Skip to main content

ನಿರಾಸೆ ಮೂಡಿಸಿದ 80ನೇ ಕನ್ನಡ ಸಾಹಿತ್ಯ ಸಮ್ಮೇಳನ

ಬರೆದಿದ್ದುJanuary 14, 2014
2ಅನಿಸಿಕೆಗಳು

ಅಂತೂ ಇಂತೂ ಮೊನ್ನೆ ಮಡಿಕೇರಿಯಲ್ಲಿ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.  ಆದರೆ ಈ ಸಮ್ಮೇಳನ ಕೂಡಾ ಎಂದಿನಂತೆ ನನಗೆ ನಿರಾಸೆ ಮೂಡಿಸಿತು. ಯಾಕೆ? ಇಂದು ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಹಾಗೂ ಕನ್ನಡ ಸಾಹಿತ್ಯದ ಅಭಿವೃದ್ಧಿಯ ಗುರಿಯನ್ನು ಬಿಟ್ಟು  ಹಾದಿ ತಪ್ಪುತ್ತಿದೆ ಕೇವಲ ಸರಕಾರದ ಹಣ ಹಾಳು ಮಾಡುವ ಕಾರ್ಯಕ್ರಮವಾಗುತ್ತಿದೆ ಅನ್ನುವದು ನನ್ನ ಅಭಿಮತ. ನನಗೆ ಹಾಗೆ ಅನ್ನಿಸಲು ಇದಕ್ಕೆ ಹಲವು ಕಾರಣಗಳಿವೆ. ಅವು

ರಾಜಕೀಯ ಪ್ರೇರಿತ ನಿರ್ಣಯಗಳು

ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಕನ್ನಡಕ್ಕೆ ಪೂರಕವಾಗಿ ಇರಬೇಕು. ಆದರೆ ೮೦ನೇ ಸಮ್ಮೇಳನದಲ್ಲಿ ಕಸ್ತೂರಿರಂಗನ್ ಅವರ ಪಶ್ಚಿಮ ಘಟ್ಟದ ವರದಿ ವಿರೋಧಿಸಿ ಮಂಡಿಸಿದ ನಿರ್ಣಯ ಕೇವಲ ಕೆಲವು ರಾಜಕಾರಣಿಗಳನ್ನು, ಭೂಗೞರನ್ನು ಸಂತೋಷಪಡಿಸಲು ತೆಗೆದುಕೊಂಡ ನಿರ್ಣಯ ಅಷ್ಟೇ. ಕನ್ನಡ ಸಾಹಿತ್ಯ ಸಮ್ಮೇಳನ ಇಂತಹ ನಾಟಕಕ್ಕೆ ಕೈ ಹಾಕುವ ಅಗತ್ಯ ಇಲ್ಲವಾಗಿತ್ತು. ಬಹುಶಃ ಹಣ ಬಿಡುಗಡೆ ಮಾಡಿದ ಋಣ ತೀರಿಸಲು ಇಂತಹ ನಿರ್ಣಯ ಮಂಡಿಸಲಾಯಿತೇ? ಗೊತ್ತಿಲ್ಲ.

ಕಾರ್ಯರೂಪಕ್ಕೆ ಬರದ ನಿರ್ಣಯಗಳು

ಇಲ್ಲಿಯವರೆಗೆ ೭೯ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ. ಇಲ್ಲಿ ತೆಗೆದುಕೊಂಡಿರುವ ಎಷ್ಟು ನಿರ್ಣಯಗಳು ಕಾರ್ಯಗತವಾಗಿದೆ? ಕೇವಲ ಮಂಡಿಸಬೇಕು ಅನ್ನುವದಕ್ಕಾಗಿ ಮಂಡಿಸಲ್ಪಡುವ ನಾಮಕಾವಾಸ್ತೆ ನಿರ್ಣಯಗಳಿಂದ ಪ್ರಯೋಜನ ಏನು?

ಯುವ ಸಾಹಿತಿಗಳ ಹಾಗೂ ಇತ್ತೀಚಿನ ಸಾಹಿತಿಗಳ ಕಡೆಗಣನೆ

ಇಂದಿನ ಪೀಳಿಗೆಯ ಹಾರ್ಟ್ ಬೀಟ್ ಯುವಕರು ಚೆನ್ನಾಗಿ ಬಲ್ಲರು. ಎಷ್ಟು ಯುವ ಸಾಹಿತಿಗಳನ್ನು, ಅವರ ಚಿಂತನೆಗೆ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶವಿದೆ? ಜ್ಞಾನ ಪೀಠ ಪ್ರಶಸ್ತಿ ಪಡೆದ ಸಾಹಿತಿಗಳನ್ನು ಬಿಟ್ಟು ಇನ್ನಾವ ಬರಹಗಾರರಿಗೆ ನಾವು ಸ್ಪೂರ್ತಿದಾಯಕ ಮಾತನ್ನು ಆಡುತ್ತಿದ್ದೇವೆ? ಅವರ ಸಾಹಿತ್ಯಕ್ಕೆ ಎಲ್ಲಿ ಸೂಕ್ತ ಪ್ರಚಾರ ನೀಡುತ್ತಿದ್ದೇವೆ? ಹಳೆಯ ಸಾಹಿತ್ಯ ಈಗಿನ ಪೀಳಿಗೆ ರುಚಿಸಬಲ್ಲುದೇ?

ಕೊನೆ ಇಲ್ಲದ ಸನ್ಮಾನ

ಎಲ್ಲಿ ನೋಡಿದರಲ್ಲಿ ಸಭೆ ಸನ್ಮಾನ. ಸಾಹಿತ್ಯ ಸಮ್ಮೇಳನ. ಕೊನೆಯೇ ಇಲ್ಲ. ಆ ಸಾಹಿತಿಗಳು ಬರೆಯುವದನ್ನು ನಿಲ್ಲಿಸಿ ಅದೆಷ್ಟು ವರ್ಷವಾಗಿರುತ್ತೋ ದೇವನೇ ಬಲ್ಲ. ಸನ್ಮಾನ ಯಾವಾಗಲೂ ಹೆಚ್ಚು ಪ್ರಸ್ತುತ ಬರಹಗಾರರಿಗೆ ಸಲ್ಲಬೇಕು. ೧೯೭೦ಯಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ನಟಿಸಿದ ನಟನಿಗೆ ೨೦೧೩ರಲ್ಲಿ ಅತ್ಯುತ್ತಮ ನಟ ಎಂಬ ಫಿಲಂಫೇರ್ ನೀಡಿದರೆ ಹೇಗಿರುತ್ತೆ ನೀವೆ ವಿಚಾರ ಮಾಡಿ. ಇಂತಹ ಅರ್ಥವಿಲ್ಲದ ಸನ್ಮಾನಗಳಿಂದ ಪ್ರಯೋಜನ? ಆ ದೇವನೇ ಬಲ್ಲ.

ಆಂಗ್ಲ ಮಾಧ್ಯಮ ಶಿಕ್ಷಣದ ಗೊಂದಲ

ಹೆಚ್ಚಿನ ಸಾಹಿತಿಗಳು ತಮ್ಮ ಮಕ್ಕಳು/ಮೊಮ್ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿದರು. ಆದರೆ ಇತರರು ಕನ್ನಡ ಮಾಧ್ಯಮದಲ್ಲೇ ಓದಲಿ ಎಂದು ಬಯಸಿದರು. ಖಾಸಗಿ ಶಾಲೆಗಳು ಆಂಗ್ಲ ಮಾಧ್ಯಮ ಆರಂಭಿಸಿದಾಗ ಸುಮ್ಮನಿದ್ದ ಇವರು ಸರಕಾರ ಅನಿವಾರ್ಯವಾಗಿ ಆಂಗ್ಲ ಮಾಧ್ಯಮ ಜಾರಿಗೆ ತಂದಾಗ ವಿರೋಧಿಸಿದರು. ಈ ದ್ವಂದ್ವ ನಿಲುವುಗಳು ಇಂದು ಕನ್ನಡಕ್ಕೆ ಕುತ್ತಾಗಿದೆ. ಅಕಸ್ಮಾತ್ ತಮ್ಮ ಮಕ್ಕಳನ್ನೇ ಆಂಗ್ಲ ಮಾಧ್ಯಮಕ್ಕೆ ಸೇರಿಸಿದಾಗ ಪ್ರಾಮಾಣಿಕವಾಗಿ ಒಪ್ಪಿಕೊಂಡು ತಾವು ಆ ನಿರ್ಧಾರ ಏಕೆ ತೆಗೆದುಕೊಂಡೆವು. ಕನ್ನಡ ಮಾಧ್ಯಮ ಯಾಕೆ ಅಪ್ರಸ್ತುತ ಆಯ್ತು ಅನ್ನುವದರ ಬಗ್ಗೆ ಚರ್ಚೆ ನಡೆಸಿ ಕನ್ನಡದ ಬುನಾದಿಯನ್ನು ಗಟ್ಟಿಗೊಳಿಸಲು ಚಿಂತಿಸಿದ್ದರೆ ಈಗಿನ ಪರಿಸ್ಥಿತಿಯೇ ಬೇರೆ ಆಗಿರುತಿತ್ತು. ಆದರೆ ಬರಿ ಕನ್ನಡಿಗರಿಗೆ ಭಾಷೆಯ ಮೇಲೆ ಅಭಿಮಾನವಿಲ್ಲ, ಅವರು ಕೃತಘ್ನರು ಎಂದು ತೆಗಳುವದು, ಸರಕಾರವನ್ನು ಬಯ್ಯುವದು ಹಾಗೂ ಮಾತೃ ಭಾಷೆಯಲ್ಲಿ ಶಿಕ್ಷಣ ಉತ್ತಮ ಎನ್ನುವ ವಾದ ಮಂಡಿಸುವದರಲ್ಲಿ ಸಮಯ ವ್ಯಯಿಸಿದೆವು.

ಆದರೆ ಇದಕ್ಕೆ ಬದಲಾಗಿ ಕನ್ನಡವನ್ನು ಅನ್ನದ ಭಾಷೆಯಾಗಿ ಮಾಡುವ ದಾರಿಯ ಬಗ್ಗೆ ಚಿಂತಿಸಿದ್ದರೆ, ಕನ್ನಡಿಗರು ನಿಜಕ್ಕೂ ಯಾಕೆ ಆಂಗ್ಲ ಮಾಧ್ಯಮ ಆಯ್ಕೆ ಮಾಡುತ್ತಿದ್ದಾರೆ ಎನ್ನುವದರ ಬಗ್ಗೆ ಚಿಂತಿಸಿದ್ದರೆ? ಅದರ ಬಗ್ಗೆ ಪ್ರಾಮಾಣಿಕ ಚಿಂತನೆ ನಡೆಸಿದ್ದರೆ?

ಬೆಂಗಳೂರು, ಮಂಗಳೂರು ಮುಂತಾದ ನಗರಗಳಲ್ಲಿ ಆಂಗ್ಲ ಮಾಧ್ಯಮ ಜನಪ್ರಿಯವಾಗುತ್ತಿದ್ದಾಗಲೇ ಈ ಬಗ್ಗೆ ಚಿಂತಿಸಿ ಕ್ರಮ ಕೈಗೊಂಡಿದ್ದರೆ ಗ್ರಾಮಗಳಲ್ಲಿನ ಕನ್ನಡ ಶಾಲೆಗಳ ಅವನತಿ ತಡೆಯ ಬಹುದಾಗಿತ್ತಾ?

ನುಡಿ ಎಂಬ ಮಿಥ್ಯ ಆಶಾ ಕಿರಣ

ನಾನು ೨೦೦೪ರಲ್ಲಿ ನುಡಿ೪ ನ್ನು ನನ್ನ ಕಂಪ್ಯೂಟರ್ ಅಲ್ಲಿ ಇನ್ಸ್ಟಾಲ್ ಮಾಡಿದಾಗ ಅಬ್ಬಾ ಅಂತೂ ಕನ್ನಡದಲ್ಲಿ ತಂತ್ರಾಂಶದ ಯುಗ ಆರಂಭವಾಯ್ತು ಅಂದು ಕೊಂಡಿದ್ದೆ. ೨೦-೩೦ ಫಾಂಟುಗಳು, ಒಕೆ ಅನ್ನಬಹುದಾದ ತಂತ್ರಾಂಶ ಅದು. ಆದರೆ ಮುಂದೆ ಆ ತಂತ್ರಾಂಶ ಬೆಳೆಯಲೇ ಇಲ್ಲ. ಏನೆಲ್ಲಾ ಮಾಡಬಹುದಿತ್ತು. ಒಂದು ೫೦೦ ಫಾಂಟು, ಇನ್ನೂ ಉತ್ತಮ ಗುಣಮಟ್ಟದ ಎಡಿಟರ್, ಸ್ಪೀಚ್ ರಿಕಾಗ್ನಿಶನ್, ಕನ್ನಡ ಟೆಕ್ಸ್ಟ್ ಟು ಸ್ಪೀಚ್, ಇನೂ ಉತ್ತಮ ಇಂಟರ್ ಫೇಸ್, ಬ್ಲಾಗಿಂಗ್ ಗೆ ಅನುಕೂಲದ ಟೂಲ್ ಗಳು. ಟೈಪಿಂಗ್ ಸಮಸ್ಯೆಗೆ ಗ್ರಾಫಿಕ್ ಟ್ಯಾಬ್ಲೆಟ್ ಅಥವಾ ಟಚ್ ಸ್ಕ್ರೀನ್ ಇಂದ ಇನ್ಪುಟ್, ಸ್ಕ್ಯಾನ್ ಮಾಡಿದ ಪೇಪರ್ ಇಂದ ಅಕ್ಷರ ಓದುವರು ಹಾಗೂ ಮೊಬೈಲುಗಳಲ್ಲಿ ಟೈಪಿಂಗ್. ಹೀಗೆ ಹಲವು ಸಾಧ್ಯತೆ ಇತ್ತು. ಆದರೆ ನುಡಿ ಬೆಳೆಯಲಿಲ್ಲ. ಅದು ಬೇರೆಯವರನ್ನು ಬೆಳೆಯಲು ಕೊಡಲಿಲ್ಲ. ಅದಕ್ಕೆ ಹಣದ ನೆರವು ನೀಡುವದರ ಬದಲಾಗಿ ಒಂದು ಕನ್ನಡ ಸಾಫ್ಟವೇರ್ ಕಂಪನಿಗೆ ಟೆಂಡರ್ ಕರೆದು ಅವರಿಗೆ ಪ್ರತಿವರ್ಷ ಒಂದು ಮೂವತ್ತು ಕೋಟಿ ನೀಡಿದ್ದರೆ ಕಥೆ ಬೇರೆಯೆ ಆಗುತಿತ್ತು. ಈಗ ೧೦ ವರ್ಷವಾದರೂ ನುಡಿ ನಿಂತ ನೀರು. ತಾನೂ ಮಾಡ ಇನ್ನೊಬ್ಬರಿಗೂ ಬಿಡ ಅನ್ನುವ ಗಾದೆ ಇಲ್ಲಿ ಸತ್ಯವಾಗಿದೆ.

ಡಬ್ಬಿಂಗ್ ಪರ ದನಿ ಎತ್ತದಿರುವದು

ರೆಗ್ಯುಲೇಟಡ್ ಡಬ್ಬಿಂಗ್ ಕನ್ನಡಕ್ಕೆ ಉತ್ತಮ. ಇಂದು ಕೋಟ್ಯಂತರ ಕನ್ನಡಿಗರು ಇತರ ಭಾಷೆಗಳಲ್ಲಿ ಕಾರ್ಯಕ್ರಮ ನೋಡುತ್ತಿದಾರೆ. ಅದು ತಪ್ಪುತಿತ್ತು.

ಕನ್ನಡದ ನಿಜವಾದ ಸಮಸ್ಯೆಗಳ ಬಗ್ಗೆ ಅವಗಣನೆ

ಕನ್ನಡ ಸಾಹಿತ್ಯದ ಉಳಿವು ಕನ್ನಡ ಲಿಪಿಯ ಉಳಿವಿನ ಮೇಲೆ ಆಧಾರವಾಗಿದೆ. ಕನ್ನಡ ಲಿಪಿ ಹೊಸ ತಂತ್ರಜ್ಞಾನಗಳಲ್ಲಿ, ಹೊಸ ಬಳಕೆಯಲ್ಲಿ ಕಡಿಮೆ ಆಗುತ್ತಿರುವಾಗ ಅದರ ಬಗ್ಗೆ ಚರ್ಚೆ ಯಾಕೆ ಜಾಸ್ತಿ ಆಗಲಿಲ್ಲ? ಅದರ ಬಗ್ಗೆ ನಿರ್ಣಯ ತೆಗೆದುಕೊಂಡು ಕಾರ್ಯರೂಪಕ್ಕೆ ತರಲಿಲ್ಲ?

ಸ್ಮಾರ್ಟ್ ಫೋನ್, ಮೊಬೈಲು, ಡಿಟಿಎಚ್, ಟಿವಿ, ಡಿವಿಡೀ ಪ್ಲೇಯರ್, ಬ್ಯಾಂಕ್, ಇನ್ಶೂರನ್ಸ್ ಆಫೀಸು, ಅಂತರ್ಜಾಲ, ಕಂಪ್ಯೂಟರ್, ಬಿಲ್ಲಿಂಗ್, ಕಾಲ್ ಸೆಂಟರ್, ಬೋರ್ಡುಗಳು, ಜಾಹೀರಾತು, ಕೋರ್ಟು, ಇಂಜನಿಯರಿಂಗ್, ವೈಧ್ಯಕೀಯ, ಉನ್ನತ ಶಿಕ್ಷಣ, ಹೊಟೆಲ್ ಮೆನು, ಥಿಯೆಟರ್ ಸೀಟ್ ನಂಬರ್, ಬಸ್ ನಂಬರ್, ಬಸ್ ಬೋರ್ಡುಗಳು, ಅಂಗಡಿಯಲ್ಲಿನ ಉತ್ಪನ್ನಗಳು, ಅಂಗಡಿಯಲ್ಲಿನ ಸೂಚನಾ ಫಲಕಗಳು, ವೈದ್ಯರು ನೀಡುವ ಮಾಹಿತಿ, ವಿಸಿಟಿಂಗ್ ಕಾರ್ಡ್, ಬಸ್ ಬುಕಿಂಗ್, ರೈಲು ಬುಕಿಂಗ್, ಆನ್ ಲೈನ್ ಶಾಪಿಂಗ್, ಶಿಕ್ಷಣ ಫಲಿತಾಂಶಗಳು, ಸರಕಾರದ ತಾಣಗಳು, ರಂಗಾಯಣ/ರಂಗಶಂಕರ ತಾಣಗಳಲ್ಲಿ ಕನ್ನಡ ಬ್ಯಾಕ್ ಸೀಟ್ ಪಡೆದಾಗ ಅದರ ಬಗ್ಗೆ ಯಾಕೆ ದನಿ ಎತ್ತಿ ಪರಿಹಾರಕ್ಕೆ ಪ್ರಯತ್ನ ನಾವು ಪಡಲಿಲ್ಲ? ಈಗ ಹೇಳಿ ಜನ ತಮಗೆ ಹೆಚ್ಚು ಅನುಕೂಲವಾಗುವ ಇಂಗ್ಲೀಷ್ ಕಲಿಯುತ್ತಾರಾ ಅಥವಾ ಕನ್ನಡವನ್ನು? ಈ ಮೇಲೆ ಹೇಳಿದ ಎಲ್ಲ ಕಡೆ ೮೦% ಕನ್ನಡದಲ್ಲಿ ಮಾಹಿತಿ ಲಭ್ಯವಾಗಿದ್ದರೂ ಕಥೆ ಬೇರೆಯೇ ಇರುತಿತ್ತು. ಒಪ್ಪುತ್ತೀರಾ?

ಕೆಲವು ಸಾಹಿತಿಗಳು ಕನ್ನಡಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಇದಕ್ಕೆ ಸಂಸ್ಕೃತ, ಪ್ರಾಕೃತ, ಉರ್ದು, ಪಾರ್ಸಿ ಮೊದಲಾದ ಹಲವು ಭಾಷೆಗಳಿಂದ ಕೂಡ ತೊಂದರೆಯನ್ನು ಸಮರ್ಥವಾಗಿ ಎದುರಿಸಿದೆ. ಇಂಗ್ಲೀಷ್ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುತ್ತದೆ ಎಂದು ಪ್ರತಿಪಾದಿಸುತ್ತಾರೆ. ಆದರೆ ಆಗ ಕೇವಲ ಮಾತಿನ ಸಮಸ್ಯೆ ಎದುರಿಸುತಿತ್ತು. ಆದರೆ ಆಂಗ್ಲ ಭಾಷೆ ಹೊಟ್ಟೆ ಪಾಡು, ಲಿಪಿ, ಮಾತು ಎಲ್ಲ ರಂಗದಲ್ಲಿ ತನ್ನ ಸ್ಪರ್ಧೆ ಒಡ್ಡಿದೆ. ಬಹುಪಾಲು ರಂಗದಲ್ಲಿ ಕನ್ನಡ ಸೋಲುತ್ತಿದೆ.

ಇಂದು ಮಾರುಕಟ್ಟೆಗೆ ಹೋಗಿ ಒಂದು ವಸ್ತು ತನ್ನಿ ಅದನ್ನು ಹೇಗೆ ಬಳಸಬೇಕು ಎಂದು ತಿಳಿಯಬೇಕಾದರೆ ಇಂಗ್ಲೀಷ್ ಲಿಪಿ ಹಾಗೂ ಭಾಷೆ ಜ್ಞಾನ ಬೇಕು. ಕನ್ನಡ ಭಾಷೆ ಅಲ್ಲ. ಇಂಗ್ಲೀಷ್ ಅಲ್ಲಿ ಓದಲು/ಬರೆಯಲು/ಮಾತನಾಡಲು ಬರದಿದ್ದರೆ ನಿಮಗೆ ಕೆಲಸ ಸಿಗುವದು ಕಷ್ಟ. ಅಂತೂ ಇಂತೂ ಸಿಕ್ಕರೂ ಪ್ರಮೋಶನ್ ಕಷ್ಟ.

ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿವರ್ಷ ಬೇಕೆ?

ಹಲವು ದಶಕಗಳ ಹಿಂದೆ ಸಂಪರ್ಕ ಸಾಧನಗಳು ಇಷ್ಟು ಮುಂದುವರಿದಿರಲಿಲ್ಲ. ಆಗ ಇಂತಹ ಸಮ್ಮೇಳನ ಪ್ರಸ್ತುತವಾಗಿತ್ತು. ಈಗ ಮೊಬೈಲು ಇದೆ. ಇಂಟರ್ನೆಟ್ ಇದೆ. ಟಿವಿ ಇದೆ. ಒಬ್ಬ ಸಾಹಿತಿ ಗಂಬೀರ ಚರ್ಚೆ ಮಾಡಬೇಕೆಂದರೆ ಹಲವು ತಾಣಗಳಲ್ಲಿ/ಟಿವಿಯಲ್ಲಿ ನಡೆಸಬಹುದು. ತನ್ನ ಚಿಂತನೆಯನ್ನು ವಿಡಿಯೋ ರೆಕಾರ್ಡ್ ಮಾಡಿ ಯೂಟ್ಯೂಬ್ ಅಲ್ಲಿ ಹರಿಬಿಡಬಹುದು. ತನ್ನದೇ ಬ್ಲಾಗ್ ನಡೆಸಬಹುದು. ಸಮ್ಮೇಳನದಲ್ಲಿ ಗಂಬೀರ ಚರ್ಚೆ ನಡೆಯುತ್ತಿದ್ದರೆ ಅತ್ತ ಜನ ಊಟಕ್ಕೆ ಕ್ಯೂ ನಿಂತಿರುವ ಈ ಕಾಲದಲ್ಲಿ ಅದೆಂತ ಚಿಂತನೆ ನಡೆಸಬಹುದು? ಈ ಕಾಲಕ್ಕೆ ಎಷ್ಟು ಪ್ರಸ್ತುತ? ಅದನ್ನು ನಾವು ವಿಚಾರ ಮಾಡಬೇಕಿದೆ.

ನನ್ನ ಸಲಹೆ ಏನೆಂದರೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಲ್ಕು ಅಥವಾ ಐದು ವರ್ಷಕ್ಕೊಮ್ಮೆ ಆಚರಿಸಿದರೆ ಸಾಕು. ಪ್ರತಿ ವರ್ಷ ಪುಸ್ತಕ ಮೇಳ ಮಾಡಿದರೆ ಸಾಕು.

ಒಂದು ಮಾತನ್ನು ನಾವು ಗಮನದಲ್ಲಿಡಬೇಕು. ಈ ಭಾಷಾ ಸಮಸ್ಯೆ ಕನ್ನಡದ್ದು ಮಾತ್ರವಲ್ಲ. ಭಾರತೀಯ ಎಲ್ಲ ಭಾಷೆಯದ್ದು ಕೂಡಾ. ಆದರೆ ಉಳಿದ ಭಾಷೆಗಳು ಮಾತಿನ ವಿಷಯದಲ್ಲಿ ಸಧ್ಯಕ್ಕೆ ಒಕೆ. ಆದರೆ ಲಿಪಿಯ ವಿಷಯ ಬಂದಾಗ ಭಾರತೀಯ ಭಾಷೆಗಳೂ ಇದೇ ರೀತಿಯ ಸಮಸ್ಯೆ ಇದೆ. ಅಕಸ್ಮಾತ್ ಅದಕ್ಕೆ ಪರಿಹಾರ ಕಂಡು ಹಿಡಿಯದಿದ್ದರೆ ಅವು ಮೌಕಿಕ ರೂಪದಲ್ಲಿ ಮಾತ್ರ ಇರುತ್ತವೆ. ಹಲವು ಶತಮಾನದ ನಂತರ ಆಂಗ್ಲ ಭಾಷೆ ಲಿಪಿ ತನ್ನ ಸಾರ್ವಭೌಮತೆಯನ್ನು ಸ್ಥಾಪಿಸಲಿದೆ.

ಸರಕಾರ ಸಮ್ಮೇಳನಕ್ಕೆ ಪ್ರತಿವರ್ಷ ಬಿಡುಗಡೆ ಮಾಡುವ ಹಣವನ್ನು ಕನ್ನಡದಲ್ಲಿ ಸ್ಪೀಚ್ ರಿಕಾಗ್ನಿಶನ್, ಕನ್ನಡ ಸರಕಾರಿ ತಾಣಗಳು, ಕನ್ನಡ ಕಾಲ್ ಸೆಂಟರ್, ಕನ್ನಡದಲ್ಲಿ ಬ್ಯಾಂಕಿಂಗ್, ವಿಮೆ, ಏಟಿಎಂ ಮೊದಲಾದ ಸೌಲಭ್ಯ, ಉನ್ನತ ಶಿಕ್ಷಣ ಹೊರತರಲು ಅದನ್ನು ಜನಪ್ರಿಯಗೊಳಿಸಲು ಬಳಸಬಹುದು. ಏನಂತೀರಾ?

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ತ್ರಿನೇತ್ರ ಮಂಗಳ, 01/14/2014 - 18:54

ರಾಜೇಶ್ ಹೆಗಡೆಯವರೇ...


ಪ್ರಸ್ತುತ ವಿಷಯಕ್ಕೆ ಸಂಭಂದಿಸಿದಂತೆ ಕನ್ನಡಿಗರಾಗಿ ಕನ್ನಡದ ಉಳಿವಿಗಾಗಿ ಕನ್ನಡದ ಬೆಳವಣಿಗೆಗಾಗಿ ಕನ್ನಡಿಗರೆಂದು ಹೇಳಿಕೊಳ್ಳುವ ಪ್ರತಿಯೊಬ್ಬರೂ ತುಂಬಾ ಘಾಡವಾಗಿ ಯೋಚಿಸಬೇಕಾದ ವಿಚಾರಗಳನ್ನು ಅವರ ಪರವಾಗಿ ನೀವು ಚಿಂತಿಸಿ ಉತ್ತಮವಾದ ಲೇಖನ ಬರೆದಿರುತ್ತೀರಿ.


ಯಾರು ಏನೇ ಹೇಳಿಕೊಳ್ಳಲಿ ನಿಮ್ಮ ಈ ಲೇಖನದಿಂದ ಕೆಲವು ಕನ್ನಡಿಗರಾದರೂ ತಾವು ಕನ್ನಡದ ಉಳಿವಿಗಾಗಿ ಯಾವರೀತಿ ಸಹಯೋಗ ನೀಡುತ್ತಿದ್ದಾರೆ ಎಂದು ಆತ್ಮ ವಿಮರ್ಶೆ ಮಾಡಿಕೊಂಡು ಸ್ವಲ್ಪಮಟ್ಟಿಗಾದರೂ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದಾದರೂ ತಮಗನಿಸಿದ ರೀತಿಯಲ್ಲಿ ಕನ್ನಡದ ಸೇವೆಗಾಗಿ ನಡೆದು ಕೊಂಡಲ್ಲಿ ಕನ್ನಡ "ಎನ್ನಡ-ಎಕ್ಕಡ-ಎವಿಡೆ" ಆಗಿ ಉಳಿಯುವುದಿಲ್ಲ. ನಿಮ್ಮ ಈ ಲೇಖನ ಓದಿ ಅಲ್ಪಕಾಲಿಕ ರಾಜಕೀಯ ಲಾಭಕ್ಕಾಗಿ ತೆಗೆದುಕೊಳ್ಳುವ ಅಥವ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ತೆಗಳುತ್ತಿದ್ದೀರೆಂದೂ ಅವರನ್ನು ಹೀಯಾಳಿಸುತ್ತಿದ್ದೀರೆಂದೂ ತಿಳಿದು ಬಹುತೇಕ ಹಿರಿಯ ಲೇಖಕರು ಕವಿಗಳು ಅವರ ವಿರೋಧಿಯೆಂದೂ ಭಾವಿಸಿದರೆ ತಪ್ಪಾಗುವುದಿಲ್ಲ. ಒಟ್ಟಿನಲ್ಲಿ ಒಂದು ಒಳ್ಳೆ ಕಣ್ತೆರೆಸುವಂತಾ ಉಪಯೋಗೀ ಲೇಖನ ಬರೆದಿರುತ್ತೀರಿ ನಿಮ್ಮ ಅನಿಸಿಕೆಗಳಿಗೆ ಮತ್ತು ಆಲೋಚನೆಗಳು ಹಾಗೂ ಸಲಹೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಶುಭವಾಗಲಿ, ಧನ್ಯವಾದಗಳು -ತ್ರಿನೇತ್ರ-ಶಿವ. 

Nagendra Kumar K S ಗುರು, 01/16/2014 - 18:50

ರಾಜೇಶ್ ನಿಮ್ಮ ಲೇಖನ ಚೆನ್ನಾಗಿದೆ. ನೀವು ಹೇಳಿದ ಎಲ್ಲವೂ ಸರಿಯಾಗಿದೆ. ಇಂತಹ ಬೇಕಾಬಿಟ್ಟಿ ಕನ್ನಡ ಸಮ್ಮೇಳನಗಳು ನಮಗೆ ಬೇಕೇ?

ಕೇವಲ ನಿರ್ಣಯಗಳನ್ನು ತೆಗೆದುಕೊಂಡರೆ ಸಾಲದು ಅದು ಬದುಕಿದೆಯೋ? ಸತ್ತಿದೆಯೋ ತಿಳಿಯಬೇಕಲ್ಲಾ. ಕಳೆದು ಹೋದ ೭೯ ಸಮ್ಮೇಳನಗಳ

 ನಿರ್ಣಯ ಏನಾಯಿತು? ದೇವರೇ ಬಲ್ಲ.

ಇನ್ನು hot hot ಅಗಿ ಚರ್ಚೆಗೆ ಬರುತ್ತಿರುವ ವಿಷಯವೆಂದರೆ ಡಬ್ಬಿಂಗ್. ಅದರ ಬಗ್ಗೆಯೂ ಯಾವುದೇ ರೀತಿಯ ಅಭಿಪ್ರಾಯ ಕೊಡಲು ಹಾಗು

ಸಂಗ್ರಹಿಸಲು  ಸಮ್ಮೇಳನ ವಿಫಲವಾಯಿತು. ಬನವಾಸಿ ಬಳಗದಂತಹ ಕನ್ನಡ ಪರ ಸಂಸ್ಥೆಗಳ ಹೋರಾಟ ನಿಜವಾಗಲೂ ಮೆಚ್ಚುವಂತಹುದು.

ಒಟ್ಟಾರೆಯಾಗಿ ೮೦ನೇ ಕನ್ನಡ ಸಮ್ಮೇಳನ ತೀರ ಸಪ್ಪೆಯಾಯಿತು.

ನಿಮಗೆ ಧನ್ಯವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.