Skip to main content

ಕನ್ನಡದ ಅಳಿವು ಉಳಿವು ನಮ್ಮ ಕೈಯಲ್ಲೇ ಇದೆ - ಭಾಗ ೧

ಬರೆದಿದ್ದುJune 7, 2013
3ಅನಿಸಿಕೆಗಳು

ಸುಮಾರು ಇನ್ನೂರು ವರ್ಷಗಳ ಹಿಂದಿನ ಮಾತು ಭಾರತಾದ್ಯಂತ ಜನ ಹಳ್ಳಿ, ನಗರ ಬೇದ ಭಾವ ಇಲ್ಲದೇ ಎಲ್ಲ ಕಡೆ ಕಚ್ಚೆ ಪಂಚೆ ಉಟ್ಟುಕೊಂಡು ಬರಿ ಮೈಯಲ್ಲೋ ಅಥವಾ ಜುಬ್ಬಾ ಹಾಕಿಕೊಂಡು ಗಂಡಸರು ಓಡಾಡುತಿದ್ದರು ಎಂದರೆ ನಗರದಲ್ಲಿನ ಇಂದಿನ ಪೀಳಿಗೆ ನಂಬುತ್ತಾರೋ ಇಲ್ಲವೋ. ಆಗ ಆಂಗ್ಲರು ಹಾಗೂ ಅವರಿಗೆ ನಿಕಟವಾಗಿದ್ದ ಶ್ರೀಮಂತರು, ರಾಜರು ಅವರನ್ನು ಅನುಕರಿಸುತ್ತಿದ್ದರು. ಅವರು ಮಾತ್ರ ಶರ್ಟು ಪ್ಯಾಂಟು ಹಾಕುತ್ತಿದ್ದರು. ಇಂದು ಹಳ್ಳಿ-ನಗರ ಬೇದ ಭಾವ ಇಲ್ಲದೇ ಜನ ಅಂಗಿ-ಪ್ಯಾಂಟು ಹಾಕುತ್ತಾರೆ. ಹೞಿಗಳಲ್ಲಿ ಈಗಲೂ ಪಂಚೆ ಉಡುತ್ತಾರಾದರೂ ಆದರೆ ಹೊಸ ಪೀಳಿಗೆ ನಗರಗಳಿಗೆ ಭೇಟಿ ಕೊಟ್ಟಾಗ ಪ್ಯಾಂಟನ್ನು ಮಾತ್ರ ಬಳಸುತ್ತಾರೆ.

ಸುಮಾರು ಎರಡೇ ಎರಡು ದಶಕಗಳ ಹಿಂದಿನ ಮಾತು. ಮನೆ ಮನೆಗಳಲ್ಲಿ  ಸಿಆರ್ ಟಿ ಟಿವಿ ಜೊತೆ ವಿಸಿಪಿ, ವಿಸಿಆರ್ ಬಳಸುವದು ಸಾಮಾನ್ಯವಾಗಿತ್ತು. ಈಗ ಎಲ್.ಸಿ.ಡಿ /ಎಲ್.ಇ.ಡಿ ಜೊತೆಗೆ ಡಿವಿಡಿ ಪ್ಲೇಯರ್ ಅಥವಾ ಲ್ಯಾಪಟಾಪ್ ಬಳಸುವದು ಸಾಮಾನ್ಯ.
ಹೀಗೆ ಬೀಸುವ ಉರುಳು ಕಲ್ಲನ್ನು ಗ್ರೈಂಡರ್/ಮಿಕ್ಸರ್, ಅಲಾರಾಂ ಅನ್ನು ಮೊಬೈಲು, ಮ್ಯೂಸಿಕ್ ಪ್ಲೇಯರ್/ಕ್ಯಾಮರಾ ಅನ್ನು ಸ್ಮಾರ್ಟಫೋನು ಸ್ಥಾನ ಪಲ್ಲಟಗೊಳಿಸಿದೆ. ಮುಂಚಿನದ್ದು ಇದ್ದರೆ ಬಳಸುವವರು ಈಗಲು ಇದ್ದಾರೆ. ಆದರೆ ಈಗ ಮಾರುಕಟ್ಟೆಗೆ ಹೋಗಿ ಹೊಸತನ್ನು ಕೊಳ್ಳುವವರು ಅಪರೂಪ.

ಇದಲ್ಲವಾ ಕಾಲ ಮಹಿಮೆ? ಕಾಲನ ವಕೃ ದೃಷ್ಟಿಗೆ ಬಿದ್ದು ಅಳಿಯದ ವಸ್ತು ಯಾವುದು ಇದೆ?

ಈಗ ಕಾಲನ ದುಷ್ಟ ಕಣ್ಣಿಗೆ ಬಿದ್ದಿರುವ ವಸ್ತು ಯಾವುದು? ಖಡಾಖಂಡಿತವಾಗಿ ಹೇಳುವದು ತುಂಬಾ ಕಷ್ಟ.ಆದರೆ ನಂಬಿದರೆ ನಂಬಿ ಬಿಟ್ಟರೆ ಬಿಡಿ ಕನ್ನಡ ಭಾಷೆಗೆ ಆತನ ವಕೃ ದೃಷ್ಟಿ ಬಿದ್ದಿದೆಯೇನೋ ಎಂಬ ಗುಮಾನಿ ನನ್ನದು.
ಭಾಷೆ ಎಂಬುದು ಮನುಷ್ಯ ಜೀವಿಗಳು ತಮ್ಮ ನಡುವೆ ಸಂವಹನ ನಡೆಸಲು ಬಳಸುವ ವ್ಯವಸ್ಥೆ. ಈ ಭಾಷೆಗೆ ಪೂರಕವಾದುದು ಅದರ ಲಿಪಿ.ಅದನ್ನು ಕಲ್ಲುಗಳ ಮೇಲೆ, ಲೋಹದ ಮೇಲೆ, ಪೇಪರ್ ಮೇಲೆ, ಈಗ ಇಂಟರನೆಟ್ ಅಲ್ಲಿ, ಮೊಬೈಲು/ಸ್ಮಾರ್ಟಫೋನಲ್ಲಿ, ಟಿವಿಯಲ್ಲಿ ಜ್ಞಾನ ಹಂಚಿಕೊಳ್ಳಲು, ಭಾವನೆಗಳನ್ನು ಹಂಚಿಕೊಳ್ಳಲು, ಸಾಹಿತ್ಯ, ಕಥೆ, ಕಾವ್ಯ ಹೀಗೆ ಹಲವು ಕಡೆ ಭಾಷೆಯ ಬಳಕೆ ಆಗುತ್ತಿದೆ.

ಭಾಷೆ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಾ ಹೋಗುತ್ತದೆ. ದುರ್ಭಲ ಭಾಷೆಗಳು ಸಭಲ ಭಾಷೆಗಳಿಂದ ಸ್ಥಾನ ಪಲ್ಲಟಗೊಂಡು ನಾಶವಾಗುತ್ತದೆ. ಐನೂರು ವರ್ಷಗಳ ಹಿಂದೆ ಕನ್ನಡ ಹೀಗೆ ಇರಲಿಲ್ಲ. ಆ ಕನ್ನಡ ಅದನ್ನು ಅಧ್ಯಯನ ಮಾಡಿದವರಿಗೆ ಬಿಟ್ಟು ಬೇರೆಯವರಿಗೆ ಅರ್ಥವೂ ಆಗದೂ. ಕಳೆದ ನಾಲ್ಕುನೂರು ವರ್ಷಗಳ ಹಿಂದೆ ಇದ್ದ ಸಾವಿರಾರು ಭಾಷೆಗಳು ಒಂದೇ ನಾಶಗೊಂಡಿವೆ ಅಥವಾ ಕೇವಲ ಕೆಲವೇ ಲಕ್ಷ ಜನ  ಮನೆ ಒಳಗೆ ಮಾತ್ರ ಅಥವಾ ಅವರ ಜಾತಿ ಅಥವಾ ನಗರದಲ್ಲಿ ಮಾತ್ರ ಆಡುವ ಭಾಷೆಯಾಗಿ ಉಳಿದಿವೆ.

ಮುಂದಿನ ನೂರಾರು ವರ್ಷಗಳಲ್ಲಿ ಇನ್ನೂ ಹಲವಾರು ಸಾವಿರ ಭಾಷೆಗಳು ಅಳಿಯಲಿವೆ ಅಥವಾ ದುರ್ಭಲಗೊಂಡು ಕೇವಲ ಅಭಿಮಾನಕ್ಕೆ ಆಡುವ ಕೆಲವು ಜನ ಆಡುವ ಅಥವಾ ಹಳ್ಳಿಗಳಲ್ಲಿ ಮಾತ್ರ ಹಳೆಯ ಪೀಳಿಗೆ ಮಾತ್ರ ಆಡುವ ಭಾಷೆಯಾಗಿ ಉಳಿಯಲಿವೆ. ಈಗಿನ ಟ್ರೆಂಡ್ ಹಾಗೂ ಹಿಂದೆ ಅಳಿದ ಭಾಷೆಗಳನ್ನು ಗಮನಿಸಿದಾಗ ಇನ್ನು ಸುಮಾರು ನೂರರಿಂದ ಮುನ್ನೂರು ವರ್ಷಗಳಲ್ಲಿ ಕನ್ನಡ ದುರ್ಭಲಗೊಂಡು ಈಗ ಕೊಡವ ತುಳು ಮಟ್ಟದಲ್ಲಿ ಕೇವಲ ಹಳ್ಳಿಗಳಲ್ಲಿ ಆಡುವ ಸ್ವಲ್ಪ ಜನ ಅಧ್ಯಯನ ಮಾಡುವ ಭಾಷೆಯಾಗಿ ಉಳಿಯಲಿದೆ. ಕನ್ನಡ ಲಿಪಿಯನ್ನು ಓದಬಲ್ಲ ಜನರ ಸಂಖ್ಯೆ ಕೂಡಾ ಕಡಿಮೆ ಇರಲಿದೆ. ಸಾಧ್ಯನೇ ಇಲ್ಲ ಅಂತೀರಾ?

ಯಾಕೆ ಈ ಬದಲಾವಣೆ? ಕನ್ನಡದ ದುರ್ಗತಿಗೆ ಕಾರಣ ಏನು? ನಾವು ಇದನ್ನು ತಡೆಯಬಹುದೇ? ಇದನ್ನು ನಾನು ನನ್ನ ಮಿತಿಯಲ್ಲಿ ವಿಶ್ಲೇಷಣೆ ಮೂಲಕ ತೋರಿಸಲಿದ್ದೇನೆ.

ಇದು ಕೇವಲ ಕನ್ನಡ ಸಾಗುತ್ತಿರುವ ಹಾದಿಯಲ್ಲ, ಭಾರತದ ಹಲವು ಭಾಷೆಗಳು ಸಾಗುತ್ತಿರುವ ಹಾದಿ. ಕೆಲವು ನೂರು ವರ್ಷಗಳ ನಂತರ ಇಂಗ್ಲೀಷ್ ಭಾರತದ ರಾಷ್ಟ್ರ ಭಾಷೆಯಾಗಿ ಹೊರ ಹೊಮ್ಮಲಿದ್ದು ಉಳಿದ ಭಾಷೆಗಳ ಶಕ್ತಿ ಈಗಿರುವದಕ್ಕಿಂತ ಕಡಿಮೆ ಆಗಲಿದೆ. ಹಿಂದಿ ಭಾಷೆ ಮಾತ್ರ ತನ್ನ ವೈವಿಧ್ಯತೆ ಕಳೆದುಕೊಂಡು ಏಕರೂಪತೆ ಪಡೆದು ಸಭಲವಾಗಿಯೇ ಇರಲಿದೆ.

ಒಮ್ಮೆ ಕನ್ನಡ ಅಂಕಿಗಳು, ಲಿಪಿ ಹಾಗೂ ಮಾತುಗಳ ಬಳಕೆ ಕರ್ನಾಟಕದಲ್ಲಿ ಸಾಗುತ್ತಿರುವ ಟ್ರೆಂಡ್ ಗಮನಿಸೋಣ. ಅದನ್ನು ಇಂಗ್ಲೀಷ್ ನೊಂದಿಗೆ ಹೋಲಿಕೆ ಮಾಡೋಣ.

ಕೆಳಗಿನ ಗ್ರಾಫ್ ಗಮನಿಸಿ. ಇದು ಕೇವಲ ಅಂದಾಜು ಗ್ರಾಫ್ ಮಾತ್ರ. ನಿಖರವಾದದ್ದು ಅಲ್ಲ. ಕನ್ನಡದ ಅವನತಿ ಇಂಗ್ಲೀಷ್ ನ ಬೆಳವಣಿಗೆಯ ಮಟ್ಟ ನಮ್ಮ ಕಲ್ಪನೆಗೆ ತಂದು ಕೊೞಲು ಮಾತ್ರ.

 

ಮೇಲಿನ ಚಾರ್ಟಲ್ಲಿ ನಾನು ನಿಖರವಾದ ಪರ್ಸಂಟೇಜ್ ಗುರುತಿಸಲು ಸಾಧ್ಯವಾಗಿಲ್ಲ.ಕ್ಷಮೆ ಇರಲಿ. ನನ್ನ ಅಂದಾಜಿನ ಪ್ರಕಾರ ಇಂದು ಕರ್ನಾಟಕದಲ್ಲಿ ಕನ್ನಡ ಅಂಕೆಯ ಬಳಕೆ ಕುಗ್ಗುತ್ತಿದ್ದರೆ ಜನಸಾಮಾನ್ಯರಲ್ಲಿ ಅದರಲ್ಲೂ ಹೊಸ ಪೀಳಿಗೆಗಳಲ್ಲಿ ಕನ್ನಡ ಲಿಪಿಯ ಬಳಕೆ ೨೦% ಕ್ಕಿಂತ ಕಡಿಮೆ ಆಗುತ್ತಿದೆ. ಲಿಪಿಯ ಬರಹ / ಓದು ಎರಡೂ ಸೇರಿದೆ. ಕನ್ನಡ ಮಾತಲ್ಲೂ ಇಂಗ್ಲೀಷ್ ಪದಗಳು ನುಸುಳಿವೆ. ಕನ್ನಡದ ಹಲವು ಪದಗಳ ಸ್ಥಾನ ಪಲ್ಲಟವಾಗಿದೆ.

೧೯೫೦ಕ್ಕೆ ಮುಂಚೆ ಲಿಪಿಯ ಹೆಚ್ಚಿನ ಬಳಕೆ ಪತ್ರ, ಸಾಹಿತ್ಯ, ದಸ್ತಾವೇಜು ಮುಂತಾದ ಕಡೆ ಜಾಸ್ತಿ ಬಳಕೆ ಆಗುತ್ತಿತ್ತು. ಹಾಗೆಯೇ ವೈದ್ಯಕೀಯ, ಇಂಜನಿಯರಿಂಗ್, ವಕೀಲಿ ಮುಂತಾದ ವೃತ್ತಿಗಳಿಗೆ ಮಾತ್ರ ಇಂಗ್ಲೀಷ್ ಶಿಕ್ಷಣ ಅಗತ್ಯತೆ ಇತ್ತು. ೧೯೮೦ರ ನಂತರ ಬಂದ ಹಲವು ತಂತ್ರಜ್ಞಾನಗಳು, ಉದ್ದಿಮೆಗಳು, ಉದ್ಯೋಗವಕಾಶಗಳು, ಜಾಗತೀಕರಣ ಮೊದಲಾದ ಬದಲಾವಣೆಗಳು ಇಂಗ್ಲೀಷ್ ಲಿಪಿಯ ಕಲಿಯುವ ಅನಿವಾರ್ಯತೆ ಹೆಚ್ಚಿಸಿದವು. ಕನ್ನಡ ಅಲ್ಲಿ ಸಶಕ್ತವಾಗಿ ಬೆಳೆಯಲು ವಿಫಲವಾಯ್ತು. ಇದೇ ಮಾತನ್ನು ಭಾರತದ ಹಲವು ಭಾಷೆಗಳಿಗೆ ಅನ್ವಯಿಸಬಹುದು.

ಇಂಗ್ಲೀಷ್ ಲಿಪಿಯ ಬಳಕೆ ಕರ್ನಾಟಕದಲ್ಲಿ ಆ ಮಟ್ಟಿಗೆ ಬೆಳೆದೇ ಇಲ್ಲ ಎನ್ನುತ್ತೀರಾ? ಹಾಗಿದ್ದರೆ ನೀವು ಗುಹೆಯಲ್ಲಿ ವಾಸ ಮಾಡುತ್ತಿರಬಹುದು. ಯಾಕೆಂದರೆ ಅಂಕಿ ಅಂಶ ಬೇರೆಯೆ ಕಥೆ ಹೇಳುತ್ತದೆ. ಕೆಲವೇ ಕೆಲವು ಉದಾಹರಣೆ ಕೊಡುತ್ತೇನೆ.

  • ಕರ್ನಾಟಕದಲ್ಲಿ ಸುಮಾರು ಮೂರು ಕೋಟಿಗೂ ಹೆಚ್ಚು ಮೊಬೈಲು ಬಳಸುವವರಿದ್ದಾರೆ. ಅಲ್ಲಿ ಹೆಚ್ಚು ಬಳಕೆ ಆಗುತ್ತಿರುವದು ಇಂಗ್ಲೀಷ್ ಇಂಟರ್ ಫೇಸ್ ಮಾತ್ರ. ಇನ್ನು ಪ್ರತಿ ಒಬ್ಬ ಒಂದೇ ಒಂದು ಎಸ್.ಎಂ.ಎಸ್ ಪ್ರತಿದಿನ ಕಳುಹಿಸುತ್ತಾನೆ ಎಂದು ಕೊೞೋಣ. ೩ ಕೋಟಿ ಎಸ್.ಎಂ.ಎಸ್ ಆಯ್ತು. ವರ್ಷಕ್ಕೆ ೧೦೯೫ ಕೋಟಿ ಎಸ್.ಎಂ.ಎಸ್ ಆಯ್ತು! ಇನ್ನು ಬ್ಯಾಂಕ್, ಕ್ರೆಡಿಟ್ ಕಾರ್ಡ್, ಕೂರಿಯರ್ ಹೀಗೆ ಹಲವು ಕಂಪನಿಗಳಿಂದ ಬರುವ ಎಸ್.ಎಂ.ಎಸ್ ಗೆ ಲೆಕ್ಕ ಇಲ್ಲ. ಕಾಲೇಜು ಹುಡುಗರಂತೂ ದಿನಕ್ಕೆ ಹಲವಾರು ಎಸ್.ಎಂ.ಎಸ್ ಕಳುಹಿಸುತ್ತಾರೆ. ಇವೆಲ್ಲ ಗಮನಿಸಿದಾಗ ಹಲವು ಸಾವಿರ ಕೋಟಿ ಇಂಗ್ಲೀಷ್ ಎಸ್.ಎಂ.ಎಸ್ ಮೊಬೈಲುಗಳಲ್ಲಿ ಕರ್ನಾಟಕದಲ್ಲಿ ವರ್ಷಕ್ಕೆ ಓಡಾಡುತ್ತೆ ಎಂದು ಅಂದಾಜಿಸಬಹುದು.
  • ಕರ್ನಾಟಕದಲ್ಲಿ ೫೦ ಲಕ್ಷಕ್ಕೂ ಹೆಚ್ಚು ಜನ ಫೇಸ್ ಬುಕ್ ಬಳಕೆದಾರರು, ಹಲವು ದಶಲಕ್ಷ ಈಮೇಲ್ ಬಳಕೆದಾರರು ಇದ್ದಾರೆ. ಅವರು ಪ್ರತಿವರ್ಷ ಶೇರ್ ಮಾಡುವ ಸ್ಟೇಟಸ್, ಚಿತ್ರಗಳು, ಕಮೆಂಟುಗಳು, ಈಮೇಲ್ ಗಳು ಸಾವಿರ ಕೋಟಿ ದಾಟೀತು! ಇಲ್ಲಿ ಬಳಸುವ ಲಿಪಿ ಇಂಗ್ಲೀಷ್.
  • ಕರ್ನಾಟಕದಲ್ಲಿ ಟಿವಿ ನೋಡದವರು ಯಾರಿದ್ದಾರೆ. ಅಲ್ಲಿ ರಿಮೋಟ್, ಟಿವಿ ಪರದೆಯ ಮೇಲೆ ಮೆಸೇಜ್, ಡಿಟಿಎಚ್ ಮೆನು, ಸೆಟ್ ಟಾಪ್ ಬಾಕ್ಸ್ ಮೆನು ಹಾಗೂ ಡಿವಿಡಿ ಪ್ಲೇಯರ್ ಇತ್ಯಾದಿಗಳನ್ನು ಪ್ರತಿ ದಿನ ಕೋಟ್ಯಂತರ ಭಾರಿ ಓದಲ್ಪಡುತ್ತದೆ.
  • ಕರ್ನಾಟಕದಲ್ಲಿ ಪ್ರತಿದಿನ ಹಲವು ಕೋಟಿ ವಸ್ತುಗಳ ಮಾರಾಟವಾಗುತ್ತದೆ. ಸೋಪ್, ಟೂತ್ ಪೇಸ್ಟ್ ಹಿಡಿದು ಊಟದ ಅಕ್ಕಿ ಚೀಲದವರೆಗೆ ಎಲ್ಲ ಇಂಗ್ಲೀಷ್ ಮಯ. ಅದನ್ನು ಅಂಗಡಿಯವರಿಂದ ಹಿಡಿದು ಖರೀದಿಸಿವವರು ಹೀಗೆ ಎಲ್ಲ ಕೋಟಿ ಸಲ ದಿನ ಓದುತ್ತಾರೆ. ಇನ್ನು ಔಷದಿ, ಬಿಲ್, ಮೆನು, ಟಿಕೆಟ್, ಸಿನಿಮಾ ಗೃಹದಲ್ಲಿ ಸೀಟ್ ನಂಬರ್ ಎಲ್ಲ ಕೂಡಾ ಇಂಗ್ಲೀಷ್ ಲಿಪಿಯಲ್ಲಿ ಮಾತ್ರ.
  • ಇನ್ನೂ ಎಟಿಎಂ, ಬ್ಯಾಂಕ್, ಶಿಕ್ಷಣ, ಇನ್ಶ್ಯೂರನ್ಸ್, ವಾಶಿಂಗ್ ಮಶೀನ್, ಬೋರ್ಡುಗಳು, ಜಾಹೀರಾತು, ಪೇಪರ್, ಪತ್ರಿಕೆಗಳು, ಶಿಕ್ಷಣ, ಕಂಪ್ಯೂಟರ್, ಅಂತರ್ಜಾಲ ತಾಣಗಳು ನಾನು ಲೆಕ್ಕ ಮಾಡಿಲ್ಲ.

ಕನ್ನಡ ಲಿಪಿ ಹೆಚ್ಚು ಬಳಕೆಯಲ್ಲಿರುವದು ಟಿವಿ, ಪತ್ರಿಕೆ, ಸಾಹಿತ್ಯ, ದಾಖಲೆ ಮೊದಲಾದ ಕಡೆ ಮಾತ್ರ. ಅದರಲ್ಲೂ ಹೊಸ ಪೀಳಿಗೆಗಳು ಅದರ ಬಳಕೆ ಕಡಿಮೆ ಮಾಡುತ್ತಿದ್ದಾರೆ.

ಹಾಗಿದ್ದರೆ ಇತ್ತೀಚೆಗೆ ಕನ್ನಡ ಚಾನೆಲ್ ಗಳು, ಪತ್ರಿಕೆ ಹಾಗೂ ಪುಸ್ತಕ ಹೆಚ್ಚಾಗಿದೆಯಲ್ಲ ಎಂದು ನೀವು ಹುಬ್ಬೇರಿಸಬಹುದು. ಆದರೆ ಅವಕ್ಕೆ ಹಲವು ಕಾರಣಗಳಿವೆ.

  • ಕನ್ನಡ ಟಿವಿ ಚಾನೆಲ್ ಹೆಚ್ಚಾಗಲು ಕಾರಣ ಸ್ಯಾಟೆಲೈಟ್, ಡೀಟಿಎಚ್ ಟೆಕ್ನಾಲಜಿಗಳು, ಖಾಸಗೀಕರಣ, ಮನೋರಂಜನೆ ಕಾರ್ಯಕ್ರಮ ಇತ್ಯಾದಿ.
  • ಪತ್ರಿಕೆ ಪ್ರಸಾರ ಹೆಚ್ಚಾಗಲು ಕಾರಣ ಹೆಚ್ಚಿದ ಜನರ ಆದಾಯ,  ವಿಭಕ್ತ ಕುಟುಂಬಗಳು, ಒಂದೇ ಮನೆಯಲ್ಲಿ ಹೆಚ್ಚು ಪತ್ರಿಕೆ ತರಿಸುವದು, ವರ್ಣ ಪತ್ರಿಕೆಗಳ ಕ್ರಾಂತಿ, ಹೆಚ್ಚಿದ ಜನಸಂಖ್ಯೆ ಇತ್ಯಾದಿ.
  • ಪುಸ್ತಕ ಓದು ಹೆಚ್ಚಾಗಲು ಮುಖ್ಯ ಕಾರಣ ನಿವೃತ್ತರಲ್ಲಿ ಹೆಚ್ಚಿದ ಓದು, ಹೆಚ್ಚಿದ ಶಿಕ್ಷಣ, ಹೆಚ್ಚಿದ ಜನಸಂಖ್ಯೆ ಇತ್ಯಾದಿ

ಇವೆಲ್ಲ ತಾತ್ಕಾಲಿಕ ಮಾತ್ರ. ಹಲವು ವರ್ಷಗಳ ನಂತರ ಈಗ ನಡೆಯುತ್ತಿರುವ ಇಂಗ್ಲೀಷ್ ಕ್ರಾಂತಿ ಇವೆಲ್ಲವನ್ನು ತೊಡೆದು ಹಾಕಲಿದೆ. ಕನ್ನಡವನ್ನು ಸರಾಗವಾಗಿ ಓದುವ/ಬರೆಯುವ ಶಕ್ತಿಯನ್ನು ಹೊಸ ಪೀಳಿಗೆಗಳಲ್ಲಿ ಕಡಿಮೆ ಆಗುತ್ತಾ ಹೋಗಲಿದೆ. ಹೊಸ ಪೀಳಿಗೆ ಬಂದಂತೆ ಆಂಗ್ಲ ಭಾಷೆ ತನ್ನ ಭದ್ರ ಬುನಾದಿ ಹಾಕಿ ಭಾರತೀಯ ಭಾಷೆಯನ್ನು ಒಕ್ಕಲೆಬ್ಬಿಸಲಿದೆ. ನಾವು ಕಾರ್ಯೋನ್ಮುಖರಾಗದಿದ್ದರೆ ಅವುಗಳಲ್ಲಿ ಕನ್ನಡವೂ ಒಂದು ಆಗಿರಲಿದೆ.

ಇವೆಲ್ಲ ಸಾಧ್ಯಾನೇ ಇಲ್ಲಾ ಅಂದು ನಗುತ್ತಿದ್ದೀರಾ?

ಬನ್ನಿ ಹೇಳಿ ಅಮೇರಿಕದ ಮೂಲ ಭಾಷೆ ಯಾವುದು? ಇಂಗ್ಲೀಷ್?? ಖಂಡಿತ ಅಲ್ಲ. ೧೫೦೦ನೇ ಇಸವಿಗೂ ಮುಂಚೆ ಅಮೇರಿಕದಲ್ಲಿ ಸಾವಿರಾರು ಭಾಷೆಗಳಿದ್ದವು. ಈಗಿನ ಭಾರತದಂತೆ ಅನೇಕ ಭಾಷೆಗಳು ಜನರ ನಡುವೆ ಬಳಕೆಯಲ್ಲಿತ್ತು. ಆದರೆ ಈಗ ಐನೂರು ವರ್ಷಗಳ ಬಳಿಕ? ಇಂಗ್ಲೀಷ್ ಬಿಟ್ಟರೆ ಸ್ಪ್ಯಾನಿಷ್ ಇದೆ. ಉಳಿದ ಭಾಷೆಗಳಲ್ಲಿ ನೂರಾರು ಭಾಷೆ ಆಡುವವರೇ ಇಲ್ಲವಾಗಿದ್ದರೆ ಉಳಿದವು ಅಳಿವಿನ ಅಂಚಿನಲ್ಲಿದೆ. ಭಾರತದಲ್ಲಿ ಜನಸಂಖ್ಯೆ ಜಾಸ್ತಿ ಇರುವದರಿಂದ ನಮ್ಮ ಭಾಷೆಗಳು ಸುಲಭದಲ್ಲಿ ಸಾಯುವದಿಲ್ಲ. ಆದರೆ ದುರ್ಭಲವಾಗುವದು ಸಾಧ್ಯವಿದೆ. ಈ ಭಾಷಾ ಹಂತಕ ಎಂಬ ಬಿರುದು ಇರುವ ಇಂಗ್ಲೀಷ್ ನ ಅಮೇರಿಕದಲ್ಲಿ ಹಾಗೂ ಆಫ್ರಿಕಾದಲ್ಲಿನ ಭಾಷೆಗಳನ್ನು ದುರ್ಭಲಗೊಳಿಸಿದ ಅಥವಾ  ಸಾಯಿಸಿದ ರೀತಿಯನ್ನು ಮುಂದಿನ ಭಾಗದಲ್ಲಿ ನೋಡೋಣ.

ಈ ಲೇಖನಕ್ಕೆ ಕಮೆಂಟು ಕನ್ನಡದಲ್ಲಿ ಟೈಪ್ ಯಾರು ಮಾಡುತ್ತಾರೆ ಅನ್ನೋ ಸೋಮಾರಿತನ ನಿಮ್ಮ ಕಾಡುತ್ತಿದೆಯೇ? ಮುಂದಿನ ಭಾಗಗಳಲ್ಲಿ ಅದರ ಬಗ್ಗೂ ಚರ್ಚಿಸೋಣ.

ಮುಂದಿನ ಭಾಗಃ ಅಮೇರಿಕ, ಆಸ್ಟ್ರೇಲಿಯಾದ ಮೂಲ ಭಾಷೆ ಇಂಗ್ಲೀಷ್ ಅಲ್ಲ!!

ಲೇಖನದ ಬಗೆ

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

Nanjunda Raju Raju ಶುಕ್ರ, 06/07/2013 - 18:34

ಮಾನ್ಯರೇ, ಕನ್ನಡ ಉಳಿವು ಅಳಿವಿನ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದೀರಿ. ಕನ್ನಡ ಭಾಷೆಯ ಬಗ್ಗೆ ಒೞೆಯ ಕಳಕಳಿ ವ್ಯಕ್ತಪಡಿಸಿದ್ದೀರಿ. ಇದಕ್ಕೆ ನನ್ನ ಸಹಮತವಿದೆ. ಮಾನ್ಯರೇ, ಕನ್ನಡ ಉಳಿಸಲು ಬೆಳಸಲು ಕನ್ನಡಿಗರಾದ ನಮಗೆ ಮತ್ತು ಸರಕಾರಕ್ಕೆ ಇಚ್ಚಾಶಕ್ತಿ ಬೇಕು. ಇದಕ್ಕಾಗಿ ಅನ್ಯ ರಾಜ್ಯಗಳಲ್ಲಿ ತಮ್ಮ ಭಾಷೆ ಉಳಿಸಲು ಬೆಳೆಸಲು ಅವರು ಬಳಸುತ್ತಿರುವ ಮಾರ್ಗವನ್ನು ಅನುಸರಿಸಿದರೆ ತಪ್ಪಿಲ್ಲಾ. ಪರದೇಶಗಳು ಸಹ ತಮ್ಮ ಭಾಷೆಯನ್ನು ಬಿಟ್ಟುಕೊಡುವುದಿಲ್ಲ. ಪ್ರಥಮ ಅಧ್ಯತೆ ತಮ್ಮ ದೇಶ ಭಾಷೆಗೆ ನೀಡುತ್ತಾರೆ. ನಂತರ ಆಂಗ್ಲ ಭಾಷೆಗೆ ನೀಡುತ್ತಾರೆ. ಆದುದರಿಂದ, ನಾವು ರಾಜ್ಯಕ್ಕೊಂದು ಆಡಳಿತ ಭಾಷೆ. ಅದು ನಮ್ಮ ತಾಯಿ ಭಾಷೆಯಾಗಬೇಕು. ನಂತರ ಪರಸ್ಪರ ಸಂಪರ್ಕ ಸಂವಹನಕ್ಕಾಗಿ  ದೇಶಕ್ಕೊಂದು ಭಾಷೆ, ನಮ್ಮ ಬದುಕಿಗಾಗಿ, ಆಂಗ್ಲ ಭಾಷೆ ಅನಿವಾರ್ಯವಾಗಬೇಕು. ಇಂಗ್ಲೀಷೇ ಎಲ್ಲಾ ಎಂದರೆ ನಮ್ಮ ತಾಯಿ ಭಾಷೆ ನಶಿಸುತ್ತದೆ. ಅದನ್ನು ಉಳಿಸಬೇಕು. ಬೆಳೆಸಬೇಕು. ದೇಶಭಾಷೆ ಕಲಿಯದಿದ್ದರೆ ನಾವು ಅಕ್ಕಪಕ್ಕದ ರಾಜ್ಯದೊಂದಿಗೆ ವ್ಯವಹರಿಸಲು ಮೂಕರಾಗುತ್ತೇವೆ. ಅಲ್ಲವೇ?

ರಾಜೇಶ ಹೆಗಡೆ ಶುಕ್ರ, 06/07/2013 - 22:40

ನಮಸ್ಕಾರ ನಂಜುಂಡ ರಾಜು ಅವರೇ, ಪ್ರತಿಕ್ರಿಯೆಗೆ ವಂದನೆಗಳು


ಸಾಮಾನ್ಯವಾಗಿ ಯಾವುದೇ ಸರಕಾರ ಭಾಷೆಯನ್ನು ಉಳಿಸಲು ಪ್ರಯತ್ನ ಪಡದು. ಅದರ ಮುಖ್ಯ ಗುರಿ ಬಡತನ, ನಿರುದ್ಯೋಗ, ಹಸಿವು, ಶಿಕ್ಷಣ ಇತ್ಯಾದಿ ಇತ್ಯಾದಿ.

ಅಮೇರಿಕದಲ್ಲಿ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಅಲ್ಲಿನ ಸಾವಿರಾರು ಭಾಷೆಗಳು ಸಾಯುತ್ತಿದ್ದಾಗ ಅಥವಾ ದುರ್ಭಲವಾದಾಗ ಇಂಗ್ಲೀಷ್ ಅನ್ನು ಅಲ್ಲಿನ ಸರಕಾರಗಳು ಹಲವು ರಾಜ್ಯಗಳ ಭಾಷೆಯನ್ನಾಗಿ, ರಾಷ್ಟ್ರದ ಭಾಷೆಯನ್ನಾಗಿ ಒಪ್ಪಿಕೊಂಡರು. ಯಾವ ಭಾಷೆ ಅನ್ನ ಕೊಡುತ್ತದೋ  ಆ ಭಾಷೆಯು ತಾಯಿ ಭಾಷೆಯನ್ನು ಸ್ಥಾನ ಪಲ್ಲಟಗೊಳಿಸುತ್ತದೆ. ಅಂದರೆ ಆ ರಾಜ್ಯದ ಸಂವಹನ ಭಾಷೆಯಾಗಿ ಅದು ಬೆಳೆಯುತ್ತದೆ. ಆ ಮಣ್ಣಿನ ಭಾಷೆ ಕಾಲಕ್ರಮೇಣ ಮನೆ ಭಾಷೆಯಾಗಿ ಮಾತ್ರ ಉಳಿಯುತ್ತದೆ.

ಇಂದು ಕನ್ನಡ ಲಿಪಿಯ ಬಳಕೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇದು ಅಭಿಮಾನದ ಕೊರತೆ ಅಲ್ಲ. ಜನರ ಅನಿವಾರ್ಯತೆ. ಕನ್ನಡದಲ್ಲಿ ಸೌಲಭ್ಯ ತರಲು ಸಾಧ್ಯವಾಗದಕ್ಕೆ ವ್ಯಾಪಾರೀಕರಣ ಇಲ್ಲದಿರುವಿಕೆಯೂ ಕಾರಣ. ಇಂಗ್ಲೀಷ್ ಭಾಷೆ ಅನ್ನ ನೀಡುವ ಭಾಷೆಯಾಗಿ ತನ್ನ ಬೇರನ್ನು ಕರ್ನಾಟಕದಲ್ಲಿ ಭದ್ರವಾಗಿ ಊರುತ್ತಿದೆ. ಕರ್ನಾಟಕದ ಜನ ಕನ್ನಡ ಕಲಿಯದಿದ್ದರೂ ಇಂಗ್ಲೀಷ್ ಕಲಿಯಲೇ ಬೇಕಾದ ಅನಿವಾರ್ಯತೆ ಇದೆ. ಈ ಅನಿವಾರ್ಯತೆ ಕನ್ನಡವನ್ನು ಸಾಯಿಸಲಿದೆ. ಎಲ್ಲ ಜನರ ಬಳಿ ಎರಡು ಭಾಷೆಯನ್ನು ಚೆನ್ನಾಗಿ ಕಲಿಯಲು ಸಾಧ್ಯವಾಗದು.ಒಂದನ್ನು ಚೆನ್ನಾಗಿ ಕಲಿಯುತ್ತಾರೆ ಇನ್ನೊಂದನ್ನು ಅರ್ಧಮರ್ಧ ಕಲಿಯುತ್ತಾರೆ. ಕನ್ನಡ ಅರ್ಧಮರ್ಧ ಕಲಿತರೆ ಸಾಕು ಅನ್ನುವ ಭಾಷೆಯಾಗಿ ಹೊರ ಹೊಮ್ಮುತ್ತಿದೆ. ಇಂದಿನ ಮಕ್ಕಳಿಗೆ ಕರ್ನಾಟಕದ ನಗರದಲ್ಲಿ ಹೆಚ್ಚಿನ ತಾಯಂದಿರು/ಶಾಲೆಗಳಲ್ಲಿ ಹಣ್ಣು/ಪ್ರಾಣಿ/ಬಣ್ಣಗಳನ್ನು ಇಂಗ್ಲೀಷ್ ಅಲ್ಲಿ ಮಾತ್ರ ಕಲಿಸುತ್ತಾರೆ.ಕನ್ನಡದಲ್ಲಿ ಅವುಗಳ ಹೆಸರನ್ನು ಹೇಗಿದ್ದರೂ ದೊಡ್ಡವನಾದ ಮೇಲೆ ಕಲಿಯುತ್ತಾನೆ ಎನ್ನುವ ಭ್ರಮೆಯ ಆಧಾರದ ಮೇಲೆ! ಮುಂದಿನ ಭಾಗದಲ್ಲಿ ದೇಶ ಭಾಷೆಯ ಸೋಗಿನಲ್ಲಿ ಇಂಗ್ಲೀಷ್ ಹೇಗೆ ಅಮೇರಿಕದ, ಆಫ್ರಿಕಾದ, ಆಸ್ಟ್ರೇಲಿಯಾದ ಮನೆ ಮನೆಯಲ್ಲಿ ಮಾತನಾಡುವ ಭಾಷೆಯಾಗಿ ರೂಪುಗೊಂಡಿತು ಎಂದು ವಿವರಿಸುತ್ತೇನೆ.  

Nanjunda Raju Raju ಶನಿ, 06/08/2013 - 12:36

ಮಾನ್ಯರೇ, ನಿಮ್ಮ ಸಹಮತಕ್ಕೆ ನನ್ನ ಅಭಿನಂದನೆಗಳು. ನೀವು ಒಬ್ಬ ಕನ್ನಡಿಗರಾಗಿ, ಸಾಪ್ಟ್ ವೇರ್ ಇಂಜಿನೀಯರ್ ಆಗಿದ್ದರೂ ಸಹ ಕನ್ನಡ ಉಳಿವಿಗಾಗಿ ನಿಮ ಮಾನಸಿಕ ತುಡಿತಕ್ಕೆ ಅಭಿನಂದಿಸಬೇಕು. ಕನ್ನಡ ನುಡಿ ಉಳಿಸಲು ಬೆಳೆಸಲು ನಮ್ಮ ಕನ್ನಡಿಗರು ಮೈಗೂಡಿಸಿಕೊಳ್ಲ ಬೇಕು. ಕನ್ನಡ ಅಭಿಮಾನಿಗಳೊಂದಿಗೆ ಸರಕಾರ ಕೈ ಜೋಡಿಸಿದರೆ. ಕನ್ನಡ ತಾನಾಗೆ ಉಳಿಯುತ್ತದೆ. ಹಣ ಬರುತ್ತದೆ ಎಂದರೆ, ತಮ್ಮ ಕೆಲಸವಾಗುತ್ತದೆ ಎಂದರೆ, ಆ ಭಾಷೆ ಕಲಿಯುತ್ತಾರೆ. ಅದೇ ಅನ್ಯಭಾಷಿಗರು, ನಮ್ಮ ರಾಜ್ಯದಲ್ಲಿ ಇದ್ದುಕೊಂಡು ಸಂವಿದಾನದ ಹೆಸರು ಹೇಳಿಕೊಂಡು ಕನ್ನಡ ಬಳಸುವುದಿಲ್ಲ. ಕೊನೆಯ ಪಕ್ಷ ಸರಕಾರಿ ಕಛೇರಿಗಳಲ್ಲಿ ಕನ್ನಡವಲ್ಲದೆ ಯಾವ ಭಾಷೆಯನ್ನು ಬಳಸಬಾರದು. ಇನ್ನು ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ವಾದ, ಕೋರಿಕೆ, ಬೇಡಿಕೆ ಎಲ್ಲವೂ ಕನ್ನಡದಲ್ಲಿರಬೇಕು. ಇನ್ನು ಮೊಬೈಲ್ ಕೆಲವು ಕಂಪನಿಗಳು ಕನ್ನಡ ಭಾಷೆ ಇರುವ ಉಪಕರಣಗಳನ್ನು ತಯಾರಿಸಿದ್ದರೂ ಅದನ್ನು ಬಳಸುವುದಿಲ್ಲ. ಬೇಡಿಕೆ ಇಲ್ಲ. ಕನ್ನಡದ ಅಂಕಿಗಳಿರುವ ಕೈಗಡಿಯಾರ, ಗೋಡೆ ಗಡಿಯಾರ ಬಂದವು ಅದಕ್ಕೂ ಬೇಡಿಕೆ ಇಲ್ಲ. ಇನ್ನು ಎಫ್ ಎಂ ರೇಡಿಯೋಗಳು ಬಂದ ನಂತರ ಕನ್ನಡ ಮಾತುಗಳು, ಕಾರ್ಯಕ್ರಮಗಳು ಮಾಯವಾದವು. ಇನ್ನು ಹೇಳುವುದು ಇದೆಯಾದರೂ ನಿಮ್ಮ ಮುಂದಿನ್ ಲೇಖನದ ನಿರೀಕ್ಷೆಯಲ್ಲಿದ್ದೇನೆ. ವಂದನೆಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.