Skip to main content

ಒಂದು ಪ್ರೇಮಪತ್ರವು...

ಇಂದ hisushrutha
ಬರೆದಿದ್ದುFebruary 14, 2007
noಅನಿಸಿಕೆ

ಬೊಗಸೆ ಕಣ್ಗಳ ಹುಡುಗೀ,

ನಿನಗೆ ಸಾವಿರ ಸಿಹಿಮುತ್ತುಗಳು.

ಇಲ್ಲೊಂದು ಸುಂದರ ಸಂಜೆ. ಇವತ್ತು ಬೆಂಗಳೂರಿಗೆ ಬಂದ್. ಬೆಳಗ್ಗೆಯಿಂದ ಮುಚ್ಚಿದ್ದ ಅಂಗಡಿಗಳು ಇದೀಗ ತಾನೆ ಕಣ್ಣು ಬಿಡುತ್ತಿವೆ.. ಹೋಟೆಲುಗಳ ಸ್ಟೋವ್ ಹೊತ್ತಿಕೊಳ್ಳುತ್ತಿವೆ.. ಸಿಗ್ನಲ್ ದೀಪಗಳು ತಮ್ಮ ಬಣ್ಣಗಳನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿವೆ.. ಯೋಚಿಸುತ್ತಿದ್ದೆ ನಾನು: ಹೀಗೆ ನಾನು ನಿನ್ನನ್ನು ನೆನಪಿಸಿಕೊಳ್ಳುವ ಪ್ರಸಂಗ ಬರದೇ ಎಷ್ಟು ದಿನಗಳಾದವು..? ಯಾಕೆಂದರೆ ನಾನು ನಿನ್ನನ್ನು ಮರೆತಿದ್ದೇ ಇಲ್ಲ! ನನ್ನ ಹೃದಯದ ಬೀದಿಗಳಲ್ಲಿ ನಿನ್ನ ಸವಿನೆನಪುಗಳ ಅಂಗಡಿಗಳು ಯಾವಾಗ ಮುಚ್ಚಿದ್ದವು ಹೇಳು? ನೀನು ಹಚ್ಚಿಟ್ಟು ಹೋದ ಪ್ರೀತಿಯ ಹಣತೆ ಎಂದು ಆರಿತ್ತು ಹೇಳು? ಆದರೂ ನಿನಗೆ ಹುಸಿಕೋಪ. ಪತ್ರ ಬರೆಯದೇ ಎಷ್ಟು ದಿನಗಳಾದವು ಎಂದಾ? ಹೌದು ಕಣೆ, ಟೈಮೇ ಸಿಗಲಿಲ್ಲ. ನಿನ್ನ ಬಳಿ ಹೇಳಿಕೊಳ್ಳಲು ಸಾಕಷ್ಟು ವಿಷಯಗಳಿವೆ ಎಂಬುದಂತೂ ನಿಜ.

ಕಳೆದ ಭಾನುವಾರ ಒಂದು ಟೂರ್ ಹೋಗಿದ್ದೆ. 'ಹವ್ಯಕ-ಸಾಗರ' ಮತ್ತು 'ಆರ್ಕುಟ್-ಹವ್ಯಕ' ಬಳಗಗಳು ಸಂಯೋಜಿಸಿದ್ದ ಪ್ರವಾಸ. ಬಲಮುರಿ ಜಲಪಾತ ಮತ್ತು ರಂಗನತಿಟ್ಟು ಪಕ್ಷಿಧಾಮಗಳಿಗೆ ಹೋಗಿದ್ದೆವು. ಪೂರ್ತಿ ನೂರಾ ಮೂವತ್ತು ಜನ! ಮೂರು ಬಸ್‍ಗಳಲ್ಲಿ ಹೋಗಿದ್ದು. ಸುಮಾರು ಮೂವತ್ತು ಹುಡುಗಿಯರೂ ಬಂದಿದ್ದರು. (ಅವರ ಬಗ್ಗೆ ಬರೆಯುವುದಿಲ್ಲ ನಾನು; ಯಾಕೆಂದರೆ ನೀನು ಕೋಪಿಸಿಕೊಳ್ಳುತ್ತೀ!) ಪ್ರವಾಸ ತುಂಬಾ ಚೆನ್ನಾಗಿತ್ತು. ಬಸ್ಸಿನಲ್ಲಿ ವಿಪರೀತ ಗಲಾಟೆಯಿತ್ತು. ಹಾಡುಗಳು, ಅಂತ್ಯಾಕ್ಷರಿ, ಯಾವ್ಯಾವುದೋ ಆಟಗಳು... ಓಹ್! ಫುಲ್ ಮಸ್ತ್! ಬಲಮುರಿಯಲ್ಲಿ ಬೀಳುತ್ತಿದ್ದ ನೀರಿನಲ್ಲಿ ನಿನ್ನದೇ ಲಹರಿಯಿತ್ತು.

ಜುಳುಜುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ:
ನಿನ್ನದೇ ತಕತೈ ಕಂಡಿತು.. ತಕದಿಮಿ ಹೆಚ್ಚಿತು..

ಬಹಳ ಹೊತ್ತು ನೀರಿನಲ್ಲಿ ಆಟವಾಡಿ ನಾವು ರಂಗನತಿಟ್ಟಿಗೆ ಬಂದೆವು. ಅದೆಷ್ಟೊಂದು ಬಿಳಿ ಬಿಳಿ ಹಕ್ಕಿಗಳು ಅಲ್ಲಿ... ಹತ್ತು-ಹನ್ನೆರಡು ಜನ ಒಂದು ದೋಣಿಯಲ್ಲಿ ಕುಳಿತು ಕೊಳದಲ್ಲಿ ತೇಲುತ್ತಾ ಪಕ್ಷಿಗಳನ್ನು ನೋಡುವುದು. ಎಲ್ಲೆಲ್ಲಿಂದಲೋ ಬಂದ ಹಕ್ಕಿಗಳು. ದೋಣಿಯವ ಹೇಳುತ್ತಿದ್ದ: "ಇವು ಸ್ನಿಕ್ಕರ್ ಅಂತ. ಗ್ರೀಸ್ ದೇಶದಿಂದ ಬಂದವು.." "ಇವು ಫೆದರ್‌ಸ್ಟೋನ್ ಅಂತ, ಮಲೇಷಿಯಾದಿಂದ ಬರ್ತಾವೆ.." ಯಾವುದೋ ದೇಶದಿಂದ ಇಲ್ಲಿಗೆ ಬಂದು, ಮರದ ಎಲೆಗಳ ಮರೆಯಲ್ಲಿ ಗೂಡು ಕಟ್ಟಿಕೊಂಡು, ಮೊಟ್ಟೆ ಇಟ್ಟು ಮರಿ ಮಾಡಿ, ಮರಿಹಕ್ಕಿಯ ರೆಕ್ಕೆ ಬಲಿಯುತ್ತಿದ್ದಂತೆಯೇ ಮತ್ತೆ ಹಾರಿಹೋಗುತ್ತವಂತೆ. ಹಕ್ಕಿಗಳನ್ನು ನೋಡುತ್ತಾ ಅಲೆಗಳ ಮೇಲೆ ತೇಲುತ್ತಾ ನಾನು ಮೈಮರೆತಿದ್ದೆ. ಯಾವುದೋ ಹಕ್ಕಿ ಮರಿಗೆ ಗುಟುಕು ನೀಡುತ್ತಿತ್ತು.. ಮತ್ಯಾವುದೋ ಹಕ್ಕಿ ತನ್ನ ಸಂಗಾತಿಗೆ ಗುಟ್ಟು ಹೇಳುತ್ತಿತ್ತು..

ದೂರ ನಾಡಿನ ಹಕ್ಕಿ
ಹಾರಿ ಬಾ ಗೂಡಿಗೆ..
ಗೂಡು ತೂಗ್ಯಾವ ಗಾಳೀಗೆ..
ಸುವ್ವಿ ಸುವ್ವಾಲೆ ಸುವ್ವಿ..

ಪಯಣದುದ್ದಕ್ಕೂ ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ.

ಮೊನ್ನೆ ಶುಕ್ರವಾರ ಏರ್‌ಶೋ ನೋಡಲಿಕ್ಕೆ ಹೋಗಿದ್ದೆ: ಆಫೀಸಿಗೆ ರಜೆ ಹಾಕಿ. ಇವೂ ಹಕ್ಕಿಗಳು. ಲೋಹದ ಹಕ್ಕಿಗಳು. ಮೊಟ್ಟೆ ಇಡದ ಹಕ್ಕಿಗಳು. ಇವೂ ಆಗಸದಲ್ಲಿ ತನ್ಮಯತೆಯಿಂದ ಹಾರಾಡುತ್ತವೆ. ಪಲ್ಟಿ ಹೊಡೆಯುತ್ತವೆ. ನಿಂತಂತೆ ತೇಲುತ್ತವೆ. ರೆಕ್ಕೆ ಅಗಲಿಸುತ್ತವೆ... ಯಾವ್ಯಾವುದೋ ದೇಶಗಳಿಂದ ಬಂದ ವಿಮಾನಗಳು, ಜೆಟ್‍ಗಳು ನಡೆಸಿದ ತರಹೇವಾರಿ ಕಸರತ್ತು ನೋಡುವಂತಿತ್ತು. ಜೆಟ್‍ಗಳ ಆರ್ಭಟವೇ ಒಂದು ತೂಕವಾದರೆ ನಮ್ಮ ಭಾರತದ 'ಸೂರ್ಯಕಿರಣ್' ಹೆಸರಿನ ಮಿನಿ ವಿಮಾನಗಳದ್ದೇ ಒಂದು ತೂಕ. ಪುಟ್ಟ ಪುಟ್ಟ ಒಂಭತ್ತು ವಿಮಾನಗಳು ಆಗಸದಲ್ಲಿ ಅದೇನೇನು ಆಟವಾಡಿದೆವು ಅನ್ನುತ್ತೀ..? ಆಗಸದಲ್ಲಿ ತ್ರಿವರ್ಣಗಳ ಓಕುಳಿ ನಿರ್ಮಿಸಿ ಅವು ಗಿಟ್ಟಿಸಿದ ಸಿಳ್ಳೆ-ಚಪ್ಪಾಳೆಗಳು ಅದೆಷ್ಟೋ? ಚುಕ್ಕಿಗಳೇ ಇಲ್ಲದೆ ಅವು ಎಳೆದ ರಂಗೋಲಿಗಳೆಷ್ಟೋ? ಕೊನೆಗೊಮ್ಮೆ, ಅವುಗಳಲ್ಲೇ ಎರಡು ವಿಮಾನಗಳು ವಿರುದ್ಧ ದಿಕ್ಕಿನಿಂದ ಹಾರಿಬಂದು ಒಂದು ದೊಡ್ಡ ಹಾರ್ಟು ಸೃಷ್ಟಿಸಿದವು. ಮತ್ತೊಂದು ವಿಮಾನ ಬಂದು ಒಂದು ಬಾಣವನ್ನೂ ಸೇರಿಸಿತು ಆ ಹೃದಯಕ್ಕೆ... ಜನರಿಂದ ವಿಮಾನದ ಸಪ್ಪಳವನ್ನೂ ಮೀರಿಸುವಂತಹ ಕರತಾಡನ. ನೀನು ಇರಬೇಕಿತ್ತು ಅನ್ನಿಸಿತು. ಆದರೆ ಆ ಬಿಸಿಲಿಗೆ ನಿನ್ನ ಮುಖ ಬಾಡಿಹೋಗುತ್ತಿತ್ತು; ಬಾರದಿದ್ದುದೇ ಒಳ್ಳೆಯದಾಯಿತು ಅನ್ನಿಸಿತು ಕೊನೆಗೆ.

ನಿನ್ನೆ ರಾತ್ರಿಯಿಡೀ ಕುಳಿತು ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ 'ಆವರಣ' ಓದಿ ಮುಗಿಸಿದೆ. ಅದ್ಭುತ ಕಾದಂಬರಿ ಕಣೇ. ಕತೆ ಹೇಳಿ ನಿಂಗೆ ಬೇಜಾರ ಮಾಡೊಲ್ಲ; ನೀನೇ ಕೊಂಡು ಓದು. ಮೊದಲ ಮುದ್ರಣದ ಪ್ರತಿಗಳು ಎರಡೇ ದಿವಸಗಳಲ್ಲಿ ಖಾಲಿಯಾಗಿ ಈಗ ರಿಪ್ರಿಂಟ್ ಆಗಿ ಬಂದಿದೆ ಮತ್ತೆ. ಬೇಗ ಹೋಗಿ ಒಂದು ಕಾಪಿ ಎತ್ತಿಕೊಂಡು ಬಂದುಬಿಡು. ಓದಿಯಾದಮೇಲೆ ಹೇಳು: ಕುಳಿತು ಚರ್ಚಿಸೋಣ.

ಸರಿ, ಮತ್ತೇನು ವಿಶೇಷ? 'ಏನೇನೋ ಕತೆ ಹೇಳುತ್ತಾ ಮುಖ್ಯ ವಿಷಯವನ್ನೇ ಮರೆಸುತ್ತಿದ್ದೀಯಾ' ಅನ್ನುತ್ತೀಯಾ? ಗೊತ್ತು, ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ಎಲ್ಲಿ ಎಂಬುದು ನಿನ್ನನ್ನು ಆಗಿನಿಂದಲೂ ಕಾಡುತ್ತಿರುವ ಪ್ರಶ್ನೆ. ಏನು ಕೊಡಲಿ ನಲ್ಲೆ ನಿನಗೆ...?

ನನ್ನದೆಲ್ಲವನೂ ನಿನಗೆ ಕೊಟ್ಟಿರುವಾಗ ಉಳಿದಿರುವುದೇನು?
ನಾನೇ ನಿನ್ನವನಾಗಿರುವಾಗ ಬೇಕಿನ್ನೇನು?

ನೀನೇನು ಕೊಡುತ್ತೀ ನಂಗೆ? ಹೇ ಕಳ್ಳೀ, ನಾಚುತ್ತೀ ಏಕೆ? ಸಪ್ರೈಸಾ? ಇರಲಿ ಇರಲಿ... ರಾಗಿಗುಡ್ಡದ ಮಧ್ಯದಲ್ಲಿರುವ ಗುಲ್‍ಮೊಹರ್ ಮರ ನಮಗಾಗಿಯೇ ನೆರಳು ಹಾಯಿಸುತ್ತಾ ಕಾಯುತ್ತಿದೆಯಂತೆ. ಮಲ್ಲೇಶ್ವರಂ ಎಯ್ತ್ ಕ್ರಾಸಿನಲ್ಲಿ ಹೂಮಾರುವ ಮಹಿಳೆಯ ಬುಟ್ಟಿಯಲ್ಲಿ ನಿನಗೆಂದೇ ಅರಳಿರುವ ಕೆಂಪು ಗುಲಾಬಿ ಇದೆಯಂತೆ. ಗ್ಯಾಸ್‍ಲೈಟಿನ ಬೆಳಕಿನಲ್ಲಿ ಕಾಯುತ್ತಿರುತ್ತಾನಂತೆ ಪಾನಿಪುರಿ ಮಾಡಿಕೊಡಲು ಅಂಗಡಿಯವ... ಸಿಗುತ್ತೀ ತಾನೇ?

ಹ್ಯಾಪಿ ವ್ಯಾಲೆಂಟೈನ್ಸ್ ಡೇ...!

-ನಿನ್ನವನು

[12.02.2007]

ಲೇಖಕರು

hisushrutha

ಮೌನಗಾಳ

ನಾನು ಸುಶ್ರುತ. ಊರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ದೊಡ್ಡೇರಿ ಎಂಬ ಪುಟ್ಟ ಹಳ್ಳಿ. ಸಧ್ಯಕ್ಕೆ ರಾಜಧಾನಿಯಲ್ಲಿ ಉದ್ಯೋಗಿ. ಸಾಹಿತ್ಯ, ಸಂಗೀತ, ಸಿನಿಮಾ ಮತ್ತು ಕಲೆ ನನ್ನ ಆಸಕ್ತಿಗಳು. ಕತೆ, ಕವಿತೆ ಬರೆಯುವುದು ಇತ್ತೀಚಿಗೆ ರೂಢಿಸಿಕೊಂಡಿರುವ ಹವ್ಯಾಸ. ನನ್ನ ಬಗ್ಗೆ ಹೆಚ್ಚು ಇಲ್ಲಿದೆ: http://hisushrutha.googlepages.com/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.