ಕನ್ನಡ
ಕನ್ನಡ ಶಾಲೆ ಮಕ್ಕಳು ಅಂತ
ಅಯ್ಯೋ ಪಾಪ ಎನ್ಬೇಡಿ |
ಇಂಗ್ಲೀಷ್ ಸ್ಕೂಲ್ಗೆ ಹೋದವ್ರ ಮಾತ್ರ
ಶ್ಯಾಣೆರ್ಂತ್ ತಿಳಿಬೇಡಿ ||೧||
ಇಂಗ್ಲೀಷ್ ಹಿಂದಿ ನಮಗೂ ಬರುತ್ತೆ
ಹೇಳಾಕಿದ್ದಾರ ನಮ್ಮೇಷ್ಟ್ರು |
ಗಣಿತ ವಿಜ್ಞಾನ ಚಿತ್ರಕಲೇಲಿ
ಸಾಟಿ ಇಲ್ಲ ಇವರಷ್ಟು ||೨||
ಅಆಇಈ ಓದಿನೋಡಿ
ಕನ್ನಡ ಕಸ್ತೂರಿ ಗಮ್ಮತ್ತು |
ಎಬಿಸಿಡಿಗಿಲ್ಲ ನೋಡಿ
ತಾಯಿನುಡಿಯ ತಾಕತ್ತು ||೩||
ಕನ್ನಡ ನಾಡಿನ ಕನ್ನಡ ನೆಲದಲಿ
ಕನ್ನಡ ಕಲಿಯೋಕೆ ತಾತ್ಸಾರ |
ವರ್ಷಕ್ಕೊಂದ್ಸಾರಿ ರಾಜ್ಯೋತ್ಸವ
ಆಚರಿಸಿದ್ರೇ ಮುಗಿತಾ? ||೪||
ಕನ್ನಡ ಮಾತೆ ಮಕ್ಕಳೆ ಹಿಂಗೆ
ಕನ್ನಡ ಕಡೆಗಣಿಸಿದರೆಂಗೆ? |
ಬೇರೆ ಭಾಷೆ ಮಕ್ಳೆನಾದ್ರೂ
ಕಲಿತಾರ ನಮ್ಮಂಗೆ ||೫||
ನೀರು ನೆಲ ಉಸಿರು ಇಲ್ಲಿಯದು
ಕಲಿಯಲುಬೇಡ ಅನ್ನೋದೆಲ್ಲಿಯದು? |
ಕೈ ಎತ್ತಿ ಕನ್ನಡ ಮಾತೆಗೆ ಜೈ ಎನ್ನಿ
ಕನ್ನಡ ಕಲಿಯಲು ಎಲ್ಲ ಮುಂದೆ ಬನ್ನಿ||೬||
ಬನ್ನಿರಿ ಬನ್ನಿರಿ ಲಗೂನ ಬನ್ನಿರಿ
ಕನ್ನಡ ಕಹಳೆ ಊದೋಣ|
ಕನ್ನಡ ತಾಯಿ ಅಕ್ಷರ ತೇರ
ಎಲ್ಲರೂ ಕೂಡಿ ಎಳೆಯೋಣ ||೭||
-ರಚನೆ: ಡಾ.ಪ್ರಭು ಅ.ಗಂಜಿಹಾಳ್
ಮೊ:೯೪೪೮೭೭೫೩೪೬
ಸಾಲುಗಳು
- 15 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ