Skip to main content

ಕನ್ನಡಿಗ ಈಗಾದರೂ ಎದ್ದೇಳು!!

ಬರೆದಿದ್ದುNovember 5, 2013
3ಅನಿಸಿಕೆಗಳು

 ಬಹುಶಃ ಆರು ವರ್ಷಗಳ ಹಿಂದಿನ ಮಾತಿದು. ಮೈಸೂರಿನ ಅರಮನೆಯ ಆವರಣದಲ್ಲಿ ನಡೆದ ಘಟನೆ. ಅಲ್ಲಿ ಆನೆ ಹಾಗೂ ಒಂಟೆಗಳೆರಡು ನಿಂತಿದ್ದವು. ಒಂದು ಪುಟ್ಟ ಹುಡುಗಿ (ಸುಮಾರು ಎಂಟರಿಂದ ಹತ್ತು ವಯಸ್ಸಿನವಳಿರಬಹುದು) ಒಂದುವರೆ ಅಥವಾ ಎರಡು ವರ್ಷದ ಪಾಪು ಅನ್ನು ಎತ್ತಿಕೊಂಡು ಅವುಗಳನ್ನು ತೋರಿಸಿ ಆನಿ, ಒಂಟಿ ಎಂದು ಹೇಳಿ ತೋರಿಸುತ್ತಾ ಇದ್ದಳು. 

ಆಗ ದಡಬಡನೆ ಬಂದ ಹೆಂಗಸು ಆ ಮಗುವನ್ನು ಆ ಹುಡುಗಿ ಕೈಯಿಂದ  ಕಸಿದುಕೊಂಡು ಆ ಹುಡುಗಿಗೆ ಬೈದು ಮಗುವಿಗೆ ಮತ್ತೆ ತೋರಿಸಿ ಅದು ಆನಿ ಅಲ್ಲ ಎಲಿಫೆಂಟ್ ಇದು ಒಂಟೆ ಅಲ್ಲ ಕ್ಯಾಮೆಲ್ ಎಂದು ಮತ್ತೆ ಮತ್ತೆ ಹೇಳಿದಳು. ಇದನ್ನು ಕಂಡು ನನಗಾಶ್ಚರ್ಯ. ಯಾಕೆಂದರೆ ಸುಮಾರು ಮೂವತ್ತು ವರ್ಷಗಳ ಹಿಂದೆ ನಾನು ಚಿಕ್ಕವನಿದ್ದಾಗ ಈ ಪರಿಸ್ಥಿತಿ ಇರಲಿಲ್ಲ. ನಾನು ಮೊದಲು ಸುತ್ತಮುತ್ತಲಿನ ಪರಿಸರದಲ್ಲಿನ ವಸ್ತುಗಳ ಹೆಸರನ್ನು ಕಲಿತಿದ್ದು ಕನ್ನಡದಲ್ಲಿ. ನನ್ನ ತಂದೆ ಇಂಗ್ಲೀಷ್ ಪರಿಣಿತರಾಗಿದ್ದರೂ ಎಂದೂ ಕನ್ನಡ ಕಲಿಕೆಗೆ ಅಡ್ಡ ಬರಲಿಲ್ಲ. ನಂತರ ಐದನೇ ತರಗತಿಯಲ್ಲಿ ಇಂಗ್ಲೀಷ್ ಕಲಿತೆ.

ಇನ್ನೊಂದು ಘಟನೆ ಕೆಲವು ತಿಂಗಳ ಹಿಂದೆ ನಡೆದಿದ್ದು. ಬಿಗ್ ಬಜಾರ್ ಅಲ್ಲಿ ತಾಯಿಯೊಬ್ಬಳು ಮಗನೊಂದಿಗೆ ಬಂದಿದ್ದಳು. ಆತನಿಗೆ ಸೂಕ್ತ ಟೋಪಿ ಹುಡುಕುತ್ತಿದ್ದಳು. ಮಗ ಟೋಪಿ ರಾಶಿ ತೋರಿಸಿ ಆಕೆಗೆ ಇಂಗ್ಲೀಷ್ ಅಲ್ಲಿ ಇದೇನೆಂದು ಕೇಳಿದ. ಆಕೆ "ಹ್ಯಾಟ್ಸ್" ಎಂದು ಉತ್ತರಿಸಿದಳು. ಆಕೆ ಮಗನನ್ನು ಅಲ್ಲಿಯೇ ಬಿಟ್ಟು  ಸ್ವಲ್ಪ ದೂರದಲ್ಲಿದ್ದ ಸ್ಟೋರ್ ಕೀಪರ್ ಬಳಿ ಬಂದು ಅಚ್ಚ ಕನ್ನಡದಲ್ಲಿ ಮಗನನ್ನು ಆಕೆಗೆ ತೋರಿಸುತ್ತಾ ಕೇಳಿದಳು "ಅವನ ಸೈಜಿನ ಟೋಪಿ ಇದೆಯಾ?" !!  ಈ ಎರಡೂ ಘಟನೆಯಲ್ಲಿ ಒಂದು ಸಾಮ್ಯತೆ ಇದೆ. ಅದೇನೆಂದರೆ ತಾಯಿ ಇಂಗ್ಲೀಷ್ ಕಲಿಸುವ ಭರದಲ್ಲಿ ಮಕ್ಕಳನ್ನು ಕನ್ನಡದಿಂದ ದೂರ ಮಾಡುತ್ತಿರುವದು.

ಇನ್ನೊಂದು ಘಟನೆ ನಾಲ್ಕನೆಯ ಕ್ಲಾಸಿನ ಹುಡುಗನೊಬ್ಬನ ಜೊತೆ ಮಾತನಾಡುತ್ತಿದ್ದೆ. ಯಾವುದೋ ಸಂಖ್ಯೆ ಹೇಳುವಾಗ ಕನ್ನಡದಲ್ಲಿ "ಹದಿನೆಂಟು" ಎಂದು ಹೇಳಿದೆ. ಆ ಹುಡುಗ ಕೇಳಿದ "ಹದಿನೆಂಟು" ಅಂದರೆ ಎಷ್ಟು? ನಾನಂದೆ "ಏಟೀನ್" ಆತನಿಗೆ ಕೂಡಲೇ ಅರ್ಥ ಆಯ್ತು. ಓಹ್ ಗೊತ್ತಾಯ್ತು ಎಂಬಂತೆ ಉದ್ಗಾರ ತೆಗೆದ. ಕುತೂಹಲದಿಂದ ಕೇಳಿದೆ ಕನ್ನಡ ಅಂಕಿಗಳನ್ನು ಸ್ಕೂಲ್ ಅಲ್ಲಿ ಹೇಳಿ ಕೊಟ್ಟಿಲ್ವಾ? ಇಲ್ಲ ಟೀಚರ್ ಇಂಗ್ಲೀಷ್ ಅಂಕಿ, ಮಗ್ಗಿ ಮಾತ್ರ ಹೇಳಿ ಕೊಟ್ಟಿದ್ದಾರೆ ಅದು ಮಾತ್ರ ಬರುತ್ತೆ ಎಂದ. ಆತ ಕನ್ನಡ ಓದುವದೂ ಸಹ ನಿಧಾನ. ಹೆಕ್ಕಿ ಹೆಕ್ಕಿ ಓದುತ್ತಾನೆ. ಇಂಗ್ಲೀಷ್ ಓದುವದರಲ್ಲಿ ಪಂಟ.  ಅತಿ ಆಶ್ಚರ್ಯ ಏನೆಂದರೆ ಆತ ಬೆಂಗಳೂರಿನ ನಗರದಲ್ಲಿ ಕಲಿಯುತ್ತಿಲ್ಲ ಚಿಕ್ಕ ಟೌನ್ ಅಲ್ಲಿ ಓದುತ್ತಿರುವದು. ಇದು ಕರ್ನಾಟಕದ ಎಲ್ಲ ಖಾಸಗೀ ಸ್ಕೂಲ್ ಗಳ ಹಣೆಬರೆಹವೇ?

ಈಗ ಕಲಿತ ತಾಯಂದಿರು/ಖಾಸಗಿ ಶಾಲೆಗಳು/ಪ್ಲೇಸ್ಕೂಲ್ ಗಳು ಇಂಗ್ಲೀಷ್ ನಲ್ಲಿ ಮಾತ್ರ ಹೇಳಿಕೊಟ್ಟು ದೊಡ್ಡವನಾದ ಮೇಲೆ ಬೇಕಿದ್ದರೆ ಕನ್ನಡದಲ್ಲಿ ಕಲಿಯುತ್ತಾನೆ ಎಂದು ಕನ್ನಡಕ್ಕೆ ತಿಲಾಂಜಲಿ ನೀಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಪ್ಲೇ ಸ್ಕೂಲ್ ಅಲ್ಲಿ ಮಕ್ಕಳಿಗೆ ಇಂಗ್ಲೀಷ್ ಅಲ್ಲಿ ಅಂಕೆ/ ಎ ಬಿ ಸಿ ಡಿ / ಹಣ್ಣು, ಬಣ್ಣ,  ವಾರ ಇತ್ಯಾದಿ ಪರಿಚಯ ನೀಡುವ ಪುಸ್ತಕ ನೀಡುತ್ತಾರೆ ಹಾಗೂ ಕಲಿಸುತ್ತಾರೆ. ಇದೇ ವಿಷಯದ ಬಗ್ಗೆ ಕನ್ನಡ ಪುಸ್ತಕ ನೀಡುವದೇ ಇಲ್ಲ!! ಕನ್ನಡ ಎಂಬ ಭಾಷೆ ಇದೆ ಎಂಬುದನ್ನು ಸಹ ಹೇಳಿಕೊಡುವದಿಲ್ಲ. ಇದರ ಹಿಂದೆ ಕನ್ನಡಿಗ ಶಿಕ್ಷಕರು ಕೂಡಾ ಇದ್ದಾರೆನ್ನುವದು ವಿಷಾದದ ಸಂಗತಿ. ಹೀಗಾದಾಗ ಕನ್ನಡ ಮಾತೃ ಭಾಷೆಯಲ್ಲದ ಮಕ್ಕಳು ಕನ್ನಡವನ್ನು ಸರಿಯಾಗಿ ಎಂದೂ ಕಲಿಯುವದಿಲ್ಲ.

ಏಷ್ಟೋ ತಂದೆ ತಾಯಂದಿರ ನಂಬಿಕೆ ಏನೆಂದರೆ ಕನ್ನಡ ಸುಲಭ ಭಾಷೆ. ಅದನ್ನು ಮಕ್ಕಳು ಕಲಿಸದಿದ್ದರೂ ಕಲಿಯುತ್ತಾರೆ. ಇಂಗ್ಲೀಷ್ ಲಿಪಿ ಮೊದಲು ಕಲಿಸಿದರೆ ಸಾಕು. ಸತ್ಯಾಂಶ ಏನೆಂದರೆ ಕನ್ನಡ ಲಿಪಿ ಇಂಗ್ಲೀಷ್ ಕ್ಕಿಂತಲೂ ಸಂಕೀರ್ಣವಾದದ್ದು. ಕನ್ನಡ ಲಿಪಿ ಕಲಿಯುವದು ಸುಲಭದ ವಿಷಯ ಅಲ್ಲ. ಇಂಗ್ಲೀಷ್ ಲಿಪಿ ಅತ್ಯಂತ ಸರಳವಾದದ್ದು. ಅದನ್ನು ಕಲಿಯುವದು ಸುಲಭ. ನಾವು ಇಂಗ್ಲೀಷ್ ಕಲಿಸುವ ಭರದಲ್ಲಿ ಕನ್ನಡ ಕಲಿಸದಿದ್ದರೆ ಮಕ್ಕಳು ಕನ್ನಡ ಸರಿಯಾಗಿ ಎಂದೂ ಕಲಿಯುವದಿಲ್ಲ.

ಇಂದು ಅನೇಕ ಜನ ಕನ್ನಡವನ್ನು ಕಡೆಗಣಿಸುತ್ತಿರುವದಕ್ಕೆ ಮುಖ್ಯ ಕಾರಣ ಕನ್ನಡ ಹೊಟ್ಟೆ ಪಾಡಿನ ಭಾಷೆ ಆಗದಿರುವದು. ಇದು ಕನ್ನಡವನ್ನು ಮುಖ್ಯವಾಹಿನಿಯಿಂದ ದೂರ ದೂಕಿದರೆ ಆಶ್ಚರ್ಯ ಇಲ್ಲ. ಇನ್ನು ಹಲವು ಶತಮಾನ ಕಳೆದರೆ ಕನ್ನಡ ಕೇವಲ ಮಾತನಾಡುವ ಭಾಷೆಯಾಗಿ ಬದಲಾಗಲಿದೆ. ಕನ್ನಡ ಲಿಪಿಯ ಮಹತ್ವ ಕಡಿಮೆ ಆಗಲಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಕಳೆದ ಹಲವು ದಶಕಗಳಲ್ಲಿ ಬಂದ ಅಷ್ಟೂ ತಂತ್ರಜ್ಞಾನಗಳಲ್ಲಿ/ಬಳಕೆಯಲ್ಲಿ ಕನ್ನಡ ಲಿಪಿ ಬೇರೂರಲು ವಿಫಲವಾಗುತ್ತಿದೆ. ಇದಕ್ಕೆ ನಮ್ಮ ಪ್ರಾಮಾಣಿಕ ಪ್ರಯತ್ನದ ಅವಶ್ಯಕತೆ ಇದೆ.

ನಾವು ಕೇವಲ ಕನ್ನಡವನ್ನು ಸಾಂಕೇತಿಕವಾಗಿ ಪೂಜಿಸುತ್ತಾ ಕನ್ನಡ ಅಭಿಮಾನ ಎಂದು ತಿರುಗುತ್ತಾ ಇದ್ದರೆ ಯಾವ ಪ್ರಯೋಜನವೂ ಇಲ್ಲ. ನಮ್ಮಲ್ಲಿ ಒಂದಿಷ್ಟು ಪ್ರಶಸ್ತಿ ಗಳಿಸಿದ ಸಾಹಿತಿಗಳ ಫೋಟೋ ಹಾಕಿ ಕನ್ನಡ ಎಂದರೆ ಇಷ್ಟೇ ಎನ್ನುವ ಅಭಿಪ್ರಾಯ ಮೂಡಿಸುತ್ತಿದ್ದೇವೆ. ಇದು ತಪ್ಪು.  ಸಾಹಿತ್ಯಕ್ಕೆ ಹೊರತಾದ ವಿಭಾಗಗಳಲ್ಲಿ ಕನ್ನಡದ ಬೆಳವಣಿಗೆಯಲ್ಲಿ ಶ್ರಮಿಸಬೇಕು. ಸಾಹಿತ್ಯ ಇಂದು ಜನಸಾಮಾನ್ಯರ ಅಗತ್ಯ ಅಲ್ಲ. ಆ ಕೊರತೆ ಕನ್ನಡವನ್ನು ವಿನಾಶದ ಹಾದಿಗೆ ದೂಕುತ್ತಿದೆ. ನಮಗೇ ಅರಿವೇ ಇಲ್ಲದೇ ನಾವು ಹೆಚ್ಚಿನ ಕಡೆ ಇಂಗ್ಲೀಷ್ ಬಳಸುತ್ತಾ ಕನ್ನಡವನ್ನು ಬರೀ ಸಾಹಿತ್ಯಕ್ಕೆ ಮಾತ್ರ ಸೀಮಿತಗೊಳಿಸುತ್ತಾ ಇದ್ದೇವೆ. ಹೀಗಾದಾಗ ಕನ್ನಡದ ಅಗತ್ಯ ಜನಸಾಮಾನ್ಯರಿಗೆ ಕಡಿಮೆ ಆಗುತ್ತಾ ಹೋಗುತ್ತದೆ. ದಿನಬಳಕೆಯಿಂದ ಕನ್ನಡ ಲಿಪಿ ಮಾಯವಾಗುತ್ತಿರುವದು ಕನ್ನಡ ನಾಶದ ಆರಂಭವಷ್ಟೇ!!

ಕರ್ನಾಟಕದ ಪ್ರತಿ ತಂದೆ ತಾಯಂದಿರಿಗೆ ಸ್ಕೂಲ್ ಗಳಿಗೆ ನನ್ನ ಕಳಕಳಿಯ ವಿನಂತಿ. ಮಕ್ಕಳಿಗೆ ಕನ್ನಡ ಹಾಗೂ ಇಂಗ್ಲೀಷ್ ಎರಡನ್ನೂ ಕಲಿಸಿ. ಇಂಗ್ಲೀಷ್ ಮಾತ್ರ ಕಲಿಸೋಣ. ಹೇಗಿದ್ದರೂ ಕನ್ನಡ ಮುಂದೆ ಕಲಿಯುತ್ತಾನೆ ಎಂದು ಭಾವಿಸಬೇಡಿ. ಆ ಕಾಲ ಎಂದೂ ಬರದು. ಮಕ್ಕಳನ್ನು ಕನ್ನಡದಿಂದ ದೂರವಿಡುವ ಪ್ರಯತ್ನ ಬೇಡ.

ಕೊನೆಗೆ ಕನ್ನಡದ ನಾಶದ ಬಗ್ಗೆ ನಾವು ಎಷ್ಟು ನಿಷ್ಕ್ರಿಯರಾಗಿದ್ದೇವೆ ಅನ್ನುವದಕ್ಕೆ ಒಂದು ಉದಾಹರಣೆ. ನಿಮ್ಮ ಮನೆಯಲ್ಲಿ ಮೈಸೋರ್ ಸ್ಯಾಂಡಲ್ ಸೋಪ್ ಉಪಯೋಗಿಸುತ್ತಿದ್ದರೆ ಮುಂದಿನ ಸಲ ಅದರ ಕವರ್ ಅನ್ನು ಗಮನವಿಟ್ಟು ನೋಡಿ. ಕರ್ನಾಟಕ ಸರಕಾರವೇ ತಯಾರಿಸುವ ಮೈಸೂರ್ ಸ್ಯಾಂಡಲ್ ಸೋಪ್ ಅಲ್ಲಿ ಹೆಸರನ್ನು ಇಂಗ್ಲೀಷ್ ಅಲ್ಲಿ ಹನ್ನೆರಡು (೧೨) ಬಾರಿ ಕನ್ನಡದಲ್ಲಿ ಒಂದು ಬಾರಿ ಬರೆಯಲಾಗಿದೆ. ಇನ್ನೆಲ್ಲ ವಿವರ ಇಂಗ್ಲೀಷ್ ಅಲ್ಲಿ ಮಾತ್ರ ಇದೆ. ಅಬ್ಬಾ ಅಂತೂ ಪ್ಯಾಕ್ ನ ಹಿಂಬಾಗದ ಕೆಳಭಾಗದಲ್ಲಿ ಒಮ್ಮೆಯಾದರೂ ಬರೆದಿದ್ದಾನಲ್ಲ ಪುಣ್ಯಾತ್ಮ ಎಂದು ಪ್ಯಾಕ್ ಒಡೆದರೆ ಸೋಪ್ ಮೇಲೆ 

ದೊಡ್ಡದಾಗಿ ಆದ ಗಾಯಕ್ಕೆ ಬರೆ ಹಾಕುವಂತೆ ಇಂಗ್ಲೀಷ್ ಅಲ್ಲಿ ಸೋಪ್ ಹೆಸರನ್ನು ಕಂಪನಿ ಹೆಸರನ್ನು ಎರಡೂ ಕಡೆ  ಬರೆದಿದ್ದಾರೆ!! ಒಂದು ಕಡೆಯಾದರೂ ಕನ್ನಡದಲ್ಲಿ ಬರೆದಿದ್ದರೆ ಸೋಪಿನಿಂದ ಶ್ರೀಗಂಧದ ಪರಿಮಳ ಬರುವದು ನಿಂತು ಹೋಗುತಿತ್ತೇ?  ಕನಿಷ್ಟ ಕರ್ನಾಟಕದಲ್ಲಿ ಮಾರುವ ಸೋಪ್ ಅಲ್ಲಿ ಕನ್ನಡದಲ್ಲಿ ಮಾತ್ರ ವಿವರ ಹೆಸರನ್ನು ಬರೆದಿದ್ದರೆ ಸೋಪ್ ಮಾರಾಟ ಆಗುತ್ತಿರಲಿಲ್ಲವೇ? ಇಂಗ್ಲೀಷ್ ನಲ್ಲಿ ಮಾತ್ರ ಬರೆಯಿರಿ ಎಂದು ಇಂಗ್ಲೆಂಡಿನ ರಾಜ ಇವರಿಗೆ ಫರಮಾನು ಹೊರಡಿಸಿದ್ದರೇ? ಧಿಕ್ಕಾರವಿರಲಿ ನಮ್ಮ ಕನ್ನಡ ವಿರೋಧಿತನಕ್ಕೆ!!

ನಮ್ಮ ಕನ್ನಡ ಸಮ್ಮೇಳನಗಳು ಇಂತಹ ಅನ್ಯಾಯದ ವಿರುದ್ಧ ದನಿ ಎತ್ತಬೇಕು. ಆಗ ಕನ್ನಡ ಬೆಳೆಯುತ್ತದೆ. ಅದನ್ನು ಬಿಟ್ಟು ಬರಿ ಅಪ್ರಸ್ತುತ ವಿಷಯಗಳ ಮೇಲೆ ಚರ್ಚೆ, ರಾಜಕೀಯ ಲಾಭ, ಪ್ರಚಾರ, ಗಡದ್ದಾದ ಊಟ ಇತ್ಯಾದಿಗಳ ಮೇಲೆ ಕೇಂದ್ರಿಕರಿಸಿದ್ದರೆ ಕಿಂಚಿತ್ ಪ್ರಯೋಜನ ಇಲ್ಲ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ನವೀನ್ ಚ೦ದ್ರ ಗುರು, 11/07/2013 - 21:41

ಪ್ರಸ್ತುತ ಸಂದರ್ಬಕ್ಕೆ ಅರ್ಥವತ್ತಾದ ಲೇಖನ ರಾಜೇಶ್ ರವರೆ, ಇಂದು ಕನ್ನಡಭಾಷೆಯ ಪರಿಸ್ತಿತಿ ದುಸ್ತಿತಿಗೆ ತಲುಪಿರುವುದು ನಿಜಕ್ಕು

 ಕನ್ನಡಿಗರಾದ ನಮಗೆ ಅವಮಾನದ ಸಂಗತಿ, ಆಂಗ್ಲಭಾಷೆಯ ವ್ಯಾಮೋಹ ಕನ್ನಡಭಾಷೆಯ ಅವನತಿಗೆ ಮುಖ್ಯಕಾರಣವಾಗಿದೆ.

 ಎಲ್ಲರೂ ಆಂಗ್ಲಭಾಷೆಯನ್ನು ಕಲಿಸುವ ಭರದಲ್ಲಿ ತಾಯಿಭಾಷೆಗೆ ದ್ರೋಹ ಮಾಡುತ್ತಿದ್ದಾರೆ,,, ಇದೆ ಏನೋ ತಾಯಿಭಾಷೆಗೆ ಮಾಡುತ್ತಿರುವ ಉಪಕಾರ???

Jyothi ಧ, 12/18/2013 - 15:53

ಕನ್ನಡ ಭಾಷೆಯ ಮೇಲೆ ಎಲ್ಲರಿಗೂ ಇದೇ ಒಲವಿದ್ದರೆ ಕನ್ನಡ ಭಾಷೆ ಉಳಿಯಲು ಸಾಧ್ಯ............

ಹೇಮಾವತಿ ಶನಿ, 12/21/2013 - 15:54

 ನಾವು ಕನ್ನಡಿಗರು ಹೇಗಿದ್ದೇವೆ ಎಂದರೆ ನಮ್ಮ ಮಗು ಇಂಗ್ಲೀಷ್ ಕಲಿಯಲಿ ಬೇರೆಯವರ ಮಗು ಕನ್ನಡ ಕಲಿಯುತ್ತೆ ಅನ್ನೋ ಪರಿಸ್ಥಿತಿಲಿದ್ದೀವಿ. ಅಲ್ಲಿ ವಿದೇಶದಿಂದ ಬಂದ ಜಪಾನ್, ಅಮೆರಿಕ ಬೇರೆ ಬೇರೆ ದೇಶದ ಪ್ರಜೆಗಳು ಕನ್ನಡದ ಬಗ್ಗೆ ಒಲವು ತೋರಿ ಆತ್ಮಾಭಿಮಾನದಿಂದ ಕಲಿತು  ಇಲ್ಲೇ ನೆಲೆಯೂರಿ ಕನ್ನಡದ ಸೇವೇ ಮಾಡುತ್ತಿದ್ದಾರೆ. ಹಾಗೂ ನಮ್ಮ ನೆಲದಲ್ಲೇ ಜೀವನಕ್ಕೆ ದಾರಿ ಕೂಡ ಕನ್ನಡದ ಮೂಲಕವೇ ಕಂಡು ಕೊಂಡಿದ್ದಾರೆ ಆದರೆ ನಾವು ಕನ್ನಡಿಗರು ಒಬ್ಬ  ಕನ್ನಡಿಗ ವಿದ್ಯಾವಂತನಿಗೆ ಇಂಗ್ಲೀಷ್ ನಲ್ಲಿ ಮಾತನಾಡಲು ಬರದೆ ಇದ್ದರೆ(ಅವನು ಎಷ್ಟೇ ಚೆನ್ನಾಗಿ ಆ ವಿಷಯವನ್ನು ಆಳವಾಗಿ ತಿಳಿದುಕೊಂಡಿದ್ದಾರೂ ಸಹ)  ಅವನನ್ನು ಕೆಲಸಕ್ಕೆ ಬಾರದವನ್ನಾನ್ನಾಗಿ ನೋಡುತ್ತದೆ. ಉದಾ: ನಾನೇ. ನಾನು ಓದಿದ್ದು ಕನ್ನಡ ಮೀಡಿಯಂ ಪಿ.ಯು.ಸಿ ವರೆಗೆ ಮಾತ್ರ ನಂತರ ಎಲ್ಲಾ ಮನೆಯಲ್ಲೇ ನನಗಿಷ್ಟವಾದ್ದದನ್ನ ಕನ್ನಡದಲ್ಲೆ ಓದಿ ಪದವಿ ಪೂರೈಸಿದರೂ ಸಂದರ್ಶನಕ್ಕೆ ಅಂತ ಹೋದಲೆಲ್ಲಾ ಇಂಗ್ಲೀಷ್ ಮಾತನಾಡಲು ಬರೋದಿಲ್ಲ ಅಂತ ಒಳ್ಳೆ  ಒಳ್ಳೆ ಕೆಲಸಗಳನ್ನು ಕಳೆದುಕೊಳ್ಳಬೇಕಾಯಿತು ಇದು ನನ್ನ ನೆಲದಲ್ಲಿ ನನ್ನ ಭಾಷೆಯಲ್ಲಿ ಕಲಿತ ನನ್ನದೇ ಕಥೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.