Skip to main content

ಸಾವಿಗೆ ಎದುರಾದ ಘಳಿಗೆ

ಬರೆದಿದ್ದುApril 14, 2009
27ಅನಿಸಿಕೆಗಳು

ಸಾವನ್ನು ಕಣ್ಣಾರೆ ಕಂಡು, ಸಾಯುವ ಹೊತ್ತಲ್ಲಿ ಈಗ ನಾನು ಯಾವ ರೀತಿ ಸಾಯಬಹುದು ಅಂತ ಯೋಚಿಸಿ, ಕೊನೆಗೆ ಕಿಂಚಿತ್ ಸಮಯ ಪ್ರಜ್ಣೆಯ ಸಹಾಯದಿಂದ ಸಾವಿಂದ ಪಾರಾಗಿ ಬಂದು ಈ ಲೇಖನ ಬರೆಯುತ್ತಿದ್ದೇನೆ. ಈ ಲೇಖನದ ಮೂಲಕ ಏನನ್ನೋ ಹೇಳಬೇಕು ಎಂಬ ಉದ್ದೇಶ ನನಗಿಲ್ಲ ಆದರೆ ಖಂಡಿತ ಇದನ್ನು ಹಂಚಿಕೊಳ್ಳೋ ಉದ್ದೇಶವಂತೂ ಇದೆ.

ನಂಗೊಂದು ದೌರ್ಬಲ್ಯ ಇದೆ. ನಾನು ಬೈಕ್ ರೈಡ್ ಮಾಡೋವಾಗ, ನನ್ನ ಬೈಕಿನ ಕೆಪಾಸಿಟಿಗಿಂತ ಅಂದರೆ 125 ಸಿಸಿ ಮತ್ತು ಅದಕ್ಕಿನ ಕಡಿಮೆ ಸಿಸಿ ಯವರು ನನ್ನನ್ನು ಓವರ್ ಟೇಕ್ ಮಾಡಬಾರದು. ಒಂದು ವೇಳೆ ಮಾಡಿದರೆ ಶತಾಯಗತಾಯ ನಾನು ಅವರನ್ನು ಹಿಂದೆ ಹಾಕಿದರೇನೇ ಸಮಾಧಾನವಾಗೋದು. ಇಂತಹ ಮನೋಭಾವದ ನಾನು, & ಸ್ನೇಹಿತ ರೆಡ್ಡಿ ಜೊತೆ ಕೋಲಾರದಿಂದ ಬೆಂಗಳೂರಿಗೆ NH4 ರಸ್ತೆಯ ಮುಖಾಂತರ ಲೋಕಾಭಿರಾಮವಾಗಿ ಮಾತನಾಡಿಕೊಂಡು, ಎಂದಿನಂತಲ್ಲದೇ ನಿಧಾನವಾಗಿ 50 ಕಿ.ಮಿ./ಘಂಟೆ ಲೆಕ್ಕದಲ್ಲಿ ಪ್ರಯಾಣಿಸುತ್ತಿದ್ದೆವು.

ಆಗ ಒಂದು ಯುವಜೋಡಿಯ 100 ಸಿಸಿ ಬೈಕ್ ನಮ್ಮನ್ನು ಓವರ್ ಟೇಕ್ ಮಾಡಿಬಿಟ್ಟಿತು. ನಂದೋ ಮೊದಲೇ ಹುಚ್ಚು ಮನಸ್ಸು, ಒಂದೇ ಸಾರಿ ಸ್ವೀಡ್ ಜಾಸ್ತಿ ಮಾಡಿದೆ. ಕೆಲವೇ ಸೆಕೆಂಡುಗಳಲ್ಲಿ ನಾನು ಅವರನ್ನು ಮೀರಿ ಸಾಗಿಬಿಟ್ಟೆ. ಒಂದ್ಸಾರಿ ನನ್ನ ಅಹಂ ತಣ್ಣಗಾದರೆ ಸಾಕು, ಮುಂದೆ ನಾನು ಗಾಂಧೀವಾದಿಯೇ ಸರಿ. ಆ ಜೋಡಿಯನ್ನು ಮೀರಿನಡೆಯುವುದು ದೊಡ್ಡ ವಿಷಯವಲ್ಲ ಅನ್ನಿಸಿದ ಕೂಡಲೇ ನಾನು ನನ್ನ ವೇಗದ ಮಿತಿಯನ್ನು ಕಡಿಮೆ ಮಾಡಿಕೊಂಡು ಹಿಂದೆ ಬರುತ್ತಿದ್ದ ಸ್ನೇಹಿತ ರೆಡ್ಡಿಗೋಸ್ಕರ ಕಾಯುವವನಂತೆ ನಿಧಾನಕ್ಕೆ ಗಾಡಿ ಓಡಿಸುತ್ತಿದ್ದೆ.

ನನ್ನ ಸ್ನೇಹಿತ ರೆಡ್ಡಿ ಒಂಥಾರ ವ್ಯಕ್ತಿ ಅವನು ಜೀವನದಲ್ಲಿ ತೀರಾ ಮುಂಗೋಪಿ, ಆತುರಗಾರ. ಆದರೆ ಬೈಕ್ ವಿಷಯದಲ್ಲಿ ಮಾತ್ರ ತೀರಾ ಮಂದಗಾಮಿ ಯಾವತ್ತೂ 60 ರ ಮೇಲೆ ಎಕ್ಷಲೇಟರ್ ಕೊಟ್ಟವನೇ ಅಲ್ಲ. ಅಂತಹವನು ಒಂದೇ ಸಾರಿ ನನ್ನ ಓವರ್ ಟೇಕ್ ಮಾಡಿ ಮುಂದೆ ಸಾಗಿಬಿಟ್ಟ. ನನಗೆ ಪರಮಾಶ್ವರ್ಯ ಜೊತೆಗೆ ಅವನನ್ನು ಓವರ್ ಟೇಕ್ ಮಾಡಬೇಕು ಎಂಬ ಭಾವ ಜಾಗೃತವಾಯಿತು. ರೆಡ್ಡಿಯಂತ ಮಂದಗಾಮಿ ಆ ಸ್ಪೀಡ್ನಲ್ಲಿ ಹೋಗ್ತಿರಬೇಕಾದರೆ ನಾನು ಯಾವ ಮಟ್ಟಕ್ಕೆ ಹೋಗಬೇಕು ಹೇಳಿ..!!

ಈ ಸಂದರ್ಭದಲ್ಲಿ ನನ್ನ ವೇಗದ ಮಿತಿ. ಸುಮಾರು 100 ರ ಆಸುಪಾಸಿನಲ್ಲಿತ್ತು. ಇನ್ನೇನು ರೆಡ್ಡಿಯನ್ನು ಹಿಂದೆ ಹಾಕಿದೆ ಅನ್ನುವಷ್ಟರಲ್ಲಿ ಒಂದು ಸುಮಾರಾದ ತಿರುವು ಸಿಕ್ಕಿತು.. ಆ ಜಾಗದಲ್ಲಿಯೇ ರಸ್ತೆ ಇಕ್ಕಾಟ್ಟಾಗಿದೆ. ಆ ರಸ್ತೆಗೆ ಹುಟ್ಟಿದಂದಿನಿಂದ ಈಗ ಅಗಲೀಕರಣ ಭಾಗ್ಯಬಂದಿದೆ. ನಾವು ಕೋಲಾರದ ಜನತೆ ಸುಮಾರು 25 ವರ್ಷಗಳಿಂದ ಕೆ.ಎಚ್.ಮುನಿಯಪ್ಪ ನನ್ನು ಸಂಸದನಾಗಿ ಗೆಲ್ಲಿಸುತ್ತಿದ್ದೇವೆ. ವೈಪರಿತ್ಯ ಏನೆಂದರೆ ಯಾವತ್ತು ನಮ್ಮ ಜನ ಮುನಿಯಪ್ಪನನ್ನು ಗೆಲ್ಲಿಸಲು ಶುರುಮಾಡಿದರೋ ಆವತ್ತಿನಿಂದ ನಮ್ಮ ಜಿಲ್ಲೆ ಅಭಿವೃದ್ದಿಯಲ್ಲಿ ಹಿಮ್ಮುಖತೆಯನ್ನು ಪಡೆಯಲು ಶುರಮಾಡಿತು. ಈಗಲೂ ಕೋಲಾರ ನಗರದ ಹೃದಯಭಾಗದಲ್ಲಿ ಮಣ್ಣಿನ ರಸ್ತೆಗಳು ನಿಮಗೆ ಎದುರಾಗುತ್ತವೆ. ಆ ಧೂಳಿನಿಂದ ಅಲ್ಲಿಗೆ ಬಂದೋರೆಲ್ಲ ಪುನೀತರಾಗುತ್ತಾರೆ. ಈ ಮನುಷ್ಯ ರಹದಾರಿಗಳ ಸಚಿವನಾಗಿ 4 1/2 ವರ್ಷಗಳಾದರೂ ನಮ್ಮೂರಿನ ಒಂದು ರಹದಾರಿಯೂ ರಿಪೇರಿಯಾಗಿಲ್ಲ. ಇನ್ನೇನು ಚುನಾವಣೆ ಬಂತೆಂಬ ಕಾರಣಕ್ಕೆ ಕಳೆದ ವರ್ಷದಿಂದ NH4 ಅಗಲೀಕರಣಕ್ಕೆ ಮುಂದಾಗಿದ್ದಾನೆ. ಕೆಲವು ಕಡೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲೆಲ್ಲಿಂದಲೋ ಮಣ್ಣನ್ನು ತಂದು, ಈಗಿನ ರಸ್ತೆಗಿಂತ ಒಂದು ಮೀಟರ್ ನಷ್ಟು ಎತ್ತರಮಾಡಿದ್ದಾರೆ.

ಅಂತಹ ಒಂದು ಜಾಗದಲ್ಲಿಯೇ ನನ್ನ ಈ ಓವರ್ ಟೇಕ್ ಪರಾಕ್ರಮ ನಡೀತೀರೋದು.

ಕೆಲವೇ ಸೆಕೆಂಡುಗಳಲ್ಲಿ ರೆಡ್ಡಿಯನ್ನು ಹಿಂದೆ ಹಾಕಿ ಮುನ್ನಡೆದುಬಿಟ್ಟೆ. ಯಾವಾಗ ರೆಡ್ಡಿಯನ್ನು ಓವರ್ ಟೇಕ್ ಮಾಡಿಬಿಟ್ಟೆನೋ ಆಗ ನನ್ನಲ್ಲಿ ಹುಮ್ಮಸ್ಸು ಅತೀ ಎನಿಸುವಷ್ಟಿತ್ತು. ಅದೇ ಹುಮ್ಮಸ್ಸಿನಲ್ಲಿ ಮುಂದೆ ಹೋಗುತ್ತಿದ್ದ ದೊಡ್ಡದೊಂದು ಲಗೇಜ್ ಲಾರಿಯನ್ನು ಓವರ್ ಟೇಕ್ ಮಾಡಲು ಹೊರಟುಬಿಟ್ಟೆ. ಅದಾಗಲೇ ನಾನು ತಪ್ಪು ಮಾಡಿಬಿಟ್ಟಿದ್ದ್ದೆ. ಎಡದಲ್ಲಿ ಇದ್ದವನು ಅದು ಚಿಕ್ಕ ರಸ್ತೆ ಎಂಬುದು ಗೊತ್ತಿದ್ದರೂ ಸಹ ಅದೇ ಸ್ಪೀಡ್ (100km) ನಲ್ಲಿ ಲಾರಿಯ ಬಲಬಾಗಕ್ಕೆ ಬಂದುಬಿಟ್ಟೆ. ನಾನು ಬಲಬಾಗಕ್ಕೆ ಬರುವುದಕ್ಕೂ ಎದುರಗಡೆಯಿಂದ ಒಂದು ಇಂಡಿಕ್ಯಾಬ್ ಬರುವುದಕ್ಕೂ ಸರಿಹೋಯಿತು. ಇಂಡಿಕ್ಯಾಬ್ ನ ಸ್ವೀಡ್ ಬಹುಶಃ ನನಗಿಂತ ಜಾಸ್ತಿ ಇರಬಹುದು. ಆ ತಿರುವಿನಿಂದ ನೇರ ರಸ್ತೆಗೆ ಬಂದಕೂಡಲೇ ಆ ಇಂಡಿಕ್ಯಾಬ್ನವನಿಗೆ ಬರೀ ಹತ್ತು ಮೀಟರ್ ದೂರದಲ್ಲಿ ತನ್ನ ಕಾರಿಗೆ ನೇರವಾಗಿ ಎದುರು ಬರುತ್ತಿರುವ ನನ್ನ ನೋಡಿ ಎದೆ ಝಲ್ಲ್ ಎಂದಿರಬಹುದು. ಅವನಿಗೂ ಸಾವಿನ ಭಯ ಕಾಡಿರಬಹುದು. ಏಕೆಂದರೆ ಬಲಕ್ಕೆ ಲಾರಿ, ಎಡಕ್ಕೆ ಒಂದು ಮೀಟರ್ ಎತ್ತರದ ಮಣ್ಣು ಮತ್ತು ಜಲ್ಲಿಯ ರಾಶಿ.

ಜೋರಾಗಿ ಶಬ್ದ ಕೇಳಿಸಿತು ಬಹುಶಃ ಅವನು ಬ್ರೇಕ್ ಒತ್ತಿದ ಸದ್ದಿರಬೇಕು. ಅವನ ಕಾರು ಆ ಬ್ರೇಕಿಗೆ ಅಲುಗಾಡುತ್ತಿದೆ ಆದರೆ ಕಂಟ್ರೋಲ್ ಆಗಿಲ್ಲ. ನನ್ನ ಮೇಲೆ ಯಾವುದೋ ಸೇಡಿನ ಪ್ರತೀಕಾರ ತೀರಿಸಿಕೊಳ್ಳಲೆಂಬಂತೆ ಮೇಲೇರಿಬರುತ್ತಿದೆ. ಆಗ ನಿಜಕ್ಕೂ ನನಗೆ ಸಾವನ್ನು ನೋಡಿದ ಅನುಭವ. ನನಗೆ ಆ ಕ್ಷಣ ಅನ್ನಿಸಿದ್ದು, ನಾನು ಈಗ ಯಾವ ರೀತಿ ಸಾಯಬಹುದು. ಕಣ್ಮುಂದೆ ಬೆಳಿಗ್ಗೆ ನನ್ನನ್ನು ಏಳಿಸಿದ ಅಪ್ಪನ ಮುಖ ಬಂತು. ಅಷ್ಟೆ..!!

ಬೈಕಿನಿಂದ ಹಾರಿದ ಹಾಗಾಯಿತು. ಮಣ್ಣಿನಲ್ಲಿ ಉರುಳಿಕೊಂಡು ಹೋದಂತಹ ಅನುಭವ.. ಸುಮಾರು 5-10 ಸೆಕೆಂಡುಗಳ ಕಾಲ ಉರುಳಿದೆ ಅನಿಸುತ್ತೆ. ಉರುಳುವಿಕೆ ನಿಂತ ನಂತರ, ಎದ್ದೇ, ಏಳುವ ಪ್ರಯತ್ನದಲ್ಲಿ ಮತ್ತೇ ಬಿದ್ದೆ. ಕೊನೆಗೆ ಸಾವರಿಸಿಕೊಂಡು ಎದ್ದು ಆ ಕಾರಿನ ಕಡೆ ನೋಡಿದೆ ಅವನೂ ಅದಾಗಲೇ ಮತ್ತಷ್ಟೂ ಸ್ಪೀಡಿನಲ್ಲಿ ಹೊರಟಂತಿತ್ತು. ನಾನು ಸತ್ತಿದ್ದೆ ಅಂತ ಅವನು ಭಾವಿಸಿರಬೇಕು. ರೆಡ್ಡಿ ಕಡೆ ನೋಡಿದೆ. ಅವನು ಆಗ ತಾನೇ ಬೈಕ್ ನಿಲ್ಲಿಸುತ್ತಿದ್ದ. ಅವನೆಡೆ ಕೈ ಬೀಸಿದೆ. ಏನೂ ಆಗಿಲ್ಲ ಅನ್ನೋ ಅರ್ಥದಲ್ಲಿ. ನನ್ನ ಬೈಕ್ ಆರಾಮಾಗಿ ಮಣ್ಣಿನಲ್ಲಿ ತನ್ನ ಅರ್ಧಮೂತಿಯನ್ನು ತೂರಿಕೊಂಡು ಮಲಗಿತ್ತು.

ಆಗಿದ್ದಿಷ್ಟೆ.. . . ಇನ್ನೇನು ಕಾರಿನವನು ಗುದ್ದಿದ ಅನ್ನೂ ಘಳಿಗೆಯಲ್ಲಿ ನಾನು ನನ್ನ ಬೈಕ್ ಅನ್ನು ಬಲಗಡೆಯ ಮಣ್ಣಿನರಾಶಿಯ ಕಡೆ ತಿರುಗಿಸಿಬಿಟ್ಟಿದ್ದೆ. ಕಾರಿನವನು ಅದೃಷ್ಟವಶಾತ್ ಬಲಗಡೆ ಬರದೇ ಎಡಗಡೇ ಹೋಗಿದ್ದ. ನಾನು ಮಣ್ಣಿನ ರಾಶಿಗೆ ಗುದ್ದಿ. ಗುದ್ದಿದ ವೇಗಕ್ಕೆ ಗಾಡಿಯಿಂದ ಮುಂದೆ ಹಾರಿ, ಎರಡು ಮೂರು ಪಲ್ಟಿಹೊಡಿದಿದ್ದೆ. ನಾನು ಬಿದ್ದ ಜಾಗದಿಂದ ಕೇವಲ ಒಂದೇ ಒಂದು ಮೀಟರ್ ಹಿಂದೆ ವಿಪರೀತ ಜಲ್ಲಿ ಕಲ್ಲುಗಳಿದ್ದವು. ಒಂದು ವೇಳೆ ಅಲ್ಲಿ ಬಿದ್ದಿದ್ದರೂ ಸಹ ಉಳಿಯೋದು ಕಷ್ಟವೇ ಆಗುತ್ತಿತ್ತು. ಆದರೆ ನಾನು ಕೋಲಾರದ ಪ್ರಸಿದ್ಧ ಕೆಂಪು ಮಣ್ಣಿನಲ್ಲಿ ಬಿದ್ದಿದ್ದೆ. ನನಗೆ ಆಕ್ಷಿಡೆಂಟ್ ಗಳು ಹೊಸತಲ್ಲ. ಕಂತುಗಳ ರೀತಿ ಎಡಗಾಲು -ಬಲಗಾಲು , ಎಡಕೈ-ಬಲಗೈ ಅಂತ ಎಲ್ಲವನ್ನೂ ಬಿದ್ದು ಮುರಿದುಕೊಂಡಿದ್ದೇನೆ. ಆದರೆ ಈ ರೀತಿಯದು ಹೊಸತು.

ಈ ಘಟನೆಗೂ ನಾಲ್ಕೈದು ಘಂಟೆ ಮುಂಚೆ..

ನನ್ನ ಅಕ್ಕನಿಗೆ ಹೇಳಿದ್ದೆ ಬರುವ ತಿಂಗಳು ನಿನಗೆ ಗರ್ಭಕೋಶದ ಆಪರೇಶನ್ ಮಾಡಿಸುತ್ತೇನೆ..!

ಅಪ್ಪನಿಗೆ ಹೇಳಿದ್ದೆ, ನಾನಿದ್ದೀನಲ್ಲ ನೀವು ಯಾವುದಕ್ಕೂ ಭಯಬೀಳಬೇಡಿ, ನಿಮಗೆ ಸರಿಯೆನಿಸಿದ್ದನ್ನು ಮಾಡಿ. ಲಾಭಾನೋ , ನಷ್ಟಾನೋ ಹೆದರಬೇಡಿ.

ಅಣ್ಣನನ್ನು ಬೆಳಿಗ್ಗೆ ತಾನೇ ಉತ್ತರ ಕನರ್ಾಟಕ ಪ್ರವಾಸ ಕಳುಹಿಸಿದ್ದೆ. ಮನೆಕಡೆ ಯೋಚನೆ ಮಾಡಬೇಡ, ಅತ್ತಿಗೆ, ಮಕ್ಕಳನ್ನು ನಾನು ನೋಡ್ಕೋತೇನೆ. ನೀನು ನಿನ್ನ ಸ್ನೇಹಿತರ ಜೊತೆ ಹಾಯಾಗಿ ಸುತ್ತಾಡಿಕೊಂಡು ಬಾ.

ಬಸ್ಸಲ್ಲಿ ಕುರೋಕೇ ಭಯಬೀಳೋ ನನ್ನ ಪ್ರೀತಿಯ ತಾತನಿಗೆ ಹೇಳಿದ್ದೆ .. ತಾತ.. ನಿನ್ನ ಒಂದು ಸಲಾನಾದರೂ ಏರೋಪ್ಲೇನ್ ನಲ್ಲಿ ಕುಳ್ಳರಿಸಿ, ಕೆಳಗಡೆ ನೋಡೋತರ ಮಾಡಿ ಹೆದುರಿಸುತ್ತೇನೆ ಅಂತ.!!
ಅಣ್ಣನ ಮಕ್ಕಳಿಗೆ ಹೇಳಿದ್ದೆ.. ನೀವುಗಳು ಪಾಸಾದ್ರೆ ನಿಮಗೆಲ್ಲರಿಗೂ ನೀವು ಕೇಳಿದ್ದು ಕೊಡಸ್ತೀನಿ.!

ಒಬ್ಬನು ಮೊನ್ನೆ ನನ್ನ ಸಂಸ್ಥೆ ಬಗ್ಗೆ ಲಘುವಾಗಿ ಮಾತನಾಡಿದ್ದ. ಅವನಿಗೆ ಸರಿಯಾದ ಪ್ರತ್ಯುತ್ತರ ಕೊಡೋದು ಹೇಗೆ ಅಂತ ನನ್ನ ಸ್ನೇಹಿತನ ಜೊತೆ ಕೂತು ಚರ್ಚಿಸಿದ್ದೆ.

ಮತ್ತೊಬ್ಬ ಊರಿನ ಮುದುಕನಿಗೆ ಹೇಳಿದ್ದೆ ನಿಮಗೆ ಸರ್ಕಾರದ ಸಂಧ್ಯಾಸುರಕ್ಷಾ ಯೋಜನೆ ಮಾಡಿಸಿಕೊಡುತ್ತೇನೆ. ಆಮೇಲೆ ತಿಂಗಳು ತಿಂಗಳು 400 ರುಪಾಯಿ ಮಾಶಾಸನ ಬರುತ್ತೆ ಆಮೇಲೆ ನಿಮ್ಮ ಮಕ್ಕಳ ಹತ್ತಿರ ಎಲೆ ಅಡಿಕೆಗೆ ಕಾಸು ಕೇಳೋ ತಾಪತ್ರಯ ತಪ್ಪುತ್ತೆ ಅಂತ.

ಅಶ್ವಿನಿ 'ಲೋ ನಿನಗಿಷ್ಟವಾದ ಮೀನಿನ ಸಾರು ಮಾಡುತ್ತೇನೆ ರಾತ್ರಿ ಊಟಕ್ಕೆ ಬರ್ತಿಯಾ' ಅಂದ್ರೆ ನಾನು ಸರಿ ಕಣೇ ಬರ್ತೀನಿ ಅಂತ ಪ್ರಾಮಿಸ್ ಮಾಡಿದ್ದೆ. ಆದ್ರೆ ರಾತ್ರಿ ಹಸಿವಿರಲಿ, ನಿದ್ರೆ ಕೂಡ ಹತ್ತಿರ ಸುಳಿಯಲಿಲ್ಲ.

ಉಸಿರಿರೋತನಕ ಎಲ್ಲರಿಗೂ, ಎಲ್ಲರೂ ಬೇಕು. ಎಲ್ಲವೂ ಬೇಕು..!
ಸತ್ತರೆ ಯಾರೂ, ಯಾರಿಗೂ ಯಾವುದಕ್ಕೂ ಬೇಡ..!!

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 08:25

:P }:)
ಏನು ನಿನ್ನನ್ನ ದೊಡ್ಡ ಸೂರ ಅಂತ ತಿಳಕೊಂಡಿದ್ದೀಯ ಮಗಾ..ಅಲ್ಲೇ ನಾನೂ ನೋಡ್ತ ಇದ್ದೆ. ನಿನಗೆ ಕೂಗಿ ಹೇಳಿದೆ ನನಗೂ ಅಲ್ಲೆ ಆಕ್ಸಿಡೆಂಟ ಆಗಿದ್ದು ಅಂತ. ನೀನು ರೆಡ್ಡಿ ಜತೆ ಎದ್ದು ಹೊರಟ ಮೇಲೆ ನಿನ್ನ ಬೆನ್ನಿಗೆ ಬಡಿದು ಹೇಳಿದ್ದು ನಾನೆ, ಕಳೆದ ತಿಂಗಳು ಇದೇ ಜಾಗದಲ್ಲಿ ಆದ ಆಕ್ಸಿಡೆಂಟಲ್ಲಿ ನನ್ನ ಬೈಕೇ ಮುರಿದಿದ್ದು ಅಂತ. ಓ! ಮರೆತೇ ಹೋಯ್ತು, ನನ್ನ ಜೀವ ಹೋಗಿದ್ದು ಇಲ್ಲೇ ಅಂತ.

ಗೆಂಡೆತಿಮ್ಮ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 08:47

ಲೇಖನ ಓದಿದಾಗ ನಾನೇ ಬೈಕಿನಿಂದ ಬಿದ್ದು ಮೈಕೈ ತರಚಿ ಧೂಳಾದ ಹಾಗಾಯಿತು. ಸ್ವಲ್ಪ ಜಾಗರೂಕರಾಗಿ ಓಡಿಸಿ ಮಾರಾಯ್ರೆ. ನಿಮ್ಮ ಇನ್ನಷ್ಟು ಬರೆಹಗಳನ್ನು ಓದಬೇಕಿದೆ.

ಉಮೇಶ :) ಮಂಗಳ, 04/14/2009 - 10:38

ವಾಹನ ಸವಾರಿ ಎಷ್ಟು ಥ್ರಿಲ್ ಕೊಡುತ್ತೋ, ಅಷ್ಟೇ ಕಿಲ್ ಮಾಡುತ್ತೆ. ಗಾಡಿ ಸ್ವಲ್ಪ ಹುಷಾರಾಗಿ ಓಡಿಸಿ ಶ್ರೀನಿವಾಸ್! ನನ್ನ ಇಬ್ಬರು ಸ್ನೇಹಿತರನ್ನು ದ್ವಿಚಕ್ರ ವಾಹನ ಅಪಘಾತಗಳಲ್ಲಿ ಕಳೆದುಕೊಂಡಿದ್ದೇನೆ. ವಾಹನ ಸವಾರರು ತುಂಬಾ ಘೋರವಾಗಿ, ಅನಾಥವಾಗಿ ರಸ್ತೆ ಮೇಲೆ ಸತ್ತು ಬಿದ್ದಿದ್ದನ್ನು ನೋಡಿದ್ದೇನೆ. ಸತ್ತರೆ ಪರವಾಗಿಲ್ಲ; ಅಂಗವಿಕಲ ರಾದರೆ ಸಾಯೋವರೆಗೂ ಮತ್ತೊಬ್ಬರಿಗೆ ಹೊರೆಯಾಗಿ ಇರಬೇಕಾಗುತ್ತೆ. ನೀವು ಯಾವುದೇ ಅಪಾಯವೂ ಇಲ್ಲದೇ ಪಾರಾಗಿದ್ದು ಸಂತೋಷದ ಸಂಗತಿ. ಇನ್ನೂ ಮುಂದಾದರೂ ಸುರಕ್ಷಿತವಾಗಿ ಗಾಡಿ ಓಡಿಸಿ.

ಹಾಯ್ ಉಮೇಶ್ ಸಾರ್.
ನಿಮ್ಮ ಕಾಳಜಿಗೆ ಧನ್ಯವಾದಗಳು. ಗೆಳೆಯನೊಬ್ಬ ಅಕ್ಕರೆಯಿಂದ ಹೇಳಿದ ಸಾಂತ್ವಾನದಂತಿದ್ದವು ನಿಮ್ಮ ಮಾತುಗಳು. ಯಾಕೋ ನಿಮ್ಮ ಮಾತು, ನಡೆದ ಘಟನೆ,ನೆನೆಸಿಕೊಂಡು ಕಣ್ಣಾಲಿಗಳನ್ನು ತುಂಬಿಕೊಳ್ಳದಿರಲಾರದಾದೆ.
ಧನ್ಯವಾದಗಳು ಸಾರ್.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 10:47

ಹೌದು ನಿವು ಕೆ ಎಚ ಮುನಿಯಪ್ಪನವರ ಬಗ್ಗೆ ಹೆಲಿರೊದು ನುರಕ್ಕೆ ನುರರಶ್ತು ಸತ್ಯ ಮುನ್ದೆ ಮಗ ಅವನಾ ಸ್ವಾರ್ಥಕ್ಕೆ ದಿನಕೊಬ್ರು ಆ ರಸ್ಥೆ ಯಲ್ಲಿ ಬಿಲ್ಥಿದ್ದಾರೆ ಅದ್ರಲ್ಲಿ ನಾನು ಒಬ್ಬ ಆ ಅನುಭವ ನಿಜಕ್ಕು ಎಧೆ ಜಲ್ಲೆನ್ನುತ್ತೆ

ಶಿವಕುಮಾರ ಕೆ. ಎಸ್. ಮಂಗಳ, 04/14/2009 - 10:51

ಮ್... ಬೈಕು-ಸೈಕಲ್ಲುಗಳನ್ನು ಓಡಿಸೋಕೆ ನಾನು ಕಲಿತಿದ್ದು ತುಂಬಾ ತಡವಾಗಿ. ಎರಡೇ ಚಕ್ರಗಳಲ್ಲಿ ಅದು ಹೇಗಪ್ಪಾ ಬೀಳದಂತೆ ಬ್ಯಾಲೆನ್ಸ್ ಮಾಡೋದು ಅಂತಾ ಹೆದರಿಕೊಂಡು ಸೈಕಲ್ ಕಲಿತಿದ್ದು ನಾನು ಹತ್ತನೇ ಕ್ಲಾಸ್ ಪಾಸಾದ ಮೇಲೆ... ಮತ್ತೆ ಬೈಕ್ ಕಲಿತಿದ್ದು ಈಗ್ಗೆ ಮೂರು ವರ್ಷಗಳ ಹಿಂದೆ! ಹಾಗಾಗಿ ನೀವು ಇಲ್ಲಿ ಬರೆದದ್ದನ್ನೆಲ್ಲಾ ಓದಿ ಮತ್ತೆ ಆ ಭಯ ವಾಪಸ್ಸು ಬರೋ ಥರಾ ಕಾಣ್ತಿದೆ...

ಸ್ವಲ್ಪ ಹುಷಾರಾಗಿ ಗಾಡಿ ಓಡಿಸ್ರೀ ಮಾರಾಯ್ರೇ, ನನ್ನ ಕೆಲವು ಸ್ನೇಹಿತರೂ 'road rage'ಗೆ ಬಲಿಯಾಗಿದ್ದಾರೆ!
(ಯಾಕೋ ಇಲ್ಲಿ ಇದನ್ನೆಲ್ಲ ಬರೆದು ನಮ್ಮೆಲ್ಲರ ಕೈಲಿ ಬೈಸ್ಕಂಡು, ನಮ್ಮ ಬಿಟ್ಟಿ ಉಪದೇಶಾಮೃತದ ಸವಿ ಸವಿಯಬೇಕು ಅನ್ನೋ ಥರಾ ಇದೆ ನಿಮ್ಮ ಪ್ಲಾನು!) :D :D

ಧನ್ಯವಾದಗಳು ಶಿವು ಸಾರ್.
ನೀವು ಹೇಳಿದ್ದು ಸರಿ, ಬೈಕಿನ ಸ್ಪೀಡಿಗೆ, ಬಲಿಯಾದವರು ತುಂಬಾ ಜನರಿದ್ದಾರೆ. ಅದನ್ನೆಲ್ಲ ನೋಡಿ ಪಾಠ ಕಲಿಯೋ ತುರ್ತು ಎಲ್ಲರಿಗಿಂತ ಮುಖ್ಯವಾಗಿ ನನಗಿದೆ. ಮಾಡಿದ ತಪ್ಪನ್ನು ಮತ್ತೆ ಮಾಡಲಾರೆ ಅನ್ನೋ ತತ್ವವನ್ನು ಪಾಲಿಸುತ್ತಿದ್ದರೂ,ಅದ್ಯಾಕೋ ಈ ಅಪಘಾತಗಳ ವಿಷಯದಲ್ಲಿ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿಲ್ಲ. ಈ ಘಟನೆಯಿಂದಾದರೂ ಬದಲಾದೇನೆ ಎಂಬುದೊಂದು ಆಸೆ ನನ್ನಲ್ಲಿದೆ.
ಆಮೇಲೆ ನೀವು ಹೇಳಿದಿರಲ್ಲ " ನಮ್ಮಿಂದ ಬಿಟ್ಟಿ ಉಪದೇಶಾಮೃತಸವಿಯೋ ಪ್ಲಾನ್ ಇರೋ ಹಾಗಿದೆ " ಅಂತ. ಹೌದು ಖಂಡಿತ ನಿಮ್ಮಿಂದ ಅದನ್ನು ನಾನು ನಿರೀಕ್ಷಿಸುತ್ತಿದ್ದೇನೆ. ಯಾಕೆ ಗೊತ್ತಾ. ಆ ಘಟನೆ ನಡೆದಾಗಿನಿಂದ ನಾನು ನಾನಾಗಿಲ್ಲ. ಏನೋ ಒಂಥರಾ ಭಾವನೆಗಳು ನನ್ನ ಕಾಡುತ್ತಿವೆ. ಉದಾಹರಿಸೋದಾದರೆ ನೆನ್ನೆ ಮದ್ಯಾಹ್ನ ಊಟ ಮಾಡುತ್ತಿರಬೇಕಾದರೆ ಈ ಘಟನೆ ನೆನಪಾಯಿತು " ಇದ್ದಕ್ಕಿದ್ದಂತೆ ನನ್ನ ಊಟದ ಡಬ್ಬಿಯನ್ನು ಎಸೆದುಬಿಟ್ಟೆ." ಅನ್ನ ನೆಲದ ಪಾಲಾಗಿತ್ತು. ಬೆಳಿಗ್ಗೆ ಷಟಲ್ ಕಾಕ್ ಆಡ್ತಿರಬೇಕಾದರೆ ಈ ಘಟನೆ ನೆನಪಾಯಿತು ಅಷ್ಟೇ ಕಾಕ್ ನ ಬದಲು ರಾಕೆಟ್ ಅನ್ನು ಎದುರು ಕೋರ್ಟಗೆ ಎಸೆದುಬಿಟ್ಟಿದ್ದೆ. ಒಂದೇ ಮಾತಿನಲ್ಲಿ ಹೇಳೋದಾದರೆ ನಾನು ಒಂದು ರೀತಿಯಲ್ಲಿ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಿದ್ದೇನೆ.

ಈ ವಿಷಯವನ್ನು ನಾನು ನನ್ನ ಮನೆಯವರ ಬಳಿ ಹೇಳಲಾರೆ, ಅದನ್ನು ಕೇಳಿ ತಡೆಯೋ ಶಕ್ತಿ ಅವರಿಗಿಲ್ಲ. ಸ್ನೇಹಿತರ ಬಳಿ, ಅವರ ನೇರ ನಿಂತು, ಎಂದಿನಂತೆ, ಕಣ್ಣಲ್ಲಿ ಕಣ್ಣಿಟ್ಟು ಹೇಳೋ ದೈರ್ಯ ನನ್ನಲಿಲ್ಲ. ಅದಕ್ಕೆ ಈ ಮಾರ್ಗವನ್ನು ಆಯ್ದುಕೊಂಡೆ. ಕೊನೇಪಕ್ಷ ಈ ರೀತಿಯಾದರೂ ನನ್ನ ಮನಸ್ಸಿನ ಭಾರ ಖಾಲಿಯಾಗಲಿ ಅಂತ.

ಈಗಲೂ ಆ ಘಟನೆಯ ಭೀಕರತೆಯನ್ನು ನೆನೆಸಿಕೊಂಡರೆ ಕೀಲಿಮಣಿ ಕುಟ್ಟುವ ಕೈಗಳು ಸ್ಥಗಿತವಾಗಿಬಿಡುತ್ತವೆ.

ಬೆಣ್ಣೆ ಗೋವಿಂದು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 12:08

ಶ್ರೀನಿವಾಸರು ಹುಡುಗಿಯ ಹಿಂದೆ ಹೋಗಿ ಹೊಂಡದಲ್ಲಿ ಬಿದ್ದರು ಅಂತಾಯಿತು....

ಗೆಂಡೆತಿಮ್ಮ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 14:35

ಸಾರ್ ಗೋವಿಂದ ಅವ್ರೆ,

ನಮ್ಮ ಶ್ರೀನಿವಾಸು ಸಾ.ರಾ.ಗೋವಿಂದುಗೆ ಸಾರಾಯಿ ಗೋವಿಂದ ಅಂತ ಒಮ್ಮೆ ಜಾಡಿಸಿದ್ದರು. ನೀವು ಸಾರಾಯಿಗೋವಿಂದನೇ ಇರಬೇಕು.

ನೀವು ದಯಮಾಡಿ ನಿಮ್ಮ ಹೆಸರನ್ನು ಬೆಣ್ಣೆ ಗೋವಿಂದನಿಂದ ಎಣ್ಣೆ ಗೋವಿಂದ ಅಂತ ಬದಲಾಯಿಸ್ಕಳಿ ಸಾ.

ಹಾಯ್ ಗೋವಿಂದು ಸಾರ್.
ಬರೀ ಹೊಂಡಕ್ಕಲ್ಲ, ಪ್ರಪಾತಕ್ಕೆ ಬಿದ್ದದ್ದು ನಿಜವಾದರೂ ನಾನು ಹುಡುಗಿ ಹಿಂದೆ ಹೋಗಿ ಬೀಳಲಿಲ್ಲ, ಅದಕ್ಕಿಂತ ಕೆಟ್ಟದಾದ 'ಹುಚ್ಚುಮನಸ್ಸಿನ' ಹಿಂದೆ ಹೋಗಿ ಬಿದ್ದೆ.

ಸಮಾಜಮುಖಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 14:45

ಲೇಖನ ಸಿಕ್ಕಾಪಟ್ಟೆ ಚೆನ್ನಾಗಿದೆ ಶ್ರಿನಿವಾಸ್ . ಕೀಪ್ ಇಟ್ ಅಪ್ .

ಬೆಣ್ಣೆ ಗೋವಿಂದು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 14:49

ಗೆಂಡೆಯವರೇ, ನಿಮ್ಮ ಸಲಹೆಗೆ ಧನ್ಯವಾದಗಳು. ನಾನು ಸೇಡಂ ತಾಲೂಕಿನ (ಶ್ರೀ ಖರ್ಗೆಯವರ ಗುಲ್ಬರ್ಗ ಜಿಲ್ಲೆ ) "ಬೆಣ್ಣೆ" ಎಂಬ ಹಳ್ಳಿಯಿಂದ ಬಂದವನಾದುದರಿಂದ ನನ್ನ ಹೆಸರನ್ನು ಬದಲಿಸಿ ಕೊಳ್ಳಲು ಸಾಧ್ಯವಿಲ್ಲ. ದಯವಿಟ್ಟು ಕ್ಷಮಿಸಿ. ಇನ್ನು ಸುಡು ಬಿಸಿಲಿನ ಗುಲ್ಬರ್ಗ ಜಿಲ್ಲೆಯಲ್ಲಿ ಬೆಣ್ಣೆ ಕರಗದೆ ಹೇಗಿದೆ ಎಂದು ಕೇಳಬೇಡಿ.'.....' '......' 'ಕಳಚೆ' ಎನ್ನುವ ಊರುಗಳ ಹೆಸರಿರುವ ಜಿಲ್ಲೆಯಲ್ಲಿ ಹೆಂಗಸರೆಲ್ಲ ಸೀರೆ ಉಟ್ಟೇ ತಿರುಗುತ್ತಿದ್ದಾರಲ್ಲ!

ಗೆಂಡೆತಿಮ್ಮ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 15:16

ಹೆಸರು ಬದಲಾಯಿಸಿಕೊಳ್ಳಲು ನಿಮಗಿದು ಕೊನೇ ಅವಕಾಶ. ಇಡೀ ದಿನ ಎಣ್ಣೆ ಹೊಡೆದಿರುವ ಹಾಗೆ ಕಾಣುತ್ತಿದೆ.
ಅದಕ್ಕಾಗಿ ಎಣ್ಣೆ ಗೋವಿಂದ ಅಂದಿಟ್ಟುಕೊಳ್ಳಿ ಅಂತ ಪುನಃ ಪ್ರಾರ್ಥನೆ .

ನಿರ್ಮಲ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 15:06

ಅಲ್ಲಯ್ಯ ಮಹಾನುಭಾವ ಬದುಕಿನಲ್ಲಿ ವೆಗವೊನ್ದೆ ಮುಖ್ಯವಲ್ಲ
ನಿನ್ನನ್ನೆ ನಮ್ಬಿಕೊನ್ದಿರುವ ಕೆಲವಾದರು ಜೆೀವಗಲು ಮನೆಯಲ್ಲಿ ಕಾಯುತ್ಥಿರುತ್ಥವೆ ಎನ್ನುವಉದು ಮರೆಯಬೆೀದ
ವೆಗದ ಚಲನೆ ಮ್ರುಥ್ಯುಲೊಕಕ್ಕೆ ಪಯನದ ರಹದಾರಿ

ಹಾಯ್ ನಿರ್ಮಲರವರೇ.
ಬದುಕಿನಲ್ಲಿ ವೇಗವೊಂದೇ ಮುಖ್ಯವಲ್ಲ ಎಂಬ ನಿಮ್ಮ ಮಾತು ನಿಜ. ನನ್ನನ್ನೇ ನಂಬಿಕೊಂಡಿರುವ ಜೀವಗಳು ಕಾಯುತ್ತಿರುತ್ತವೆ ಎಂಬ ನಿಮ್ಮ ಅಕ್ಕರೆಯ ಮಾತುಗಳಿಗೆ ಧನ್ಯವಾದಗಳು.

ಸಮಾಜಮುಖಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 15:15

ಸರಿಯಾಗಿ ಹೆಳಿದಿರಿ ನಿರ್ಮಲಾ. ನಾನು ಈ ಹಿನ್ದೆ ಹೇಲಿದ್ದು ಲೆಖನ ಚೆನ್ನಾಗಿದೆ ಅನ್ತ. ಈ ಮಹಾನುಭವರು ಮಾದಿದ್ದು ಖನ್ದಿತಾ ಚೆನ್ನಾಗಿಲ್ಲ. ದಯವಿತ್ತು ತಪ್ಪು ತಿಲಿಯಬೇಡಿ, please

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/14/2009 - 15:27

ಮಗಾನುಬಾವಾ, ವೆಗದ ಚಲನೆ ಮಾದಿ ಮ್ರುಥ್ಯುಲೊಕಕ್ಕೆ ಪಯನ ಮಾದಿಬಿತ್ತೀರಿ, ಹುಸಾರ್ . ನಾನು ಕನ್ನದ ತೈಪು ಮಾದುವದು ಕಲಿಯುವದು ಮೊದಲೇ ಒನ್ಟು ಓಗಿಬಿದಬೇದಾ.ಉಸಾರ್.

ಖಂಡಿತ ಪೂನಾವಾಲ ನೀವು ಕನ್ನಡ ಟೈಪಿಂಗ ಕಲಿಯೋ ತನಕ ನಾನು ಸಾಯಲಾರೆ. ಒಂದು ವೇಳೆ ಸಹಜ ಸಾವು ಬಂದು ಸತ್ತರೂ ಸಹ ' ಸತ್ಯವಾನ ಸಾವಿತ್ರಿ' ಯ ತರ ಯಮನನ್ನು ಗೆದ್ದು , ವರಪಡೆದು ಹುಟ್ಟಿಬರುತ್ತೇನೆ. ಇದು ಯಮನ ಮೇಲಾಣೆ..!! ಸಂತೋಷಾನಾ..!!!

ವಿಕ್ರಂ ಮಂಗಳ, 04/14/2009 - 18:19

ಪೂನಾವಾಲಾ ಅವರೆ, ಚನಾಗಿ ಕಾಲು ಹೆಲಿತಿರ ಕನ್ರಿ....

ನಿಮ್ಮ ಅಡ್ರೆಸ್ ಕೊಡಿ.. ನೂರು ಸಿಸಿ ನ೦ತೆ ಕಾಣುವ ಸ್ಪ್ಲೆ೦ಡರ್ ಬೈಕಿಗೆ ಕರಿಝ್ಮಾ ದ ಇ೦ಜಿನ್ ಅಳವಡಿಸಿಕೊ೦ಡು ಬ೦ದು ನಿಮ್ಮನ್ನು ಗೋಳು ಹೊಯ್ದುಕೊಳ್ಳಬೇಕಿದೆ... ವೇಗವಾಗಿ ಹೋಗೋದು ತಪ್ಪಲ್ಲ, ಆದರೆ ಎದುರುಗಡೆ ಓವರ್ ಟೇಕ್ ಮಾಡಲು ಅವಕಾಶ ಇದೆಯೆ ಇಲ್ಲವೇ ಎ೦ದು ಪರೀಕ್ಷಿಸದೇ ಮುನ್ನುಗ್ಗುವುದು ಮೂರ್ಖತನ... ಸ್ವಲ್ಪ ಜಾಗ್ರತೆಯಿ೦ದ ಓಡಿಸಿ... Speed thrills till it kills

ಹಾಯ್ ಶ್ರೀನಿಧಿ ಹಂದೆಯವರೆ.
ನನ್ನದು ಮೂರ್ಖತನ ಎನ್ನುವುದರಲ್ಲಿ ಎರಡು ಮಾತಿಲ್ಲ. Speed thrills till it kills ಎಂಬ ನಿಮ್ಮ ಮುನ್ನೆಚ್ಚೆರಿಕೆಗೆ ನನ್ನ ಧನ್ಯವಾದಗಳು.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/17/2009 - 13:22

ಚಂದನೆಯ ಹೆಸರಿನ ಗೆಳೆಯ ಅಪಘಾತ ದಲ್ಲಿ ಸತ್ತು ಹೋಗಿದ್ದ.
ಹಾಳುಜನ ಕೂಡಲೇ ಅವನಿಗೊಂದು ಹೆಸರಿಟ್ಟಿದ್ದರು. “ಬಾಡಿ” ಇನ್ನು ಬಂದಿಲ್ಲವಂತೆ ಅನ್ನುತ್ತಿದ್ದರು.........
So Frenz be Careful while driving....

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 04/19/2009 - 07:34

ಇನ್ನಾದ್ರೂ ಮೊಟಾರು ಬೈಕಿನ ವೆಗದ ಮಿತಿಯನ್ನು ಕಡಿಮೆ ಮಾಡಿಕೊಳ್ಳಿ ಸಾಹೆಬ್ರೆ. ಆಗಲೆ ನಿಮಗೂ ನಿಮ್ಮ ಲೇಖನಕ್ಕೂ ಒಳ್ಳೆ ಅರ್ಥ ಸಿಗುವುದು . ಆ ನಿಮ್ಮ ಸ್ನೇಹಿತ ರೆಡ್ಡಿಗೆ ಎನೆನಿಸಿರುತ್ತೆ. ನಿವು ರೆಡ್ಡಿಯವರಿಗೆ ನಿಜವಾದ ಸ್ನೇಹಿತನಾದರೆ ದಯವಿಟ್ಟು ಯೊಚಿಸಿ,

ರಾಜೇಶ ಹೆಗಡೆ ಧ, 04/22/2009 - 17:01

ತುಂಬಾ ಚೆನ್ನಾಗಿ ಬರೆದಿದ್ದೀರಿ ಶ್ರೀನಿವಾಸ್. ಹೆಚ್ಚು ಕಮ್ಮಿ ನಾನೇ ನಿಮ್ಮ ಜೊತೆ ಹಿಂದೆ ಬೈಕಲ್ಲಿ ಕೂತಿದ್ದೇನೆನೋ ಎಂದು ಭ್ರಮೆ ಮೂಡಿಸುವಷ್ಟು ಚೆನ್ನಾಗಿ ವಿವರಿಸಿದ್ದೀರಿ ಪ್ರತಿ ಘಟನೆಯನ್ನು! ಸ್ನೇಹಿತನಾಗಿ ನಿಮಗೆ ಹೇಳುವದಿಷ್ಟೇ ಬೈಕನ್ನು ಸ್ವಲ್ಪ ನಿಧಾನವಾಗಿ ಓಡಿಸಿ. :)
ಇಂತಹ ಉತ್ತಮ ಲೇಖನದ ಸವಿಯನ್ನು ನಮಗೆಲ್ಲ ಉಣಬಡಿಸಿದ್ದಕ್ಕಾಗಿ ಧನ್ಯವಾದಗಳು. 8)

yarivanu (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/01/2009 - 12:22

ನಾನು ಅದಕ್ಕೆ ನಿನ್ನ ಜೊತೆ ಬೈಕಲ್ಲಿ ಬರೊಕ್ಕೆ ಭಯ ಗೊತ್ತ !!!

ಆದರೂ ನೀನು ಹಿಂದೆ ಕೂತು ಭಯಪಡ್ತಿದ್ದಾಗ, ಬೈಕ್ ನ ಸ್ಪೀಡ್ ಆಗಿ ಓಡಿಸೋದರಲ್ಲಿ ಸಖತ್ ಮಜಾ ಇರುತ್ತೆ ಗೊತ್ತಾ.

REKHA (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 02/28/2011 - 17:59

ತುಂಬಾ ಚೆನ್ನಾಗಿ ಬರೆತೀರಾ ನೀವು   i like your blag

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.