Skip to main content

ಅಮೇರಿಕ, ಆಸ್ಟ್ರೇಲಿಯಾದ ಮೂಲ ಭಾಷೆ ಇಂಗ್ಲೀಷ್ ಅಲ್ಲ!!

ಬರೆದಿದ್ದುJune 18, 2013
2ಅನಿಸಿಕೆಗಳು

ಈ ಲೇಖನದ ಮೊದಲ ಭಾಗ ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲೇ ಇದೆ - ಭಾಗ ೧

ಅಮೇರಿಕದ ಮೂಲ ಭಾಷೆ ಯಾವುದು ಎಂದು ಕೇಳಿದರೆ ನೀವು ಏನು ಹೇಳುತ್ತೀರಾ? ಇನ್ನು ಆಸ್ಟ್ರೇಲಿಯಾದ್ದು? ಇಂಗ್ಲೀಷ್? ಖಂಡಿತ ಅಲ್ಲ!!

ಯುರೋಪಿಯನ್ನರ ವಸಾಹತುಶಾಹಿ ಆಡಳಿತಕ್ಕೆ ಒಳಪಡುವ ಮುನ್ನ ಅಮೇರಿಕದಲ್ಲಿ ಹಲವಾರು ಭಾಷೆಗಳನ್ನು ಮಾತನಾಡುತ್ತಿದ್ದರು. ಉತ್ತರ ಅಮೇರಿಕ ಹಾಗೂ ದಕ್ಷಿಣ ಅಮೇರಿಕ ಸೇರಿ ಸಾವಿರಕ್ಕೂ ಹೆಚ್ಚು ಭಾಷೆ ಇತ್ತೆಂದು ಅಂದಾಜಿಸಲಾಗಿದೆ. ಈ ಕೆಳಗಿನ ಚಿತ್ರ ಒಮ್ಮೆ ನೋಡಿ (ಕೃಪೆ ವಿಕಿಪಿಡಿಯಾ). ಇಲ್ಲಿ ಉತ್ತರ ಅಮೇರಿಕದಲ್ಲಿದ್ದ ಭಾಷಾ ವೈವಿಧ್ಯತೆಯನ್ನು ಕಾಣಬಹುದು.

11ನೇ ಶತಮಾನದಲ್ಲಿ ಹಾಗೂ ನಂತರ ೧೫ನೇ ಶತಮಾನದಲ್ಲಿ ಯುರೋಪಿಯನ್ನರ ವಸಾಹತು ನಿರ್ಮಾಣಕ್ಕೂ ಮುಂಚೆ ಸುಮಾರು ಸಾವಿರ ಭಾಷೆ ಅಮೇರಿಕದಲ್ಲಿ ಮಾತನಾಡಲ್ಪಡುತಿತ್ತು.ಕ್ವೆಚುವಾ,  ಐಮರಾ, ಗೌರಾನಿ ಹಾಗೂ ನಹೌಟ್ಲ್ ಮೊದಲಾದ ಭಾಷೆಯನ್ನು ದಶಲಕ್ಷಕ್ಕೂ ಹೆಚ್ಚು ಜನ ಮಾತನಾಡುತ್ತಿದ್ದರು. ಆದರೆ ಇಂದು ಯುಎಸ್.ಎ, ಕೆನಡಾ ಹಾಗೂ ಬ್ರೆಜಿಲ್ ಅಲ್ಲಿ ಹೆಚ್ಚಿನ ಮೂಲ ಭಾಷೆಗಳು ನಾಶವಾಗುತ್ತಿವೆ. ಹೊಸ ಪೀಳಿಗೆ ಅವನ್ನು ಮನೆಯಲ್ಲೂ ಮಾತನಾಡುವದು ಕಡಿಮೆ ಆಗುತ್ತಿದೆ.

ಯು.ಎಸ್.ಎ ಅಲ್ಲಿ ಇಂಗ್ಲೀಷ್, ಸ್ಪಾನಿಷ್, ಕೆನಡಾದಲ್ಲಿ ಇಂಗ್ಲೀಷ್, ಫ್ರೆಂಚ್, ಬ್ರೆಜಿಲ್ ಅಲ್ಲಿ ಪೋರ್ಚುಗಲ್ ಭಾಷೆಗಳು ಪ್ರವರ್ಧಮಾನಕ್ಕೆ ಬಂದಿವೆ. ಇವೆಲ್ಲ ಭಾಷೆಗಳು ಯುರೋಪಿಯನ್ನರು ೧೭೦೦ರ ನಂತರ ತಮ್ಮ ವಸಾಹತುವನ್ನು ಅಮೇರಿಕದಲ್ಲೆಡೆ ಸ್ಥಾಪಿಸಿದ ನಂತರ ಬಂದ ಭಾಷೆಗಳು. ಇತ್ತೀಚೆಗೆ ಕೆನಡಾದಲ್ಲಿ ಫ್ರೆಂಚ್ ಮಾತನಾಡುವವರೂ ಸಹ ಕಡಿಮೆಯಾಗುತ್ತಿದ್ದಾರೆ.

ಆಸ್ಟ್ರೇಲಿಯಾದಲ್ಲೂ ಪರಿಸ್ಥಿತಿ ವಿಭಿನ್ನವೇನಲ್ಲ!! ಇಂಗ್ಲೀಷ್ ಕ್ಕಿಂತ ಮುಂಚೆ ಅಲ್ಲಿದ್ದ ಭಾಷಾ ವೈವಿಧ್ಯತೆಯನ್ನು ಗಮನಿಸೋಣ.

ಬ್ರಿಟಿಶ್ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟ ಆಸ್ಟ್ರೇಲಿಯಾದಲ್ಲಿ ಇಂದು ಸುಮಾರು 80% ಜನ ಆಸ್ಟ್ರೇಲಿಯಾದಲ್ಲಿ ಬರೀ ಇಂಗ್ಲೀಷ್ ಮಾತನಾಡುತ್ತಾರೆ.

ಇನ್ನು ಇಂಗ್ಲೀಷ್ ಭಾಷೆಯ ಕಡೆ ವಾಲುತ್ತಿರುವ ದಕ್ಷಿಣ ಆಫ್ರಿಕಾದಲ್ಲಿ ಅಲ್ಲಿನ ಭಾಷೆಗಳು ನಾಶವಾಗುತ್ತಿದೆ. ಆಫ್ರಿಕಾದ ರಾಜ್ಯಗಳ ಅಧಿಕೃತ ಭಾಷೆಗಳನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು. ಇಂದು ಇಂಗ್ಲೀಷ್ ಅನ್ನು ಮಾತನಾಡುವದು ಆಫ್ರಿಕಾದಲ್ಲಿ ಒಂದು ಪ್ರತಿಷ್ಟೆಯ ಪ್ರಶ್ನೆ. ಇದೂ ಕೂಡಾ ಒಮ್ಮೆ ಯುರೋಪಿಯನ್ನ ವಸಾಹತು ಆಗಿತ್ತು.

ಇದೇ ರೀತಿ ಭಾರತ, ನ್ಯೂಜಿಲ್ಯಾಂಡ್, ಹಾಂಗ್ ಕಾಂಗ್ ಹೀಗೆ ಹಲವು ಪ್ರದೇಶಗಳು ಇಂಗ್ಲೀಷ್ ಭಾಷೆಯ ಪ್ರಭಾವಕ್ಕೆ ಒಳಗಾಗಿವೆ. ಇಂದು ಇಂಗ್ಲೀಷ್ ಮಾತನಾಡಬಲ್ಲ ಜನ ಹೆಚ್ಚು ಇರುವ ದೇಶಗಳನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು. ಗಾಡ ನೀಲಿ ಬಣ್ಣ ಇಂಗ್ಲೀಷ್ ಸಾರ್ವಭೌಮತೆ ಸೂಚಿಸಿದರೆ ತಿಳಿ ಹಸಿರು ಇಂಗ್ಲೀಷ್ ಬಳಕೆ ಹೆಚ್ಚಿರುವದನ್ನು ಸೂಚಿಸುತ್ತದೆ.

 ಈ ದೇಶಗಳಲ್ಲಿ ಹೆಚ್ಚು ಇಂಗ್ಲೀಷ್ ಬೆಳೆದು ಅಲ್ಲಿನ ಭಾಷೆಗಳು ನಾಶವಾಗುತ್ತಿರಲು ಕಾರಣವೇನು? ಇದಕ್ಕೆ ನಾವು ಇತಿಹಾಸದ ಪುಟಗಳನ್ನು ತಿರುವಿ ಹಿಂದಕ್ಕೆ ನೋಡಬೇಕು.ಯುರೊಪಿಯನ್ನರು ತಮ್ಮ ಜನಸಂಖ್ಯೆ ಜಾಸ್ತಿ ಆದಾಗ ಬೇರೆ ಬೇರೆ ಖಂಡಗಳಿಗೆ ಹೋಗಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಅದರಲ್ಲಿ ಬ್ರಿಟಿಶ್ ಸಾಮ್ರಾಜ್ಯವೂ ಒಂದು. ಬ್ರಿಟಿಷ್ ಸಾಮ್ರಾಜ್ಯ ಪ್ರಪಂಚದ ಹಲವು ಭಾಗಗಳಲ್ಲಿ ಆಳುತ್ತಿದ್ದು ಅವುಗಳನ್ನು ಈ ಕೆಳಗಿನ ಚಿತ್ರದಲ್ಲಿ ಕಾಣಬಹುದು. ಬ್ರಿಟಿಶರು ತಮ್ಮ ವಸಾಹತುಗಳಲ್ಲಿ ಶಿಕ್ಷಣಕ್ಕೆ, ಆಡಳಿತಕ್ಕೆ, ವ್ಯಾಪಾರಕ್ಕೆ ಇಂಗ್ಲೀಷ್ ಅನ್ನು ಬಳಸಿದರು. ಪರಿಣಾಮ? ಅಲ್ಲಿನ ಭಾಷೆಗಳು ದುರ್ಬಲಗೊಂಡು ಇಂಗ್ಲೀಷ್ ಸಾರ್ವಭೌಮ ಭಾಷೆಯಾಗಿ ರೂಪುಗೊಂಡಿತು. ಎಲ್ಲೆಲ್ಲಿ ಬ್ರಿಟಿಶರು ಆಡಳಿತ ನಡೆಸಿದರೋ ಅಲ್ಲಿ ಲೋಕಲ್ ಭಾಷೆಗಳು ಈಗಲು ಇವೆ. ಆದರೆ ದುರ್ಬಲವಾಗಿ. ಈಗಲೂ ಅಮೇರಿಕದಲ್ಲಿ, ಆಸ್ಟ್ರೇಲಿಯಾದಲ್ಲಿ ನೂರಾರು ಭಾಷೆಗಳಿವೆ. ಅವುಗಳನ್ನು ಆಡುವವರಿದ್ದಾರೆ. ಆದರೆ ಮುಖ್ಯ ಸಂಪರ್ಕ ಭಾಷೆ, ವ್ಯವಹಾರ ಭಾಷೆ ಇಂಗ್ಲೀಷ್ ಮಾತ್ರ. ಅವೆರಡೂ ಮುಂದುವರಿದ ದೇಶಗಳು. ಇನ್ನು ಆಫ್ರಿಕಾ, ಇಂಡಿಯಾದಂತಹ ಮುಂದುವರಿಯುತ್ತಿರುವ ದೇಶಗಳಲ್ಲಿ ಇನ್ನೂ ಲೋಕಲ್ ಭಾಷೆಗಳು ಬಳಕೆಯಲ್ಲಿದೆ. ಆದರೆ ಪೀಳಿಗೆಯಿಂದ ಪೀಳಿಗೆಗೆ ಬಳಕೆ ಕಡಿಮೆ ಆಗುತ್ತಿದೆ. ಬಹುಶಃ ಇವೆರಡೂ ದೇಶಗಳು ಮುಂದುವರಿದ ದೇಶಗಳು ಅನ್ನಿಸಿಕೊೞುವಾಗ ಇಂಗ್ಲೀಷ ಸರ್ವವ್ಯಾಪಿ ಆಗಿ ಲೋಕಲ್ ಭಾಶೆಗಳು ಅರೆ ಜೀವವಾಗಿರುತ್ತವೆ.

 

ಒಟ್ಟಿನಲ್ಲಿ ಹೇಳುವದಾದರೆ ಯಾವ ಯಾವ ದೇಶದಲ್ಲಿ ಇಂಗ್ಲೀಶರು ಆಡಳಿತ ನಡೆಸಿದರೋ ಅಲ್ಲಿ ಆಂಗ್ಲ ಭಾಷೆ ತನ್ನ ಪ್ರಭಾವದಿಂದ ಅಲ್ಲಿನ ಭಾಷೆಗಳ ಧಮನ ನಡೆಸಿದೆ. ನೆನಪಿಡಿ ಭಾರತವೂ ಇದಕ್ಕೆ ಹೊರತಲ್ಲ. ಸ್ವಾತಂತ್ರ್ಯ ಬಂದಾಗ ಮೊದ ಮೊದಲು ಇಂಗ್ಲೀಷರ ವಿರುದ್ಧ ಸಿಟ್ಟಿನ ಕಾರಣ ಇಲ್ಲಿನ ಭಾಷೆಗಳು ಬೆಳೆದರೂ ಹಲವು ದಶಕಗಳಿಂದ ಭಾರತೀಯ ಭಾಷೆಗಳ ಅಂಕೆ, ಲಿಪಿ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಮಾತು ಕಡಿಮೆ ಆಗಿದೆ. ಆಗುತ್ತಿದೆ. ಜಾಗತೀಕರಣ, ತಂತ್ರಜ್ಞಾನಗಳಲ್ಲಿ ಇಲ್ಲಿನ ಭಾಷೆಗಳು ಬಳಕೆ ಹೆಚ್ಚಲು ವಿಫಲವಾದದ್ದು, ಕೆಲವು ವಿಷಯ ಜ್ಞಾನಗಳು ಲೋಕಲ್ ಭಾಷೆಗಳಲ್ಲಿ ಬರದೇ ಹೋಗಿದ್ದು ಇದಕ್ಕೆ ಮುಖ್ಯ ಕಾರಣ.

ಇಂದು ಹೆಚ್ಚಿನ ಕಂಪನಿಗಳ ವ್ಯವಹಾರ ಭಾರತದಲ್ಲಿ ನಡೆಯುತ್ತಿರುವದು ಇಂಗ್ಲೀಷ್ ಅಲ್ಲಿಯೇ. ಇಂಗ್ಲೀಷ್ ಬರದಿದ್ದರೆ ಕೆಲಸ ಸಿಗದಂತಹ ವಾತಾವರಣ ಇದೆ. ಇಂಗ್ಲೀಷ್ ಪ್ರತಿಷ್ಟೆಯ ಭಾಷೆ ಕೂಡಾ. ಲೋಕಲ್ ಭಾಷೆಗಳು ಇಂಗ್ಲೀಷ್ ಭಾಷೆಯ ಮುಂದೆ ಸ್ಪರ್ಧಿಸಲು ಸೋತಿವೆ. ಇಂಗ್ಲೀಷ್ ಮಾಧ್ಯಮ ಶಿಕ್ಷಣ ಖಾಸಗೀಕರಣದ ಸಹಾಯದಿಂದ ಗುಣಮಟ್ಟದಲ್ಲಿ ಬೆಳೆದು ನಿಂತಿದ್ದರೆ ಕನ್ನಡ ಶಾಲೆಗಳು ಸೊರಗಿವೆ. ಕರ್ನಾಟಕ ಸರಕಾರದಲ್ಲಿ ಕನ್ನಡ ಬಳಕೆ ಹೆಚ್ಚಿದೆ. ಆದರೆ ಖಾಸಗಿ ಕಂಪನಿಗಳಲ್ಲಿ ಹಾಗೂ ಕೇಂದ್ರ ಸರಕಾರದ ಆಡಳಿತಕ್ಕೆ ಒಳಪಡುವ ಕಂಪನಿಗಳಲ್ಲಿ ಇಂಗ್ಲೀಷ್ ಬಳಕೆ ಜಾಸ್ತಿ.  ಸಾಮಾನ್ಯವಾಗಿ ಮೊದ ಮೊದಲು ಲೋಕಲ್ ಭಾಷೆ ಹಾಗೂ ಇಂಗ್ಲೀಷ್ ಎರಡನ್ನೂ ಕಲಿತರೂ ನಂತರದ ಪೀಳಿಗೆಗಳು ವ್ಯವಹಾರ ಭಾಷೆಯನ್ನು ಚೆನ್ನಾಗಿ ಕಲಿತು ಇನ್ನೊಂದು ಭಾಷೆಯನ್ನು ಮನೆಯಲ್ಲಿ ಮಾತನಾಡುವ ಮಟ್ಟಿಗೆ ಮಾತ್ರ ಕಲಿಯಲಾರಂಭಿಸುತ್ತದೆ.

ಇನ್ನೊಂದು ವಿಚಾರ ಗಮನಿಸೋಣ.  ಮೊದಲೇ ಹೇಳಿದಂತೆ ಸ್ವಾತಂತ್ರ್ಯ ಬಂದಾಗ ಇಂಗ್ಲೀಷ್ ಭಾಷೆಗೆ ಮೊದಲು ವಿರೋಧ ಬಂತು. ಆಮೇಲೆ ಕೊನೆ ಕೊನೆಗೆ ಅದನ್ನು ಒಪ್ಪಿಕೊಂಡರು. ಇಂದು ಅಮೇರಿಕನ್ ಹಾಗೂ ಆಸ್ಟ್ರೇಲಿಯಾದ ಇಂಗ್ಲೀಷ್ ಗಳು ಬ್ರಿಟಿಷ್ ಇಂಗ್ಲೀಷ್ ಗಿಂತ ಸ್ವಲ್ಪ ಬೇರೆ ಇರುವದಕ್ಕೆ ಈ ವಿರೋಧವೇ ಕಾರಣ ಎನ್ನುವ ಅಭಿಪ್ರಾಯವಿದೆ. ಅಮೇರಿಕಕ್ಕೆ 1776 ರಂದು, ಬ್ರೆಜಿಲ್ 1822, ದಕ್ಷಿಣ ಆಫ್ರಿಕಾ 1931 ಹಾಗೂ ಭಾರತ 1947 ರಂದು ಸ್ವಾತಂತ್ರ್ಯ ಪಡೆದವು. ಶತಮಾನಗಳ ಹಿಂದೆ ಸ್ವಾತಂತ್ರ ಪಡೆದ ಅಮೇರಿಕ ಹಾಗೂ ಬ್ರೆಜಿಲ್ ಅಲ್ಲಿ ಕ್ರಮವಾಗಿ ಇಂಗ್ಲೀಷ್ ಮತ್ತು ಪೋರ್ಚುಗಲ್ ಭಾಷೆಗಳು ಸಾರ್ವಭೌಮತೆ ಗಳಿಸಿವೆ. ಉಳಿದ ಭಾಷೆಗಳು ನಾಶವಾಗುತ್ತಿವೆ. ಭಾರತ ಹಾಗೂ ಸೌತ್ ಆಫ್ರಿಕಾ ಇತ್ತೀಚೆಗೆ ಸ್ವಾತಂತ್ರ್ಯ ಪಡೆದವು ಇಲ್ಲಿ ಲೋಕಲ್ ಭಾಷೆಗಳು ಬಳಕೆ ಕಡಿಮೆ ಆಗುವದು ಇನ್ನೂ ಜಾರಿಯಲ್ಲಿದೆ. ದಕ್ಷಿಣ ಆಫ್ರಿಕಾದಲ್ಲಿ ಹಲವು ರಾಜ್ಯಗಳಲ್ಲಿ ಈಗಾಗಲೇ ಇಂಗ್ಲೀಷ್ ಸಾರ್ವಭೌಮತೆಗಳಿಸಿದೆ. (ಲೇಖನದ ಮೇಲಿನ ಮ್ಯಾಪ್ ನೋಡಿ)

ಒಟ್ಟಿನಲ್ಲಿ ಹೇಳುವದಾದರೆ ಭಾರತ ಮುಂದುವರಿದ ದೇಶ ಆದಾಗ ಕನ್ನಡ ಉಳಿಯಬೇಕೆಂದರೆ, ಸಬಲ ಭಾಷೆ ಆಗಿರಬೇಕೆಂದರೆ ಅದು ಎಲ್ಲ ಹೊಸ ತಂತ್ರಜ್ಞಾನಗಳಲ್ಲಿ ಮೂಡಿ ಬರಬೇಕು ಹಾಗೂ ಹೊಟ್ಟೆಪಾಡಿನ ಭಾಷೆ ಆಗಬೇಕು. ಕನ್ನಡ ಬಳಸಿ ಹಣಗಳಿಕೆ ಸಾಧ್ಯವಿರಬೇಕು. ಇಲ್ಲದಿದ್ದರೆ ಹಲವು ಪೀಳಿಗೆ ನಂತರ ಕೇವಲ ಮನೆಯಲ್ಲಿ ಮಾತ್ರ ಮಾತನಾಡುವ, ಇನ್ನೂ ಹಲವು ಪೀಳಿಗೆ ನಂತರ ಸಾಹಿತ್ಯ ಅಧ್ಯಯನ ಮಾಡುವವರು ಮಾತ್ರ ಓದುವ ಭಾಷೆ ಆಗುವ ಅಪಾಯವಿದೆ. ಜನ ಉದ್ಯೋಗಕ್ಕಾಗಿ, ತಂತ್ರಜ್ಞಾನಕ್ಕಾಗಿ ಕನ್ನಡ ಕಡಿಮೆ ಬಳಸಿ ಇಂಗ್ಲೀಷ್ ಹೆಚ್ಚು ಬಳಸಿದಾಗ ಕಾಲಕ್ರಮೇಣ ಇಂಗ್ಲೀಷ್ ಸಾರ್ವಭೌಮ ಭಾಷೆ ಆಗುತ್ತದೆ. ಆಗ ಸರಕಾರ ಕೂಡಾ ಇಂಗ್ಲೀಷ್ ಅನ್ನು ಬಳಸುವ ಅನಿವಾರ್ಯತೆಯನ್ನು ತಲುಪಬಹುದು.

ಹೊಸ ತಂತ್ರಜ್ಞಾನಗಳಲ್ಲಿ ಕನ್ನಡದ ಲಿಪಿ ಹಾಗೂ ಅಂಕೆಯ ಬಳಕೆ ಅಪಾಯಕಾರಿ ಮಟ್ಟದಲ್ಲಿ ಕಡಿಮೆ ಆಗುತ್ತಿದ್ದರೆ ಕನ್ನಡದ ಮಾತನ್ನು ಸಹ ಬಳಕೆಯಿಂದ ಕಡಿಮೆಮಾಡುವ ತಂತ್ರಜ್ಞಾನವೊಂದು ಬಿಲಿಯನ್ ಗಟ್ಟಲೆ ವೆಚ್ಚದಲ್ಲಿ ದಶಕಗಳ ಪ್ರಯತ್ನದ ನಂತರ ಸಿದ್ಧವಾಗಿದೆ. ಏನದು? ಅದು ತನ್ನ ಕಾರ್ಯದಲ್ಲಿ ಯಶಸ್ವಿಯಾಗುವದೇ? ಮುಂದಿನ ಭಾಗದಲ್ಲಿ ತಿಳಿಯಿರಿ.

ಮುಂದಿನ ಭಾಗದಲ್ಲಿಃ ಕರ್ನಾಟಕದಲ್ಲಿ ಕನ್ನಡ ಮಾತಿನ ಬಳಕೆ ಕಡಿಮೆ ಮಾಡುವ ಸಾಧ್ಯತೆ ಇರುವ ತಂತ್ರಜ್ಞಾನ ಯಾವುದು? ಅದಕ್ಕೆ ಪರಿಹಾರ ಸಿಗುವ ಸಾಧ್ಯತೆ ಯಾಕೆ ಕಡಿಮೆ?

ಲೇಖನದ ಬಗೆ

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ಪಿಸುಮಾತು ಶನಿ, 06/22/2013 - 15:15

ಉತ್ತಮವಾದ ಮಾಹಿತಿ ರಾಜೇಶ್ ಅವರೆ.

ರಾಜೇಶ ಹೆಗಡೆ ಭಾನು, 06/23/2013 - 22:39

ಧನ್ಯವಾದಗಳು ಶ್ರೀಪತಿ ಅವರೇ,

ನಿಮ್ಮ ಪ್ರೋತ್ಸಾಹಕರ ಮಾತುಗಳಿಗೆ ವಂದನೆಗಳು :)

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.