Skip to main content

ಕನ್ನಡ ಉಳಿಸುವದು ಬೆಳೆಸುವದು ನಮ್ಮ ಕೈಲೇ ಇದೆ ಕೊನೆಯ ಭಾಗ

ಬರೆದಿದ್ದುJuly 14, 2013
2ಅನಿಸಿಕೆಗಳು

ಈ ಲೇಖನದ ಹಿಂದಿನ ಭಾಗ ಈ ತಂತ್ರಜ್ಞಾನ ಕನ್ನಡಿಗ ಇಂಗ್ಲೀಷ್ ಮಾತನ್ನು ಆಡುವದನ್ನು ಜಾಸ್ತಿ ಮಾಡಬಲ್ಲುದು


ಭಾರತೀಯ ಭಾಷೆಗಳಿಗೆ ಇಂಗ್ಲೀಷ್ ಹಾಗೂ ಹಿಂದಿಗಳಿಂದ ಅಪಾಯ ಇದ್ದರೂ ಕನ್ನಡಕ್ಕೆ ಹೆಚ್ಚು ಬಿಸಿ ಮೊದಲು ಯಾಕೆ ತಟ್ಟುತ್ತಿದೆ? ಈ ಪ್ರಶ್ನೆ ನೀವು ಕೇಳಬಹುದು. ಇದಕ್ಕೆ ಉತ್ತರ ಪಡೆಯಲು ಕರ್ನಾಟಕದಲ್ಲಿ ಎಲ್ಲ ಜನರ ಮಾತೃಭಾಷೆ ಯಾವುದು ಎಂಬುದನ್ನು ಗಮನಿಸಬೇಕು. ಕರ್ನಾಟಕದಲ್ಲಿ ಕನ್ನಡ ಅಷ್ಟೇ ಅಲ್ಲ ಉರ್ದು, ತೆಲುಗು, ಇಂಗ್ಲೀಷ್, ಮರಾಠಿ, ತುಳು, ಕೊಂಕಣಿ, ಕೊಡವ, ತಮಿಳು, ಹಿಂದಿ ಹಾಗೂ ಮಲೆಯಾಳಂ ಮಾತನಾಡುವವರು ಇಲ್ಲಿದ್ದಾರೆ. ಕನ್ನಡ ಮಾತೃಭಾಷೆ ಆಗಿರುವವರ ಸಂಖ್ಯೆ ಸುಮಾರು ೬೦ ರಿಂದ ೬೫% ಮಾತ್ರ ಇರಬಹುದು. ಈ ಕೆಳಗಿನ ಮ್ಯಾಪ್ ಒಮ್ಮೆ ಗಮನಿಸಿ.

ಬೇರೆ ಭಾಷೆಗಳು ಹೆಚ್ಚು ಇರುವ ಜಾಗ ಮಾರ್ಕ್ ಮಾಡಿದ್ದೇನೆ. ಇವಿಷ್ಟು ಭಾಷಿಕರು ಕನ್ನಡ ಕಲಿಯಬೇಕೆಂದರೆ ಅವರಿಗೆ ಮನೆಯಲ್ಲಿ ಸಾಧ್ಯವಾಗದು. ಹೊರ ಜನರ ಜೊತೆ ವ್ಯವಹಾರದಿಂದ ಅಥವಾ ಶಿಕ್ಷಣದಿಂದ ಮಾತ್ರ ಸಾಧ್ಯ. ಆದರೆ ಇತ್ತೀಚೆಗೆ ಖಾಸಗಿ ಇಂಗ್ಲೀಷ್ ಮಾಧ್ಯಮದ ಶಿಕ್ಷಣದಿಂದಾಗಿ ಕನ್ನಡ ಹಿನ್ನಡೆ ಅನುಭವಿಸುತ್ತಿದ್ದರೆ ಉದ್ಯೋಗ, ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಗ್ಲೀಷ್ ಪ್ರಾಬಲ್ಯ ಕನ್ನಡ ಭಾಷೆಯನ್ನು ಅಪ್ರಸ್ತುತ ಭಾಷೆಯನ್ನಾಗಿ ಮಾಡುತ್ತಿದೆ.ಇವರಲ್ಲಿ ಅನೇಕರು ವ್ಯವಹಾರಕ್ಕೆ ಎಷ್ಟು ಬೇಕೊ ಅಷ್ಟು ಕನ್ನಡ ಕಲಿತಿದ್ದರೆ ಇನ್ನು ಕೆಲವರು ಕನ್ನಡ ಮಾತನಾಡಲು ಮಾತ್ರ ಬಲ್ಲರು. ಇಂದು ಅನೇಕ ಜನ ಇಂಗ್ಲೀಷ್ ಅನ್ನು ಕನ್ನಡಕ್ಕಿಂತ ಚೆನ್ನಾಗಿ ಬಳಸಬಲ್ಲರು. ಇದನ್ನು ತಪ್ಪು ಎಂದು ಹೇಳಲು ಬರುವದಿಲ್ಲ. ಇಂದು ಕನ್ನಡದ ಬಳಕೆ ಟಿವಿ, ಪತ್ರಿಕೆ, ಸಾಹಿತ್ಯದ ಹೊರತಾಗಿ ಬೇರೆ ಕಡೆ ನಾವು ಹೆಚ್ಚು ಬಳಸುತ್ತಿಲ್ಲ.ಹೆಚ್ಚಿನ ಕಡೆ ಕನ್ನಡದ ಜೊತೆ ಇಂಗ್ಲೀಷ್ ಕೂಡಾ ಲಭ್ಯವಿದೆ. ಅದರಲ್ಲೂ ಕನ್ನಡ ಸಿನಿಮಾ, ಧಾರಾವಾಹಿಗಳು ಹಿಂದಿ, ಇಂಗ್ಲೀಷ್, ತಮಿಳು, ತೆಲುಗು ಇತ್ಯಾದಿ ಭಾಷೆಗಳ ಎದುರು ಅದ್ಧೂರಿತನವಿಲ್ಲದೇ ಸ್ಪರ್ಧೆ ನೀಡಲು ಅಷ್ಟು ಸಫಲವಾಗಿಲ್ಲ. ಹೊಟ್ಟೆಗೆ ಅನ್ನ ಕೊಡುವ ಭಾಷೆಯಾಗಿ, ಯಾವುದೇ ತಂತ್ರಜ್ಞಾನದಲ್ಲಿ ಬಳಸಲು ಅಥವಾ ಯಾವುದೇ ವಿಷಯದ ಬಗ್ಗೆ ಆಳವಾದ ಜ್ಞಾನ ನೀಡುವಷ್ಟು(ಅಧ್ಯಾತ್ಮ ಹೊರತು ಪಡಿಸಿ) ಸಮರ್ಪಕವಾಗಿ ಕನ್ನಡ ಬೆಳೆದಿಲ್ಲ. ಇದು ಇತರ ಭಾಷಿಕರು ಕನ್ನಡ ಕಡಿಮೆ ಕಲಿಯಲು ಮುಖ್ಯ ಕಾರಣ.


ಈಗ ಇತರ ಭಾಷಿಕರು ಇಂಗ್ಲೀಷ್ ಕಲಿಯುವ ಅನಿವಾರ್ಯತೆಗೆ ಬಿದ್ದಿದ್ದಾರೆ! (ಕನ್ನಡಿಗರೂ ಕೂಡಾ ಆ ಅನಿವಾರ್ಯತೆಗೆ ಸಿಲುಕಿದ್ದಾರೆ ಅದು ಬೇರೆ ಪ್ರಶ್ನೆ) ಆ ಅನಿವಾರ್ಯತೆ ಕನ್ನಡವನ್ನು ಕಲಿಯುವದನ್ನು ಇನ್ನಷ್ಟು ಕಡಿಮೆ ಮಾಡಲಿದೆ. ಬಹುಶಃ ಮುಂದಿನ ಪೀಳೀಗೆಯ ಕನ್ನಡದ ಮಕ್ಕಳು ಇತರ ಭಾಷಿಕರ ಮಕ್ಕಳ ಜೊತೆ ಇಂಗ್ಲೀಷ್ ಅಲ್ಲೇ ಸಂವಹನ ಮಾಡಿದರೂ ಆಶ್ಚರ್ಯ ಇಲ್ಲ.


ಇಂದು ಕನ್ನಡದಲ್ಲಿ ಬರೆಯುವವರು ಇದ್ದಾರೆ. ಆದರೆ ಓದುವವರು ಕಡಿಮೆ! ಓದಿ ಪ್ರತಿಕ್ರಿಯಿಸುವವರಂತೂ ಇನ್ನು ಕಡಿಮೆ. ಇತ್ತೀಚೆಗೆ ಸ್ಮಾರ್ಟ್ ಫೋನುಗಳ ಬಳಕೆ ಜಾಸ್ತಿ ಆದಾಗಿನಿಂದ ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯುವವರು, ಅನಿಸಿಕೆ ಬರೆಯುವವರು ಸ್ವಲ್ಪ ಕಡಿಮೆ ಆಗಿದ್ದಾರೆ. ಬೆರಳೆಣಿಕೆಯ ಉತ್ಸುಕರು, ಕನ್ನಡಾಭಿಮಾನಿಗಳು ಕನ್ನಡ ತಾಣಗಳಲ್ಲಿ ಸಕ್ರಿಯವಾಗಿದ್ದಾರಷ್ಟೇ! ಕನ್ನಡದಲ್ಲಿ ಬ್ಲಾಗ್ ಬರೆಯುವವರು ಹಲವರು ನನ್ನನ್ನು ಕೇಳುತ್ತಾರೆ. ಕನ್ನಡದಲ್ಲಿ ಬ್ಲಾಗ್ ಬರೆದರೆ ಯಾಕೆ ಪ್ರತಿಕ್ರಿಯೆ ಬರುವದಿಲ್ಲ? ಇದಕ್ಕೆ ಹಲವು ಕಾರಣ ಇರಬಹುದು. ಕನ್ನಡ ಟೈಪಿಂಗ್ ಸಮಸ್ಯೆ. ಕನ್ನಡದಲ್ಲಿ ಓದುವವರು ಕಡಿಮೆ. ಇತ್ಯಾದಿ.


ನನ್ನ ಪ್ರಕಾರ ಇದಕ್ಕೆ ಕನ್ನಡದ ಬಗ್ಗೆ ಇರುವ ಕೀಳರಿಮೆ, ಕನ್ನಡ ಎಂದರೆ ಇಷ್ಟು ಎನ್ನುವ ಸಂಕುಚಿತ ಮನೋಭಾವ ಮುಖ್ಯ ಕಾರಣ. ಸಾಹಿತ್ಯಕ್ಕೆ ಹೊರತಾಗಿ ಕನ್ನಡ ಬಳಕೆ ಹೆಚ್ಚಿಸಲು ಪ್ರಯತ್ನಿಸಿದಾಗ ಅದಕ್ಕೆ ನಿರಾಸೆಯ ಪ್ರತಿಕ್ರಿಯೆ ಗ್ಯಾರಂಟಿ. ಉದಾಹರಣೆಗೆ ಕನ್ನಡದ ಬಿಗ್ ಬಾಸ್, ಕೋಟ್ಯಧಿಪತಿ  ಇತ್ಯಾದಿ ಹಲವು ಪ್ರಚಲಿತ ವಿಷಯದ ಬಗ್ಗೆ ಕನ್ನಡದಲ್ಲಿ ಚರ್ಚೆ ಯಾಕೆ ನಾವು ಮಾಡುವದಿಲ್ಲ. ಅದೇ ಇಂಗ್ಲೀಷ್ ಫೋರಂಗಳಲ್ಲಿ ಇದೇ ವಿಷಯದ ಬಗ್ಗೆ ಕನ್ನಡಿಗರ ಸಾವಿರಾರು ಕಮೆಂಟುಗಳು ಕಾಣ ಸಿಗುತ್ತವೆ. ಬೆರಳಣಿಕೆಯಲ್ಲಿರುವ ಕನ್ನಡ ತಾಣಗಳಾದ ವಿಸ್ಮಯನಗರಿ, ಸಂಪದ ಹೀಗೆ ಹಲವು ತಾಣಗಳಲ್ಲಿ ಯಾಕೆ ಇದರ ಬಗ್ಗೆ ನಾವು ಚರ್ಚೆ ಮಾಡುವದಿಲ್ಲ? ಕನ್ನಡದಲ್ಲಿ ಒಬ್ಬ ನುರಿತ ವೈದ್ಯ ಆರೋಗ್ಯದ ಬಗ್ಗೆ ಬರೆದಾಗ ಆತನ ಬರಹ ವ್ಯಂಗ್ಯ ಮಾಡಿ ಅನಿಸಿಕೆ ಬರೆಯಲು ಚೈತನ್ಯ ನಮ್ಮಲ್ಲಿದೆ. ನಕಾರತ್ಮಕ ಕಮೆಂಟುಗಳಿಗೆ ಶಕ್ತಿ ಇದೆ. ಆದರೆ ಸಕಾರತ್ಮಕ, ಬರಹಗಾರರಿಗೆ ಸಲಹೆ ನೀಡುವ ಬಗ್ಗೆ ನಾವು ಅಷ್ಟು ಆಸಕ್ತಿ ತೋರುತ್ತಿಲ್ಲ. ಮನೆಗೆ ಹೊಸ ಕಾರು ತೆಗೆದು ಕೊಂಡಾಗ, ಸ್ಮಾರ್ಟ್ ಫೋನು ಕೊಂಡಾಗ, ಟಿವಿ ಕೊಂಡಾಗ ಕನ್ನಡದಲ್ಲಿ ತಮ್ಮ ಅನುಭವ ಕನ್ನಡದಲ್ಲಿ ಬರೆಯುವದು ಪ್ರಕಟಿಸುವದು ತೀರಾ ಕಡಿಮೆ. ಯಾಕೆ ಹೀಗೆ? ಕನ್ನಡ ಎಂದರೆ ಸಾಹಿತ್ಯಕ್ಕೆ ಮಾತ್ರ ಮೀಸಲು ಎಂಬ ಸಂಕುಚಿತ ಭಾವನೆ. ಆದರೆ ನಾವು ನೆನಪಿಡಬೇಕಾದದ್ದು ಸಾಹಿತ್ಯ ಕೇವಲ ಕೆಲವೇ ಕೆಲವು ಪ್ರತಿಶತ ಜನರ ಅಭಿರುಚಿ ಮಾತ್ರ ಆಗಿರುತ್ತದೆ. ಹೆಚ್ಚಿನ ಜನರ ಓದಿನ ಮೂಲ ಉದ್ದೇಶ ಮನೋರಂಜನೆ, ದಿನಬಳಕೆ ಮಾತ್ರ! ಇಂದು ಮನೋರಂಜಕ ಸಾಹಿತ್ಯ ಹೆಚ್ಚು ಬರಬೇಕೇ ಹೊರತು ಪಠ್ಯ ಸಾಹಿತ್ಯವಲ್ಲ.


ಇಂದು ಇಂಗ್ಲೀಷ್ ಅಲ್ಲಿ ಚೇತನ್ ಭಗತ್, ವಿಕ್ರಂ ಸೇಠ್, ಜೆ.ಕೆ ರಾಲಿಂಗ್, ಅಷ್ಟೇ ಅಲ್ಲ ಹಾಲಿವುಡ್ ಸಿನಿಮಾ ಆಗಿರುವ ಹಲವು ಕಾದಂಬರಿಗಳು ಮನೋರಂಜಕ ಸಾಹಿತ್ಯ ಆಗಿದ್ದು ಜನಪ್ರಿಯತೆ ಹೊಂದಿದೆ. ಇಂದು ನಗರಗಳಲ್ಲಿ ಅವರ ಸಾಹಿತ್ಯ ಓದುವವರು ಜಾಸ್ತಿ. ಕನ್ನಡದಲ್ಲಿ ಯುವ ಪೀಳಿಗೆಯ ಸಾಹಿತಿಗಳು ಹೆಚ್ಚು ಮನೋರಂಜಕ ಸಾಹಿತ್ಯ ಬರೆದು ಅದಕ್ಕೆ ಪ್ರಕಾಶಕರು ಪ್ರಚಾರ ನೀಡಬೇಕು. ಆಗ ಕನ್ನಡದಲ್ಲಿ ಓದು ಹೆಚ್ಚುತ್ತದೆ. ಒಂದು ಭಾಷೆಯಲ್ಲಿ ಓದು ಹೆಚ್ಚಬೇಕಿದ್ದರೆ ಆ ಭಾಷೆ ಇತರ ರಂಗದಲ್ಲಿ ಉಪಯುಕ್ತವಾಗಿರಬೇಕು. ಉದಾಹರಣೆಗೆ ಅನೇಕಜನ ತಮ್ಮ ಆಂಗ್ಲ ಭಾಷೆಯ ಪರಿಣಿತಿಯನ್ನು ಹೆಚ್ಚಿಸಲು ಅದರಲ್ಲಿ ಕಾದಂಬರಿ, ಪುಸ್ತಕ ಓದುತ್ತಾರೆ.


ಕನ್ನಡ ಪ್ರೇಮ ಎಂದರೆ ಎರ್ ಪೋರ್ಟ್, ಬಸ್ ಸ್ಟ್ಯಾಂಡ್ , ರಸ್ತೆಗೆ ಸಾಹಿತಿಗಳ, ರಾಜರ ಹೆಸರಿಡುವದು, ಕನ್ನಡವನ್ನು ಶಾಸ್ತ್ರೀಯ ಭಾಷೆ ಮಾಡುವದು, ಸಾಹಿತ್ಯ ಓದುತ್ತಿಲ್ಲ ಎಂದು ಹಳಹಳಿಸುವದು ಎಂಬ ಭೃಮೆ ನಮ್ಮದಾಗಿದೆ. ಅಪ್ಪಿ ತಪ್ಪಿ ವ್ಯಾಪಾರೀಕರಣ ಗೊಂಡು ಕನ್ನಡಕ್ಕೆ ಸಹಕಾರಿಯಾದ ಕಾರ್ಯಕ್ರಮ, ವಸ್ತುಗಳು ಬಂದರೆ ಅದನ್ನು ಹಣ ದೋಚುತ್ತಾರೆ ಎಂದು ತೆಗಳುವದು ನಮ್ಮ ಜಾಯಮಾನ.


ಇದಕ್ಕೆ ಉದಾಹರಣೆ ಕೊಡುವದಾದರೆ ಬಿಗ್ ಬಾಸ್ ಹಾಗೂ ಸುಧಾ, ತರಂಗದಂತಹ ಪತ್ರಿಕೆ ಕೊಡಬಹುದು. ಸುಧಾ, ತರಂಗದಲ್ಲಿ ಜಾಹೀರಾತು ಯಾಕೆ ಎಂದು ಪ್ರಶ್ನಿಸುತ್ತೇವೆ. ಅದೇ ಸುಧಾ, ತರಂಗದಲ್ಲಿ ಬರುವ ಜಾಹೀರಾತು ತೆಗೆದು ಅದಕ್ಕೆ ತಗಲುವ ಖರ್ಚು ಸೇರಿ ೧೨ರೂ ಬದಲಾಗಿ ೫೦ರೂಗೆ ಇಟ್ಟರೆ ಹಣ ದೋಚುತ್ತಿದ್ದಾರೆ ಎಂದು ತೆಗಳುವದು ಖಚಿತ. ಬಿಗ್ ಬಾಸ್ ಯಾಕೆ ಅದು ನಮ್ಮ ಸಂಸ್ಕೃತಿ ಅಲ್ಲ, ಹಣ ದೋಚುತ್ತಿದ್ದಾರೆ, ಟಿಆರ್.ಪಿ ಹೆಚ್ಚಿಸಲು ಧಾರಾವಾಹಿ ಮಾಡುತ್ತಿದ್ದಾರೆ ಹೀಗೆ ಒಂದೇ ಎರಡೆ ಹಲವು ಕಂಪ್ಲೇಂಟುಗಳು. ಆದರೆ ಬಿಗ್ ಬಾಸ್ ಅನ್ನುವ ಹೆಸರು ಕನ್ನಡದ ಲಿಪಿಯಲ್ಲಿ ಯಾಕೆ ಬರೆದಿಲ್ಲ ಎಂದು ಕೇಳಿದವರೇ ಕಡಿಮೆ. ಆದರೆ ಅದರ ಹೆಗ್ಗಳಿಕೆ ಏನೆಂದರೆ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಕನ್ನಡ ಚಾನೆಲ್ ಕಡೆ ಮುಖಮಾಡದವರೂ ಸಹ ಅದನ್ನು ನೋಡಿದ್ದು. ಕನ್ನಡದಲ್ಲಿ ಬಂಡವಾಳ ಹೂಡಿ ಧಾರಾವಾಹಿಗಳನ್ನು ಕಂಪನಿಗಳು ಮಾಡಲು ಮುಂದೆ ಬರಬೇಕಾದರೆ ಹಾಕಿದ ಬಂಡವಾಳ ಹಿಂದಕ್ಕೆ ಪಡೆಯುವ ಉದ್ದೇಶದಿಂದ ಬರುತ್ತವೆಯೇ ಹೊರತು ನಷ್ಟ ಮಾಡಿ ಕೈ ಸುಟ್ಟಿಕೊೞಲು ಅಲ್ಲ. ಅದರಲ್ಲಿ ತಪ್ಪೇನಿಲ್ಲ. ಒಂದು ಧಾರಾವಾಹಿಯ ಟಿಆರ್.ಪಿ ಜಾಸ್ತಿ ಇದೆ ಅಂದರೆ ಅದನ್ನು ಜಾಸ್ತಿ ಜನ ನೋಡುತ್ತಿದ್ದಾರೆ ಎಂದರ್ಥ. ಒಬ್ಬ ನಿರ್ದೇಶಕನ ಗುರಿ ಹೆಚ್ಚು ಜನ ಕುತೂಹಲದಿಂದ ನೋಡುವಂತ ಧಾರಾವಾಹಿ ಮಾಡಬೇಕು ಎಂದಿರಬೇಕೇ ಹೊರತು ಜನ ಆಕಳಿಕೆ ಹೊಡೆದು ಚಾನೆಲ್ ಚೇಂಜ್ ಮಾಡುವಂತಿರ ಬಾರದು. ಅಂತಹ ಬೋರು ಹೊಡೆಸುವ ಧಾರಾವಾಹಿ/ಸಿನಿಮಾ ನೂರು ಅವಾರ್ಡ್ ಪಡೆದರೂ ಪ್ರಯೋಜನ ಇಲ್ಲ. ಇಂದು ಮನೆ ಮನೆಯಲ್ಲಿ ಡಿವಿಡಿ ಪ್ಲೇಯರ್ ಇದೆ. ಉತ್ತಮ ಸಿನಿಮಾ ಬೇಕಿದ್ದರೆ ಮನೆಯಲ್ಲೇ ನೋಡುವ ವ್ಯವಸ್ಥೆ ಇದೆ.ಆದರೆ ಜನ ನೋಡ ಬಯಸುವ ಸಿನಿಮಾ ಮಾಡಬೇಕಷ್ಟೇ. ಹಲವು ಚಾನೆಲ್ ಗಳಿವೆ ಒಂದು ಬೋರಾದರೆ ಬೇರೆ ಚಾನೆಲ್ ಬದಲಾಯಿಸಿ ನೋಡುತ್ತಾರೆ. ನಿದಾನಗತಿಯ ಧಾರಾವಾಹಿ/ಸಿನಿಮಾ ಶ್ರೇಷ್ಟ ಅನ್ನೋ ಭ್ರಮೆ ಕೆಲ ನಿರ್ದೇಶಕರಿಗೆ ಇದ್ದಂತಿದೆ. ಅವು ಎಷ್ಟು ಬೋರು ಹೊಡೆಸುತ್ತೆ ಅನ್ನೋದನ್ನು ನೋಡಿಯೇ ತಿಳಿಯಬೇಕು.ಕಲಾತ್ಮಕ ಚಿತ್ರದ ಜೊತೆ ಹದವಾಗಿ ಮನೋರಂಜನೆ ಹಾಗೂ ಟೆಕ್ನಾಲಾಜಿ ಬಳಸಿ ತೆಗೆದಾಗ ಮಾತ್ರ ಈಗಿನ ಪೀಳಿಗೆ ನೋಡುತ್ತಾರೆ ಎನ್ನುವ ಸತ್ಯ ನಾವು ಅರಿಯಬೇಕಾಗಿದೆ. ಹಾಲಿವುಡ್ ಕಲಾತ್ಮಕ ಚಿತ್ರಗಳನ್ನು ನೋಡಿ ನಾವು ಕಲಿಯಬೇಕಾದ್ದು ಬೇಕಾದಷ್ಟಿದೆ.


ಸಂಕ್ಷಿಪ್ತವಾಗಿ ಹೇಳುವದಾದರೆ ಕನ್ನಡ ಬಲ್ಲವರು ಜಾಸ್ತಿ ಇರುವಾಗಲೇ ಕನ್ನಡ ಬೆಳವಣಿಗೆ ಹೀಗಿರುವಾಗ ಕನ್ನಡ ಕಲಿಯುವವರೇ ಕಡಿಮೆ ಇರುವ ಮುಂದಿನ ಕಾಲದಲ್ಲಿ ಹೇಗಿದ್ದೀತು? ಇಂದು ಕನ್ನಡ ಅನಿವಾರ್ಯ ಭಾಷೆಯಾಗಿ ಉಳಿದಿಲ್ಲ. ಈ ಸಂದರ್ಭದಲ್ಲಿ ಒಂದು ಅಕ್ಬರ್ ಬೀರಬಲ್ಲ ಕಥೆ ನೆನಪು ಬರುತ್ತಿದೆ.  ಒಮ್ಮೆ ಅಕ್ಬರ್ ಬಾದಶಾ ಒಂದು ಟಬ್ ಅಲ್ಲಿ ಬೆಳಿಗ್ಗೆ ಮುಂಜಾವು ಹಾಲು ತಂದು ಸುರಿಯಿರಿ ಎಂದು ಆಜ್ಞೆ ಮಾಡಿದನಂತೆ. ಎಲ್ಲಾ ಹೇಗಿದ್ದರೂ ಬೇರೆಯವರು ಹಾಲು ಹಾಕುತ್ತಾರೆಂದು ನೀರು ತಂದು ಸುರಿದರಂತೆ. ಬೆಳಿಗ್ಗೆ ನೋಡಿದರೆ ಟಬ್ ತುಂಬಾ ನೀರು ತುಂಬಿತ್ತಂತೆ. ಇದೇ ರೀತಿ ಕನ್ನಡಮ್ಮ ಕನ್ನಡ ಬಳಸಿ ಕನ್ನಡ ಕಲಿಸಿ ಎಂದು ಕೋರಿದ್ದಾಳೆ. ಏನಾಗುತ್ತಿದೆ ಎಂಬುದನ್ನು ನಾನು ಹೇಳಬೇಕಿಲ್ಲ.


ಕನ್ನಡ ಉಳಿಸಲು ಏನು ಮಾಡಬೇಕು?  • ಕನ್ನಡವನ್ನು ಸಾಹಿತ್ಯಕ್ಕೆ ಹೊರತಾದ ಬಳಕೆಗಳಲ್ಲಿ ಹುರಿದುಂಭಿಸಿ.

  • ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಕನ್ನಡ ಬಳಸಿ.

  • ಮಕ್ಕಳಿಗೆ ಕನ್ನಡ ಕಲಿಸಿ.

  • ಕನ್ನಡಕ್ಕೆ ಬೇರೆ ಭಾಷೆಯ ಉತ್ತಮ ಪುಸ್ತಕಗಳು, ಧಾರಾವಾಹಿಗಳು, ಸಿನಿಮಾ ಭಾಷಾಂತರ ಆಗಬೇಕು.

  • ಕನ್ನಡ ಬ್ಲಾಗ್ ಗಳಿಗೆ ಅನಿಸಿಕೆ ಹಾಕುವದರ ಮೂಲಕ ಬೆಂಬಲ ನೀಡಿ. ನೆನಪಿಡೀ ಇಂದು ಅಂತರ್ಜಾಲದಲ್ಲಿ ಜ್ಞಾನ, ಮನೋರಂಜನೆ ಹಂಚುವ ಕೆಲಸ ದಿನಪತ್ರಿಕೆ ತಾಣ ಬಿಟ್ಟರೆ ಮಾಡುತ್ತಿರುವದು ಬ್ಲಾಗ್ ಮಾತ್ರ. ಕನ್ನಡದಲ್ಲಿ ನಿಮ್ಮ ಜ್ಞಾನವನ್ನು ಬರೆಯಿರಿ. ಕನ್ನಡದಲ್ಲಿ ಚರ್ಚೆ ಮಾಡಿ. ಇತ್ತೀಚಿನ  ಕನ್ನಡ ಸಿನಿಮಾ, ದಾರಾವಾಹಿ, ಕಾದಂಬರಿ, ಪುಸ್ತಕದ ಬಗ್ಗೆ ಹೆಚ್ಚು ಚರ್ಚೆ ಕನ್ನಡದಲ್ಲಿ ಮಾಡಿ. ವೈಧ್ಯಕೀಯ, ಕಾನೂನು, ವ್ಯಾಪಾರ ಹಲವು ವಿಷಯದ ಬಗ್ಗೆ ಜ್ಞಾನ ಕನ್ನಡದಲ್ಲಿ ಪಸರಿಸಿ.

  • ಕನ್ನಡದಲ್ಲಿ ವ್ಯಾಪಾರಿಕರಣಕ್ಕೆ ಬೆಂಬಲ ನೀಡುವದು. ಅದು ಕನ್ನಡವನ್ನು ಹೊಟ್ಟೆಪಾಡಿನ ಭಾಷೆಯನ್ನಾಗಿ ಮಾಡುತ್ತದೆ.

  • ಮದುವೆ, ಮುಂಜಿ, ಬರ್ತ್ ಡೇ ಎಲ್ಲಾ ಕಡೆ ಕನ್ನಡ ಲಿಪಿ ಸಾಧ್ಯವಿದ್ದಷ್ಟು ಬಳಸಿ.

ಹೀಗೆ ಹಲವು ರೀತಿಯಲ್ಲಿ ಕನ್ನಡ ಬೆಳೆಸಲು ಉಳಿಸಲು ಅವಕಾಶ ನಮಗಿದೆ. ನೆನಪಿಡಿ ಒಮ್ಮೆ ಕನ್ನಡದ ಅವನತಿಯ ವೇಗ ಹೆಚ್ಚಿದಾಗ ಶತಪ್ರಯತ್ನ ಮಾಡಿದರೂ ಅದನ್ನು ಮತ್ತೆ ಮುಖ್ಯವಾಹಿನಿಯ ಭಾಷೆಯನ್ನಾಗಿ ಮಾಡಲು ಸಾಧ್ಯವಿಲ್ಲ.


 ಹಾಂ ಒಂದು ವಿಷಯ ನನ್ನ ವಿಸ್ಮಯ ಮಕ್ಕಳ ಪುಸ್ತಕಗಳಾದ "ಹಣ್ಣುಗಳು" ಹಾಗೂ "ಅಂಕೆಗಳು" ಬೆಂಗಳೂರಿನ ಗಾಂಧಿ ಬಜಾರಿನ ಅಂಕಿತ ಪುಸ್ತಕ ಮಳಿಗೆಯಲ್ಲಿ ಲಭ್ಯವಿದೆ. ಖರೀಧಿಸಿ ಬೆಂಬಲಿಸಿ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ತ್ರಿನೇತ್ರ ಮಂಗಳ, 07/23/2013 - 17:05

ರಾಜೇಶ್ ಅವರಿಗೆ ನಮಸ್ಕಾರ,


ಕೆಲಸದ ಒತ್ತಡದಿಂದಾಗಿ ಬರಲಾಗದೇ ಬರಹಗಳನ್ನೂ ನೀಡಲಾಗದೇ ಇದ್ದು ಬಹಳ ತಿಂಗಳುಗಳ ನಂತರ ಮತ್ತೆ ಈ ತಾಣಕ್ಕೆ ಭೇಟಿಕೊಟ್ಟಾಗ ನನ್ನ ಧ್ಯಾನವನ್ನು ಆಕರ್ಷಿಸಿದ್ದು ಈ ನಿಮ್ಮ ಲೇಖನ.  ಕನ್ನಡ ಭಾಷೆಯ ಅವನತಿಗೆ ಕಾರಣವೆನ್ನಬಹುದಾದ ಹಲವಾರು ಅಂಶಗಳನ್ನು ತುಂಬಾ ಆಳವಾಗಿ ಅಧ್ಯಯನ ಮಾಡಿ ಸರಳವಾಗಿ ಬರೆದು ತಿಳಿಸಿರುವ ಒಂದು ಉತ್ತಮ ಲೇಖನ ಇದು ಎಂದರೆ ತಪ್ಪಾಗಲಾರದು. ನಿಮ್ಮದೇ ಆದ ರೀತಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಸರಳ ವಿಧಾನಗಳನ್ನು ತಿಳಿಸಿರುತ್ತೀರಿ ಅವು ಇಂದಿನ ಕನ್ನಡ ಬಂದರೂ ಬಾರದೆಂದು ಸ್ಟೈಲಾಗಿ ಇಂಗ್ಲೀಷಿನಲ್ಲಿ ಹೇಳುವ ವ್ಯವಹರಿಸುವ ನಮ್ಮ ಕನ್ನಡಿಗರ ಮಕ್ಕಳಿಗೂ ಅಂತಾವರ ಪಾಲಕ ಪೋಷಕ-ಗುರುಗಳಿಗೂ ಮಾರ್ಗಧರ್ಶನಕಾರಿಯಾಗಲಿ ಎಂದು ಆಶಿಸುವೆ.  ಧನ್ಯವಾದಗಳೊಂದಿಗೆ -ತ್ರಿನೇತ್ರ.

ರಾಜೇಶ ಹೆಗಡೆ ಗುರು, 07/25/2013 - 06:54

ನಮಸ್ಕಾರ ತ್ರಿನೇತ್ರ ಅವರೇ,

ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ಹುಂ ನನ್ನ ಬಳಿ ಸಾಧ್ಯವಿದ್ದಷ್ಟು ಪ್ರಯತ್ನಿಸಿದ್ದೇನೆ.

ಅಂತಹ ಪಾಲಕರಿಗೆ ಮಾರ್ಗದರ್ಶನವಾದರೆ ನಾವು ಧನ್ಯರು. ಆದರೆ ಜನ ಸಾಮಾನ್ಯರು ದಿನಬಳಕೆಯಲ್ಲಿ ಹೆಚ್ಚು ಉಪಯುಕ್ತವಾಗಿರುವ ಭಾಷೆಗೆ ಒಲವು ತೋರುವದು ಸಹಜ. ನಾವು ಕನ್ನಡವನ್ನು ಆ ನಿಟ್ಟಿನಲ್ಲಿ ಬೆಳೆಸಬೇಕು. ಇಂಗ್ಲೀಷ್ ಗೆ ಬೆಳೆಯಲು ಅಮೇರಿಕದಲ್ಲಿನ ಬಂಡವಾಳವೇ ಸಾಕು. ಕನ್ನಡದಲ್ಲಿ ವ್ಯಾಪಾರೀಕರಣ ಸರಿಯಾದ ಅವಕಾಶ ಇಲ್ಲದೇ ಅದು ಹೇಗೆ ಸಾಧ್ಯ ಅನ್ನುವದು ಯಕ್ಷ ಪ್ರಶ್ನೆ. ಪ್ರತಿಯೊಂದಕ್ಕೂ ನಾವು ಸರಕಾರವನ್ನು ಅವಲಂಭಿಸಲು ಸಾಧ್ಯವಾಗದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.