೦ತ?

ಜರ್ಮನ್ನರು ಗುತ್ತಿಗೆ ಕೊಟ್ಟಾಕ್ಷಣ.. ಅಲ್ಲಿ ಬೇರೊ೦ದು ಭಾಷೆಯನ್ನು, ಬೇರೊ೦ದು ಸ೦ಸ್ಕೃತಿಯನ್ನು ತನ್ನ ಮೇಲೆ ಹೇರಿಕೊಳ್ಳುವುದಿಲ್ಲ.. ಅದರ ಅವಶ್ಯಕತೆ ನಮಗಿಲ್ಲ ಎ೦ದು ನಾವು ತಿಳಿಸಬೇಕು.. ಅದಕ್ಕೇ ಪ್ರಿಯಾ೦ಕ್ ಜೊಗೆಗೂಡಿ ಪತ್ರ ಕಳಿಸಬೇಕು. ಇಲ್ದಿದ್ರೆ.."ಹೌದಾ ಹಾಗಿದ್ರೆ ಬೆ೦ಗಳೂರಲ್ಲಿ ಕನ್ನಡಿಗರು ಎಷ್ಟು % ಇದ್ದಾರೆ" ಅನ್ನೋ ತಿಳಿಗೇಡಿಗಳು ಹೆಚ್ಚಾಗ್ತಾ ಹೋಗ್ತರೆ.

ಕನ್ನಡಿಗರು ತಮ್ಮ ಇರುವಿಕೆಯನ್ನು, ಪ್ರದರ್ಶಿಸಬೇಕು.

ಜತ್ತಿ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 06/06/2009 - 10:14

ಪ್ರಿಯಾಂಕ್ ತಿಳಿಸಿದ ಎಲ್ಲ ವಿಮಾನ ಯಾನ ಸಂಸ್ಥೆಗಳಿಗೂ ಮಿಂಚೆ ಕಳಿಸಿದಾಗ, ಆಶ್ಚರ್ಯಕರ ಎಂಬಂತೆ ಜೆಟ್ ನವರಿಂದ ಉತ್ತರ ಬಂದಿದೆ. BIAL ಜೊತೆ ಚರ್ಚಿಸಿ ಈಗ ಕನ್ನಡ ಪತ್ರಿಕೆಗಳನ್ನು ಇಡಮಾಡಿದೆ ಎಂಬಂತೆ ಅವರು ತಿಳಿಸಿದ್ದರೂ, ಅವರ ತತ್-ಕ್ಷಣದ ಪ್ರತಿಕ್ರಿಯೆ ಅಭಿನಂದನಾರ್ಹ. ಉಳಿದ( BIAL ಸೇರಿದಂತೆ) ಯಾರೂ ಪ್ರತಿಕ್ರಿಯಿಸಿಲ್ಲ!!

ಯಶ್ವ0ತ್ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 06/07/2009 - 09:16

ಜೆಟ ನವರಿ0ದ ನನಗೂ ಕರೆ ಬ0ದಿತ್ತು. ಕನ್ನಡ ಸ0ಸ್ಕೃತಿಯನ್ನು ಪ್ರತಿಬಿ0ಬಿಸೋ ಹಾಗೆ ಕ್ರಮತೊಗೊತಿವಿ ಅ0ತದ್ರು. ಅದೇನು ಮಾಡ್ತಾರೋ ನೋಡೋಣ.
ಇಲ್ಲಿ ನೋಡಿ - BIAL ನವರ ವರದಿ. ಈ ಮೇಲ ಕಳಿಸಿದ್ದಕ್ಕೂ ಸಾರ್ಥಕ ಆಯ್ತು.
http://epaper.timesofindia.com/Repository/ml.asp?Ref=VE9JQkcvMjAwOS8wNi8wNSNBcjAxMDAz&Mode=HTML&Locale=english-skin-custom

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.